ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ಅಪ್ಪಅಮ್ಮಗೆ ನನ್ಮೇಲೆ ನಂಬ್ಕೇನೇ ಇಲ್ಲ—ನಂಬೋಥರ ಏನ್ಮಾಡ್ಲಿ?

ಅಪ್ಪಅಮ್ಮಗೆ ನನ್ಮೇಲೆ ನಂಬ್ಕೇನೇ ಇಲ್ಲ—ನಂಬೋಥರ ಏನ್ಮಾಡ್ಲಿ?

 ಯೋಚ್ನೆ ಮಾಡಿ

ನಂಬ್ಕೆಯಿಂದ ನಡಕೊಂಡ್ರೇನೇ ಎಲ್ರು ನಂಬೋದು. ಅಪ್ಪಅಮ್ಮ ಮಾತು ಕೇಳಿ ಅದ್ರ ಪ್ರಕಾರ ನಡೆಯೋದನ್ನ ಸಾಲ ತೀರಿಸೋದಕ್ಕೆ ಹೋಲಿಸಬಹುದು. ನೀವು ಒಂದುಕಡೆ ಸಾಲ ತಗೊಂಡ ಮೇಲೆ ಅದನ್ನ ತೀರಿಸಲೇಬೇಕಲ್ವಾ? ಸಾಲದ ಕಂತುಗಳನ್ನ ಕರೆಕ್ಟಾಗಿ ಕಟ್ತಾ ಹೋದ್ರೆ ನಿಮ್ಮೇಲೆ ನಂಬ್ಕೆ ಬಂದು ಇನ್ನು ಜಾಸ್ತಿ ಸಾಲ ಕೊಡ್ತಾರೆ. ಒಂದ್ವೇಳೆ ಕರೆಕ್ಟಾಗಿ ಕಟ್ಟಿಲ್ಲಾಂದ್ರೆ ಇನ್ನೊಂದ್ಸಲ ಸಾಲ ಕೊಡಲ್ಲ. ಅದೇ ತರ ನೀವು ಯಾವಾಗ್ಲೂ ನಂಬ್ಕೆಯಿಂದ ನಡ್ಕೊಂಡ್ರೆ ಅಪ್ಪಅಮ್ಮ ನಿಮ್ಮನ್ನ ಜಾಸ್ತಿ ನಂಬ್ತಾರೆ. ಜಾಸ್ತಿ ಫ್ರೀಡಂ ಕೊಡ್ತಾರೆ. ನಂಬ್ಕೆಯಿಂದ ನಡಕೊಳ್ಳದೆ ಇದ್ರೆ ಫ್ರೀಡಂ ಕೊಡಲ್ಲ.

ಒಂದೇ ಸಾರಿ ನಂಬ್ಕೆ ಗಳಿಸೋದಕ್ಕೆ ಆಗಲ್ಲ, ಟೈಂ ಹಿಡಿಯುತ್ತೆ. ಅಪ್ಪಅಮ್ಮ ಫ್ರೀಡಂ ಕೊಡಬೇಕಂದ್ರೆ ನೀವು ಯಾವಾಗ್ಲೂ ಪ್ರಾಮಾಣಿಕರಾಗಿ ನಡ್ಕೋಬೇಕು.

ಚಿರಾಗ್‌ ಕಂಡುಕೊಂಡ ಸತ್ಯ: “ಅಪ್ಪಅಮ್ಮಂಗೆ ಏನ್‌ ಇಷ್ಟ ಅಂತ ನಂಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಅವ್ರಿಗೆ ಇಷ್ಟಾ ಆಗೋ ತರ ಅವ್ರ ಮುಂದೆ ನಡಕೊಂಡ್ರೂನೂ ಒಬ್ಬನೇ ಇದ್ದಾಗ ನನ್ನಿಷ್ಟದಂತೆ ನಡಕೊಳ್ಳುತ್ತಿದ್ದೆ. ಹೀಗೆ ನಾಟಕ ಆಡುತ್ತಿದ್ರಿಂದ ಅಪ್ಪಅಮ್ಮಗೆ ನನ್ನ ನಂಬೋದು ಇನ್ನು ಕಷ್ಟ ಆಯ್ತು. ಆಗ ನಂಗೊಂದು ಸತ್ಯ ಗೊತ್ತಾಯ್ತು. ನಾಟಕ ಆಡೋದ್ರಿಂದ ಪ್ರಯೋಜ್ನ ಇಲ್ಲ, ಪ್ರಾಮಾಣಿಕರಾಗಿ ಇದ್ರೇನೇ ಫ್ರೀಡಂ ಸಿಗೋದು. ನಾವು ಎಷ್ಟು ಹೆಚ್ಚು ನಂಬ್ಕೆಯಿಂದ ನಡಕೊಳ್ಳುತ್ತೀವೋ ಅಷ್ಟೇ ಹೆಚ್ಚು ಅಪ್ಪಅಮ್ಮ ನಮ್ಮನ್ನ ನಂಬ್ತಾರೆ.”

 ಇದನ್ನ ಟ್ರೈ ಮಾಡಿ

ತಪ್ಪನ್ನ ಮನಸಾರೆ ಒಪ್ಕೊಂಡು ಸತ್ಯ ಹೇಳಿ. ತಪ್ಪು ಮಾಡದ ಜನನೇ ಇಲ್ಲ. ಆದ್ರೆ ಅದನ್ನ ಮುಚ್ಚಾಕೋಕೆ ಸುಳ್ಳಿನ ಗೋಪುರ ಕಟ್ಟಿದ್ರೆ (ಅರ್ಧ ಸತ್ಯ ಹೇಳಿದ್ರೆ) ಅಪ್ಪಅಮ್ಮ ನಿಮ್ಮೇಲೆ ಇಟ್ಟಿರೋ ನಂಬಿಕೆಯ ಗೋಪುರ ಕುಸಿದು ಬೀಳುತ್ತೆ. ಅದೇ ನೀವು ಯಾವಾಗ್ಲೂ ಪ್ರಾಮಾಣಿಕರಾಗಿ ನಡಕೊಳ್ಳುತ್ತಾ ತಪ್ಪು ಒಪ್ಕೊಂಡ್ರೆ ಏನೇ ಆದ್ರೂ ನೀವು ಸತ್ಯ ಮುಚ್ಚಿಡಲ್ಲ ಅನ್ನೋ ನಂಬಿಕೆ ಅಪ್ಪಅಮ್ಮಗೆ ಬರುತ್ತೆ. ಸತ್ಯ ಹೇಳೋರನ್ನೇ ಜನ ಹೆಚ್ಚು ನಂಬ್ತಾರೆ.

“ತಪ್ಪು ಮಾಡ್ದಾಗೆಲ್ಲ ಅಪ್ಪಅಮ್ಮ ನಿಮ್ಮ ಮೇಲೆ ನಂಬ್ಕೆ ಕಳ್ಕೊಳ್ಳಲ್ಲ. ಆದ್ರೆ ಆ ತಪ್ಪನ್ನ ಮುಚ್ಚಿಟ್ಟಾಗ ಅಪ್ಪಅಮ್ಮ ನಿಮ್ಮ ಮೇಲೆ ನಂಬ್ಕೆ ಕಳಕೊಳ್ಳುತ್ತಾರೆ.”—ಅನಿತಾ.

‘ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸ್ತೀವಿ’ ಅಂತ ಬೈಬಲ್‌ ಹೇಳುತ್ತೆ.—ಇಬ್ರಿಯ 13:18.

  • ಇದರ ಬಗ್ಗೆ ಯೋಚ್ಸಿ: ಅಪ್ಪಅಮ್ಮ ನಿಮ್ಗೆ ಎಲ್ಲಿ ಹೋಗುತ್ತಿದ್ದೀಯಾ, ಅಲ್ಲಿ ಏನು ಮಾಡ್ತೀಯಾ, ಅಂತ ಕೇಳಿದ್ರೆ ನೀವು ಪೂರ್ತಿ ಸತ್ಯ ಹೇಳ್ತೀರಾ? ಅಥವಾ ವಿಷ್ಯನ ಅರ್ಧಂಬರ್ಧ ಹೇಳಿ ಸತ್ಯನ ಮುಚ್ಚಿಡುತ್ತೀರಾ?

ಹೇಳಿದ ಮಾತನ್ನ ಕೇಳಿ. ಅಪ್ಪಅಮ್ಮ ಇಟ್ಟಿರೋ ಎಲ್ಲಾ ರೂಲ್ಸನ್ನ ಪಾಲ್ಸಿ. ಕೊಟ್ಟಿರೋ ಎಲ್ಲ ಕೆಲ್ಸನೂ ಕರೆಕ್ಟಾಗಿ ಮಾಡಿ. ಸಮಯನಾ ಸರಿಯಾಗಿ ಪಾಲ್ಸಿ. ಸ್ಕೂಲಲ್ಲಿ ಕೊಟ್ಟಿರೋ ಹೋಮ್‌ವರ್ಕ್‌ ಮಾಡೋದನ್ನ ಮರೀಬೇಡಿ. ಅಪ್ಪಅಮ್ಮ ಹೇಳಿದ ಟೈಂಗೆ ಮನೆಗೆ ಬನ್ನಿ.

“ಫ್ರೆಂಡ್ಸ್‌ ಜೊತೆ ಹೋದಾಗ ಅಪ್ಪಅಮ್ಮ ರಾತ್ರಿ 9:00 ಅನ್ನುವಷ್ಟರಲ್ಲಿ ಮನೆಗೆ ಬನ್ನಿ ಅಂತ ಹೇಳ್ದಾಗ ನೀವು 10:30ಕ್ಕೆ ಮನೆಗೆ ಹೋದ್ರೆ ಅಪ್ಪಅಮ್ಮಗೆ ಅದು ಇಷ್ಟ ಆಗಲ್ಲ. ಇನ್ನೊಂದು ಸಲ ಫ್ರೆಂಡ್ಸ್‌ ಜೊತೆ ಎಲ್ಲಿ ಹೋಗೋಕೂ ಬಿಡಲ್ಲ.”—ರೋಹಿತ್‌.

“ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು” ಅಂತ ಬೈಬಲ್‌ ಹೇಳುತ್ತೆ.—ಗಲಾತ್ಯ 6:5.

  • ಇದರ ಬಗ್ಗೆ ಯೋಚ್ಸಿ: ಅಪ್ಪಅಮ್ಮ ಟೈಂಗೆ ಸರಿಯಾಗಿ ಮನೆಗೆ ಬಾ ಅಂದಾಗ, ಎಲ್ಲಾ ಕೆಲ್ಸನೂ ಮಾಡಿ ಮುಗ್ಸು ಅಂದಾಗ ಅಥವಾ ರೂಲ್ಸ್‌ನ ಪಾಲ್ಸು ಅಂದಾಗೆಲ್ಲಾ ನೀವು ಹೇಳಿದ ಮಾತ್ನ ಕೇಳಿದ್ದೀರಾ? ಇಷ್ಟ ಇಲ್ಲ ಅಂದ್ರುನೂ ಇದನ್ನೆಲ್ಲ ಮಾಡಿದ್ದೀರಾ?

ಸರಿಯಾದ ಟೈಂ ಬರೋವರೆಗು ಕಾಯಿರಿ. ಒಂದು ವೇಳೆ ನೀವು ಅಪ್ಪಅಮ್ಮನ ನಂಬಿಕೆನಾ ಮುರಿದಿರೋದಾದ್ರೆ ಅದನ್ನ ಮತ್ತೆ ಗಳಿಸೋಕೆ ಸ್ವಲ್ಪ ಟೈಂ ಹಿಡಿಯುತ್ತೆ. ಹಾಗಾಗಿ ತಾಳ್ಮೆಯಿಂದ ಕಾಯಿರಿ.

“ನಾನು ವಯಸ್ಸಲ್ಲಿ ದೊಡ್ಡವಳಾದ್ರೂ ಅಪ್ಪಅಮ್ಮ ನಂಗೆ ದೊಡ್ಡ ದೊಡ್ಡ ಜವಾಬ್ದಾರಿ ಕೊಡ್ದೆ ಇದ್ದಾಗ ಕೋಪ ಬರ್ತಿತ್ತು. ದೇಹ ಬೆಳೆಯೋದಕ್ಕೂ ಬುದ್ಧಿ ಬೆಳೆಯೋದಕ್ಕೂ ವ್ಯತ್ಯಾಸ ಇದೆ ಅಂತ ನಾನು ಅರ್ಥ ಮಾಡಿಕೊಂಡಿರಲಿಲ್ಲ. ಈ ಕೆಲ್ಸ ನನ್ನಿಂದಾನೂ ಮಾಡಕ್ಕಾಗುತ್ತೆ, ಒಂದು ಅವಕಾಶ ಕೊಟ್ಟು ನೋಡಿ ಅಂತ ಪ್ರೀತಿಯಿಂದ ಕೇಳ್ದೆ. ತಕ್ಷಣ ಒಪ್ಪದೇ ಹೋದ್ರೂ ಸ್ವಲ್ಪ ಟೈಂ ಆದಮೇಲೆ ಒಪ್ಪಿಕೊಂಡ್ರು. ನಂಬ್ಕೆ ಗಳಿಸೋಕೆ ವಯಸ್ಸಲ್ಲಿ ದೊಡ್ಡವರಾದರಷ್ಟೇ ಸಾಕಾಗಲ್ಲ ಬದಲಿಗೆ ಅದಕ್ಕೆ ತಕ್ಕ ಹಾಗೆ ಕೆಲ್ಸಾನು ಮಾಡ್ಬೇಕು ಅಂತ ನಂಗೆ ಗೊತ್ತಾಯ್ತು.”—ರಮ್ಯ.

‘ನೀವು ಏನಾಗಿದ್ದೀರಿ ಎಂಬುದನ್ನು ಸಾಭೀತುಪಡಿಸುತ್ತಾ ಇರಿ’ ಅಂತ ಬೈಬಲ್‌ ಹೇಳುತ್ತೆ.—2 ಕೊರಿಂಥ 13:5.

  • ಇದರ ಬಗ್ಗೆ ಯೋಚಿಸಿ: ಅಪ್ಪಅಮ್ಮ ನಿಮ್ಮನ್ನ ನಂಬೇಕಂದ್ರೆ (ಮತ್ತೆ ನಂಬೇಕಂದ್ರೆ) ‘ಜವಾಬ್ದಾರಿ ತಗೊಳ್ಳೋಕೆ ನನ್ನಿಂದ ಆಗುತ್ತೆ, ನಾನು ಬದಲಾಗಿದ್ದೀನಿ ಅಂತ ಸಾಭೀತುಪಡಿಸೋಕೆ’ ನಾನು ಏನೆಲ್ಲ ಮಾಡಬಹುದು?

ಹೀಗೆ ಮಾಡಿ ನೋಡಿ: ಪ್ರತಿಯೊಂದಕ್ಕೂ ಒಂದು ಗುರಿ ಇಡಿ. ಅದು ಕೆಲ್ಸ ಮಾಡಿ ಮುಗಿಸೋದು ಆಗಿರಬಹುದು, ಟೈಂಗೆ ಸರಿಯಾಗಿ ಬರೋದು ಆಗಿರಬಹುದು ಅಥವಾ ಬೇರೆ ಏನೇ ಆಗಿರಬಹುದು. ನೀವಿಟ್ಟಿರೋ ಗುರಿ ಬಗ್ಗೆ ಅಪ್ಪಅಮ್ಮಗೂ ಹೇಳಿ. ಅಷ್ಟೇ ಅಲ್ಲ ‘ನಿಮ್ಮ ನಂಬ್ಕೆ ಗಳಿಸೋಕೆ ಏನು ಮಾಡಿದ್ರೆ ಚೆನ್ನಾಗಿರುತ್ತೆ’ ಅಂತ ಅಪ್ಪಅಮ್ಮನ್ನೇ ಕೇಳಿ. ನಂತ್ರ ‘ನಿಮ್ಮ ಹಿಂದಿನ ನಡತೆಗೆ ಹೊಂದಿಕೆಯಲ್ಲಿರುವ ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿ’ ಅನ್ನೋ ಈ ಬೈಬಲ್‌ ಸಲಹೆನ ಪಾಲ್ಸೋಕೆ ನಿಮ್ಮಿಂದ ಆಗಿದ್ದೆಲ್ಲಾ ಮಾಡಿ. (ಎಫೆಸ 4:22) ಸಮಯ ಹೋದಂತೆ ಅಪ್ಪಅಮ್ಮ ನಿಮ್ಮನ್ನ ಖಂಡಿತ ನಂಬ್ತಾರೆ!