ಎಫೆಸದವರಿಗೆ ಬರೆದ ಪತ್ರ 4:1-32

  • ಕ್ರಿಸ್ತನ ದೇಹದಲ್ಲಿ ಒಗ್ಗಟ್ಟು (1-16)

    • ಗಂಡಸರನ್ನ ಉಡುಗೊರೆಗಳಾಗಿ ಕೊಟ್ಟಿದ್ದು (8)

  • ಹಳೇ ಮತ್ತು ಹೊಸ ವ್ಯಕ್ತಿತ್ವ (17-32)

4  ನಮ್ಮ ಪ್ರಭು ಸಲುವಾಗಿ ಜೈಲಲ್ಲಿರೋ ಪೌಲನಾದ ನಾನು+ ನಿಮ್ಮನ್ನ ಕೇಳ್ಕೊಳ್ತೀನಿ, ದೇವರು ನಿಮ್ಮನ್ನ ಕರೆದಿರೋದ್ರಿಂದ ಯೋಗ್ಯರಾಗಿ ನಡ್ಕೊಳ್ಳಿ.+  ಯಾವಾಗ್ಲೂ ದೀನರಾಗಿ,*+ ಸೌಮ್ಯತೆಯಿಂದ, ತಾಳ್ಮೆಯಿಂದ+ ಇರಿ. ಪ್ರೀತಿಯಿಂದ ಒಬ್ರನ್ನೊಬ್ರು ಸಹಿಸ್ಕೊಳ್ಳಿ.+  ಪವಿತ್ರಶಕ್ತಿಯಿಂದ ನೀವು ಒಂದಾಗಿದ್ದೀರ. ಹಾಗಾಗಿ ಒಬ್ರು ಇನ್ನೊಬ್ರ ಜೊತೆ ಶಾಂತಿಯಿಂದ ಇದ್ದು ಒಗ್ಗಟ್ಟನ್ನ ಕಾಪಾಡ್ಕೊಳ್ಳೋಕೆ ಶ್ರಮ ಪಡಿ.+  ನಿಮ್ಮನ್ನ ಕರೆದಿರೋದು ಒಂದೇ ನಿರೀಕ್ಷೆಗಾಗಿ,+ ಇರೋದು ಒಂದೇ ದೇಹ,+ ಒಂದೇ ಪವಿತ್ರಶಕ್ತಿ.+  ಒಬ್ಬನೇ ಪ್ರಭು,+ ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ,  ಎಲ್ರಿಗೂ ಇರೋದು ಒಬ್ಬನೇ ತಂದೆ, ಒಬ್ಬನೇ ದೇವರು. ಆತನಿಗೆ ಎಲ್ರ ಮೇಲೂ ಅಧಿಕಾರ ಇದೆ, ಆತನ ಶಕ್ತಿ ಎಲ್ಲರಲ್ಲೂ ಎಲ್ಲರ ಮೂಲಕನೂ ಕೆಲಸ ಮಾಡುತ್ತೆ.  ನಮ್ಮಲ್ಲಿ ಪ್ರತಿಯೊಬ್ರಿಗೂ ದೇವರು ಅಪಾರ ಕೃಪೆ ತೋರಿಸಿದ್ದಾನೆ. ಆ ಉಚಿತ ಉಡುಗೊರೆಯನ್ನ ಕ್ರಿಸ್ತ ನಮ್ಮೆಲ್ರಿಗೆ ಹಂಚಿಕೊಟ್ಟಿರೋ ವಿಧದಿಂದ ಅದು ಗೊತ್ತಾಗುತ್ತೆ.+  “ಆತನು ಉನ್ನತ ಸ್ಥಳಕ್ಕೆ ಏರಿಹೋದಾಗ ಬಂಧನದಲ್ಲಿ ಇದ್ದವ್ರನ್ನ ಕರ್ಕೊಂಡು ಹೋದನು. ಆತನು ಗಂಡಸ್ರನ್ನ ಉಡುಗೊರೆಗಳಾಗಿ ಕೊಟ್ಟನು”+ ಅಂತ ವಚನ ಹೇಳುತ್ತೆ.  ‘ಆತನು ಏರಿಹೋದನು’ ಅಂದ್ರೆ ಏನರ್ಥ? ಆತನು ಕೆಳಗೆ ಅಂದ್ರೆ ಭೂಮಿಗೆ ಇಳಿದು ಬಂದಿದ್ದನು ಅಂತ ಅಲ್ವಾ? 10  ಇಳಿದು ಬಂದ ಆತನೇ ಎಲ್ಲ ವಿಷ್ಯಗಳನ್ನ ನೆರವೇರಿಸೋಕೆ ಸ್ವರ್ಗಕ್ಕಿಂತ ಎಷ್ಟೋ ಎತ್ತರಕ್ಕೆ ಹೋದನು.+ 11  ಆತನು ಸ್ವಲ್ಪ ಜನ್ರನ್ನ ಅಪೊಸ್ತಲರಾಗಿ,+ ಸ್ವಲ್ಪ ಜನ್ರನ್ನ ಪ್ರವಾದಿಗಳಾಗಿ,+ ಸ್ವಲ್ಪ ಜನ್ರನ್ನ ಸಿಹಿಸುದ್ದಿ ಸಾರುವವರಾಗಿ,*+ ಇನ್ನು ಸ್ವಲ್ಪ ಜನ್ರನ್ನ ಕುರುಬರಾಗಿ ಮತ್ತು ಬೋಧಕರಾಗಿ+ ಕೊಟ್ಟನು. 12  ಪವಿತ್ರ ಜನ್ರನ್ನ ಸರಿದಾರಿಲಿ ನಡಿಸೋಕೆ ಸಹಾಯ ಮಾಡಬೇಕು,* ಬೇರೆಯವ್ರ ಸೇವೆ ಮಾಡಬೇಕು, ಕ್ರಿಸ್ತನ ದೇಹವನ್ನ ಕಟ್ಟಬೇಕು ಅಂತ ಅವ್ರನ್ನ ಕೊಟ್ಟನು.+ 13  ನಾವೆಲ್ಲ ನಂಬಿಕೆಯಲ್ಲಿ ಮತ್ತು ದೇವರ ಮಗನ ಬಗ್ಗೆ ಸರಿಯಾದ ಜ್ಞಾನ ಪಡ್ಕೊಳ್ಳೋದ್ರಲ್ಲಿ ಒಂದಾಗೋ ತನಕ, ಪ್ರೌಢರಾಗೋ* ತನಕ+ ಅಂದ್ರೆ ಕ್ರಿಸ್ತನ ತರ ಪೂರ್ತಿ ಪ್ರೌಢರಾಗೋ ತನಕ ಅವರು ನಮಗೆ ಸಹಾಯ ಮಾಡ್ತಾರೆ. 14  ಹಾಗಾಗಿ ನಾವು ಇನ್ಮುಂದೆ ಮಕ್ಕಳಾಗಿರಬಾರದು. ಮೋಸದಿಂದ ವಂಚಿಸುವವ್ರ ಸುಳ್ಳು ಬೋಧನೆಗಳನ್ನ+ ಕೇಳುವವನು ಸಮುದ್ರದಲ್ಲಿರೋ ದೋಣಿ ತರ ಇದ್ದಾನೆ. ಗಾಳಿಗೆ, ಅಲೆಗಳಿಗೆ ಸಿಕ್ಕಿ ಆ ದೋಣಿ ಹೇಗೆ ಆಕಡೆಯಿಂದ ಈಕಡೆ ತೇಲಾಡ್ತಾ ಇರುತ್ತೋ ಆ ತರ ಅವನು ಇರ್ತಾನೆ. ಹಾಗಾಗಿ ನಾವು ಅವನ ತರ ಆಗಬಾರದು. 15  ನಾವು ಸತ್ಯವನ್ನೇ ಮಾತಾಡೋಣ, ದೇಹಕ್ಕೆ ತಲೆಯಾಗಿರೋ ಕ್ರಿಸ್ತನಿಗೆ+ ತಕ್ಕ ಹಾಗೆ ಎಲ್ಲ ವಿಷ್ಯಗಳಲ್ಲೂ ಪ್ರೀತಿಯಿಂದ ಬೆಳೀತಾ ಹೋಗೋಣ. 16  ಆತನಿಂದ ದೇಹದ ಎಲ್ಲ ಅಂಗಗಳು+ ಒಂದಕ್ಕೊಂದು ಚೆನ್ನಾಗಿ ಜೋಡಿಸ್ಕೊಂಡಿದೆ. ಪ್ರತಿಯೊಂದು ಅಂಗ ದೇಹಕ್ಕೆ ಬೇಕಾಗಿರೋದನ್ನ ಕೊಡೋದ್ರಲ್ಲಿ ಒಂದಕ್ಕೊಂದು ಸಹಕಾರ ಕೊಡುತ್ತೆ. ಪ್ರತಿಯೊಂದು ಅಂಗ ಅದ್ರ ಕೆಲಸವನ್ನ ಸರಿಯಾಗಿ ಮಾಡಿದ್ರೆ ಇಡೀ ದೇಹ ಚೆನ್ನಾಗಿ ಬೆಳೆದು ಪ್ರೀತಿಯಲ್ಲಿ ಬಲವಾಗುತ್ತೆ.+ 17  ಹಾಗಾಗಿ ವ್ಯರ್ಥ* ಯೋಚ್ನೆಗಳ+ ಪ್ರಕಾರ ನಡ್ಯೋ ಲೋಕದ ಜನ್ರ ತರ ನೀವು ಇನ್ಮುಂದೆ ನಡಿಬೇಡಿ+ ಅಂತ ನಾನು ಕೇಳ್ಕೊಳ್ತೀನಿ, ಪ್ರಭು ಮುಂದೆ ಸಲಹೆ ಕೊಡ್ತೀನಿ. 18  ಅವ್ರ ಮನಸ್ಸು ಕತ್ತಲಲ್ಲಿದೆ. ದೇವರು ನಮಗೆ ಕೊಡೋ ಜೀವವನ್ನ ಅವರು ಪಡ್ಕೊಳ್ಳಲ್ಲ. ಯಾಕಂದ್ರೆ ಅವರು ಬೇಕುಬೇಕಂತಾನೇ ದೇವ್ರ ಬಗ್ಗೆ ತಿಳ್ಕೊಳ್ತಿಲ್ಲ, ಅವ್ರ ಹೃದಯ ಕಲ್ಲಾಗಿದೆ.* 19  ಅವ್ರಿಗೆ ‘ನಾವು ಒಳ್ಳೇ ರೀತಿಯಲ್ಲಿ ನಡಿಬೇಕು’ ಅನ್ನೋ ನೈತಿಕ ಪ್ರಜ್ಞೆ ಒಂಚೂರು ಇಲ್ಲ. ನಾಚಿಕೆಗೆಟ್ಟು ನಡಿಯೋದೇ*+ ಅವ್ರ ಜೀವನ ಆಗಿದೆ. ಎಲ್ಲ ತರದ ಅಶುದ್ಧತೆಯನ್ನ ನಡೆಸಿದ್ರೂ ಅವ್ರಿಗೆ ಸ್ವಲ್ಪನೂ ತೃಪ್ತಿ ಆಗ್ತಿಲ್ಲ. 20  ಆದ್ರೆ ನೀವು ಕಲಿತಿರೋ ಹಾಗೆ ಕ್ರಿಸ್ತ ಆ ತರ ನಡೀಲಿಲ್ಲ. 21  ನೀವೇ ಆತನಿಂದ ಕೇಳಿಸ್ಕೊಂಡಿದ್ದೀರ, ಆತನಿಂದ ಕಲಿತ್ಕೊಂಡಿದ್ದೀರ, ಯಾಕಂದ್ರೆ ಯೇಸುವಿನಲ್ಲಿ ಸತ್ಯ ಇದೆ. 22  ನಿಮ್ಮ ಹಳೇ ವ್ಯಕ್ತಿತ್ವವನ್ನ ತೆಗೆದುಹಾಕಬೇಕು+ ಅಂತ ನೀವು ಕಲಿತ್ರಿ, ಯಾಕಂದ್ರೆ ಅದು ನಿಮ್ಮ ಹಿಂದಿನ ನಡತೆ ಪ್ರಕಾರ ಇದೆ. ವಂಚಿಸೋ ಆಸೆಗಳಿಂದ ಅದು ಕೆಟ್ಟು ಹೋಗ್ತಿದೆ.+ 23  ನಿಮ್ಮ ಯೋಚ್ನೆ ಮತ್ತು ನಡತೆಯನ್ನ ಬದಲಾಯಿಸ್ಕೊಳ್ತಾ ಇರಬೇಕು.+ 24  ನೀವು ಹೊಸ ವ್ಯಕ್ತಿತ್ವವನ್ನ ಬಟ್ಟೆ ತರ ಹಾಕಬೇಕು.+ ನಿಜವಾದ ನೀತಿ ಮತ್ತು ನಿಷ್ಠೆಗೆ ತಕ್ಕ ಹಾಗೆ ದೇವರು ತನ್ನ ಇಷ್ಟದ ಪ್ರಕಾರ ಅದನ್ನ ಮಾಡಿದ್ದಾನೆ. 25  ನೀವೀಗ ಮೋಸ ಮಾಡೋದನ್ನ ಬಿಟ್ಟಿರೋದ್ರಿಂದ ಒಬ್ರು ಇನ್ನೊಬ್ರ ಹತ್ರ ಸತ್ಯಾನೇ ಹೇಳಿ.+ ಯಾಕಂದ್ರೆ ನಾವೆಲ್ಲ ಒಂದೇ ದೇಹದ ಅಂಗಗಳು.+ 26  ತುಂಬ ಕೋಪ ಬಂದ್ರೂ ಪಾಪ ಮಾಡಬೇಡಿ.+ ಸೂರ್ಯ ಮುಳುಗೋ ತನಕ ಕೋಪ ಇಟ್ಕೊಳ್ಳಬೇಡಿ.+ 27  ಸೈತಾನನಿಗೆ* ಅವಕಾಶ* ಕೊಡಬೇಡಿ.+ 28  ಕಳ್ಳತನ ಮಾಡುವವನು ಇನ್ಮುಂದೆ ಕಳ್ಳತನ ಮಾಡದೆ ಇರಲಿ. ಕೈಯಾರೆ ಕಷ್ಟಪಟ್ಟು ನಿಯತ್ತಿಂದ ದುಡೀಲಿ.+ ಆಗ ಕಷ್ಟದಲ್ಲಿ ಇರುವವ್ರಿಗೆ ಸಹಾಯ ಮಾಡಕ್ಕಾಗುತ್ತೆ.+ 29  ನಿಮ್ಮ ಬಾಯಲ್ಲಿ ಕೆಟ್ಟ* ಮಾತು ಬರಬಾರದು.+ ಪ್ರಯೋಜನ ತರೋ, ಬಲಪಡಿಸೋ ಒಳ್ಳೇ ಮಾತುಗಳನ್ನ ಸಂದರ್ಭಕ್ಕೆ ತಕ್ಕ ಹಾಗೆ ಮಾತಾಡಿ.+ 30  ಅಷ್ಟೇ ಅಲ್ಲ, ದೇವರ ಪವಿತ್ರಶಕ್ತಿಗೆ ದುಃಖ ಆಗೋ ತರ ಮಾಡಬೇಡಿ.+ ಬಿಡುಗಡೆ ಬೆಲೆಯಿಂದ ನಿಮ್ಮನ್ನ ಬಿಡಿಸೋ ದಿನಕ್ಕೆ+ ಆ ಪವಿತ್ರಶಕ್ತಿಯಿಂದಾನೇ ನಿಮಗೆ ಮುದ್ರೆ ಒತ್ತಲಾಗಿದೆ.+ 31  ಎಲ್ಲ ತರದ ದ್ವೇಷ,+ ಕೋಪ, ಕ್ರೋಧ, ಕಿರಿಚಾಟ, ಬೈಗುಳ+ ಮತ್ತು ಎಲ್ಲ ಕೆಟ್ಟ ಗುಣಗಳನ್ನ+ ನಿಮ್ಮಿಂದ ತೆಗೆದುಹಾಕಿ. 32  ಒಬ್ರು ಇನ್ನೊಬ್ರಿಗೆ ದಯೆ, ಕೋಮಲ ಕರುಣೆ ತೋರಿಸಿ.+ ದೇವರು ಕ್ರಿಸ್ತನ ಮೂಲಕ ನಿಮ್ಮನ್ನ ಉದಾರವಾಗಿ ಕ್ಷಮಿಸಿದ ತರಾನೇ ನೀವೂ ಬೇರೆಯವ್ರನ್ನ ಉದಾರವಾಗಿ ಕ್ಷಮಿಸಿ.+

ಪಾದಟಿಪ್ಪಣಿ

ಅಥವಾ “ದೀನಮನಸ್ಸಿಂದ.”
ಅಥವಾ “ಪ್ರಚಾರಕರಾಗಿ.”
ಅಥವಾ “ಪವಿತ್ರ ಜನ್ರಿಗೆ ತರಬೇತಿ ಕೊಡೋಕಂತ.”
ಅಕ್ಷ. “ಪೂರ್ತಿ ಬೆಳೆದಿರೋ ವ್ಯಕ್ತಿ.”
ಅಥವಾ “ಸುಳ್ಳು; ಪ್ರಯೋಜನವಿಲ್ಲದ.”
ಅಥವಾ “ಮರಗಟ್ಟಿದೆ.”
ಅಕ್ಷ. “ಪಿಶಾಚ.” ಪದವಿವರಣೆ ನೋಡಿ.
ಅಥವಾ “ಜಾಗ.”
ಅಕ್ಷ. “ಕೊಳೆತ.”