ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ಇನ್ನೇನೂ ಮಾಡೋಕಾಗಲ್ಲ ಅನ್ನುವಷ್ಟು ಸುಸ್ತಾದಾಗ ಏನ್‌ ಮಾಡೋದು?

ಇನ್ನೇನೂ ಮಾಡೋಕಾಗಲ್ಲ ಅನ್ನುವಷ್ಟು ಸುಸ್ತಾದಾಗ ಏನ್‌ ಮಾಡೋದು?

ನಿಮಗೆ ಈ ತರ ಯಾವತ್ತಾದ್ರು ಅನಿಸಿದ್ಯಾ? ಹಾಗಿದ್ರೆ ಈ ಲೇಖನ ನಿಮಗೆ ಸಹಾಯ ಮಾಡುತ್ತೆ.

 ಸುಸ್ತು ಯಾವಾಗ ಆಗುತ್ತೆ?

 • ಕೆಲಸದ ಒತ್ತಡ. ಜೂಲಿ ಅನ್ನೋ ಯುವತಿ ಹೀಗೆ ಹೇಳ್ತಾಳೆ: “ನಮ್ಮ ಜೀವನದಲ್ಲಿ ನಾವು ಎಲ್ಲೇ ಇರಲಿ ಏನೇ ಮಾಡ್ತಿರಲಿ ಎಲ್ಲರು ಕೊಡೋ ಸಲಹೆ ಒಂದೇ. ‘ಜೀವನದಲ್ಲಿ ಮುಂದೆ ಬನ್ನಿ, ದೊಡ್ಡ-ದೊಡ್ಡ ಗುರಿಗಳನ್ನ ಇಡಿ, ಯಾವಾಗ್ಲೂ ಪ್ರಗತಿಯ ಮೆಟ್ಟಲನ್ನ ಏರತ್ತಾನೇ ಇರಿ ಇಳಿಬೇಡಿ.’ ಈ ತರ ಜನ ಪದೇ-ಪದೇ ಹೇಳುವಾಗ ನಮ್ಮ ಮೇಲೆ ದೊಡ್ಡ ಭಾರ ಹಾಕಿದ ಹಾಗೆ ಅನಿಸುತ್ತೆ.”

 • ಟೆಕ್ನಾಲಜಿ. ನಮ್ಮ ಕೈಯಲ್ಲಿ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ ಮತ್ತು ಕಂಪ್ಯೂಟರ್‌ ಇರೋದ್ರಿಂದ ಕೆಲವೊಂದು ಸಲ 24 ಗಂಟೆನೂ ಬಿಝಿಯಾಗಿ ಬಿಡ್ತೀವಿ. ಈ ರೀತಿ ಜಾಸ್ತಿ ಕೆಲಸ ಮಾಡೋದ್ರಿಂದ ತುಂಬ ಸ್ಟ್ರೆಸ್‌ ಆಗುತ್ತೆ. ನಮ್ಮ ಕೈಯಲ್ಲಿ ಆಗೋದೆ ಇಲ್ಲ ಅನ್ನೋವಷ್ಟು ಸುಸ್ತಾಗಿಬಿಡ್ತೀವಿ.

 • ನಿದ್ದೆಗೆಡೋದು. ಮಿರಾಂಡಾ ಅನ್ನೋ ಯುವತಿ ಹೀಗೆ ಹೇಳ್ತಾಳೆ: “ಸ್ಕೂಲು, ಆಟ-ಪಾಠ, ಕೆಲಸ ಇದಕ್ಕೆಲ್ಲ ಜಾಸ್ತಿ ಟೈಮ್‌ ಬೇಕಾಗಿರೋದ್ರಿಂದ ಕೆಲವು ಯುವಕರು ಬೆಳಿಗ್ಗೆ ಬೇಗ ಎದ್ದೇಳ್ತಾರೆ ರಾತ್ರಿ ಲೇಟಾಗಿ ನಿದ್ದೆ ಮಾಡ್ತಾರೆ. ಈ ತರ ಮಾಡೋದು ಆರೋಗ್ಯಕ್ಕೆ ಒಳ್ಳೇದಲ್ಲ ಅಂತ ಗೊತ್ತಿದ್ರೂ ಬೇರೆ ದಾರಿ ಇಲ್ಲದೆ ಹೀಗೆ ಮಾಡ್ತಾರೆ.” ಹೀಗೆ ನಿದ್ದೆ ಬಿಟ್ಟು ಕೆಲಸ ಮಾಡೋದ್ರಿಂದ ತುಂಬ ಸುಸ್ತಾಗಿ ಬಿಡ್ತೀವಿ.

 ನಾವು ಯಾಕೆ ಇದ್ರ ಬಗ್ಗೆ ಯೋಚನೆ ಮಾಡಬೇಕು?

ಬೈಬಲ್‌ ಶ್ರಮಪಟ್ಟು ಕೆಲಸ ಮಾಡೋ ವ್ಯಕ್ತಿನ ಹೊಗಳುತ್ತೆ. (ಜ್ಞಾನೋಕ್ತಿ 6:6-8; ರೋಮನ್ನರಿಗೆ 12:11) ಆದ್ರೆ ಆರೋಗ್ಯ ಹಾಳಾಗುವಷ್ಟು ಕಷ್ಟಪಟ್ಟು ಕೆಲಸ ಮಾಡಿ ಅಂತ ಹೇಳಲ್ಲ.

“ಒಂದು ಸಲ ನನಗೆ ಎಷ್ಟು ಕೆಲಸ ಇತ್ತಂದ್ರೆ ಇಡೀ ದಿನ ನಾನು ಊಟ ಮಾಡಲಿಲ್ಲ. ಅದನ್ನ ಮರೆತೇ ಹೋಗ್ಬಿಟ್ಟಿದ್ದೆ. ಇದ್ರಿಂದ ಬಂದ ಕೆಲಸಗಳನ್ನೆಲ್ಲ ಒಪ್ಕೊಳ್ಳಬಾರದು, ಆ ತರ ಮಾಡಿದ್ರೆ ನನ್ನ ಆರೋಗ್ಯ ಹಾಳಾಗುತ್ತೆ ಅಂತ ಗೊತ್ತಾಯ್ತು.”—ಆ್ಯಶ್ಲಿ.

ಅದಕ್ಕೆ ಬೈಬಲ್‌ ಹೀಗೆ ಹೇಳುತ್ತೆ: “ಸತ್ತ ಸಿಂಹಕ್ಕಿಂತ ಬದುಕಿರೋ ನಾಯಿನೇ ಮೇಲು.” (ಪ್ರಸಂಗಿ 9:4) ಸಿಂಹದ ತರ ನನಗೆ ಶಕ್ತಿ ಇದೆ ಅಂತ ಅಂದ್ಕೊಂಡು ಆರಂಭದಲ್ಲಿ ಎಲ್ಲ ತರದ ಕೆಲಸನ ನಾವು ಒಪ್ಕೊಬಹುದು. ಆದ್ರೆ ನಾವು ಮಿತಿಮೀರಿ ಕೆಲಸ ಮಾಡಿದಾಗ ಪೂರ್ತಿ ಸುಸ್ತಾಗಿ ನಮ್ಮ ಆರೋಗ್ಯನ ಕೆಡಿಸಿಕೊಂಡು ಬಿಡ್ತೀವಿ.

 ಸುಸ್ತಾದಾಗ ಏನ್‌ ಮಾಡಬಹುದು?

 • ಇಲ್ಲ’ ಅಂತ ಹೇಳೋದನ್ನ ಕಲಿರಿ. ಬೈಬಲ್‌ “ವಿನಮ್ರರ ಹತ್ರ ವಿವೇಕ ಇರುತ್ತೆ” ಅಂತ ಹೇಳುತ್ತೆ. (ಜ್ಞಾನೋಕ್ತಿ 11:2) ವಿನಮ್ರ ವ್ಯಕ್ತಿಗೆ ತನ್ನ ಇತಿ-ಮಿತಿ ಗೊತ್ತಿರುತ್ತೆ. ತನ್ನ ಕೈಯಲ್ಲಿ ಎಷ್ಟು ಆಗುತ್ತೋ ಅಷ್ಟೆ ಕೆಲಸನ ಒಪ್ಕೊಳ್ತಾನೆ. ಜಾಸ್ತಿ ಒಪ್ಕೊಳ್ಳೋಕೆ ಹೋಗಲ್ಲ.

  “ನನ್ನ ಕೈಯಲ್ಲಿ ಮಾಡೋಕೆ ಆಗಲ್ಲ ಅಂತ ಹೇಳ್ದೆ ಕೊಟ್ಟ ಕೆಲಸಗಳನ್ನೆಲ್ಲ ಒಪ್ಕೊಳ್ಳೋ ವ್ಯಕ್ತಿ ತುಂಬ ಜಲ್ದಿ ಸುಸ್ತಾಗ್ತಾನೆ. ಯಾಕಂದ್ರೆ ಅವನು ತನ್ನ ಇತಿಮಿತಿನ ಅರ್ಥಮಾಡಿಕೊಂಡಿರಲ್ಲ. ‘ಇಲ್ಲ’ ಅಂತ ಹೇಳೋದನ್ನ ಕಲ್ತಿರಲ್ಲ.”—ಜೋರ್ಡನ್‌.

 • ರೆಸ್ಟ್‌ ತಗೊಳ್ಳಿ. ಬೈಬಲ್‌ ಹೀಗೆ ಹೇಳುತ್ತೆ: “ಅತಿಯಾಗಿ ದುಡಿಯೋದಕ್ಕಿಂತ ಒಂದಿಷ್ಟು ವಿಶ್ರಾಂತಿ ಪಡ್ಕೊಳ್ಳೋದೇ ಒಳ್ಳೇದು. ಅತಿಯಾಗಿ ದುಡಿಯೋದು ಗಾಳಿ ಹಿಡಿಯೋಕೆ ಓಡಿದ ಹಾಗೆ.” (ಪ್ರಸಂಗಿ 4:6) ನಿದ್ರೆ ನಮ್ಮ “ಮೆದುಳಿಗೆ ಊಟ” ಇದ್ದ ಹಾಗೆ. ಯುವಕರಿಗೆ 8 ರಿಂದ 10 ಗಂಟೆ ನಿದ್ರೆ ಬೇಕು. ಆದ್ರೆ ಅವರು ಚೆನ್ನಾಗಿ ನಿದ್ರೆ ಮಾಡ್ದೆ ಇದ್ರೆ ಮೆದುಳಿಗೆ ಬೇಕಾದ ಊಟವನ್ನ ಸರಿಯಾಗಿ ಕೊಡುತ್ತಿಲ್ಲ ಅಂತರ್ಥ.

  “ಕೈತುಂಬ ಕೆಲಸ ಇದ್ದಾಗ ನಾನು ಸರಿಯಾಗಿ ನಿದ್ರೆ ಮಾಡ್ತಿರಲಿಲ್ಲ. ಆಗ ಮಾರನೇ ದಿನ ಚೆನ್ನಾಗಿ ಕೆಲಸ ಮಾಡೋಕೆ ಆಗ್ತಿರಲಿಲ್ಲ. ಆದ್ರೆ ಯಾವಾಗ ಚೆನ್ನಾಗಿ ನಿದ್ರೆ ಮಾಡ್ತಿದ್ನೋ ಆಗ ಖುಷಿಖುಷಿಯಾಗಿ ಕೆಲಸ ಮಾಡ್ತಿದ್ದೆ.”—ಬ್ರೂಕ್ಲಿನ್‌.

 • ಶೆಡ್ಯೂಲ್‌ ಮಾಡಿ. ಬೈಬಲ್‌ ಹೀಗೆ ಹೇಳುತ್ತೆ: “ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ.” (ಜ್ಞಾನೋಕ್ತಿ 21:5) ಸಮಯ ಮತ್ತು ಕೆಲಸನ ಒಳ್ಳೇ ರೀತಿ ಬ್ಯಾಲೆನ್ಸ್‌ ಮಾಡೋದು ಒಂದು ಕಲೆ ಇದ್ದ ಹಾಗೆ. ಆ ಕಲೆನಾ ನೀವು ಚೆನ್ನಾಗಿ ಕಲಿತು ಬಿಟ್ರೆ ಅದು ನಿಮ್ಮ ಜೀವನಪೂರ್ತಿ ಸಹಾಯ ಮಾಡುತ್ತೆ.

  “ನಾವು ಚೆನ್ನಾಗಿ ಪ್ಲಾನ್‌ ಮಾಡಿದಾಗ ನಮಗಿರೋ ಕೆಲಸದ ಒತ್ತಡವನ್ನ ಕಮ್ಮಿ ಮಾಡಬಹುದು. ಶೆಡ್ಯೂಲ್‌ ಮಾಡಿದಾಗ ನಮ್ಮ ಹತ್ರ ಎಷ್ಟು ಟೈಮ್‌ ಇದೆ, ಎಷ್ಟು ಕೆಲಸ ಮಾಡಬಹುದು ಅಂತ ಈಜಿ಼ಯಾಗಿ ತಿಳ್ಕೊಳ್ಳಬಹುದು. ಆಗ ನಮಗೆ ಸುಸ್ತಾಗಲ್ಲ.”—ವೆನೆಸ್ಸಾ.