ಜ್ಞಾನೋಕ್ತಿ 17:1-28

  • ಉಪಕಾರಕ್ಕೆ ಅಪಕಾರ ಮಾಡಬೇಡ (13)

  • ಜಗಳ ಜಾಸ್ತಿ ಆಗೋ ಮುಂಚೆನೇ ಅಲ್ಲಿಂದ ಹೋಗಿಬಿಡು (14)

  • ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ (17)

  • “ಹರ್ಷಹೃದಯ ಒಳ್ಳೇ ಮದ್ದು” (22)

  • ಜ್ಞಾನ ಇರೋ ವ್ಯಕ್ತಿ ತನ್ನ ನಾಲಿಗೆಗೆ ಕಡಿವಾಣ ಹಾಕ್ತಾನೆ (27)

17  ಜಗಳ ಇರೋ ಮನೇಲಿ ಭಾರಿ ಭೋಜನ* ಮಾಡೋದಕ್ಕಿಂತ,+ನೆಮ್ಮದಿ ಇರೋ ಮನೇಲಿ ಒಣ ರೊಟ್ಟಿ ತಿನ್ನೋದೇ ಒಳ್ಳೇದು.+   ಯಜಮಾನನ ಮಗ ಮೂರ್ಖನ ತರ ನಡ್ಕೊಂಡ್ರೆ, ತಿಳುವಳಿಕೆ* ಇರೋ ಸೇವಕ ಅವನ ಮೇಲೆ ಆಳ್ವಿಕೆ ಮಾಡ್ತಾನೆ. ಯಜಮಾನನ ಮಕ್ಕಳಿಗೆ ಆಸ್ತಿ ಸಿಗೋ ಹಾಗೆ ಆ ಸೇವಕನಿಗೂ ಆಸ್ತಿ ಸಿಗುತ್ತೆ.   ಬೆಳ್ಳಿಬಂಗಾರವನ್ನ ಬೆಂಕಿಯಲ್ಲಿ ಹಾಕಿ ಶುದ್ಧ ಮಾಡೋ ತರ,+ಪ್ರತಿಯೊಬ್ಬನ ಹೃದಯದಲ್ಲಿ ಏನಿದೆ ಅಂತ ಯೆಹೋವ ಪರೀಕ್ಷಿಸ್ತಾನೆ.+   ಕೆಟ್ಟವನು ಹಾನಿಕರ ಮಾತಿಗೆ ಗಮನಕೊಡ್ತಾನೆ,ವಂಚಕ ದ್ವೇಷದ ಮಾತಿಗೆ ಕಿವಿಗೊಡ್ತಾನೆ.+   ಬಡವನನ್ನ ನೋಡಿ ಗೇಲಿ ಮಾಡುವವನು ಅವನ ಸೃಷ್ಟಿಕರ್ತನನ್ನೇ* ಅವಮಾನ ಮಾಡ್ತಾನೆ,+ಇನ್ನೊಬ್ಬನ ಕಷ್ಟ ನೋಡಿ ಖುಷಿ ಪಡುವವನಿಗೆ ಶಿಕ್ಷೆ ತಪ್ಪಿದ್ದಲ್ಲ.+   ವೃದ್ಧರಿಗೆ ಮೊಮ್ಮಕ್ಕಳು ಕಿರೀಟ,ಮಕ್ಕಳಿಗೆ ಅಪ್ಪನಿಂದಾಗಿ* ಕೀರ್ತಿ.   ಮೂರ್ಖನ ಬಾಯಲ್ಲಿ ನೀತಿಯ ಮಾತುಗಳು ಬರೋದು ಸರಿಯಲ್ಲ ಅಂದ್ಮೇಲೆ,+ಅಧಿಕಾರಿ ಬಾಯಲ್ಲಿ ಸುಳ್ಳು ಬರೋದು ಸರಿನಾ?+   ಉಡುಗೊರೆ ಪಡ್ಕೊಂಡಿರೋ ಯಜಮಾನನಿಗೆ ಅಮೂಲ್ಯ ರತ್ನ* ಸಿಕ್ಕಿದ ಹಾಗೆ,+ಅವನು ಏನೇ ಮಾಡಿದ್ರೂ ಅವನಿಗೆ ಯಶಸ್ಸು ಸಿಗುತ್ತೆ.+   ತಪ್ಪನ್ನ ಕ್ಷಮಿಸುವವನು* ಪ್ರೀತಿ ಬೇಕಂತ ಆಸೆಪಡ್ತಾನೆ,+ಆದ್ರೆ ಆ ತಪ್ಪು ಬಗ್ಗೆ ಎತ್ತಿ ಆಡುವವನು ಪ್ರಾಣ ಸ್ನೇಹಿತರನ್ನ ದೂರ ಮಾಡ್ತಾನೆ.+ 10  ಮೂರ್ಖನಿಗೆ ನೂರು ಸಲ ಹೊಡಿಯೋದಕ್ಕಿಂತ,+ಅರ್ಥ ಮಾಡ್ಕೊಳ್ಳೋನನ್ನ ಒಂದು ಸಲ ಗದರಿಸಿದ್ರೆ ಸಾಕು.+ 11  ಕೆಟ್ಟವನಿಗೆ ದಂಗೆ ಏಳೋದ್ರ ಬಗ್ಗೆನೇ ಯೋಚ್ನೆ,ಆದ್ರೆ ಕ್ರೂರ ಸಂದೇಶವಾಹಕ ಬಂದು ಅವನಿಗೆ ಶಿಕ್ಷೆ ಕೊಡ್ತಾನೆ.+ 12  ಮೂರ್ಖತನದಲ್ಲಿ ಮುಳುಗಿರೋ ಮೂರ್ಖನನ್ನ ವಿರೋಧಿಸೋದಕ್ಕಿಂತ,ಮರಿಗಳನ್ನ ಕಳ್ಕೊಂಡಿರೋ ಕರಡಿ ಮುಂದೆ ಹೋಗೋದು ಒಳ್ಳೇದು.+ 13  ಯಾರಾದ್ರೂ ಉಪಕಾರಕ್ಕೆ ಅಪಕಾರ ಮಾಡಿದ್ರೆ,ಕಷ್ಟ ಅವ್ರ ಮನೆ ಬಿಟ್ಟು ಹೋಗಲ್ಲ.+ 14  ಜಗಳಕ್ಕೆ ಬಾಯಿ ತೆರಿಯೋದು ಅಣೆಕಟ್ಟು ಒಡೆದು ನುಗ್ಗೋ ನೀರಿನ ತರ. ಜಗಳ ಜಾಸ್ತಿ ಆಗೋ ಮುಂಚೆನೇ ಅಲ್ಲಿಂದ ಹೋಗಿಬಿಡು.+ 15  ಕೆಟ್ಟವನನ್ನ ನಿರಪರಾಧಿ ಅಂತ ತೀರ್ಪು ಮಾಡುವವನು, ನೀತಿವಂತನನ್ನ ಬೈಯುವವನು+ಇಬ್ರೂ ಯೆಹೋವನಿಗೆ ಇಷ್ಟ ಆಗಲ್ಲ. 16  ಮೂರ್ಖನಿಗೆ ವಿವೇಕ ಪಡಿಯೋಕೆ ಕೈತುಂಬಾ ಹಣ ಇದ್ರೂ,ಅದನ್ನ ಪಡಿಯೋ ಮನಸ್ಸು* ಇಲ್ಲದಿದ್ರೆ ಏನು ಲಾಭ?+ 17  ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ.+ ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.+ 18  ಬುದ್ಧಿಯಿಲ್ಲದ ವ್ಯಕ್ತಿ ಪಕ್ಕದ ಮನೆಯವನ ಮುಂದೆಇನ್ನೊಬ್ಬನಿಗೆ ಜಾಮೀನು ಕೊಡ್ತೀನಿ ಅಂತ ಕೈಕುಲುಕ್ತಾನೆ.+ 19  ಜಗಳವನ್ನ ಪ್ರೀತಿಸುವವನು ಅಪರಾಧವನ್ನ ಪ್ರೀತಿಸ್ತಾನೆ.+ ಯಾವಾಗ್ಲೂ ಕೊಚ್ಕೊಳ್ಳುವವನು ಕಷ್ಟವನ್ನ ಆಮಂತ್ರಿಸ್ತಾನೆ.*+ 20  ಕೆಟ್ಟ ಹೃದಯ ಇರುವವನಿಗೆ ಯಶಸ್ಸು ಸಿಗೋದೇ ಇಲ್ಲ,*+ಒಳಗೊಂದು ಇಟ್ಕೊಂಡು ಹೊರಗೆ ಇನ್ನೊಂದು ಮಾತಾಡುವವನು ನಾಶವಾಗಿ ಹೋಗ್ತಾನೆ. 21  ಮೂರ್ಖನನ್ನ ಹೆತ್ತವನಿಗೆ ದುಃಖ ತಪ್ಪಿದ್ದಲ್ಲ,ದಡ್ಡನ ತಂದೆಗೆ ಸಂತೋಷ ಸಿಗೋದೇ ಇಲ್ಲ.+ 22  ಹರ್ಷಹೃದಯ ಒಳ್ಳೇ ಮದ್ದು,+ಕುಗ್ಗಿದ ಮನಸ್ಸು ಒಬ್ಬನ ಶಕ್ತಿಯನ್ನೆಲ್ಲಾ ಹೀರಿಹಾಕುತ್ತೆ.*+ 23  ನ್ಯಾಯದ ದಾರಿಯನ್ನ ತಿರುಚೋಕೆ,ಕೆಟ್ಟವನು ಗುಟ್ಟಾಗಿ ಲಂಚ ತಿಂತಾನೆ.+ 24  ವಿವೇಚನೆ ಇರೋ ವ್ಯಕ್ತಿ ಮುಂದೆನೇ ವಿವೇಕ ಇರುತ್ತೆ,ಆದ್ರೆ ಮೂರ್ಖನ ಮನಸ್ಸು* ಭೂಮಿಯ ಮೂಲೆಮೂಲೆಗೂ ಅಲೆಯುತ್ತೆ.+ 25  ದಡ್ಡ ತನ್ನ ಅಪ್ಪನಿಗೆ ದುಃಖ ಕೊಡ್ತಾನೆ,ಮೂರ್ಖ ತನ್ನ ಅಮ್ಮನಿಗೆ ನೋವು ತರ್ತಾನೆ.+ 26  ನೀತಿವಂತರಿಗೆ ಶಿಕ್ಷೆ ಕೊಡೋದು* ಒಳ್ಳೇದಲ್ಲ,ದೊಡ್ಡದೊಡ್ಡ ವ್ಯಕ್ತಿಗಳನ್ನ ಹೊಡಿಯೋದು ಸರಿಯಲ್ಲ. 27  ಜ್ಞಾನ ಇರೋ ವ್ಯಕ್ತಿ ತನ್ನ ನಾಲಿಗೆಗೆ ಕಡಿವಾಣ ಹಾಕ್ತಾನೆ,+ವಿವೇಚನೆ ಇರೋ ವ್ಯಕ್ತಿ ಶಾಂತವಾಗಿ ಇರ್ತಾನೆ.+ 28  ಮೌನವಾಗಿದ್ರೆ ಮೂರ್ಖನನ್ನ ಸಹ ವಿವೇಕಿ ಅಂದ್ಕೊಳ್ತಾರೆ,ಬಾಯಿಗೆ ಬೀಗ ಹಾಕೊಂಡಿದ್ರೆ ತಿಳುವಳಿಕೆ ಇಲ್ಲದವನನ್ನ ಸಹ ವಿವೇಚನೆ ಇರುವವನು ಅಂತ ನೆನಸ್ತಾರೆ.

ಪಾದಟಿಪ್ಪಣಿ

ಅಕ್ಷ. “ಬಲಿಗಳು.”
ಅಕ್ಷ. “ಒಳನೋಟ.”
ಅಥವಾ “ರಚಕನನ್ನೇ.”
ಅಥವಾ “ಹೆತ್ತವರಿಂದಾಗಿ.”
ಅಥವಾ “ಅನುಗ್ರಹ.”
ಅಕ್ಷ. “ಮುಚ್ಚುವವನು.”
ಅಕ್ಷ. “ಹೃದಯ.”
ಅಥವಾ “ಹೆಬ್ಬಾಗಿಲನ್ನ ಕಟ್ಟುವವನು ಕಷ್ಟವನ್ನ ಆಮಂತ್ರಿಸ್ತಾನೆ.”
ಅಕ್ಷ. “ಭ್ರಷ್ಟನಾಗಿರುವವನಿಗೆ ಒಳ್ಳೇದಾಗಲ್ಲ.”
ಅಥವಾ “ಮೂಳೆಗಳನ್ನ ಬತ್ತಿಸಿಬಿಡುತ್ತೆ.”
ಅಕ್ಷ. “ಕಣ್ಣುಗಳು.”
ಅಥವಾ “ನೀತಿವಂತರಿಗೆ ದಂಡ ಹಾಕೋದು.”