ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆನಂದ—ನಾವು ದೇವರಿಂದ ಪಡೆಯುವ ಗುಣ

ಆನಂದ—ನಾವು ದೇವರಿಂದ ಪಡೆಯುವ ಗುಣ

ಎಲ್ಲ ಜನರು ಸಂತೋಷವಾಗಿರಲು ಬಯಸುತ್ತಾರೆ. ಆದರೆ ಇವು ಕಡೇ ದಿವಸಗಳು ಆಗಿರುವುದರಿಂದ ಪ್ರತಿಯೊಬ್ಬರಿಗೂ ‘ನಿಭಾಯಿಸಲು ಕಷ್ಟವಾದ’ ಸಮಸ್ಯೆಗಳಿವೆ. (2 ತಿಮೊ. 3:1) ಕೆಲವರು ಅನ್ಯಾಯ, ಅನಾರೋಗ್ಯ, ನಿರುದ್ಯೋಗ, ಆಪ್ತರ ಮರಣ ಅಥವಾ ಚಿಂತೆಗೀಡು ಮಾಡುವಂಥ ಇತರ ಸಮಸ್ಯೆಗಳಿಂದಾಗಿ ಆನಂದವನ್ನು ಕಳಕೊಳ್ಳುತ್ತಾರೆ. ಯೆಹೋವನ ಆರಾಧಕರು ಕೂಡ ಇದಕ್ಕೆ ಹೊರತಲ್ಲ. ಅವರೂ ನಿರುತ್ಸಾಹಗೊಂಡು ಆನಂದ ಕಳಕೊಳ್ಳಬಹುದು. ಒಂದುವೇಳೆ ನೀವೂ ಆನಂದವನ್ನು ಕಳಕೊಂಡಿರುವುದಾದರೆ ಅದನ್ನು ಹೇಗೆ ಪುನಃ ಪಡೆಯಬಹುದು?

ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಲು ನಾವು ಮೊದಲು ನಿಜವಾದ ಆನಂದ ಅಂದರೇನು ಎಂದು ಅರ್ಥಮಾಡಿಕೊಳ್ಳಬೇಕು ಮತ್ತು ಕಷ್ಟಗಳಿದ್ದರೂ ಕೆಲವರು ಹೇಗೆ ಆನಂದವನ್ನು ಕಳಕೊಳ್ಳದೆ ಇದ್ದರು ಎಂದು ತಿಳಿದುಕೊಳ್ಳಬೇಕು. ನಂತರ, ನಾವು ಹೇಗೆ ಆನಂದ ಕಳಕೊಳ್ಳದೆ ಇರಬಹುದು ಮತ್ತು ಅದನ್ನು ಹೇಗೆ ಹೆಚ್ಚಿಸಬಹುದು ಎಂದು ನೋಡೋಣ.

ಆನಂದ ಅಂದರೇನು?

ಒಬ್ಬ ವ್ಯಕ್ತಿ ನಗುನಗುತ್ತಾ ಇದ್ದರೆ ಅವನು ಆನಂದವಾಗಿದ್ದಾನೆ ಎಂದರ್ಥವಲ್ಲ. ಉದಾಹರಣೆಗೆ, ಒಬ್ಬ ವ್ಯಕ್ತಿ ಕಂಠಪೂರ್ತಿ ಕುಡಿದುಬಿಟ್ಟು ತುಂಬ ನಗಾಡಬಹುದು. ಆದರೆ ಅವನ ಮತ್ತೆಲ್ಲಾ ಇಳಿದ ಮೇಲೆ ಅವನು ನಗುತ್ತಾ ಇರುವುದಿಲ್ಲ, ಪುನಃ ದುಃಖ-ಸಮಸ್ಯೆಗಳು ಕಣ್ಣೆದುರಿಗೆ ಬಂದು ಅವನನ್ನು ಕಾಡಬಹುದು. ಆದ್ದರಿಂದ ಅವನ ಆ ಖುಷಿ ತಾತ್ಕಾಲಿಕವಾದ ಖುಷಿ. ಅದು ನಿಜವಾದ ಆನಂದವಲ್ಲ.—ಜ್ಞಾನೋ. 14:13.

ಹಾಗಾದರೆ ಆನಂದ ಅಂದರೇನು? ನಮಗೆ ಏನಾದರೂ ಒಳ್ಳೇದಾದರೆ ಅಥವಾ ಒಳ್ಳೇದಾಗುತ್ತದೆ ಎಂದು ಗೊತ್ತಾದರೆ ನಮ್ಮ ಹೃದಯದಲ್ಲಿ ಮೂಡುವ ಭಾವನೆಯೇ ಆನಂದ. ಆನಂದವಾಗಿ ಇರುವುದು ಅಂದರೆ ನಮ್ಮ ಸನ್ನಿವೇಶ ಚೆನ್ನಾಗಿದ್ದರೂ ಚೆನ್ನಾಗಿಲ್ಲದಿದ್ದರೂ ಸಂತೋಷವಾಗಿರುವುದು. (1 ಥೆಸ. 1:6) ನಿಜವೇನೆಂದರೆ, ನೆಮ್ಮದಿ ಹಾಳಾಗುವಂಥ ವಿಷಯವೇನಾದರೂ ನಡೆದರೂ ನಾವು ನಮ್ಮ ಆನಂದವನ್ನು ಕಳಕೊಳ್ಳದೆ ಇರಲು ಸಾಧ್ಯ. ಉದಾಹರಣೆಗೆ, ಅಪೊಸ್ತಲರು ಯೇಸುವಿನ ಬಗ್ಗೆ ಸಾರಿದ್ದರಿಂದ ಅವರನ್ನು ತುಂಬ ಹೊಡೆಯಲಾಯಿತು. ಹಾಗಿದ್ದರೂ “ಅವನ ಹೆಸರಿನ ನಿಮಿತ್ತ ತಾವು ಅವಮಾನಪಡಲು ಯೋಗ್ಯರೆನಿಸಿಕೊಂಡದ್ದಕ್ಕಾಗಿ ಸಂತೋಷಿಸುತ್ತಾ ಅವರು ಹಿರೀಸಭೆಯಿಂದ ಹೊರಟುಹೋದರು.” (ಅ. ಕಾ. 5:41) ಅವರು ಹೊಡೆತ ತಿಂದದ್ದಕ್ಕಾಗಿ ಅಲ್ಲ ಹಿಂಸೆ ಬಂದರೂ ದೇವರಿಗೆ ನಂಬಿಗಸ್ತರಾಗಿದ್ದ ಕಾರಣಕ್ಕೆ ಸಂತೋಷಪಟ್ಟರು.

ಈ ರೀತಿಯ ಆನಂದ ನಮಗೆ ಹುಟ್ಟಿನಿಂದಲೇ ಬರುವುದಿಲ್ಲ ಅಥವಾ ತನ್ನಿಂದತಾನೇ ಬರುವುದಿಲ್ಲ. ಯಾಕೆ? ಯಾಕೆಂದರೆ ನಿಜವಾದ ಆನಂದ ಎನ್ನುವುದು ದೇವರ ಪವಿತ್ರಾತ್ಮದ ಫಲದ ಅಂಶವಾಗಿದೆ. ದೇವರ ಪವಿತ್ರಾತ್ಮ ನಮಗೆ “ಹೊಸ ವ್ಯಕ್ತಿತ್ವವನ್ನು” ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಆ ವ್ಯಕ್ತಿತ್ವದಲ್ಲಿ ಆನಂದ ಕೂಡ ಸೇರಿದೆ. (ಎಫೆ. 4:24; ಗಲಾ. 5:22) ಆದ್ದರಿಂದ ನಾವು ಆನಂದವಾಗಿದ್ದರೆ ಕಷ್ಟಗಳನ್ನು ನಿಭಾಯಿಸಲು ಸುಲಭವಾಗುತ್ತದೆ.

ಅನುಕರಿಸಲು ನಮಗಿರುವ ಮಾದರಿಗಳು

ಭೂಮಿಯಲ್ಲಿ ಒಳ್ಳೇ ವಿಷಯಗಳು ನಡೆಯಬೇಕೆಂದು ಯೆಹೋವನು ಬಯಸಿದನು. ಇಂದು ನಡೆಯುತ್ತಿರುವ ಕೆಟ್ಟ ವಿಷಯಗಳನ್ನು ನೋಡಲು ಆತನು ಇಷ್ಟಪಡುವುದಿಲ್ಲ. ಆದರೂ ಜನರು ಕೆಟ್ಟದ್ದನ್ನು ಮಾಡುವಾಗ ಆತನು ಆನಂದವನ್ನು ಕಳಕೊಳ್ಳುವುದಿಲ್ಲ. ಬೈಬಲ್‌ ಹೇಳುವಂತೆ ‘ಆತನ ಪವಿತ್ರಾಲಯದಲ್ಲಿ ಬಲಸಂತೋಷಗಳು ಇರುತ್ತವೆ.’ (1 ಪೂರ್ವ. 16:27) ಜೊತೆಗೆ, ಆತನ ಸೇವಕರು ಒಳ್ಳೇ ವಿಷಯಗಳನ್ನು ಮಾಡುವಾಗ ಆತನಿಗೆ ಇನ್ನೂ ಸಂತೋಷವಾಗುತ್ತದೆ.—ಜ್ಞಾನೋ. 27:11.

ಯೆಹೋವನಂತೆ ನಾವು ಇರಬೇಕು. ನಾವು ಬಯಸಿದಂತೆ ವಿಷಯಗಳು ನಡೆಯದಿದ್ದಾಗ ಆನಂದವನ್ನು ಕಳಕೊಳ್ಳಬಾರದು. ಅದರ ಬಗ್ಗೆನೇ ಚಿಂತೆ ಮಾಡುವ ಬದಲು ನಮಗಿರುವ ಒಳ್ಳೇ ವಿಷಯಗಳಿಗೆ ಗಮನ ಕೊಡಬೇಕು. ಭವಿಷ್ಯದಲ್ಲಿ ನಮಗೆ ಇನ್ನೂ ಒಳ್ಳೇದಾಗಿರುವ ವಿಷಯಗಳು ಸಿಗಲಿವೆ. ಅದಕ್ಕಾಗಿ ತಾಳ್ಮೆಯಿಂದ ಕಾಯಬೇಕು. *

ಜೀವನದಲ್ಲಿ ಅನೇಕ ಸಮಸ್ಯೆಗಳಿದ್ದರೂ ಆನಂದವನ್ನು ಕಳಕೊಳ್ಳದೆ ಇದ್ದ ಅನೇಕರ ಉದಾಹರಣೆಗಳು ಬೈಬಲಿನಲ್ಲಿವೆ. ಇಂಥ ಒಂದು ಉದಾಹರಣೆ ಅಬ್ರಹಾಮನದ್ದು. ಆತನ ಜೀವ ಅಪಾಯದಲ್ಲಿದ್ದಾಗಲೂ ಬೇರೆ ಜನರಿಂದ ಸಮಸ್ಯೆಗಳಾದಾಗಲೂ ಆತನು ಆನಂದವನ್ನು ಕಳಕೊಳ್ಳಲಿಲ್ಲ. (ಆದಿ. 12:10-20; 14:8-16; 16:4, 5; 20:1-18; 21:8, 9) ಇದು ಆತನಿಂದ ಹೇಗೆ ಸಾಧ್ಯವಾಯಿತು? ಆತನು ಮೆಸ್ಸೀಯನ ಆಳ್ವಿಕೆ ಕೆಳಗೆ ಹೊಸ ಲೋಕದಲ್ಲಿ ಜೀವಿಸುವ ನಿರೀಕ್ಷೆಯ ಬಗ್ಗೆ ಯೋಚಿಸುತ್ತಾ ಇದ್ದನು. (ಆದಿ. 22:15-18; ಇಬ್ರಿ. 11:10) “ನಿಮ್ಮ ತಂದೆಯಾದ ಅಬ್ರಹಾಮನು ನನ್ನ ದಿನವನ್ನು ನೋಡುವ ಪ್ರತೀಕ್ಷೆಯಲ್ಲಿ ಬಹಳ ಆನಂದಿಸಿದನು” ಎಂದು ಯೇಸು ಹೇಳಿದನು. (ಯೋಹಾ. 8:56) ನಾವು ಕೂಡ ಭವಿಷ್ಯದಲ್ಲಿ ನಮಗೆ ಸಿಗಲಿರುವ ಆನಂದದ ಬಗ್ಗೆ ಯೋಚಿಸಿದರೆ ಅಬ್ರಹಾಮನನ್ನು ಅನುಕರಿಸುತ್ತೇವೆ.—ರೋಮ. 8:21.

ಪೌಲ ಮತ್ತು ಸೀಲ ಕೂಡ ಅನೇಕ ಕಷ್ಟಗಳು ಬಂದರೂ ಆನಂದ ಕಳಕೊಳ್ಳಲಿಲ್ಲ. ಅವರಲ್ಲಿ ಬಲವಾದ ನಂಬಿಕೆ ಇತ್ತು. ಉದಾಹರಣೆಗೆ, ಒಮ್ಮೆ ಅವರನ್ನು ತುಂಬ ಹೊಡೆದು ಜೈಲಿಗೆ ಹಾಕಲಾಗಿತ್ತು. ಅಲ್ಲಿ ಅವರು “ಪ್ರಾರ್ಥನೆ ಮಾಡುತ್ತಾ ಗೀತೆಯನ್ನು ಹಾಡುವ ಮೂಲಕ ದೇವರನ್ನು ಸ್ತುತಿಸುತ್ತಾ” ಇದ್ದರು. (ಅ. ಕಾ. 16:23-25) ಭವಿಷ್ಯದಲ್ಲಿ ತಮಗೆ ಸಿಗಲಿದ್ದ ದೇವರ ಆಶೀರ್ವಾದಗಳ ಬಗ್ಗೆ ಯೋಚಿಸುತ್ತಾ ಇದ್ದದರಿಂದ ಕಷ್ಟಗಳನ್ನು ತಾಳಿಕೊಳ್ಳಲು ಅವರಿಗೆ ಸಾಧ್ಯವಾಯಿತು. ತಾವು ಕ್ರಿಸ್ತನ ಹಿಂಬಾಲಕರು ಆಗಿರುವುದರಿಂದಲೇ ಕಷ್ಟಗಳು ಬರುತ್ತಿವೆ ಎಂಬ ವಿಷಯ ಕೂಡ ಅವರಿಗೆ ಆನಂದ ತಂದಿತು. ನಾವು ಕೂಡ ದೇವರಿಗೆ ನಂಬಿಗಸ್ತರಾಗಿ ಸೇವೆ ಮಾಡುವುದರಿಂದ ಸಿಗುವ ಒಳ್ಳೇ ಫಲಿತಾಂಶಗಳ ಬಗ್ಗೆ ಯೋಚಿಸಿದರೆ ಪೌಲ ಮತ್ತು ಸೀಲನನ್ನು ಅನುಕರಿಸುತ್ತೇವೆ.—ಫಿಲಿ. 1:12-14.

ಇಂದು ಕೂಡ ಕಷ್ಟಗಳಿದ್ದರೂ ಆನಂದವನ್ನು ಕಳಕೊಳ್ಳದಿರುವ ಅನೇಕ ಸಹೋದರ ಸಹೋದರಿಯರ ಉದಾಹರಣೆಗಳು ನಮ್ಮ ಮುಂದಿವೆ. ಉದಾಹರಣೆಗೆ, 2013​ರ ನವೆಂಬರ್‌ನಲ್ಲಿ ಹೈಯಾನ್‌ ಎಂಬ ದೊಡ್ಡ ತೂಫಾನು ಫಿಲಿಪೀನ್ಸನ್ನು ಅಪ್ಪಳಿಸಿತು. ಯೆಹೋವನ ಸಾಕ್ಷಿಗಳ ಸಾವಿರಕ್ಕೂ ಹೆಚ್ಚಿನ ಕುಟುಂಬಗಳು ತಮ್ಮ ಮನೆಗಳನ್ನು ಕಳಕೊಂಡವು. ಟಾಕ್ಲೋಬಾನ್‌ ನಗರದಲ್ಲಿರುವ ಜಾರ್ಜ್‌ ಎಂಬವರ ಮನೆ ಸಂಪೂರ್ಣವಾಗಿ ನಾಶವಾಯಿತು. ಅವರು ಹೇಳುವುದು: “ಸಹೋದರರು ಇಂಥ ಕಷ್ಟನಷ್ಟಗಳನ್ನು ಅನುಭವಿಸಿದ್ದರೂ ಸಂತೋಷವಾಗಿದ್ದಾರೆ. ನಮ್ಮ ಆನಂದವನ್ನು ವರ್ಣಿಸಲು ನನಗೆ ಪದಗಳೇ ಇಲ್ಲ.” ಯೆಹೋವನು ನಮಗೋಸ್ಕರ ಏನೆಲ್ಲ ಮಾಡಿದ್ದಾನೋ ಅದರ ಬಗ್ಗೆ ಯೋಚಿಸಿದರೆ ಮತ್ತು ಆತನಿಗೆ ಋಣಿಗಳಾಗಿದ್ದರೆ ಎಷ್ಟೇ ದೊಡ್ಡ ಕಷ್ಟ ಬಂದರೂ ನಾವು ಆನಂದವನ್ನು ಕಳಕೊಳ್ಳುವುದಿಲ್ಲ. ಯೆಹೋವನು ನಮಗೆ ಕೊಟ್ಟಿರುವ ಬೇರೆ ಯಾವೆಲ್ಲ ವಿಷಯಗಳು ಆನಂದವನ್ನು ಕಳಕೊಳ್ಳದಿರಲು ಸಹಾಯ ಮಾಡುತ್ತವೆ?

ನಾವು ಆನಂದವಾಗಿರಲು ಕಾರಣಗಳು

ನಮಗೆ ಯೆಹೋವನೊಂದಿಗಿರುವ ಒಳ್ಳೇ ಸಂಬಂಧವೇ ಆನಂದಕ್ಕೆ ಅತಿ ದೊಡ್ಡ ಕಾರಣ. ಇಡೀ ವಿಶ್ವದ ರಾಜನ ಬಗ್ಗೆ ನಮಗೆ ಗೊತ್ತು. ಆತನೇ ನಮ್ಮ ತಂದೆ, ನಮ್ಮ ದೇವರು, ನಮ್ಮ ಸ್ನೇಹಿತ!—ಕೀರ್ತ. 71:17, 18.

ಅಷ್ಟೇ ಅಲ್ಲ, ಯೆಹೋವನು ನಮಗೆ ಜೀವ ಕೊಟ್ಟಿದ್ದಾನೆ ಮತ್ತು ಅದನ್ನು ಆನಂದಿಸುವ ಸಾಮರ್ಥ್ಯ ಕೊಟ್ಟಿದ್ದಾನೆ. ಅದಕ್ಕಾಗಿ ನಾವು ಆತನಿಗೆ ಕೃತಜ್ಞರು. (ಪ್ರಸಂ. 3:12, 13) ಆತನು ನಮ್ಮನ್ನು ತನ್ನ ಕಡೆಗೆ ಸೆಳೆದಿರುವುದರಿಂದ ನಮ್ಮ ಬಗ್ಗೆ ಆತನಿಗಿರುವ ಚಿತ್ತ ಏನೆಂದು ತಿಳಿದುಕೊಂಡಿದ್ದೇವೆ. ನಾವು ಹೇಗೆ ಜೀವನ ಮಾಡಬೇಕೆಂದು ತಿಳಿದುಕೊಂಡಿದ್ದೇವೆ. (ಕೊಲೊ. 1:9, 10) ಆದರೆ ಜೀವನದ ಉದ್ದೇಶದ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ. ಈ ವಿಷಯದಲ್ಲಿ ನಮಗೂ ಬೇರೆ ಜನರಿಗೂ ಇರುವ ವ್ಯತ್ಯಾಸವನ್ನು ಪೌಲ ಹೀಗೆ ಒತ್ತಿಹೇಳಿದ್ದಾನೆ: “‘ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಪಡಿಸಿರುವ ವಿಷಯಗಳನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಿಸಿಕೊಳ್ಳಲಿಲ್ಲ ಮತ್ತು ಮನುಷ್ಯನ ಹೃದಯದಲ್ಲಿ ಹುಟ್ಟಲೂ ಇಲ್ಲ.’ . . . ಆದರೆ ದೇವರು ಈ ವಿಷಯಗಳನ್ನು ತನ್ನ ಪವಿತ್ರಾತ್ಮದ ಮೂಲಕ ನಮಗೆ ಪ್ರಕಟಪಡಿಸಿದ್ದಾನೆ.” (1 ಕೊರಿಂ. 2:9, 10) ಹೀಗೆ ಯೆಹೋವನ ಚಿತ್ತ ಮತ್ತು ಉದ್ದೇಶವನ್ನು ನಾವು ತಿಳಿದುಕೊಂಡಿರುವುದು ನಮಗೆ ಆನಂದ ತಂದಿದೆ.

ಯೆಹೋವನು ನಮಗೋಸ್ಕರ ಇನ್ನೂ ಏನೆಲ್ಲ ಮಾಡಿದ್ದಾನೆ ನೋಡಿ. ನಮ್ಮ ಪಾಪಗಳನ್ನು ಕ್ಷಮಿಸಲು ಬೇಕಾದ ಏರ್ಪಾಡು ಮಾಡಿದ್ದಾನೆ. (1 ಯೋಹಾ. 2:12) ಹೊಸ ಲೋಕದಲ್ಲಿ ನಿತ್ಯಜೀವ ಸಿಗುತ್ತದೆ ಎಂಬ ನಿರೀಕ್ಷೆ ಕೊಟ್ಟಿದ್ದಾನೆ. ಆ ಹೊಸ ಲೋಕ ಇನ್ನೇನು ತುಂಬ ಹತ್ತಿರವಿದೆ. (ರೋಮ. 12:12) ಈಗ ಅನೇಕ ಸ್ನೇಹಿತರನ್ನು ಕೊಟ್ಟಿದ್ದಾನೆ. ಅವರ ಜೊತೆ ಸೇರಿ ನಾವು ಯೆಹೋವನನ್ನು ಆರಾಧಿಸಬಹುದು. (ಕೀರ್ತ. 133:1) ಆತನು ನಮ್ಮನ್ನು ಸೈತಾನ ಮತ್ತು ಅವನ ದೆವ್ವಗಳಿಂದ ಸಂರಕ್ಷಿಸುತ್ತಿದ್ದಾನೆ. (ಕೀರ್ತ. 91:11) ಯೆಹೋವನು ಕೊಟ್ಟಿರುವ ಈ ಎಲ್ಲ ಅದ್ಭುತ ಆಶೀರ್ವಾದಗಳ ಬಗ್ಗೆ ಯೋಚಿಸುತ್ತಾ ಇರುವುದಾದರೆ ನಮ್ಮ ಆನಂದ ಹೆಚ್ಚುತ್ತದೆ.—ಫಿಲಿ. 4:4.

ಆನಂದವನ್ನು ಹೆಚ್ಚಿಸುವುದು ಹೇಗೆ?

ಒಬ್ಬ ಕ್ರೈಸ್ತನು ತನ್ನ ಆನಂದವನ್ನು ಹೆಚ್ಚಿಸಿಕೊಳ್ಳಲು ಸಾಧ್ಯನಾ? ಯೇಸು ಹೇಳಿದ್ದು: “ನನ್ನ ಆನಂದವು ನಿಮ್ಮಲ್ಲಿ ಇರುವಂತೆಯೂ ನಿಮ್ಮ ಆನಂದವು ಪೂರ್ಣಗೊಳ್ಳುವಂತೆಯೂ ಈ ವಿಷಯಗಳನ್ನು ನಾನು ನಿಮಗೆ ತಿಳಿಸಿದ್ದೇನೆ.” (ಯೋಹಾ. 15:11) ನಮ್ಮ ಆನಂದವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಇದರಿಂದ ಗೊತ್ತಾಗುತ್ತದೆ. ಆನಂದವನ್ನು ಬೆಂಕಿಗೆ ಹೋಲಿಸಬಹುದು. ಬೆಂಕಿಯ ಉರಿ ಹೆಚ್ಚಿಸಬೇಕಾದರೆ ಕಟ್ಟಿಗೆ ಹಾಕುತ್ತಾ ಇರಬೇಕು. ನಮ್ಮ ಆನಂದ ಹೆಚ್ಚಬೇಕಾದರೆ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುತ್ತಾ ಇರಬೇಕು. ಯಾಕೆಂದರೆ ಆನಂದ ಪವಿತ್ರಾತ್ಮದ ಫಲದ ಒಂದು ಅಂಶ. ಜೊತೆಗೆ, ಪವಿತ್ರಾತ್ಮದ ಪ್ರೇರಣೆಯಿಂದ ಬರೆಯಲಾದ ಬೈಬಲ್‌ ವಿಷಯಗಳ ಬಗ್ಗೆ ಧ್ಯಾನಿಸುತ್ತಾ ಇರಬೇಕು.—ಕೀರ್ತ. 1:1, 2; ಲೂಕ 11:13.

ಯೆಹೋವನಿಗೆ ಸಂತೋಷ ತರುವಂಥ ಕೆಲಸಗಳನ್ನು ಮಾಡುತ್ತಾ ಇರುವಾಗ ಕೂಡ ನಮ್ಮ ಆನಂದ ಹೆಚ್ಚಾಗುತ್ತದೆ. (ಕೀರ್ತ. 35:27; 112:1) ಯಾಕೆಂದರೆ “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು”ವಂಥ ರೀತಿಯಲ್ಲಿ ನಾವು ಸೃಷ್ಟಿಯಾಗಿದ್ದೇವೆ. ಆತನಿಗೆ ಏನಿಷ್ಟಾನೋ ಅದನ್ನು ಮಾಡುವ “ಕರ್ತವ್ಯ” ನಮ್ಮದು. (ಪ್ರಸಂ. 12:13) ಅದರರ್ಥ, ದೇವರು ನಮ್ಮಿಂದ ಏನು ಬಯಸುತ್ತಾನೋ ಅದನ್ನು ಮಾಡುವ ರೀತಿಯಲ್ಲಿ ನಮ್ಮನ್ನು ರೂಪಿಸಲಾಗಿದೆ. ನಾವು ಆತನ ಸೇವೆ ಮಾಡಬೇಕೆಂದು ದೇವರು ಬಯಸುತ್ತಾನೆ. ಇದನ್ನು ಮಾಡುವಾಗ ನಮ್ಮ ಆನಂದ ಖಂಡಿತ ಹೆಚ್ಚಾಗುತ್ತದೆ. *

ಆನಂದವಾಗಿರುವುದರಿಂದ ಸಿಗುವ ಪ್ರಯೋಜನಗಳು

ಆನಂದ ಹೆಚ್ಚಾದಂತೆ ಇತರ ಪ್ರಯೋಜನಗಳೂ ನಮಗೆ ಸಿಗುತ್ತವೆ. ಉದಾಹರಣೆಗೆ, ಸಮಸ್ಯೆಗಳಿದ್ದರೂ ಆನಂದದಿಂದ ಯೆಹೋವನ ಸೇವೆ ಮಾಡುತ್ತಾ ಇರುವಾಗ ಆತನಿಗೆ ತುಂಬ ಸಂತೋಷವಾಗುತ್ತದೆ. (ಧರ್ಮೋ. 16:15; 1 ಥೆಸ. 5:16-18) ಅಷ್ಟೇ ಅಲ್ಲ, ನಮ್ಮ ಜೀವನದಲ್ಲಿ ನಿಜವಾದ ಆನಂದ ಇರುವುದಾದರೆ ಹಣ-ಐಶ್ವರ್ಯಕ್ಕಾಗಿ ನಾವು ಹಾತೊರೆಯುವುದಿಲ್ಲ. ಬದಲಿಗೆ ದೇವರ ರಾಜ್ಯಕ್ಕೋಸ್ಕರ ದೊಡ್ಡ ತ್ಯಾಗಗಳನ್ನೂ ಮಾಡುತ್ತೇವೆ. (ಮತ್ತಾ. 13:44) ಹೀಗೆ ಯೆಹೋವನ ಸೇವೆಯನ್ನು ಹೆಚ್ಚು ಮಾಡುವಾಗ ಸಿಗುವ ಒಳ್ಳೇ ಫಲಿತಾಂಶಗಳನ್ನು ನೋಡಿ ಆನಂದ ಇನ್ನೂ ಹೆಚ್ಚಾಗುತ್ತದೆ. ನಮ್ಮ ಬಗ್ಗೆನೇ ನಮಗೆ ಹೆಮ್ಮೆ ಅನಿಸುತ್ತದೆ ಮತ್ತು ಬೇರೆಯವರನ್ನೂ ಸಂತೋಷಪಡಿಸುತ್ತೇವೆ.—ಅ. ಕಾ. 20:35; ಫಿಲಿ. 1:3-5.

ನಾವು ಹೆಚ್ಚು ಆನಂದವಾಗಿದ್ದರೆ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಬೈಬಲ್‌ ಹೇಳುವುದು: “ಹರ್ಷಹೃದಯವು ಒಳ್ಳೇ ಔಷಧ.” (ಜ್ಞಾನೋ. 17:22) ಬೈಬಲಿನ ಈ ಮಾತು ಸತ್ಯ ಎಂದು ಅಮೆರಿಕದ ನೆಬ್ರಾಸ್ಕ ವಿಶ್ವವಿದ್ಯಾಲಯದಲ್ಲಿ ಆರೋಗ್ಯದ ಬಗ್ಗೆ ಅಧ್ಯಯನ ಮಾಡಿರುವ ಒಬ್ಬ ಸಂಶೋಧಕರ ಹೇಳಿಕೆ ಸಾಬೀತು ಮಾಡುತ್ತದೆ. ಅವರು ಹೇಳುವುದು: “ಜೀವನದಲ್ಲಿ ನೀವು ಈಗ ಸಂತೋಷ, ಸಂತೃಪ್ತಿಯಿಂದ ಇದ್ದರೆ ಮುಂದೆ ನಿಮ್ಮ ಆರೋಗ್ಯ ಚೆನ್ನಾಗಿರುವ ಸಾಧ್ಯತೆ ಹೆಚ್ಚು.”

ನಾವು ತುಂಬ ಒತ್ತಡವಿರುವ ಸಮಯದಲ್ಲಿ ಜೀವಿಸುತ್ತಿದ್ದರೂ ಪ್ರಾರ್ಥನೆ ಮಾಡುವುದರಿಂದ, ದೇವರ ವಾಕ್ಯದ ಅಧ್ಯಯನ ಮಾಡಿ ಧ್ಯಾನಿಸುವುದರಿಂದ ಪವಿತ್ರಾತ್ಮ ಪಡಕೊಂಡು ಆನಂದವಾಗಿರಬಹುದು. ಅಷ್ಟೇ ಅಲ್ಲ, ಯೆಹೋವನು ಇಂದು ನಮಗೆ ಕೊಟ್ಟಿರುವ ಅನೇಕ ಒಳ್ಳೇ ವಿಷಯಗಳ ಬಗ್ಗೆ ಯೋಚಿಸುವುದರಿಂದ, ನಂಬಿಕೆ ತೋರಿಸಿರುವವರ ಮಾದರಿಯನ್ನು ಅನುಕರಿಸುವುದರಿಂದ ಮತ್ತು ದೇವರ ಚಿತ್ತ ಮಾಡುವುದರಿಂದ ಹೆಚ್ಚು ಆನಂದವಾಗಿರುತ್ತೇವೆ. ಆಗ ಕೀರ್ತನೆ 64:10​ರಲ್ಲಿ ಹೇಳಿರುವುದನ್ನು ನಾವು ಸ್ವತಃ ಅನುಭವಿಸಬಹುದು. ಆ ವಚನ ಹೇಳುವುದು: “ಸದ್ಭಕ್ತರು ಯೆಹೋವನಲ್ಲಿ ಆನಂದಪಟ್ಟು ಆತನನ್ನೇ ಆಶ್ರಯಿಸಿಕೊಳ್ಳುವರು.”

^ ಪ್ಯಾರ. 10 ‘ಪವಿತ್ರಾತ್ಮದಿಂದ ಉಂಟಾಗುವ ಫಲದ’ ಅಂಶವಾದ ತಾಳ್ಮೆಯ ಬಗ್ಗೆ ಈ ಸರಣಿಯ ಇನ್ನೊಂದು ಲೇಖನದಲ್ಲಿ ಚರ್ಚಿಸಲಿದ್ದೇವೆ.