ಒಂದನೇ ಸಮುವೇಲ 9:1-27

  • ಸಮುವೇಲ ಮತ್ತು ಸೌಲನ ಭೇಟಿ (1-27)

9  ಬೆನ್ಯಾಮೀನ್‌ ಕುಲದಲ್ಲಿ ಕೀಷ+ ಅನ್ನೋ ಒಬ್ಬನಿದ್ದ. ಅವನು ತುಂಬ ಶ್ರೀಮಂತನಾಗಿದ್ದ. ಅವನು ಅಬೀಯೇಲನ ಮಗ. ಅಬೀಯೇಲ ಚೆರೋರನ ಮಗ. ಚೆರೋರ ಬೆಕೋರತನ ಮಗ. ಬೆಕೋರತ ಬೆನ್ಯಾಮೀನ್ಯನಾಗಿದ್ದ+ ಅಫೀಹನ ಮಗ.  ಕೀಷನಿಗೆ ಸೌಲ+ ಅನ್ನೋ ಒಬ್ಬ ಮಗನಿದ್ದ. ಈ ಯುವಕ ತುಂಬ ಸುಂದರನಾಗಿದ್ದ. ಇಸ್ರಾಯೇಲ್ಯರ ಗಂಡಸ್ರಲ್ಲಿ ಅವನಷ್ಟು ಸುಂದರ ಯಾರೂ ಇರಲಿಲ್ಲ. ಅವನು ಎಷ್ಟು ಎತ್ತರ ಇದ್ದ ಅಂದ್ರೆ ಬೇರೆಲ್ಲ ಜನ ಅವನ ಭುಜದ ತನಕ ಇದ್ರು.  ಕೀಷನಿಗೆ ಸೇರಿದ್ದ ಕತ್ತೆಗಳು* ಕಳೆದುಹೋದಾಗ ಕೀಷ ತನ್ನ ಮಗನಾದ ಸೌಲನಿಗೆ “ದಯವಿಟ್ಟು ಸೇವಕರಲ್ಲಿ ಒಬ್ಬನನ್ನ ಕರ್ಕೊಂಡು ಹೋಗಿ ಕತ್ತೆಗಳನ್ನ ಹುಡುಕೊಂಡು ಬಾ” ಅಂದ.  ಅವರು ಎಫ್ರಾಯೀಮ್‌ ಬೆಟ್ಟ ಪ್ರದೇಶದ ದಾರೀಲಿ, ಶಾಲಿಷಾ ಪ್ರದೇಶದ ದಾರೀಲಿ ಹುಡುಕ್ತಾ ಹೋದ್ರು. ಆದ್ರೆ ಕತ್ತೆಗಳು ಸಿಗಲಿಲ್ಲ. ಅವರು ಶಾಲೀಮ್‌ ಪ್ರದೇಶದ ದಾರೀಲಿ ಹುಡುಕಿದ್ರು. ಕತ್ತೆಗಳು ಅಲ್ಲೂ ಇರಲಿಲ್ಲ. ಅವರು ಬೆನ್ಯಾಮೀನ್ಯರ ಇಡೀ ದೇಶ ಸುತ್ತಿದ್ರೂ ಕತ್ತೆಗಳು ಸಿಗಲಿಲ್ಲ.  ಆಮೇಲೆ ಅವರು ಚೂಫ್‌ ಪ್ರದೇಶಕ್ಕೆ ಬಂದ್ರು. ಆಗ ಸೌಲ ತನ್ನ ಜೊತೆ ಇದ್ದ ಸೇವಕನಿಗೆ “ಬಾ, ನಾವು ವಾಪಸ್‌ ಹೋಗೋಣ. ಇಲ್ಲಾಂದ್ರೆ ನನ್ನ ತಂದೆ ಕತ್ತೆಗಳ ಬಗ್ಗೆ ಚಿಂತಿಸೋದನ್ನ ಬಿಟ್ಟು ನಮ್ಮ ಬಗ್ಗೆ ಚಿಂತಿಸೋಕೆ ಶುರು ಮಾಡ್ತಾನೆ”+ ಅಂದ.  ಆದ್ರೆ ಸೇವಕ “ನೋಡು, ಈ ಪಟ್ಟಣದಲ್ಲಿ ದೇವರ ಮನುಷ್ಯನೊಬ್ಬ ಇದ್ದಾನೆ. ಅವನಂದ್ರೆ ಎಲ್ರಿಗೂ ಗೌರವ. ಅವನು ಹೇಳೋದೆಲ್ಲಾ ನಿಜ ಆಗುತ್ತೆ.+ ಬಾ ಅಲ್ಲಿ ಹೋಗೋಣ. ನಾವು ಯಾವ ಕಡೆ ಹೋಗಬೇಕು ಅಂತ ಅವನು ಹೇಳಬಹುದು” ಅಂದ.  ಅದಕ್ಕೆ ಸೌಲ “ನಾವು ಅಲ್ಲಿಗೆ ಹೋದ್ರೆ ಅವನಿಗೆ ಕೊಡೋಕೆ ಏನು ತಗೊಂಡು ಹೋಗೋದು? ನಮ್ಮ ಚೀಲಗಳಲ್ಲಿ ರೊಟ್ಟಿ ಕೂಡ ಇಲ್ಲ. ಸತ್ಯ ದೇವರ ಮನುಷ್ಯನಿಗೆ ಉಡುಗೊರೆಯಾಗಿ ತಗೊಂಡು ಹೋಗೋಕೆ ಏನೂ ಇಲ್ಲ. ಏನು ಮಾಡೋಣ ಹೇಳು?” ಅಂತ ಕೇಳಿದ.  ಆಗ ಸೇವಕ “ನೋಡು, ನನ್ನ ಕೈಯಲ್ಲಿ ಒಂದು ಚಿಕ್ಕ ಬೆಳ್ಳಿ ನಾಣ್ಯ ಇದೆ.* ಇದನ್ನ ನಾನು ಸತ್ಯ ದೇವರ ಮನುಷ್ಯನಿಗೆ ಕೊಡ್ತೀನಿ, ಅವನು ನಮಗೆ ಯಾವ ದಾರೀಲಿ ಹೋಗಬೇಕಂತ ಹೇಳ್ತಾನೆ” ಅಂದ.  (ಹಿಂದಿನ ಕಾಲದಲ್ಲೆಲ್ಲ ಇಸ್ರಾಯೇಲಿನಲ್ಲಿ ದೇವರ ಅಭಿಪ್ರಾಯ ಕೇಳೋಕೆ ಹೋಗೋ ಮನುಷ್ಯ “ಬನ್ನಿ, ನಾವು ದಿವ್ಯದೃಷ್ಟಿ ಇರುವವನ ಹತ್ರ ಹೋಗೋಣ”+ ಅಂತ ಹೇಳ್ತಿದ್ದ. ಈಗ ನಾವು ಪ್ರವಾದಿ ಅಂತ ಹೇಳ್ತೀವಿ, ಹಿಂದಿನ ಕಾಲದಲ್ಲಿ ದಿವ್ಯದೃಷ್ಟಿ ಇರುವವನು ಅಂತ ಹೇಳ್ತಿದ್ರು.) 10  ಸೌಲ ತನ್ನ ಸೇವಕನಿಗೆ “ನೀನು ಹೇಳಿದ್ದು ಸರಿ. ಬಾ ಹೋಗೋಣ” ಅಂದ. ಆಗ ಅವರು ಸತ್ಯ ದೇವರ ಮನುಷ್ಯನಿದ್ದ ಪಟ್ಟಣಕ್ಕೆ ಹೋದ್ರು. 11  ಅವರು ಪಟ್ಟಣದ ಕಡೆ ಏರಿ ಹೋಗ್ತಿದ್ದಾಗ ನೀರು ಸೇದೋಕೆ ಹೊರಗೆ ಬಂದಿದ್ದ ಹುಡುಗಿಯರನ್ನ ನೋಡಿದ್ರು. ಅವರು ಆ ಹುಡುಗಿಯರಿಗೆ “ದಿವ್ಯದೃಷ್ಟಿ+ ಇರುವವನು ಈ ಪಟ್ಟಣದಲ್ಲಿ ಇದ್ದಾನಾ?” ಅಂತ ಕೇಳಿದ್ರು. 12  ಆ ಹುಡುಗಿಯರು “ಇಲ್ಲೇ ಇದ್ದಾನೆ. ಅವನು ನಿಮ್ಮ ಮುಂದೆನೇ ಹೋಗ್ತಿದ್ದಾನೆ. ಬೇಗ ಹೋಗಿ, ಇವತ್ತೇ ಅವನು ಪಟ್ಟಣಕ್ಕೆ ಬಂದಿದ್ದಾನೆ. ಯಾಕಂದ್ರೆ ಜನ ಇವತ್ತು ಬೆಟ್ಟದಲ್ಲಿ+ ಬಲಿ ಅರ್ಪಿಸ್ತಿದ್ದಾರೆ.+ 13  ನೀವು ಪಟ್ಟಣದ ಒಳಗೆ ಹೋದ ತಕ್ಷಣ ಅವನು ಸಿಗ್ತಾನೆ. ಅವನು ಊಟ ಮಾಡೋಕೆ ಬೆಟ್ಟಕ್ಕೆ ಹೋಗೋ ಮುಂಚೆ ಭೇಟಿಮಾಡಿ. ಯಾಕಂದ್ರೆ ಅವನು ಬಂದು ಬಲಿಯನ್ನ ಆಶೀರ್ವದಿಸೋ ತನಕ ಜನ ಊಟ ಮಾಡಲ್ಲ. ಅದಾದ ಮೇಲೆನೇ ಔತಣಕ್ಕೆ ಬಂದಿರೋರು ಊಟ ಮಾಡೋದು. ನೀವು ಈಗ್ಲೇ ಹೋಗಿ, ಸಿಗ್ತಾನೆ” ಅಂದ್ರು. 14  ಆಗ ಅವರು ಪಟ್ಟಣದ ಕಡೆ ಏರಿ ಹೋದ್ರು. ಅವರು ಪಟ್ಟಣದ ಒಳಗೆ ಬರೋಷ್ಟರಲ್ಲಿ ಸಮುವೇಲ ಅವ್ರನ್ನ ಭೇಟಿ ಆಗೋಕೆ, ಅವ್ರನ್ನ ಬೆಟ್ಟಕ್ಕೆ ಕರ್ಕೊಂಡು ಹೋಗೋಕೆ ಅಲ್ಲಿಗೆ ಬಂದ. 15  ಸೌಲ ಬರೋ ಒಂದು ದಿನದ ಹಿಂದೆ ಯೆಹೋವ ಸಮುವೇಲನಿಗೆ 16  “ನಾಳೆ ಇದೇ ಸಮಯಕ್ಕೆ ಬೆನ್ಯಾಮೀನ್ಯರ ಪ್ರದೇಶದಿಂದ+ ಒಬ್ಬನನ್ನ ನಿನ್ನ ಹತ್ರ ಕಳಿಸ್ತೀನಿ. ನನ್ನ ಜನ್ರಾಗಿರೋ ಇಸ್ರಾಯೇಲ್ಯರ ನಾಯಕನಾಗಿ ನೀನು ಅವನನ್ನ ಅಭಿಷೇಕಿಸಬೇಕು.+ ಅವನು ನನ್ನ ಜನ್ರನ್ನ ಫಿಲಿಷ್ಟಿಯರ ಕೈಯಿಂದ ಕಾಪಾಡ್ತಾನೆ. ಯಾಕಂದ್ರೆ ನನ್ನ ಜನ್ರ ದುಃಖವನ್ನ ನಾನು ನೋಡಿದ್ದೀನಿ. ಅವ್ರ ಅಳು ನಂಗೆ ಕೇಳಿದೆ”+ ಅಂದನು. 17  ಸಮುವೇಲ ಸೌಲನನ್ನ ನೋಡಿದಾಗ ಯೆಹೋವ ಅವನಿಗೆ “ನನ್ನ ಜನ್ರನ್ನ ಆಳ್ತಾನೆ ಅಂತ ನಾನು ಹೇಳಿದ್ನಲ್ಲಾ, ಇವನೇ ಅವನು”*+ ಅಂದನು. 18  ಆಮೇಲೆ ಸೌಲ ಸಮುವೇಲನನ್ನ ಪಟ್ಟಣದ ಬಾಗಿಲ ಹತ್ರ ಭೇಟಿಯಾಗಿ “ದಯವಿಟ್ಟು ನನಗೆ, ದಿವ್ಯದೃಷ್ಟಿ ಇರುವವನ ಮನೆ ಎಲ್ಲಿದೆ ಅಂತ ಹೇಳ್ತೀಯಾ?” ಅಂತ ಕೇಳಿದ. 19  ಸಮುವೇಲ ಸೌಲನಿಗೆ “ಆ ದಿವ್ಯದೃಷ್ಟಿ ಇರುವವನು ನಾನೇ. ನನಗಿಂತ ಮುಂಚೆ ನೀನು ಬೆಟ್ಟಕ್ಕೆ ಹೋಗು. ಅಲ್ಲಿ ಇವತ್ತು ನೀವು ನನ್ನ ಜೊತೆ ಊಟ ಮಾಡ್ತೀರ.+ ನಿನಗೆ ಗೊತ್ತಾಗಬೇಕಾದ ಎಲ್ಲ ವಿಷ್ಯವನ್ನ* ಹೇಳ್ತೀನಿ. ಆಮೇಲೆ ನಿನ್ನನ್ನ ಬೆಳಿಗ್ಗೆ ಕಳಿಸ್ಕೊಡ್ತೀನಿ. 20  ಮೂರು ದಿನಗಳ ಹಿಂದೆ ಕಳೆದುಹೋದ ಕತ್ತೆಗಳ ಬಗ್ಗೆ+ ಚಿಂತೆ ಮಾಡಬೇಡ. ಅವು ಸಿಕ್ಕಿವೆ. ಇಸ್ರಾಯೇಲ್ಯರು ಇಷ್ಟಪಡೋ ಅಮೂಲ್ಯ ವಸ್ತುಗಳೆಲ್ಲ ಯಾರಿಗೆ ಸಿಗುತ್ತೆ? ಅವುಗಳೆಲ್ಲ ನಿನಗೆ, ನಿನ್ನ ತಂದೆಯ ಮನೆತನಕ್ಕೆ ಸಿಗುತ್ತೆ ಅಲ್ವಾ?”+ ಅಂದ. 21  ಅದಕ್ಕೆ ಸೌಲ “ನಾನು ಇಸ್ರಾಯೇಲ್‌ ಕುಲಗಳಲ್ಲೇ ಚಿಕ್ಕ ಕುಲವಾದ ಬೆನ್ಯಾಮೀನ್‌ ಕುಲದವನು.+ ಬೆನ್ಯಾಮೀನ್‌ ಕುಲದಲ್ಲೇ ನನ್ನ ತಂದೆಯ ಮನೆತನ ತೀರ ಚಿಕ್ಕದು. ಹೀಗಿರುವಾಗ ನೀನು ಯಾಕೆ ಈ ರೀತಿ ಮಾತಾಡ್ತಿದ್ದೀಯಾ?” ಅಂತ ಕೇಳಿದ. 22  ಸಮುವೇಲ ಸೌಲನನ್ನ, ಅವನ ಸೇವಕನನ್ನ ಊಟದ ಕೋಣೆಗೆ ಕರ್ಕೊಂಡು ಬಂದು, ಅತಿಥಿಗಳ ಮಧ್ಯ ಅತೀ ಮುಖ್ಯ ಸ್ಥಾನದಲ್ಲಿ ಅವ್ರನ್ನ ಕೂರಿಸಿದ. ಅಲ್ಲಿಗೆ ಸುಮಾರು 30 ಜನ ಗಂಡಸರನ್ನ ಈ ಮುಂಚೆನೇ ಕರೆಯಲಾಗಿತ್ತು. 23  ಸಮುವೇಲ ಅಡುಗೆಯವನಿಗೆ “ನಿನಗೆ ‘ಪ್ರತ್ಯೇಕವಾಗಿ ಇಡು’ ಅಂತ ಹೇಳಿದ್ದ ಆ ಮಾಂಸದ ಭಾಗ ತಗೊಂಡು ಬಾ” ಅಂದ. 24  ಆಗ ಅಡುಗೆಯವನು ಬಲಿಯ ತೊಡೆ ಮಾಂಸವನ್ನ, ಅದ್ರ ಜೊತೆ ಇದ್ದದ್ದನ್ನ ತಗೊಂಡು ಬಂದು ಸೌಲನ ಮುಂದೆ ಇಟ್ಟ. ಸಮುವೇಲ ಸೌಲನಿಗೆ “ನಿನಗೆ ಬಡಿಸಿರೋ ವಿಶೇಷ ಭಾಗ ತಿನ್ನು. ಯಾಕಂದ್ರೆ ನಾನು ಅವ್ರಿಗೆ ‘ಅತಿಥಿಗಳನ್ನ ಕರಿದಿದ್ದೀನಿ’ ಅಂತ ಹೇಳಿದ್ದೆ. ಅದಕ್ಕೆ ಇದನ್ನ ನಿನಗಂತಾನೇ ತೆಗೆದಿಟ್ಟಿದ್ರು” ಅಂದ. ಸಮುವೇಲ ಅವತ್ತು ಸೌಲನ ಜೊತೆ ಊಟ ಮಾಡಿದ. 25  ಆಮೇಲೆ ಅವರು ಬೆಟ್ಟದಿಂದ+ ಪಟ್ಟಣಕ್ಕೆ ಬಂದ್ರು. ಸಮುವೇಲ ಸೌಲನನ್ನ ಮನೆ ಮಾಳಿಗೆ ಮೇಲೆ ಕರ್ಕೊಂಡು ಹೋಗಿ ಮಾತು ಮುಂದುವರಿಸಿದ. 26  ಮಾರನೇ ದಿನ ಅವರು ಇನ್ನೂ ನಸುಕಿನಲ್ಲೇ ಎದ್ರು. ಸಮುವೇಲ ಮನೆ ಮಾಳಿಗೆ ಮೇಲಿದ್ದ ಸೌಲನನ್ನ ಕೂಗಿ “ಎದ್ದು ತಯಾರಾಗು, ನಿನ್ನನ್ನ ಕಳಿಸ್ಕೊಡ್ತೀನಿ” ಅಂದ. ಸೌಲ ಎದ್ದು ತಯಾರಾದ. ಅವನು ಮತ್ತು ಸಮುವೇಲ ಹೊರಗೆ ಹೋದ್ರು. 27  ಅವರು ಇನ್ನೇನು ಪಟ್ಟಣದ ಹೊರವಲಯದ ಕಡೆ ಹೋಗ್ತಿದ್ದಾಗ ಸಮುವೇಲ ಸೌಲನಿಗೆ “ನೀನು ನಿನ್ನ ಸೇವಕನಿಗೆ+ ನಮಗಿಂತ ಮುಂದೆ ಹೋಗೋಕೆ ಹೇಳು” ಅಂದ. ಆ ಸೇವಕ ಹೋದ. ಆಮೇಲೆ ಸಮುವೇಲ “ನೀನು ಇಲ್ಲೇ ನಿಲ್ಲು. ನಾನು ನಿನಗೆ ದೇವರ ಸಂದೇಶ ಹೇಳಬೇಕು” ಅಂದ.

ಪಾದಟಿಪ್ಪಣಿ

ಅಕ್ಷ. “ಹೆಣ್ಣು ಕತ್ತೆಗಳು.”
ಅಕ್ಷ. “ಶೆಕೆಲಿನ ನಾಲ್ಕನೇ ಒಂದು ಭಾಗ.” ಒಂದು ಶೆಕೆಲ್‌=11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ನನ್ನ ಜನ್ರನ್ನ ನಿಯಂತ್ರಣದಲ್ಲಿ ಇಡೋನು ಇವನೇ.”
ಅಕ್ಷ. “ನಿನ್ನ ಹೃದಯದಲ್ಲಿ ಇರೋದನ್ನೆಲ್ಲ.”