ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 4

ಅಧಿಕಾರಕ್ಕೆ ಏಕೆ ಗೌರವ ತೋರಿಸಬೇಕು?

ಅಧಿಕಾರಕ್ಕೆ ಏಕೆ ಗೌರವ ತೋರಿಸಬೇಕು?

“ಎಲ್ಲ ರೀತಿಯ ಜನರನ್ನು ಗೌರವಿಸಿರಿ.” —1 ಪೇತ್ರ 2:17.

1, 2. (ಎ) ಅಧಿಕಾರದ ವಿಷಯಕ್ಕೆ ಬರುವಾಗ ನಾವು ಯಾವ ಹೋರಾಟವನ್ನು ಎದುರಿಸುತ್ತೇವೆ? (ಬಿ) ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?

ಒಬ್ಬ ಚಿಕ್ಕ ಹುಡುಗನಿಗೆ ಮಾಡಲು ನಿಜವಾಗಿಯೂ ಇಷ್ಟವಿಲ್ಲದಿರುವಂಥ ಯಾವುದೋ ಕೆಲಸವನ್ನು ಮಾಡುವಂತೆ ಹೇಳುವಾಗ ಅವನು ಹೇಗೆ ಪ್ರತಿಕ್ರಿಯೆ ತೋರಿಸುತ್ತಾನೆ ಎಂಬುದನ್ನು ನೀವು ಎಂದಾದರೂ ಗಮನಿಸಿದ್ದೀರೊ? ಅವನ ಹೃದಯದಲ್ಲಿ ಸಂಘರ್ಷ ನಡೆಯುತ್ತಾ ಇದೆ ಎಂಬುದನ್ನು ಆ ಚಿಕ್ಕ ಹುಡುಗನ ಮುಖಭಾವದಿಂದ ನೀವು ಸ್ಪಷ್ಟವಾಗಿ ಅರಿತುಕೊಳ್ಳಬಹುದು. ಅವನಿಗೆ ತನ್ನ ಹೆತ್ತವರ ಧ್ವನಿ ಕೇಳುತ್ತದೆ ಮತ್ತು ತಾನು ಅವರ ಅಧಿಕಾರಕ್ಕೆ ಗೌರವ ತೋರಿಸಬೇಕಾಗಿದೆ ಎಂಬುದು ಅವನಿಗೆ ತಿಳಿದಿದೆ. ಆದರೆ ಈ ಸಂದರ್ಭದಲ್ಲಿ ಅವರಿಗೆ ವಿಧೇಯನಾಗಲು ಅವನಿಗೆ ಇಷ್ಟವೇ ಇಲ್ಲ. ಅವನ ಹೃದಯದಲ್ಲಾಗುತ್ತಿರುವ ಹೋರಾಟವು ನಾವೆಲ್ಲರೂ ಎದುರಿಸುವಂಥ ಒಂದು ಸತ್ಯಾಂಶವನ್ನು ದೃಷ್ಟಾಂತಿಸುತ್ತದೆ.

2 ಅಧಿಕಾರಕ್ಕೆ ಗೌರವ ತೋರಿಸುವುದು ನಮಗೆ ಯಾವಾಗಲೂ ಸುಲಭವಾಗಿರಲಿಕ್ಕಿಲ್ಲ. ನಿಮ್ಮ ಮೇಲೆ ಸ್ವಲ್ಪಮಟ್ಟಿಗೆ ಅಧಿಕಾರಹೊಂದಿರುವವರಿಗೆ ಗೌರವ ತೋರಿಸುವುದು ನಿಮಗೆ ಕೆಲವೊಮ್ಮೆ ಕಷ್ಟಕರವೆನಿಸುತ್ತದೊ? ಹಾಗಿರುವಲ್ಲಿ, ಈ ಹೋರಾಟವನ್ನು ಎದುರಿಸುತ್ತಿರುವವರು ನೀವೊಬ್ಬರೇ ಅಲ್ಲ. ಅಧಿಕಾರಕ್ಕೆ ಗೌರವ ತೋರಿಸುವುದು ತೀರ ಹೀನ ಮಟ್ಟಕ್ಕಿಳಿದಿರುವಂಥ ಒಂದು ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. ಆದರೂ ನಮ್ಮ ಮೇಲೆ ಅಧಿಕಾರ ಸ್ಥಾನಗಳನ್ನು ಹೊಂದಿರುವವರಿಗೆ ನಾವು ಗೌರವವನ್ನು ತೋರಿಸುವ ಅಗತ್ಯವಿದೆ ಎಂದು ಬೈಬಲ್‌ ತಿಳಿಸುತ್ತದೆ. (ಜ್ಞಾನೋಕ್ತಿ 24:21) ವಾಸ್ತವದಲ್ಲಿ, ನಾವು ದೇವರ ಪ್ರೀತಿಯಲ್ಲಿ ಉಳಿಯಲು ಬಯಸುವುದಾದರೆ ಅಧಿಕಾರಕ್ಕೆ ಗೌರವವನ್ನು ತೋರಿಸುವುದು ಅತ್ಯಾವಶ್ಯಕವಾಗಿದೆ. ಹೀಗಿರುವಾಗ ಕೆಲವು ಪ್ರಶ್ನೆಗಳೇಳುವುದು ಸಹಜ. ಅಧಿಕಾರಕ್ಕೆ ಗೌರವ ತೋರಿಸುವುದು ನಮಗೆ ಅಷ್ಟೊಂದು ಕಷ್ಟಕರವಾಗಿರಸಾಧ್ಯವಿದೆ ಏಕೆ? ಯೆಹೋವನು ನಮ್ಮಿಂದ ಇದನ್ನು ಏಕೆ ಅಪೇಕ್ಷಿಸುತ್ತಾನೆ ಮತ್ತು ಇದಕ್ಕೆ ವಿಧೇಯರಾಗಲು ನಮಗೆ ಯಾವುದು ಸಹಾಯಮಾಡಬಲ್ಲದು? ಕೊನೆಯದಾಗಿ, ಯಾವ ವಿಧಗಳಲ್ಲಿ ನಾವು ಅಧಿಕಾರಕ್ಕೆ ಗೌರವವನ್ನು ತೋರಿಸಸಾಧ್ಯವಿದೆ?

ಇದು ಏಕೆ ಪಂಥಾಹ್ವಾನವಾಗಿದೆ?

3, 4. ಪಾಪ ಮತ್ತು ಅಪರಿಪೂರ್ಣತೆಗಳು ಹೇಗೆ ಆರಂಭಗೊಂಡವು ಮತ್ತು ನಮ್ಮ ಪಾಪಪೂರ್ಣ ಸ್ವಭಾವವು ಅಧಿಕಾರಕ್ಕೆ ಗೌರವ ತೋರಿಸುವುದನ್ನು ಏಕೆ ಒಂದು ಪಂಥಾಹ್ವಾನವಾಗಿ ಮಾಡುತ್ತದೆ?

3 ಅಧಿಕಾರದಲ್ಲಿರುವವರಿಗೆ ಗೌರವವನ್ನು ತೋರಿಸುವುದು ನಮಗೆ ಏಕೆ ಕಷ್ಟಕರವಾದ ಪಂಥಾಹ್ವಾನವಾಗಿರಸಾಧ್ಯವಿದೆ ಎಂಬುದಕ್ಕಿರುವ ಎರಡು ಕಾರಣಗಳನ್ನು ಸಂಕ್ಷಿಪ್ತವಾಗಿ ಪರಿಶೀಲಿಸೋಣ. ಮೊದಲನೆಯದಾಗಿ, ಅಪರಿಪೂರ್ಣತೆಯು ನಮ್ಮನ್ನು ಬಾಧಿಸುತ್ತದೆ; ಎರಡನೆಯದಾಗಿ, ನಮ್ಮ ಮೇಲೆ ಅಧಿಕಾರ ಹೊಂದಿರುವ ಮಾನವರನ್ನೂ ಅದು ಬಾಧಿಸುತ್ತದೆ. ಮಾನವ ಪಾಪ ಮತ್ತು ಅಪರಿಪೂರ್ಣತೆಗಳು ದೀರ್ಘ ಸಮಯದ ಹಿಂದೆಯೇ ಏದೆನ್‌ ತೋಟದಲ್ಲಿ ಆದಾಮಹವ್ವರು ದೇವರ ಅಧಿಕಾರದ ವಿರುದ್ಧ ದಂಗೆಯೆದ್ದಾಗಲೇ ಆರಂಭಗೊಂಡವು. ಹೀಗೆ ದಂಗೆಯೊಂದಿಗೆ ಪಾಪವು ಆರಂಭವಾಯಿತು. ಅಂದಿನಿಂದ ದಂಗೆಯೇಳುವ ಆಂತರಿಕ ಪ್ರವೃತ್ತಿ ನಮ್ಮಲ್ಲಿದೆ.—ಆದಿಕಾಂಡ 2:15-17; 3:1-7; ಕೀರ್ತನೆ 51:5; ರೋಮನ್ನರಿಗೆ 5:12.

4 ನಮ್ಮ ಪಾಪಪೂರ್ಣ ಸ್ವಭಾವದ ಕಾರಣ ನಮ್ಮಲ್ಲಿ ಹೆಚ್ಚಿನವರು ಸುಲಭವಾಗಿಯೇ ಅಹಂಕಾರಿಗಳಾಗಬಹುದು ಅಥವಾ ಜಂಬದವರಾಗಬಹುದು; ಆದರೆ ದೀನಭಾವವು ಅಪರೂಪವಾದ ಗುಣವಾಗಿದ್ದು ಅದನ್ನು ಬೆಳೆಸಿಕೊಳ್ಳಲು ಮತ್ತು ಕಾಪಾಡಿಕೊಳ್ಳಲು ನಾವು ಶ್ರಮಿಸಬೇಕಾಗಿದೆ. ಅನೇಕ ವರ್ಷಗಳ ವರೆಗೆ ದೇವರಿಗೆ ನಂಬಿಗಸ್ತರಾಗಿ ಸೇವೆಮಾಡಿದ ಬಳಿಕವೂ ನಾವು ಹಠಮಾರಿತನ ಅಥವಾ ಅಹಂಕಾರಕ್ಕೆ ಬಲಿಯಾಗಬಹುದು. ಉದಾಹರಣೆಗೆ, ಮೋಶೆಯ ದಿನಗಳಲ್ಲಿ ಜೀವಿಸಿದ್ದ ಕೋರಹನನ್ನು ಪರಿಗಣಿಸಿರಿ. ಅವನು ಅನೇಕ ಕಷ್ಟತೊಂದರೆಗಳ ಮಧ್ಯೆಯೂ ಯೆಹೋವನ ಜನರಿಗೆ ನಂಬಿಗಸ್ತಿಕೆಯಿಂದ ಅಂಟಿಕೊಂಡಿದ್ದನು. ಆದರೂ ಅವನು ಹೆಚ್ಚಿನ ಅಧಿಕಾರಕ್ಕಾಗಿ ಹಾತೊರೆದು, ಆ ಸಮಯದಲ್ಲಿ ಜೀವಿಸುತ್ತಿದ್ದವರಲ್ಲಿ ಅತ್ಯಂತ ದೀನ ಮನುಷ್ಯನಾಗಿದ್ದ ಮೋಶೆಯ ವಿರುದ್ಧ ಭಂಡತನದಿಂದ ದಂಗೆಯೆದ್ದನು. (ಅರಣ್ಯಕಾಂಡ 12:3; 16:1-3) ಅರಸನಾದ ಉಜ್ಜೀಯನ ಕುರಿತು ಸಹ ಆಲೋಚಿಸಿರಿ. ಅವನ ಅಹಂಕಾರವು ಅವನನ್ನು ಯೆಹೋವನ ಆಲಯದೊಳಗೆ ಪ್ರವೇಶಿಸಿ ಯಾಜಕರಿಗೆ ಮಾತ್ರ ಮೀಸಲಾಗಿರಿಸಲ್ಪಟ್ಟಿದ್ದ ಪವಿತ್ರ ಸೇವೆಯನ್ನು ತಾನೇ ಸಲ್ಲಿಸುವಂತೆ ಮಾಡಿತು. (2 ಪೂರ್ವಕಾಲವೃತ್ತಾಂತ 26:16-21) ಇಂಥ ಪುರುಷರು ತಮ್ಮ ದಂಗೆಯ ಕಾರಣ ಭಾರೀ ಬೆಲೆಯನ್ನು ತೆರಬೇಕಾಯಿತು. ಆದರೂ ಅವರ ನಕಾರಾತ್ಮಕ ಉದಾಹರಣೆಗಳು ನಮಗೆಲ್ಲರಿಗೂ ಉಪಯುಕ್ತವಾದ ಮರುಜ್ಞಾಪನಗಳಾಗಿವೆ. ಅಧಿಕಾರಕ್ಕೆ ಗೌರವ ತೋರಿಸುವುದನ್ನು ಕಷ್ಟಕರವಾಗಿ ಮಾಡುವಂಥ ಅಹಂಕಾರವನ್ನು ನಾವು ಹೊಡೆದೋಡಿಸುವ ಅಗತ್ಯವಿದೆ.

5. ಅಪರಿಪೂರ್ಣ ಮಾನವರು ಹೇಗೆ ತಮ್ಮ ಅಧಿಕಾರವನ್ನು ದುರುಪಯೋಗಿಸಿದ್ದಾರೆ?

5 ಇನ್ನೊಂದು ಕಡೆಯಲ್ಲಿ, ಅಧಿಕಾರ ಸ್ಥಾನಗಳಲ್ಲಿರುವ ಅಪರಿಪೂರ್ಣ ಮಾನವರು ಅಧಿಕಾರದ ಕಡೆಗಿನ ಜನರ ಗೌರವವನ್ನು ಶಿಥಿಲಗೊಳಿಸಲು ಬಹಳಷ್ಟನ್ನು ಮಾಡಿದ್ದಾರೆ. ಅನೇಕರು ಕ್ರೂರರೂ ದುರಾಚಾರಿಗಳೂ ದಬ್ಬಾಳಿಕೆಮಾಡುವವರೂ ಆಗಿದ್ದಾರೆ. ವಾಸ್ತವದಲ್ಲಿ ಮಾನವ ಇತಿಹಾಸವು ಹೆಚ್ಚಾಗಿ ಅಧಿಕಾರದ ದುರುಪಯೋಗದ ದಾಖಲೆಯಿಂದ ತುಂಬಿದೆ. (ಪ್ರಸಂಗಿ 8:9 ಓದಿ.) ಉದಾಹರಣೆಗೆ, ಯೆಹೋವನು ಸೌಲನನ್ನು ಅರಸನಾಗಲು ಆಯ್ಕೆಮಾಡಿದಾಗ ಅವನು ಒಳ್ಳೆಯವನೂ ದೀನನೂ ಆಗಿದ್ದನು. ಆದರೆ ಸಮಯಾನಂತರ ಅವನು ಅಹಂಕಾರ ಮತ್ತು ಅಸೂಯೆಗೆ ತುತ್ತಾದನು; ಬಳಿಕ ಅವನು ನಂಬಿಗಸ್ತನಾದ ದಾವೀದನನ್ನು ಹಿಂಸಿಸಿದನು. (1 ಸಮುವೇಲ 9:20, 21; 10:20-22; 18:7-11) ಕಾಲಾನಂತರ ದಾವೀದನು ಇಸ್ರಾಯೇಲ್ಯರನ್ನು ಆಳಿದವರಲ್ಲೇ ಅತ್ಯುತ್ತಮನಾದ ಅರಸನಾದನು, ಆದರೆ ಅವನು ಹಿತ್ತಿಯನಾದ ಊರೀಯನ ಹೆಂಡತಿಯನ್ನು ಕದ್ದು, ಕದನರಂಗದಲ್ಲಿ ಹತಿಸಲ್ಪಡಲಿಕ್ಕಾಗಿ ಆ ಮುಗ್ಧ ಪುರುಷನನ್ನು ರಣಭೂಮಿಯ ಮುಂಭಾಗಕ್ಕೆ ಕಳುಹಿಸಿದಾಗ ಅವನು ತನ್ನ ಅಧಿಕಾರವನ್ನು ದುರುಪಯೋಗಿಸಿದನು. (2 ಸಮುವೇಲ 11:1-17) ಹೌದು, ಅಪರಿಪೂರ್ಣತೆಯು ಜನರು ಅಧಿಕಾರವನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸುವುದನ್ನು ಕಷ್ಟಕರವಾಗಿ ಮಾಡುತ್ತದೆ. ಮತ್ತು ಅಧಿಕಾರದಲ್ಲಿರುವವರು ಯೆಹೋವನಿಗೆ ಗೌರವ ತೋರಿಸದಿರುವಾಗ ಅವರು ಇನ್ನೂ ಹೆಚ್ಚಾದ ರೀತಿಯಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗಿಸುವವರಾಗುತ್ತಾರೆ. ಕ್ಯಾಥೊಲಿಕ್‌ ಪೋಪ್‌ಗಳಲ್ಲಿ ಕೆಲವರು ವ್ಯಾಪಕವಾದ ಹಿಂಸೆಯನ್ನು ಆರಂಭಿಸಿದ ರೀತಿಯನ್ನು ವರ್ಣಿಸಿದ ಬಳಿಕ ಒಬ್ಬ ಬ್ರಿಟಿಷ್‌ ರಾಜ್ಯನೀತಿಜ್ಞನು ಬರೆದುದು: “ಅಧಿಕಾರವು ಭ್ರಷ್ಟಗೊಳಿಸುತ್ತದೆ ಮತ್ತು ಸಂಪೂರ್ಣ ಅಧಿಕಾರವು ಸಂಪೂರ್ಣವಾಗಿ ಭ್ರಷ್ಟಗೊಳಿಸುತ್ತದೆ.” ಇಂಥ ದಾಖಲೆಯನ್ನು ಮನಸ್ಸಿನಲ್ಲಿಟ್ಟವರಾಗಿ, ನಾವು ಅಧಿಕಾರಕ್ಕೆ ಏಕೆ ಗೌರವ ತೋರಿಸಬೇಕು? ಎಂಬ ಪ್ರಶ್ನೆಯನ್ನು ಪರಿಗಣಿಸೋಣ.

ಅಧಿಕಾರಕ್ಕೆ ಏಕೆ ಗೌರವ ತೋರಿಸಬೇಕು?

6, 7. (ಎ) ಯೆಹೋವನ ಮೇಲಣ ನಮ್ಮ ಪ್ರೀತಿಯು ನಾವು ಏನು ಮಾಡುವಂತೆ ಪ್ರಚೋದಿಸುತ್ತದೆ ಮತ್ತು ಏಕೆ? (ಬಿ) ಅಧೀನತೆಯಲ್ಲಿ ಯಾವ ಮನೋಭಾವವು ಒಳಗೂಡಿದೆ ಮತ್ತು ನಾವು ಅದನ್ನು ಹೇಗೆ ತೋರಿಸಬಹುದು?

6 ಅಧಿಕಾರಕ್ಕೆ ಗೌರವ ತೋರಿಸಲಿಕ್ಕಾಗಿರುವ ಅತ್ಯುತ್ತಮ ಕಾರಣಗಳ ಮೂಲವು ಪ್ರೀತಿ, ಅಂದರೆ ಯೆಹೋವನ ಮೇಲೆ, ಜೊತೆಮಾನವನ ಮೇಲೆ ಮತ್ತು ಸ್ವತಃ ನಮ್ಮ ಮೇಲೆ ನಮಗಿರುವ ಪ್ರೀತಿಯೇ ಆಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ನಾವು ಯೆಹೋವನನ್ನು ಪ್ರೀತಿಸುವುದರಿಂದ ಆತನ ಹೃದಯವನ್ನು ಸಂತೋಷಪಡಿಸಲು ಬಯಸುತ್ತೇವೆ. (ಜ್ಞಾನೋಕ್ತಿ 27:11; ಮಾರ್ಕ 12:29, 30 ಓದಿ.) ಏದೆನಿನಲ್ಲಾದ ದಂಗೆಯಂದಿನಿಂದ ಆತನ ಪರಮಾಧಿಕಾರ ಅಂದರೆ ವಿಶ್ವವನ್ನು ಆಳಲು ಆತನಿಗಿರುವ ಹಕ್ಕು ಭೂಮಿಯಲ್ಲಿ ಸವಾಲಿಗೊಳಗಾಗಿದೆ ಮತ್ತು ಮಾನವಕುಲದ ಅಧಿಕಾಂಶ ಜನರು ಸೈತಾನನ ಪಕ್ಷವನ್ನು ವಹಿಸಿ ಯೆಹೋವನ ಆಳ್ವಿಕೆಯನ್ನು ತಿರಸ್ಕರಿಸಿದ್ದಾರೆ ಎಂಬುದು ನಮಗೆ ತಿಳಿದಿದೆ. ಯೆಹೋವನ ಪರಮಾಧಿಕಾರವನ್ನು ಬೆಂಬಲಿಸುವ ಪಕ್ಷದಲ್ಲಿ ನಿಂತುಕೊಳ್ಳುವುದು ನಮಗೆ ಸಂತೋಷವನ್ನು ತಂದಿದೆ. ಪ್ರಕಟನೆ 4:11⁠ರ ಗಂಭೀರವಾದ ಮಾತುಗಳನ್ನು ನಾವು ಓದುವಾಗ, ಅವು ನಮ್ಮ ಹೃದಯದಲ್ಲಿ ಉತ್ಸಾಹದ ಅಲೆಯನ್ನು ಎಬ್ಬಿಸುತ್ತವೆ. ಯೆಹೋವನು ವಿಶ್ವವನ್ನು ಆಳಲು ಯೋಗ್ಯನಾದ ಪ್ರಭುವಾಗಿದ್ದಾನೆ ಎಂಬುದು ನಮಗೆಷ್ಟು ಸುಸ್ಪಷ್ಟವಾಗಿದೆ! ಯೆಹೋವನ ಆಳ್ವಿಕೆಯನ್ನು ನಮ್ಮ ದೈನಂದಿನ ಜೀವನದಲ್ಲಿ ಅಂಗೀಕರಿಸುವ ಮೂಲಕ ನಾವು ಆತನ ಪರಮಾಧಿಕಾರವನ್ನು ಬೆಂಬಲಿಸುತ್ತೇವೆ.

7 ಇಂಥ ಗೌರವದಲ್ಲಿ ವಿಧೇಯತೆ ಮತ್ತು ಅದಕ್ಕಿಂತ ಹೆಚ್ಚಿನದ್ದು ಸೇರಿದೆ. ನಾವು ಯೆಹೋವನನ್ನು ಪ್ರೀತಿಸುವುದರಿಂದ ಇಷ್ಟಪೂರ್ವಕವಾಗಿ ಆತನಿಗೆ ವಿಧೇಯರಾಗುತ್ತೇವೆ. ಆದರೆ ನಾವು ವಿಧೇಯತೆ ತೋರಿಸುವುದು ತುಂಬ ಕಷ್ಟಕರವಾಗಿರುವಂಥ ಸಮಯಗಳು ಇರುವವು. ಅಂಥ ಸಮಯಗಳಲ್ಲಿ ನಾವು ಆರಂಭದಲ್ಲಿ ವರ್ಣಿಸಲ್ಪಟ್ಟ ಆ ಚಿಕ್ಕ ಹುಡುಗನಂತೆ ಅಧೀನತೆಯನ್ನು ಕಲಿಯುವ ಆವಶ್ಯಕತೆಯಿರುವುದು. ತನ್ನ ತಂದೆಯ ಚಿತ್ತಕ್ಕೆ ಅಧೀನನಾಗುವುದು ತುಂಬ ಪಂಥಾಹ್ವಾನದಾಯಕವಾಗಿ ತೋರಿಬರಸಾಧ್ಯವಿದ್ದಾಗಲೂ ಯೇಸು ಆತನ ಚಿತ್ತಕ್ಕೆ ಅಧೀನನಾದನು ಎಂಬುದನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ. ಅವನು ತನ್ನ ತಂದೆಗೆ, “ನನ್ನ ಚಿತ್ತವಲ್ಲ ನಿನ್ನ ಚಿತ್ತವು ನೆರವೇರಲಿ” ಎಂದು ಹೇಳಿದನು.—ಲೂಕ 22:42.

8. (ಎ) ಇಂದು ಅನೇಕವೇಳೆ ಯೆಹೋವನ ಅಧಿಕಾರಕ್ಕೆ ಅಧೀನರಾಗುವುದರಲ್ಲಿ ಏನು ಒಳಗೂಡಿದೆ ಮತ್ತು ಈ ವಿಷಯದಲ್ಲಿ ಯೆಹೋವನ ಅನಿಸಿಕೆಗಳೇನು ಎಂಬುದನ್ನು ಯಾವುದು ಪ್ರಕಟಪಡಿಸುತ್ತದೆ? (ಬಿ) ಸಲಹೆಗೆ ಕಿವಿಗೊಡುವಂತೆ ಮತ್ತು ಶಿಸ್ತನ್ನು ಅಂಗೀಕರಿಸುವಂತೆ ಯಾವುದು ನಮಗೆ ಸಹಾಯಮಾಡಬಲ್ಲದು? (“ ಸಲಹೆಗೆ ಕಿವಿಗೊಡು ಮತ್ತು ಶಿಸ್ತನ್ನು ಅಂಗೀಕರಿಸು” ಎಂಬ ಚೌಕವನ್ನು ನೋಡಿ.)

8 ಇಂದು ಯೆಹೋವನು ನಮ್ಮೊಂದಿಗೆ ವೈಯಕ್ತಿಕವಾಗಿ ಮಾತಾಡುವುದಿಲ್ಲ ನಿಜ, ಆದರೆ ಆತನು ತನ್ನ ವಾಕ್ಯ ಮತ್ತು ಭೂಮಿಯಲ್ಲಿರುವ ಮಾನವ ಪ್ರತಿನಿಧಿಗಳನ್ನು ಉಪಯೋಗಿಸುತ್ತಾನೆ. ಹೀಗಿರುವುದರಿಂದ, ನಮ್ಮ ಮೇಲೆ ಅಧಿಕಾರ ಸ್ಥಾನಗಳಲ್ಲಿ ಯೆಹೋವನು ಇಟ್ಟಿರುವ ಅಥವಾ ಇರುವಂತೆ ಬಿಟ್ಟಿರುವ ಮಾನವರನ್ನು ಗೌರವಿಸುವ ಮೂಲಕ ಅಧಿಕಾಂಶ ವೇಳೆ ನಾವು ಆತನ ಅಧಿಕಾರಕ್ಕೆ ಅಧೀನತೆಯನ್ನು ತೋರಿಸುತ್ತೇವೆ. ನಾವು ಈ ಮಾನವರ ವಿರುದ್ಧ ದಂಗೆಯೇಳುವಲ್ಲಿ, ಉದಾಹರಣೆಗೆ ಅವರು ಕೊಡುವಂಥ ಶಾಸ್ತ್ರೀಯ ಸಲಹೆ ಮತ್ತು ತಿದ್ದುಪಾಟನ್ನು ತಿರಸ್ಕರಿಸುವ ಮೂಲಕ ದಂಗೆಯೇಳುವಲ್ಲಿ ನಮ್ಮ ದೇವರನ್ನು ನಾವು ಅಸಂತೋಷಪಡಿಸುತ್ತೇವೆ. ಇಸ್ರಾಯೇಲ್ಯರು ಮೋಶೆಯ ವಿರುದ್ಧ ಗುಣುಗುಟ್ಟಿ ದಂಗೆಯೆದ್ದಾಗ ಯೆಹೋವನು ಅವರು ಸ್ವತಃ ತನ್ನ ವಿರುದ್ಧವೇ ದಂಗೆಯೆದ್ದಂತೆ ಪರಿಗಣಿಸಿದನು.—ಅರಣ್ಯಕಾಂಡ 14:26, 27.

9. ನಮ್ಮ ಜೊತೆ ಮಾನವರ ಕಡೆಗಿನ ನಮ್ಮ ಪ್ರೀತಿಯು ಅಧಿಕಾರವನ್ನು ಗೌರವಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ ಏಕೆ? ದೃಷ್ಟಾಂತಿಸಿರಿ.

9 ನಮ್ಮ ಜೊತೆ ಮಾನವರನ್ನು ಪ್ರೀತಿಸುವುದರಿಂದ ಸಹ ನಾವು ಅಧಿಕಾರಕ್ಕೆ ಗೌರವವನ್ನು ತೋರಿಸುತ್ತೇವೆ. ಹೇಗೆ? ನೀವು ಒಂದು ಸೈನ್ಯದಲ್ಲಿ ಸೈನಿಕರಾಗಿದ್ದೀರಿ ಎಂದು ಊಹಿಸಿಕೊಳ್ಳಿರಿ. ಸೈನ್ಯದ ಯಶಸ್ಸು, ಅಷ್ಟೇಕೆ ಅದರ ಉಳಿವೇ ಪ್ರತಿಯೊಬ್ಬ ಸೈನಿಕನು ಅಧಿಕಾರಿ ಶ್ರೇಣಿಯೊಂದಿಗೆ ಸಹಕರಿಸುವುದು, ವಿಧೇಯತೆ ತೋರಿಸುವುದು ಮತ್ತು ಅದನ್ನು ಗೌರವಿಸುವುದರ ಮೇಲೆ ಹೊಂದಿಕೊಂಡಿರುವುದು ಸಂಭವನೀಯ. ಒಂದುವೇಳೆ ದಂಗೆಯೇಳುವ ಮೂಲಕ ನೀವು ಈ ವ್ಯವಸ್ಥಾಪನೆಯನ್ನು ಶಿಥಿಲಗೊಳಿಸುವಲ್ಲಿ ನಿಮ್ಮ ಜೊತೆ ಸೈನಿಕರೆಲ್ಲರೂ ಅಪಾಯದಲ್ಲಿ ಬೀಳುವ ಸಾಧ್ಯತೆಯಿರಬಹುದು. ಇಂದಿನ ಲೋಕದಲ್ಲಿ ಮಾನವ ಸೈನ್ಯಗಳು ಭಯಂಕರ ವಿನಾಶವನ್ನು ಉಂಟುಮಾಡುತ್ತವೆ ಎಂಬುದು ಒಪ್ಪಿಕೊಳ್ಳತಕ್ಕದ್ದೇ. ಆದರೆ ಯೆಹೋವನು ಹೊಂದಿರುವ ಸೈನ್ಯಗಳು ಜನರಿಗೆ ಒಳ್ಳೇದನ್ನು ಮಾತ್ರ ಮಾಡುತ್ತವೆ. ಬೈಬಲು ದೇವರನ್ನು ನೂರಾರು ಬಾರಿ ‘ಸೇನಾಧೀಶ್ವರನಾದ ಯೆಹೋವನು’ ಎಂದು ಸಂಬೋಧಿಸುತ್ತದೆ. (1 ಸಮುವೇಲ 1:3) ಬಲಿಷ್ಠ ಆತ್ಮ ಜೀವಿಗಳ ವಿಸ್ತಾರವಾದ ಸೇನಾವ್ಯೂಹಕ್ಕೆ ಆತನು ಅಧಿಪತಿಯಾಗಿದ್ದಾನೆ. ಕೆಲವೊಮ್ಮೆ ಯೆಹೋವನು ತನ್ನ ಭೂಸೇವಕರನ್ನು ಒಂದು ಸೈನ್ಯಕ್ಕೆ ಹೋಲಿಸುತ್ತಾನೆ. (ಯೆಹೆಜ್ಕೇಲ 37:1-10) ಯೆಹೋವನು ನಮ್ಮ ಮೇಲೆ ಅಧಿಕಾರ ಸ್ಥಾನದಲ್ಲಿ ಇಟ್ಟಿರುವ ಮಾನವರ ವಿರುದ್ಧ ನಾವು ದಂಗೆಯೇಳುವುದಾದರೆ, ನಮ್ಮ ಜೊತೆ ಆಧ್ಯಾತ್ಮಿಕ ಸೈನಿಕರನ್ನು ನಾವು ಅಪಾಯಕ್ಕೊಡ್ಡುತ್ತಿರಬಹುದಲ್ಲವೆ? ಒಬ್ಬ ಕ್ರೈಸ್ತನು ನೇಮಿತ ಹಿರಿಯರ ವಿರುದ್ಧ ದಂಗೆಯೇಳುವಾಗ, ಸಭೆಯಲ್ಲಿರುವ ಇತರರು ಸಹ ನೋವನ್ನು ಅನುಭವಿಸಬಹುದು. (1 ಕೊರಿಂಥ 12:14, 25, 26) ಒಂದು ಮಗುವು ದಂಗೆಯೇಳುವಾಗ ಇಡೀ ಕುಟುಂಬವೇ ನೋವನ್ನು ಅನುಭವಿಸಬಹುದು. ಆದುದರಿಂದ ಗೌರವಭರಿತವಾದ ಮತ್ತು ಸಹಕಾರದ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ನಾವು ಜೊತೆ ಮಾನವರ ಕಡೆಗಿನ ನಮ್ಮ ಪ್ರೀತಿಯನ್ನು ತೋರಿಸುತ್ತೇವೆ.

10, 11. ಸ್ವತಃ ಪ್ರಯೋಜನ ಹೊಂದಲಿಕ್ಕಾಗಿರುವ ಯೋಗ್ಯವಾದ ಬಯಕೆಯು ಅಧಿಕಾರಕ್ಕೆ ವಿಧೇಯರಾಗುವಂತೆ ನಮ್ಮನ್ನು ಹೇಗೆ ಪ್ರಚೋದಿಸುತ್ತದೆ?

10 ನಮ್ಮ ವೈಯಕ್ತಿಕ ಹಿತಾಸಕ್ತಿಯ ಕಾರಣದಿಂದ ಸಹ ನಾವು ಅಧಿಕಾರವನ್ನು ಗೌರವಿಸುತ್ತೇವೆ. ಅಧಿಕಾರಕ್ಕೆ ಗೌರವ ತೋರಿಸುವಂತೆ ಯೆಹೋವನು ನಮ್ಮನ್ನು ಕೇಳಿಕೊಳ್ಳುವಾಗ, ಅದರಿಂದ ದೊರಕುವ ಪ್ರಯೋಜನಗಳನ್ನು ಆತನು ಅನೇಕವೇಳೆ ತಿಳಿಸುತ್ತಾನೆ. ಉದಾಹರಣೆಗೆ, ಬಹುಕಾಲ ಮತ್ತು ಸಂತೋಷಭರಿತವಾಗಿ ಜೀವಿಸಲಿಕ್ಕಾಗಿ ತಮ್ಮ ಹೆತ್ತವರಿಗೆ ವಿಧೇಯರಾಗುವಂತೆ ಆತನು ಮಕ್ಕಳಿಗೆ ಹೇಳುತ್ತಾನೆ. (ಧರ್ಮೋಪದೇಶಕಾಂಡ 5:16; ಎಫೆಸ 6:2, 3) ಸಭೆಯ ಹಿರಿಯರಿಗೆ ಗೌರವ ತೋರಿಸುವಂತೆ ಆತನು ತಿಳಿಸುತ್ತಾನೆ, ಏಕೆಂದರೆ ಹಾಗೆ ಮಾಡಲು ವಿಫಲರಾಗುವುದು ನಮಗೆ ಆಧ್ಯಾತ್ಮಿಕ ಹಾನಿಯನ್ನು ಉಂಟುಮಾಡುವುದು. (ಇಬ್ರಿಯ 13:7, 17) ನಮ್ಮ ಸ್ವಂತ ಸಂರಕ್ಷಣೆಗಾಗಿ ಐಹಿಕ ಅಧಿಕಾರಿಗಳಿಗೆ ವಿಧೇಯರಾಗುವಂತೆ ಆತನು ನಮಗೆ ತಿಳಿಸುತ್ತಾನೆ.—ರೋಮನ್ನರಿಗೆ 13:4.

11 ನಾವು ಅಧಿಕಾರಕ್ಕೆ ವಿಧೇಯರಾಗುವಂತೆ ಯೆಹೋವನು ಏಕೆ ಬಯಸುತ್ತಾನೆ ಎಂಬುದನ್ನು ತಿಳಿದಿರುವುದು ಅಧಿಕಾರಕ್ಕೆ ಗೌರವವನ್ನು ತೋರಿಸಲು ನಮಗೆ ಸಹಾಯಮಾಡುತ್ತದೆ ಎಂಬುದನ್ನು ನೀವು ಒಪ್ಪಿಕೊಳ್ಳುವುದಿಲ್ಲವೆ? ಹಾಗಾದರೆ ಜೀವನದ ಮೂರು ಮುಖ್ಯ ಕ್ಷೇತ್ರಗಳಲ್ಲಿ ನಾವು ಅಧಿಕಾರಕ್ಕೆ ಹೇಗೆ ಗೌರವ ತೋರಿಸಸಾಧ್ಯವಿದೆ ಎಂಬುದನ್ನು ಪರಿಗಣಿಸೋಣ.

ಕುಟುಂಬದಲ್ಲಿ ಗೌರವ ತೋರಿಸುವುದು

12. ಕುಟುಂಬದಲ್ಲಿ ಗಂಡನೂ ತಂದೆಯೂ ಆಗಿರುವವನಿಗೆ ಯೆಹೋವನು ಯಾವ ಪಾತ್ರವನ್ನು ನೇಮಿಸುತ್ತಾನೆ ಮತ್ತು ಒಬ್ಬನು ಈ ಪಾತ್ರವನ್ನು ಹೇಗೆ ನಿರ್ವಹಿಸಬಹುದು?

12 ಯೆಹೋವನು ತಾನೇ ಕುಟುಂಬದ ಏರ್ಪಾಡಿನ ರಚಕನಾಗಿದ್ದಾನೆ. ಯಾವಾಗಲೂ ವ್ಯವಸ್ಥಿತ ಕ್ರಮದ ದೇವರಾಗಿರುವ ಆತನು ಕುಟುಂಬವು ಯಶಸ್ವಿಕರವಾಗಿ ಕಾರ್ಯನಡಿಸುವಂಥ ರೀತಿಯಲ್ಲಿ ಅದನ್ನು ವ್ಯವಸ್ಥಾಪಿಸಿದ್ದಾನೆ. (1 ಕೊರಿಂಥ 14:33) ಗಂಡನೂ ತಂದೆಯೂ ಆಗಿರುವವನಿಗೆ ಆತನು ಕುಟುಂಬದ ಶಿರಸ್ಸಾಗಿ ಕ್ರಿಯೆಗೈಯುವ ಅಧಿಕಾರವನ್ನು ಕೊಡುತ್ತಾನೆ. ಸಭೆಯ ಮೇಲೆ ಯೇಸು ತನ್ನ ಶಿರಸ್ಸುತನವನ್ನು ತೋರಿಸುವ ರೀತಿಯನ್ನು ಅನುಕರಿಸುವ ಮೂಲಕ ಗಂಡನು ತನ್ನ ಶಿರಸ್ಸಾಗಿರುವ ಕ್ರಿಸ್ತ ಯೇಸುವಿಗೆ ಗೌರವವನ್ನು ತೋರಿಸುತ್ತಾನೆ. (ಎಫೆಸ 5:23) ಹೀಗೆ ಗಂಡನು ತನ್ನ ಜವಾಬ್ದಾರಿಯನ್ನು ಬಿಟ್ಟುಕೊಡಬಾರದು ಬದಲಿಗೆ ಧೈರ್ಯದಿಂದ ಅದನ್ನು ನಿರ್ವಹಿಸಬೇಕಾಗಿದೆ; ಅವನು ದಬ್ಬಾಳಿಕೆ ನಡೆಸುವವನು ಅಥವಾ ಒರಟಾಗಿ ವರ್ತಿಸುವವನು ಆಗಿರದೆ ಪ್ರೀತಿಪೂರ್ಣನೂ ನ್ಯಾಯಸಮ್ಮತನೂ ದಯಾಭರಿತನೂ ಆಗಿರಬೇಕಾಗಿದೆ. ತನ್ನ ಅಧಿಕಾರವು ಸಂಬಂಧಸೂಚಕವಾಗಿದೆ, ಅದು ಎಂದಿಗೂ ಯೆಹೋವನ ಅಧಿಕಾರವನ್ನು ಹತ್ತಿಕ್ಕುವಂಥದ್ದಲ್ಲ ಎಂಬುದನ್ನು ಅವನು ಮನಸ್ಸಿನಲ್ಲಿಟ್ಟುಕೊಂಡಿರುತ್ತಾನೆ.

ಒಬ್ಬ ಕ್ರೈಸ್ತ ತಂದೆಯು ಕ್ರಿಸ್ತನು ಶಿರಸ್ಸುತನವನ್ನು ನಿರ್ವಹಿಸುವ ರೀತಿಯನ್ನು ಅನುಕರಿಸುತ್ತಾನೆ

13. ಒಬ್ಬ ಹೆಂಡತಿಯೂ ತಾಯಿಯೂ ಆಗಿರುವವಳು ಯೆಹೋವನಿಗೆ ಸಂತೋಷವನ್ನು ತರುವಂಥ ರೀತಿಯಲ್ಲಿ ಕುಟುಂಬದಲ್ಲಿನ ತನ್ನ ಪಾತ್ರವನ್ನು ಹೇಗೆ ಪೂರೈಸಬಹುದು?

13 ಒಬ್ಬ ಹೆಂಡತಿಯೂ ತಾಯಿಯೂ ಆಗಿರುವವಳು ತನ್ನ ಗಂಡನಿಗೆ ಸಹಾಯಕಿಯಾಗಿ ಅಥವಾ ಪೂರಕಳಾಗಿ ಕ್ರಿಯೆಗೈಯಬೇಕಾಗಿದೆ. ಕುಟುಂಬದಲ್ಲಿ ಅವಳಿಗೆ ಸಹ ಅಧಿಕಾರವು ಕೊಡಲ್ಪಟ್ಟಿದೆ, ಏಕೆಂದರೆ ಬೈಬಲು ‘ತಾಯಿಯ ನಿಯಮದ’ ಕುರಿತು ಮಾತಾಡುತ್ತದೆ. (ಜ್ಞಾನೋಕ್ತಿ 1:8NW) ಆದರೆ ಅವಳಿಗಿರುವ ಅಧಿಕಾರವು ಅವಳ ಗಂಡನಿಗಿರುವ ಅಧಿಕಾರಕ್ಕಿಂತ ಕಡಿಮೆಯದ್ದು. ಕುಟುಂಬದ ಶಿರಸ್ಸಾಗಿರುವ ಗಂಡನು ತನ್ನ ಪಾತ್ರವನ್ನು ಪೂರೈಸುವಂತೆ ಅವನಿಗೆ ಸಹಾಯಮಾಡುವ ಮೂಲಕ ಒಬ್ಬ ಕ್ರೈಸ್ತ ಹೆಂಡತಿಯು ತನ್ನ ಗಂಡನ ಅಧಿಕಾರಕ್ಕೆ ಗೌರವವನ್ನು ತೋರಿಸುತ್ತಾಳೆ. ಅವಳು ಅವನನ್ನು ಕಡೆಗಣಿಸುವುದಿಲ್ಲ, ಅವನನ್ನು ಜಾಣ್ಮೆಯಿಂದ ಬಳಸಿಕೊಳ್ಳುವುದಿಲ್ಲ ಅಥವಾ ಅವನ ಸ್ಥಾನವನ್ನು ಅತಿಕ್ರಮಿಸುವುದಿಲ್ಲ. ಬದಲಾಗಿ ಅವಳು ಬೆಂಬಲ ನೀಡುವವಳೂ ಸಹಕಾರ ತೋರಿಸುವವಳೂ ಆಗಿರುತ್ತಾಳೆ. ತನ್ನ ಗಂಡನ ನಿರ್ಣಯಗಳು ಅವಳಿಗೆ ಒಪ್ಪಿಗೆಯಿಲ್ಲದಿರುವಾಗ ಅವಳು ತನ್ನ ಆಲೋಚನೆಗಳನ್ನು ಗೌರವಭಾವದಿಂದ ವ್ಯಕ್ತಪಡಿಸಬಹುದು, ಆದರೆ ಆಗಲೂ ಅವಳು ಅಧೀನಳಾಗಿಯೇ ಉಳಿಯುತ್ತಾಳೆ. ಒಂದುವೇಳೆ ಗಂಡನು ಅವಿಶ್ವಾಸಿಯಾಗಿರುವಲ್ಲಿ ಅವಳು ಪಂಥಾಹ್ವಾನದಾಯಕ ಸನ್ನಿವೇಶಗಳನ್ನು ಎದುರಿಸಬಹುದು, ಆದರೆ ಅವಳ ಅಧೀನ ನಡತೆಯು ಅವಳ ಗಂಡನು ಯೆಹೋವನನ್ನು ಅರಸುವಂತೆ ಪ್ರಚೋದಿಸಬಹುದು.—1 ಪೇತ್ರ 3:1 ಓದಿ.

14. ಮಕ್ಕಳು ಹೇಗೆ ತಮ್ಮ ಹೆತ್ತವರಿಗೆ ಮತ್ತು ಯೆಹೋವನಿಗೆ ಸಂತೋಷವನ್ನು ತರಬಲ್ಲರು?

14 ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿಧೇಯರಾಗುವಾಗ ಯೆಹೋವನ ಹೃದಯವನ್ನು ಸಂತೋಷಪಡಿಸುತ್ತಾರೆ. ಇದಲ್ಲದೆ ಅವರು ತಮ್ಮ ಹೆತ್ತವರಿಗೂ ಗೌರವ ಮತ್ತು ಸಂತೋಷವನ್ನು ತರುತ್ತಾರೆ. (ಜ್ಞಾನೋಕ್ತಿ 10:1) ಒಂಟಿ ಹೆತ್ತವರಿರುವ ಕುಟುಂಬಗಳಲ್ಲಿ ಮಕ್ಕಳು ವಿಧೇಯತೆಯ ಕುರಿತಾದ ಇದೇ ಮೂಲತತ್ತ್ವವನ್ನು ಅನ್ವಯಿಸುತ್ತಾರೆ, ಏಕೆಂದರೆ ತಮ್ಮ ಹೆತ್ತವರಿಗೆ ಮಕ್ಕಳ ಬೆಂಬಲ ಮತ್ತು ಸಹಕಾರವು ಇನ್ನೂ ಹೆಚ್ಚಾಗಿ ಬೇಕಾಗಿದೆ ಎಂಬುದನ್ನು ಅವರು ಬಲ್ಲವರಾಗಿದ್ದಾರೆ. ದೇವರು ಪ್ರತಿಯೊಬ್ಬರಿಗೆ ನೇಮಿಸಿರುವ ಪಾತ್ರಗಳನ್ನು ಎಲ್ಲ ಸದಸ್ಯರು ಸರಿಯಾಗಿ ನಿರ್ವಹಿಸುವಂಥ ಕುಟುಂಬಗಳಲ್ಲಿ ಬಹಳಷ್ಟು ಶಾಂತಿ ಮತ್ತು ಸಂತೋಷವು ಫಲಿಸುತ್ತದೆ. ಇದು ಎಲ್ಲ ಕುಟುಂಬಗಳ ಮೂಲಕರ್ತನಾಗಿರುವ ಯೆಹೋವ ದೇವರಿಗೆ ಕೀರ್ತಿಯನ್ನು ತರುತ್ತದೆ.—ಎಫೆಸ 3:14, 15.

ಸಭೆಯಲ್ಲಿ ಗೌರವ ತೋರಿಸುವುದು

15. (ಎ) ನಾವು ಯೆಹೋವನ ಅಧಿಕಾರವನ್ನು ಗೌರವಿಸುತ್ತೇವೆ ಎಂಬುದನ್ನು ಸಭೆಯಲ್ಲಿ ಹೇಗೆ ತೋರಿಸಬಹುದು? (ಬಿ) ಸಭೆಯಲ್ಲಿ ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಲು ಯಾವ ಮೂಲತತ್ತ್ವಗಳು ನಮಗೆ ಸಹಾಯಮಾಡಬಹುದು? (“ ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿರಿ” ಎಂಬ ಚೌಕವನ್ನು ನೋಡಿ.)

15 ಯೆಹೋವನು ತನ್ನ ಪುತ್ರನನ್ನು ಕ್ರೈಸ್ತ ಸಭೆಯ ಮೇಲೆ ಅಧಿಕಾರಿಯಾಗಿ ನೇಮಿಸಿದ್ದಾನೆ. (ಕೊಲೊಸ್ಸೆ 1:13) ಅದೇ ರೀತಿಯಲ್ಲಿ ಕ್ರಿಸ್ತನು ಭೂಮಿಯಲ್ಲಿರುವ ದೇವಜನರ ಆಧ್ಯಾತ್ಮಿಕ ಆವಶ್ಯಕತೆಯನ್ನು ನೋಡಿಕೊಳ್ಳಲಿಕ್ಕಾಗಿ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ನೇಮಿಸಿದ್ದಾನೆ. (ಮತ್ತಾಯ 24:45-47) ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು ಆಳು ವರ್ಗವನ್ನು ಪ್ರತಿನಿಧಿಸುತ್ತದೆ. ಪ್ರಥಮ ಶತಮಾನದ ಕ್ರೈಸ್ತ ಸಭೆಗಳಂತೆಯೇ ಇಂದು ಹಿರಿಯರು ಆಡಳಿತ ಮಂಡಲಿಯಿಂದ ನೇರವಾಗಿ ಅಥವಾ ಸಂಚಾರ ಮೇಲ್ವಿಚಾರಕರಂಥ ಅದರ ಪ್ರತಿನಿಧಿಗಳ ಮೂಲಕ ಸಲಹೆಸೂಚನೆಗಳನ್ನು ಪಡೆದುಕೊಳ್ಳುತ್ತಾರೆ. ವ್ಯಕ್ತಿಗತವಾಗಿ ನಾವು ಕ್ರೈಸ್ತ ಹಿರಿಯರ ಅಧಿಕಾರಕ್ಕೆ ಗೌರವ ತೋರಿಸುವಾಗ ಯೆಹೋವನಿಗೆ ವಿಧೇಯತೆ ತೋರಿಸುತ್ತಿದ್ದೇವೆ.—1 ಥೆಸಲೊನೀಕ 5:12; ಇಬ್ರಿಯ 13:17 ಓದಿ.

16. ಯಾವ ಅರ್ಥದಲ್ಲಿ ಹಿರಿಯರು ಪವಿತ್ರಾತ್ಮದಿಂದ ನೇಮಿಸಲ್ಪಟ್ಟವರಾಗಿದ್ದಾರೆ?

16 ಹಿರಿಯರು ಮತ್ತು ಶುಶ್ರೂಷಾ ಸೇವಕರು ಪರಿಪೂರ್ಣರೇನಲ್ಲ. ನಮ್ಮಂತೆಯೇ ಅವರಿಗೂ ಅಪರಿಪೂರ್ಣತೆಗಳಿವೆ. ಆದರೂ ಹಿರಿಯರು ‘ಮನುಷ್ಯರಲ್ಲಿ ದಾನಗಳಾಗಿದ್ದು’ ಸಭೆಯು ಆಧ್ಯಾತ್ಮಿಕವಾಗಿ ಬಲವಾಗಿ ಉಳಿಯಲಿಕ್ಕಾಗಿ ಒದಗಿಸಲ್ಪಟ್ಟಿದ್ದಾರೆ. (ಎಫೆಸ 4:8) ಹಿರಿಯರು ಪವಿತ್ರಾತ್ಮದಿಂದ ನೇಮಿಸಲ್ಪಟ್ಟಿದ್ದಾರೆ. (ಅಪೊಸ್ತಲರ ಕಾರ್ಯಗಳು 20:28) ಹೇಗೆ? ಹೇಗೆಂದರೆ ಅಂಥ ಪುರುಷರು ದೇವರಾತ್ಮದಿಂದ ಪ್ರೇರಿತವಾಗಿರುವ ವಾಕ್ಯದಲ್ಲಿ ದಾಖಲಿಸಲ್ಪಟ್ಟಿರುವ ಅರ್ಹತೆಗಳನ್ನು ಮೊದಲಾಗಿ ಬೆಳೆಸಿಕೊಂಡವರಾಗಿರಬೇಕು. (1 ತಿಮೊಥೆಯ 3:1-7, 12; ತೀತ 1:5-9) ಇದಲ್ಲದೆ ಒಬ್ಬ ಸಹೋದರನ ಅರ್ಹತೆಗಳನ್ನು ನಿರ್ಧರಿಸುವಂಥ ಹಿರಿಯರು ಯೆಹೋವನ ಪವಿತ್ರಾತ್ಮದ ಮಾರ್ಗದರ್ಶನಕ್ಕಾಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸುತ್ತಾರೆ.

17. ತಮ್ಮ ಸಭಾ ಚಟುವಟಿಕೆಯನ್ನು ನಿರ್ವಹಿಸುವಾಗ ಕೆಲವೊಮ್ಮೆ ಕ್ರೈಸ್ತ ಸ್ತ್ರೀಯರು ತಲೆಗೆ ಮುಸುಕುಹಾಕಿಕೊಳ್ಳುತ್ತಾರೆ ಏಕೆ?

17 ಸಾಮಾನ್ಯವಾಗಿ ಕ್ಷೇತ್ರ ಸೇವೆಗಾಗಿರುವ ಕೂಟವನ್ನು ನಡೆಸುವಂಥ ಕೆಲಸವು ಹಿರಿಯರಿಗೆ ಅಥವಾ ಶುಶ್ರೂಷಾ ಸೇವಕರಿಗೆ ನೇಮಿಸಲ್ಪಟ್ಟಿರುತ್ತದೆ. ಆದರೆ ಸಭೆಯಲ್ಲಿ ಕೆಲವೊಮ್ಮೆ ಇಂಥ ಕೆಲಸವನ್ನು ನಿರ್ವಹಿಸಲು ಹಿರಿಯರು ಅಥವಾ ಶುಶ್ರೂಷಾ ಸೇವಕರು ಲಭ್ಯವಿಲ್ಲದಿರಬಹುದು. ಇಂಥ ಸಂದರ್ಭಗಳಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುವಂಥ ಬೇರೆ ಸಹೋದರರು ಈ ಕೆಲಸವನ್ನು ನಿರ್ವಹಿಸಬಹುದು. ಯಾರೂ ಲಭ್ಯವಿಲ್ಲದಿರುವಲ್ಲಿ, ಅರ್ಹರಾದ ಕ್ರೈಸ್ತ ಸಹೋದರಿಯರು ಇಂಥ ಆವಶ್ಯಕತೆಗಳನ್ನು ಪೂರೈಸಬಹುದು. ಆದರೆ ಒಬ್ಬ ದೀಕ್ಷಾಸ್ನಾತ ಪುರುಷನಿಗೆ ಸಾಮಾನ್ಯವಾಗಿ ನೇಮಿಸಲ್ಪಡುವ ಪಾತ್ರವನ್ನು ಸ್ತ್ರೀಯೊಬ್ಬಳು ನಿರ್ವಹಿಸುವಾಗ ತಲೆಗೆ ಮುಸುಕುಹಾಕಿಕೊಳ್ಳುತ್ತಾಳೆ. * (1 ಕೊರಿಂಥ 11:3-10) ಈ ಆವಶ್ಯಕತೆಯು ಸ್ತ್ರೀಯರನ್ನು ಕೀಳುಮಾಡುವುದಿಲ್ಲ. ಬದಲಾಗಿ ಇದು ಕುಟುಂಬದಲ್ಲಿ ಮತ್ತು ಸಭೆಯಲ್ಲಿ ಶಿರಸ್ಸುತನದ ಕುರಿತಾದ ಯೆಹೋವನ ಏರ್ಪಾಡಿಗೆ ಗೌರವ ತೋರಿಸಲು ಒಂದು ಸದವಕಾಶವನ್ನು ಒದಗಿಸುತ್ತದೆ.

ಐಹಿಕ ಅಧಿಕಾರಕ್ಕೆ ಗೌರವ ತೋರಿಸುವುದು

18, 19. (ಎ) ರೋಮನ್ನರಿಗೆ 13:1-7⁠ರಲ್ಲಿ ತಿಳಿಸಲ್ಪಟ್ಟಿರುವ ಮೂಲತತ್ತ್ವಗಳನ್ನು ನೀವು ಹೇಗೆ ವಿವರಿಸುತ್ತೀರಿ? (ಬಿ) ಐಹಿಕ ಅಧಿಕಾರಿಗಳಿಗೆ ನಾವು ಹೇಗೆ ಗೌರವವನ್ನು ತೋರಿಸುತ್ತೇವೆ?

18 ನಿಜ ಕ್ರೈಸ್ತರು ರೋಮನ್ನರಿಗೆ 13:1-7⁠ರಲ್ಲಿ (ಓದಿ.) ತಿಳಿಸಲ್ಪಟ್ಟಿರುವ ಮೂಲತತ್ತ್ವಗಳಿಗೆ ಮನಸ್ಸಾಕ್ಷಿಪೂರ್ವಕವಾಗಿ ಅಂಟಿಕೊಳ್ಳುತ್ತಾರೆ. ಆ ವಚನಭಾಗವನ್ನು ನೀವು ಓದುವಾಗ ಅಲ್ಲಿ ತಿಳಿಸಲ್ಪಟ್ಟಿರುವ ‘ಮೇಲಧಿಕಾರಿಗಳು’ ಐಹಿಕ ಸರಕಾರಗಳಾಗಿವೆ ಎಂಬುದನ್ನು ನೀವು ತಿಳಿದುಕೊಳ್ಳಸಾಧ್ಯವಿದೆ. ಈ ಮಾನವ ಸರಕಾರಗಳು ಅಸ್ತಿತ್ವದಲ್ಲಿರುವಂತೆ ಯೆಹೋವನು ಅನುಮತಿಸುವಷ್ಟರ ತನಕ ಅವು ಪ್ರಾಮುಖ್ಯವಾದ ಕೆಲಸಗಳನ್ನು ನಿರ್ವಹಿಸುತ್ತಾ ಸ್ವಲ್ಪಮಟ್ಟಿಗಿನ ಸುವ್ಯವಸ್ಥೆಯನ್ನು ಕಾಪಾಡುತ್ತವೆ ಮತ್ತು ಅಗತ್ಯವಿರುವ ಸೇವೆಗಳನ್ನು ಒದಗಿಸುತ್ತವೆ. ನಾವು ನಿಯಮಗಳಿಗೆ ವಿಧೇಯರಾಗುವ ಮೂಲಕ ಈ ಅಧಿಕಾರಗಳಿಗೆ ನಮ್ಮ ಗೌರವವನ್ನು ತೋರಿಸುತ್ತೇವೆ. ನಾವು ಸಲ್ಲಿಸಲಿಕ್ಕಿರುವ ತೆರಿಗೆಗಳನ್ನು ಸಲ್ಲಿಸಲು, ಸರಕಾರವು ಅಗತ್ಯಪಡಿಸಬಹುದಾದ ಯಾವುದೇ ಫಾರ್ಮ್‌ಗಳು ಮತ್ತು ದಾಖಲೆಪತ್ರಗಳನ್ನು ಸರಿಯಾಗಿ ಭರ್ತಿಮಾಡಲು ಮತ್ತು ನಾವು, ನಮ್ಮ ಕುಟುಂಬ, ವ್ಯಾಪಾರ ಇಲ್ಲವೆ ಸ್ವತ್ತುಗಳು ಒಳಗೂಡಿರುವ ಯಾವುದೇ ನಿಯಮಗಳಿಗೆ ಅನುಸಾರವಾಗಿ ನಡೆಯಲು ಜಾಗ್ರತೆ ವಹಿಸುತ್ತೇವೆ. ಆದರೆ ಐಹಿಕ ಅಧಿಕಾರಗಳು ದೇವರಿಗೆ ಅವಿಧೇಯರಾಗುವಂತೆ ನಮ್ಮಿಂದ ಕೇಳಿಕೊಳ್ಳುವಾಗ ನಾವು ಅವುಗಳಿಗೆ ಅಧೀನರಾಗುವುದಿಲ್ಲ. ಬದಲಾಗಿ ನಾವು ಪುರಾತನ ಕಾಲದ ಅಪೊಸ್ತಲರು ಉತ್ತರಿಸಿದಂತೆಯೇ “ನಾವು ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗುವುದು ಅಗತ್ಯ” ಎಂದು ಉತ್ತರಿಸುತ್ತೇವೆ.—ಅಪೊಸ್ತಲರ ಕಾರ್ಯಗಳು 5:28, 29; “ ನಾನು ಯಾರ ಅಧಿಕಾರಕ್ಕೆ ವಿಧೇಯನಾಗಬೇಕು?” ಎಂಬ ಚೌಕವನ್ನು ನೋಡಿ.

19 ನಾವು ವ್ಯವಹರಿಸುವ ರೀತಿಯಿಂದಲೂ ಐಹಿಕ ಅಧಿಕಾರಗಳಿಗೆ ಗೌರವವನ್ನು ತೋರಿಸುತ್ತೇವೆ. ಕೆಲವೊಮ್ಮೆ ನಾವು ಸರಕಾರೀ ಅಧಿಕಾರಿಗಳೊಂದಿಗೆ ನೇರವಾಗಿ ವ್ಯವಹರಿಸಬಹುದು. ಅಪೊಸ್ತಲ ಪೌಲನು ಅರಸನಾದ ಹೆರೋದ ಅಗ್ರಿಪ್ಪ ಮತ್ತು ಅಧಿಪತಿಯಾದ ಫೆಸ್ತರಂಥ ಅಧಿಕಾರಿಗಳೊಂದಿಗೆ ವ್ಯವಹರಿಸಿದನು. ಈ ಪುರುಷರಲ್ಲಿ ಗಂಭೀರವಾದ ಲೋಪದೋಷಗಳಿದ್ದವು, ಆದರೂ ಪೌಲನು ಅವರನ್ನು ಗೌರವದಿಂದ ಸಂಬೋಧಿಸಿದನು. (ಅಪೊಸ್ತಲರ ಕಾರ್ಯಗಳು 26:2, 25) ನಾವು ಯಾರೊಂದಿಗೆ ಮಾತಾಡುತ್ತೇವೋ ಅವರು ಒಬ್ಬ ಪ್ರಬಲ ಅಧಿಕಾರಿಯಾಗಿರಲಿ ಅಥವಾ ಸ್ಥಳಿಕ ಪೊಲೀಸನಾಗಿರಲಿ, ನಾವು ಪೌಲನ ಮಾದರಿಯನ್ನು ಅನುಕರಿಸುತ್ತೇವೆ. ಶಾಲೆಯಲ್ಲಿ ಚಿಕ್ಕ ಪ್ರಾಯದ ಕ್ರೈಸ್ತರು ತಮ್ಮ ಶಿಕ್ಷಕರಿಗೆ ಮತ್ತು ಶಾಲೆಯ ಅಧಿಕಾರಿಗಳಿಗೆ ಹಾಗೂ ಉದ್ಯೋಗಿಗಳಿಗೆ ತದ್ರೀತಿಯ ಗೌರವವನ್ನು ತೋರಿಸಲು ಪ್ರಯತ್ನಿಸುತ್ತಾರೆ. ನಮ್ಮ ನಂಬಿಕೆಗಳನ್ನು ಅಂಗೀಕರಿಸುವಂಥವರಿಗೆ ಮಾತ್ರ ನಾವು ಇಂಥ ಗೌರವವನ್ನು ತೋರಿಸುವವರಾಗಿರುವುದಿಲ್ಲ ಎಂಬುದಂತೂ ನಿಜ; ಯೆಹೋವನ ಸಾಕ್ಷಿಗಳಿಗೆ ವಿರುದ್ಧವಾಗಿರುವವರೊಂದಿಗೆ ವ್ಯವಹರಿಸುವಾಗ ಸಹ ನಾವು ಗೌರವಭರಿತರಾಗಿರುತ್ತೇವೆ. ವಾಸ್ತವದಲ್ಲಿ, ಅವಿಶ್ವಾಸಿಗಳು ನಮ್ಮ ಗೌರವಭರಿತ ವರ್ತನೆಯನ್ನು ಗ್ರಹಿಸಲು ಶಕ್ತರಾಗಿರಬೇಕು.—ರೋಮನ್ನರಿಗೆ 12:17, 18 ಓದಿ; 1 ಪೇತ್ರ 3:15.

20, 21. ಅಧಿಕಾರಕ್ಕೆ ಯೋಗ್ಯವಾದ ಗೌರವವನ್ನು ತೋರಿಸುವುದರಿಂದ ಸಿಗುವ ಆಶೀರ್ವಾದಗಳಲ್ಲಿ ಕೆಲವು ಯಾವುವು?

20 ಗೌರವವನ್ನು ತೋರಿಸುವ ವಿಷಯಕ್ಕೆ ಬರುವಾಗ ನಾವು ಜಿಪುಣರಾಗದಿರೋಣ. ಅಪೊಸ್ತಲ ಪೇತ್ರನು ಬರೆದುದು: “ಎಲ್ಲ ರೀತಿಯ ಜನರನ್ನು ಗೌರವಿಸಿರಿ.” (1 ಪೇತ್ರ 2:17) ನಾವು ಜನರನ್ನು ನಿಜವಾದ ಗೌರವಭಾವದಿಂದ ಕಾಣುತ್ತೇವೆ ಎಂಬುದನ್ನು ಅವರು ಗ್ರಹಿಸುವಾಗ ಬಹಳವಾಗಿ ಪ್ರಭಾವಿತರಾಗಬಹುದು. ಈ ಗುಣವು ಇಂದು ಬಹಳ ವಿರಳ ಎಂಬುದನ್ನು ನೆನಪಿನಲ್ಲಿಡಿರಿ. ಆದುದರಿಂದ ಅದನ್ನು ತೋರಿಸುವುದು ನಾವು ಯೇಸುವಿನ ಆಜ್ಞೆಗೆ ಕಿವಿಗೊಡುವಂಥ ಒಂದು ವಿಧವಾಗಿದೆ. ಅದೇನೆಂದರೆ, “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ; ಆಗ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ಮಹಿಮೆಯನ್ನು ಸಲ್ಲಿಸುವರು.”—ಮತ್ತಾಯ 5:16.

21 ಅಂಧಕಾರವಿರುವ ಈ ಲೋಕದಲ್ಲಿ ಸಹೃದಯರು ಆಧ್ಯಾತ್ಮಿಕ ಬೆಳಕಿನ ಕಡೆಗೆ ಸೆಳೆಯಲ್ಪಡುತ್ತಾರೆ. ಆದುದರಿಂದ ನಾವು ಕುಟುಂಬದಲ್ಲಿ, ಸಭೆಯಲ್ಲಿ ಮತ್ತು ಐಹಿಕ ಸನ್ನಿವೇಶಗಳಲ್ಲಿ ಗೌರವವನ್ನು ತೋರಿಸುವುದು ಕೆಲವರನ್ನು ಬೆಳಕಿನ ಕಡೆಗೆ ಆಕರ್ಷಿಸಬಹುದು ಮತ್ತು ನಮ್ಮೊಂದಿಗೆ ಬೆಳಕಿನ ಮಾರ್ಗದಲ್ಲಿ ನಡೆಯುವಂತೆ ಅವರನ್ನು ಪ್ರಚೋದಿಸಬಹುದು. ಎಷ್ಟು ಮಹಿಮಾಯುತವಾದ ಪ್ರತೀಕ್ಷೆಯಿದು! ಒಂದುವೇಳೆ ಹೀಗೆ ಸಂಭವಿಸದಿರಬಹುದಾದರೂ ಒಂದಂತೂ ಖಂಡಿತ. ಮಾನವರ ಕಡೆಗೆ ನಮಗಿರುವ ಗೌರವವು ಯೆಹೋವ ದೇವರನ್ನು ಸಂತೋಷಪಡಿಸುತ್ತದೆ ಮತ್ತು ಆತನ ಪ್ರೀತಿಯಲ್ಲಿ ಉಳಿಯುವಂತೆ ನಮಗೆ ಸಹಾಯಮಾಡುತ್ತದೆ. ಇನ್ನಾವುದು ಇದಕ್ಕಿಂತ ದೊಡ್ಡ ಬಹುಮಾನವಾಗಿರಸಾಧ್ಯವಿದೆ?

^ ಪ್ಯಾರ. 17 ಈ ಮೂಲತತ್ತ್ವವನ್ನು ಅನ್ವಯಿಸುವ ಕೆಲವೊಂದು ಪ್ರಾಯೋಗಿಕ ವಿಧಗಳನ್ನು “ತಲೆಗೆ ಮುಸುಕುಹಾಕಿಕೊಳ್ಳುವುದು—ಯಾವಾಗ ಮತ್ತು ಏಕೆ?” ಎಂಬ ಪರಿಶಿಷ್ಟವು ಪರಾಮರ್ಶಿಸುತ್ತದೆ.