ತೀತನಿಗೆ ಬರೆದ ಪತ್ರ 1:1-16

  • ವಂದನೆ (1-4)

  • ತೀತ ಕ್ರೇತದಲ್ಲಿ ಹಿರಿಯರನ್ನ ನೇಮಿಸಬೇಕಿತ್ತು (5-9)

  • ದಂಗೆ ಏಳುವವ್ರನ್ನ ಖಂಡಿಸು (10-16)

1  ದೇವರ ಸೇವಕ ಮತ್ತು ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲ ಅನ್ನೋ ನಾನು ಈ ಪತ್ರ ಬರಿತಾ ಇದ್ದೀನಿ. ನನ್ನ ನಂಬಿಕೆ ಮತ್ತು ಅಪೊಸ್ತಲನಾಗಿ ನಾನು ಮಾಡೋ ಸೇವೆ ದೇವರು ಆರಿಸ್ಕೊಂಡವ್ರ ನಂಬಿಕೆಗೆ, ಸತ್ಯದ ಸರಿಯಾದ ಜ್ಞಾನಕ್ಕೆ ತಕ್ಕ ಹಾಗೆ ಇದೆ. ಈ ಸತ್ಯದಿಂದ ದೇವರ ಭಕ್ತಿ ತೋರಿಸೋದು ಹೇಗಂತ ಗೊತ್ತಾಗುತ್ತೆ. 2  ಇದೆಲ್ಲ ಶಾಶ್ವತ ಜೀವನದ+ ನಿರೀಕ್ಷೆ ಮೇಲೆ ಹೊಂದಿಕೊಂಡಿದೆ. ಸುಳ್ಳು ಹೇಳೋಕೆ ಸಾಧ್ಯಾನೇ ಇಲ್ಲದ ದೇವರು+ ಎಷ್ಟೋ ವರ್ಷಗಳ ಮುಂಚೆನೇ ಅಂಥ ಜೀವನ ಕೊಡ್ತೀನಿ ಅಂತ ಮಾತುಕೊಟ್ಟನು. 3  ನಮ್ಮ ರಕ್ಷಕನಾದ ದೇವರು ಸಾರೋ ಕೆಲಸದ ಮೂಲಕ ಸರಿಯಾದ ಸಮಯಕ್ಕೆ ತನ್ನ ಮಾತುಗಳನ್ನ ಹೇಳಿದನು. ಆತನ ಆಜ್ಞೆ ಪ್ರಕಾರನೇ ನಾನು ಸಾರೋಕೆ ನೇಮಕ ಪಡೆದಿದ್ದೀನಿ.+ 4  ತೀತ, ನೀನು ನನಗೆ ಸ್ವಂತ ಮಗನ ತರ. ತಂದೆಯಾದ ದೇವರು ಮತ್ತು ನಮ್ಮ ರಕ್ಷಕ ಕ್ರಿಸ್ತ ಯೇಸು ನಿನಗೆ ಅಪಾರ ಕೃಪೆ, ಕರುಣೆ ತೋರಿಸ್ಲಿ, ಶಾಂತಿ ಕೊಡ್ಲಿ. 5  ನೀನು ತಪ್ಪಾದ ವಿಷ್ಯಗಳನ್ನ* ಸರಿ ಮಾಡಬೇಕು, ಪ್ರತಿಯೊಂದು ಪಟ್ಟಣದಲ್ಲಿ ಹಿರಿಯರನ್ನ ನೇಮಿಸಬೇಕು ಅಂತ ನಾನು ನಿನ್ನನ್ನ ಕ್ರೇತದಲ್ಲಿ ಬಿಟ್ಟು ಬಂದೆ. ಹಾಗೆ ನೇಮಿಸುವಾಗ ನಾನು ಕೊಟ್ಟ ಈ ನಿರ್ದೇಶನ ಪಾಲಿಸು: 6  ಸಭೆಯ ಹಿರಿಯನಾಗುವವನ ಮೇಲೆ ಯಾವ ಆರೋಪನೂ ಇರಬಾರದು. ಅವನಿಗೆ ಒಬ್ಬಳೇ ಹೆಂಡತಿ ಇರಬೇಕು. ಅವನ ಮಕ್ಕಳು ಕ್ರೈಸ್ತರಾಗಿರಬೇಕು.* ಆ ಮಕ್ಕಳಿಗೆ ಕೆಟ್ಟ ಚಟ ಇರುವವರು,* ದಂಗೆಕೋರರು ಅನ್ನೋ ಹೆಸ್ರು ಇರಬಾರದು.+ 7  ಮೇಲ್ವಿಚಾರಕ ದೇವರ ಸೇವಕನಾಗಿ* ಇರೋದ್ರಿಂದ ಅವನ ಮೇಲೆ ಯಾವ ಆರೋಪನೂ ಇರಬಾರದು, ಹಠಮಾರಿ,+ ಮುಂಗೋಪಿ,+ ಕುಡುಕ, ಹೊಡ್ಯೋ ವ್ಯಕ್ತಿ ಆಗಿರಬಾರದು. ಹಣದಾಸೆ ಇರಬಾರದು, ಸ್ವಂತ ಲಾಭ ನೋಡಬಾರದು, 8  ಅತಿಥಿಗಳನ್ನ ಸತ್ಕರಿಸೋ,+ ಒಳ್ಳೇದು ಮಾಡೋಕೆ ಇಷ್ಟಪಡೋ, ತಿಳುವಳಿಕೆಯಿಂದ ನಡ್ಕೊಳ್ಳೋ,*+ ನೀತಿವಂತ, ನಿಷ್ಠಾವಂತ,+ ತನ್ನನ್ನ ತಾನೇ ನಿಯಂತ್ರಿಸಿಕೊಳ್ಳೋ ವ್ಯಕ್ತಿ ಅವನಾಗಿರಬೇಕು.+ 9  ಅವನು ಜಾಣ್ಮೆಯಿಂದ ಕಲಿಸುವಾಗ ಭರವಸೆಗೆ ಯೋಗ್ಯವಾದ ದೇವರ ಮಾತನ್ನ ಚಾಚೂತಪ್ಪದೆ ಪಾಲಿಸಬೇಕು.+ ಆಗ ಒಳ್ಳೇ* ಬೋಧನೆ+ ಜೊತೆ ಬೇರೆಯವ್ರನ್ನ ಪ್ರೋತ್ಸಾಹಿಸೋಕೆ* ಮತ್ತು ಆ ಬೋಧನೆಯ ವಿರುದ್ಧ ಮಾತಾಡುವವ್ರನ್ನ ತಿದ್ದೋಕೆ+ ಆಗುತ್ತೆ. 10  ದಂಗೆ ಏಳೋ, ಸುಮ್ನೆ ವಟವಟ ಅಂತ ಮಾತಾಡೋ, ಮೋಸ ಮಾಡೋ, ಸುನ್ನತಿ ಆಗ್ಲೇಬೇಕು ಅಂತ ಹಠಹಿಡ್ಯೋ ಜನ ತುಂಬ ಇದ್ದಾರೆ.+ 11  ಅವರು ಮೋಸ ಮಾಡಿ ಲಾಭ ಪಡಿಯೋಕೆ ಕಲಿಸಬಾರದ ವಿಷ್ಯಗಳನ್ನ ಕಲಿಸಿ ಎಷ್ಟೋ ಕುಟುಂಬಗಳ ನಂಬಿಕೆಯನ್ನೇ ಹಾಳು ಮಾಡ್ತಿದ್ದಾರೆ. ಹಾಗಾಗಿ ಅವ್ರ ಬಾಯಿ ಮುಚ್ಚಿಸ್ಲೇಬೇಕು. 12  “ಕ್ರೇತದ ಜನ ಸುಳ್ಳುಬುರುಕರು, ಕಾಡುಪ್ರಾಣಿಗಳ ತರ ಕ್ರೂರಿಗಳು, ಸೋಮಾರಿಗಳಾದ ಹೊಟ್ಟೆಬಾಕರು” ಅಂತ ಅವರ ಒಬ್ಬ ಪ್ರವಾದಿನೇ ಹೇಳಿದ್ದಾನೆ. 13  ಈ ಸಾಕ್ಷಿ ಸತ್ಯ. ಹಾಗಾಗಿ ಅವ್ರನ್ನ ಗಂಭೀರವಾಗಿ ತಿದ್ದು. ಆಗ ಅವ್ರ ನಂಬಿಕೆ ದೃಢವಾಗುತ್ತೆ. 14  ಆಗ ಅವರು ಯೆಹೂದಿ ಕಟ್ಟುಕಥೆಗಳಿಗೆ, ಸತ್ಯ ಬಿಟ್ಟುಹೋದವ್ರ ಆಜ್ಞೆಗಳಿಗೆ ಗಮನಕೊಡಲ್ಲ. 15  ಶುದ್ಧ ಜನ್ರಿಗೆ ಎಲ್ಲನೂ ಶುದ್ಧ.+ ಆದ್ರೆ ಕೊಳಕಾದವ್ರಿಗೆ, ನಂಬಿಕೆ ಇಲ್ಲದವ್ರಿಗೆ ಯಾವುದೂ ಶುದ್ಧವಲ್ಲ. ಯಾಕಂದ್ರೆ ಅವ್ರ ಮನಸ್ಸು, ಮನಸ್ಸಾಕ್ಷಿ ಎರಡೂ ಕೊಳಕಾಗಿದೆ.+ 16  ದೇವರ ಬಗ್ಗೆ ನಮಗೆ ಗೊತ್ತು ಅಂತ ಅವರು ಎಲ್ರ ಮುಂದೆ ಹೇಳ್ಕೊಳ್ತಾರೆ, ಆದ್ರೆ ಅವರು ಮಾಡೋ ಕೆಲಸ ದೇವರನ್ನ ಬಿಟ್ಟುಬಿಟ್ಟಿದ್ದಾರೆ ಅಂತ ತೋರಿಸುತ್ತೆ.+ ಯಾಕಂದ್ರೆ ಅವರು ಹೊಲಸು ಜನ್ರು, ಮಾತು ಕೇಳದವರು, ಯಾವ ಒಳ್ಳೇ ಕೆಲಸಕ್ಕೂ ಯೋಗ್ಯತೆ ಇಲ್ಲದವರು ಆಗಿದ್ದಾರೆ.

ಪಾದಟಿಪ್ಪಣಿ

ಅಥವಾ “ಕೊರತೆಯನ್ನ.”
ಅಕ್ಷ. “ವಿಶ್ವಾಸಿಗಳಾಗಿರಬೇಕು.”
ಅಥವಾ “ಒರಟು ವ್ಯಕ್ತಿ.”
ಗ್ರೀಕ್‌ ಭಾಷೆಯಲ್ಲಿ ಈ ಪದ ಮನೆಯ ಎಲ್ಲ ಕೆಲಸಗಳನ್ನ ನೋಡ್ಕೊಳ್ಳೋ ಸೇವಕನಿಗೆ ಸೂಚಿಸುತ್ತೆ.
ಅಥವಾ “ಒಳ್ಳೇ ನಿರ್ಧಾರ ತಗೊಳ್ಳೋ; ಬುದ್ಧಿ ಇರೋ.”
ಅಥವಾ “ಪ್ರಯೋಜನಕರ.”
ಅಥವಾ “ಬುದ್ಧಿ ಹೇಳೋಕೆ.”