ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ಮನೆ ಬಿಡೋದಕ್ಕಿಂತ ಮುಂಚೆ ಜವಾಬ್ದಾರಿಗಳನ್ನ ಹೊರಕ್ಕೆ ನೀವು ರೆಡಿನಾ?

ಮನೆ ಬಿಡೋದಕ್ಕಿಂತ ಮುಂಚೆ ಜವಾಬ್ದಾರಿಗಳನ್ನ ಹೊರಕ್ಕೆ ನೀವು ರೆಡಿನಾ?

ಮನೆ ಬಿಟ್ಟು ಹೋಗುವಾಗ ಯುವಜನರಿಗೆ ಒಂದು ಕಡೆ ಸಂತೋಷನೂ ಆಗುತ್ತೆ ಇನ್ನೊಂದು ಕಡೆ ಭಯನೂ ಆಗುತ್ತೆ. ನೀವು ಮನೆ ಬಿಟ್ಟು ಹೋಗಬೇಕು ಅಂತ ಇದ್ದೀರಾ? ಹಾಗೆ ಮಾಡೋಕೆ ಮುಂಚೆ ಈ ವಿಷ್ಯಗಳ ಬಗ್ಗೆ ಯೋಚನೆ ಮಾಡಿ.

 ಮನೆ ಬಿಟ್ಟು ಹೋಗೋಕೆ ಕಾರಣಗಳೇನು?

ಒಬ್ಬೊಬ್ರು ಒಂದೊಂದು ಕಾರಣಕ್ಕೆ ಮನೆ ಬಿಟ್ಟು ಹೋಗ್ತಾರೆ. ಆದ್ರೆ ಅದ್ರಲ್ಲಿ ಕೆಲವರು ಚಿಕ್ಕ ಪುಟ್ಟ ವಿಷ್ಯಗಳಿಗೆಲ್ಲ ಮನೆ ಬಿಟ್ಟು ಹೋಗ್ತಾರೆ. ಉದಾಹರಣೆಗೆ, “ಮನೆ ಕೆಲಸದಿಂದ ತಪ್ಪಿಸ್ಕೊಳ್ಳೋಕೆ ಮನೆಬಿಟ್ಟು ಹೋದೆ” ಅಂತ ಮಾರಿಯೋ ಅನ್ನೋ ಹುಡುಗ ಹೇಳ್ತಾನೆ.

ಆದ್ರೆ ನಿಜ ಏನಂದ್ರೆ ನೀವು ಮನೆ ಬಿಟ್ಟು ಹೋದ ತಕ್ಷಣ ನಿಮಗೆ ಹೆಚ್ಚು ಸ್ವತಂತ್ರ ಸಿಗಲ್ಲ. “ಮನೆ ಬಿಟ್ಟು ಹೋದಾಗ ನಮ್ಮ ಕೆಲಸ ನಾವೇ ಮಾಡ್ಕೊಬೇಕು. ಉದಾಹರಣೆಗೆ, ಅಡುಗೆ ಮಾಡ್ಕೊಳ್ಳೋದು, ಮನೆ ಕೆಲಸ, ಕರೆಂಟ್‌ ಮತ್ತು ವಾಟರ್‌ ಬಿಲ್‌ ಕಟ್ಟೋದು. ಇದಕ್ಕೆಲ್ಲ ಸಹಾಯ ಮಾಡೋಕೆ ಅಪ್ಪ-ಅಮ್ಮ ಬರೋದಿಲ್ಲ” ಅಂತ 18 ವರ್ಷದ ಓನ್ಯಾ ಹೇಳ್ತಾಳೆ.

ನಮಗಿರೋ ಪಾಠ: ನೀವು ಮನೆ ಬಿಡೋದಕ್ಕಿಂತ ಮುಂಚೆ ಯಾಕೆ ಮನೆ ಬಿಡ್ತಿದ್ದೀರಾ ಅಂತ ಕಾರಣ ತಿಳ್ಕೊಳ್ಳಿ. ಆಗ ಮನೆ ಬಿಟ್ಟು ಹೋಗೋಕೆ ನೀವು ರೆಡಿ ಇದ್ದೀರಾ ಇಲ್ವಾ ಅಂತ ಗೊತ್ತಾಗುತ್ತೆ.

 ಅದ್ರಿಂದ ಏನೆಲ್ಲ ಆಗುತ್ತೆ?

ಯೇಸು ಹೀಗೆ ಅಂದನು: “ನೀವು ಒಂದು ಕಟ್ಟಡ ಕಟ್ಟೋಕೆ ಬಯಸಿದ್ರೆ ಅದನ್ನ ಕಟ್ಟಿಮುಗಿಸೋಕೆ ಬೇಕಾದಷ್ಟು ಹಣ ಇದ್ಯಾ ಇಲ್ವಾ ಅಂತ ಮೊದಲು ಕೂತು ಲೆಕ್ಕ ಹಾಕಲ್ವಾ?” (ಲೂಕ 14:28) ಮನೆ ಬಿಟ್ಟು ಹೋದ ಮೇಲೆ ಎಷ್ಟೆಲ್ಲ ಖರ್ಚು ಬರುತ್ತೆ ಅಂತ ನೀವು ಲೆಕ್ಕ ಮಾಡಿದ್ದೀರಾ? ಈ ಕೆಳಗಿನ ಪ್ರಶ್ನೆಗಳನ್ನ ಕೇಳಿಕೊಳ್ಳಿ.

ಹಣವನ್ನ ಹಿತಮಿತವಾಗಿ ಖರ್ಚು ಮಾಡೋಕೆ ನಿಮಗೆ ಬರುತ್ತಾ?

ಬೈಬಲ್‌ ಹೀಗೆ ಹೇಳುತ್ತೆ: ‘ಹಣ ಸಂರಕ್ಷಣೆ ಕೊಡುತ್ತೆ.’ (ಪ್ರಸಂಗಿ 7:12)

  • ದುಡ್ಡನ್ನ ಉಳಿತಾಯ ಮಾಡೋಕೆ ಬರುತ್ತಾ?

  • ದುಡ್ಡನ್ನ ನೀವು ನೀರು ತರ ಖರ್ಚು ಮಾಡ್ತಿರಾ?

  • ಆಗಾಗ ಬೇರೆಯವರ ಹತ್ರ ಸಾಲ ಮಾಡ್ತಿರಾ?

ಈ ಮೇಲಿನ ಪ್ರಶ್ನೆಗಳಿಗೆ ನೀವು ಯಾವುದಾದ್ರೂ ಒಂದಕ್ಕೆ ‘ಹೌದು’ ಅಂತ ಉತ್ತರ ಕೊಟ್ರೆ ನೀವು ಮನೆ ಬಿಟ್ಟು ಹೋಗಬೇಕು ಅಂತ ಮಾಡಿರೋ ನಿರ್ಧಾರ ತಪ್ಪು.

“ನಮ್ಮ ಅಣ್ಣ 19 ವಯಸ್ಸಿನಲ್ಲೇ ಮನೆ ಬಿಟ್ಟು ಹೋದ. ಒಂದು ವರ್ಷದಲ್ಲಿ ಅವನ ಹತ್ರ ಇದ್ದ ಎಲ್ಲ ದುಡ್ಡು ಖರ್ಚಾಯ್ತು. ತಗೊಂಡಿದ್ದ ಸಾಲ ಕಟ್ಟಿಲ್ಲ ಅಂತ ಬ್ಯಾಂಕ್‌ನವರು ಕಾರ್‌ನ ತಗೊಂಡು ಹೋಗಿಬಿಟ್ರು. ಸಾಲನ ಸರಿಯಾಗಿ ತೀರಿಸದೆ ಇದ್ದಿದ್ರಿಂದ ಯಾವ ಬ್ಯಾಂಕ್‌ನವರೂ ಅವನಿಗೆ ಸಾಲ ಕೊಡೋಕೆ ರೆಡಿ ಇರಲಿಲ್ಲ. ಆಗ ಅವನು ಅಪ್ಪ-ಅಮ್ಮ ಹತ್ರ ‘ನಾನು ವಾಪಸ್‌ ಬರ್ತೀನಿ’ ಅಂತ ಬೇಡ್ಕೊಂಡ.”—ಡ್ಯಾನಿಯಲ್‌.

ಹೀಗೆ ಮಾಡಿ ನೋಡಿ: ಒಂದು ತಿಂಗಳಲ್ಲಿ ಮನೆಗೆ ಎಷ್ಟು ಖರ್ಚು ಆಗುತ್ತೆ ಅಂತ ನಿಮ್ಮ ಅಪ್ಪ-ಅಮ್ಮನ ಕೇಳಿ ತಿಳ್ಕೊಳ್ಳಿ. ಯಾವೆಲ್ಲ ಬಿಲ್‌ ಬರುತ್ತೆ, ಅದನ್ನ ಕಟ್ಟೋಕೆ ಏನ್‌ ಮಾಡ್ತಾರೆ ಅಂತ ಕೇಳಿ.

ನಮಗಿರೋ ಪಾಠ: ಮನೆಯಲ್ಲಿ ಇರುವಾಗಲೇ ನೀವು ದುಡ್ಡನ್ನ ಹಿತಮಿತವಾಗಿ ಖರ್ಚು ಮಾಡೋದನ್ನ ಕಲಿತ್ರೆ ಮನೆ ಬಿಟ್ಟು ಹೋದ ಮೇಲೆ ಕೂಡ ದುಡ್ಡನ್ನ ಹಿತಮಿತವಾಗಿ ಹೇಗೆ ಖರ್ಚು ಮಾಡೋದು ಅಂತ ಗೊತ್ತಾಗುತ್ತೆ.

ನಿಮಗೆ ಜವಾಬ್ದಾರಿಗಳನ್ನ ತಗೊಳ್ಳೋಕೆ ಬರುತ್ತಾ?

ಬೈಬಲ್‌ ಹೀಗೆ ಹೇಳುತ್ತೆ: “ಪ್ರತಿಯೊಬ್ಬನು ತನ್ನ ಹೊರೆಯನ್ನ ತಾನೇ ಹೊತ್ಕೊಬೇಕು.” (ಗಲಾತ್ಯ 6:5)

  • ನಿಮಗೆ ಕೆಲಸನ ಮುಂದೂಡೋ ಅಭ್ಯಾಸ ಇದಿಯಾ?

  • ನೀವು ಮಾಡಬೇಕಾಗಿದ್ದ ಕೆಲಸ ಪದೇ-ಪದೇ ನಿಮ್ಮ ಅಪ್ಪ-ಅಮ್ಮ ನೆನಪಿಸಬೇಕಾ?

  • ಮನೆಗೆ ಯಾವಾಗ್ಲೂ ಲೇಟಾಗಿ ಬರೋ ಅಭ್ಯಾಸ ಇದಿಯಾ?

ಈ ಮೇಲಿನ ಪ್ರಶ್ನೆಗಳಿಗೆ ನೀವು ಯಾವುದಾದ್ರೂ ಒಂದಕ್ಕೆ ‘ಹೌದು’ ಅಂತ ಉತ್ತರ ಕೊಟ್ರೆ ನೀವು ಮುಂದೆ ಮನೆ ಬಿಟ್ಟು ಹೋದಾಗ ಜವಾಬ್ದಾರಿಗಳನ್ನ ಹೊರಕ್ಕೆ ಕಷ್ಟಪಡ್ತೀರ ಅಂತರ್ಥ.

“ನೀವು ಮನೆ ಬಿಟ್ಟು ಹೋದ ಮೇಲೆ ನಿಮಗೆ ಇಷ್ಟವಾಗದೆ ಇರೋ ಕೆಲಸಗಳನ್ನ ಮಾಡಬೇಕಾಗುತ್ತೆ. ಅದನ್ನ ಮಾಡಿ ಅಂತ ಯಾರು ನಿಮ್ಮ ಹಿಂದೆ ಬೀಳಲ್ಲ. ಹಾಗಾಗಿ ನಿಮ್ಮ ಕೆಲಸನ ನೀವೇ ಮಾಡ್ಕೊಳ್ಳೋದನ್ನ ಕಲಿಬೇಕು.”—ಜೆಸಿಕ.

ಹೀಗೆ ಮಾಡಿ ನೋಡಿ: ಒಂದು ತಿಂಗಳು ಮನೆಯಲ್ಲಿರೋ ಕೆಲಸಗಳನ್ನ ಮಾಡೋಕೆ ಪ್ರಯತ್ನ ಮಾಡಿ. ಉದಾಹರಣೆಗೆ, ಮನೆನ ಕ್ಲೀನ್‌ ಮಾಡಿ, ನಿಮ್ಮ ಬಟ್ಟೆನ ನೀವೇ ಒಗಿರಿ, ಅಂಗಡಿ ಹೋಗಿ ಸಾಮಾನು ತಗೊಂಡು ಬನ್ನಿ, ಅಡುಗೆ ಮಾಡಿ, ಪಾತ್ರೆಗಳನ್ನ ತೊಳಿರಿ. ಈ ಕೆಲಸಗಳನ್ನೆಲ್ಲ ಮಾಡಿದ್ರೆ ಮನೆ ಬಿಟ್ಟು ಹೋದ ಮೇಲೆ ಏನೆಲ್ಲ ಕೆಲಸ ಮಾಡಬೇಕಾಗುತ್ತೆ ಅಂತ ನಿಮಗೆ ಗೊತ್ತಾಗುತ್ತೆ.

ನಮಗಿರೋ ಪಾಠ: ಮನೆ ಬಿಟ್ಟು ಸ್ವತಂತ್ರವಾಗಿ ಬದುಕಬೇಕು ಅನ್ನೋ ಆಸೆ ನಿಮ್ಮಲ್ಲಿದ್ರೆ ಜವಾಬ್ದಾರಿ ತಗೊಳ್ಳೋಕೆ ನೀವು ರೆಡಿ ಇರಬೇಕು.

ಜವಾಬ್ದಾರಿ ಇಲ್ಲದೆ ಮನೆ ಬಿಟ್ಟು ಹೋಗೋದನ್ನ ಪ್ಯಾರಾಷೂಟ್‌ ಹೇಗೆ ಬಳಸಬೇಕಂತ ಗೊತ್ತಿಲ್ಲದೆ ವಿಮಾನದಿಂದ ಜಿಗಿಯೋ ವ್ಯಕ್ತಿಗೆ ಹೋಲಿಸಬಹುದು

ನಿಮ್ಮ ಭಾವನೆಗಳನ್ನ ಕಂಟ್ರೋಲ್‌ ಮಾಡೋಕೆ ಬರುತ್ತಾ?

ಬೈಬಲ್‌ ಹೀಗೆ ಹೇಳುತ್ತೆ: “ಆದ್ರೆ ಈಗ ಕ್ರೋಧ, ಕೋಪ, ಕೆಟ್ಟತನ, ಬೈಗುಳಗಳನ್ನ ಪೂರ್ತಿ ಬಿಟ್ಟುಬಿಡಿ.” (ಕೊಲೊಸ್ಸೆ 3:8)

  • ಬೇರೆಯವರ ಜೊತೆ ಹೊಂದ್ಕೊಂಡು ಹೋಗೋಕೆ ನಿಮಗೆ ಕಷ್ಟ ಆಗುತ್ತಾ?

  • ನಿಮಗೆ ಮೂಗಿನ ತುದಿಯಲ್ಲೇ ಕೋಪ ಬರುತ್ತಾ?

  • ನೀವು ಹೇಳಿದ್ದೇ ಆಗಬೇಕು ಅಂತ ಹಠ ಮಾಡ್ತೀರಾ?

ಈ ಮೇಲಿನ ಪ್ರಶ್ನೆಗಳಿಗೆ ನೀವು ಯಾವುದಾದ್ರೂ ಒಂದಕ್ಕೆ ‘ಹೌದು’ ಅಂತ ಉತ್ತರ ಕೊಟ್ರೆ ನೀವು ಮನೆ ಬಿಟ್ಟು ಹೋದಾಗ ನಿಮ್ಮ ರೂಮ್‌ಮೇಟ್‌ ಜೊತೆಯಾಗಲಿ ಅಥವಾ ನಿಮ್ಮ ಬಾಳ ಸಂಗಾತಿ ಜೊತೆಯಾಗಲಿ ಹೊಂದ್ಕೊಂಡು ಹೋಗೋಕೆ ಆಗಲ್ಲ.

“ರೂಮ್‌ಮೇಟ್‌ ಜೊತೆ ಇದ್ದಾಗಲೇ ನನಗೆ ಏನೆಲ್ಲ ವೀಕ್ನೆಸ್ಸ್‌ ಇದೆ ಅಂತ ಗೊತ್ತಾಯ್ತು. ನನಗೆ ಕೋಪ ಬಂದಾಗ, ಸ್ಟ್ರೆಸ್‌ ಆದಾಗ ಅದನ್ನೆಲ್ಲ ನನ್ನ ರೂಮ್‌ಮೇಟ್ಸ್‌ ಸಹಿಸ್ಕೊಬೇಕು ಅಂತ ಅಂದ್ಕೊಂಡಿದ್ದೆ. ಆದರೆ ಅದೆಲ್ಲ ತಪ್ಪು ಅಂತ ಅರ್ಥ ಆಯ್ತು. ಆಮೇಲೆ ನಾನು ನಡ್ಕೊಳ್ಳೋ ವಿಧನಾ ಬದ್ಲಾಯಿಸ್ಕೊಂಡೆ.”—ಹೆಲೆನಾ.

ಹೀಗೆ ಮಾಡಿ ನೋಡಿ: ಮೊದಲು ನಿಮ್ಮ ಮನೆಯವರ ಜೊತೆ ಅಂದ್ರೆ ಅಪ್ಪ-ಅಮ್ಮ, ಅಣ್ಣ-ತಂಗಿ ಜೊತೆ ಚೆನ್ನಾಗಿ ಇರೋದನ್ನ ಕಲಿರಿ. ಈಗ ನೀವು ಮನೆಯವರ ಜೊತೆ ಹೊಂದ್ಕೊಂಡು ಹೋಗೋದನ್ನ ಕಲಿತಿಲ್ಲ ಅಂದ್ರೆ ಮುಂದೆ ಬೇರೆಯವರ ಜೊತೆ ಹೊಂದ್ಕೊಂಡು ಹೋಗೋಕೆ ಆಗಲ್ಲ.

ನಮಗಿರೋ ಪಾಠ: ಜವಾಬ್ದಾರಿಗಳಿಂದ ತಪ್ಪಿಸ್ಕೊಬೇಕು ಅಂತ ಮನೆಬಿಟ್ಟು ಹೋಗೋದು ಸರಿಯಲ್ಲ. ನೀವು ಮನೆ ಬಿಟ್ಟು ಹೋಗಬೇಕಂದ್ರೆ ಮೊದಲು ಜವಾಬ್ದಾರಿಗಳನ್ನ ಹೇಗೆ ನಿಭಾಯಿಸೋದು ಅನ್ನೋದನ್ನ ಕಲಿತಿರಬೇಕು. ಈ ನಿರ್ಧಾರ ತಗೊಳ್ಳೋಕೂ ಮುಂಚೆ ಈಗಾಗ್ಲೇ ಮನೆ ಬಿಟ್ಟು ಹೋದವರ ಹತ್ರ ಮಾತಾಡಿ. ಅವ್ರಿಗೆ ಏನ್‌ ಕಷ್ಟ ಆಯ್ತು ಅಂತ ಕೇಳಿ ತಿಳ್ಕೊಳ್ಳಿ. ಅವರು ಮಾಡಿದ ನಿರ್ಧಾರ ಈಗಲೂ ಸರಿ ಅನಿಸ್ತಿದ್ದೀಯಾ ಅಥವಾ ತಪ್ಪು ಮಾಡಿದ್ದೀವಿ ಅಂತ ಅನಿಸ್ತಿದ್ದೀಯಾ ಅಂತ ಕೇಳಿ. ಮನೆ ಬಿಟ್ಟು ಹೋಗೋದು ಒಂದು ದೊಡ್ಡ ನಿರ್ಧಾರ. ಅದನ್ನ ಮಾಡೋಕೂ ಮುಂಚೆ ಈಗಾಗಲೇ ಅದೇ ನಿರ್ಧಾರ ಮಾಡಿದವರ ಹತ್ರ ಮಾತಾಡೋದು ಒಳ್ಳೇದು.