ಮಾಹಿತಿ ಇರುವಲ್ಲಿ ಹೋಗಲು

ಅಪ್ಪ ಅಮ್ಮ ಇಟ್ಟ ರೂಲ್ಸ್‌ ಬ್ರೇಕ್‌ ಮಾಡಿದಾಗ ಏನ್‌ ಮಾಡೋದು?

ಅಪ್ಪ ಅಮ್ಮ ಇಟ್ಟ ರೂಲ್ಸ್‌ ಬ್ರೇಕ್‌ ಮಾಡಿದಾಗ ಏನ್‌ ಮಾಡೋದು?

ಯುವ ಜನರ ಪ್ರಶ್ನೆಗಳು

ಎಲ್ಲಾ ಕುಟುಂಬದಲ್ಲೂ ಅಪ್ಪ ಅಮ್ಮ ರೂಲ್ಸ್‌ ಮಾಡ್ತಾರೆ. ಮನೆಗೆ ಬೇಗ ಬರಬೇಕು, ಇಷ್ಟೇ ಹೊತ್ತು ವಿಡಿಯೋ ಗೇಮ್‌ ಆಡಬೇಕು, ಬೇರೆವ್ರ ಜೊತೆ ಹೇಗೆ ನಡ್ಕೋಬೇಕು ಅಂತ ಬೇರೆ ಬೇರೆ ರೂಲ್ಸ್‌ ಮಾಡ್ತಾರೆ.

ಒಂದುವೇಳೆ ಆ ರೂಲ್ಸ್‌ನ ಮುರಿದ್ರೆ ಏನು ಮಾಡೋದು? ಆಗೋಗಿರೋ ತಪ್ಪನ್ನ ಸರಿ ಮಾಡೋಕಾಗಲ್ಲ, ಆದ್ರೆ ಪರಿಸ್ಥಿತಿ ಕೈಮೀರಿ ಹೋಗದೇ ಇರೋ ತರ ನೋಡ್ಕೋಬಹುದು. ಅದು ಹೇಗೆ ಅಂತ ಈ ಲೇಖನದಲ್ಲಿ ನೋಡೋಣ.

 ಏನು ಮಾಡಬಾರದು?

 • ರೂಲ್ಸ್‌ನ ಮುರಿದಿರೋದು ನಿಮ್ಮ ಅಪ್ಪ ಅಮ್ಮಗೆ ಗೊತ್ತಿಲ್ಲ ಅಂದ್ರೆ ಆ ತಪ್ಪನ್ನ ಅವರಿಗೆ ಹೇಳದೇ ಮುಚ್ಚಿ ಹಾಕಿಬಿಡೋಣ ಅಂತ ಅನಿಸಬಹುದು.

 • ನೀವು ಮಾಡಿದ ತಪ್ಪು ಅವ್ರಿಗೆ ಗೊತ್ತಾದಾಗ ನೆಪ ಹೇಳಬೇಕು ಅಥ್ವಾ ಬೇರೆವ್ರ ಮೇಲೆ ತಪ್ಪನ್ನ ಎತ್ತಿಹಾಕಿಬಿಡಬೇಕು ಅಂತ ಅನಿಸಬಹುದು.

ಹೀಗೆ ಮಾಡೋದು ಸರಿಯಲ್ಲ. ಯಾಕೆ ಗೊತ್ತಾ? ಮಾಡಿದ ತಪ್ಪನ್ನ ಮುಚ್ಚಿ ಹಾಕೋದು, ತಪ್ಪನ್ನ ಬೇರೆವ್ರ ಮೇಲೆ ಹಾಕೋದು ನೀವು ಇನ್ನೂ ಪ್ರೌಢರಾಗಿಲ್ಲ, ಇನ್ನೂ ಕೆಲ್ವು ವಿಷ್ಯಗಳಲ್ಲಿ ಪ್ರಗತಿ ಮಾಡಬೇಕು ಅಂತ ತೋರಿಸುತ್ತೆ.

“ಸುಳ್ಳು ಹೇಳೋದ್ರಿಂದ ಸಮಸ್ಯೆ ಸರಿ ಹೋಗಲ್ಲ. ಯಾಕಂದ್ರೆ ಒಂದಲ್ಲ ಒಂದಿನ ಸತ್ಯ ಆಚೆ ಬರುತ್ತೆ. ಆಗ ಸಿಗೋ ಶಿಕ್ಷೆ ನಿಜ ಹೇಳಿದಾಗ ಸಿಗೋ ಶಿಕ್ಷೆಗಿಂತ ಜಾಸ್ತಿ ಆಗಿರುತ್ತೆ.”—ಡಯಾನ.

 ಏನು ಮಾಡಬೇಕು?

 • ತಪ್ಪನ್ನ ಒಪ್ಕೊಳ್ಳಿ. “ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 28:13) ನೀವು ಪರ್ಫೆಕ್ಟ್‌ ಅಲ್ಲ ಅಂತ ನಿಮ್ಮ ಅಪ್ಪ ಅಮ್ಮಗೆ ಚೆನ್ನಾಗಿ ಗೊತ್ತು. ಆದ್ರೆ ನೀವು ಎಷ್ಟು ಪ್ರಾಮಾಣಿಕವಾಗಿ ನಡ್ಕೋತೀರ ಅನ್ನೋದು ಅವ್ರಿಗೆ ಮುಖ್ಯ.

  “ನೀವು ನಿಜ ಹೇಳಿದ್ರೆ ನಿಮ್ಮ ಅಪ್ಪ ಅಮ್ಮ ನಿಮ್ಮನ್ನ ಕ್ಷಮಿಸ್ತಾರೆ. ನಿಜ ಹೇಳಿದಷ್ಟು ನಿಮ್ಮ ಮೇಲೆ ಅವ್ರಿಗೆ ನಂಬಿಕೆ ಜಾಸ್ತಿ ಆಗುತ್ತೆ.”—ಒಲಿವಿಯಾ.

 • ಸಾರಿ ಕೇಳಿ. “ದೀನಮನಸ್ಸಿನಿಂದ ನಡುಕಟ್ಟಲ್ಪಟ್ಟವರಾಗಿರಿ” ಅಂತ ಬೈಬಲ್‌ ಹೇಳುತ್ತೆ. (1 ಪೇತ್ರ 5:5) ನೆಪ ಕೊಡದೆ ‘ನನ್ನಿಂದ ತಪ್ಪಾಯ್ತು ಸಾರಿ’ ಅಂತ ಹೇಳೋಕೆ ದೀನತೆ ಬೇಕು.

  “ಯಾವಾಗ್ಲೂ ನೆಪ ಕೊಡೋರಿಗೆ ತಪ್ಪು ಮಾಡ್ದಾಗ ಅದು ತಪ್ಪು ಅಂತ ಅನ್ಸಲ್ಲ, ಮನಸಾಕ್ಷಿ ಚುಚ್ಚಲ್ಲ.”—ಹೆದರ್‌.

 • ಶಿಕ್ಷೆ ಸ್ವೀಕರಿಸಿ. “ಉಪದೇಶವನ್ನು ಕೇಳಿರಿ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 8:33) ಗೊಣಗದೆ ಅಪ್ಪ ಅಮ್ಮ ಕೊಡೋ ಶಿಸ್ತನ್ನ ಸ್ವೀಕರಿಸಿ.

  “ಗೊಣಗಿದಷ್ಟು ಪರಿಸ್ಥಿತಿ ಹಾಳಾಗುತ್ತೆ. ಅದಕ್ಕೆ ಸಿಕ್ಕಿದ ಶಿಸ್ತನ್ನ ಸ್ವೀಕರಿಸಿ. ಆಗೋಗಿದ್ರ ಬಗ್ಗೆ ತಲೆ ಕೆಡಿಸ್ಕೊಬೇಡಿ.”—ಜೇಸನ್‌.

 • ನಂಬಿಕೆ ಗಳಿಸಿ. “ನೀವು ನಿಮ್ಮ ಹಿಂದಿನ ನಡತೆಗೆ ಹೊಂದಿಕೆಯಲ್ಲಿರುವ . . . ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿಬಿಡಬೇಕು” ಅಂತ ಬೈಬಲ್‌ ಹೇಳುತ್ತೆ. (ಎಫೆಸ 4:22) ಒಳ್ಳೇ ವಿಷ್ಯಗಳನ್ನ ಮಾಡ್ತಾ ಇರಿ. ಆಗ ಅಪ್ಪ ಅಮ್ಮನ ನಂಬಿಕೆ ಗಳಿಸಬಹುದು.

  “ಸರಿಯಾದ ನಿರ್ಧಾರಗಳನ್ನ ಮಾಡ್ತಿದ್ರೆ, ಮಾಡಿದ ತಪ್ಪನ್ನ ಮತ್ತೆ ಮತ್ತೆ ಮಾಡದೇ ಇದ್ರೆ ನಿಮ್ಮ ಅಪ್ಪ ಅಮ್ಮ ನಿಮ್ಮನ್ನು ನಂಬ್ತಾರೆ.”—ಕೇರನ್‌.

ಕಿವಿಮಾತು: ನಿಮ್ಮನ್ನ ಅವ್ರು ನಂಬಬೇಕಾದ್ರೆ ಅವ್ರು ಹೇಳಿದ್ದಕ್ಕಿಂತ ಜಾಸ್ತಿ ಮಾಡಬೇಕು. ಉದಾಹರಣೆಗೆ, ನೀವು ಆಚೆ ಹೋದಾಗ ಲೇಟ್‌ ಆಗಿಲ್ಲ ಅಂದ್ರು ಅಪ್ಪ ಅಮ್ಮ ಕೇಳೋಕೆ ಮುಂಚೆನೆ ಅವ್ರಿಗೆ ಫೋನ್‌ ಮಾಡಿ ಮನೆಗೆ ಬರ್ತಿದ್ದೀನಿ ಅಂತ ಹೇಳಿ. ಹೀಗೆ ಹೇಳಿದ್ರೆ ‘ನೀವು ಮತ್ತೆ ನನ್ನನ್ನ ನಂಬಬೇಕು’ ಅಂತ ಹೇಳಿದ ತರ ಇರುತ್ತೆ.