ಕೊರಿಂಥದವರಿಗೆ ಬರೆದ ಎರಡನೇ ಪತ್ರ 7:1-16

  • ಕೊಳೆ ತೆಗೆದುಹಾಕಿ ಶುದ್ಧರಾಗೋಣ (1)

  • ಕೊರಿಂಥದವ್ರ ಬಗ್ಗೆ ಪೌಲನಿಗಾದ ಸಂತೋಷ (2-4)

  • ತೀತ ಒಳ್ಳೇ ಸುದ್ದಿ ತಂದ (5-7)

  • ದೇವರಿಗೆ ಇಷ್ಟವಾಗುವಂಥ ದುಃಖ, ಪಶ್ಚಾತ್ತಾಪ (8-16)

7  ಪ್ರಿಯರೇ, ದೇವರು ನಮಗೆ ಈ ಎಲ್ಲ ಮಾತು ಕೊಟ್ಟಿರೋದ್ರಿಂದ+ ನಮ್ಮ ದೇಹ ಮತ್ತು ಹೃದಯದಿಂದ ಎಲ್ಲ ಕೊಳೆ ತೆಗೆದು ನಮ್ಮನ್ನ ಶುದ್ಧ ಮಾಡ್ಕೊಳ್ಳೋಣ.+ ದೇವರಿಗೆ ಭಯಪಡ್ತಾ ಪೂರ್ಣವಾಗಿ ಪವಿತ್ರರಾಗೋಕೆ ಶ್ರಮ ಹಾಕೋಣ.  ನಿಮ್ಮ ಹೃದಯಗಳಲ್ಲಿ ನಮಗೆ ಜಾಗ ಕೊಡಿ.+ ನಾವು ಯಾರಿಗೂ ಕೆಟ್ಟದು ಮಾಡ್ಲಿಲ್ಲ, ಯಾರಿಗೂ ತೊಂದ್ರೆ ಕೊಡ್ಲಿಲ್ಲ, ಯಾರನ್ನೂ ನಮ್ಮ ಪ್ರಯೋಜನಕ್ಕೆ ಬಳಸ್ಕೊಂಡಿಲ್ಲ.+  ನಿಮ್ಮ ಮೇಲೆ ತಪ್ಪು ಹೊರಿಸೋಕೆ ನಾನಿದನ್ನ ಹೇಳ್ತಿಲ್ಲ. ನಾನು ಮೊದ್ಲೇ ಹೇಳಿದ ಹಾಗೆ, ನಾವು ಸತ್ರೂ ಬದುಕಿದ್ರೂ ಏನೇ ಆದ್ರೂ ನೀವಂತೂ ನಮ್ಮ ಹೃದಯದಲ್ಲಿ ಇದ್ದೀರ.  ನನಗೆ ನಿಮ್ಮ ಜೊತೆ ಮುಚ್ಚುಮರೆ ಇಲ್ದೆ ಮಾತಾಡೋಕೆ ಆಗುತ್ತೆ. ನಿಮ್ಮ ಬಗ್ಗೆ ನಾನು ತುಂಬ ಹೆಮ್ಮೆ ಪಡ್ತೀನಿ. ನನ್ನ ಮನಸ್ಸಿಗೆ ತುಂಬ ಸಮಾಧಾನ ಆಗಿದೆ. ನಮ್ಮೆಲ್ಲ ಕಷ್ಟ ನೋವಲ್ಲೂ ನಾನು ಖುಷಿಯಾಗಿ ನಲಿದಾಡ್ತಾ ಇದ್ದೀನಿ.+  ನಿಜ ಹೇಳಬೇಕಂದ್ರೆ, ನಾವು ಮಕೆದೋನ್ಯಕ್ಕೆ ಬಂದಾಗ+ ನಮಗೆ ನೆಮ್ಮದಿನೇ ಇರಲಿಲ್ಲ, ಎಲ್ಲ ತರ ಕಷ್ಟ ವೇದನೆ ಅನುಭವಿಸಿದ್ವಿ. ಹೊರಗೆ ತುಂಬ ವಿರೋಧ, ಒಳಗೆ ಭಯ.  ಆದ್ರೆ ಮನಸ್ಸಲ್ಲಿ ನೊಂದವ್ರನ್ನ ಸಮಾಧಾನ ಮಾಡೋ ದೇವರು+ ತೀತನ ಭೇಟಿಯ ಮೂಲಕ ನಮ್ಮನ್ನ ಸಮಾಧಾನ ಮಾಡಿದನು.  ಅವನ ಭೇಟಿಯಿಂದ ಅಷ್ಟೇ ಅಲ್ಲ, ನಿಮ್ಮಿಂದ ಅವನಿಗೆ ಸಿಕ್ಕಿದ ಸಾಂತ್ವನದಿಂದಾನೂ ನಮಗೆ ನೆಮ್ಮದಿ ಸಿಕ್ತು. ನೀವು ಮನಸಾರೆ ದುಃಖ ಪಡ್ತಿದ್ದೀರ, ನನಗಾಗಿ ಕಾತುರದಿಂದ ಕಾಯ್ತಿದ್ದೀರ, ನನ್ನ ಮೇಲೆ ನಿಮಗೆ ತುಂಬ ಅಕ್ಕರೆ ಇದೆ ಅಂತ ತೀತ ಹೇಳಿದ. ಇದನ್ನ ಕೇಳಿ ನನಗೆ ಇನ್ನೂ ಖುಷಿ ಆಯ್ತು.  ನನ್ನ ಪತ್ರದಿಂದ ನಿಮಗೆ ದುಃಖ ಆಗಿದ್ರೂ+ ಅದಕ್ಕಾಗಿ ನಾನು ಬೇಜಾರು ಮಾಡ್ಕೊಳಲ್ಲ. ನಿಮಗೆ ದುಃಖ ಆಯ್ತು ಅಂತ ಗೊತ್ತಾದಾಗ ಮೊದಮೊದ್ಲು ಬೇಜಾರಾಯ್ತು ನಿಜ. ಆದ್ರೆ ಆ ದುಃಖ ಸ್ವಲ್ಪ ಸಮಯ ಮಾತ್ರ ಇತ್ತು ಅಂತ ಗೊತ್ತಾಗಿ  ನಾನೀಗ ಖುಷಿ ಪಡ್ತೀನಿ. ನೀವು ಬರೀ ದುಃಖ ಪಟ್ಟಿದ್ದಕ್ಕೆ ಅಲ್ಲ, ಆ ದುಃಖದಿಂದಾಗಿ ನೀವು ಪಶ್ಚಾತ್ತಾಪ ಪಟ್ಟಿದ್ದಕ್ಕೆ ನಾನು ಖುಷಿ ಪಡ್ತೀನಿ. ಯಾಕಂದ್ರೆ ನೀವು ದೇವರಿಗೆ ಇಷ್ಟ ಆಗೋ ತರ ದುಃಖಪಟ್ರಿ. ಹಾಗಾಗಿ ನಮ್ಮಿಂದ ನಿಮಗೇನೂ ನಷ್ಟ ಆಗಲಿಲ್ಲ. 10  ದೇವರಿಗೆ ಇಷ್ಟ ಆಗೋ ತರ ದುಃಖಪಟ್ರೆ ನಾವು ಪಶ್ಚಾತ್ತಾಪ ಪಡ್ತೀವಿ. ಅದ್ರಿಂದ ರಕ್ಷಣೆ ಸಿಗುತ್ತೆ. ಅದಕ್ಕಾಗಿ ನಾವು ಯಾವತ್ತೂ ವಿಷಾದ ಪಡಲ್ಲ.+ ಆದ್ರೆ ಲೋಕದವ್ರ ತರ ದುಃಖ ಪಡೋದ್ರಿಂದ ಸಾವೇ ಗತಿ. 11  ಸ್ವಲ್ಪ ಯೋಚ್ನೆ ಮಾಡಿ ನೋಡಿ! ನೀವು ದೇವರಿಗೆ ಇಷ್ಟ ಆಗೋ ತರ ದುಃಖ ಪಟ್ಟಿದ್ರಿಂದ ಒಳ್ಳೇದು ಮಾಡೋಕೆ ತುಂಬ ಶ್ರಮ ಹಾಕಿದ್ರಿ. ನಿಮ್ಮ ಮೇಲಿದ್ದ ಕಳಂಕ ತೆಗೆದುಹಾಕಿದ್ರಿ, ಕೆಟ್ಟದ್ದನ್ನ ದ್ವೇಷಿಸಿದ್ರಿ, ದೇವರಿಗೆ ಭಯಪಟ್ರಿ, ತುಂಬ ಆಸಕ್ತಿ, ಹುರುಪು ತೋರಿಸಿ ತಪ್ಪನ್ನ ತಿದ್ಕೊಂಡ್ರಿ.+ ಈ ರೀತಿ ನೀವು ಶುದ್ಧರು* ಅಂತ ಎಲ್ಲ ವಿಧದಲ್ಲಿ ತೋರಿಸ್ಕೊಟ್ರಿ. 12  ನಾನು ತಪ್ಪು ಮಾಡಿದವನಿಗಾಗಲಿ ಆ ತಪ್ಪಿಂದ ಅನ್ಯಾಯ ಆದವನಿಗಾಗಲಿ ಪತ್ರ ಬರಿಲಿಲ್ಲ.+ ಬದಲಿಗೆ ನಮ್ಮ ಮಾತು ಕೇಳೋಕೆ ನಿಮಗೆಷ್ಟು ಉತ್ಸಾಹ ಇದೆ ಅಂತ ನೀವು ದೇವರ ಮುಂದೆ ತೋರಿಸಿ ಕೊಡಬೇಕಂತ ಬರೆದೆ. 13  ನೀವು ಮಾತು ಕೇಳಿ ತಪ್ಪು ತಿದ್ಕೊಂಡಿದ್ರಿಂದ ನಮಗೆ ನೆಮ್ಮದಿ ಅನಿಸ್ತು. ನೀವೆಲ್ಲ ತೀತನಿಗೆ ತುಂಬ ಪ್ರೋತ್ಸಾಹ ಕೊಟ್ಟಿದ್ರಿಂದ ಅವನು ತುಂಬ ಖುಷಿಯಾಗಿದ್ದಾನೆ. ಅದನ್ನ ನೋಡ್ದಾಗ ನಮಗೆ ತುಂಬ ಖುಷಿ ಆಯ್ತು. 14  ನಾನು ಅವನ ಹತ್ರ ನಿಮ್ಮ ಬಗ್ಗೆ ಹೊಗಳಿದ್ದೆ, ಅದಕ್ಕಾಗಿ ನಾನು ನಾಚಿಕೆ ಪಡೋ ತರ ಆಗಲಿಲ್ಲ. ನಾವು ನಿಮಗೆ ಹೇಳಿದ ಎಲ್ಲ ವಿಷ್ಯಗಳು ಹೇಗೆ ಸತ್ಯನೋ ತೀತನ ಹತ್ರ ನಿಮ್ಮ ಬಗ್ಗೆ ಹೊಗಳಿದ ವಿಷ್ಯಗಳೂ ಹಾಗೇ ಸತ್ಯ ಅಂತ ಸಾಬೀತು ಆಯ್ತು. 15  ಅಷ್ಟೇ ಅಲ್ಲ, ನೀವೆಲ್ಲ ಮಾತು ಕೇಳಿ ಪಾಲಿಸಿದ್ದನ್ನ, ನೀವು ಅವನನ್ನ ತುಂಬ ಗೌರವದಿಂದ* ಸ್ವಾಗತಿಸಿದ್ದನ್ನ ನೆನಸ್ಕೊಳ್ಳುವಾಗೆಲ್ಲ ಅವನಿಗೆ ನಿಮ್ಮ ಮೇಲಿರೋ ಪ್ರೀತಿ ಉಕ್ಕಿ ಹರಿಯುತ್ತೆ.+ 16  ನನಗೆ ನಿಮ್ಮ ಮೇಲೆ ಪೂರ್ತಿ ನಂಬಿಕೆ ಇದೆ.* ಹಾಗಾಗಿ ನಾನು ಖುಷಿ ಪಡ್ತೀನಿ.

ಪಾದಟಿಪ್ಪಣಿ

ಅಥವಾ “ತಪ್ಪಿಲ್ಲದವರು.”
ಅಕ್ಷ. “ಭಯಭಕ್ತಿಯಿಂದ.”
ಬಹುಶಃ, “ನಿಮ್ಮಿಂದ ನಾನು ತುಂಬ ಧೈರ್ಯ ಪಡ್ಕೊಂಡಿದ್ದೀನಿ.”