ಥೆಸಲೋನಿಕದವರಿಗೆ ಬರೆದ ಮೊದಲನೇ ಪತ್ರ 5:1-28

  • ಯೆಹೋವನ ದಿನ ಬರುತ್ತೆ (1-5)

    • “ಶಾಂತಿ ಇದೆ, ಸುರಕ್ಷಿತವಾಗಿ ಇದ್ದೀವಿ” (3)

  • ಎಚ್ಚರವಾಗಿರೋಣ, ಬುದ್ಧಿ ಉಪಯೋಗಿಸಿ ನಡಿಯೋಣ (6-11)

  • ಪ್ರೋತ್ಸಾಹ (12-24)

  • ಕೊನೆಯಲ್ಲಿ ವಂದನೆ (25-28)

5  ಸಹೋದರರೇ, ಈ ವಿಷ್ಯ ಯಾವಾಗ, ಯಾವ ಕಾಲದಲ್ಲಿ ನಡಿಯುತ್ತೆ ಅನ್ನೋದ್ರ ಬಗ್ಗೆ ನಿಮಗೆ ಏನೂ ಬರಿಬೇಕಾಗಿಲ್ಲ. 2  ಯಾಕಂದ್ರೆ ಯೆಹೋವನ* ದಿನ+ ರಾತ್ರಿಯಲ್ಲಿ ಕಳ್ಳ ಬರೋ ತರ+ ಬರುತ್ತೆ ಅಂತ ನಿಮಗೆ ಚೆನ್ನಾಗಿ ಗೊತ್ತು. 3  ಜನ್ರು “ಶಾಂತಿ ಇದೆ, ಸುರಕ್ಷಿತವಾಗಿ ಇದ್ದೀವಿ” ಅಂತ ಹೇಳುವಾಗ್ಲೇ ಅವ್ರಿಗೆ ನಾಶ ದಿಢೀರಂತ ಬರುತ್ತೆ.+ ಗರ್ಭಿಣಿಗೆ ಹೆರಿಗೆ ನೋವು ಇದ್ದಕ್ಕಿದ್ದ ಹಾಗೆ ಬರೋ ತರ ಅದು ಬರುತ್ತೆ. ಅವರು ತಪ್ಪಿಸ್ಕೊಳ್ಳೋಕೆ ಆಗೋದೇ ಇಲ್ಲ. 4  ಆದ್ರೆ ಸಹೋದರರೇ, ಆ ದಿನ ಪಟ್ಟಂತ ನಿಮ್ಮ ಮೇಲೆ ಬರೋಕೆ ನೀವೇನು ಕಳ್ಳರ ತರ ಕತ್ತಲಲ್ಲಿ ಇಲ್ಲ. 5  ನೀವೆಲ್ಲ ಬೆಳಕಿನ ಮಕ್ಕಳು, ಹಗಲಿನ ಮಕ್ಕಳು.+ ನಾವು ರಾತ್ರಿಗೋ ಕತ್ತಲೆಗೋ ಸೇರಿದವ್ರಲ್ಲ.+ 6  ಹಾಗಾಗಿ ನಾವು ಬೇರೆಯವ್ರ ತರ ನಿದ್ದೆ ಮಾಡೋದು ಬೇಡ,+ ಎಚ್ಚರವಾಗಿ ಇರೋಣ,+ ಬುದ್ಧಿ ಉಪಯೋಗಿಸಿ ನಡಿಯೋಣ.+ 7  ನಿದ್ದೆ ಮಾಡುವವರು ರಾತ್ರಿ ನಿದ್ದೆ ಮಾಡ್ತಾರೆ, ಕುಡಿದ ಅಮಲಲ್ಲಿ ಇರುವವರು ರಾತ್ರಿ ಮತ್ತಲ್ಲಿ ಇರ್ತಾರೆ.+ 8  ಆದ್ರೆ ಹಗಲಲ್ಲಿ ಇರೋ ನಾವು ಬುದ್ಧಿ ಉಪಯೋಗಿಸಿ ನಡಿಯೋಣ. ನಂಬಿಕೆ ಪ್ರೀತಿಯನ್ನ ಎದೆಕವಚದ ತರ, ರಕ್ಷಣೆಯ ನಿರೀಕ್ಷೆಯನ್ನ ಶಿರಸ್ತ್ರಾಣದ ತರ ಹಾಕೊಳ್ಳೋಣ.+ 9  ಯಾಕಂದ್ರೆ ನಾವು ಶಿಕ್ಷೆ ಅನುಭವಿಸಬಾರದು, ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ರಕ್ಷಣೆ ಪಡಿಬೇಕು+ ಅನ್ನೋದೇ ದೇವರ ಇಷ್ಟ. 10  ಯೇಸು ನಮಗೋಸ್ಕರ ಜೀವ ಕೊಟ್ಟನು.+ ಯಾಕಂದ್ರೆ ನಾವು ಬದುಕಿದ್ರೂ ಸತ್ರೂ ಯೇಸು ಜೊತೆ ನಾವು ಜೀವಿಸಬೇಕು ಅನ್ನೋದು ಆತನ ಇಷ್ಟ.+ 11  ಹಾಗಾಗಿ ನೀವು ಈಗಾಗ್ಲೇ ಮಾಡ್ತಿರೋ ಹಾಗೆ ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾ,* ಬಲಪಡಿಸ್ತಾ ಇರಿ.+ 12  ಸಹೋದರರೇ, ನಾವು ನಿಮ್ಮನ್ನ ಕೇಳ್ಕೊಳ್ಳೋದು ಏನಂದ್ರೆ, ನಿಮ್ಮ ಮಧ್ಯ ಶ್ರಮಪಟ್ಟು ಕೆಲಸಮಾಡ್ತಾ, ಒಡೆಯನ ಸೇವೆಯಲ್ಲಿ ನಿಮ್ಮ ಮೇಲ್ವಿಚಾರಣೆ ಮಾಡ್ತಾ ನಿಮಗೆ ಬುದ್ಧಿಹೇಳುವವ್ರಿಗೆ ಗೌರವ ಕೊಡಿ. 13  ಅವರು ಮಾಡೋ ಕೆಲಸಕ್ಕಾಗಿ ಅವ್ರಿಗೆ ಪ್ರೀತಿಯಿಂದ ವಿಶೇಷ ಗೌರವ ಕೊಡಿ.+ ಒಬ್ರಿಗೊಬ್ರು ಶಾಂತಿಯಿಂದ ಇರಿ.+ 14  ಅಷ್ಟೇ ಅಲ್ಲ ಸಹೋದರರೇ, ಮಾತು ಕೇಳದವ್ರಿಗೆ* ಎಚ್ಚರಿಕೆ ಕೊಡಿ.*+ ಮನನೊಂದವ್ರಿಗೆ* ಸಂತೈಸೋ ತರ ಮಾತಾಡಿ, ಬಲ ಇಲ್ಲದವ್ರಿಗೆ ಆಧಾರವಾಗಿರಿ, ಎಲ್ರ ಜೊತೆನೂ ತಾಳ್ಮೆಯಿಂದ ಇರಿ+ ಅಂತ ನಿಮ್ಮನ್ನ ಪ್ರೋತ್ಸಾಹಿಸ್ತೀವಿ. 15  ಜಾಗ್ರತೆ! ನಿಮಗೆ ಯಾರಾದ್ರೂ ನೋವು ಮಾಡಿದ್ರೆ ನೀವೂ ಅವ್ರಿಗೆ ನೋವು ಮಾಡಬೇಡಿ.+ ಸಹೋದರರಿಗೂ, ಬೇರೆಯವ್ರಿಗೂ ಯಾವಾಗ್ಲೂ ಒಳ್ಳೇದನ್ನೇ ಮಾಡಿ.+ 16  ಯಾವಾಗ್ಲೂ ಖುಷಿಯಾಗಿರಿ.+ 17  ಯಾವಾಗ್ಲೂ ಪ್ರಾರ್ಥನೆ ಮಾಡಿ.+ 18  ಎಲ್ಲದಕ್ಕೂ ಧನ್ಯವಾದ ಹೇಳಿ.+ ಕ್ರಿಸ್ತ ಯೇಸುವಿನ ಶಿಷ್ಯರಾದ ನೀವು ಹೀಗೆ ಮಾಡಬೇಕು ಅನ್ನೋದೇ ದೇವರ ಇಷ್ಟ. 19  ಪವಿತ್ರಶಕ್ತಿ ಬೆಂಕಿ ತರ ನಿಮ್ಮಲ್ಲಿ ನಡಿಸೋ ಕೆಲಸಗಳನ್ನ ತಡಿಬೇಡಿ.+ 20  ಭವಿಷ್ಯವಾಣಿಗಳನ್ನ ತಳ್ಳಿಹಾಕಬೇಡಿ.+ 21  ಎಲ್ಲವನ್ನ ಪರೀಕ್ಷಿಸಿ+ ಯಾವುದು ಒಳ್ಳೇದು ಅಂತ ಚೆನ್ನಾಗಿ ತಿಳ್ಕೊಳ್ಳಿ, ಅದನ್ನೇ ಯಾವಾಗ್ಲೂ ಮಾಡಿ. 22  ಯಾವುದೇ ಕೆಟ್ಟ ಕೆಲಸ ಮಾಡಬೇಡಿ.+ 23  ಶಾಂತಿಯ ದೇವರು ನಿಮ್ಮನ್ನ ಪೂರ್ತಿಯಾಗಿ ಪವಿತ್ರ ಮಾಡ್ಲಿ. ಸಹೋದರರೇ, ನಮ್ಮ ಪ್ರಭು ಯೇಸು ಕ್ರಿಸ್ತನ ಸಾನಿಧ್ಯದ ಸಮಯದಲ್ಲಿ ನಿಮ್ಮ ಮನೋಭಾವ, ಹೃದಯ, ದೇಹ ಯಾವ ರೀತಿಯಲ್ಲೂ ತಪ್ಪಿಲ್ದೇ ಇರಲಿ.+ 24  ನಿಮ್ಮನ್ನ ಆರಿಸ್ಕೊಂಡವನು ನಂಬಿಗಸ್ತ, ಆತನು ಇದನ್ನ ಮಾಡೇ ಮಾಡ್ತಾನೆ. 25  ಸಹೋದರರೇ, ನಮಗೋಸ್ಕರ ಯಾವಾಗ್ಲೂ ಪ್ರಾರ್ಥನೆ ಮಾಡಿ.+ 26  ಎಲ್ರಿಗೆ ಪವಿತ್ರ ಮುತ್ತು ಕೊಟ್ಟು ವಂದಿಸಿ. 27  ಈ ಪತ್ರವನ್ನ ಎಲ್ಲ ಸಹೋದರರಿಗೆ ಓದಿ ಹೇಳಿ ಅಂತ ಒಡೆಯನ ಹೆಸ್ರಲ್ಲಿ ಕೇಳ್ಕೊಳ್ತೀನಿ.+ 28  ನಮ್ಮ ಪ್ರಭು ಯೇಸು ಕ್ರಿಸ್ತ ನಿಮಗೆ ಅಪಾರ ಕೃಪೆ ತೋರಿಸ್ಲಿ.

ಪಾದಟಿಪ್ಪಣಿ

ಅಥವಾ “ಸಂತೈಸ್ತಾ.”
ಅಕ್ಷ. “ರೂಢಿ ತಪ್ಪಿದವ್ರಿಗೆ.”
ಅಥವಾ “ಬುದ್ಧಿ ಹೇಳಿ ಸರಿದಾರಿಗೆ ತನ್ನಿ.”
ಅಥವಾ “ಕುಗ್ಗಿ ಹೋದವ್ರಿಗೆ.”