ಮಾಹಿತಿ ಇರುವಲ್ಲಿ ಹೋಗಲು

ಯುವ ಜನರ ಪ್ರಶ್ನೆಗಳು

ನಾನ್ಯಾಕೆ ದೀಕ್ಷಾಸ್ನಾನ ತಗೋಬೇಕು?—ಭಾಗ 1: ದೀಕ್ಷಾಸ್ನಾನದ ಅರ್ಥ

ನಾನ್ಯಾಕೆ ದೀಕ್ಷಾಸ್ನಾನ ತಗೋಬೇಕು?—ಭಾಗ 1: ದೀಕ್ಷಾಸ್ನಾನದ ಅರ್ಥ

ಯೆಹೋವನ ಸಾಕ್ಷಿಗಳ ಎಷ್ಟೋ ಮಕ್ಕಳು ಪ್ರತಿ ವರ್ಷ ದೀಕ್ಷಾಸ್ನಾನ ಪಡೆಯುತ್ತಾರೆ. ನೀವೂ ದೀಕ್ಷಾಸ್ನಾನ ತೆಗೆದುಕೊಳ್ಳಬೇಕು ಅಂತ ಯೋಚನೆ ಮಾಡ್ತಿದ್ದೀರಾ? ಹಾಗಾದ್ರೆ ಸಮರ್ಪಣೆ ಮತ್ತು ದೀಕ್ಷಾಸ್ನಾನ ಅಂದರೇನು ಅಂತ ಮೊದಲು ನೀವು ಅರ್ಥಮಾಡಿಕೊಳ್ಳಬೇಕು.

 ದೀಕ್ಷಾಸ್ನಾನ ಅಂದರೇನು?

ದೀಕ್ಷಾಸ್ನಾನ ಅಂದರೆ ನೀರನ್ನು ಸುಮ್ಮನೆ ಮೇಲೆಮೇಲೆ ಚಿಮುಕಿಸುವುದು ಅಲ್ಲ. ಬೈಬಲ್‌ ಹೇಳುವ ಪ್ರಕಾರ ದೀಕ್ಷಾಸ್ನಾನ ಅಂದರೆ ನೀರಿನಲ್ಲಿ ಪೂರ್ತಿಯಾಗಿ ಮುಳುಗುವುದು. ಇದಕ್ಕೊಂದು ಒಳ್ಳೇ ಅರ್ಥ ಇದೆ.

  • ನೀರಿನೊಳಗೆ ಹೋಗುವುದು, ನೀವು ಇನ್ನು ಮುಂದೆ ನಿಮಗೆ ಇಷ್ಟ ಆಗುವ ತರ ಜೀವನ ಮಾಡಲ್ಲ ಎಂದು ಎಲ್ಲರಿಗೆ ತೋರಿಸುತ್ತದೆ.

  • ನೀರಿನಿಂದ ಮೇಲೆ ಬರುವುದು, ನೀವು ದೇವರಿಗೆ ಇಷ್ಟ ಆಗೋದನ್ನು ಮಾಡಲು ಒಂದು ಹೊಸ ಜೀವನ ಶುರು ಮಾಡುತ್ತಿದ್ದೀರ ಅಂತ ತೋರಿಸುತ್ತದೆ.

ನೀವು ದೀಕ್ಷಾಸ್ನಾನ ತೆಗೆದುಕೊಳ್ಳುವಾಗ ಎರಡು ವಿಷಯ ಗೊತ್ತಾಗುತ್ತೆ. ಒಂದು, ಸರಿ ಯಾವುದು ತಪ್ಪು ಯಾವುದು ಅಂತ ತೀರ್ಮಾನ ಮಾಡುವ ಅಧಿಕಾರ ಯೆಹೋವನಿಗೆ ಮಾತ್ರ ಇದೆಯೆಂದು ನೀವು ಒಪ್ಪುತ್ತೀರ. ಎರಡು, ಯಾವಾಗಲೂ ಆತನಿಗೆ ಇಷ್ಟ ಇರುವುದನ್ನೇ ಮಾಡುತ್ತೀರ ಅಂತ ಮಾತು ಕೊಡುತ್ತಿದ್ದೀರ.

ಸ್ವಲ್ಪ ಯೋಚಿಸಿ: ನಿಮ್ಮ ಜೀವನದಲ್ಲಿ ಯೆಹೋವನ ಮಾತನ್ನೇ ಕೇಳುತ್ತೀರ ಅಂತ ನೀವು ಯಾಕೆ ಮಾತುಕೊಡಬೇಕು? 1 ಯೋಹಾನ 4:19 ಮತ್ತು ಪ್ರಕಟನೆ 4:11 ನೋಡಿ.

 ಸಮರ್ಪಣೆ ಅಂದರೇನು?

ದೀಕ್ಷಾಸ್ನಾನಕ್ಕೆ ಮುಂಚೆ ನೀವು ಯೆಹೋವನಿಗೆ ನಿಮ್ಮನ್ನೇ ಸಮರ್ಪಣೆ ಮಾಡಿಕೊಳ್ಳಬೇಕು. ಅದನ್ನು ಹೇಗೆ ಮಾಡೋದು?

ಇದು ನೀವು ವೈಯಕ್ತಿಕವಾಗಿ ಪ್ರಾರ್ಥನೆಯಲ್ಲಿ ಮಾಡಬೇಕಾದ ವಿಷಯ. ನೀವು ಯೆಹೋವನ ಸೇವೆಯನ್ನು ನಿತ್ಯನಿರಂತರಕ್ಕೂ ಮಾಡುತ್ತೀರ, ಏನೇ ಆದರೂ ಬೇರೆಯವರು ಏನೇ ಮಾಡಿದರೂ ಆತನಿಗೆ ಇಷ್ಟ ಇರುವುದನ್ನೇ ಮಾಡುತ್ತೀರ ಎಂದು ಪ್ರಾರ್ಥನೆಯಲ್ಲಿ ಮಾತುಕೊಡುವುದೇ ಸಮರ್ಪಣೆ.

ನಿಮ್ಮ ವೈಯಕ್ತಿಕ ಪ್ರಾರ್ಥನೆಯಲ್ಲಿ ಮಾಡಿರುವ ಈ ಸಮರ್ಪಣೆಯನ್ನು ಎಲ್ಲರಿಗೆ ತೋರಿಸಲು ನೀವು ತೆಗೆದುಕೊಳ್ಳುವ ಹೆಜ್ಜೆನೇ ದೀಕ್ಷಾಸ್ನಾನ. ಈ ಹೆಜ್ಜೆ ತಕ್ಕೊಂಡಾಗ ನೀವು ಇನ್ನು ಮುಂದೆ ನಿಮಗೋಸ್ಕರ ಅಲ್ಲ, ಯೆಹೋವನಿಗೋಸ್ಕರ ಜೀವಿಸುತ್ತೀರ ಅಂತ ಬೇರೆಯವರಿಗೆ ಗೊತ್ತಾಗುತ್ತದೆ.—ಮತ್ತಾಯ 16:24.

ಸ್ವಲ್ಪ ಯೋಚಿಸಿ: ಯೆಹೋವನಿಗೋಸ್ಕರ ಜೀವಿಸುವಾಗ ನಿಮ್ಮ ಜೀವನ ಇನ್ನೂ ಒಳ್ಳೇದಾಗುತ್ತದೆ ಯಾಕೆ? ಯೆಶಾಯ 48:17, 18 ಮತ್ತು ಇಬ್ರಿಯ 11:6 ನೋಡಿ.

 ದೀಕ್ಷಾಸ್ನಾನ ಯಾಕೆ ಮುಖ್ಯ?

ಯೇಸುವಿನ ಶಿಷ್ಯರಾಗಲು ದೀಕ್ಷಾಸ್ನಾನ ಪಡೆಯಲೇಬೇಕು ಅಂತ ಆತನು ಹೇಳಿದನು. (ಮತ್ತಾಯ 28:19, 20) ಹಾಗಾಗಿ ಕ್ರೈಸ್ತರಾಗಬೇಕಾದರೆ ಈಗಲೂ ದೀಕ್ಷಾಸ್ನಾನ ಪಡೆಯಲೇಬೇಕು. ನಿಜ ಏನೆಂದ್ರೆ, ರಕ್ಷಣೆ ಸಿಗಬೇಕಾದರೆ ದೀಕ್ಷಾಸ್ನಾನ ಪಡೆಯಬೇಕೆಂದು ಬೈಬಲ್‌ ಹೇಳುತ್ತದೆ.—1 ಪೇತ್ರ 3:21.

ಆದರೆ ನೀವು ದೀಕ್ಷಾಸ್ನಾನ ಪಡೆಯುವುದಕ್ಕೆ ಕಾರಣ ಯೆಹೋವನ ಮೇಲೆ ನಿಮಗಿರುವ ಪ್ರೀತಿ ಮತ್ತು ಆತನ ಜೊತೆಗಿರುವ ಸ್ನೇಹಕ್ಕೆ ಬೆಲೆ ಕೊಡುವುದೇ ಆಗಿರಬೇಕು. “ಯೆಹೋವ ನನಗೆ ಮಾಡಿರೋ ಎಲ್ಲ ಒಳ್ಳೇ ವಿಷ್ಯಗಳಿಗಾಗಿ ಆತನ ಋಣನ ನಾನು ಹೇಗೆ ತೀರಿಸಲಿ? ... ಯೆಹೋವನ ಹೆಸ್ರಲ್ಲಿ ನಾನು ಪ್ರಾರ್ಥಿಸ್ತೀನಿ. ... ನಾನು ಯೆಹೋವನಿಗೆ ತೀರಿಸಬೇಕಾದ ಹರಕೆಗಳನ್ನ ತೀರಿಸ್ತೀನಿ” ಎಂದು ಕೀರ್ತನೆಗಾರನು ಹೇಳಿದನು. ಇದೇ ಮನೋಭಾವ ನಿಮ್ಮಲ್ಲೂ ಇರಬೇಕು.—ಕೀರ್ತನೆ 116:12-14.

ಸ್ವಲ್ಪ ಯೋಚಿಸಿ: ಯೆಹೋವನು ನಿಮಗೋಸ್ಕರ ಏನೆಲ್ಲ ಒಳ್ಳೇ ವಿಷಯಗಳನ್ನು ಮಾಡಿದ್ದಾನೆ? ನೀವು ಆತನ ಋಣವನ್ನು ಹೇಗೆ ತೀರಿಸುತ್ತೀರಾ? ಧರ್ಮೋಪದೇಶಕಾಂಡ 10:12, 13 ಮತ್ತು ರೋಮನ್ನರಿಗೆ 12:1 ನೋಡಿ.