ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ನಾನ್ಯಾಕೆ ವರ್ಕೌಟ್‌ ಮಾಡ್ಬೇಕು?

ನಾನ್ಯಾಕೆ ವರ್ಕೌಟ್‌ ಮಾಡ್ಬೇಕು?

 ವರ್ಕೌಟ್‌ ಅಥ್ವಾ ವ್ಯಾಯಾಮ ಮಾಡೋದು ಯಾಕೆ ಒಳ್ಳೇದು?

ಕೆಲವು ದೇಶಗಳಲ್ಲಿ ಯುವಜನರು ಓಡಾಡೋದಾಗ್ಲಿ, ವ್ಯಾಯಾಮ ಮಾಡೋದಾಗ್ಲಿ ಮಾಡಲ್ಲ. ಇದ್ರಿಂದ ಅವ್ರ ಆರೋಗ್ಯ ಹಾಳಾಗುತ್ತೆ. ‘ದೈಹಿಕ ತರಬೇತಿಯು ಪ್ರಯೋಜನಕರವಾಗಿದೆ’ ಅಂತ ಬೈಬಲ್‌ ಕೂಡ ಹೇಳುತ್ತೆ. (1 ತಿಮೊತಿ 4:8) ಯಾಕೆ ವ್ಯಾಯಾಮ ಮಾಡಬೇಕು ಅನ್ನೋದಕ್ಕಿರೋ ಕೆಲ್ವು ಕಾರಣಗಳನ್ನ ನೋಡಿ:

 • ವ್ಯಾಯಾಮ ಮಾಡೋದ್ರಿಂದ ನಿಮ್ಮ ಮನ್ಸಿಗೆ ಹಾಯ್‌ ಅನಿಸುತ್ತೆ. ವ್ಯಾಯಾಮ ಮಾಡುವಾಗ ಮೆದುಳಿನಲ್ಲಿ ಎಂಡೋರ್ಫಿನ್‌ ಅನ್ನೋ ರಾಸಾಯನಿಕ ಉತ್ಪತ್ತಿಯಾಗುತ್ತೆ. ಇದ್ರಿಂದ ನಿಮ್ಮ ಮನ್ಸಿಗೆ ಹಾಯ್‌ ಅನಿಸುತ್ತೆ ಮತ್ತು ನೀವು ಖುಷಿಯಾಗಿರ್ತೀರಿ. ವ್ಯಾಯಾಮ ಮಾಡೋದ್ರಿಂದ ಚಿಂತೆ ಒತ್ತಡ ಕಡಿಮೆ ಆಗುತ್ತೆ ಅಂತ ಕೆಲವ್ರು ಹೇಳ್ತಾರೆ. ಅದು ಡಿಪ್ರೆಷನ್‌ ಕಾಯಿಲೆಗೆ ನೈಸರ್ಗಿಕ ಮದ್ದು ಅಂತ ಹೇಳ್ತಾರೆ.

  “ಬೆಳಬೆಳಿಗ್ಗೆನೇ ಎದ್ದು ಓಡಿದ್ರೆ ನಾನು ಇಡೀ ದಿನ ಖುಷಿಯಾಗಿರ್ತೀನಿ. ಹೆಚ್ಚು ಕೆಲ್ಸನೂ ಮಾಡ್ತೀನಿ. ಓಡೋದ್ರಿಂದ ನನ್ನ ಮೂಡ್‌ ಚೆನ್ನಾಗಿರುತ್ತೆ.”—ರೆಜಿನ.

 • ವ್ಯಾಯಾಮ ಮಾಡೋದ್ರಿಂದ ನೀವು ಚೆನ್ನಾಗಿ ಕಾಣ್ತೀರ. ಹಿತಮಿತವಾಗಿ ವ್ಯಾಯಾಮ ಮಾಡಿದ್ರೆ ನಿಮ್ಮ ದೇಹ ಗಟ್ಟಿಮುಟ್ಟಾಗುತ್ತೆ, ಫಿಟ್‌ ಆಗಿರ್ತೀರ ಮತ್ತು ನಿಮ್ಮ ಆತ್ಮವಿಶ್ವಾಸ ಅಥ್ವಾ ಕಾನ್ಫಿಡೆನ್ಸ್‌ ಹೆಚ್ಚಾಗುತ್ತೆ.

  “ಒಂದು ವರ್ಷದ ಹಿಂದೆ ನನ್ಗೆ ಒಂದು ಪುಲ್‌ ಅಪ್‌ ಎಕ್ಸರ್ಸೈಸ್‌ ಕೂಡ ಮಾಡೋಕೆ ಆಗ್ತಿರಲಿಲ್ಲ. (ಪುಲ್‌ ಅಪ್‌ ಎಕ್ಸರ್ಸೈಸ್‌ ಅಂದ್ರೆ ನಮ್ಗಿಂತ ಎತ್ತರದಲ್ಲಿ ಇರೋ ಒಂದು ಕಂಬಿಯನ್ನ ಹಿಡುಕೊಂಡು ನಮ್ಮ ಮುಖವನ್ನು ಅದಕ್ಕಿಂತ ಮೇಲೆ ತಗೊಂಡು ಹೋಗುವುದು) ಈಗ ಹತ್ತು ಪುಲ್‌ ಅಪ್‌ ಎಕ್ಸರ್ಸೈಸ್‌ ಮಾಡೋಕಾಗ್ತಿದೆ. ಹೀಗೆ ನನ್ನ ದೇಹವನ್ನ ಚೆನ್ನಾಗಿ ಇಟ್ಟುಕೊಂಡಿದ್ದೀನಿ.”—ಒಲಿವಿಯಾ.

 • ವ್ಯಾಯಾಮ ಮಾಡೋದ್ರಿಂದ ನಿಮ್ಮ ಜೀವ ಕಾಪಾಡಿಕೊಳ್ತೀರಿ. ತಪ್ಪದೆ ವ್ಯಾಯಾಮ ಮಾಡ್ತಾ ಇದ್ರೆ ನಿಮ್ಮ ಹೃದಯ, ಶ್ವಾಸಕೋಶ ಚೆನ್ನಾಗಿ ಕೆಲ್ಸ ಮಾಡುತ್ತೆ. ಏರೋಬಿಕ್‌ ಎಕ್ಸರ್ಸೈಸ್‌ ಮಾಡೋದ್ರಿಂದ ಕೊರೊನರಿ ಆರ್ಟೆರಿ ಡಿಸೀಸ್‌ (ಹೃದಯಕ್ಕೆ ರಕ್ತ ಸಾಗಿಸೋ ನರಗಳಿಗೆ ಸಂಬಂಧಪಟ್ಟ ಕಾಯಿಲೆ) ಅನ್ನು ತಡೆಯಬಹುದು. ಈ ಕಾಯಿಲೆಯಿಂದ ಅನೇಕ ಜನರು ಜೀವ ಕಳೆದುಕೊಳ್ತಿದ್ದಾರೆ.

  “ನಾವು ತಪ್ಪದೆ ವ್ಯಾಯಾಮ ಮಾಡೋದಾದ್ರೆ ನಮ್ಗೆ ಜೀವವನ್ನು ಗಿಫ್ಟ್‌ ಆಗಿ ಕೊಟ್ಟಿರೋ ಸೃಷ್ಟಿಕರ್ತನಿಗೆ ಥ್ಯಾಂಕ್ಸ್‌ ಹೇಳಿದಂತೆ ಇರುತ್ತೆ.”—ಜೆಸಿಕ.

ಸಾರಾಂಶ: ವ್ಯಾಯಾಮ ಮಾಡೋದ್ರಿಂದ ತುಂಬ ಪ್ರಯೋಜ್ನ ಇದೆ. ನಿಮ್ಗೆ ಈಗ್ಲೂ ಮತ್ತು ಮುಂದಕ್ಕೂ ಒಳ್ಳೇ ಆರೋಗ್ಯ ಇರುತ್ತೆ. ಟಾನ್ಯಾ ಎಂಬ ಹುಡುಗಿ ಹೀಗೆ ಹೇಳ್ತಾಳೆ: “ಎಕ್ಸರ್ಸೈಸ್‌ ಮಾಡದೇ ಇರೋಕೆ ನಂಗೆ ತುಂಬ ನೆಪಗಳಿರುತ್ತೆ. ಆದ್ರೆ ಅದನ್ನೆಲ್ಲಾ ಬದಿಗಿಟ್ಟು ಎಕ್ಸರ್ಸೈಸ್‌ ಮಾಡಿದಾಗ ಖುಷಿಯಾಗುತ್ತೆ. ‘ಅಯ್ಯೋ ವ್ಯಾಯಾಮ ಮಾಡಿಬಿಟ್ನಲ್ಲಾ’ ಅಂತ ಬೇಜಾರಾಗಲ್ಲ. ನೀವು ಕೂಡ ಟ್ರೆಕ್ಕಿಂಗ್‌ ಹೋಗಿ, ಎಕ್ಸರ್ಸೈಸ್‌ ಮಾಡಿ ಯಾವತ್ತಿಗೂ ಬೇಜಾರಾಗಲ್ಲ.”

ಒಂದು ಕಾರನ್ನ ಆಗಾಗ ಮೇಂಟೇನ್‌ ಮಾಡ್ಲಿಲ್ಲ ಅಂದ್ರೆ ಅದು ಹಾಳಾಗುತ್ತೆ. ಅದೇ ತರ ನೀವು ವ್ಯಾಯಾಮ ಮಾಡ್ಲಿಲ್ಲ ಅಂದ್ರೆ ನಿಮ್ಮ ಆರೋಗ್ಯ ಹಾಳಾಗುತ್ತೆ

 ನಾನ್ಯಾಕೆ ವರ್ಕೌಟ್‌ ಮಾಡಲ್ಲ?

ಈ ಕೆಲವು ಕಾರಣಗಳನ್ನು ನೀವು ಕೊಡ್ಬಹುದು:

 • ನಾನು ಆರೋಗ್ಯವಾಗೇ ಇದ್ದೀನಲ್ಲಾ: “ಸಾಮಾನ್ಯವಾಗಿ ಜನರು ಯುವ ಪ್ರಾಯದಲ್ಲಿರುವಾಗ ‘ಕಾಯಿಲೆ ಬರೋದೆಲ್ಲಾ ವಯಸ್ಸಾದವ್ರಿಗೆ, ನಮ್ಗೆ ಬರಲ್ಲ. ನಾವು ಗಟ್ಟಿಮುಟ್ಟಾಗಿಯೇ ಇದ್ದೇವಲ್ಲಾ! ಅಂತ ಅಂದುಕೊಳ್ತಾರೆ.”—ಸೋಫಿಯ.

 • ನಂಗೆ ಟೈಮ್‌ ಇಲ್ಲ. “ನಾನು ಯಾವಾಗ್ಲೂ ಬಿಝಿಯಾಗಿರ್ತೀನಿ. ಊಟ ಮಾಡೋಕೆ, ನಿದ್ದೆ ಮಾಡೋಕೇ ಸರಿಯಾಗಿ ಟೈಮ್‌ ಸಿಗಲ್ಲ. ಅಂಥದ್ರಲ್ಲಿ ಎಕ್ಸರ್ಸೈಸ್‌ ಮಾಡೋಕೆ ಟೈಮ್‌ ಮಾಡಿಕೊಳ್ಳೋದು ತುಂಬನೇ ಕಷ್ಟ.”—ಕ್ಲೆರಿಸ.

 • ನಾನು ಜಿಮ್‌ಗೆ ಹೋಗಲ್ಲ. “ಇವತ್ತು ನೀವು ಫಿಟ್‌ ಆಗಿರಬೇಕು ಅಂದ್ರೆ ಕೈತುಂಬ ಹಣ ಇರಬೇಕು. ಯಾಕಂದ್ರೆ ಜಿಮ್‌ನಲ್ಲಿ ತುಂಬ ಹಣ ತಗೋತಾರೆ.”—ಜಿನಾ.

ಇದ್ರ ಬಗ್ಗೆ ಯೋಚ್ಸಿ:

ವರ್ಕೌಟ್‌ ಮಾಡದೆ ಇರೋ ತರ ನಿಮ್ಮನ್ನ ಯಾವುದು ತಡೀತಾ ಇದೆ? ಆ ತಡೆ ಜಯಿಸೋಕೆ ಶ್ರಮಪಡಿ. ಅದ್ರಿಂದ ನಿಮ್ಗೆ ಒಳ್ಳೇ ರಿಸಲ್ಟ್‌ ಸಿಗುತ್ತೆ.

 ವರ್ಕೌಟ್‌ ಮಾಡೋಕೆ ಸಹಾಯ ಮಾಡೋ ಸಲಹೆಗಳು

ಇಲ್ಲಿ ಕೆಲ್ವು ಸಲಹೆಗಳಿವೆ:

 • ನಿಮ್ಮ ಆರೋಗ್ಯ ಕಾಪಾಡಿಕೊಳ್ಳೋ ಜವಾಬ್ದಾರಿ ನಿಮ್ಮದೇ.—ಗಲಾತ್ಯ 6:5.

 • ವ್ಯಾಯಾಮ ಮಾಡದಿರೋಕೆ ನೆಪಗಳನ್ನ ಕೊಡಬೇಡಿ. (ಪ್ರಸಂಗಿ 11:4) ಉದಾಹರಣೆಗೆ, ವ್ಯಾಯಾಮ ಮಾಡೋಕೆ ಜಿಮ್‌ಗೆ ಹೋಗಬೇಕು ಅಂತೇನಿಲ್ಲ. ಮನೆಯಲ್ಲೇ ನಿಮ್ಗೆ ಖುಷಿ ಕೊಡೋ ಕೆಲ್ಸ ಮಾಡಿ. ಆ ಕೆಲ್ಸ ನಿಮ್ಮ ದೇಹ ದಂಡಿಸೋ ತರ ಇರಬೇಕು.

 • ಯಾವ್ಯಾವ ತರದ ವ್ಯಾಯಾಮಗಳಿವೆ ಅಂತ ತಿಳ್ಕೊಳ್ಳೋಕೆ ಬೇರೆಯವ್ರ ಹತ್ರನೂ ಕೇಳಿ ನೋಡಿ.—ಜ್ಞಾನೋಕ್ತಿ 20:18.

 • ಒಂದು ಒಳ್ಳೇ ಶೆಡ್ಯೂಲ್‌ ಮಾಡಿ. ಚಿಕ್ಕಚಿಕ್ಕ ಗುರಿಗಳನ್ನ ಇಡಿ, ಆ ಗುರಿಗಳನ್ನ ಮುಟ್ತಾ ಹೋದಂತೆ ಅದನ್ನ ಬರೆದಿಡಿ. ಆಗ ಇನ್ನೂ ವರ್ಕೌಟ್‌ ಮಾಡ್ತಾ ಇರೋಕೆ ಪ್ರೇರಣೆ ಸಿಗುತ್ತೆ.—ಜ್ಞಾನೋಕ್ತಿ 21:5.

 • ಒಬ್ಬರೇ ವರ್ಕೌಟ್‌ ಮಾಡೋ ಬದ್ಲು ಇನ್ನೊಬ್ರ ಜೊತೆ ಸೇರಿ ವರ್ಕೌಟ್‌ ಮಾಡಿ. ಆಗ ಅದನ್ನ ತಪ್ಪದೆ ಮಾಡಲು ನಿಮ್ಮನ್ನು ಉತ್ತೇಜಿಸೋಕೆ ಅವ್ರು ಇರ್ತಾರೆ.—ಪ್ರಸಂಗಿ 4:9, 10.

 • ಕೆಲವು ಅಡ್ಡಿತಡೆಗಳು ಬರಬಹುದು. ಹಾಗೆ ಬಂದಾಗ ಎಕ್ಸರ್ಸೈಸ್‌ ಮಾಡೋದನ್ನ ನಿಲ್ಲಿಸಬೇಡಿ, ಮುಂದುವರೆಸಿ.—ಜ್ಞಾನೋಕ್ತಿ 24:10.

 ಅತಿಯಾಗೂ ಮಾಡಬೇಡಿ

ಹುಡುಗ ಆಗ್ಲಿ, ಹುಡುಗಿ ಆಗ್ಲಿ ‘ಮಿತಸ್ವಭಾವದರು ಆಗಿರಬೇಕು’ ಅಂತ ಬೈಬಲ್‌ ಸಲಹೆ ಕೊಡುತ್ತೆ. (1 ತಿಮೊತಿ 3:2, 11) ಹಾಗಾಗಿ ವರ್ಕೌಟನ್ನು ತುಂಬ ಜಾಸ್ತಿನೂ ಮಾಡ್ಬೇಡಿ. ‘ಅತಿಯಾದ್ರೆ ಅಮೃತವೂ ವಿಷ’ ಅಂತ ಹೇಳೋ ಹಾಗೆ ಯಾರು ತುಂಬ ವರ್ಕೌಟ್‌ ಮಾಡ್ತಾರೋ ಅವ್ರು ಪ್ರಯೋಜನಕ್ಕಿಂತ ನಷ್ಟನೇ ಜಾಸ್ತಿ ಅನುಭವಿಸ್ತಾರೆ. ಜೂಲಿಯಾ ಅನ್ನೋ ಹುಡುಗಿ ಹೀಗೆ ಹೇಳ್ತಾಳೆ: “ಯಾವುದೇ ಹುಡುಗಿಗೂ ಒಬ್ಬ ಹುಡುಗ ನೋಡೋಕೆ ಚೆನ್ನಾಗಿದ್ದು, ಕಟ್ಟುಮಸ್ತಾಗಿದ್ದು, ಅವ್ನಿಗೆ ಬುದ್ಧಿವಂತಿಕೆ ಇಲ್ಲ ಅಂದ್ರೆ ಇಷ್ಟ ಆಗಲ್ಲ.”

ನಿಮ್ಮ ಲಿಮಿಟ್‌ ಮೀರಿ ವ್ಯಾಯಾಮ ಮಾಡಿ ಅಂತ ಹೇಳೋರ ಸಲಹೆಗೆ ಕಿವಿಗೊಡ್ಲೇ ಬೇಡಿ. ಅವ್ರಿಂದ ದೂರ ಇರಿ. ಯಾಕಂದ್ರೆ ಮಿತಿ ಮೀರಿ ವರ್ಕೌಟ್‌ ಮಾಡಿದ್ರೆ ನಿಮ್ಮ ದೇಹಕ್ಕೆ ಹಾನಿಯಾಗಬಹುದು ಮತ್ತು ಜೀವನದ ‘ಅತಿ ಪ್ರಾಮುಖ್ಯ ವಿಷ್ಯಗಳ’ ಕಡೆಗೆ ಗಮನಹರಿಸೋಕೆ ಕಷ್ಟ ಆಗ್ಬಹುದು.—ಫಿಲಿಪ್ಪಿ 1:10.

ಅಷ್ಟೇ ಅಲ್ಲ, ವರ್ಕೌಟ್‌ ಮಾಡೋಕೆ ನಿಮ್ಗೆ ಪ್ರೋತ್ಸಾಹ ಮಾಡೋ ವಿಷ್ಯಗಳೇ ಕೆಲವೊಮ್ಮೆ ನಿರುತ್ಸಾಹನೂ ಮಾಡ್ಬಹುದು. ವೆರಾ ಅನ್ನೋ ಹುಡುಗಿ ಹೇಳೋದೇನಂದ್ರೆ: “ತುಂಬ ಹುಡಿಗೀರು ತಾವು ಯಾರ ತರ ಆಗಬೇಕು ಅಂತ ಇಷ್ಟಪಡ್ತಾರೋ ಅಂಥವ್ರ ಫೋಟೋಗಳನ್ನ ಸಂಗ್ರಹಿಸಿ ಇಟ್ಕೊಳ್ತಾರೆ. ಅವ್ರ ತರ ಆಗಬೇಕು ಅಂತ ಉತ್ತೇಜನ ಪಡ್ಕೊಳ್ಳೋಕೆ ಆಗಾಗ ಅವ್ರ ಫೋಟೋ ನೋಡ್ತಾ ಇರ್ತಾರೆ. ಆದ್ರೆ ತಮ್ಮನ್ನ ಅವ್ರ ಜೊತೆ ಹೋಲಿಸಿದಾಗ ಪ್ರೋತ್ಸಾಹಕ್ಕಿಂತ ನಿರುತ್ಸಾಹನೇ ಜಾಸ್ತಿ ಆಗುತ್ತೆ. ಹಾಗಾಗಿ ನೀವು ನೋಡೋಕೆ ಚೆನ್ನಾಗಿ ಕಾಣಬೇಕು ಅನ್ನೋ ಗುರಿ ಇಡೋದಕ್ಕಿಂತ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಅನ್ನೋ ಗುರಿ ಇಡಿ.”