ಎರಡನೇ ಸಮುವೇಲ 12:1-31

  • ನಾತಾನ ದಾವೀದನನ್ನ ತಿದ್ದಿದ (1-15ಎ)

  • ಬತ್ಷೆಬೆಯ ಮಗ ತೀರಿಹೋದ (15ಬಿ-23)

  • ಬತ್ಷೆಬೆಗೆ ಸೊಲೊಮೋನ ಹುಟ್ಟಿದ (24, 25)

  • ಅಮ್ಮೋನ್ಯರ ಪಟ್ಟಣವಾದ ರಬ್ಬಾವನ್ನ ವಶ ಮಾಡ್ಕೊಂಡ್ರು (26-31)

12  ಹಾಗಾಗಿ ಯೆಹೋವ ನಾತಾನನನ್ನ+ ದಾವೀದನ ಹತ್ರ ಕಳಿಸಿದ. ಅವನು ದಾವೀದನಿಗೆ+ “ಒಂದು ಪಟ್ಟಣದಲ್ಲಿ ಇಬ್ರು ಗಂಡಸ್ರು ಇದ್ರು. ಒಬ್ಬ ಶ್ರೀಮಂತ, ಇನ್ನೊಬ್ಬ ಬಡವ.  ಶ್ರೀಮಂತನ ಹತ್ರ ತುಂಬ ದನಕುರಿ ಇತ್ತು.+  ಆದ್ರೆ ಬಡವನ ಹತ್ರ ಅವನು ತಗೊಂಡಿದ್ದ+ ಒಂದೇ ಒಂದು ಹೆಣ್ಣು ಕುರಿಮರಿ ಬಿಟ್ರೆ ಬೇರೇನೂ ಇರಲಿಲ್ಲ. ಅವನು ಅದ್ರ ಆರೈಕೆ ಮಾಡ್ತಿದ್ದ, ಅವನ ಮನೇಲಿ ಅವನ ಮಕ್ಕಳ ಜೊತೆ ಅದು ಬೆಳಿತು. ಅವನ ಹತ್ರ ಇದ್ದ ಅಲ್ಪಸ್ವಲ್ಪ ಆಹಾರವನ್ನೇ ತಿಂತಾ, ಅವನ ಲೋಟದಲ್ಲೇ ಕುಡಿತಾ, ಅವನ ತೋಳಲ್ಲಿ ಮಲಗ್ತಿತ್ತು. ಅದು ಅವನಿಗೆ ಸ್ವಂತ ಮಗಳ ತರ ಇತ್ತು.  ಒಂದಿನ ಶ್ರೀಮಂತನನ್ನ ನೋಡೋಕೆ ಒಬ್ಬ ವ್ಯಕ್ತಿ ಬಂದ. ಆಗ ಆ ಶ್ರೀಮಂತ ಬಂದ ಅತಿಥಿಗಾಗಿ ಅಡುಗೆ ಮಾಡೋಕೆ ತನ್ನ ಸ್ವಂತ ದನಕುರಿಗಳಿಂದ ಯಾವುದನ್ನೂ ತಗೊಳ್ಳಲಿಲ್ಲ. ಆ ಬಡವನ ಕುರಿಮರಿಯನ್ನ ತಗೊಂಡು ಕಡಿದು ತನ್ನ ಅತಿಥಿಗಾಗಿ ಅಡುಗೆ ಮಾಡಿ ಕೊಟ್ಟ”+ ಅಂದ.  ಅದಕ್ಕೆ ದಾವೀದನಿಗೆ ಆ ಶ್ರೀಮಂತನ ಮೇಲೆ ತುಂಬ ಕೋಪ ಬಂತು. ಅವನು ನಾತಾನನಿಗೆ “ಜೀವ ಇರೋ ಯೆಹೋವನ ಆಣೆ,+ ಹಾಗೆ ಮಾಡಿದವನು ಸಾಯ್ಲೇಬೇಕು!  ಅವನು ಮಾಡಿದ್ದಕ್ಕೆ, ಕನಿಕರ ತೋರಿಸದೇ ಇದ್ದದ್ದಕ್ಕೆ ಆ ಒಂದು ಕುರಿಮರಿಗೆ ಬದಲಿಯಾಗಿ ನಾಲ್ಕು ಕುರಿಮರಿ ಕೊಡಬೇಕು”+ ಅಂದ.  ಆಗ ನಾತಾನ “ಆ ವ್ಯಕ್ತಿ ನೀನೇ! ಇಸ್ರಾಯೇಲ್‌ ದೇವರಾದ ಯೆಹೋವ ಹೀಗೆ ಹೇಳ್ತಾನೆ: ‘ನಾನೇ ನಿನ್ನನ್ನ ಇಸ್ರಾಯೇಲಿನ ಮೇಲೆ ರಾಜನಾಗಿ ಅಭಿಷೇಕಿಸಿದೆ.+ ನಾನೇ ನಿನ್ನನ್ನ ಸೌಲನ ಕೈಯಿಂದ ಬಿಡಿಸಿದೆ.+  ನಿನ್ನ ಒಡೆಯನ ಮನೆಯನ್ನ,+ ನಿನ್ನ ಒಡೆಯನ ಹೆಂಡತಿಯರನ್ನ+ ನಿನಗೆ ಕೊಟ್ಟೆ. ಇಸ್ರಾಯೇಲಿನ, ಯೆಹೂದದ ಮನೆಯನ್ನ ನಿನಗೆ ಕೊಟ್ಟೆ.+ ನಿನಗೋಸ್ಕರ ಇನ್ನೂ ಏನೇನೋ ಮಾಡಬೇಕಂತ ಇದ್ದೆ.+  ಆದ್ರೆ ನೀನು ಯೆಹೋವನಿಗೆ ಇಷ್ಟ ಇಲ್ಲದನ್ನೇ ಮಾಡಿ ಆತನ ಮಾತನ್ನ ಯಾಕೆ ಕೇಳಲಿಲ್ಲ? ಹಿತ್ತಿಯನಾದ ಊರೀಯನನ್ನ ಕತ್ತಿಯಿಂದ ಕೊಂದೆ!+ ಅವನು ಅಮ್ಮೋನಿಯರ ಕತ್ತಿಗೆ ಬಲಿ ಆಗೋ ಹಾಗೆ ಮಾಡಿ+ ಅವನ ಹೆಂಡತಿಯನ್ನ ನಿನ್ನ ಹೆಂಡತಿಯಾಗಿ ಮಾಡ್ಕೊಂಡೆ.+ 10  ಈಗ ಕತ್ತಿ ನಿನ್ನ ಮನೆ ಬಿಟ್ಟುಹೋಗಲ್ಲ.+ ಯಾಕಂದ್ರೆ ಹಿತ್ತಿಯನಾದ ಊರೀಯನ ಹೆಂಡತಿಯನ್ನ ನಿನ್ನ ಹೆಂಡತಿಯಾಗಿ ಮಾಡ್ಕೊಂಡು ನನ್ನ ನಿಯಮ ಮೀರಿದೆ.’ 11  ಯೆಹೋವ ಹೀಗೆ ಹೇಳ್ತಾನೆ: ‘ನಿನ್ನ ಮನೆಯಲ್ಲೇ ನಿನಗೆ ಕಷ್ಟ ತರ್ತಿನಿ.+ ನಿನ್ನ ಕಣ್ಮುಂದೆನೇ ನಿನ್ನ ಹೆಂಡತಿಯರನ್ನ ಇನ್ನೊಬ್ಬನಿಗೆ* ಕೊಡ್ತೀನಿ.+ ಹಾಡಹಗಲಲ್ಲೇ ಅವನು ನಿನ್ನ ಹೆಂಡತಿ ಜೊತೆ ಮಲಗ್ತಾನೆ.+ 12  ನೀನು ಗುಟ್ಟಾಗಿ ಮಾಡಿದೆ,+ ನಾನು ಇದನ್ನ ಹಾಡಹಗಲಲ್ಲೇ ಇಡೀ ಇಸ್ರಾಯೇಲಿನ ಮುಂದೆ ನಡಿಯೋ ತರ ಮಾಡ್ತೀನಿ’” ಅಂತ ಹೇಳಿದ. 13  ದಾವೀದ ನಾತಾನನಿಗೆ “ನಾನು ಯೆಹೋವನ ವಿರುದ್ಧ ಪಾಪ ಮಾಡಿದ್ದೀನಿ”+ ಅಂದ. ಅದಕ್ಕೆ ನಾತಾನ “ನೀನು ಮಾಡಿದ ಪಾಪವನ್ನ ಯೆಹೋವ ಕ್ಷಮಿಸ್ತಾನೆ.*+ ನೀನು ಸಾಯಲ್ಲ.+ 14  ನೀನು ಈ ಪಾಪ ಮಾಡಿ ಯೆಹೋವನ ಜೊತೆ ತುಂಬ ಅಗೌರವದಿಂದ ನಡ್ಕೊಂಡೆ. ಹಾಗಾಗಿ ಈಗಷ್ಟೇ ನಿನಗೆ ಹುಟ್ಟಿರೋ ಮಗ ತೀರಿಹೋಗ್ತಾನೆ” ಅಂದ. 15  ಇದನ್ನ ಹೇಳಿ ನಾತಾನ ತನ್ನ ಮನೆಗೆ ಹೋದ. ದಾವೀದನಿಂದ ಊರೀಯನ ಹೆಂಡತಿಗೆ ಹುಟ್ಟಿದ ಮಗುಗೆ ಯೆಹೋವ ಹುಷಾರಿಲ್ಲದ ಹಾಗೆ ಮಾಡಿದನು. 16  ಆ ಮಗುವಿಗಾಗಿ ದಾವೀದ ಸತ್ಯ ದೇವರ ಹತ್ರ ಅಂಗಲಾಚಿ ಬೇಡ್ಕೊಂಡ. ದಾವೀದ ಉಪವಾಸ ಮಾಡ್ತಿದ್ದ, ರಾತ್ರಿ ನೆಲದ ಮೇಲೆ ಮಲಗ್ತಿದ್ದ.+ 17  ಅವನ ಮನೆ ಹಿರಿಯರು ಅವನನ್ನ ನೆಲದಿಂದ ಎಬ್ಬಿಸೋಕೆ ಎಷ್ಟೇ ಪ್ರಯತ್ನ ಮಾಡಿದ್ರೂ ಎದ್ದೇಳಲಿಲ್ಲ, ಊಟ ಮಾಡಲಿಲ್ಲ. 18  ಏಳನೇ ದಿನ ಮಗು ತೀರಿಹೋಯ್ತು. ಆದ್ರೆ ಮಗು ಸತ್ತ ವಿಷ್ಯ ದಾವೀದನಿಗೆ ಹೇಳೋಕೆ ಸೇವಕರಿಗೆ ತುಂಬ ಭಯ ಆಯ್ತು. “ಮಗು ಬದುಕಿರುವಾಗ್ಲೇ ಅವನು ನಮ್ಮ ಮಾತು ಕೇಳಲಿಲ್ಲ. ಅಂದ್ಮೇಲೆ ಮಗು ತೀರಿಹೋಗಿದೆ ಅಂತ ಈಗ ಹೇಗೆ ಹೇಳೋದು? ಅವನು ತನಗೇ ಏನಾದ್ರೂ ಮಾಡ್ಕೊಳ್ಳಬಹುದು” ಅಂತ ಮಾತಾಡ್ಕೊಂಡ್ರು. 19  ಸೇವಕರು ತಮ್ಮೊಳಗೆ ಪಿಸುಗುಟ್ಟೋದನ್ನ ನೋಡಿ ಮಗು ತೀರಿಹೋಗಿರಬಹುದು ಅಂತ ದಾವೀದನಿಗೆ ಸಂಶಯ ಬಂತು. ಅವನು ಸೇವಕರಿಗೆ “ಮಗು ತೀರಿಹೋಯ್ತಾ?” ಅಂತ ಕೇಳಿದ. ಅದಕ್ಕೆ ಅವರು “ತೀರಿಹೋಯ್ತು” ಅಂದ್ರು. 20  ಆಗ ದಾವೀದ ನೆಲದ ಮೇಲಿಂದ ಎದ್ದು ಸ್ನಾನ ಮಾಡಿ, ಮೈಗೆ ಸುಗಂಧ ತೈಲ ಹಚ್ಕೊಂಡು+ ಬಟ್ಟೆ ಬದಲಾಯಿಸಿ ಯೆಹೋವನ ಆಲಯಕ್ಕೆ ಹೋಗಿ ಅಡ್ಡಬಿದ್ದ.+ ಆಮೇಲೆ ತನ್ನ ಅರಮನೆಗೆ ಹೋಗಿ ಊಟ ತರಿಸಿ ತಿಂದ. 21  ಅವನ ಸೇವಕರು “ನೀನ್ಯಾಕೆ ಹೀಗೆ ನಡ್ಕೊಂಡೆ? ಮಗು ಬದುಕಿರುವಾಗ ಉಪವಾಸ ಮಾಡಿದೆ, ಅಳ್ತಾ ಇದ್ದೆ. ಆದ್ರೆ ಮಗು ತೀರಿಹೋದ ಕೂಡಲೇ ಎದ್ದು ಊಟ ಮಾಡಿದೆ” ಅಂತ ಕೇಳಿದ್ರು. 22  ಅದಕ್ಕೆ ದಾವೀದ “‘ಯೆಹೋವ ನನಗೆ ಕನಿಕರ ತೋರಿಸಬಹುದು, ಮಗುವನ್ನ ಉಳಿಸಬಹುದು’+ ಅಂದ್ಕೊಂಡು ಮಗು ಬದುಕಿದ್ದಾಗ ಉಪವಾಸ ಮಾಡ್ದೆ,+ ಅಳ್ತಿದ್ದೆ. 23  ಆದ್ರೆ ಅದು ತೀರಿಹೋದ ಮೇಲೆ ಯಾಕೆ ಉಪವಾಸ ಮಾಡ್ಲಿ? ಅವನನ್ನ ವಾಪಸ್‌ ತರಕ್ಕಾಗುತ್ತಾ?+ ನಾನು ಅವನ ಹತ್ರ ಹೋಗಬಹುದೇ+ ಹೊರತು ಅವನು ನನ್ನ ಹತ್ರ ವಾಪಸ್‌ ಬರಲ್ಲ”+ ಅಂದ. 24  ಆಮೇಲೆ ದಾವೀದ ತನ್ನ ಹೆಂಡತಿಯಾದ ಬತ್ಷೆಬೆಯನ್ನ+ ಸಮಾಧಾನ ಮಾಡಿದ. ಅವಳ ಹತ್ರ ಹೋಗಿ ಅವಳ ಜೊತೆ ಮಲಗಿಕೊಂಡ. ಅವಳಿಗೆ ಒಂದು ಗಂಡು ಮಗು ಹುಟ್ಟಿತು. ಅವನಿಗೆ ಸೊಲೊಮೋನ*+ ಅಂತ ಹೆಸ್ರಿಟ್ರು. ಯೆಹೋವ ಅವನನ್ನ ಪ್ರೀತಿಸಿದ.+ 25  ಪ್ರವಾದಿ ನಾತಾನನ ಮೂಲಕ ದೇವರು ಸಂದೇಶ ಕಳಿಸಿದ.+ ಯೆಹೋವನಿಗಾಗಿ ಮಗುಗೆ ಯೆದೀದ್ಯ* ಅಂತ ಹೆಸ್ರಿಡೋಕೆ ಹೇಳಿದ. 26  ಯೋವಾಬ ರಬ್ಬಾದಲ್ಲಿದ್ದ+ ಅಮ್ಮೋನಿಯರ+ ವಿರುದ್ಧ ಯುದ್ಧ ಮುಂದುವರಿಸಿ ಅದ್ರ ರಾಜಧಾನಿ ವಶ ಮಾಡ್ಕೊಂಡ.+ 27  ಹಾಗಾಗಿ ಯೋವಾಬ ದಾವೀದನ ಹತ್ರ ಸಂದೇಶವಾಹಕರನ್ನ ಕಳಿಸಿ “ನಾನು ರಬ್ಬಾದ ವಿರುದ್ಧ+ ಹೋರಾಡಿ ನೀರಿನ ಪಟ್ಟಣವನ್ನ* ವಶ ಮಾಡ್ಕೊಂಡೆ. 28  ಈಗ ನೀನು ಉಳಿದ ಸೈನ್ಯ ತಗೊಂಡು ಬಂದು ಪಟ್ಟಣದ ವಿರುದ್ಧ ಪಾಳೆಯ ಹೂಡಿ ಅದನ್ನ ವಶ ಮಾಡ್ಕೊ. ಇಲ್ಲಾಂದ್ರೆ ಆ ಪಟ್ಟಣವನ್ನ ನಾನು ವಶ ಮಾಡ್ಕೊಳ್ಳಬೇಕಾಗುತ್ತೆ, ಆಗ ಅದ್ರ ಗೌರವ ನನಗೆ ಬಂದುಬಿಡುತ್ತೆ”* ಅಂದ. 29  ಹಾಗಾಗಿ ದಾವೀದ ಎಲ್ಲ ಸೈನ್ಯವನ್ನ ಸೇರಿಸ್ಕೊಂಡು ರಬ್ಬಾ ಪಟ್ಟಣಕ್ಕೆ ಹೋಗಿ ಹೋರಾಡಿ ವಶ ಮಾಡ್ಕೊಂಡ. 30  ಆಮೇಲೆ ಮಲ್ಕಾಮನ* ತಲೆ ಮೇಲಿದ್ದ ಕಿರೀಟ ತಗೊಂಡ. ಅದ್ರಲ್ಲಿದ್ದ ಚಿನ್ನದ ತೂಕ ಒಂದು ತಲಾಂತು* ಆಗಿತ್ತು. ಅಷ್ಟೇ ಅಲ್ಲ ಅದ್ರಲ್ಲಿ ಅಮೂಲ್ಯ ರತ್ನಗಳು ಇತ್ತು. ಅದನ್ನ ದಾವೀದನ ತಲೆ ಮೇಲೆ ಇಟ್ರು. ಅವನು ಆ ಪಟ್ಟಣದಿಂದ+ ತುಂಬ ಕೊಳ್ಳೆಯನ್ನ ಸಹ ತಗೊಂಡ.+ 31  ದಾವೀದ ಆ ಪಟ್ಟಣದಲ್ಲಿದ್ದ ಜನ್ರನ್ನ ಕರ್ಕೊಂಡು ಬಂದು ಕಲ್ಲು ಕತ್ತರಿಸೋಕೆ, ಇಟ್ಟಿಗೆ ಮಾಡೋಕೆ, ಚೂಪಾದ ಕಬ್ಬಿಣದ ಉಪಕರಣ ಮತ್ತು ಕಬ್ಬಿಣದ ಕೊಡಲಿ ಕೆಲಸ ಮಾಡೋಕೆ ಅವ್ರನ್ನ ಇಟ್ಟ. ಅಮ್ಮೋನಿಯರ ಎಲ್ಲ ಪಟ್ಟಣಗಳಿಗೂ ಅವನು ಹೀಗೇ ಮಾಡಿದ. ಕೊನೆಗೆ ದಾವೀದ, ಅವನ ಎಲ್ಲ ಸೈನಿಕರು ಯೆರೂಸಲೇಮಿಗೆ ವಾಪಸ್‌ ಬಂದ್ರು.

ಪಾದಟಿಪ್ಪಣಿ

ಅಥವಾ “ಜೊತೆಗಾರನಿಗೆ.”
ಅಥವಾ “ನಿನ್ನ ಪಾಪ ದಾಟಿಹೋಗೋ ತರ ಮಾಡ್ತಾನೆ.”
“ಶಾಂತಿ” ಅಂತ ಅರ್ಥ ಇರೋ ಹೀಬ್ರು ಪದ.
ಅರ್ಥ “ಯಾಹುಗೆ ಪ್ರಿಯನಾದವನು.”
ಬಹುಶಃ ಪಟ್ಟಣದ ನೀರಿನ ಮೂಲಗಳನ್ನ ಸೂಚಿಸುತ್ತೆ.
ಅಕ್ಷ. “ಆ ಪಟ್ಟಣಕ್ಕೆ ನನ್ನ ಹೆಸ್ರು ಬರುತ್ತೆ.”
ಬಹುಶಃ ಅಮ್ಮೋನಿಯರ ದೇವರ ಮೂರ್ತಿ. ಬೇರೆ ಕಡೆಗಳಲ್ಲಿ ಇದನ್ನ ಮೋಲೆಕ ಅಥವಾ ಮಿಲ್ಕೋಮ ಅನ್ನಲಾಗಿದೆ.
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.