ಯೋಹಾನನಿಗೆ ಕೊಟ್ಟ ಪ್ರಕಟನೆ 21:1-27

  • ಹೊಸ ಆಕಾಶ, ಹೊಸ ಭೂಮಿ (1-8)

    • ಸಾವೇ ಇರಲ್ಲ (4)

    • ಎಲ್ಲ ಹೊಸದಾಗುತ್ತೆ (5)

  • ಹೊಸ ಯೆರೂಸಲೇಮಿನ ವರ್ಣನೆ (9-27)

21  ಆಗ ನಾನು ಹೊಸ ಆಕಾಶ, ಹೊಸ ಭೂಮಿಯನ್ನ+ ನೋಡ್ದೆ. ಯಾಕಂದ್ರೆ ಮುಂಚೆ ಇದ್ದ ಆಕಾಶ, ಭೂಮಿ ಇಲ್ಲದೆ ಹೋಗಿತ್ತು.+ ಸಮುದ್ರನೂ+ ಇರಲಿಲ್ಲ.  ಅಷ್ಟೇ ಅಲ್ಲ ಪವಿತ್ರ ಪಟ್ಟಣ ಆಗಿರೋ ಹೊಸ ಯೆರೂಸಲೇಮನ್ನೂ ನೋಡ್ದೆ. ಅದು ಅಲಂಕಾರ ಮಾಡ್ಕೊಂಡಿರೋ ಮದುಮಗಳ ತರ+ ದೇವರ ಹತ್ರದಿಂದ ಇಳಿದು ಬರ್ತಿತ್ತು.+  ಆಗ ಸಿಂಹಾಸನದಿಂದ ಒಂದು ದೊಡ್ಡ ಧ್ವನಿ ಹೀಗೆ ಹೇಳೋದನ್ನ ಕೇಳಿಸ್ಕೊಂಡೆ: “ನೋಡಿ, ದೇವರ ಡೇರೆ ಜನ್ರ ಜೊತೆ ಇದೆ. ಆತನು ಅವ್ರ ಜೊತೆ ವಾಸ ಮಾಡ್ತಾನೆ. ಅವರು ಆತನ ಜನ್ರಾಗಿ ಇರ್ತಾರೆ. ದೇವರೇ ಅವ್ರ ಜೊತೆ ಇರ್ತಾನೆ.+  ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ.+ ಇನ್ಮುಂದೆ ಸಾವೇ ಇರಲ್ಲ.+ ದುಃಖ, ನೋವು, ಕಷ್ಟ ಇರಲ್ಲ.+ ಈ ಮುಂಚೆ ಇದ್ದ ಯಾವ ವಿಷ್ಯಗಳೂ ಈಗ ಇಲ್ಲ.”  ಆಗ ಸಿಂಹಾಸನದ ಮೇಲೆ ಕೂತಿದ್ದ ದೇವರು+ ಹೀಗೆ ಹೇಳಿದನು: “ನೋಡು, ನಾನು ಎಲ್ಲ ಹೊಸದಾಗಿ ಮಾಡ್ತೀನಿ.+ ಈ ಮಾತುಗಳನ್ನ ಬರಿ. ಇದನ್ನ ಜನ್ರು ನಂಬಬಹುದು ಯಾಕಂದ್ರೆ ಇದು ಸತ್ಯ.”  ಆತನು ನನಗೆ ಹೀಗೆ ಹೇಳಿದನು: “ಅದೆಲ್ಲ ನಿಜ ಆಗಿದೆ! ನಾನೇ ಆಲ್ಫ, ನಾನೇ ಒಮೇಗ.* ನಾನೇ ಆರಂಭ, ನಾನೇ ಅಂತ್ಯ.+ ಯಾರಿಗಾದ್ರೂ ಬಾಯಾರಿಕೆ ಆಗಿದ್ರೆ ಅವ್ರಿಗೆ ನಾನು ಜೀವ ಕೊಡೋ ನೀರಿನ ಬುಗ್ಗೆಯಿಂದ ಉಚಿತವಾಗಿ ನೀರು ಕೊಡ್ತೀನಿ.+  ಗೆಲ್ಲೋನಿಗೆ ಇದೆಲ್ಲಾ ಆಸ್ತಿಯಾಗಿ ಸಿಗುತ್ತೆ. ನಾನು ಅವನಿಗೆ ದೇವರಾಗಿ ಇರ್ತಿನಿ. ಅವನು ನನಗೆ ಮಗನಾಗಿ ಇರ್ತಾನೆ.  ಆದ್ರೆ ಧೈರ್ಯ ಇಲ್ಲದವರು, ನಂಬಿಕೆ ಇಲ್ಲದವರು,+ ಅಸಹ್ಯ ಕೆಲಸಗಳನ್ನ ಮಾಡುವವರು, ಅಶುದ್ಧರು, ಕೊಲೆ ಮಾಡುವವರು,+ ಲೈಂಗಿಕ ಅನೈತಿಕತೆ* ನಡಿಸುವವರು,+ ಮಾಟಮಂತ್ರ ಮಾಡುವವರು, ಮೂರ್ತಿಪೂಜೆ ಮಾಡುವವರು, ಸುಳ್ಳು ಹೇಳುವವರು+ ಇವ್ರಿಗೆಲ್ಲ ಉರಿಯೋ ಬೆಂಕಿ* ಕೆರೆ ಕಾಯ್ತಾ ಇದೆ.+ ಇದೇ ಎರಡ್ನೇ ಸಾವು.”+  ಕೊನೇ ಏಳು ಕಷ್ಟಗಳು ತುಂಬಿದ್ದ ಏಳು ಬಟ್ಟಲುಗಳನ್ನ ಹಿಡ್ಕೊಂಡಿದ್ದ ಏಳು ದೇವದೂತರಲ್ಲಿ+ ಒಬ್ಬ ದೇವದೂತ ನನ್ನ ಹತ್ರ ಬಂದು ಹೀಗೆ ಹೇಳಿದ: “ಇಲ್ಲಿ ಬಾ, ಕುರಿಮರಿ ಮದುವೆ ಆಗೋ ಹುಡುಗಿಯನ್ನ+ ನಾನು ತೋರಿಸ್ತೀನಿ.” 10  ಆ ದೇವದೂತ ಪವಿತ್ರ ಶಕ್ತಿಯ ಸಹಾಯದಿಂದ ನನ್ನನ್ನ ಒಂದು ಎತ್ತರವಾದ ಬೆಟ್ಟಕ್ಕೆ ಕರ್ಕೊಂಡು ಹೋದ. ಪವಿತ್ರ ಪಟ್ಟಣವಾದ ಯೆರೂಸಲೇಮ್‌ ಸ್ವರ್ಗದಲ್ಲಿರೋ ದೇವರ ಹತ್ರದಿಂದ ಕೆಳಗೆ ಇಳಿದು ಬರೋದನ್ನ ನನಗೆ ತೋರಿಸಿದ.+ 11  ಅದ್ರಲ್ಲಿ ದೇವರ ಮಹಿಮೆ ತುಂಬಿತ್ತು.+ ಅದು ಅಮೂಲ್ಯವಾದ ರತ್ನದ ತರ, ಗಾಜಿನ ತರ ಸ್ಪಷ್ಟವಾಗಿತ್ತು. ಸೂರ್ಯಕಾಂತ ಮಣಿ ತರ ಪಳಪಳ ಅಂತ ಹೊಳಿತಿತ್ತು.+ 12  ಆ ಪಟ್ಟಣಕ್ಕೆ ಎತ್ತರವಾದ ಒಂದು ದೊಡ್ಡ ಗೋಡೆ ಇತ್ತು. 12 ಬಾಗಿಲಿತ್ತು. ಆ ಬಾಗಿಲ ಹತ್ರ 12 ದೇವದೂತರು ಇದ್ರು. ಆ ಬಾಗಿಲ ಮೇಲೆ ಇಸ್ರಾಯೇಲ್ಯರ 12 ಕುಲಗಳ ಹೆಸ್ರು ಕೆತ್ತಲಾಗಿತ್ತು. 13  ಪೂರ್ವಕ್ಕೆ ಮೂರು ಬಾಗಿಲು, ಉತ್ತರಕ್ಕೆ ಮೂರು ಬಾಗಿಲು, ದಕ್ಷಿಣಕ್ಕೆ ಮೂರು ಬಾಗಿಲು, ಪಶ್ಚಿಮಕ್ಕೆ ಮೂರು ಬಾಗಿಲು ಇತ್ತು.+ 14  ಆ ಪಟ್ಟಣದ ಗೋಡೆಗೆ 12 ಅಡಿಪಾಯ ಕಲ್ಲುಗಳು ಇದ್ವು. ಕಲ್ಲಿನ ಮೇಲೆ ಕುರಿಮರಿಯ 12 ಅಪೊಸ್ತಲರ+ ಹೆಸ್ರು ಬರೆದಿತ್ತು. 15  ನನ್ನ ಜೊತೆ ಮಾತಾಡ್ತಿದ್ದ ದೇವದೂತ ಆ ಪಟ್ಟಣವನ್ನ, ಅದ್ರ ಬಾಗಿಲುಗಳನ್ನ, ಅದ್ರ ಗೋಡೆಯನ್ನ ಅಳತೆ ಮಾಡೋಕೆ ಕೈಯಲ್ಲಿ ಚಿನ್ನದ ಅಳತೆಕೋಲನ್ನ ಹಿಡ್ಕೊಂಡಿದ್ದ.+ 16  ಆ ಪಟ್ಟಣ ಚೌಕಾಕಾರ ಆಗಿತ್ತು. ಅದೆಷ್ಟು ಉದ್ದ ಇತ್ತೋ ಅಷ್ಟೇ ಅಗಲ ಇತ್ತು. ಅವನು ಆ ಅಳತೆಕೋಲಿಂದ ಪಟ್ಟಣವನ್ನ ಅಳತೆ ಮಾಡಿದಾಗ ಅದು ಸುಮಾರು 2,220 ಕಿಲೊಮೀಟರ್‌ ಇತ್ತು. ಅದ್ರ ಅಗಲ, ಉದ್ದ, ಎತ್ತರ ಎಲ್ಲಾ ಒಂದೇ ಆಗಿತ್ತು. 17  ಆ ದೇವದೂತ ಪಟ್ಟಣದ ಗೋಡೆಯನ್ನೂ ಅಳೆದ. ಮನುಷ್ಯನ ಅಳತೆ ಪ್ರಕಾರ ಅದು 144 ಮೊಳ ಇತ್ತು. ದೇವದೂತನ ಅಳತೆ ಪ್ರಕಾರನೂ ಅಷ್ಟೇ ಇತ್ತು. 18  ದೇವರು ಆ ಗೋಡೆಯನ್ನ ಸೂರ್ಯಕಾಂತ ಕಲ್ಲಿಂದ+ ಮಾಡಿದ್ದನು. ಆ ಪಟ್ಟಣವನ್ನ ಸ್ಪಷ್ಟವಾದ ಗಾಜಿನ ತರ ಇದ್ದ ಅಪ್ಪಟ ಚಿನ್ನದಿಂದ ಮಾಡಿದ್ದನು. 19  ಆ ಪಟ್ಟಣದ ಗೋಡೆಯ ಅಡಿಪಾಯಗಳನ್ನ ಎಲ್ಲ ರೀತಿಯ ಅಮೂಲ್ಯ ರತ್ನದಿಂದ ಅಲಂಕಾರ ಮಾಡಿದ್ರು. ಮೊದಲ್ನೇ ಅಡಿಪಾಯ ಸೂರ್ಯಕಾಂತ ಕಲ್ಲಿಂದ, ಎರಡನೇದು ನೀಲಿ ಮಣಿಯಿಂದ, ಮೂರನೇದು ಸ್ಪಟಿಕ* ಕಲ್ಲಿಂದ, ನಾಲ್ಕನೇದು ಹಸಿರು ಮಣಿಯಿಂದ, 20  ಐದನೇದು ಗೋಮೇಧಕ ರತ್ನದಿಂದ, ಆರನೇದು ಕೆಂಪು ಮಾಣಿಕ್ಯದಿಂದ, ಏಳನೇದು ಹಸಿರು ಪಾರದರ್ಶಕ* ರತ್ನದಿಂದ, ಎಂಟನೇದು ಮಣಿರತ್ನದಿಂದ,* ಒಂಭತ್ತನೇದು ಪುಷ್ಯರಾಗದಿಂದ, ಹತ್ತನೇದು ಸುವರ್ಣ ಹಸಿರು* ಮಣಿಯಿಂದ, ಹನ್ನೊಂದನೇದು ಕಿತ್ತಳೆ ಬಣ್ಣದ* ಕಲ್ಲಿಂದ, ಹನ್ನೆರಡನೇದು ಪದ್ಮರಾಗದಿಂದ ಅಲಂಕರಿಸಲಾಗಿತ್ತು. 21  ಅಷ್ಟೇ ಅಲ್ಲ, 12 ಬಾಗಿಲನ್ನ 12 ಮುತ್ತುಗಳಿಂದ ಮಾಡಿದ್ರು. ಒಂದೊಂದು ಬಾಗಿಲನ್ನ ಒಂದೊಂದು ಮುತ್ತಿಂದ ಮಾಡಿದ್ರು. ಆ ಪಟ್ಟಣದ ಮುಖ್ಯ ಬೀದಿಯನ್ನ ಸ್ಪಷ್ಟವಾದ ಗಾಜಿನ ತರ ಅಪ್ಪಟ ಚಿನ್ನದಿಂದ ಮಾಡಿದ್ರು. 22  ಆ ಪಟ್ಟಣದಲ್ಲಿ ನನಗೆ ದೇವಾಲಯ ಕಾಣಿಸಲಿಲ್ಲ. ಯಾಕಂದ್ರೆ ಸರ್ವಶಕ್ತ ಯೆಹೋವ* ದೇವರು+ ಮತ್ತು ಕುರಿಮರಿನೇ ಅದ್ರ ದೇವಾಲಯ ಆಗಿದ್ರು. 23  ಆ ಪಟ್ಟಣದಲ್ಲಿ ದೇವರ ಮಹಿಮೆಯಿಂದ ಬರ್ತಾ ಇದ್ದ ಬೆಳಕು ತುಂಬ್ಕೊಂಡಿದ್ರಿಂದ ಆ ಪಟ್ಟಣಕ್ಕೆ ಸೂರ್ಯನಾಗಲಿ ಚಂದ್ರನಾಗಲಿ ಬೇಕಾಗಿರಲಿಲ್ಲ.+ ಕುರಿಮರಿ ಆ ಪಟ್ಟಣಕ್ಕೆ ದೀಪ ಆಗಿದ್ದ.+ 24  ದೇಶಗಳ ಜನ್ರು ಆ ಬೆಳಕಲ್ಲಿ ನಡಿತಾರೆ.+ ಭೂಮಿಯಲ್ಲಿರೋ ರಾಜರು ದೇವರಿಂದ ಮಹಿಮೆಯನ್ನ ಪಡ್ಕೊಂಡು ಅದನ್ನ ಆ ಪಟ್ಟಣಕ್ಕೆ ತರ್ತಾರೆ. ಆಗ ಪಟ್ಟಣದ ಬೆಳಕು ಇನ್ನೂ ಜಾಸ್ತಿಯಾಗುತ್ತೆ. 25  ಪಟ್ಟಣದ ಬಾಗಿಲನ್ನ ಯಾವತ್ತೂ ಮುಚ್ಚಲ್ಲ. ಯಾಕಂದ್ರೆ ಅಲ್ಲಿ ಕತ್ತಲೆನೇ ಆಗಲ್ಲ.+ 26  ಆ ರಾಜರು ದೇಶಗಳ ಮಹಿಮೆ, ಗೌರವವನ್ನ ಆ ಪಟ್ಟಣದ ಒಳಗೆ ತರ್ತಾರೆ.+ 27  ಆದ್ರೆ ಆ ಪಟ್ಟಣದ ಒಳಗೆ ಅಶುದ್ಧವಾದ ಯಾವುದನ್ನೂ ಸೇರಿಸಲ್ಲ. ಅಸಹ್ಯವಾದ ಕೆಲಸ ಮಾಡುವವ್ರನ್ನ, ಮೋಸ ಮಾಡುವವ್ರನ್ನ ಅಲ್ಲಿ ಒಳಗೆ ಬಿಡಲ್ಲ.+ ಕುರಿಮರಿಯ ಜೀವಪುಸ್ತಕದಲ್ಲಿ ಯಾರ ಹೆಸ್ರು ಇದ್ಯೋ ಅವ್ರನ್ನ ಮಾತ್ರ ಒಳಗೆ ಬಿಡ್ತಾರೆ.+

ಪಾದಟಿಪ್ಪಣಿ

ಇವು ಗ್ರೀಕ್‌ ಅಕ್ಷರಮಾಲೆಯ ಮೊದಲ ಮತ್ತು ಕೊನೇ ಅಕ್ಷರಗಳು.
ಅಥವಾ “ಬೆಂಕಿ-ಗಂಧಕದ.” ಪದವಿವರಣೆಯಲ್ಲಿ “ಗಂಧಕ” ನೋಡಿ.
ಅಕ್ಷ. “ಕ್ಯಾಲ್ಸಿಡನಿ.”
ಅಕ್ಷ. “ಕ್ರಿಸ್‌ಪ್ರಸ್‌.”
ಅಕ್ಷ. “ಹಯಸಿಂತ್‌.”
ಅಕ್ಷ. “ಬೆರಿಲ್‌.”
ಅಕ್ಷ. “ಕ್ರಿಸಲೈಟ್‌.”