ತಿಮೊತಿಗೆ ಬರೆದ ಮೊದಲನೇ ಪತ್ರ 4:1-16

  • ಕೆಟ್ಟ ದೇವದೂತರ ಬೋಧನೆ ವಿಷ್ಯದಲ್ಲಿ ಎಚ್ಚರಿಕೆ (1-5)

  • ಕ್ರಿಸ್ತನ ಉತ್ತಮ ಸೇವಕರಾಗಿರುವ ವಿಧ (6-10)

    • ವ್ಯಾಯಾಮ, ದೇವರ ಭಕ್ತಿ (8)

  • ಒಳ್ಳೇ ಬೋಧಕನಾಗಿರೋಕೆ ನಿನ್ನಿಂದ ಆಗೋದನ್ನೆಲ್ಲ ಮಾಡು (11-16)

4  ಮುಂದೆ ಸಲ್ಪ ಜನ ದೇವರ ಮೇಲೆ ನಂಬಿಕೆ ಕಳ್ಕೊಳ್ಳೋ ಸಮಯ ಬಂದೇ ಬರುತ್ತೆ ಅಂತ ದೇವರ ಪವಿತ್ರಶಕ್ತಿ ಸ್ಪಷ್ಟವಾಗಿ ಹೇಳಿದೆ. ದೇವರಿಂದಾನೇ ಬಂದಿದೆ ಅನ್ನೋ ತರ ಇರೋ ಸುಳ್ಳುಸುದ್ದಿಗೆ,+ ಕೆಟ್ಟ ದೇವದೂತರ ಬೋಧನೆಗೆ,  ಒಳ್ಳೆಯವ್ರ ತರ ವೇಶ ಹಾಕೊಂಡಿರೋ ಜನ್ರ ಸುಳ್ಳು ಮಾತಿಗೆ+ ಅವರು ಗಮನಕೊಟ್ಟು ಹಾಗೆ ನಂಬಿಕೆ ಕಳ್ಕೊಳ್ತಾರೆ. ಆ ತರ ನಾಟಕ ಮಾಡುವವ್ರ ಮನಸ್ಸಾಕ್ಷಿ ಕಾಯಿಸಿದ ಕಬ್ಬಿಣದಿಂದ ಬರೆ ಹಾಕಿರೋ ಜಾಗದ ತರ ಮರಗಟ್ಟಿ ಹೋಗಿದೆ.  ಅಂಥವರು ಜನ್ರಿಗೆ ಮದುವೆ ಆಗಬಾರದು,+ ಇಂಥಿಂಥ ಆಹಾರ ತಿನ್ನಬಾರದು ಅಂತ ಆಜ್ಞೆ ಕೊಡ್ತಾರೆ.+ ಆದ್ರೆ ಯಾರು ಸತ್ಯದ ಸ್ಪಷ್ಟ ಜ್ಞಾನ ಪಡ್ಕೊಂಡು ನಂಬಿಕೆ ಇಡ್ತಾರೋ ಅವರು ಧನ್ಯವಾದ ಹೇಳಿ ತಿನ್ನೋಕಂತ+ ದೇವರು ಆ ಆಹಾರವನ್ನ ಸೃಷ್ಟಿ ಮಾಡಿದ್ದಾನೆ.+  ಯಾಕಂದ್ರೆ ದೇವರ ಎಲ್ಲ ಸೃಷ್ಟಿ ಚೆನ್ನಾಗಿದೆ.+ ಧನ್ಯವಾದ ಹೇಳಿ ತಿಂದ್ರೆ ಯಾವುದನ್ನೂ ಬೇಡ ಅನ್ನಬೇಕಾಗಿಲ್ಲ.+  ಯಾಕಂದ್ರೆ ದೇವರ ಮಾತಿಂದ, ಪ್ರಾರ್ಥನೆಯಿಂದ ಅದು ಪವಿತ್ರ ಆಗುತ್ತೆ.  ನೀನು ಸಹೋದರರಿಗೆ ಈ ಸಲಹೆ ಕೊಡೋದ್ರಿಂದ ಕ್ರಿಸ್ತ ಯೇಸುವಿನ ಒಳ್ಳೇ ಸೇವಕ ಅಂತ ತೋರಿಸ್ಕೊಡ್ತೀಯ. ಅಷ್ಟೇ ಅಲ್ಲ ನೀನು ಸತ್ಯದ ಮಾತುಗಳಿಂದ ಮತ್ತು ಇಲ್ಲಿ ತನಕ ಸರಿಯಾಗಿ ಪಾಲಿಸಿದ ಒಳ್ಳೇ ಬೋಧನೆಯಿಂದ ತರಬೇತಿ* ಪಡ್ಕೊಂಡಿದ್ದೀಯ ಅಂತ ತೋರಿಸ್ತೀಯ.+  ದೇವರ ಮೇಲೆ ತಪ್ಪುಹೊರಿಸೋ ಸುಳ್ಳು ಕಥೆಗಳನ್ನ ಅಂದ್ರೆ ಅಜ್ಜಿ ಕಥೆಗಳ ತರ ಇರೋ ಕಟ್ಟುಕಥೆಗಳನ್ನ ಕೇಳಿಸ್ಕೊಬೇಡ.+ ದೇವರ ಮೇಲೆ ಭಕ್ತಿ ತೋರಿಸೋದನ್ನ ಗುರಿಯಾಗಿ ಇಟ್ಕೊಂಡು ನಿನ್ನನ್ನ ನೀನೇ ತರಬೇತಿ ಮಾಡ್ಕೊ.  ವ್ಯಾಯಾಮದಿಂದ* ಸ್ವಲ್ಪ ಪ್ರಯೋಜನ ಇದೆ. ಆದ್ರೆ ದೇವರಿಗೆ ತೋರಿಸೋ ಭಕ್ತಿಯಿಂದ ಎಲ್ಲ ವಿಷ್ಯದಲ್ಲೂ ಪ್ರಯೋಜನ ಇದೆ. ಯಾಕಂದ್ರೆ ಇದು ಈಗ್ಲೂ ಮುಂದಕ್ಕೂ ಆಶೀರ್ವಾದಗಳನ್ನ ಪಡಿಯೋಕೆ ಸಹಾಯ ಮಾಡುತ್ತೆ.+  ಈ ಮಾತನ್ನ ನಂಬಬಹುದು, ಒಪ್ಕೊಬಹುದು. 10  ಇದಕ್ಕೇ ನಾವು ಕಷ್ಟಪಟ್ಟು ಕೆಲಸ ಮಾಡ್ತಿದ್ದೀವಿ, ಶ್ರಮ ಹಾಕ್ತಿದ್ದೀವಿ.+ ಯಾಕಂದ್ರೆ ಎಲ್ಲ ತರದ ಜನ್ರನ್ನ,+ ಮುಖ್ಯವಾಗಿ ನಂಬಿಗಸ್ತರನ್ನ ರಕ್ಷಿಸೋ+ ಜೀವ ಇರೋ ದೇವರ ಮೇಲೆ ನಾವು ಭರವಸೆ ಇಟ್ಟಿದ್ದೀವಿ. 11  ಈ ವಿಷ್ಯಗಳ ಬಗ್ಗೆ ಆಜ್ಞೆಗಳನ್ನ ಕೊಡ್ತಾ ಕಲಿಸ್ತಾ ಇರು. 12  ನೀನು ಇನ್ನೂ ಚಿಕ್ಕವನು ಅಂತ ಯಾರೂ ನಿನ್ನನ್ನ ಕೀಳಾಗಿ ಕಾಣದೇ ಇರೋ ಹಾಗೆ ನೋಡ್ಕೊ. ನಿನ್ನ ಮಾತು, ನಡತೆ, ಪ್ರೀತಿ, ನಂಬಿಕೆ, ನೈತಿಕ ಶುದ್ಧತೆಯಲ್ಲಿ ನಂಬಿಗಸ್ತರಿಗೆ ಮಾದರಿಯಾಗಿರು. 13  ನಾನು ಬರೋ ತನಕ ನೀನು ಬೇರೆಯವ್ರ ಮುಂದೆ ಓದೋದ್ರಲ್ಲಿ,+ ಪ್ರೋತ್ಸಾಹ ಕೊಡೋದ್ರಲ್ಲಿ, ಕಲಿಸೋದ್ರಲ್ಲಿ* ನಿನ್ನಿಂದ ಆಗೋದೆಲ್ಲ ಮಾಡು. 14  ದೇವರು ನಿನಗೆ ಕೊಟ್ಟಿರೋ ಸಾಮರ್ಥ್ಯವನ್ನ ತಳ್ಳಿ ಹಾಕಬೇಡ. ನಿನ್ನ ಬಗ್ಗೆ ಭವಿಷ್ಯ ಹೇಳಿದಾಗ ಮತ್ತು ಹಿರಿಯರ ಮಂಡಲಿ ಅವ್ರ ಕೈಗಳನ್ನ ನಿನ್ನ ಮೇಲಿಟ್ಟಾಗ ಆ ಸಾಮರ್ಥ್ಯವನ್ನ ಆತನು ನಿನಗೆ ಕೊಟ್ಟನು.+ 15  ಈ ವಿಷ್ಯಗಳ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡು. ಅದ್ರಲ್ಲೇ ಮುಳುಗಿರು. ಆಗ ನಿನ್ನ ಪ್ರಗತಿ ಎಲ್ರಿಗೆ ಸ್ಪಷ್ಟವಾಗಿ ಕಾಣಿಸುತ್ತೆ. 16  ನೀನು ಒಳ್ಳೇ ಮಾದರಿ ಆಗಿರೋಕೆ ಮತ್ತು ಒಳ್ಳೇ ಬೋಧಕನಾಗಿ ಇರೋಕೆ ನಿನ್ನಿಂದ ಆಗೋದನ್ನೆಲ್ಲ ಮಾಡು.+ ಅದಕ್ಕಾಗಿ ಬಿಡದೆ ಪ್ರಯತ್ನ ಮಾಡು. ಹಾಗೆ ಮಾಡಿದ್ರೆ ನಿನಗೂ ರಕ್ಷಣೆ ಸಿಗುತ್ತೆ, ನಿನ್ನ ಮಾತನ್ನ ಕೇಳುವವ್ರಿಗೂ ರಕ್ಷಣೆ ಸಿಗುತ್ತೆ.+

ಪಾದಟಿಪ್ಪಣಿ

ಅಕ್ಷ. “ಪೋಷಣೆ.”
ಅಥವಾ “ದೈಹಿಕ ತರಬೇತಿಯಿಂದ.”
ಅಥವಾ “ಬುದ್ಧಿಹೇಳೋದ್ರಲ್ಲಿ.”