ಯಾಕೋಬನ ಪತ್ರ 4:1-17

  • ಲೋಕದ ಸ್ನೇಹಿತರಾಗಬೇಡಿ (1-12)

    • ಸೈತಾನನನ್ನ ವಿರೋಧಿಸಿ (7)

    • ದೇವರಿಗೆ ಹತ್ರ ಆಗಿ (8)

  • ಜಂಬ ಕೊಚ್ಕೊಳ್ಳಬೇಡಿ (13-17)

    • “ಯೆಹೋವನ ಇಷ್ಟ ಇದ್ರೆ” (15)

4  ನಿಮ್ಮ ಮಧ್ಯ ಜಗಳ, ಹೊಡೆದಾಟ ಯಾಕೆ ಆಗ್ತಿದೆ? ನಿಮ್ಮಲ್ಲಿರೋ ಸ್ವಾರ್ಥ ಆಸೆಗಳೇ ಇದಕ್ಕೆ ಕಾರಣ ಅಲ್ವಾ? ಆ ಆಸೆಗಳನ್ನ ಹತೋಟಿಯಲ್ಲಿ ಇಟ್ಕೊಳ್ಳೋಕೆ ನಿಮ್ಮೊಳಗೇ ಒಂದು ದೊಡ್ಡ ಹೋರಾಟ ನಡಿತಿದೆ ಅಲ್ವಾ?+  ನೀವು ಆಸೆಪಟ್ರೂ ಅದು ಸಿಗ್ತಿಲ್ಲ. ನೀವು ಕೊಲೆಮಾಡ್ತಾ ಇದ್ದೀರ, ಬೇರೆಯವ್ರ ವಸ್ತು ಮೇಲೆ ಕಣ್ಣು ಹಾಕ್ತಿದ್ದೀರ. ಆದ್ರೂ ನಿಮಗದು ಸಿಗ್ತಿಲ್ಲ. ನೀವು ಜಗಳಕ್ಕೆ ಇಳಿತೀರ, ಹೊಡೆದಾಡ್ತೀರ,+ ಆದ್ರೂ ಅದು ನಿಮಗೆ ಸಿಗ್ತಿಲ್ಲ. ಯಾಕಂದ್ರೆ ನೀವು ದೇವರ ಹತ್ರ ಬೇಡ್ಕೊಳ್ತಿಲ್ಲ.  ನೀವು ಬೇಡ್ಕೊಂಡ್ರೂ ಸಿಗಲ್ಲ. ಯಾಕಂದ್ರೆ ನೀವು ತಪ್ಪಾದ ಉದ್ದೇಶದಿಂದ ಅಂದ್ರೆ ನಿಮ್ಮ ಸ್ವಾರ್ಥ ಆಸೆಗಳಿಗೋಸ್ಕರ ಬೇಡ್ಕೊಳ್ತಾ ಇದ್ದೀರ.  ದೇವರಿಗೆ ನಂಬಿಕೆ ದ್ರೋಹ ಮಾಡಿದವ್ರೇ,* ನೀವು ಲೋಕದ ಸ್ನೇಹ ಮಾಡಿದ್ರೆ ದೇವರಿಗೆ ಶತ್ರು ಆಗ್ತೀರ ಅಂತ ನಿಮಗೆ ಗೊತ್ತಿಲ್ವಾ? ಲೋಕದ ಸ್ನೇಹಿತನಾಗಿ ಇರೋಕೆ ಇಷ್ಟಪಡುವವನು ದೇವರನ್ನ ಶತ್ರುವಾಗಿ ಮಾಡ್ಕೊಳ್ತಾನೆ.+  “ನಮ್ಮೊಳಗೆ ಮನೆಮಾಡಿರೋ ಹೊಟ್ಟೆಕಿಚ್ಚು ಏನೇನೋ ಮಾಡಬೇಕಂತ ಆಸೆಪಡುತ್ತೆ” ಅಂತ ವಚನ ಸುಮ್ನೆ ಹೇಳುತ್ತಾ?+  ಆದ್ರೆ ದೇವರು ಕೊಡೋ ಅಪಾರ ಕೃಪೆ ತುಂಬ ದೊಡ್ಡದು. ಅದಕ್ಕೇ ವಚನ ಹೇಳುತ್ತೆ “ದೇವರು ಅಹಂಕಾರಿಗಳನ್ನ ಇಷ್ಟಪಡಲ್ಲ.+ ಆದ್ರೆ ದೀನರಿಗೆ ಅಪಾರ ಕೃಪೆ ತೋರಿಸ್ತಾನೆ.”+  ಹಾಗಾಗಿ ದೇವರ ಮಾತನ್ನ ಕೇಳಿ.+ ಸೈತಾನನನ್ನ ವಿರೋಧಿಸಿ.+ ಆಗ ಅವನು ನಿಮ್ಮನ್ನ ಬಿಟ್ಟು ಓಡಿಹೋಗ್ತಾನೆ.+  ದೇವರಿಗೆ ಹತ್ರ ಆಗಿ, ಆಗ ದೇವರು ನಿಮಗೆ ಹತ್ರ ಆಗ್ತಾನೆ.+ ಪಾಪಿಗಳೇ, ಕೆಟ್ಟ ಕೆಲಸಗಳನ್ನೆಲ್ಲ ಬಿಟ್ಟುಬಿಡಿ.+ ಎರಡು ಮನಸ್ಸಿನವ್ರೇ, ಮನಸ್ಸನ್ನ ಶುದ್ಧ ಮಾಡ್ಕೊಳ್ಳಿ.+  ದುಃಖಪಡಿ, ಗೋಳಾಡಿ, ಕಣ್ಣೀರು ಸುರಿಸಿ.+ ನಗೋದನ್ನ ಬಿಟ್ಟು ಅಳಿ. ಖುಷಿ ಪಡೋದನ್ನ ಬಿಟ್ಟು ಬೇಜಾರ್‌ ಮಾಡ್ಕೊಳ್ಳಿ. 10  ಯೆಹೋವನ* ಮಾತು ಕೇಳಿ ತಗ್ಗಿಬಗ್ಗಿ ನಡಿರಿ.+ ಆಗ ದೇವರು ನಿಮಗೆ ಗೌರವ ಸಿಗೋ ಹಾಗೆ ಮಾಡ್ತಾನೆ.+ 11  ಸಹೋದರರೇ, ಒಬ್ರ ವಿರುದ್ಧ ಇನ್ನೊಬ್ರು ಮಾತಾಡೋದನ್ನ ನಿಲ್ಲಿಸಿ.+ ಒಬ್ಬ ಸಹೋದರನ ವಿರುದ್ಧ ಮಾತಾಡಿದ್ರೆ ದೇವರ ನಿಯಮದ ವಿರುದ್ಧ ಮಾತಾಡಿದ ಹಾಗೆ. ಸಹೋದರನಲ್ಲಿ ತಪ್ಪು ಹುಡುಕಿದ್ರೆ ದೇವರ ನಿಯಮದಲ್ಲಿ ತಪ್ಪು ಹುಡುಕಿದ ಹಾಗೆ. ನೀವು ನಿಯಮದಲ್ಲಿ ತಪ್ಪು ಹುಡುಕಿದ್ರೆ ನಿಯಮದ ಪ್ರಕಾರ ನಡಿಯುವವ್ರಲ್ಲ, ನ್ಯಾಯಾಧೀಶರು ಆಗ್ತೀರ. 12  ದೇವರೇ ನಮಗೆ ನಿಯಮ ಕೊಡ್ತಾನೆ, ಆತನೇ ನಮ್ಮ ನ್ಯಾಯಾಧೀಶ.+ ಆತನಿಗೆ ಮಾತ್ರ ಜನ್ರನ್ನ ರಕ್ಷಿಸೋಕೂ ನಾಶಮಾಡೋಕೂ ಅಧಿಕಾರ ಇದೆ.+ ಹಾಗಿರುವಾಗ ಬೇರೆಯವ್ರಲ್ಲಿ ತಪ್ಪು ಹುಡುಕೋಕೆ ನೀವ್ಯಾರು?+ 13  “ಇವತ್ತೋ ನಾಳೆನೋ ನಾವು ಆ ಊರಿಗೆ ಹೋಗಿ ಒಂದು ವರ್ಷ ಅಲ್ಲಿರೋಣ, ಅಲ್ಲಿ ವ್ಯಾಪಾರ ಮಾಡಿ ಹಣ ಮಾಡೋಣ” ಅಂತ ಯೋಚ್ನೆ ಮಾಡೋ ಜನ್ರೇ ನನ್ನ ಮಾತು ಕೇಳಿ.+ 14  ನಾಳೆ ಏನಾಗುತ್ತೆ ಅಂತಾನೇ ನಿಮಗೆ ಗೊತ್ತಿಲ್ಲ.+ ಸ್ವಲ್ಪ ಹೊತ್ತು ಇದ್ದು ಆಮೇಲೆ ಮಾಯ ಆಗೋ ಮಂಜಿನ ತರ ನೀವಿದ್ದೀರ.+ 15  ಹಾಗಾಗಿ “ಯೆಹೋವನ* ಇಷ್ಟ ಇದ್ರೆ+ ನಾಳೆ ಬದುಕಿರುತ್ತೀವಿ, ಅದನ್ನಾದ್ರೂ ಇದನ್ನಾದ್ರೂ ಮಾಡ್ತೀವಿ” ಅಂತ ಹೇಳಿ. 16  ಆದ್ರೆ ನೀವು ಅಹಂಕಾರದಿಂದ ಜಂಬ ಕೊಚ್ಕೊಳ್ತೀರ. ಆ ತರ ಕೊಚ್ಕೊಳ್ಳೋದು ತುಂಬಾ ಕೆಟ್ಟದು. 17  ಹಾಗಾಗಿ ಯಾರಾದ್ರೂ ಒಳ್ಳೇ ಕೆಲಸ ಮಾಡೋದು ಗೊತ್ತಿದ್ರೂ ಅದನ್ನ ಮಾಡ್ದೇ ಇದ್ರೆ ಪಾಪ ಮಾಡಿದ ಹಾಗೆ.+

ಪಾದಟಿಪ್ಪಣಿ

ಅಕ್ಷ. “ವ್ಯಭಿಚಾರಿಗಳೇ.”