ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಡಳಿತ ಮಂಡಲಿಯ ಪತ್ರ

ಆಡಳಿತ ಮಂಡಲಿಯ ಪತ್ರ

ಯೆಹೋವನನ್ನು ಪ್ರೀತಿಸುವ ಪ್ರಿಯ ಜನರೇ:

“ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವುದು” ಎಂದು ಯೇಸು ಹೇಳಿದನು. (ಯೋಹಾನ 8:32) ಈ ಮಾತುಗಳು ಎಷ್ಟು ಉತ್ತೇಜನದಾಯಕವಾಗಿವೆ! ಹೌದು, ಅಸತ್ಯತೆಯು ವ್ಯಾಪಕವಾಗಿರುವ ಈ ಕಠಿನಕರವಾದ ‘ಕಡೇ ದಿವಸಗಳಲ್ಲಿಯೂ’ ಸತ್ಯವನ್ನು ತಿಳಿದುಕೊಳ್ಳಲು ಸಾಧ್ಯವಿದೆ. (2 ತಿಮೊಥೆಯ 3:1) ದೇವರ ವಾಕ್ಯದಲ್ಲಿ ವಿವರಿಸಲ್ಪಟ್ಟಿರುವ ಸತ್ಯವನ್ನು ನೀವು ಮೊದಲಾಗಿ ಅರ್ಥಮಾಡಿಕೊಂಡ ಸಮಯವು ನಿಮಗೆ ನೆನಪಿದೆಯೆ? ಅದೆಷ್ಟು ರೋಮಾಂಚನೀಯ ಅನುಭವವಾಗಿತ್ತು!

ಆದರೂ ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡಿರುವುದು ಮತ್ತು ಅದರ ಕುರಿತು ಇತರರಿಗೆ ಹೇಳುವುದರಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದು ಎಷ್ಟು ಪ್ರಾಮುಖ್ಯವಾಗಿದೆಯೋ, ನಾವು ಸತ್ಯಕ್ಕೆ ಹೊಂದಿಕೆಯಲ್ಲಿ ವರ್ತಿಸುವುದು ಸಹ ಅಷ್ಟೇ ಅತ್ಯಗತ್ಯವಾಗಿದೆ. ಇದನ್ನು ಮಾಡಲಿಕ್ಕಾಗಿ ನಾವು ನಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಬೇಕಾಗಿದೆ. ಇದರಲ್ಲಿ ಏನು ಒಳಗೂಡಿದೆ? ಯೇಸು ತನ್ನ ಮರಣಕ್ಕೆ ಮುಂಚಿನ ರಾತ್ರಿಯಂದು ನುಡಿದ ಮಾತುಗಳು ಈ ಪ್ರಶ್ನೆಯನ್ನು ಉತ್ತರಿಸುತ್ತವೆ. ಅವನು ತನ್ನ ನಂಬಿಗಸ್ತ ಅಪೊಸ್ತಲರಿಗೆ ಹೇಳಿದ್ದು: “ನಾನು ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ಉಳಿದಿರುವ ಪ್ರಕಾರವೇ ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ಉಳಿಯುವಿರಿ.”—ಯೋಹಾನ 15:10.

ಯೇಸು ತನ್ನ ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆಯುವ ಮೂಲಕ ದೇವರ ಪ್ರೀತಿಯಲ್ಲಿ ಉಳಿದನು ಎಂಬುದನ್ನು ಗಮನಿಸಿರಿ. ಇಂದು ನಮ್ಮ ವಿಷಯದಲ್ಲಿಯೂ ಇದು ನಿಜವಾಗಿದೆ. ದೇವರ ಪ್ರೀತಿಯಲ್ಲಿ ಉಳಿಯಲಿಕ್ಕಾಗಿ ನಾವು ದೈನಂದಿನ ಜೀವನದಲ್ಲಿ ಸತ್ಯಕ್ಕನುಗುಣವಾಗಿ ಜೀವಿಸುವ ಅಗತ್ಯವಿದೆ. ಅದೇ ಸಾಯಂಕಾಲ ಯೇಸು, “ನೀವು ಈ ವಿಷಯಗಳನ್ನು ತಿಳಿದು ಅವುಗಳನ್ನು ಕೈಕೊಂಡು ನಡೆಯುವುದಾದರೆ ಸಂತೋಷಿತರು” ಎಂದು ಹೇಳಿದನು.—ಯೋಹಾನ 13:17.

ಈ ಪುಸ್ತಕವು ನಿಮ್ಮ ಜೀವನದಲ್ಲಿ ಸತ್ಯವನ್ನು ಅನ್ವಯಿಸಿಕೊಳ್ಳುತ್ತಾ ಮುಂದುವರಿಯಲು ಮತ್ತು ಹೀಗೆ ‘ನಿತ್ಯಜೀವವನ್ನು ದೃಷ್ಟಿಯಲ್ಲಿಟ್ಟವರಾಗಿ . . . ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಲು’ ಸಹಾಯಮಾಡುವುದು ಎಂಬುದು ನಮ್ಮ ಯಥಾರ್ಥ ನಿರೀಕ್ಷೆಯಾಗಿದೆ.—ಯೂದ 21.

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ