ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾಯುವ ಮನೋಭಾವವನ್ನು ತೋರಿಸಿರಿ!

ಕಾಯುವ ಮನೋಭಾವವನ್ನು ತೋರಿಸಿರಿ!

ಕಾಯುವ ಮನೋಭಾವವನ್ನು ತೋರಿಸಿರಿ!

“ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು [“ದೇವರ ಕಡೆಗೆ ಕಾಯುವ ಮನೋಭಾವವನ್ನು ತೋರಿಸುವೆನು,” NW]; ನನ್ನ ದೇವರು ನನ್ನ ಕಡೆಗೆ ಕಿವಿಗೊಡುವನು.”​—⁠ಮೀಕ 7:⁠7.

1, 2. (ಎ) ಅರಣ್ಯದಲ್ಲಿ ಇಸ್ರಾಯೇಲ್ಯರು ತೋರಿಸಿದ ತಪ್ಪಾದ ಮನೋಭಾವವು ಅವರಿಗೆ ಹೇಗೆ ಹಾನಿಯನ್ನು ಉಂಟುಮಾಡಿತು? (ಬಿ) ಒಂದು ಯೋಗ್ಯವಾದ ಮನೋಭಾವವನ್ನು ಬೆಳೆಸಿಕೊಳ್ಳದಿರುವ ಕ್ರೈಸ್ತನೊಬ್ಬನಿಗೆ ಏನು ಸಂಭವಿಸಸಾಧ್ಯವಿದೆ?

ನಮ್ಮ ಮನೋಭಾವದ ಮೇಲೆ ಹೊಂದಿಕೊಂಡು, ಜೀವಿತದಲ್ಲಿನ ಅನೇಕ ಸಂಗತಿಗಳನ್ನು ನಾವು ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ ಪರಿಗಣಿಸಸಾಧ್ಯವಿದೆ. ಇಸ್ರಾಯೇಲ್ಯರು ಅರಣ್ಯದಲ್ಲಿದ್ದಾಗ, ಅದ್ಭುತಕರವಾದ ರೀತಿಯಲ್ಲಿ ದೇವರು ಅವರಿಗೆ ಮನ್ನವನ್ನು ಒದಗಿಸಿದನು. ಅವರು ತಮ್ಮ ಸುತ್ತಲಿದ್ದ ಬರಡು ಭೂಮಿಯನ್ನು ನೋಡಿ, ತಮ್ಮ ಪೋಷಣೆಗೋಸ್ಕರ ಯೆಹೋವನು ಮಾಡಿದ ಒದಗಿಸುವಿಕೆಗಾಗಿ ತುಂಬ ಕೃತಜ್ಞತೆಯನ್ನು ತೋರಿಸಿದ್ದಿರಬೇಕಾಗಿತ್ತು. ಅಂದರೆ, ಅವರು ಸಕಾರಾತ್ಮಕ ಮನೋಭಾವವನ್ನು ತೋರಿಸಿದ್ದಿರಬೇಕಾಗಿತ್ತು. ಅದಕ್ಕೆ ಬದಲಾಗಿ, ಐಗುಪ್ತ ದೇಶದಲ್ಲಿ ಸಿಗುತ್ತಿದ್ದ ಬೇರೆ ಬೇರೆ ರೀತಿಯ ಆಹಾರವನ್ನು ಅವರು ಜ್ಞಾಪಿಸಿಕೊಂಡು, ಮನ್ನವು ರುಚಿಕರವಾಗಿಲ್ಲ ಎಂದು ದೂರಿದರು. ಎಂತಹ ನಕಾರಾತ್ಮಕ ಮನೋಭಾವ!​—⁠ಅರಣ್ಯಕಾಂಡ 11:​4-6.

2 ತದ್ರೀತಿಯಲ್ಲಿ ಇಂದು ಕ್ರೈಸ್ತನೊಬ್ಬನ ಮನೋಭಾವವು ಅವನ ಜೀವಿತದಲ್ಲಿ ತುಂಬ ಸಂತೋಷವನ್ನು ತರಬಹುದು ಅಥವಾ ತುಂಬ ನಿರಾಶೆಯನ್ನು ಉಂಟುಮಾಡಬಹುದು. ಯೋಗ್ಯವಾದ ಮನೋಭಾವವಿಲ್ಲದಿರುವಲ್ಲಿ, ಒಬ್ಬ ಕ್ರೈಸ್ತನು ಸುಲಭವಾಗಿ ತನ್ನ ಸಂತೋಷವನ್ನು ಕಳೆದುಕೊಳ್ಳಸಾಧ್ಯವಿದೆ. ಮತ್ತು ಇದು ತುಂಬ ಗಂಭೀರವಾದ ಸಮಸ್ಯೆಯಾಗಿರಸಾಧ್ಯವಿದೆ, ಏಕೆಂದರೆ ನೆಹೆಮೀಯನು ಹೇಳಿದಂತೆ: “ಯೆಹೋವನ ಆನಂದವೇ ನಿಮ್ಮ [ನಮ್ಮ] ಆಶ್ರಯವಾಗಿದೆ.” (ನೆಹೆಮೀಯ 8:10) ಒಂದು ಸಕಾರಾತ್ಮಕವಾದ, ಸಂತೋಷಭರಿತ ಮನೋಭಾವವು, ನಾವು ಪ್ರಬಲರಾಗಿರುವಂತೆ ಸಹಾಯಮಾಡುತ್ತದೆ ಮತ್ತು ಸಭೆಯಲ್ಲಿ ಶಾಂತಿ ಹಾಗೂ ಐಕ್ಯಭಾವವನ್ನು ಉಂಟುಮಾಡುತ್ತದೆ.​—⁠ರೋಮಾಪುರ 15:13; ಫಿಲಿಪ್ಪಿ 1:⁠25.

3. ಒಂದು ಯೋಗ್ಯವಾದ ಮನೋಭಾವವು ಕಷ್ಟಕರ ಸಮಯದಲ್ಲಿ ಯೆರೆಮೀಯನಿಗೆ ಹೇಗೆ ಸಹಾಯಮಾಡಿತು?

3 ಯೆರೆಮೀಯನು ಕಷ್ಟಕರ ಸಮಯದಲ್ಲಿ ಜೀವಿಸುತ್ತಿದ್ದರೂ, ಅವನು ಸಕಾರಾತ್ಮಕ ಮನೋಭಾವವನ್ನು ತೋರಿಸಿದನು. ಸಾ.ಶ.ಪೂ. 607ರಲ್ಲಿ ಯೆರೂಸಲೇಮಿನ ಪತನದ ಭೀಕರತೆಯನ್ನು ಅವನು ಕಣ್ಣಾರೆ ನೋಡಿದನಾದರೂ, ಅವನು ಸಕಾರಾತ್ಮಕ ವಿಷಯಗಳನ್ನೂ ನೋಡಶಕ್ತನಾಗಿದ್ದನು. ಯೆಹೋವನು ಇಸ್ರಾಯೇಲ್‌ ಜನಾಂಗವನ್ನು ಮರೆಯಸಾಧ್ಯವಿರಲಿಲ್ಲ ಮತ್ತು ಆ ಜನಾಂಗವನ್ನು ಉಳಿಸಲಿದ್ದನು. ಆದುದರಿಂದಲೇ, ಪ್ರಲಾಪಗಳು ಪುಸ್ತಕದಲ್ಲಿ ಯೆರೆಮೀಯನು ಬರೆದುದು: “ನಾವು ಉಳಿದಿರುವದು ಯೆಹೋವನ ಕರುಣೆಯೇ; ಆತನ ಕೃಪಾವರಗಳು ನಿಂತುಹೋಗವು. ದಿನದಿನವು ಹೊಸಹೊಸದಾಗಿ ಒದಗುತ್ತವೆ; ನಿನ್ನ ಸತ್ಯಸಂಧತೆಯು ದೊಡ್ಡದು.” (ಪ್ರಲಾಪ 3:​22, 23) ಇತಿಹಾಸದಾದ್ಯಂತ, ಅತಿ ಕಷ್ಟಕರ ಸನ್ನಿವೇಶಗಳಲ್ಲಿ ಸಹ ದೇವರ ಸೇವಕರು ಒಂದು ಸಕಾರಾತ್ಮಕವಾದ, ಸಂತೋಷಭರಿತ ಮನೋಭಾವವನ್ನು ಕಾಪಾಡಿಕೊಂಡಿದ್ದಾರೆ.​—⁠2 ಕೊರಿಂಥ 7:4; 1 ಥೆಸಲೊನೀಕ 1:6; ಯಾಕೋಬ 1:⁠2.

4. ಯೇಸು ಯಾವ ಮನೋಭಾವವನ್ನು ಕಾಪಾಡಿಕೊಂಡನು ಮತ್ತು ಅದು ಅವನಿಗೆ ಹೇಗೆ ಸಹಾಯಮಾಡಿತು?

4 ಯೆರೆಮೀಯನು ಮರಣಪಟ್ಟು ಆರು ನೂರು ವರ್ಷಗಳು ಗತಿಸಿದ ಬಳಿಕ, ಯೇಸು ಸಹ ತಾಳಿಕೊಳ್ಳುವಂತೆ ಸಹಾಯಮಾಡಲ್ಪಟ್ಟನು. ಏಕೆಂದರೆ ಅವನು ಯಾವಾಗಲೂ ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಂಡಿದ್ದನು. ಅವನ ಕುರಿತು ನಾವು ಓದುವುದು: “ಆತನು [ಯೇಸು] ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.” (ಇಬ್ರಿಯ 12:⁠2) ಯೇಸು ಯಾವುದೇ ವಿರೋಧ ಅಥವಾ ಹಿಂಸೆಯನ್ನು ತಾಳಿಕೊಳ್ಳಬೇಕಾಗಿ ಬಂದರೂ, ಅಂದರೆ ಯಾತನಾ ಕಂಭದ ನೋವನ್ನು ಅನುಭವಿಸಬೇಕಾಗಿ ಬಂದರೂ, ‘ತನ್ನ ಮುಂದೆ ಇಟ್ಟಿದ್ದ ಸಂತೋಷದ’ ಮೇಲೆ ತನ್ನ ಮನಸ್ಸನ್ನು ಕೇಂದ್ರೀಕರಿಸಿದ್ದನು. ಅವನ ಆ ಸಂತೋಷವು, ಯೆಹೋವನ ಪರಮಾಧಿಕಾರದ ನಿರ್ದೋಷೀಕರಣ ಮತ್ತು ಆತನ ಹೆಸರಿನ ಪವಿತ್ರೀಕರಣ ಹಾಗೂ ಭವಿಷ್ಯತ್ತಿನಲ್ಲಿ ವಿಧೇಯ ಮಾನವಕುಲಕ್ಕೆ ಮಹಾನ್‌ ಆಶೀರ್ವಾದಗಳನ್ನು ತರುವ ಪ್ರತೀಕ್ಷೆಯ ಸುಯೋಗವೇ ಆಗಿತ್ತು.

ಕಾಯುವ ಮನೋಭಾವವನ್ನು ಕಾಪಾಡಿಕೊಳ್ಳಿರಿ

5. ನಾವು ವಿಷಯಗಳ ಕುರಿತು ಒಂದು ಯೋಗ್ಯವಾದ ಮನೋಭಾವವನ್ನು ಇಟ್ಟುಕೊಳ್ಳುವಂತೆ ಕಾಯುವ ಮನೋಭಾವವು ನಮಗೆ ಸಹಾಯಮಾಡುವ ನಿರ್ದಿಷ್ಟ ಸನ್ನಿವೇಶವು ಯಾವುದಾಗಿದೆ?

5 ಒಂದುವೇಳೆ ನಾವು ಯೇಸುವಿನಂತಹ ಮನೋಭಾವವನ್ನು ಬೆಳೆಸಿಕೊಳ್ಳುವುದಾದರೆ, ನಿರೀಕ್ಷಿಸುವಂತಹ ವಿಧದಲ್ಲಿ ಹಾಗೂ ಸಮಯದಲ್ಲಿ ಕೆಲವೊಂದು ವಿಷಯಗಳು ಸಂಭವಿಸದಿರುವಾಗಲೂ, ಯೆಹೋವನ ಕಡೆಗಿನ ಸಂತೋಷವನ್ನು ನಾವು ಕಳೆದುಕೊಳ್ಳಲಾರೆವು. ಪ್ರವಾದಿಯಾದ ಮೀಕನು ಹೇಳಿದ್ದು: “ನಾನಂತು ಯೆಹೋವನನ್ನು ಎದುರುನೋಡುವೆನು; ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು [“ದೇವರ ಕಡೆಗೆ ಕಾಯುವ ಮನೋಭಾವವನ್ನು ತೋರಿಸುವೆನು,” NW].” (ಮೀಕ 7:7; ಪ್ರಲಾಪ 3:21) ನಾವು ಸಹ ಕಾಯುವ ಮನೋಭಾವವನ್ನು ತೋರಿಸಸಾಧ್ಯವಿದೆ. ಹೇಗೆ? ಅನೇಕ ವಿಧಗಳಲ್ಲಿ. ಉದಾಹರಣೆಗೆ, ಅಧಿಕಾರದ ಸ್ಥಾನದಲ್ಲಿರುವ ಒಬ್ಬ ಸಹೋದರನು ತಪ್ಪು ಮಾಡುವಾಗ, ಆ ಕೂಡಲೆ ಅವನಿಗೆ ತಿದ್ದುಪಾಟು ನೀಡಲ್ಪಡಬೇಕು ಎಂದು ನಮಗನಿಸಬಹುದು. ಆದರೆ, ಕಾಯುವ ಮನೋಭಾವವು ನಮಗಿರುವಲ್ಲಿ ನಾವು ಈ ರೀತಿ ಯೋಚಿಸುವೆವು: ‘ಅವನು ನಿಜವಾಗಿಯೂ ತಪ್ಪು ಮಾಡಿದ್ದಾನೋ, ಅಥವಾ ಅವನ ಬಗ್ಗೆ ನಾನು ತಪ್ಪಾಗಿ ನೆನಸಿದ್ದೇನೊ? ಒಂದುವೇಳೆ ಅವನು ತಪ್ಪು ಮಾಡಿರುತ್ತಿದ್ದಲ್ಲಿ, ಕಾಲಕ್ರಮೇಣ ಈ ವ್ಯಕ್ತಿಯು ಸರಿಹೋಗುತ್ತಾನೆ ಮತ್ತು ಈಗ ಗಂಭೀರವಾದ ತಿದ್ದುಪಾಟನ್ನು ನೀಡುವುದು ಅನಗತ್ಯ ಎಂದು ಯೆಹೋವನು ನೆನಸುವುದರಿಂದ, ಆತನೇ ಹೀಗೆ ನಡೆಯುವಂತೆ ಬಿಟ್ಟಿರಸಾಧ್ಯವಿದೆಯೋ?’

6. ಒಂದು ವೈಯಕ್ತಿಕ ಸಮಸ್ಯೆಯಿರುವಂತಹ ಒಬ್ಬ ವ್ಯಕ್ತಿಗೆ, ಕಾಯುವ ಮನೋಭಾವವು ಹೇಗೆ ಸಹಾಯಮಾಡುವುದು?

6 ಒಂದುವೇಳೆ ನಮಗೆ ಒಂದು ವೈಯಕ್ತಿ ಸಮಸ್ಯೆಯಿರುವಲ್ಲಿ ಅಥವಾ ನಾವು ಒಂದು ದೌರ್ಬಲ್ಯದೊಂದಿಗೆ ಹೆಣಗಾಡುತ್ತಿರುವಲ್ಲಿ, ಕಾಯುವ ಮನೋಭಾವವನ್ನು ತೋರಿಸುವುದು ಅತ್ಯಾವಶ್ಯಕವಾಗಿರಬಹುದು. ಇಂತಹ ಸಂದರ್ಭದಲ್ಲಿ ನಾವು ಯೆಹೋವನ ಸಹಾಯಕ್ಕಾಗಿ ಬೇಡಿಕೊಳ್ಳುತ್ತೇವಾದರೂ, ಸಮಸ್ಯೆ ಮಾತ್ರ ಬಗೆಹರಿಯುವುದಿಲ್ಲ ಎಂದಿಟ್ಟುಕೊಳ್ಳಿ. ಆಗೇನು? ಆ ಸಮಸ್ಯೆಯನ್ನು ಬಗೆಹರಿಸಲು ನಮ್ಮಿಂದಾದ ಪ್ರಯತ್ನವೆಲ್ಲವನ್ನೂ ನಾವು ಮಾಡುತ್ತಿರಬೇಕು. ಅಷ್ಟುಮಾತ್ರವಲ್ಲ, ಯೇಸುವಿನ ಈ ಮಾತುಗಳ ಮೇಲೆ ನಂಬಿಕೆಯಿಡಬೇಕು: “ಬೇಡಿಕೊಳ್ಳುತ್ತಾ ಇರಿ, ಮತ್ತು ಅದು ನಿಮಗೆ ಕೊಡಲ್ಪಡುವುದು; ಹುಡುಕುತ್ತಾ ಇರಿ, ಮತ್ತು ಅದನ್ನು ನೀವು ಕಂಡುಕೊಳ್ಳುವಿರಿ; ತಟ್ಟುತ್ತಾ ಇರಿ, ಮತ್ತು ಅದು ನಿಮಗೆ ತೆರೆಯಲ್ಪಡುವುದು.” (ಲೂಕ 11:​9, NW) ಎಡೆಬಿಡದೆ ಪ್ರಾರ್ಥಿಸುತ್ತಾ ಇರಿ ಮತ್ತು ಯೆಹೋವನ ಕಡೆಗೆ ಕಾಯುವ ಮನೋಭಾವವನ್ನು ತೋರಿಸಿರಿ. ಸೂಕ್ತವಾದ ಸಮಯದಲ್ಲಿ ಮತ್ತು ತನ್ನದೇ ಆದ ರೀತಿಯಲ್ಲಿ ಯೆಹೋವನು ನಿಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡುವನು.​—⁠1 ಥೆಸಲೊನೀಕ 5:⁠17.

7. ಬೈಬಲಿನ ಪ್ರಗತಿಪರ ತಿಳುವಳಿಕೆಯ ಕುರಿತಾದ ನಮ್ಮ ನೋಟವನ್ನು ಉತ್ತಮಗೊಳಿಸಲು, ಕಾಯುವ ಮನೋಭಾವವು ನಮಗೆ ಯಾವ ರೀತಿಯಲ್ಲಿ ಸಹಾಯಮಾಡುವುದು?

7 ಬೈಬಲ್‌ ಪ್ರವಾದನೆಗಳು ನೆರವೇರುತ್ತಿರುವಾಗ, ಶಾಸ್ತ್ರವಚನಗಳ ಕುರಿತಾದ ನಮ್ಮ ತಿಳುವಳಿಕೆಯು ಹೆಚ್ಚು ಉತ್ತಮಗೊಳ್ಳುತ್ತದೆ. ಆದರೂ, ಕೆಲವು ವಿಷಯಗಳ ಸ್ಪಷ್ಟೀಕರಣವು ತುಂಬ ತಡವಾಗಿ ಬಂದಿದೆ ಎಂದು ಕೆಲವೊಮ್ಮೆ ನಮಗನಿಸಬಹುದು. ನಾವು ಇಷ್ಟಪಡುವಂತಹ ಸಮಯದಲ್ಲಿ ನಮಗೆ ಸ್ಪಷ್ಟೀಕರಣವು ಕೊಡಲ್ಪಡದಿರುವಾಗ, ನಾವು ಕಾಯುವ ಮನೋಭಾವವನ್ನು ತೋರಿಸುತ್ತೇವೊ? “ಕ್ರಿಸ್ತನ ವಿಷಯವಾದ ಮರ್ಮವು” ಸ್ವಲ್ಪ ಸ್ವಲ್ಪವಾಗಿ, ಅಂದರೆ ಸುಮಾರು 4,000 ವರ್ಷಗಳ ಕಾಲಾವಧಿಯಲ್ಲಿ ಪ್ರಕಟಿಸಲ್ಪಡುವುದು ಯೋಗ್ಯವೆಂದು ಯೆಹೋವನು ಮನಗಂಡನು ಎಂಬುದನ್ನು ನೆನಪಿನಲ್ಲಿಡಿರಿ. (ಎಫೆಸ 3:​3-6) ಹಾಗಾದರೆ, ನಾವು ಅಸಹನೆಯನ್ನು ತೋರಿಸಲು ಯಾವುದಾದರೂ ಕಾರಣವಿದೆಯೊ? ಯೆಹೋವನ ಜನರಿಗೆ “ಹೊತ್ತುಹೊತ್ತಿಗೆ ಆಹಾರ ಕೊಡಲಿಕ್ಕೆ” “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ನೇಮಿಸಲ್ಪಟ್ಟಿದ್ದಾನೆ ಎಂಬುದನ್ನು ನಾವು ಸಂದೇಹಿಸುತ್ತೇವೊ? (ಮತ್ತಾಯ 24:​45, ಓರೆ ಅಕ್ಷರಗಳು ನಮ್ಮವು.) ಎಲ್ಲ ವಿಷಯಗಳು ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲ ಎಂದ ಮಾತ್ರಕ್ಕೆ ನಾವು ಏಕೆ ದೈವಿಕ ಆನಂದದಿಂದ ನಮ್ಮನ್ನು ವಂಚಿಸಿಕೊಳ್ಳಬೇಕು? ‘ತನ್ನ ರಹಸ್ಯವನ್ನು’ ಯಾವಾಗ ಮತ್ತು ಹೇಗೆ ಪ್ರಕಟಪಡಿಸುವುದು ಎಂಬ ವಿಷಯವನ್ನು ಯೆಹೋವನೇ ನಿರ್ಧರಿಸುತ್ತಾನೆ ಎಂಬುದನ್ನು ಎಂದೂ ಮರೆಯದಿರಿ.​—⁠ಆಮೋಸ 3:⁠7.

8. ಯೆಹೋವನ ತಾಳ್ಮೆಯು ಅನೇಕರಿಗೆ ಹೇಗೆ ಪ್ರಯೋಜನದಾಯಕವಾಗಿ ಪರಿಣಮಿಸಿದೆ?

8 ಅನೇಕ ವರ್ಷಗಳ ವರೆಗೆ ನಂಬಿಗಸ್ತಿಕೆಯಿಂದ ದೇವರ ಸೇವೆಮಾಡಿದರೂ, “ಯೆಹೋವನ ಆಗಮನದ ಭಯಂಕರವಾದ ಮಹಾದಿನವು” ಬರುವಾಗ, ಅದನ್ನು ನೋಡಲು ತಾವು ಜೀವಂತವಾಗಿರುವುದಿಲ್ಲ ಎಂಬ ಅನಿಸಿಕೆಯಿಂದ ಕೆಲವರು ನಿರುತ್ಸಾಹಗೊಳ್ಳಬಹುದು. (ಯೋವೇಲ 2:​30, 31) ಆದರೂ, ಸಕಾರಾತ್ಮಕ ಮನೋಭಾವದೊಂದಿಗೆ ನೋಡುವಾಗ ಅವರು ಉತ್ತೇಜಿತರಾಗಸಾಧ್ಯವಿದೆ. ಈ ವಿಷಯದಲ್ಲಿ ಪೇತ್ರನು ಸಲಹೆ ನೀಡಿದ್ದು: “ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಅದೆ ಎಂದು ಎಣಿಸಿಕೊಳ್ಳಿರಿ.” (2 ಪೇತ್ರ 3:15) ಯೆಹೋವನ ತಾಳ್ಮೆಯು, ಲಕ್ಷಾಂತರ ಮಂದಿ ನೀತಿವಂತರಿಗೆ ಸತ್ಯವನ್ನು ಕಲಿಯುವ ಅವಕಾಶವನ್ನು ನೀಡಿದೆ. ಇದು ರೋಮಾಂಚಕವಾದ ಸಂಗತಿಯಾಗಿಲ್ಲವೋ? ಅಷ್ಟುಮಾತ್ರವಲ್ಲ, ಎಷ್ಟರ ತನಕ ಯೆಹೋವನು ತಾಳ್ಮೆಯನ್ನು ತೋರಿಸುತ್ತಾನೋ ಅಷ್ಟರ ತನಕ, ನಾವು ‘ಮನೋಭೀತಿಯಿಂದ ನಡುಗುವವರಾಗಿ ನಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಬೇಕಾಗಿದೆ.’​—⁠ಫಿಲಿಪ್ಪಿ 2:​12; 2 ಪೇತ್ರ 3:​11, 12.

9. ಯೆಹೋವನ ಸೇವೆಯಲ್ಲಿ ನಾವು ಹೆಚ್ಚನ್ನು ಮಾಡಲು ಅಸಮರ್ಥರಾಗಿರುವಲ್ಲಿ, ಈ ಸನ್ನಿವೇಶವನ್ನು ತಾಳ್ಮೆಯಿಂದ ನಿಭಾಯಿಸುವಂತೆ ಕಾಯುವ ಮನೋಭಾವವು ನಮಗೆ ಹೇಗೆ ಸಹಾಯಮಾಡುವುದು?

9 ವಿರೋಧ, ಅಸ್ವಸ್ಥತೆ, ವೃದ್ಧಾಪ್ಯ ಅಥವಾ ಇನ್ನಿತರ ಸಮಸ್ಯೆಗಳು ರಾಜ್ಯದ ಸೇವೆಯಲ್ಲಿ ನಾವು ಹಿಂದೆ ಬೀಳುವಂತೆ ಮಾಡುವಾಗ, ಕಾಯುವ ಮನೋಭಾವವು ನಾವು ನಿರುತ್ಸಾಹಗೊಳ್ಳದಿರುವಂತೆ ನಮಗೆ ಸಹಾಯಮಾಡುತ್ತದೆ. ನಾವು ಮನಃಪೂರ್ವಕವಾಗಿ ತನ್ನ ಸೇವೆ ಮಾಡುವಂತೆ ಯೆಹೋವನು ಬಯಸುತ್ತಾನೆ. (ರೋಮಾಪುರ 12:⁠1) ಆದರೂ, “ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ”ರುವ ದೇವಕುಮಾರನಾಗಲಿ ಅಥವಾ ಯೆಹೋವನಾಗಲಿ, ನಾವು ಮಾಡಸಾಧ್ಯವಿರುವುದಕ್ಕಿಂತ ಹೆಚ್ಚಿನದ್ದನ್ನು ನಮ್ಮಿಂದ ಕೇಳಿಕೊಳ್ಳುವುದಿಲ್ಲ. (ಕೀರ್ತನೆ 72:13) ಹೀಗೆ, ಈ ವಿಷಯಗಳ ವ್ಯವಸ್ಥೆಯಲ್ಲೇ ಆಗಲಿ ಅಥವಾ ಬರಲಿರುವ ವಿಷಯಗಳ ವ್ಯವಸ್ಥೆಯಲ್ಲೇ ಆಗಲಿ, ಸನ್ನಿವೇಶಗಳು ಬದಲಾಗುವ ವರೆಗೆ ತಾಳ್ಮೆಯಿಂದ ಕಾಯುತ್ತಾ, ನಮ್ಮಿಂದಾದಷ್ಟನ್ನು ಮಾಡುವಂತೆ ನಾವು ಉತ್ತೇಜಿಸಲ್ಪಟ್ಟಿದ್ದೇವೆ. ಏಕೆಂದರೆ, “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ” ಎಂಬುದನ್ನು ಮಾತ್ರ ಮರೆಯದಿರಿ.​—⁠ಇಬ್ರಿಯ 6:⁠10.

10. ಕಾಯುವ ಮನೋಭಾವವಿರುವ ಒಬ್ಬನು ಯಾವ ಭಕ್ತಿಹೀನ ಪ್ರವೃತ್ತಿಯಿಂದ ದೂರವಿರಸಾಧ್ಯವಿದೆ ಎಂಬುದನ್ನು ವಿವರಿಸಿರಿ.

10 ಕಾಯುವ ಮನೋಭಾವವು, ದುರಭಿಮಾನದಿಂದ ದೂರವಿರುವಂತೆ ಸಹ ನಮಗೆ ಸಹಾಯಮಾಡುತ್ತದೆ. ಈಗ ಧರ್ಮಭ್ರಷ್ಟರಾಗಿ ಪರಿಣಮಿಸಿರುವ ಕೆಲವರು, ಕಾಯುವ ಮನೋಭಾವವನ್ನು ತೋರಿಸಲು ಇಷ್ಟವಿಲ್ಲದವರಾಗಿದ್ದರು. ಬೈಬಲ್‌ ತಿಳುವಳಿಕೆಯಲ್ಲಿ ಅಥವಾ ಸಂಸ್ಥೆಯ ವಿಷಯಗಳಲ್ಲಿ ಸರಿಪಡಿಸುವಿಕೆಗಳನ್ನು ಮಾಡುವ ಅಗತ್ಯವಿದೆ ಎಂದು ಅವರಿಗೆ ಅನಿಸಿದ್ದಿರಬಹುದು. ಆದರೂ, ನಾವು ಬಯಸುವಾಗ ಅಲ್ಲ, ಬದಲಾಗಿ ಯೆಹೋವನ ಸೂಕ್ತವಾದ ಸಮಯದಲ್ಲಿ ಸರಿಪಡಿಸುವಿಕೆಗಳನ್ನು ಮಾಡುವಂತೆ ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗೆ ದೇವರ ಆತ್ಮವು ಪ್ರಚೋದನೆ ನೀಡುತ್ತದೆ ಎಂಬುದನ್ನು ಅಂಗೀಕರಿಸಲು ಅವರು ತಪ್ಪಿಹೋದರು. ಮತ್ತು ಮಾಡಲ್ಪಡುವ ಯಾವುದೇ ಸರಿಪಡಿಸುವಿಕೆಗಳು, ನಮ್ಮ ವೈಯಕ್ತಿಕ ಅಭಿಪ್ರಾಯಗಳಿಗನುಸಾರವಾಗಿ ಅಲ್ಲ, ಬದಲಾಗಿ ಯೆಹೋವನ ಚಿತ್ತಕ್ಕೆ ಹೊಂದಿಕೆಯಲ್ಲಿರಬೇಕು. ಆದರೆ, ದುರಭಿಮಾನದ ಮನೋಭಾವವು ತಮ್ಮ ಆಲೋಚನೆಯನ್ನು ವಕ್ರಮಾಡುವಂತೆ ಹಾಗೂ ತಮ್ಮನ್ನು ಎಡವಿ ಬೀಳಿಸುವಂತೆ ಧರ್ಮಭ್ರಷ್ಟರು ಅನುಮತಿಸುತ್ತಾರೆ. ಒಂದುವೇಳೆ ಅವರು ಯೇಸುವಿನ ಮನೋಭಾವವನ್ನು ಅಳವಡಿಸಿಕೊಳ್ಳುತ್ತಿದ್ದಲ್ಲಿ, ಅವರು ತಮ್ಮ ಸಂತೋಷವನ್ನು ಕಾಪಾಡಿಕೊಳ್ಳಸಾಧ್ಯವಿತ್ತು ಮತ್ತು ಯೆಹೋವನ ಜನರ ನಡುವೆ ಇರಸಾಧ್ಯವಿತ್ತು.​—⁠ಫಿಲಿಪ್ಪಿ 2:​5-8.

11. ಕಾಯುತ್ತಾ ಕಳೆಯುವ ಸಮಯವನ್ನು ನಾವು ಹೇಗೆ ಲಾಭದಾಯಕವಾಗಿ ಉಪಯೋಗಿಸಸಾಧ್ಯವಿದೆ ಮತ್ತು ಯಾರ ಮಾದರಿಯನ್ನು ಅನುಸರಿಸಸಾಧ್ಯವಿದೆ?

11 ಕಾಯುವ ಮನೋಭಾವವನ್ನು ಕಾಪಾಡಿಕೊಳ್ಳುವುದರ ಅರ್ಥ, ಸೋಮಾರಿಯಾಗಿರುವುದು ಅಥವಾ ಮೈಗಳ್ಳರಾಗಿರುವುದು ಎಂದಲ್ಲ ಎಂಬುದಂತೂ ಖಂಡಿತ. ಕಾಯುವ ಮನೋಭಾವವನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ಕಾರ್ಯನಡಿಸಬೇಕು. ಉದಾಹರಣೆಗೆ, ನಾವು ವೈಯಕ್ತಿಕ ಬೈಬಲ್‌ ಅಧ್ಯಯನದಲ್ಲಿ ಮಗ್ನರಾಗುವ ಅಗತ್ಯವಿದೆ. ಹೀಗೆ ಮಾಡುವುದರಿಂದ, ನಂಬಿಗಸ್ತ ಪ್ರವಾದಿಗಳು ಹಾಗೂ ದೇವದೂತರು ತೀವ್ರಾಸಕ್ತಿಯನ್ನು ತೋರಿಸಿದಂತೆಯೇ ನಾವು ಸಹ ಆತ್ಮಿಕ ವಿಷಯಗಳಲ್ಲಿ ತೀವ್ರಾಸಕ್ತಿಯನ್ನು ತೋರಿಸುವೆವು. ಇಂತಹ ಆಸಕ್ತಿಯ ಕುರಿತು ಮಾತಾಡುತ್ತಾ ಪೇತ್ರನು ಹೇಳುವುದು: “ಪ್ರವಾದಿಗಳು ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆಮಾಡಿದರು . . . ದೇವದೂತರಿಗೂ ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂಬ ಅಪೇಕ್ಷೆ ಉಂಟು.” (1 ಪೇತ್ರ 1:​10-12) ಆದುದರಿಂದ, ವೈಯಕ್ತಿಕ ಅಧ್ಯಯನವನ್ನು ಮಾಡುವುದು ಮಾತ್ರವಲ್ಲ, ಕೂಟಗಳಿಗೆ ಕ್ರಮವಾಗಿ ಹಾಜರಾಗುವುದು ಮತ್ತು ಪ್ರಾರ್ಥನೆಯು ಸಹ ಅತ್ಯಗತ್ಯವಾದದ್ದಾಗಿದೆ. (ಯಾಕೋಬ 4:⁠8) ಹೀಗೆ, ಆತ್ಮಿಕ ಆವಶ್ಯಕತೆಗಳ ಅರಿವು ತಮಗೆ ಇದೆ ಎಂಬುದನ್ನು ತೋರಿಸುವವರು, ಆತ್ಮಿಕ ಆಹಾರವನ್ನು ಕ್ರಮವಾಗಿ ಸೇವಿಸುವರು ಮತ್ತು ಜೊತೆ ಕ್ರೈಸ್ತರೊಂದಿಗೆ ಸಹವಾಸಮಾಡುವರು. ಇಂಥವರು, ತಾವು ಕ್ರಿಸ್ತನ ಮನೋಭಾವವನ್ನು ಅಳವಡಿಸಿಕೊಂಡಿದ್ದೇವೆ ಎಂಬುದನ್ನು ತೋರ್ಪಡಿಸುವರು.​—⁠ಮತ್ತಾಯ 5:⁠3.

ವಾಸ್ತವಿಕ ನೋಟವಿರಲಿ

12. (ಎ) ಆದಾಮಹವ್ವರು ಯಾವ ರೀತಿಯ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಪ್ರಯತ್ನಿಸಿದರು? (ಬಿ) ಮಾನವಕುಲವು ಆದಾಮಹವ್ವರ ಹೆಜ್ಜೆಜಾಡನ್ನು ಹಿಂಬಾಲಿಸಿದ್ದರ ಫಲಿತಾಂಶವೇನಾಗಿದೆ?

12 ದೇವರು ಪ್ರಥಮ ಮಾನವ ದಂಪತಿಯನ್ನು ಸೃಷ್ಟಿಸಿದಾಗ, ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ಮಟ್ಟಗಳನ್ನು ನಿರ್ಧರಿಸುವ ಹಕ್ಕನ್ನು ತನಗಾಗಿ ಮಾತ್ರ ಮೀಸಲಾಗಿಟ್ಟುಕೊಂಡನು. (ಆದಿಕಾಂಡ 2:​16, 17) ಆದರೆ, ಆದಾಮಹವ್ವರು ದೇವರ ಮಾರ್ಗದರ್ಶನದಿಂದ ಸ್ವತಂತ್ರರಾಗಿರಲು ಬಯಸಿದರು. ಇದರ ಫಲಿತಾಂಶವನ್ನೇ ಇಂದು ನಾವು ಲೋಕದಾದ್ಯಂತ ನೋಡುತ್ತಿದ್ದೇವೆ. ಈ ವಿಷಯದಲ್ಲಿ ಅಪೊಸ್ತಲ ಪೌಲನು ಹೇಳಿದ್ದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಆದಾಮನ ಸಮಯದಿಂದ ಗತಿಸಿರುವ ಮಾನವ ಇತಿಹಾಸದ ಆರು ಸಾವಿರ ವರ್ಷಗಳು, ಯೆರೆಮೀಯನ ಮಾತುಗಳ ಸತ್ಯತೆಯನ್ನು ರುಜುಪಡಿಸಿವೆ. ಯೆರೆಮೀಯನು ಹೇಳಿದ್ದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಯೆರೆಮೀಯನ ಮಾತುಗಳು ಸತ್ಯವಾಗಿವೆ ಎಂಬುದನ್ನು ಅಂಗೀಕರಿಸುವುದು, ಸೋಲೊಪ್ಪಿಕೊಳ್ಳುವುದನ್ನು ಅರ್ಥೈಸುವುದಿಲ್ಲ. ಅದು ವಾಸ್ತವ ಸಂಗತಿಯಾಗಿದೆ. ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡಿರುವ’ ದೀರ್ಘ ಶತಮಾನಗಳನ್ನು ಅದು ವಿವರಿಸುತ್ತದೆ. ಏಕೆಂದರೆ ಇಷ್ಟರ ತನಕ ಮಾನವರು ದೇವರ ಮಾರ್ಗದರ್ಶನವಿಲ್ಲದೆ ಸ್ವತಂತ್ರರಾಗಿ ಅಧಿಕಾರ ನಡೆಸಿದ್ದಾರೆ.​—⁠ಪ್ರಸಂಗಿ 8:⁠9.

13. ಮಾನವರಿಂದ ಏನು ಸಾಧಿಸಲ್ಪಡಸಾಧ್ಯವಿದೆ ಎಂಬ ವಿಷಯದಲ್ಲಿ ಯೆಹೋವನ ಸಾಕ್ಷಿಗಳಿಗೆ ಯಾವ ವಾಸ್ತವಿಕ ನೋಟವಿದೆ?

13 ಮಾನವಕುಲದ ಸನ್ನಿವೇಶವನ್ನು ಪರಿಗಣಿಸುವಾಗ, ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಸಾಧಿಸಸಾಧ್ಯವಿರುವುದಕ್ಕೆ ತುಂಬ ಇತಿಮತಿಗಳಿವೆ ಎಂಬುದನ್ನು ಯೆಹೋವನ ಸಾಕ್ಷಿಗಳು ಗ್ರಹಿಸುತ್ತಾರೆ. ವಿಷಯವು ಹೀಗಿರುವಾಗ, ನಾವು ನಮ್ಮ ಆನಂದವನ್ನು ಕಾಪಾಡಿಕೊಳ್ಳುವಂತೆ ಒಂದು ಸಕಾರಾತ್ಮಕವಾದ ಮನೋಭಾವವು ಸಹಾಯಮಾಡಸಾಧ್ಯವಿದೆ. ಆದರೆ ಈ ಮನೋಭಾವವೇ ಎಲ್ಲದಕ್ಕೂ ಪರಿಹಾರವನ್ನು ನೀಡುವುದಿಲ್ಲ. 1950ಗಳ ಆರಂಭದಲ್ಲಿ, ಅಮೆರಿಕದ ಪಾದ್ರಿಯೊಬ್ಬನು ಸಕಾರಾತ್ಮಕವಾಗಿ ಆಲೋಚಿಸುವುದರ ಶಕ್ತಿ (ಇಂಗ್ಲಿಷ್‌) ಎಂಬ ಜನಪ್ರಿಯವಾದ ಒಂದು ಪುಸ್ತಕವನ್ನು ಪ್ರಕಾಶಿಸಿದನು. ಒಂದುವೇಳೆ ಸಕಾರಾತ್ಮಕವಾದ ಮನೋಭಾವದಿಂದ ಅಡ್ಡಿತಡೆಗಳನ್ನು ಎದುರಿಸುವಲ್ಲಿ, ಬಹಳಷ್ಟು ಅಡ್ಡಿತಡೆಗಳನ್ನು ಜಯಿಸಸಾಧ್ಯವಿದೆ ಎಂದು ಈ ಪುಸ್ತಕದಲ್ಲಿ ಸೂಚಿಸಲಾಗಿತ್ತು. ಈ ದೃಷ್ಟಿಕೋನದಿಂದ ನೋಡುವುದಾದರೆ, ಸಕಾರಾತ್ಮಕ ಮನೋಭಾವವು ಮೆಚ್ಚತಕ್ಕದ್ದಾಗಿದೆ ಎಂಬುದಂತೂ ಖಂಡಿತ. ಆದರೆ ಜ್ಞಾನ, ಕೌಶಲ, ಭೌತಿಕ ಸಾಧನಗಳು ಮತ್ತು ಇನ್ನಿತರ ಅಂಶಗಳು, ವ್ಯಕ್ತಿಗತವಾಗಿ ನಾವು ಸಾಧಿಸಸಾಧ್ಯವಿರುವ ವಿಷಯಗಳಿಗೆ ತಡೆಯನ್ನುಂಟುಮಾಡುತ್ತವೆ ಎಂಬುದನ್ನು ಅನುಭವವು ತೋರಿಸುತ್ತದೆ. ಇದಲ್ಲದೆ, ಲೋಕವ್ಯಾಪಕ ಮಟ್ಟದಲ್ಲಿ ನೋಡುವಾಗ ಸಮಸ್ಯೆಗಳು ಬೃಹದಾಕಾರವಾಗಿ ತಲೆದೋರಿವೆ; ಮಾನವರ ಆಲೋಚನೆಯು ಎಷ್ಟೇ ಸಕಾರಾತ್ಮಕವಾಗಿರುವುದಾದರೂ, ಅವರು ಈ ಸಮಸ್ಯೆಗಳನ್ನು ಯಶಸ್ವಿಕರವಾಗಿ ಬಗೆಹರಿಸಲು ಅಸಮರ್ಥರಾಗಿದ್ದಾರೆ!

14. ಯೆಹೋವನ ಸಾಕ್ಷಿಗಳಿಗೆ ನಕಾರಾತ್ಮಕ ಮನೋಭಾವವಿದೆಯೊ? ವಿವರಿಸಿರಿ.

14 ಮಾನವನು ಎಲ್ಲ ಸಮಸ್ಯೆಗಳನ್ನು ತೆಗೆದುಹಾಕಲಾರನು ಎಂಬ ವಿಷಯದಲ್ಲಿ ಯೆಹೋವನ ಸಾಕ್ಷಿಗಳಿಗೆ ವಾಸ್ತವಿಕ ನೋಟವಿರುವುದರಿಂದ, ಇವರಿಗೆ ನಕಾರಾತ್ಮಕ ಮನೋಭಾವವಿದೆ ಎಂದು ಅನೇಕರು ಆಪಾದಿಸುತ್ತಾರೆ. ಆದರೆ, ಮಾನವಕುಲದ ಸನ್ನಿವೇಶವನ್ನು ಶಾಶ್ವತವಾಗಿ ಉತ್ತಮಗೊಳಿಸಲಿರುವಾತನ ಬಗ್ಗೆ ಜನರಿಗೆ ಹೇಳಲು ಯೆಹೋವನ ಸಾಕ್ಷಿಗಳು ತವಕಿಸುತ್ತಾರೆ. ಈ ವಿಷಯದಲ್ಲಿಯೂ ಅವರು ಕ್ರಿಸ್ತನ ಮನೋಭಾವವನ್ನು ಅನುಕರಿಸುತ್ತಾರೆ. (ರೋಮಾಪುರ 15:⁠2) ಅಷ್ಟುಮಾತ್ರವಲ್ಲ, ದೇವರೊಂದಿಗೆ ಒಳ್ಳೆಯ ಸಂಬಂಧವನ್ನು ಪಡೆದುಕೊಳ್ಳುವಂತೆ ಜನರಿಗೆ ಸಹಾಯಮಾಡುವುದರಲ್ಲಿ ಅವರು ತುಂಬ ಕಾರ್ಯಮಗ್ನರಾಗಿದ್ದಾರೆ. ಕಟ್ಟಕಡೆಗೆ ಇದು ಬಹಳಷ್ಟು ಒಳಿತನ್ನು ಉಂಟುಮಾಡುವುದು ಎಂಬುದು ಅವರಿಗೆ ಗೊತ್ತಿದೆ.​—⁠ಮತ್ತಾಯ 28:​19, 20; 1 ತಿಮೊಥೆಯ 4:⁠16.

15. ಯೆಹೋವನ ಸಾಕ್ಷಿಗಳ ಕೆಲಸವು ಜನರ ಜೀವಿತಗಳನ್ನು ಹೇಗೆ ಉತ್ತಮಗೊಳಿಸುತ್ತದೆ?

15 ಯೆಹೋವನ ಸಾಕ್ಷಿಗಳು ತಮ್ಮ ಸುತ್ತಲಿರುವ ಸಾಮಾಜಿಕ ಸಮಸ್ಯೆಗಳನ್ನು, ವಿಶೇಷವಾಗಿ ತಮ್ಮನ್ನು ಕಲುಷಿತಗೊಳಿಸುವ ಅಶಾಸ್ತ್ರೀಯ ದುರಭ್ಯಾಸಗಳನ್ನು ಕಡೆಗಣಿಸುವುದಿಲ್ಲ. ಒಬ್ಬ ಆಸಕ್ತ ವ್ಯಕ್ತಿಯು ಯೆಹೋವನ ಸಾಕ್ಷಿಯಾಗಿ ಪರಿಣಮಿಸುವುದಕ್ಕೆ ಮೊದಲು ಬದಲಾವಣೆಗಳನ್ನು ಮಾಡುತ್ತಾನೆ. ಇದರ ಅರ್ಥ, ದೇವರಿಗೆ ಅಸಂತೋಷವನ್ನು ಉಂಟುಮಾಡುವಂತಹ ಯಾವುದೇ ದುರ್ಗುಣಗಳಿರುವಲ್ಲಿ ಅವುಗಳನ್ನು ಬಿಟ್ಟುಬಿಡುವುದೇ ಆಗಿದೆ. (1 ಕೊರಿಂಥ 6:​9-11) ಹೀಗೆ ಯೆಹೋವನ ಸಾಕ್ಷಿಗಳು, ತಮ್ಮ ಸಂದೇಶಕ್ಕೆ ಯಾರು ಪ್ರತಿಕ್ರಿಯೆ ತೋರಿಸುತ್ತಾರೋ ಅವರು ಕುಡಿಕತನ, ಅಮಲೌಷಧ ಚಟ, ಅನೈತಿಕತೆ ಮತ್ತು ಜೂಜಾಟದಂತಹ ದುರಭ್ಯಾಸಗಳನ್ನು ಜಯಿಸುವಂತೆ ಸಹಾಯಮಾಡಿದ್ದಾರೆ. ಈ ರೀತಿಯಲ್ಲಿ ಒಳ್ಳೆಯ ಮಾರ್ಗವನ್ನು ಹಿಡಿದ ಅನೇಕ ವ್ಯಕ್ತಿಗಳು, ಈಗ ಜವಾಬ್ದಾರಿಯಿಂದ ಹಾಗೂ ಪ್ರಾಮಾಣಿಕ ರೀತಿಯಲ್ಲಿ ತಮ್ಮ ಕುಟುಂಬಗಳನ್ನು ನೋಡಿಕೊಳ್ಳುತ್ತಿದ್ದಾರೆ. (1 ತಿಮೊಥೆಯ 5:⁠8) ಈ ರೀತಿಯಲ್ಲಿ ವ್ಯಕ್ತಿಗಳು ಮತ್ತು ಕುಟುಂಬಗಳು ಸಹಾಯಮಾಡಲ್ಪಡುವಾಗ, ಒಂದು ಸಮುದಾಯದಲ್ಲಿರುವ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಮಲೌಷಧದ ವ್ಯಸನಿಗಳು ಕಡಿಮೆಯಾಗುತ್ತಾರೆ, ಕುಟುಂಬದ ಹಿಂಸಾಚಾರಗಳು ಹಾಗೂ ಇನ್ನಿತರ ಸಮಸ್ಯೆಗಳು ಕಡಿಮೆಯಾಗುತ್ತವೆ. ಸ್ವತಃ ತಾವೇ ನಿಯಮಪಾಲಕ ಪ್ರಜೆಗಳಾಗಿರುವ ಮೂಲಕ ಹಾಗೂ ತಮ್ಮ ಜೀವಿತಗಳನ್ನು ಬದಲಾಯಿಸುವಂತೆ ಇತರರಿಗೆ ಸಹಾಯಮಾಡುವ ಮೂಲಕ, ಸಾಮಾಜಿಕ ಸಮಸ್ಯೆಗಳೊಂದಿಗೆ ವ್ಯವಹರಿಸಲಿಕ್ಕಾಗಿ ಕಾರ್ಯನಡಿಸುವ ಏಜೆನ್ಸಿಗಳ ಹೊರೆಯನ್ನು ಯೆಹೋವನ ಸಾಕ್ಷಿಗಳು ಕಡಿಮೆಗೊಳಿಸುತ್ತಾರೆ.

16. ಐಹಿಕ ಸುಧಾರಣಾ ಚಳುವಳಿಗಳಲ್ಲಿ ಯೆಹೋವನ ಸಾಕ್ಷಿಗಳು ಏಕೆ ಒಳಗೂಡುವುದಿಲ್ಲ?

16 ಹಾಗಾದರೆ, ಯೆಹೋವನ ಸಾಕ್ಷಿಗಳು ಈ ಲೋಕದ ನೈತಿಕ ವಾತಾವರಣವನ್ನು ಬದಲಾಯಿಸಿದ್ದಾರೋ? ಹೌದೆಂದು ಹೇಳಸಾಧ್ಯವಿದೆ. ಏಕೆಂದರೆ ಕಳೆದ ದಶಕದಲ್ಲಿ, ಕ್ರಿಯಾಶೀಲ ಸಾಕ್ಷಿಗಳ ಸಂಖ್ಯೆಯು 38,00,000ದಿಂದ ಬಹುಮಟ್ಟಿಗೆ 60,00,000ಕ್ಕೆ ಏರಿತು. ಅಂದರೆ ಸುಮಾರು 22,00,000 ಮಂದಿ ಈ ಗುಂಪಿಗೆ ಸೇರಿಕೊಂಡರು. ಇವರಲ್ಲಿ ಅನೇಕರು ಈ ಮುಂಚೆ ಅನೀತಿಯ ಕೃತ್ಯಗಳನ್ನು ನಡಿಸುತ್ತಿದ್ದರಾದರೂ, ಕ್ರೈಸ್ತರಾದ ಬಳಿಕ ಅಂತಹ ಎಲ್ಲ ಕೆಲಸಗಳನ್ನು ಬಿಟ್ಟುಬಿಟ್ಟರು. ಅನೇಕರ ಜೀವಿತಗಳು ಉತ್ತಮಗೊಂಡವು! ಆದರೂ, ಅದೇ ಸಮಯಾವಧಿಯಲ್ಲಿ ಲೋಕದ ಜನಸಂಖ್ಯೆಯಲ್ಲಿ ಉಂಟಾದ ಹೆಚ್ಚಳದೊಂದಿಗೆ, ಅಂದರೆ 87,50,00,000 ಮಂದಿಗೆ ಹೋಲಿಸುವಾಗ, ಈ ಸಂಖ್ಯೆಯು ತುಂಬ ಚಿಕ್ಕದಾಗಿದೆ! ಮಾನವಕುಲದಲ್ಲಿ ಕೇವಲ ಕೆಲವರು ಮಾತ್ರ ಜೀವಕ್ಕೆ ಹೋಗುವ ದಾರಿಯನ್ನು ಅನುಸರಿಸುತ್ತಾರೆಂಬುದು ಗೊತ್ತಿರುವುದಾದರೂ, ಪ್ರತಿಕ್ರಿಯೆ ತೋರಿಸುವಂತಹ ಜನರಿಗೆ ಸಹಾಯಮಾಡುವುದನ್ನು ಯೆಹೋವನ ಸಾಕ್ಷಿಗಳು ಆನಂದದ ಮೂಲವಾಗಿ ಕಂಡುಕೊಂಡಿದ್ದಾರೆ. (ಮತ್ತಾಯ 7:​13, 14) ದೇವರು ಮಾತ್ರ ಮಾಡಸಾಧ್ಯವಿರುವ ಲೋಕವ್ಯಾಪಕ ಬದಲಾವಣೆಗಳಿಗಾಗಿ ಯೆಹೋವನ ಸಾಕ್ಷಿಗಳು ಎದುರುನೋಡುತ್ತಾರೆ. ಆದರೆ ಐಹಿಕ ಸುಧಾರಣ ಚಳುವಳಿಗಳಲ್ಲಿ ಅವರೆಂದೂ ಒಳಗೂಡುವುದಿಲ್ಲ. ಏಕೆಂದರೆ ಇಂತಹ ಚಳುವಳಿಗಳು ಒಳ್ಳೆಯ ಉದ್ದೇಶಗಳೊಂದಿಗೆ ಆರಂಭವಾದರೂ, ಕೇವಲ ನಿರಾಶೆ ಅಥವಾ ಹಿಂಸಾಚಾರದಲ್ಲಿ ಕೊನೆಗೊಳ್ಳುತ್ತವೆ.​—⁠2 ಪೇತ್ರ 3:⁠13.

17. ತನ್ನ ಸುತ್ತಲಿದ್ದ ಜನರಿಗೆ ಸಹಾಯಮಾಡಲಿಕ್ಕಾಗಿ ಯೇಸು ಏನು ಮಾಡಿದನು, ಆದರೆ ಅವನು ಏನನ್ನು ಮಾಡಲಿಲ್ಲ?

17 ಯೇಸು ಭೂಮಿಯಲ್ಲಿದ್ದಾಗ ಯೆಹೋವನಲ್ಲಿ ಹೇಗೆ ಭರವಸೆಯಿಟ್ಟಿದ್ದನೋ ಅದೇ ರೀತಿಯ ಭರವಸೆಯನ್ನು, ಜೀವದ ಮಾರ್ಗವನ್ನು ಬೆನ್ನಟ್ಟುತ್ತಿರುವ ಯೆಹೋವನ ಸಾಕ್ಷಿಗಳು ಸಹ ತೋರಿಸುತ್ತಾರೆ. ಪ್ರಥಮ ಶತಮಾನದಲ್ಲಿ, ಯೇಸು ಅನೇಕರನ್ನು ವಾಸಿಮಾಡುವ ಮೂಲಕ ಅದ್ಭುತ ಕೃತ್ಯಗಳನ್ನು ನಡಿಸಿದನು. (ಲೂಕ 6:​17-19) ಅವನು ಮೃತರನ್ನು ಸಹ ಪುನರುತ್ಥಾನಗೊಳಿಸಿದನು. (ಲೂಕ 7:​11-15; 8:​49-56) ಆದರೆ ಆಗ ಅವನು ಅಸ್ವಸ್ಥತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲಿಲ್ಲ ಅಥವಾ ಮರಣವೆಂಬ ಶತ್ರುವನ್ನು ಶಾಶ್ವತವಾಗಿ ಜಯಿಸಲಿಲ್ಲ. ಇದನ್ನು ಪೂರೈಸಲು ಇನ್ನೂ ದೇವರ ಕ್ಲುಪ್ತ ಕಾಲವು ಬಂದಿಲ್ಲ ಎಂಬುದು ಅವನಿಗೆ ಗೊತ್ತಿತ್ತು. ಒಬ್ಬ ಪರಿಪೂರ್ಣ ಮಾನವನೋಪಾದಿ ಅತ್ಯುತ್ಕೃಷ್ಟ ಸಾಮರ್ಥ್ಯಗಳಿದ್ದ ಯೇಸು, ಗಂಭೀರವಾದ ರಾಜಕೀಯ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಸಾಧ್ಯವಿತ್ತು. ಅಷ್ಟುಮಾತ್ರವಲ್ಲ, ಅವನ ಸಮಕಾಲೀನರಲ್ಲಿ ಕೆಲವರು ಯೇಸು ಅಧಿಕಾರವನ್ನು ವಹಿಸಿಕೊಂಡು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವಂತೆ ಕೇಳಿಕೊಂಡರು. ಆದರೆ ಯೇಸು ಮಾತ್ರ ನಿರಾಕರಿಸಿದನು. ನಾವು ಓದುವುದು: “ಆತನು ಮಾಡಿದ ಈ ಸೂಚಕಕಾರ್ಯವನ್ನು ಆ ಜನರು ನೋಡಿ​—⁠ಲೋಕಕ್ಕೆ ಬರಬೇಕಾದ ಪ್ರವಾದಿ ಈತನೇ ನಿಜ ಎಂದು ಹೇಳಿಕೊಂಡರು. ಆಗ ಯೇಸು​—⁠ಅವರು ಬಂದು ತನ್ನನ್ನು ಹಿಡುಕೊಂಡುಹೋಗಿ ಅರಸನನ್ನಾಗಿ ಮಾಡಬೇಕೆಂಬ ಯೋಚನೆಯಲ್ಲಿದ್ದಾರೆಂದು ತಿಳಿದುಕೊಂಡು ತಿರಿಗಿ ತಾನೊಬ್ಬನೇ ಒಂಟಿಗನಾಗಿ ಬೆಟ್ಟಕ್ಕೆ ಹೋಗಿಬಿಟ್ಟನು.”​—⁠ಯೋಹಾನ 6:​14, 15.

18. (ಎ) ಯೇಸು ಹೇಗೆ ಯಾವಾಗಲೂ ಕಾಯುವ ಮನೋಭಾವವನ್ನು ತೋರಿಸಿದ್ದಾನೆ? (ಬಿ) ಯೇಸುವಿನ ಚಟುವಟಿಕೆಯು 1914ರಿಂದ ಹೇಗೆ ಬದಲಾಗಿದೆ?

18 ರಾಜಕೀಯದಲ್ಲಿ ಅಥವಾ ಕೇವಲ ಸಮಾಜ ಸೇವೆಯಲ್ಲಿ ಒಳಗೂಡಲು ಯೇಸು ನಿರಾಕರಿಸಿದನು. ಏಕೆಂದರೆ, ರಾಜನಂತೆ ಅಧಿಕಾರವನ್ನು ನಡೆಸುವ ಮತ್ತು ಎಲ್ಲ ಕಡೆಗಳಲ್ಲಿ ವಾಸಿಮಾಡುವಿಕೆಯ ಅದ್ಭುತ ಕೃತ್ಯಗಳನ್ನು ನಡಿಸುವ ನೇಮಿತ ಸಮಯವು ಇನ್ನೂ ಬಂದಿರಲಿಲ್ಲ ಎಂಬುದು ಅವನಿಗೆ ಗೊತ್ತಿತ್ತು. ಅವನು ಅಮರ ಆತ್ಮಜೀವಿಯೋಪಾದಿ ಸ್ವರ್ಗಕ್ಕೆ ಹೋದ ಬಳಿಕವೂ, ರಾಜನಾಗಿ ಅಧಿಕಾರ ವಹಿಸುವುದಕ್ಕೆ ಮೊದಲು ಯೆಹೋವನ ನೇಮಿತ ಸಮಯಕ್ಕಾಗಿ ಕಾಯಲು ಸಿದ್ಧನಾಗಿದ್ದನು. (ಕೀರ್ತನೆ 110:1; ಅ. ಕೃತ್ಯಗಳು 2:​34, 35) ಆದರೂ, 1914ರಲ್ಲಿ ಅವನು ದೇವರ ರಾಜ್ಯದ ಅರಸನಾಗಿ ಸಿಂಹಾಸನವನ್ನು ಏರಿದಂದಿನಿಂದ, “ಜಯಿಸುತ್ತಿರುವವನಾಗಿ ಜಯಿಸುವದಕ್ಕೋಸ್ಕರ” ಮುಂದುವರಿಯುತ್ತಿದ್ದಾನೆ. (ಪ್ರಕಟನೆ 6:2; 12:10) ಕ್ರೈಸ್ತರೆಂದು ಹೇಳಿಕೊಳ್ಳುವ ಇತರರು, ದೇವರ ರಾಜ್ಯದ ಕುರಿತಾದ ಬೈಬಲ್‌ ಬೋಧನೆಗಳ ವಿಷಯದಲ್ಲಿ ಅಜ್ಞಾನಿಗಳಾಗಿ ಉಳಿಯುವ ಆಯ್ಕೆಮಾಡಿಕೊಂಡಿರುವಾಗ, ನಾವು ಯೇಸುವಿನ ರಾಜ್ಯಾಧಿಕಾರಕ್ಕೆ ನಮ್ಮನ್ನು ಅಧೀನಪಡಿಸಿಕೊಳ್ಳುತ್ತಿರುವುದು ಎಂತಹ ಕೃತಜ್ಞತೆಯ ಸಂಗತಿಯಾಗಿದೆ!

ಕಾಯುವುದು​—⁠ಆಶಾಭಂಗದ ಮೂಲವೊ ಅಥವಾ ಸಂತೋಷದ ಮೂಲವೊ?

19. ಕಾಯುವ ಮನೋಭಾವವು ಯಾವಾಗ ‘ಮನಸ್ಸನ್ನು ಅಸ್ವಸ್ಥಗೊಳಿಸುತ್ತದೆ’ ಮತ್ತು ಯಾವಾಗ ಅದು ಸಂತೋಷದ ಮೂಲವಾಗಿರುತ್ತದೆ?

19 ಕಾಯುವುದು ಆಶಾಭಂಗವನ್ನು ಉಂಟುಮಾಡಸಾಧ್ಯವಿದೆ ಎಂಬುದು ಸೊಲೊಮೋನನಿಗೆ ತಿಳಿದಿತ್ತು. ಆದುದರಿಂದಲೇ ಅವನು ಬರೆದುದು: “ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು [“ಅಸ್ವಸ್ಥಗೊಳ್ಳುವುದು,” NW].” (ಜ್ಞಾನೋಕ್ತಿ 13:12) ಈ ವಚನಕ್ಕನುಸಾರ, ಒಬ್ಬ ವ್ಯಕ್ತಿಯು ನಿರಾಧಾರವಾದ ನಿರೀಕ್ಷೆಗಳನ್ನು ಇಟ್ಟುಕೊಂಡಿರುವಲ್ಲಿ, ಆ ನಿರೀಕ್ಷೆಗಳು ನೆರವೇರದಿರುವಾಗ ನಿರಾಶೆಯಿಂದ ಮನಸ್ಸು ಅಸ್ವಸ್ಥಗೊಳ್ಳಸಾಧ್ಯವಿದೆ. ಆದರೆ ಒಂದು ಮದುವೆ, ಮಗುವಿನ ಜನನ, ಅಥವಾ ನಾವು ಪ್ರೀತಿಸುವಂತಹ ಜನರೊಂದಿಗಿನ ಪುನರ್ಮಿಲನದಂತಹ ಸಂತೋಷಭರಿತ ಘಟನೆಗಳಿಗಾಗಿ ಕಾಯುತ್ತಿರುವಾಗ, ಆ ನಿಗದಿತ ದಿನವು ಬರುವುದಕ್ಕೆ ಮೊದಲೇ ನಿರೀಕ್ಷಣೆಯ ಸಂತೋಷದಿಂದ ನಮ್ಮ ಮನಸ್ಸು ಹಿಗ್ಗಸಾಧ್ಯವಿದೆ. ಈ ನಡುವೆ, ಬರಲಿರುವಂತಹ ಆ ವಿಶೇಷ ಘಟನೆಗಳಿಗಾಗಿ ಸಿದ್ಧತೆಗಳನ್ನು ಮಾಡುವ ಮೂಲಕ ಕಾಯುತ್ತಿರುವಂತಹ ಸಮಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸುವಲ್ಲಿ, ಆ ಸಂತೋಷವು ಇನ್ನೂ ಅಧಿಕವಾಗುತ್ತದೆ.

20. (ಎ) ಯಾವ ಆಶ್ಚರ್ಯಕರ ಘಟನೆಗಳನ್ನು ನೋಡಲು ನಾವು ದೃಢ ಭರವಸೆಯಿಂದ ಎದುರುನೋಡುತ್ತಿದ್ದೇವೆ? (ಬಿ) ಯೆಹೋವನ ಉದ್ದೇಶಗಳ ನೆರವೇರಿಕೆಗಾಗಿ ಕಾಯುತ್ತಿರುವಾಗ ನಾವು ಸಂತೋಷವನ್ನು ಹೇಗೆ ಕಂಡುಕೊಳ್ಳಸಾಧ್ಯವಿದೆ?

20 ನಮ್ಮ ನಿರೀಕ್ಷೆಗಳು ಯಾವಾಗ ಪೂರೈಸಲ್ಪಡುವವು ಎಂಬುದು ನಮಗೆ ಗೊತ್ತಿಲ್ಲದಿರುವುದಾದರೂ, ಅವು ಖಂಡಿತವಾಗಿಯೂ ಪೂರೈಸಲ್ಪಡುತ್ತವೆ ಎಂಬ ದೃಢ ಭರವಸೆಯು ನಮಗಿರುವಾಗ, ಕಾಯುವ ಆ ಸಮಯಾವಧಿಯು ‘ಮನಸ್ಸನ್ನು ಅಸ್ವಸ್ಥಗೊಳಿಸುವುದಿಲ್ಲ.’ ಕ್ರಿಸ್ತನ ಸಾವಿರ ವರ್ಷದಾಳಿಕೆಯು ಸನ್ನಿಹಿತವಾಗಿದೆ ಎಂಬುದು ದೇವರ ನಂಬಿಗಸ್ತ ಆರಾಧಕರಿಗೆ ತಿಳಿದಿದೆ. ಮರಣ ಹಾಗೂ ರೋಗದ ಅಂತ್ಯವನ್ನು ತಾವು ನೋಡಲಿದ್ದೇವೆ ಎಂಬ ಭರವಸೆ ದೇವಜನರಿಗೆ ಇದೆ. ತಮ್ಮ ಮೃತ ಪ್ರಿಯರನ್ನೂ ಒಳಗೊಂಡು ಅಸಂಖ್ಯಾತ ಮೃತರು ಪುನರುತ್ಥಾನಗೊಳಿಸಲ್ಪಡುವಾಗ, ಅವರನ್ನು ಸ್ವಾಗತಿಸುವಂತಹ ಸಮಯಕ್ಕಾಗಿ ಅವರು ಅತ್ಯಾತುರದಿಂದ ಹಾಗೂ ಸಂತೋಷದಿಂದ ಎದುರುನೋಡುತ್ತಿದ್ದಾರೆ. (ಪ್ರಕಟನೆ 20:​1-3, 6; 21:​3, 4) ಪರಿಸರವಿಜ್ಞಾನಕ್ಕೆ ಸಂಬಂಧಪಟ್ಟ ಬಿಕ್ಕಟ್ಟುಗಳು ಹೆಚ್ಚುತ್ತಿರುವ ಈ ಸಮಯದಲ್ಲಿ, ಭೂಮಿಯಲ್ಲಿ ಸ್ಥಾಪಿಸಲ್ಪಡುವ ಪ್ರಮೋದವನವನ್ನು ನೋಡುವ ಪ್ರತೀಕ್ಷೆಯನ್ನು ಅವರು ಮುನ್ನೋಡುತ್ತಾರೆ. (ಯೆಶಾಯ 35:​1, 2, 7) ಹಾಗಾದರೆ, ‘ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿದ್ದು,’ ಕಾಯುತ್ತಿರುವ ಸಮಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸುವುದು ಎಷ್ಟು ವಿವೇಕಭರಿತವಾದದ್ದಾಗಿರುವುದು! (1 ಕೊರಿಂಥ 15:58) ಯಾವಾಗಲೂ ಆತ್ಮಿಕ ಆಹಾರವನ್ನು ಸೇವಿಸುತ್ತಾ ಇರಿ. ಯೆಹೋವನೊಂದಿಗೆ ಇನ್ನೂ ನಿಕಟ ಸಂಬಂಧವನ್ನು ಇಟ್ಟುಕೊಳ್ಳಿರಿ. ಯಾರ ಹೃದಯಗಳು ಯೆಹೋವನ ಸೇವೆಮಾಡುವಂತೆ ಪ್ರಚೋದಿಸಸಾಧ್ಯವಿದೆಯೋ ಅಂತಹವರನ್ನು ಹುಡುಕಿರಿ. ಜೊತೆವಿಶ್ವಾಸಿಗಳನ್ನು ಉತ್ತೇಜಿಸಿರಿ. ಯೆಹೋವನು ಎಷ್ಟು ಕಾಲಾವಕಾಶವನ್ನು ಕೊಡುತ್ತಾನೋ ಅಷ್ಟನ್ನು ಪೂರ್ಣವಾಗಿ ಸದುಪಯೋಗಿಸಿಕೊಳ್ಳಿರಿ. ಆಗ, ಯೆಹೋವನು ಕಾರ್ಯನಡಿಸುವ ಸಮಯಕ್ಕೋಸ್ಕರ ಕಾಯುವುದು ನಿಮ್ಮ ‘ಮನಸ್ಸನ್ನು ಅಸ್ವಸ್ಥ’ಗೊಳಿಸುವುದಿಲ್ಲ. ಅದಕ್ಕೆ ಬದಲಾಗಿ, ಅದು ನಿಮ್ಮ ಮನಸ್ಸನ್ನು ಸಂತೋಷದಿಂದ ಹಿಗ್ಗಿಸುವುದು!

ನೀವು ವಿವರಿಸಬಲ್ಲಿರೊ?

• ಯೇಸು ಕಾಯುವ ಮನೋಭಾವವನ್ನು ಹೇಗೆ ತೋರಿಸಿದನು?

• ಯಾವ ಸನ್ನಿವೇಶಗಳಲ್ಲಿ ಕ್ರೈಸ್ತರು ಕಾಯುವ ಮನೋಭಾವವನ್ನು ತೋರಿಸುವ ಅಗತ್ಯವಿದೆ?

• ಯೆಹೋವನಿಗೋಸ್ಕರ ಕಾಯುತ್ತಿರುವಾಗ ಯೆಹೋವನ ಸಾಕ್ಷಿಗಳು ಏಕೆ ತೃಪ್ತಿಯಿಂದಿರುತ್ತಾರೆ?

• ಯೆಹೋವನು ಕಾರ್ಯನಡಿಸುವ ಸಮಯಕ್ಕೋಸ್ಕರ ಕಾಯುತ್ತಿರುವುದನ್ನು ನಾವು ಸಂತೋಷದ ಮೂಲವಾಗಿ ಹೇಗೆ ಮಾಡಿಕೊಳ್ಳಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 12ರಲ್ಲಿರುವ ಚಿತ್ರಗಳು]

ತನ್ನ ಮುಂದೆ ಇಡಲ್ಪಟ್ಟಿದ್ದ ಸಂತೋಷಕ್ಕೋಸ್ಕರ ಯೇಸು ಎಲ್ಲವನ್ನೂ ಸಹಿಸಿಕೊಂಡನು

[ಪುಟ 13ರಲ್ಲಿರುವ ಚಿತ್ರ]

ಅನೇಕ ವರ್ಷಗಳ ವರೆಗೆ ದೇವರ ಸೇವೆಮಾಡಿದ ಬಳಿಕವೂ ನಾವು ನಮ್ಮ ಸಂತೋಷವನ್ನು ಕಾಪಾಡಿಕೊಳ್ಳಸಾಧ್ಯವಿದೆ

[ಪುಟ 15ರಲ್ಲಿರುವ ಚಿತ್ರಗಳು]

ಲಕ್ಷಾಂತರ ಜನರು ಯೆಹೋವನ ಸಾಕ್ಷಿಗಳಾಗುವ ಮೂಲಕ ತಮ್ಮ ಜೀವಿತಗಳನ್ನು ಉತ್ತಮಗೊಳಿಸಿಕೊಂಡಿದ್ದಾರೆ