ಮತ್ತಾಯ 28:1-20

  • ಯೇಸು ಮತ್ತೆ ಬದುಕಿದನು (1-10)

  • ಸುಳ್ಳು ಹೇಳೋಕೆ ಸೈನಿಕರಿಗೆ ಲಂಚ (11-15)

  • ಶಿಷ್ಯರನ್ನ ಮಾಡೋ ಆಜ್ಞೆ ಕೊಟ್ಟನು (16-20)

28  ಸಬ್ಬತ್‌ ದಿನ ಆದಮೇಲೆ ವಾರದ ಮೊದಲನೇ ದಿನ ಬೆಳಗಾಗುವಾಗ ಮಗ್ದಲದ ಮರಿಯ, ಇನ್ನೊಬ್ಬ ಮರಿಯ ಸಮಾಧಿ ನೋಡೋಕೆ ಬಂದ್ರು.+  ಅಲ್ಲಿ ನೋಡಿದ್ರೆ ದೊಡ್ಡ ಭೂಕಂಪ ಆಗಿತ್ತು. ಯಾಕಂದ್ರೆ ಯೆಹೋವನ* ದೂತ ಸ್ವರ್ಗದಿಂದ ಇಳಿದು ಬಂದಿದ್ದ. ಅವನು ಸಮಾಧಿಗೆ ಅಡ್ಡ ಇಟ್ಟಿದ್ದ ಕಲ್ಲನ್ನ ಉರುಳಿಸಿ ಅದ್ರ ಮೇಲೆ ಕೂತಿದ್ದ.+  ಆ ದೂತ ಮಿಂಚಿನ ತರ ಹೊಳಿತಿದ್ದ. ಅವನ ಬಟ್ಟೆ ಹಿಮದ ತರ ಬೆಳ್ಳಗಿತ್ತು.+  ಕಾವಲಿದ್ದ ಸೈನಿಕರು ಅವನನ್ನ ನೋಡಿ ಭಯಪಟ್ಟು ನಡುಗ್ತಾ ಸತ್ತವರ ತರ ಆಗಿಬಿಟ್ರು.  ಆದ್ರೆ ದೇವದೂತ ಆ ಸ್ತ್ರೀಯರಿಗೆ “ಹೆದರಬೇಡಿ. ಕಂಬಕ್ಕೇರಿಸಿ ಕೊಂದ ಯೇಸುವನ್ನ ನೀವು ಹುಡುಕ್ತಿದ್ದೀರ ಅಂತ ನಂಗೊತ್ತು.+  ಆತನು ಇಲ್ಲಿಲ್ಲ. ಆತನು ಹೇಳಿದ ಹಾಗೆ ಆತನಿಗೆ ಪುನಃ ಜೀವ ಬಂದಿದೆ.+ ಬನ್ನಿ, ಆತನಿದ್ದ ಸ್ಥಳವನ್ನ ನೀವೇ ನೋಡಿ.  ಆಮೇಲೆ ಬೇಗ ಹೋಗಿ ಆತನಿಗೆ ಮತ್ತೆ ಜೀವ ಬಂದಿದೆ ಅಂತ ಶಿಷ್ಯರಿಗೆ ಹೇಳಿ. ಯಾಕಂದ್ರೆ ಆತನು ನಿಮಗಿಂತ ಮುಂಚೆ ಗಲಿಲಾಯಕ್ಕೆ ಹೋಗ್ತಿದ್ದಾನೆ.+ ಅಲ್ಲಿ ನೀವು ಆತನನ್ನ ನೋಡ್ತೀರ. ಇದನ್ನ ಹೇಳೋಕೇ ನಾನು ಬಂದೆ”+ ಅಂದ.  ಇದನ್ನ ಕೇಳಿ ಅವ್ರಿಗೆ ಒಂದು ಕಡೆ ಭಯ ಆದ್ರೆ, ಇನ್ನೊಂದು ಕಡೆ ಸಂತೋಷ ಆಯ್ತು. ಅವರು ತಕ್ಷಣ ಶಿಷ್ಯರಿಗೆ ವಿಷ್ಯ ತಿಳಿಸೋಕೆ ಓಡಿಹೋಗ್ತಾ ಇದ್ದಾಗ+  ಯೇಸು ಇದ್ದಕ್ಕಿದ್ದಂತೆ ಅವ್ರ ಎದುರಿಗೆ ಬಂದು “ನಮಸ್ಕಾರ!” ಅಂದನು. ಅವರು ಆತನ ಹತ್ರ ಹೋಗಿ ಕಾಲಿಗೆ ಬಿದ್ದು* ನಮಸ್ಕರಿಸಿದ್ರು. 10  ಆಮೇಲೆ ಯೇಸು “ಭಯಪಡಬೇಡಿ! ನೀವು ಹೋಗಿ ನನ್ನ ಸಹೋದರರಿಗೆ ಗಲಿಲಾಯಕ್ಕೆ ಬರೋಕೆ ಹೇಳಿ. ಅಲ್ಲಿ ಅವರು ನನ್ನನ್ನ ನೋಡ್ತಾರೆ” ಅಂದನು. 11  ಅವರು ಹೋಗ್ತಿದ್ದಾಗ ಕಾವಲಿದ್ದ ಸೈನಿಕರು+ ಪಟ್ಟಣಕ್ಕೆ ಹೋಗಿ ಮುಖ್ಯ ಪುರೋಹಿತರಿಗೆ ನಡೆದ ಎಲ್ಲ ವಿಷ್ಯ ಹೇಳಿದ್ರು. 12  ಅವರು ಹಿರಿಯರ ಜೊತೆ ಮಾತಾಡಿದ ಮೇಲೆ ಸೈನಿಕರಿಗೆ ಸಾಕಷ್ಟು ಬೆಳ್ಳಿ ನಾಣ್ಯ ಕೊಟ್ಟು 13  “‘ಅವನ ಶಿಷ್ಯರು ರಾತ್ರಿ ಬಂದು ನಾವು ನಿದ್ದೆ ಮಾಡ್ತಿದ್ದಾಗ ಅವನನ್ನ ಕದ್ಕೊಂಡು ಹೋದ್ರು’+ ಅಂತ ಹೇಳಿ. 14  ಇದು ರಾಜ್ಯಪಾಲನ ಕಿವಿಗೆ ಬಿದ್ರೆ ನಾವು ಅವನ ಹತ್ರ ಮಾತಾಡ್ತೀವಿ, ನೀವು ಚಿಂತೆ ಮಾಡಬೇಡಿ” ಅಂದ್ರು. 15  ಸೈನಿಕರು ಆ ಬೆಳ್ಳಿ ನಾಣ್ಯಗಳನ್ನ ತಗೊಂಡು ಅವರು ಹೇಳಿದ ಹಾಗೇ ಮಾಡಿದ್ರು. ಸೈನಿಕರು ಹೇಳಿದ ಕತೆ ಇವತ್ತಿನ ತನಕ ಎಲ್ಲಾ ಯೆಹೂದ್ಯರ ಬಾಯಲ್ಲಿದೆ. 16  ಆ 11 ಶಿಷ್ಯರು ಗಲಿಲಾಯದ ಬೆಟ್ಟಕ್ಕೆ ಹೋದ್ರು.+ ಯೇಸು ಅವ್ರಿಗೆ ಅಲ್ಲಿ ಸಿಗ್ತೀನಿ ಅಂತ ಹೇಳಿದ್ದನು.+ 17  ಅವರು ಯೇಸುವನ್ನ ನೋಡಿದಾಗ ಬಗ್ಗಿ ನಮಸ್ಕರಿಸಿದ್ರು. ಆಗ್ಲೂ ಕೆಲವ್ರಿಗೆ ಈತನು ಯೇಸುನಾ ಅಂತ ಸಂಶಯ ಇತ್ತು. 18  ಯೇಸು ಅವ್ರ ಹತ್ರ ಬಂದು “ಸ್ವರ್ಗದಲ್ಲೂ ಭೂಮಿಯಲ್ಲೂ ದೇವರು ನನಗೆ ಎಲ್ಲ ಅಧಿಕಾರ ಕೊಟ್ಟಿದ್ದಾನೆ.+ 19  ಹಾಗಾಗಿ ನೀವು ಹೋಗಿ ಎಲ್ಲಾ ದೇಶದ ಜನ್ರಿಗೆ+ ನನ್ನ ಶಿಷ್ಯರಾಗೋದು ಹೇಗೆ ಅಂತ ಕಲಿಸಿ. ಅವ್ರಿಗೆ ತಂದೆ ಹೆಸ್ರಲ್ಲಿ, ಮಗನ ಹೆಸ್ರಲ್ಲಿ ಮತ್ತು ಪವಿತ್ರಶಕ್ತಿಯ ಹೆಸ್ರಲ್ಲಿ ದೀಕ್ಷಾಸ್ನಾನ ಮಾಡಿಸಿ.+ 20  ನಾನು ನಿಮಗೆ ಹೇಳಿಕೊಟ್ಟ+ ಎಲ್ಲ ವಿಷ್ಯಗಳ ಪ್ರಕಾರ ನಡೆಯೋಕೆ ಅವ್ರಿಗೆ ಕಲಿಸಿ. ಈ ಲೋಕದ ಅಂತ್ಯ ಬರೋ ತನಕ ನಾನು ನಿಮ್ಮ ಜೊತೆ ಇರ್ತಿನಿ”+ ಅಂದನು.

ಪಾದಟಿಪ್ಪಣಿ

ಆ ಕಾಲದಲ್ಲಿ ಒಬ್ಬ ವ್ಯಕ್ತಿಗೆ ಗೌರವ ಕೊಡೋಕೆ ಅವ್ರ ಪಾದಗಳನ್ನ ಮುಟ್ಟುತ್ತಿದ್ರು.