ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚಿಲಿ ದೇಶದಲ್ಲಿ ಸತ್ಯದ ಬೀಜಗಳಿಗೆ ನೀರು ಹೊಯ್ಯುವುದು

ಚಿಲಿ ದೇಶದಲ್ಲಿ ಸತ್ಯದ ಬೀಜಗಳಿಗೆ ನೀರು ಹೊಯ್ಯುವುದು

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ಚಿಲಿ ದೇಶದಲ್ಲಿ ಸತ್ಯದ ಬೀಜಗಳಿಗೆ ನೀರು ಹೊಯ್ಯುವುದು

ಉತ್ತರ ಚಿಲಿಯ ಮರುಭೂಮಿಯಲ್ಲಿ, ಮಳೆ ಬೀಳುವುದಕ್ಕೆ ವರ್ಷಗಳೇ ತಗಲಬಹುದು. ಆದರೆ ಮಳೆ ಬಂತೆಂದರೆ, ಕಲ್ಲುಬಂಡೆಗಳ ಒಣನೆಲವು ಕಣ್ಣಿಗೆ ಸೊಬಗನ್ನು ಉಂಟುಮಾಡುವ ರಂಗುರಂಗಿನ ಕುಸುಮಗಳಿಂದ ನಳನಳಿಸುತ್ತದೆ. ರತ್ನಗಂಬಳಿಯು ಹಾಸಲ್ಪಟ್ಟಿದೆಯೋ ಎಂಬಂತಿರುತ್ತದೆ. ಈ ನಯನಮನೋಹರ ದೃಶ್ಯವು ಎಲ್ಲ ಕಡೆಯಿಂದಲೂ ಬರುವ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತದೆ.

ಆದರೆ, ಚಿಲಿಯ ಜನರ ಮಧ್ಯೆ ಇನ್ನೊಂದು ಆಸಕ್ತಿಕರವಾದ ಸಂಗತಿಯು ನಡೆಯುತ್ತಿದೆ. ಅದೇನೆಂದರೆ, ಆ ದೇಶದ ಮೂಲೆಮೂಲೆಯಲ್ಲಿಯೂ ಬೈಬಲಿನ ಸತ್ಯದ ನೀರು ಉಕ್ಕಿಹರಿಯುತ್ತಿದೆ. ಅನೇಕ ಪ್ರಾಮಾಣಿಕ ಹೃದಯದ ಜನರು ಯೇಸು ಕ್ರಿಸ್ತನ ಶಿಷ್ಯರಾಗಿ “ಅರಳುತ್ತಿದ್ದಾರೆ.” ಸತ್ಯದ ನೀರನ್ನು ಹೊಯ್ಯುವ ಒಂದು ಮಾಧ್ಯಮವು ಟೆಲಿಫೋನ್‌ ಆಗಿದೆ. ಸಾಕ್ಷಿಕಾರ್ಯದ ಈ ವಿಧಾನದಿಂದ ಸಿಕ್ಕಿರುವ ಉತ್ತಮ ಫಲಿತಾಂಶಗಳನ್ನು ಈ ಮುಂದಿನ ಅನುಭವಗಳು ತಿಳಿಸುತ್ತವೆ.

• ಕರೀನಾ ಎಂಬ ಪೂರ್ಣಸಮಯದ ಸೌವಾರ್ತಿಕಳು, ಸರ್ಕಿಟ್‌ ಅಸೆಂಬ್ಲಿಯಲ್ಲಿ ಟೆಲಿಫೋನ್‌ ಮೂಲಕ ಹೇಗೆ ಸಾಕ್ಷಿ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿ ತೋರಿಸಬೇಕಾಗಿತ್ತು. ಆದರೆ ಈ ರೀತಿಯಲ್ಲಿ ಅವಳೆಂದೂ ಸಾಕ್ಷಿನೀಡಿರಲಿಲ್ಲ. ಅಸೆಂಬ್ಲಿಯ ಕಾರ್ಯಕ್ರಮದಲ್ಲಿ ಪ್ರತ್ಯಕ್ಷಾಭಿನಯ ಮಾಡಿ ತೋರಿಸುವಂತೆ ಅವಳಿಗೆ ಉತ್ತೇಜನ ನೀಡಲು, ಟೆಲಿಫೋನ್‌ ಮೂಲಕ ಹೇಗೆ ಸಾಕ್ಷಿ ನೀಡುವುದು ಎಂಬುದರ ಬಗ್ಗೆ ಕೆಲವೊಂದು ಅಂಶಗಳನ್ನು ಅಲ್ಲಿನ ಹಿರಿಯನು ಮತ್ತು ಅವನ ಪತ್ನಿಯು ಪುನರ್ವಿಮರ್ಶಿಸಿದರು. ಈ ವಿಷಯದಲ್ಲಿ ಯೆಹೋವನಿಗೆ ಪ್ರಾರ್ಥನೆಮಾಡುವಂತೆ ಸಹ ಪ್ರೋತ್ಸಾಹಿಸಿದರು. ಅವಳು ಪ್ರಾರ್ಥನೆಮಾಡಿ, ಟೆಲಿಫೋನ್‌ ಮಾಡಲು ನಿರ್ಧರಿಸಿದಳು.

ಹತ್ತಿರದ ಹಳ್ಳಿಯೊಂದರ ಟೆಲಿಫೋನ್‌ ನಂಬರಿಗೆ ಕರೀನಾ ಫೋನ್‌ ಮಾಡಿದಳು. ಮೊದಲು ಟೆಲಿಫೋನ್‌ ಆಪರೇಟರ್‌ ಮಾತಾಡಿದಳು, ಆಗ ಕರೀನಾ ತಾನು ಫೋನ್‌ ಮಾಡಿದ ಉದ್ದೇಶವೇನೆಂಬುದನ್ನು ವಿವರಿಸಿದಳು. ಆಪರೇಟರಿನ ಪ್ರತಿಕ್ರಿಯೆಯು ಒಳ್ಳೆಯದಾಗಿತ್ತು ಮತ್ತು ಮೂರು ದಿವಸಗಳಲ್ಲಿ ಮತ್ತೆ ತಾನು ಫೋನ್‌ ಮಾಡುತ್ತೇನೆಂದು ಕರೀನಾ ಹೇಳಿದಳು. ಟೆಲಿಫೋನ್‌ ಮೂಲಕ ಮಾಡಲ್ಪಟ್ಟ ಪುನರ್ಭೇಟಿಯು ಬೈಬಲ್‌ ಅಭ್ಯಾಸಕ್ಕೆ ನಡೆಸಿತು. ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ಕರೀನಾ ಉಪಯೋಗಿಸಿದಳು. ಅಂದಿನಿಂದ, ಆಸಕ್ತಿಕರವೂ ಚೈತನ್ಯದಾಯಕವೂ ಆದ ಅಭ್ಯಾಸಗಳಲ್ಲಿ ಅವರು ಆನಂದಿಸಿದ್ದಾರೆ. ಆ ಸ್ತ್ರೀಗಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲು ಕರೀನಾ ಅವಳಿಗೆ ಸಾಹಿತ್ಯವನ್ನು ಕಳುಹಿಸಿದ್ದಾಳೆ.

• ಆಕಸ್ಮಿಕವಾಗಿ ತನಗೆ ಟೆಲಿಫೋನ್‌ ಮಾಡಿದ ವ್ಯಕ್ತಿಗೆ ಬರ್ನಾರ್ಡಾ ಸಾಕ್ಷಿನೀಡಿದಳು. ಬರ್ನಾರ್ಡಾ ಸಿಡಿಮಿಡಿಗೊಳ್ಳುವ ಬದಲು, ತಾನೊಬ್ಬ ಯೆಹೋವನ ಸಾಕ್ಷಿಯಾಗಿದ್ದೇನೆ ಎಂದು ಹೇಳಿದಳು. ಮತ್ತು ನಿಮಗೇನಾದರೂ ನಾನು ಸಹಾಯಮಾಡಸಾಧ್ಯವೋ ಎಂದು ಕೇಳಿದಳು. ಹೀಗೆ ಸಂಭಾಷಣೆಯು ಮುಂದುವರಿಯಿತು. ಈಗಿರುವ ಅನ್ಯಾಯವನ್ನು ದೇವರು ಹೇಗೆ ತನ್ನ ರಾಜ್ಯದ ಮೂಲಕ ಅಳಿಸಿಹಾಕುತ್ತಾನೆ ಎಂಬುದನ್ನು ಅವಳು ವಿವರಿಸಿದಾಗ ಆ ವ್ಯಕ್ತಿಯು ಅದನ್ನು ಕೇಳಿಸಿಕೊಂಡನು. ಅಷ್ಟುಮಾತ್ರವಲ್ಲ, ಆ ವ್ಯಕ್ತಿಯು ಬರ್ನಾರ್ಡಾಳಿಗೆ ತನ್ನ ಟೆಲಿಫೋನ್‌ ನಂಬರನ್ನು ಸಹ ಕೊಟ್ಟನು. ಟೆಲಿಫೋನ್‌ ಮೂಲಕ ಅವಳು ಪುನರ್ಭೇಟಿಗಳನ್ನು ಮಾಡಿದಳು. ಅಂತಹ ಒಂದು ಸಂಭಾಷಣೆಗಳಲ್ಲಿ, ಅವಳು ನಿತ್ಯ ಜೀವಕ್ಕೆ ನಡೆಸುವ ಜ್ಞಾನ ಪುಸ್ತಕದ ಒಂದು ಭಾಗವನ್ನು ಅವನಿಗೆ ಓದಿತೋರಿಸಿದಳು. ಆಗ ಅವನು ತಾನು ಹೇಗೆ ಒಂದು ಪುಸ್ತಕವನ್ನು ಪಡೆದುಕೊಳ್ಳಸಾಧ್ಯವಿದೆ ಎಂದು ಕೇಳಿದನು. ಮತ್ತು ಬರ್ನಾರ್ಡಾ ಒಂದು ಬೈಬಲ್‌ ಹಾಗೂ ಪುಸ್ತಕವನ್ನು ಅವನಿಗೆ ಕಳುಹಿಸಿಕೊಟ್ಟಳು. ಅಲ್ಲಿನ ಒಬ್ಬ ಸಹೋದರನಿಗೆ ಅವನನ್ನು ಭೇಟಿಮಾಡುವಂತೆ ಹೇಳಲಾಯಿತು. ಈಗ ಅವನು ಸೊಂಪಾಗಿ ಬೆಳೆಯುತ್ತಿರುವ ಈ “ಸಸಿಗೆ ನೀರು ಹೊಯ್ಯುತ್ತಿದ್ದಾನೆ.”

ಹೌದು, ಈ ಲೋಕದಲ್ಲಿ ಆತ್ಮಿಕವಾಗಿ ಬಂಜರಾಗಿರುವ ನೆಲದಲ್ಲಿ, ಸತ್ಯದ ಜೀವದಾಯಕ ನೀರು ಬೀಳುವಾಗ, ಹುದುಗಿರುವ ಬೀಜಗಳು ಮೊಳಕೆಯೊಡೆಯಲು ಕಾಯುತ್ತಲಿವೆ. ಬಾಯಾರಿರುವ ಸಾವಿರಾರು ಜನರು ‘ಪುಟಿದೇಳುತ್ತಾ’ (NW) ಯೆಹೋವ ದೇವರ ನಂಬಿಗಸ್ತ ಸೇವಕರಾಗಿ “ಅರಳುತ್ತಿದ್ದಾರೆ.”​—⁠ಯೆಶಾಯ 44:​3, 4.