ಫಿಲಿಪ್ಪಿಯವರಿಗೆ ಬರೆದ ಪತ್ರ 4:1-23

  • ಒಗ್ಗಟ್ಟು, ಸಂತೋಷ, ಸರಿಯಾದ ಯೋಚ್ನೆ (1-9)

    • ಯಾವುದ್ರ ಬಗ್ಗೆನೂ ಚಿಂತೆ ಮಾಡಬೇಡಿ (6, 7)

  • ಫಿಲಿಪ್ಪಿಯವ್ರ ಉಡುಗೊರೆಗಾಗಿ ಧನ್ಯವಾದ (10-20)

  • ಕೊನೆಯಲ್ಲಿ ವಂದನೆ (21-23)

4  ನನ್ನ ಪ್ರೀತಿಯ ಸಹೋದರರೇ, ನಿಮ್ಮನ್ನ ನೋಡೋಕೆ ತುಂಬ ಆಸೆ ಆಗ್ತಿದೆ. ನೀವೇ ನನ್ನ ಸಂತೋಷ, ನನ್ನ ಕಿರೀಟ.+ ಆಪ್ತರೇ, ನಾನು ಹೇಳಿದ ಹಾಗೆ ಒಡೆಯನಿಗೆ ನಂಬಿಗಸ್ತರಾಗಿರಿ.+  ಒಡೆಯನ ಸೇವೆ ಮಾಡ್ತಿರೋ ಯುವೊದ್ಯಳಿಗೆ ಮತ್ತು ಸಂತುಕೆಗೆ ಮನಸ್ತಾಪ ಬಗೆಹರಿಸ್ಕೊಳ್ಳೋಕೆ* ಪ್ರೋತ್ಸಾಹಿಸ್ತೀನಿ.+  ಅವ್ರಿಬ್ರಿಗೆ ಸಹಾಯ ಮಾಡ್ತಾ ಇರು ಅಂತ ನಂಬಿಗಸ್ತ ಜೊತೆ ಕೆಲಸಗಾರನಾದ ನಿನ್ನನ್ನೂ ನಾನು ಕೇಳ್ಕೊಳ್ತೀನಿ. ಯಾಕಂದ್ರೆ ಸಿಹಿಸುದ್ದಿ ಸಾರೋಕೆ ಅವರು ನನಗೆ, ನನ್ನ ಜೊತೆ ಕೆಲಸಗಾರರಿಗೆ ಮತ್ತು ಕ್ಲೆಮೆನ್ಸ್‌ಗೆ ಹೆಗಲಿಗೆ ಹೆಗಲು ಕೊಟ್ಟು* ಕೆಲಸ ಮಾಡಿದ್ರು. ಇವ್ರೆಲ್ಲರ ಹೆಸ್ರು ಜೀವದ ಪುಸ್ತಕದಲ್ಲಿದೆ.+  ಒಡೆಯನಿಂದಾಗಿ ಯಾವಾಗ್ಲೂ ಖುಷಿಯಾಗಿರಿ. ಮತ್ತೆ ಹೇಳ್ತೀನಿ ಖುಷಿಯಾಗಿರಿ!+  ‘ನಾನು ಹೇಳಿದ್ದೇ ಆಗಬೇಕು’* ಅನ್ನೋ ಗುಣ+ ನಿಮ್ಮಲ್ಲಿಲ್ಲ ಅಂತ ಎಲ್ರಿಗೂ ಗೊತ್ತಾಗ್ಲಿ. ಒಡೆಯ ಹತ್ರ ಇದ್ದಾನೆ ಅಂತ ನೆನಪಿಡಿ.  ಯಾವುದ್ರ ಬಗ್ಗೆನೂ ಚಿಂತೆ ಮಾಡಬೇಡಿ.+ ಅದ್ರ ಬದ್ಲು ಯಾವಾಗ್ಲೂ ದೇವರಿಗೆ ಪ್ರಾರ್ಥಿಸಿ. ಪ್ರತಿಯೊಂದು ವಿಷ್ಯದಲ್ಲೂ ಮಾರ್ಗದರ್ಶನೆಗಾಗಿ ಕೇಳ್ಕೊಳ್ಳಿ, ಅಂಗಲಾಚಿ ಬೇಡಿ, ಯಾವಾಗ್ಲೂ ಆತನಿಗೆ ಧನ್ಯವಾದ ಹೇಳಿ.+  ಆಗ ನಿಮ್ಮ ತಿಳುವಳಿಕೆಗೂ ಮೀರಿದ ಶಾಂತಿಯನ್ನ+ ದೇವರು ನಿಮಗೆ ಕೊಡ್ತಾನೆ. ಈ ರೀತಿ ಆತನು ಕ್ರಿಸ್ತ ಯೇಸುವಿನ ಮೂಲಕ ನಿಮ್ಮ ಹೃದಯನ,+ ಯೋಚ್ನೆನ* ಕಾಯ್ತಾನೆ.  ಕೊನೇದಾಗಿ ಸಹೋದರರೇ, ಯಾವುದು ಸತ್ಯಾನೋ, ತುಂಬ ಮುಖ್ಯನೋ, ನೀತಿನೋ, ಶುದ್ಧನೋ,* ಯಾವುದು ಒಳ್ಳೇದೋ,* ಪ್ರೀತಿನ ಚಿಗುರಿಸುತ್ತೋ, ಹೊಗಳಿಕೆಗೆ ಯೋಗ್ಯವಾಗಿದ್ಯೋ ಅಂಥ ಎಲ್ಲ ವಿಷ್ಯಗಳಿಗೆ ಯಾವಾಗ್ಲೂ ಗಮನಕೊಡಿ.*+  ನೀವು ನನ್ನಿಂದ ಕಲಿತು ಒಪ್ಕೊಂಡ, ಕೇಳಿಸ್ಕೊಂಡ ಮತ್ತು ನನ್ನಲ್ಲಿ ನೋಡಿದ ವಿಷ್ಯವನ್ನ ಮಾಡ್ತಾ ಇರಿ.+ ಆಗ ಶಾಂತಿಯ ದೇವರು ನಿಮ್ಮ ಜೊತೆ ಇರ್ತಾನೆ. 10  ನನ್ನ ಮೇಲೆ ನಿಮಗೆಷ್ಟು ಅಕ್ಕರೆ ಇದೆ ಅಂತ ನೀವು ಮತ್ತೆ ತೋರಿಸಿದ್ದಿಕ್ಕೆ ತುಂಬ ಖುಷಿ ಆಗ್ತಿದೆ.+ ಅದಕ್ಕಾಗಿ ಒಡೆಯನಿಗೆ ಧನ್ಯವಾದ ಹೇಳ್ತೀನಿ. ಅಂಥ ಅಕ್ಕರೆ ನಿಮಗೆ ಯಾವಾಗ್ಲೂ ಇದ್ರೂ ಅದನ್ನ ತೋರಿಸೋ ಅವಕಾಶ ನಿಮಗೆ ಸಿಕ್ಕಿರಲಿಲ್ಲ. 11  ನಾನು ಕಷ್ಟದಲ್ಲಿ ಇದ್ದೀನಿ ಅಂತ ಈ ಮಾತು ಹೇಳ್ತಿಲ್ಲ. ಯಾಕಂದ್ರೆ ಎಲ್ಲ ಸನ್ನಿವೇಶದಲ್ಲೂ ತೃಪ್ತಿಯಿಂದ ಇರೋದು ಹೇಗಂತ ಕಲಿತಿದ್ದೀನಿ.+ 12  ಸ್ವಲ್ಪಾನೇ ಇರಲಿ+ ಜಾಸ್ತಿನೇ ಇರಲಿ ಖುಷಿಯಾಗಿ ಇರೋದು ಹೇಗಂತ ನಂಗೊತ್ತು. ಜೀವನದಲ್ಲಿ ಏನೇ ಆದ್ರೂ ಹೊಟ್ಟೆಗೆ ಇರಲಿ ಇಲ್ಲದಿರಲಿ, ಬೇಕಾದಷ್ಟು ಇರಲಿ ಇಲ್ಲದಿರಲಿ ತೃಪ್ತಿಯಿಂದ ಇರೋದು ಹೇಗೆ ಅನ್ನೋ ಗುಟ್ಟು ನಂಗೊತ್ತು. 13  ದೇವರಿಂದಾನೇ ನನಗೆ ಎಲ್ಲ ಮಾಡೋಕೆ ಆಗ್ತಿದೆ. ಯಾಕಂದ್ರೆ ನನಗೆ ಬೇಕಾದ ಶಕ್ತಿ ಕೊಡೋದು ಆತನೇ.+ 14  ಆದ್ರೂ ನಾನು ಕಷ್ಟದಲ್ಲಿ ಇರುವಾಗ ನೀವು ಸಹಾಯ ಮಾಡಿದ್ದಕ್ಕಾಗಿ ನಿಮಗೆ ಋಣಿ. 15  ಹೇಳಬೇಕಂದ್ರೆ ಫಿಲಿಪ್ಪಿಯವರೇ, ನೀವು ಮೊದಮೊದ್ಲು ಸಿಹಿಸುದ್ದಿ ತಿಳ್ಕೊಂಡ ಮೇಲೆ ಮತ್ತು ನಾನು ಮಕೆದೋನ್ಯ ಬಿಟ್ಟು ಹೋಗೋದಕ್ಕಿಂತ ಮುಂಚೆ ನನಗೆ ಸಹಾಯ ಮಾಡಿದ್ದು ನಿಮ್ಮ ಸಭೆ ಮಾತ್ರ ಅಂತ ನಿಮಗೆ ಗೊತ್ತಿದೆ. ಬೇರೆ ಯಾರೂ ನನಗೆ ಸಹಾಯ ಮಾಡ್ಲೂ ಇಲ್ಲ, ನನ್ನಿಂದ ಸಹಾಯ ಪಡ್ಕೊಳ್ಳಲೂ ಇಲ್ಲ.+ 16  ನಾನು ಥೆಸಲೊನೀಕದಲ್ಲಿ ಇದ್ದಾಗ ನನಗೆ ಬೇಕಾದ ವಸ್ತುಗಳನ್ನ ನೀವು ಕೊಟ್ಟು ಕಳಿಸಿದ್ರಿ. ಒಂದು ಸಲ ಅಲ್ಲ ಎರಡು ಸಲ ಕಳಿಸಿದ್ರಿ. 17  ನಾನು ನಿಮ್ಮಿಂದ ಯಾವ ಉಡುಗೊರೆಯನ್ನೂ ಎದುರು ನೋಡ್ತಿಲ್ಲ. ಕೊಡೋದ್ರಿಂದ ಸಿಗೋ ಆಶೀರ್ವಾದವನ್ನ ನೀವು ಪಡಿಬೇಕು ಅನ್ನೋದೇ ನನ್ನಾಸೆ. 18  ನನಗೆ ಬೇಕಾಗಿರೋದೆಲ್ಲ ನನ್ನ ಹತ್ರ ಇದೆ, ಜಾಸ್ತಿನೇ ಇದೆ. ಎಪಫ್ರೊದೀತನ+ ಕೈಯಲ್ಲಿ ನೀವು ಕಳಿಸಿ ಕೊಟ್ಟಿದ್ದೆಲ್ಲ ನನಗೆ ಸಿಕ್ಕಿದ್ರಿಂದ ಇನ್ನೂ ತೃಪ್ತಿಯಾಗಿ ಇದ್ದೀನಿ. ಈ ಉಡುಗೊರೆ ದೇವರನ್ನ ಖುಷಿಪಡಿಸೋ ಪರಿಮಳದ ತರ,+ ಬಲಿ ತರ ಇದೆ. 19  ನೀವು ಮಾಡಿದ ಈ ಸಹಾಯಕ್ಕೆ ದೇವರು ಪ್ರತಿಫಲವಾಗಿ ತನ್ನ ಮಹಿಮೆಯಿಂದ ತುಂಬಿರೋ ಐಶ್ವರ್ಯವನ್ನ ಕ್ರಿಸ್ತ ಯೇಸು ಮೂಲಕ ನಿಮಗೆ ಕೊಟ್ಟು ನಿಮ್ಮ ಎಲ್ಲ ಅಗತ್ಯಗಳನ್ನ ಪೂರೈಸ್ತಾನೆ.+ 20  ನಮ್ಮ ದೇವರೂ ತಂದೆಯೂ ಆಗಿರೋ ಆತನಿಗೆ ಯಾವಾಗ್ಲೂ ಮಹಿಮೆ ಸಲ್ಲಲಿ. ಆಮೆನ್‌. 21  ಕ್ರಿಸ್ತ ಯೇಸುವಿನ ಜೊತೆ ಒಂದಾಗಿರೋ ಎಲ್ಲ ಪವಿತ್ರ ಜನ್ರಿಗೆ ನನ್ನ ವಂದನೆ ಹೇಳಿ. ನನ್ನ ಜೊತೆ ಇರೋ ಸಹೋದರರು ನಿಮಗೆ ವಂದನೆ ಹೇಳಿದ್ದಾರೆ. 22  ಪವಿತ್ರ ಜನ್ರೆಲ್ಲ, ವಿಶೇಷವಾಗಿ ರಾಜನ ಮನೆಯವರು+ ನಿಮಗೆ ವಂದನೆ ಹೇಳಿದ್ದಾರೆ. 23  ನಿಮಗೆ ಒಳ್ಳೇ ಮನೋಭಾವ ಇರೋದ್ರಿಂದ ಪ್ರಭು ಯೇಸು ಕ್ರಿಸ್ತ ಅಪಾರ ಕೃಪೆ ತೋರಿಸ್ಲಿ.

ಪಾದಟಿಪ್ಪಣಿ

ಅಕ್ಷ. “ಒಂದೇ ಮನಸ್ಸು ಇರಬೇಕಂತ.”
ಅಥವಾ “ಶ್ರಮಪಟ್ಟು.”
ಅಕ್ಷ. “ಮಣಿಯದೇ ಇರೋ.”
ಅಥವಾ “ಮನಸ್ಸನ್ನ.”
ಅಥವಾ “ನೈತಿಕವಾಗಿ ಶುದ್ಧನೋ.”
ಅಥವಾ “ಒಳ್ಳೇ ಗುಣನೋ.”
ಅಥವಾ “ವಿಷ್ಯಗಳನ್ನ ಯೋಚಿಸಿ; ಧ್ಯಾನಿಸಿ.”