ಕೊರಿಂಥದವರಿಗೆ ಬರೆದ ಮೊದಲನೇ ಪತ್ರ 15:1-58
15 ಸಹೋದರರೇ, ನಾನು ನಿಮಗೆ ಹೇಳಿದ ಸಿಹಿಸುದ್ದಿಯನ್ನ+ ನಾನೀಗ ನೆನಪಿಸ್ತೀನಿ. ನೀವದನ್ನ ಒಪ್ಕೊಂಡು ಅದಕ್ಕೆ ತಕ್ಕ ಹಾಗೆ ನಡೀತಾ ಬಂದಿದ್ದೀರ.
2 ಈ ಸಿಹಿಸುದ್ದಿಯಲ್ಲಿ ನಿಮಗಿರೋ ನಂಬಿಕೆಯನ್ನ ದೃಢವಾಗಿ ಇಟ್ಕೊಂಡ್ರೆ ಅದ್ರ ಮೂಲಕ ನೀವು ರಕ್ಷಣೆ ಪಡಿತೀರ. ಇಲ್ಲಾಂದ್ರೆ ನೀವು ಶಿಷ್ಯರಾಗಿದ್ದು ವ್ಯರ್ಥ.
3 ನಾನು ಕಲಿತ ಅತೀ ಪ್ರಾಮುಖ್ಯ ವಿಷ್ಯವನ್ನ ನಿಮಗೂ ಕಲಿಸ್ದೆ. ಅದೇನಂದ್ರೆ ಪವಿತ್ರ ಗ್ರಂಥದಲ್ಲಿ ಹೇಳಿರೋ ಪ್ರಕಾರ ಕ್ರಿಸ್ತ ನಮ್ಮನ್ನ ಪಾಪದಿಂದ ಬಿಡಿಸೋಕೆ ಸತ್ತನು+
4 ಮತ್ತು ಆತನನ್ನ ಸಮಾಧಿ ಮಾಡಿದ್ರು.+ ಪವಿತ್ರ ಗ್ರಂಥ ಹೇಳೋ ಹಾಗೆ+ ಮೂರನೇ ದಿನ+ ದೇವರು ಆತನಿಗೆ ಮತ್ತೆ ಜೀವ ಕೊಟ್ಟು ಎಬ್ಬಿಸಿದನು.+
5 ಆತನು ಕೇಫನಿಗೆ,*+ ಆಮೇಲೆ 12 ಅಪೊಸ್ತಲರಿಗೆ ಕಾಣಿಸ್ಕೊಂಡನು.+
6 ಆಮೇಲೆ ಆತನು ಒಂದೇ ಸಲ 500ಕ್ಕಿಂತ ಜಾಸ್ತಿ ಶಿಷ್ಯರಿಗೆ* ಕಾಣಿಸ್ಕೊಂಡನು.+ ಅವ್ರಲ್ಲಿ ತುಂಬ ಜನ ಇವತ್ತಿನ ತನಕ ನಮ್ಮ ಜೊತೆ ಇದ್ದಾರೆ, ಸ್ವಲ್ಪ ಜನ ತೀರಿಹೋಗಿದ್ದಾರೆ.*
7 ಆಮೇಲೆ ಆತನು ಯಾಕೋಬನಿಗೆ,+ ಅದಾದ್ಮೇಲೆ ಎಲ್ಲ ಅಪೊಸ್ತಲರಿಗೆ ಕಾಣಿಸ್ಕೊಂಡನು.+
8 ಕೊನೆಗೆ, ದಿನ ತುಂಬೋ ಮೊದ್ಲೇ ಹುಟ್ಟಿದವನ ತರ ಇರೋ ನನಗೂ ಕಾಣಿಸ್ಕೊಂಡನು.+
9 ನಾನು ಅಪೊಸ್ತಲರಲ್ಲೇ ತುಂಬ ಕನಿಷ್ಠನು. ಎಷ್ಟಂದ್ರೆ ದೇವರ ಸಭೆಗೆ ಹಿಂಸೆ ಕೊಟ್ಟ ನನಗೆ ಅಪೊಸ್ತಲ ಅಂತ ಕರೆಸಿಕೊಳ್ಳೋ ಯೋಗ್ಯತೆ ಇಲ್ಲ.+
10 ಆದ್ರೆ ದೇವರ ಅಪಾರ ಕೃಪೆಯಿಂದಾನೇ ನಾನು ಅಪೊಸ್ತಲನಾಗಿದ್ದೀನಿ. ಆತನು ನನಗೆ ತೋರಿಸಿದ ಅಪಾರ ಕೃಪೆ ವ್ಯರ್ಥ ಆಗಲಿಲ್ಲ. ಯಾಕಂದ್ರೆ ನಾನು ಅವರೆಲ್ಲರಿಗಿಂತ ಜಾಸ್ತಿ ಶ್ರಮಪಟ್ಟಿದ್ದೀನಿ. ನಾನಿದನ್ನ ನನ್ನ ಸ್ವಂತ ಶಕ್ತಿಯಿಂದ ಮಾಡಲಿಲ್ಲ, ದೇವರು ಅಪಾರ ಕೃಪೆ ತೋರಿಸಿದ್ರಿಂದ ಮಾಡ್ದೆ.
11 ನಾನಾಗಲಿ ಅವ್ರಾಗಲಿ ಒಂದೇ ಸಂದೇಶ ಸಾರುತ್ತಿದ್ವಿ ಮತ್ತು ನೀವು ಅದನ್ನ ನಂಬಿದ್ದೀರ.
12 ಕ್ರಿಸ್ತನಿಗೆ ಮತ್ತೆ ಜೀವ ಕೊಟ್ಟು ಎಬ್ಬಿಸಲಾಗಿದೆ ಅಂತ ನಾವು ಸಾರುತ್ತಿರುವಾಗ+ ನಿಮ್ಮಲ್ಲಿ ಸ್ವಲ್ಪ ಜನ ಸತ್ತವ್ರಿಗೆ ಮತ್ತೆ ಜೀವ ಸಿಗಲ್ಲ ಅಂತ ಹೇಗೆ ಹೇಳ್ತಿದ್ದೀರಾ?
13 ಸತ್ತವ್ರಿಗೆ ಮತ್ತೆ ಜೀವ ಸಿಗಲ್ಲ ಅನ್ನೋದಾದ್ರೆ ಕ್ರಿಸ್ತನಿಗೂ ಮತ್ತೆ ಜೀವ ಸಿಗಲಿಲ್ಲ ಅಂತ ಆಗುತ್ತಲ್ವಾ?
14 ಕ್ರಿಸ್ತನಿಗೆ ಮತ್ತೆ ಜೀವ ಸಿಕ್ಕಿಲ್ಲ ಅನ್ನೋದಾದ್ರೆ ನಾವು ಸಾರುತ್ತಾ ಇರೋದು ನಿಜವಾಗ್ಲೂ ವ್ಯರ್ಥ, ನಿಮ್ಮ ನಂಬಿಕೆನೂ ವ್ಯರ್ಥ.
15 ಅಷ್ಟೇ ಅಲ್ಲ, ಸತ್ತವ್ರಿಗೆ ದೇವರು ಮತ್ತೆ ಜೀವ ಕೊಡಲ್ಲ ಅನ್ನೋದಾದ್ರೆ ಕ್ರಿಸ್ತನಿಗೂ ದೇವರು ಜೀವ ಕೊಟ್ಟು ಎಬ್ಬಿಸಲಿಲ್ಲ ಅಂತರ್ಥ. ಹಾಗಾದ್ರೆ ಕ್ರಿಸ್ತನಿಗೆ ದೇವರು ಜೀವಂತ ಎಬ್ಬಿಸಿದ್ದಾನೆ+ ಅಂತ ಸಾರುತ್ತಿರೋ ನಾವು ದೇವರ ಬಗ್ಗೆ ಸುಳ್ಳು ಹೇಳ್ತಿದ್ದೀವಿ ಅಂತಾಯ್ತು.+
16 ಯಾಕಂದ್ರೆ ಸತ್ತವ್ರಿಗೆ ಮತ್ತೆ ಜೀವ ಸಿಗಲ್ಲ ಅನ್ನೋದಾದ್ರೆ ಕ್ರಿಸ್ತನಿಗೂ ಮತ್ತೆ ಜೀವ ಸಿಕ್ಕಿಲ್ಲ ಅಂತಾಗುತ್ತೆ.
17 ಅಷ್ಟೇ ಅಲ್ಲ, ಕ್ರಿಸ್ತನನ್ನ ಜೀವಂತ ಎಬ್ಬಿಸಲಿಲ್ಲ ಅನ್ನೋದಾದ್ರೆ ನಿಮ್ಮ ನಂಬಿಕೆ ವ್ಯರ್ಥ, ನಿಮಗೆ ಪಾಪದಿಂದ ಬಿಡುಗಡೆ ಆಗಿಲ್ಲ ಅಂತಾಯ್ತು.+
18 ಅಷ್ಟೇ ಅಲ್ಲ ತೀರಿ ಹೋಗಿರೋ* ಕ್ರಿಸ್ತನ ಶಿಷ್ಯರು ಪೂರ್ತಿ ನಾಶ ಆದ್ರು ಅಂತಾಯ್ತು.+
19 ಈಗಿನ ಜೀವನಕ್ಕಾಗಿ ಮಾತ್ರ ನಾವು ಕ್ರಿಸ್ತನ ಮೇಲೆ ನಿರೀಕ್ಷೆ ಇಟ್ಟಿದ್ದೀವಿ ಅನ್ನೋದಾದ್ರೆ ಬೇರೆ ಎಲ್ರಿಗಿಂತ ನಾವು ತುಂಬ ದುಃಖದ ಪರಿಸ್ಥಿತಿಯಲ್ಲಿ ಇದ್ದೀವಿ.
20 ಆದ್ರೆ ನಿಜ ಏನಂದ್ರೆ, ದೇವರು ಕ್ರಿಸ್ತನಿಗೆ ಮತ್ತೆ ಜೀವ ಕೊಟ್ಟು ಎಬ್ಬಿಸಿದನು. ತೀರಿಹೋಗಿ* ಮತ್ತೆ ಜೀವ ಪಡ್ಕೊಂಡು ಬಂದವ್ರಲ್ಲಿ ಮೊದಲ ವ್ಯಕ್ತಿ* ಆತನೇ.+
21 ಒಬ್ಬ ಮನುಷ್ಯನಿಂದ ಸಾವು ಬಂದ ಹಾಗೇ+ ಒಬ್ಬ ಮನುಷ್ಯನಿಂದ ಸತ್ತವ್ರನ್ನ ಮತ್ತೆ ಜೀವಕೊಟ್ಟು ಎಬ್ಬಿಸಲಾಗುತ್ತೆ.+
22 ಆದಾಮನಿಂದ ಎಲ್ರೂ ಸತ್ತಿರೋ ಹಾಗೇ+ ಕ್ರಿಸ್ತನಿಂದ ಎಲ್ರೂ ಬದುಕ್ತಾರೆ.+
23 ಆದ್ರೆ ಪ್ರತಿಯೊಬ್ರೂ ತಮ್ಮ ತಮ್ಮ ಸರದಿ ಪ್ರಕಾರ ಮತ್ತೆ ಜೀವ ಪಡ್ಕೊಳ್ತಾರೆ. ಆ ಸರದಿ ಹೀಗಿದೆ: ಮೊದ್ಲು ಕ್ರಿಸ್ತ,+ ಆಮೇಲೆ ಕ್ರಿಸ್ತನಿಗೆ ಸೇರಿದವರು. ಇವರು ಕ್ರಿಸ್ತನ ಸಾನಿಧ್ಯದ ಸಮಯದಲ್ಲಿ+ ಜೀವ ಪಡ್ಕೊಳ್ತಾರೆ.
24 ಆಮೇಲೆ ಕೊನೆಗೆ ಆತನು ಎಲ್ಲ ಸರ್ಕಾರಗಳನ್ನ, ಎಲ್ಲ ಅಧಿಕಾರಿಗಳನ್ನ, ಶಕ್ತಿಗಳನ್ನ ನಾಶ ಮಾಡಿ ಆಳ್ವಿಕೆಯನ್ನ ತನ್ನ ತಂದೆಯಾಗಿರೋ ದೇವರ ಕೈಗೆ ಒಪ್ಪಿಸ್ತಾನೆ.+
25 ದೇವರು ಎಲ್ಲ ಶತ್ರುಗಳನ್ನ ಆತನ ಕಾಲಕೆಳಗೆ ಹಾಕೋ ತನಕ ಆತನು ರಾಜನಾಗಿ ಆಳಬೇಕು.+
26 ಕೊನೇ ಶತ್ರು ಆಗಿರೋ ಸಾವನ್ನ ಆತನು ನಾಶಮಾಡ್ತಾನೆ.+
27 ದೇವರು “ಎಲ್ಲವನ್ನೂ ಆತನ ಕಾಲಕೆಳಗೆ ಹಾಕಿ ಆತನಿಗೆ ಅಧೀನ ಮಾಡಿದನು.”+ ಆದ್ರೆ ‘ಎಲ್ಲವನ್ನ ಅಧೀನಮಾಡಿದನು’+ ಅಂತ ಹೇಳುವಾಗ, ಎಲ್ಲವನ್ನೂ ಆತನಿಗೆ ಅಧೀನಮಾಡಿದ ದೇವರು ಅದ್ರಲ್ಲಿ ಸೇರಿಲ್ಲ ಅನ್ನೋದು ಸ್ಪಷ್ಟ.+
28 ಎಲ್ಲ ಮಗನ ಅಧೀನದ ಕೆಳಗೆ ಬಂದ ಮೇಲೆ, ಮಗನು ತನಗೆ ಎಲ್ಲವನ್ನ ಅಧೀನ ಮಾಡಿದ ದೇವರಿಗೆ ತನ್ನನ್ನೇ ಅಧೀನ ಮಾಡ್ಕೊಳ್ತಾನೆ.+ ಆಗ ದೇವರೊಬ್ಬನೇ ಎಲ್ಲದ್ರ ಮೇಲೆ ರಾಜನಾಗಿ ಆಳ್ತಾನೆ.*+
29 ಸತ್ತವ್ರಿಗೆ ಮತ್ತೆ ಜೀವ ಸಿಗಲ್ಲ ಅನ್ನೋದಾದ್ರೆ ಸತ್ತವ್ರ ತರ ಇರೋಕೆ ದೀಕ್ಷಾಸ್ನಾನ ತಗೊಳ್ಳೋರಿಗೆ ಏನು ಪ್ರಯೋಜನ?+ ಆ ರೀತಿ ಸತ್ತವರು ಬದುಕಲ್ಲ ಅನ್ನೋದಾದ್ರೆ ಸಾಯೋಕ್ಕೋಸ್ಕರ ಯಾಕೆ ದೀಕ್ಷಾಸ್ನಾನ ತಗೊಬೇಕು?
30 ನಾವ್ಯಾಕೆ ಯಾವಾಗ್ಲೂ ನಮ್ಮ ಜೀವಕ್ಕೆ ಅಪಾಯ ಆಗೋ ತರ ಬಿಟ್ಟುಕೊಡಬೇಕು?+
31 ಸಹೋದರರೇ, ನಮ್ಮ ಪ್ರಭು ಕ್ರಿಸ್ತ ಯೇಸುವಿನ ಶಿಷ್ಯರಾಗಿರೋ ನಿಮ್ಮ ವಿಷ್ಯದಲ್ಲಿ ನಾನು ಹೆಮ್ಮೆಪಡೋದು ಎಷ್ಟು ನಿಜಾನೋ ಪ್ರತಿದಿನ ನನ್ನ ಜೀವ ಅಪಾಯದಲ್ಲಿ ಇರೋದೂ ಅಷ್ಟೇ ನಿಜ.
32 ಎಫೆಸದಲ್ಲಿ ನಾನು ಬೇರೆಯವ್ರ ತರ* ಕಾಡುಪ್ರಾಣಿಗಳ ಜೊತೆ ಹೋರಾಡಿದ್ರೆ+ ಅದ್ರಿಂದ ನನಗೇನು ಪ್ರಯೋಜನ? ಸತ್ತವ್ರಿಗೆ ಮತ್ತೆ ಜೀವ ಸಿಗಲ್ಲ ಅನ್ನೋದಾದ್ರೆ “ತಿನ್ನೋಣ, ಕುಡಿಯೋಣ, ಹೇಗಿದ್ರೂ ನಾಳೆ ಸಾಯ್ತಿವಲ್ಲಾ” ಅಂತ ಇರಬಹುದಿತ್ತು.+
33 ಮೋಸ ಹೋಗಬೇಡಿ.* ಕೆಟ್ಟ ಸಹವಾಸ ಒಳ್ಳೇ ನಡತೆಯನ್ನ* ಹಾಳು ಮಾಡುತ್ತೆ.+
34 ಎಚ್ಚೆತ್ಕೊಳ್ಳಿ, ನೀತಿಗೆ ತಕ್ಕ ಹಾಗೆ ನಡೀರಿ. ಪಾಪ ಮಾಡ್ತಾ ಇರಬೇಡಿ. ನಿಮ್ಮಲ್ಲಿ ಸ್ವಲ್ಪ ಜನ್ರಿಗೆ ದೇವರ ಬಗ್ಗೆ ಜ್ಞಾನ ಇಲ್ಲ. ನಿಮಗೆ ನಾಚಿಕೆ ಆಗಬೇಕಂತ ಹೀಗೆ ಹೇಳ್ತಿದ್ದೀನಿ.
35 ಆದ್ರೂ “ಸತ್ತವರು ಮತ್ತೆ ಜೀವ ಪಡ್ಕೊಂಡು ಹೇಗೆ ಎದ್ದು ಬರ್ತಾರೆ? ಆಗ ಅವ್ರಿಗೆ ಯಾವ ತರದ ದೇಹ ಇರುತ್ತೆ?” ಅಂತ ಯಾರಾದ್ರೂ ಕೇಳಬಹುದು.+
36 ಬುದ್ಧಿ ಇಲ್ಲದವನೇ! ನೀನು ಬಿತ್ತಿದ ಬೀಜ ಸತ್ತ ಮೇಲೆನೇ ಗಿಡವಾಗಿ ಬೆಳಿಯುತ್ತೆ ಅಂತ ನಿನಗೆ ಗೊತ್ತಿಲ್ವಾ?
37 ನೀನು ಬಿತ್ತುವಾಗ ಗೋದಿಯನ್ನ ಅಥವಾ ಬೇರೆ ಯಾವುದಾದ್ರೂ ಬೀಜವನ್ನ ಬಿತ್ತುತ್ತೀಯ ಬಿಟ್ರೆ ಈಗಾಗ್ಲೇ ಬೆಳೆದಿರೋ ಗಿಡವನ್ನ ಬಿತ್ತಲ್ಲ.
38 ಆದ್ರೆ ದೇವರು ತನಗೆ ಇಷ್ಟ ಬಂದ ಹಾಗೆ ಅದನ್ನ ಬೆಳಿಸ್ತಾನೆ. ಪ್ರತಿಯೊಂದು ಬೀಜ ಗಿಡವಾಗಿ ಬೆಳೆಯುವಾಗ ಒಂದೇ ತರ ಬೆಳಿಯಲ್ಲ.
39 ಎಲ್ಲ ದೇಹಗಳು ಒಂದೇ ತರ ಇರಲ್ಲ. ಮನುಷ್ಯರ ದೇಹ ಬೇರೆ, ಪ್ರಾಣಿಗಳ ದೇಹ ಬೇರೆ, ಪಕ್ಷಿಗಳ ದೇಹ ಬೇರೆ, ಮೀನುಗಳ ದೇಹ ಬೇರೆ.
40 ಅಷ್ಟೇ ಅಲ್ಲ ಸ್ವರ್ಗದಲ್ಲಿ ಇರೋ ದೇಹಗಳು+ ಭೂಮಿಯಲ್ಲಿರೋ ದೇಹಗಳಿಗಿಂತ+ ಬೇರೆ ಆಗಿವೆ. ಸ್ವರ್ಗದಲ್ಲಿರೋ ದೇಹಗಳ ಅಂದ ಬೇರೆ, ಭೂಮಿಯಲ್ಲಿರೋ ದೇಹಗಳ ಅಂದ ಬೇರೆ.
41 ಸೂರ್ಯನ ಪ್ರಕಾಶ ಬೇರೆ, ಚಂದ್ರನ ಪ್ರಕಾಶ ಬೇರೆ+ ಮತ್ತು ನಕ್ಷತ್ರಗಳ ಪ್ರಕಾಶನೂ ಬೇರೆ. ನಿಜ ಹೇಳಬೇಕಂದ್ರೆ, ಒಂದೊಂದು ನಕ್ಷತ್ರದ ಪ್ರಕಾಶ ಬೇರೆಬೇರೆ.
42 ಸತ್ತವ್ರಿಗೆ ಮತ್ತೆ ಜೀವ ಸಿಗೋದೂ ಅದೇ ತರ ಇರುತ್ತೆ. ಸತ್ತ ದೇಹ ಕೊಳಿಯುತ್ತೆ. ಆದ್ರೆ ಮತ್ತೆ ಜೀವ ಪಡ್ಕೊಂಡ ದೇಹ ಕೊಳಿಯಲ್ಲ.+
43 ದೇಹ ಜೀವ ಕಳ್ಕೊಂಡಾಗ ಅವಮಾನದಿಂದ ಸಮಾಧಿ ಸೇರುತ್ತೆ, ಮತ್ತೆ ಜೀವ ಪಡ್ಕೊಂಡಾಗ ಅದಕ್ಕೆ ಗೌರವ ಸಿಗುತ್ತೆ.+ ಅದು ಬಲ ಕಳ್ಕೊಂಡು ಸಮಾಧಿಯಾಗುತ್ತೆ, ಮತ್ತೆ ಜೀವ ಸಿಕ್ಕಾಗ ಅದು ಬಲಿಷ್ಠವಾಗಿರುತ್ತೆ.+
44 ರಕ್ತಮಾಂಸದ ದೇಹವನ್ನ ಸಮಾಧಿ ಮಾಡಲಾಗುತ್ತೆ, ಅದೃಶ್ಯ ದೇಹವನ್ನ ಕೊಟ್ಟು ಮತ್ತೆ ಜೀವಂತವಾಗಿ ಎಬ್ಬಿಸಲಾಗುತ್ತೆ. ರಕ್ತಮಾಂಸದ ದೇಹ ಇದೆ ಅಂದ್ಮೇಲೆ ಅದೃಶ್ಯ ದೇಹನೂ ಇದೆ.
45 ವಚನದಲ್ಲಿ ಇರೋ ಹಾಗೆ “ಮೊದಲ್ನೇ ಮನುಷ್ಯ ಆದಾಮ ಜೀವಿಸೋ ವ್ಯಕ್ತಿಯಾದ.”*+ ಕೊನೇ ಆದಾಮ ಜೀವ ಕೊಡೋ ಅದೃಶ್ಯ ವ್ಯಕ್ತಿಯಾದ.+
46 ಆದ್ರೆ ಮೊದಲ್ನೇದು ಅದೃಶ್ಯ ದೇಹ ಅಲ್ಲ, ರಕ್ತಮಾಂಸದ ದೇಹ. ಅದೃಶ್ಯ ದೇಹ ಆಮೇಲೆ ಬಂತು.
47 ಮೊದಲ್ನೇ ಮನುಷ್ಯ ಭೂಮಿಯಿಂದ ಬಂದವನು, ದೇವರು ಅವನನ್ನ ಮಣ್ಣಿಂದ ಮಾಡಿದನು.+ ಎರಡ್ನೇ ಮನುಷ್ಯ ಸ್ವರ್ಗದಿಂದ ಬಂದವನು.+
48 ಭೂಮಿಯಲ್ಲಿರೋ ಜನ ಮಣ್ಣಿಂದ ಮಾಡಿದ ಮನುಷ್ಯನ ತರ ಇದ್ದಾರೆ, ಸ್ವರ್ಗದಲ್ಲಿ ಇರುವವರು ಸ್ವರ್ಗದಿಂದ ಬಂದವನ ತರ ಇದ್ದಾರೆ.+
49 ಮಣ್ಣಿಂದ ಬಂದವನ ಸ್ವರೂಪವನ್ನ ನಾವು ಪಡ್ಕೊಂಡಿರೋ+ ತರ ಸ್ವರ್ಗದಿಂದ ಬಂದವನ ಸ್ವರೂಪವನ್ನೂ ಪಡ್ಕೊಳ್ತೀವಿ.+
50 ಆದ್ರೂ ಸಹೋದರರೇ ನಾನು ಹೇಳೋದು ಏನಂದ್ರೆ, ರಕ್ತಮಾಂಸದ ದೇಹ ಇಟ್ಕೊಂಡು ದೇವರ ಆಳ್ವಿಕೆಯಲ್ಲಿ ಪಾಲು ತಗೊಳ್ಳೋಕೆ* ಆಗಲ್ಲ. ಕೊಳೆತು ಹೋಗೋ ದೇಹ ಕೊಳೆಯದ ಜೀವವನ್ನ ಪಡಿಯೋದೂ ಇಲ್ಲ.
51 ನೋಡಿ! ನಾನು ನಿಮಗೊಂದು ಪವಿತ್ರ ರಹಸ್ಯ ಹೇಳ್ತೀನಿ, ನಮ್ಮಲ್ಲಿ ಎಲ್ರೂ ಸತ್ತು ನಿದ್ದೆ ಮಾಡ್ತಾ ಇರಲ್ಲ. ನಾವೆಲ್ಲ ಬದಲಾಗ್ತೀವಿ.+
52 ಅದೂ ಒಂದೇ ಕ್ಷಣದಲ್ಲಿ, ಕಣ್ಣುರೆಪ್ಪೆ ಬಡಿಯೋಷ್ಟರಲ್ಲಿ ಬದಲಾಗ್ತೀವಿ. ಇದು ಕೊನೇ ತುತ್ತೂರಿ ಊದುವಾಗ ಆಗುತ್ತೆ.+ ತುತ್ತೂರಿ ಊದಿದಾಗ ಸತ್ತವರು ಮತ್ತೆ ಜೀವ ಪಡ್ಕೊಂಡು ಎದ್ದೇಳ್ತಾರೆ. ಅವರು ಕೊಳೆತು ಹೋಗದ ದೇಹ ಪಡಿತಾರೆ.
53 ಕೊಳೆತು ಹೋಗೋ ಈ ದೇಹ ಕೊಳೆಯದ ದೇಹವಾಗಿ ಬದಲಾಗಬೇಕು.+ ಸಾಯೋ ಈ ದೇಹ ಅಮರವಾಗಿ ಬದಲಾಗಬೇಕು.+
54 ಕೊಳೆತು ಹೋಗೋ ಈ ದೇಹ ಕೊಳೆಯದ ದೇಹವಾಗಿ ಬದಲಾದಾಗ, ಸಾಯೋ ಈ ದೇಹ ಅಮರ ದೇಹವಾಗಿ ಬದಲಾದಾಗ “ಸಾವು ಶಾಶ್ವತವಾಗಿ ಇಲ್ಲದೆ ಹೋಯ್ತು”+ ಅನ್ನೋ ಮಾತು ನಿಜ ಆಗುತ್ತೆ.
55 “ಸಾವೇ, ನಿನ್ನ ಜಯ ಎಲ್ಲಿ ಹೋಯ್ತು? ಮರಣವೇ, ನಿನ್ನ ವಿಷದ ಮುಳ್ಳು ಎಲ್ಲಿ ಹೋಯ್ತು?”+
56 ಸಾವನ್ನ ತರೋ ಮುಳ್ಳು ಪಾಪವಾಗಿದೆ+ ಮತ್ತು ಪಾಪಕ್ಕೆ ಬಲ ಸಿಗೋದು ನಿಯಮ ಪುಸ್ತಕದಿಂದ.+
57 ಆದ್ರೆ ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ದೇವರು ನಮಗೆ ಜಯ ಕೊಡೋದ್ರಿಂದ ಆತನಿಗೆ ಧನ್ಯವಾದ!+
58 ಹಾಗಾಗಿ ನನ್ನ ಪ್ರಿಯ ಸಹೋದರರೇ, ಸ್ಥಿರವಾಗಿರಿ,+ ಕದಲಬೇಡಿ. ನೀವು ಒಡೆಯನಿಗಾಗಿ ಮಾಡೋ ಕೆಲಸ ವ್ಯರ್ಥ ಆಗಲ್ಲ+ ಅಂತ ಅರ್ಥ ಮಾಡ್ಕೊಂಡು ಯಾವಾಗ್ಲೂ ಒಡೆಯನ ಕೆಲಸವನ್ನ ಹೆಚ್ಚೆಚ್ಚು ಮಾಡಿ.+
ಪಾದಟಿಪ್ಪಣಿ
^ ಇನ್ನೊಂದು ಹೆಸ್ರು ಪೇತ್ರ.
^ ಅಕ್ಷ. “ಸಹೋದರರಿಗೆ.”
^ ಅಕ್ಷ. “ಮರಣದಲ್ಲಿ ನಿದ್ದೆಹೋಗು.”
^ ಅಕ್ಷ. “ಮರಣದಲ್ಲಿ ನಿದ್ದೆಹೋಗು.”
^ ಅಕ್ಷ. “ಮರಣದಲ್ಲಿ ನಿದ್ದೆಹೋಗು.”
^ ಅಕ್ಷ. “ಮೊದಲ ಬೆಳೆ.”
^ ಅಥವಾ “ಎಲ್ರಿಗೂ ಎಲ್ಲ ಆಗ್ತಾನೆ.”
^ ಬಹುಶಃ, “ಮನುಷ್ಯರ ದೃಷ್ಟಿಯಲ್ಲಿ.”
^ ಅಥವಾ “ದಾರಿ ತಪ್ಪಬೇಡಿ.”
^ ಅಥವಾ “ಒಳ್ಳೇ ನೈತಿಕ ಮೌಲ್ಯಗಳನ್ನ.”
^ ಅಕ್ಷ. “ಸೊತ್ತಾಗಿ ಪಡ್ಕೊಳ್ಳೋಕೆ.”