ಜ್ಞಾನೋಕ್ತಿ 1:1-33
1 ದಾವೀದನ ಮಗ+ ಇಸ್ರಾಯೇಲಿನ ರಾಜ+ ಆದ ಸೊಲೊಮೋನನ ನಾಣ್ಣುಡಿಗಳು.+
2 ಇದ್ರಿಂದ ವ್ಯಕ್ತಿಯೊಬ್ಬ ವಿವೇಕ ಪಡಿತಾನೆ,+ ಶಿಸ್ತನ್ನ ಸ್ವೀಕರಿಸ್ತಾನೆ,ಬುದ್ಧಿ ಮಾತನ್ನ ಅರ್ಥ ಮಾಡ್ಕೊಳ್ತಾನೆ.
3 ತಿಳುವಳಿಕೆ ಕೊಡೋ ಶಿಸ್ತನ್ನ ಪಡ್ಕೊಳ್ತಾನೆ,+ಆ ಶಿಸ್ತು ಅವನಿಗೆ ನ್ಯಾಯನೀತಿಯಿಂದ ನಡಿಯೋಕೆ,+ ಪ್ರಾಮಾಣಿಕವಾಗಿ ಇರೋಕೆ ಸಹಾಯ ಮಾಡುತ್ತೆ.
4 ಈ ಗಾದೆಗಳು ಅನುಭವ ಇಲ್ಲದವ್ರನ್ನ ಜಾಣರಾಗಿ ಮಾಡುತ್ತೆ,+ಯುವ ಜನ್ರಿಗೆ ಜ್ಞಾನ, ಬುದ್ಧಿ ಕೊಡುತ್ತೆ.+
5 ಹೇಳೋ ಮಾತನ್ನ ಬುದ್ಧಿವಂತ ಕೇಳಿ ಕಲಿತಾನೆ,+ಅರ್ಥ ಮಾಡ್ಕೊಳ್ಳೋ ವ್ಯಕ್ತಿ ಸರಿಯಾದ* ಮಾರ್ಗದರ್ಶನ ಪಡಿತಾನೆ.+
6 ಅಂಥ ವ್ಯಕ್ತಿ ನಾಣ್ಣುಡಿ, ಗಾದೆ ಮಾತು,*ಬುದ್ಧಿವಂತರು ಹೇಳೋ ಮಾತುಗಳನ್ನ ಅರ್ಥ ಮಾಡ್ಕೊಳ್ತಾನೆ, ಅವ್ರ ಒಗಟುಗಳನ್ನ ಬಿಡಿಸ್ತಾನೆ.+
7 ಯೆಹೋವನ ಭಯನೇ* ಜ್ಞಾನದ ಆರಂಭ.+
ಮೂರ್ಖರು ವಿವೇಕ, ಶಿಸ್ತನ್ನ ಕೀಳಾಗಿ ನೋಡ್ತಾರೆ.+
8 ನನ್ನ ಮಗನೇ, ಅಪ್ಪ ಕೊಡೋ ತರಬೇತಿಯನ್ನ ತಗೋ,+ಅಮ್ಮ ಕಲಿಸುವಾಗ* ಕೇಳಿಸ್ಕೊ.+
9 ಅವ್ರ ಮಾತು ನಿನ್ನ ತಲೆಗೆ ಸುಂದರವಾದ ಹೂವಿನ ಕಿರೀಟ.+
ನಿನ್ನ ಕೊರಳಿಗೆ ಅಂದವಾದ ಆಭರಣ.+
10 ನನ್ನ ಮಗನೇ, ಪಾಪಿಗಳ ಮೋಡಿಗೆ ಮರುಳಾಗಬೇಡ.+
11 ಅವರು ನಿನಗೆ “ನಮ್ಮ ಜೊತೆ ಬಾ.
ಕೊಲೆ ಮಾಡೋಕೆ ಹೊಂಚು ಹಾಕೋಣ,ಅಡಗಿಕೊಂಡು, ಮೋಜಿಗಾಗಿ ಮುಗ್ಧ ಜನ್ರ ಮೇಲೆ ದಾಳಿ ಮಾಡೋಣ.
12 ಸಮಾಧಿ* ತರ ನಾವು ಅವ್ರನ್ನ ಜೀವಂತವಾಗಿ ನುಂಗಿ ಹಾಕೋಣ,ಗುಂಡಿಗೆ ಹೋಗುವವ್ರ ತರ ಅವ್ರನ್ನ ಪೂರ್ತಿಯಾಗಿ ನುಂಗಿ ಬಿಡೋಣ.
13 ಅವ್ರ ಹಣ-ಆಸ್ತಿಯನ್ನೆಲ್ಲ ದೋಚೋಣ,ಲೂಟಿ ಮಾಡಿ ನಮ್ಮ ಮನೆಗಳನ್ನ ತುಂಬಿಸೋಣ.
14 ನಮ್ಮ ಜೊತೆ ಸೇರಿಕೊ,ಕದ್ದ ವಸ್ತುಗಳನ್ನ ಸಮವಾಗಿ ಹಂಚ್ಕೊಳ್ಳೋಣ” ಅಂತ ಹೇಳಿದ್ರೆ,
15 ನನ್ನ ಮಗನೇ, ಅವ್ರ ಹಿಂದೆ ಹೋಗಬೇಡ.
ಅವ್ರ ದಾರಿಯಿಂದ ನೀನು ದೂರ ಇರು.+
16 ಯಾಕಂದ್ರೆ ಅವ್ರ ಕಾಲುಗಳು ಕೆಟ್ಟ ವಿಷ್ಯಗಳನ್ನ ಮಾಡೋಕೆ ಓಡುತ್ತೆ.
ಅವರು ಕೊಲೆ ಮಾಡೋಕೆ ಕಾಯ್ತಾ ಇದ್ದಾರೆ.+
17 ಪಕ್ಷಿಯ ಕಣ್ಮುಂದೆನೇ ಬಲೆ ಬೀಸಿದ್ರೆ ಏನೂ ಪ್ರಯೋಜನ ಇಲ್ಲ.
18 ಪಾಪಿಗಳು ರಕ್ತ ಸುರಿಸೋಕೆ ಸಂಚು ಮಾಡ್ತಾರೆ,ಬೇರೆಯವ್ರ ಪ್ರಾಣ ತೆಗಿಯೋಕೆ ಬಚ್ಚಿಟ್ಕೊಳ್ತಾರೆ.
19 ಅನ್ಯಾಯದಿಂದ ಲಾಭ ಮಾಡೋಕೆ ಈ ಎಲ್ಲ ದಾರಿ ಹಿಡಿತಾರೆ,ಇದೇ ಅವ್ರ ಪ್ರಾಣಕ್ಕೆ ಅಪಾಯ ಆಗುತ್ತೆ.+
20 ನಿಜವಾದ ವಿವೇಕ+ ಬೀದಿಗಳಲ್ಲಿ ಕೂಗಿ ಹೇಳುತ್ತೆ+ಅದು ಪಟ್ಟಣದ ಮುಖ್ಯಸ್ಥಳದಲ್ಲಿ* ಜಾಸ್ತಿ ಕೂಗುತ್ತೆ.+
21 ಜನಜಂಗುಳಿ ಇರೋ ಬೀದಿಗಳ ಮೂಲೆಗಳಲ್ಲಿ ಕೂಗಿ ಹೇಳುತ್ತೆ.
ಪಟ್ಟಣದ ಬಾಗಿಲುಗಳಲ್ಲಿ ಹೀಗೆ ಹೇಳುತ್ತೆ:+
22 “ಅನುಭವ ಇಲ್ಲದವ್ರೇ, ಇನ್ನೂ ಎಷ್ಟರ ತನಕ ಮೂರ್ಖತನವನ್ನ ಪ್ರೀತಿಸ್ತೀರ?
ಗೇಲಿ ಮಾಡುವವರೇ, ಇನ್ನೂ ಎಲ್ಲಿ ತನಕ ಬೇರೆಯವ್ರನ್ನ ಗೇಲಿ ಮಾಡ್ತಾ ಖುಷಿಪಡ್ತೀರ?
ಮೂರ್ಖರೇ, ಎಲ್ಲಿ ತನಕ ಜ್ಞಾನವನ್ನ ದ್ವೇಷಿಸ್ತೀರ?+
23 ನಾನು ತಿದ್ದುವಾಗ ಗಮನಕೊಡಿ, ಬದಲಾಗಿ.+
ಆಗ ನಾನು ನಿಮಗೆ ವಿವೇಕ* ಕೊಡ್ತೀನಿ,ನನ್ನ ಮಾತುಗಳನ್ನ ಹೇಳ್ತೀನಿ.+
24 ನಾನು ನಿಮ್ಮನ್ನ ಕರೆದೆ, ಆದ್ರೆ ನೀವು ಕಿವಿಗೇ ಹಾಕೊಳ್ತಿಲ್ಲ,ನನ್ನ ಕೈ ಚಾಚಿದೆ, ಆದ್ರೆ ಯಾರೂ ಗಮನಿಸೇ ಇಲ್ಲ.+
25 ನನ್ನ ಸಲಹೆಗಳನ್ನೆಲ್ಲ ಕೇಳಿನೂ ಕೇಳದ ಹಾಗೇ ಇದ್ದೀರ,ನಾನು ತಿದ್ದಿದಾಗೆಲ್ಲ ತಿರಸ್ಕಾರ ಮಾಡ್ತಾನೇ ಇದ್ದೀರ.
26 ನಿಮ್ಮ ಮೇಲೆ ಕಷ್ಟ ಬಂದಾಗ ನಾನು ಸಹ ನಗ್ತೀನಿ,ನೀವು ಭಯಪಡೋ ವಿಷ್ಯಗಳು ನಡೆದಾಗ ಗೇಲಿ ಮಾಡ್ತೀನಿ,+
27 ನೀವು ಹೆದರೋ ವಿಷ್ಯ ನಿಮ್ಮ ಕಡೆಗೆ ಚಂಡಮಾರುತದ ತರ ಬರುವಾಗ,ಕಷ್ಟಗಳು ಸುಂಟರಗಾಳಿ ತರ ಸುತ್ಕೊಂಡಾಗ,ನಿಮಗೆ ನೋವು, ತೊಂದ್ರೆ ಆದಾಗ ನಾನು ನಗ್ತೀನಿ.
28 ಆಗ ಅವರು ನನ್ನನ್ನ ಕರಿತಾನೇ ಇರ್ತಾರೆ, ಆದ್ರೆ ನಾನು ಕೇಳಿಸ್ಕೊಳ್ಳಲ್ಲ.
ಅವರು ನನ್ನನ್ನ ಎಲ್ಲ ಕಡೆ ಹುಡುಕ್ತಾರೆ, ನಾನು ಅವ್ರಿಗೆ ಸಿಗಲ್ಲ.+
29 ಯಾಕಂದ್ರೆ ಅವರು ಜ್ಞಾನವನ್ನ ದ್ವೇಷಿಸಿದ್ರು,+ಯೆಹೋವನಿಗೆ ಭಯಪಡಲಿಲ್ಲ.+
30 ಅವರು ನನ್ನ ಸಲಹೆಯನ್ನ ತಳ್ಳಿಬಿಟ್ರು,ನಾನು ಎಷ್ಟೇ ತಿದ್ದುಪಾಟು ಕೊಟ್ರೂ ಗೌರವ ಕೊಡಲಿಲ್ಲ.
31 ಹಾಗಾಗಿ ಅವ್ರಿಗೆ ತಮ್ಮ ಕೆಲಸಗಳಿಗೆ ತಕ್ಕ ಪ್ರತಿಫಲ ಸಿಗುತ್ತೆ,+ಅವರು ಸಂಚು ಮಾಡಿದಕ್ಕೆ ಅವ್ರೇ ಅನುಭವಿಸ್ತಾರೆ.
32 ಅನುಭವ ಇಲ್ಲದವರು ಹಟ ಮಾಡಿದ್ರೆ ಅವ್ರ ಜೀವ ಹೋಗುತ್ತೆ,ಮೂರ್ಖರ ಉಡಾಫೆ ಅವ್ರಿಗೆ ಉರ್ಲು.
33 ಆದ್ರೆ ನನ್ನ ಮಾತು ಕೇಳಿದವನು ಸುರಕ್ಷಿತವಾಗಿ ಇರ್ತಾನೆ,+ಯಾವುದೇ ಆತಂಕ ಇಲ್ಲದೆ ಆರಾಮಾಗಿ ಇರ್ತಾನೆ.”+
ಪಾದಟಿಪ್ಪಣಿ
^ ಅಥವಾ “ವಿವೇಕಿಗಳ.”
^ ಅಥವಾ “ಕತೆ.”
^ ಅಥವಾ “ಭಯಭಕ್ತಿನೇ.”
^ ಅಥವಾ “ಅಮ್ಮ ಕೊಡೋ ನಿಯಮವನ್ನ.”
^ ಅಕ್ಷ. “ನನ್ನ ಪವಿತ್ರಶಕ್ತಿ.” ಇಲ್ಲಿ ಬಹುಶಃ ದೇವರ ಪವಿತ್ರಶಕ್ತಿ ಕೊಡೋ ವಿವೇಕದ ಬಗ್ಗೆ ಹೇಳ್ತಿರಬಹುದು.