ನಾನು ಡೇಟಿಂಗ್‌ಗೆ ಸಿದ್ಧನೊ?
ಅಧ್ಯಾಯ 29
ನಾನು ಡೇಟಿಂಗ್‌ಗೆ ಸಿದ್ಧನೊ?
ಅನೇಕ ದೇಶಗಳಲ್ಲಿ, ಡೇಟಿಂಗ್ (ವಿಹಾರನಿಶ್ಚಯ) ಅನ್ನು ಪ್ರಣಯಾತ್ಮಕ ಮನೋರಂಜನೆ, ಒಂದು ವಿನೋದದ ಚಟುವಟಿಕೆಯಾಗಿ ವೀಕ್ಷಿಸಲಾಗುತ್ತದೆ. ಹೀಗೆ ಡೇಟಿಂಗ್ ಅನೇಕ ರೀತಿಗಳಲ್ಲಿ ನಡೆಸಲ್ಪಡುತ್ತದೆ. ಕೆಲವರಿಗೆ, ಡೇಟಿಂಗ್ ಒಂದು ಔಪಚಾರಿಕವಾದ, ವ್ಯವಸ್ಥಿತ ಕಾರ್ಯವಾಗಿದೆ. ಅದರಲ್ಲಿ ಪುಷ್ಪಗಳು, ಸೊಗಸಾದ ಊಟ, ಮತ್ತು ಗುಡ್ ನೈಟ್ ಚುಂಬನವು ಸೇರಿರುತ್ತದೆ. ಇತರರಿಗೆ ಡೇಟಿಂಗ್ ಅಂದರೆ, ವಿರುದ್ಧ ಲಿಂಗದವರಲ್ಲಿ ನೀವು ಇಷ್ಟಪಡುವ ಯಾರಾದರೊಬ್ಬರೊಂದಿಗೆ ಜೊತೆಯಾಗಿ ಒಂದಿಷ್ಟು ಸಮಯವನ್ನು ವ್ಯಯಿಸುವುದಾಗಿದೆ. ಸತತವಾಗಿ ಒಟ್ಟಿಗೆ ಇರುವ, ಆದರೂ ‘ಕೇವಲ ಸ್ನೇಹಿತ’ರಾಗಿದ್ದೇವೆಂದು ಪ್ರತಿಪಾದಿಸುವ ಜೊತೆಗಳೂ ಇದ್ದಾರೆ. ಒಳ್ಳೇದು, ನೀವು ಅದನ್ನು ಡೇಟಿಂಗ್, ಜೊತೆಯಾಗಿ ಹೋಗುವುದು, ಅಥವಾ ಕೇವಲ ಪರಸ್ಪರ ನೋಡುವುದು—ಹೇಗಾದರೂ ಹೇಳಿರಿ, ಅದು ಸಾಮಾನ್ಯವಾಗಿ ಒಂದೇ ವಿಷಯವಾಗಿದೆ: ಒಬ್ಬ ಹುಡುಗ ಮತ್ತು ಹುಡುಗಿ ಸಾಂಘಿಕವಾಗಿ, ಅನೇಕ ವೇಳೆ ಮೇಲ್ವಿಚಾರಣೆಯಿಲ್ಲದೆ, ಒಟ್ಟಿಗೆ ಬಹಳಷ್ಟು ಸಮಯವನ್ನು ವ್ಯಯಿಸುವುದು.
ಡೇಟಿಂಗ್ ಬೈಬಲ್ ಸಮಯಗಳಲ್ಲಿನ ಪದ್ಧತಿಯಾಗಿರಲಿಲ್ಲ. ಆದರೂ, ಡೇಟಿಂಗನ್ನು ಬುದ್ಧಿವಂತಿಕೆಯಿಂದ, ಎಚ್ಚರಿಕೆಯಿಂದ, ಮತ್ತು ಗೌರವಾರ್ಹವಾಗಿ ನಡೆಸುವಾಗ, ಇಬ್ಬರು ವ್ಯಕ್ತಿಗಳಿಗೆ ಪರಸ್ಪರರನ್ನು ತಿಳಿದುಕೊಳ್ಳುವ ನ್ಯಾಯಬದ್ಧ ಮಾರ್ಗವು ಅದಾಗಿರುತ್ತದೆ. ಮತ್ತು ಅದು ಆನಂದದಾಯಕವಾಗಿರಬಲ್ಲದು. ಇದು, ನೀವು ಡೇಟಿಂಗ್ ಮಾಡಲೇಬೇಕೆಂಬುದನ್ನು ಅರ್ಥೈಸುತ್ತದೊ?
ಡೇಟಿಂಗ್ ಮಾಡಲು ಒತ್ತಡ
ಡೇಟಿಂಗ್ ಮಾಡಬೇಕೆಂಬ ಒತ್ತಡವು ನಿಮ್ಮ ಮೇಲಿರಬಹುದು. ನಿಮ್ಮ ಸಮವಯಸ್ಕರಲ್ಲಿ ಹೆಚ್ಚಿನವರು ಬಹುಶಃ ಡೇಟಿಂಗ್ ಮಾಡುತ್ತಾರೆ ಮತ್ತು ನೀವು ವಿಚಿತ್ರವಾಗಿ ಇಲ್ಲವೆ ಭಿನ್ನವಾಗಿ ತೋರಲು ಬಯಸದಿರುವುದು ಸ್ವಾಭಾವಿಕವೇ. ಡೇಟಿಂಗ್ ಮಾಡಬೇಕೆಂಬ ಒತ್ತಡವು ಸದುದ್ದೇಶವುಳ್ಳ ಸ್ನೇಹಿತರು ಮತ್ತು ಸಂಬಂಧಿಕರಿಂದಲೂ ಬರಬಹುದು. ಡೇಟಿಂಗ್‌ಗೆ ಬರುವಂತೆ 15 ವರ್ಷ ಪ್ರಾಯದ ಮೇರಿ ಆ್ಯನ್ ಕೇಳಿಕೊಳ್ಳಲ್ಪಟ್ಟಾಗ, ಆಕೆಯ ಸೋದರತ್ತೆಯು ಸಲಹೆನೀಡಿದ್ದು: “ನೀನು ಆ ಹುಡುಗನನ್ನು ವಿವಾಹವಾಗಬಯಸುತ್ತೀಯೊ ಇಲ್ಲವೊ ಎಂಬ ವಿಷಯಕ್ಕೆ ಮತ್ತು ಡೇಟಿಂಗ್‌ಗೆ ಯಾವ ಸಂಬಂಧವೂ ಇರುವುದಿಲ್ಲ. ಡೇಟಿಂಗ್, ವ್ಯಕ್ತಿಯೋಪಾದಿ ನಿನ್ನ ಸ್ವಾಭಾವಿಕ ಬೆಳವಣಿಗೆಯ ಕೇವಲ ಒಂದು ಭಾಗವಾಗಿದೆ. . . . ಎಷ್ಟೆಂದರೂ, ಹುಡುಗರೊಂದಿಗೆ ಹೋಗಲು ನೀನು ಸದಾ ನಿರಾಕರಿಸುವಲ್ಲಿ, ನೀನು ಜನಪ್ರಿಯಳಾಗುವುದಿಲ್ಲ ಮತ್ತು ನಿನ್ನನ್ನು ಯಾರೂ ಡೇಟಿಂಗ್‌ಗೆ ಆಮಂತ್ರಿಸರು.” ಮೇರಿ ಆ್ಯನ್ ಜ್ಞಾಪಿಸಿಕೊಳ್ಳುವುದು: “ಸೋದರತ್ತೆಯ ಮಾತುಗಳು ನನ್ನ ಮನಸ್ಸಿನಾಳಕ್ಕೆ ಮುಟ್ಟಿದವು. ಒಂದು
ಒಳ್ಳೆಯ ಸಂದರ್ಭವನ್ನು ಕೈಬಿಡುವುದಕ್ಕೆ ಸ್ವತಃ ನಾನೇ ಕಾರಣಳಾಗಿರುವೆನೊ? ಹುಡುಗನ ಬಳಿ ಸ್ವಂತ ಕಾರಿತ್ತು, ಬಹಳಷ್ಟು ಹಣವಿತ್ತು ಮತ್ತು ಅವನು ನನ್ನನ್ನು ಬಹಳಷ್ಟು ಸಂತೋಷಪಡಿಸುವನೆಂದು ನನಗೆ ಗೊತ್ತಿತ್ತು. ನಾನು ಅವನೊಂದಿಗೆ ಡೇಟಿಂಗ್‌ಗೆ ಹೋಗಬೇಕೊ ಬೇಡವೊ?”ಕೆಲವು ಯುವ ಜನರಿಗೆ ಒತ್ತಡವು, ಆದರ ಮತ್ತು ಮಮತೆಗಾಗಿರುವ ತಮ್ಮ ಸ್ವಂತ ಬಯಕೆಗಳಿಂದ ಬರುತ್ತದೆ. “ಪ್ರೀತಿಸಲ್ಪಡುವ ಮತ್ತು ಗಣ್ಯಮಾಡಲ್ಪಡುವ ಅಗತ್ಯ ನನಗಿತ್ತು” ಎಂಬುದಾಗಿ 18 ವರ್ಷ ಪ್ರಾಯದ ಆ್ಯನ್ ವಿವರಿಸಿದಳು. “ನನ್ನ ಹೆತ್ತವರೊಂದಿಗೆ ನಾನು ಆಪ್ತಳಾಗಿರದಿದ್ದ ಕಾರಣ, ಆಪ್ತತೆಯನ್ನು ಕಂಡುಕೊಳ್ಳಲು ಮತ್ತು ಯಾರು ನನ್ನನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವರೊ ಅಂಥ ವ್ಯಕ್ತಿಯಲ್ಲಿ ನನ್ನ ಅನಿಸಿಕೆಗಳನ್ನು ಮರೆಮಾಡದೆ ಹೇಳಿಕೊಳ್ಳಲು ನಾನು ನನ್ನ ಬಾಯ್‌ಫ್ರೆಂಡ್‌ನ ಕಡೆಗೆ ತಿರುಗಿದೆ.”
ಹಾಗಿದ್ದರೂ, ಹದಿವಯಸ್ಕರು, ಅವನು ಅಥವಾ ಅವಳು ಡೇಟಿಂಗ್ ಮಾಡಬೇಕೆಂಬ ಒತ್ತಡದ ಕಾರಣ, ಹಾಗೆ ಮಾಡಲು ಆರಂಭಿಸಬಾರದು! ಒಂದು ವಿಷಯವೇನೆಂದರೆ, ಡೇಟಿಂಗ್ ಗಂಭೀರವಾದ ಸಂಗತಿಯಾಗಿದೆ—ವಿವಾಹದ ಸಂಗಾತಿಯನ್ನು ಆರಿಸಿಕೊಳ್ಳುವ ಪ್ರಕ್ರಿಯೆಯ ಒಂದು ಭಾಗವಾಗಿದೆ. ವಿವಾಹವೊ? ಡೇಟಿಂಗ್ ಮಾಡುವ ಹೆಚ್ಚಿನ ಯುವ ಜನರ ಮನಸ್ಸುಗಳಲ್ಲಿ ವಿವಾಹದ ವಿಚಾರವು ಇರುವುದೇ ಇಲ್ಲ. ಆದರೆ, ವಿರುದ್ಧ ಲಿಂಗದ ಇಬ್ಬರು ವ್ಯಕ್ತಿಗಳಿಗೆ ಪರಸ್ಪರರನ್ನು ವಿವಾಹವಾಗುವ ಸಾಧ್ಯತೆಯನ್ನು ಪರೀಕ್ಷಿಸುವುದಕ್ಕಲ್ಲದೆ ಒಟ್ಟಿಗೆ ಬಹಳಷ್ಟು ಸಮಯವನ್ನು ವ್ಯಯಿಸಲಾರಂಭಿಸಲು ಬೇರೆ ಯಾವ ನ್ಯಾಯವಾದ ಕಾರಣವಿರಸಾಧ್ಯವಿದೆ? ಕಟ್ಟಕಡೆಯಲ್ಲಿ, ಬೇರೆ ಯಾವುದೇ ಕಾರಣಕ್ಕಾಗಿ ಡೇಟಿಂಗ್ ಮಾಡುವುದು, “ವಿನೋದ”ದಲ್ಲಿ ಮಾತ್ರ ಫಲಿಸದಿರುವುದು ಸಂಭವನೀಯ. ಹಾಗೇಕೆ?
ಡೇಟಿಂಗ್‌ನ ಕರಾಳಮುಖ
ಒಂದು ವಿಷಯವೇನೆಂದರೆ, ಯಾವುದನ್ನು ಬೈಬಲು “ಯೌವನದ ಪರಿಪಕ್ವ ಸ್ಥಿತಿ” (NW) ಎಂದು ಕರೆಯುತ್ತದೊ, ಯುವ ಜನರು ಜೀವಿತದ ಆ ದುರ್ಬಲ ಅವಧಿಯಲ್ಲಿರುತ್ತಾರೆ. (1 ಕೊರಿಂಥ 7:36) ಈ ಸಮಯದಲ್ಲಿ ನೀವು, ಲೈಂಗಿಕ ಬಯಕೆಯ ಪ್ರಭಾವಶಾಲಿ ತರಂಗಗಳನ್ನು ಅನುಭವಿಸಬಹುದು. ಇದರಲ್ಲಿ ಯಾವ ತಪ್ಪೂ ಇರುವುದಿಲ್ಲ; ಅದು ಬೆಳವಣಿಗೆಯ ಒಂದು ಭಾಗವಾಗಿದೆ.
ಆದರೆ ಹದಿವಯಸ್ಕ ಡೇಟಿಂಗ್‌ನಲ್ಲಿನ ಒಂದು ದೊಡ್ಡ ಸಮಸ್ಯೆಯು ಇರುವುದು ಅಲ್ಲಿಯೇ: ಹದಿವಯಸ್ಕರು ಈ ಲೈಂಗಿಕ ಅನಿಸಿಕೆಗಳನ್ನು ನಿಯಂತ್ರಿಸುವುದು ಹೇಗೆಂದು ಆಗ ತಾನೇ ಕಲಿಯಲು ಆರಂಭಿಸಿದ್ದಾರೆ. ಸಂಭೋಗದ ಕುರಿತಾದ ದೇವರ ನಿಯಮಗಳು ನಿಮಗೆ ಚೆನ್ನಾಗಿ ಗೊತ್ತಿರಬಹುದು ಮತ್ತು ಪರಿಶುದ್ಧರಾಗಿ ಉಳಿಯಲು ನೀವು ಪ್ರಾಮಾಣಿಕವಾಗಿ ಬಯಸಬಹುದು, ನಿಜ. (ಅಧ್ಯಾಯ 23ನ್ನು ನೋಡಿರಿ.) ಹಾಗಿದ್ದರೂ, ಜೀವನದ ಒಂದು ಜೈವಿಕ ವಾಸ್ತವಾಂಶವು ಬೆಳಕಿಗೆ ಬರುತ್ತದೆ: ನೀವು ವಿರುದ್ಧ ಲಿಂಗದ ವ್ಯಕ್ತಿಯೊಂದಿಗೆ ಹೆಚ್ಚಾಗಿ ಸಹವಸಿಸಿದಷ್ಟು—ನೀವು ಅದನ್ನು ಬಯಸಿರಿ ಇಲ್ಲವೆ ಬಯಸದಿರಿ—ಲೈಂಗಿಕ ಬಯಕೆಯು ಅಧಿಕವಾಗಿ ಬೆಳೆಯಬಲ್ಲದು. (ಪುಟಗಳು 232-3ನ್ನು ನೋಡಿರಿ.) ನಾವೆಲ್ಲರೂ
ರಚಿಸಲ್ಪಟ್ಟಿರುವುದು ಆ ವಿಧದಲ್ಲೇ! ನೀವು ಪ್ರಾಯಸ್ಥರಾಗಿ, ನಿಮ್ಮ ಅನಿಸಿಕೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಹೆಚ್ಚು ಸಮರ್ಥರಾಗುವ ವರೆಗೆ, ಡೇಟಿಂಗ್ ಅನ್ನು ನಿಭಾಯಿಸುವುದು ನಿಮಗೆ ತೀರ ಕಷ್ಟಕರವಾಗಿರಬಹುದು. ಅಸಂತೋಷಕರವಾಗಿ ಅನೇಕ ಯುವ ಜನರು ಇದನ್ನು ತಿಳಿದುಕೊಳ್ಳುವಾಗ, ಸಮಯವು ಮೀರಿಹೋಗಿರುತ್ತದೆ.“ನಾವು ಡೇಟಿಂಗ್ ಮಾಡಲಾರಂಭಿಸಿದಾಗ, . . . ನಾವು ಕೈಗಳನ್ನು ಹಿಡಿದುಕೊಳ್ಳುವುದನ್ನಾಗಲಿ, ಚುಂಬಿಸುವುದನ್ನಾಗಲಿ ಮಾಡಲಿಲ್ಲ. ನಾನು ಕೇವಲ ಅವಳ ಸಹವಾಸದ ಸುಖ ಮತ್ತು ಮಾತುಕತೆಯನ್ನು ಅನುಭವಿಸಬಯಸಿದೆ,” ಎಂಬುದಾಗಿ ಒಬ್ಬ ಯುವ ಪುರುಷನು ಹೇಳಿದನು. “ಹಾಗಿದ್ದರೂ, ಅವಳು ಬಹಳ ಸ್ನೇಹಪೂರ್ಣಳಾಗಿದ್ದು, ನನಗೆ ತೀರ ಹತ್ತಿರವಾಗಿ ಕುಳಿತುಕೊಳ್ಳುತ್ತಿದ್ದಳು. ಸಕಾಲದಲ್ಲಿ ನಾವು ಕೈಗಳನ್ನು ಹಿಡಿದುಕೊಂಡೆವು ಮತ್ತು ಚುಂಬಿಸಿದೆವು. ಇದು ನನ್ನಲ್ಲಿ ಇನ್ನೂ ಬಲವಾದ ಲೈಂಗಿಕ ಉದ್ರೇಕವನ್ನು ಸೃಷ್ಟಿಸಿತು. ಅದು ಎಷ್ಟರ ಮಟ್ಟಿಗೆ ನನ್ನ ಆಲೋಚನೆಯನ್ನು ಪ್ರಭಾವಿಸಿತೆಂದರೆ, ನಾನು ಅವಳೊಂದಿಗೆ ಇರಬಯಸಿದ್ದು ಕೇವಲ ಮಾತಾಡಲಿಕ್ಕಾಗಿ ಅಲ್ಲ, ಬದಲಿಗೆ ಅವಳನ್ನು ಹಿಡಿದುಕೊಳ್ಳಲು, ಸ್ಪರ್ಶಿಸಲು ಮತ್ತು ಚುಂಬಿಸಲಿಕ್ಕಾಗಿಯೇ. ನನಗೆ ತೃಪ್ತಿ ಸಿಗಲಿಲ್ಲ! ನಾನು ಅಕ್ಷರಶಃ ಕಾಮೋದ್ರೇಕದಿಂದ ಹುಚ್ಚನಾಗುತ್ತಿದ್ದೆ. ಕೆಲವೊಮ್ಮೆ ನನಗೆ ತುಚ್ಛವಾದ ಅನಿಸಿಕೆ ಹಾಗೂ ನಾಚಿಕೆಯಾಗುತ್ತಿತ್ತು.”
ಹಾಗಾದರೆ, ಡೇಟಿಂಗ್ ಅನೇಕ ವೇಳೆ ಅಕ್ರಮ ಲೈಂಗಿಕ ಸಂಬಂಧಗಳಲ್ಲಿ ಪರಿಣಮಿಸುತ್ತದೆ ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. ಡೇಟಿಂಗ್‌ನಲ್ಲಿ ಸಂಭೋಗವು, “ಸಾಕಷ್ಟು ಪ್ರಾಮುಖ್ಯವಾದದ್ದು ಇಲ್ಲವೆ ಬಹಳ ಪ್ರಾಮುಖ್ಯವಾದದ್ದು” ಎಂಬುದಾಗಿ ಹುಡುಗಿಯರಲ್ಲಿ 87
ಪ್ರತಿಶತ ಹುಡುಗಿಯರಿಗೆ ಮತ್ತು ಹುಡುಗರಲ್ಲಿ 95 ಪ್ರತಿಶತ ಹುಡುಗರಿಗೆ ಅನಿಸಿತೆಂದು, ನೂರಾರು ಹದಿವಯಸ್ಕರ ಒಂದು ಸಮೀಕ್ಷೆಯು ಕಂಡುಕೊಂಡಿತು. ಆದರೆ, ಹುಡುಗಿಯರಲ್ಲಿ 65 ಪ್ರತಿಶತ ಹುಡುಗಿಯರು ಮತ್ತು ಹುಡುಗರಲ್ಲಿ 43 ಪ್ರತಿಶತ ಹುಡುಗರು ಒಪ್ಪಿಕೊಂಡದ್ದೇನೆಂದರೆ, ಕೆಲವೊಮ್ಮೆ ಡೇಟಿಂಗ್‌ನಲ್ಲಿ ತಮಗೆ ಲೈಂಗಿಕ ಸಂಪರ್ಕವನ್ನು ಮಾಡುವ ಮನಸ್ಸಾಗದಿದ್ದರೂ, ತಾವು ಲೈಂಗಿಕ ಸಂಪರ್ಕವನ್ನು ಮಾಡಿದ್ದ ಸಮಯಗಳಿದ್ದವು!ಇಪ್ಪತ್ತು ವರ್ಷ ಪ್ರಾಯದ ಲೊರೆಟ ಜ್ಞಾಪಿಸಿಕೊಳ್ಳುವುದು: “ನಾವು ಪರಸ್ಪರರನ್ನು ಹೆಚ್ಚು ಸಂಧಿಸಿದಷ್ಟು, ಹೆಚ್ಚಾಗಿ ತೊಡಕಿನಲ್ಲಿ ಸಿಕ್ಕಿಕೊಂಡೆವು. ಚುಂಬಿಸುವುದು ಬೇಗನೆ ನೀರಸವಾಯಿತು ಮತ್ತು ನಾವು ದೇಹದ ಗುಪ್ತಾಂಗಗಳನ್ನು ಸ್ಪರ್ಶಿಸಲಾರಂಭಿಸಿದೆವು. ನನಗೆ ಹೇವರಿಕೆಯಾದ ಕಾರಣ, ನಾನು ಉದ್ವಿಗ್ನತೆಯಿಂದ ನುಚ್ಚುನೂರಾದೆ. ಸಕಾಲದಲ್ಲಿ, ಡೇಟಿಂಗ್‌ಗಾಗಿ ನನ್ನೊಂದಿಗಿದ್ದ ವ್ಯಕ್ತಿಯು, ತನ್ನೊಂದಿಗೆ ‘ಲೈಂಗಿಕ ಸಂಭೋಗವನ್ನು’ ಮಾಡುವುದನ್ನೂ ನನ್ನಿಂದ ನಿರೀಕ್ಷಿಸಿದನು . . . ನಾನು ಕಂಗೆಟ್ಟು, ದಿಗ್ಭ್ರಾಂತಳಾದೆ. ‘ಅವನನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ’ ಎಂಬುದನ್ನಷ್ಟೆ ನಾನು ಯೋಚಿಸಸಾಧ್ಯವಿತ್ತು. ನನ್ನ ಪರಿಸ್ಥಿತಿಯು ಶೋಚನೀಯವಾಗಿತ್ತು!”
ಪ್ರತಿಯೊಂದು ಜೋಡಿಯ ಡೇಟಿಂಗ್, ಲೈಂಗಿಕ ಸಂಭೋಗಗಳಲ್ಲಿ ಕೊನೆಗೊಳ್ಳುವುದಿಲ್ಲ ನಿಜ; ಕೆಲವರು ಮಮತೆಯ ತಮ್ಮ ಪ್ರದರ್ಶನಗಳನ್ನು ಲೈಂಗಿಕ ಸಂಭೋಗಗಳ ತುಸು ಮೊದಲೇ ನಿಲ್ಲಿಸುತ್ತಾರೆ. ಆದರೆ ಒಬ್ಬನು ಭಾವನಾತ್ಮಕವಾಗಿ ಉದ್ರೇಕಗೊಂಡು, ಅಂತಹ ಅನಿಸಿಕೆಗಳಿಗೆ ಗೌರವಾರ್ಹವಾದ ಹೊರಮಾರ್ಗವನ್ನು ಕಂಡುಕೊಳ್ಳದಿದ್ದಲ್ಲಿ ಏನು ಪರಿಣಮಿಸುತ್ತದೆ? ನಿಶ್ಚಿತವಾದ ಆಶಾಭಂಗ. ಮತ್ತು ಆ ಆಶಾಭಂಗಗಳು ಲೈಂಗಿಕ ಅನಿಸಿಕೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ.
ಛಿದ್ರವಾದ ಭಾವನೆಗಳು
ಒಬ್ಬ ಯುವ ಪುರುಷನ ಉಭಯ ಸಂಕಟವನ್ನು ಪರಿಗಣಿಸಿರಿ: ‘ಆರಂಭದಲ್ಲಿ ನಾನು ಕ್ಯಾಥಿಯನ್ನು ಬಹಳ ಇಷ್ಟಪಟ್ಟೆ. ಆಕೆ ಸರಿಯಲ್ಲವೆಂದು ನೆನಸಿದ ಕೆಲವೊಂದು ವಿಷಯಗಳನ್ನು ಮಾಡುವಂತೆ ನಾನು ಆಕೆಯನ್ನು ಉತ್ತೇಜಿಸಿದೆನೆಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈಗ ನಾನು ಆಸಕ್ತಿಯನ್ನು ಕಳೆದುಕೊಂಡಿರುವುದರಿಂದ ನನಗೆ ಹೇವರಿಕೆಯಾಗುತ್ತದೆ. ಆಕೆಯ ಅನಿಸಿಕೆಗಳಿಗೆ ನೋವನ್ನುಂಟುಮಾಡದೆ ನಾನು ಕ್ಯಾಥಿಯನ್ನು ಹೇಗೆ ತೊರೆಯಬಲ್ಲೆ?’ ಎಂತಹ ತಬ್ಬಿಬ್ಬುಗೊಳಿಸುವ ಸನ್ನಿವೇಶ! ಮತ್ತು ನೀವು ಕ್ಯಾಥಿಯಾಗಿದ್ದಿದ್ದರೆ, ನಿಮಗೆ ಹೇಗನಿಸುತ್ತಿತ್ತು?
ಹದಿವಯಸ್ಕ ಎದೆಯೊಡೆತವು ಒಂದು ಸಾಮಾನ್ಯ ವ್ಯಾಧಿಯಾಗಿದೆ. ಕೈ ಕೈ ಹಿಡಿದುಕೊಂಡು ನಡೆಯುವ ಒಂದು ಯುವ ಜೋಡಿಯು, ಮನೋಹರವಾದ ಚಿತ್ರವೊಂದನ್ನು
ಪ್ರಸ್ತುತಪಡಿಸುತ್ತದೆ ನಿಜ. ಆದರೆ ಅದೇ ಜೋಡಿಯು ಈ ಸಮಯದಿಂದ ಹಿಡಿದು ಮುಂದಿನ ವರ್ಷದೊಳಗಾಗಿ ಒಬ್ಬರನ್ನೊಬ್ಬರು ವಿವಾಹವಾಗಿರುವುದು ಇರಲಿ, ಇನ್ನೂ ಜೊತೆಯಾಗಿರುವ ಸಂಭವಗಳು ಎಷ್ಟು? ನಿಶ್ಚಯವಾಗಿಯೂ, ತೀರ ಕಡಿಮೆ. ಹೀಗೆ ಹದಿವಯಸ್ಕ ಪ್ರಣಯಗಳು ಬಹುಮಟ್ಟಿಗೆ ಯಾವಾಗಲೂ ನಾಶಕ್ಕೆ ಗುರಿಯಾದ ಸಂಬಂಧಗಳಾಗಿದ್ದು, ವಿರಳವಾಗಿ ವಿವಾಹದಲ್ಲಿ ತುತ್ತತುದಿಗೇರುತ್ತಾ, ಅನೇಕ ವೇಳೆ ಎದೆಯೊಡೆತದಲ್ಲಿ ಕೊನೆಗೊಳ್ಳುತ್ತವೆ.ಎಷ್ಟೆಂದರೂ, ಹದಿವಯಸ್ಕ ವರ್ಷಗಳಲ್ಲಿ ನಿಮ್ಮ ವ್ಯಕ್ತಿತ್ವವು ನಿರಂತರ ಬದಲಾವಣೆಯ ಸ್ಥಿತಿಯಲ್ಲಿರುತ್ತದೆ. ನೀವು ಯಾರಾಗಿದ್ದೀರಿ, ಏನನ್ನು ನಿಜವಾಗಿಯೂ ಇಷ್ಟಪಡುತ್ತೀರಿ, ನಿಮ್ಮ ಜೀವಿತದೊಂದಿಗೆ ಏನನ್ನು ಮಾಡಬಯಸುತ್ತೀರಿ ಎಂಬುದನ್ನು ನೀವು ಕಂಡುಹಿಡಿಯುತ್ತಾ ಇದ್ದೀರಿ. ಇಂದು ನಿಮ್ಮಲ್ಲಿ ಆಸಕ್ತಿಯನ್ನು ಕೆರಳಿಸುವ ವ್ಯಕ್ತಿ ನಾಳೆ ನಿಮಗೆ ಬೇಸರ ಹಿಡಿಸಬಹುದು. ಆದರೆ ಪ್ರಣಯಾತ್ಮಕ ಅನಿಸಿಕೆಗಳು ವೃದ್ಧಿಯಾಗುವಂತೆ ಬಿಡಲ್ಪಟ್ಟಾಗ, ಯಾರಾದರೊಬ್ಬರು ಗಾಯಗೊಳ್ಳುವುದು ಖಂಡಿತ. ಅನೇಕ ಹರೆಯದ ಆತ್ಮಹತ್ಯೆಗಳಿಗೆ ಹೊಣೆಯಾದ ಸನ್ನಿವೇಶಗಳಲ್ಲಿ, “ಗರ್ಲ್‌ಫ್ರೆಂಡ್‌ಳೊಂದಿಗೆ ಜಗಳ” ಇಲ್ಲವೆ “ಭಗ್ನ ಪ್ರೇಮ” ಎಂಬಂತಹ ಸನ್ನಿವೇಶಗಳನ್ನು ಹಲವಾರು ಸಂಶೋಧನಾ ಅಧ್ಯಯನಗಳು ಜೋಡಿಸಿರುವುದು ಆಶ್ಚರ್ಯಕರವಲ್ಲ.
ನಾನು ಸಿದ್ಧನೊ?
ದೇವರು ಯುವ ಜನರಿಗೆ ಹೇಳುವುದು: “ಯೌವನಸ್ಥನೇ, [ಅಥವಾ ಯುವತಿಯೇ] ಪ್ರಾಯದಲ್ಲಿ ಆನಂದಿಸು; ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ; ಮನಸ್ಸಿಗೆ ತಕ್ಕಂತೆಯೂ ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೋ.” ಯುವ ಜನರು “[ತಮ್ಮ] ಮನಸ್ಸಿಗೆ ತಕ್ಕಂತೆ . . . ನಡೆ”ಯುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಆದರೂ, ಬಹಳಷ್ಟು ವಿನೋದವಾಗಿ ತೋರುವ ಆ ‘ಮಾರ್ಗಗಳು’ (NW) ಅನೇಕ ವೇಳೆ ಕರಕರೆ ಮತ್ತು ವಿಪತ್ತನ್ನು ತರುವುದರಲ್ಲಿ ಕೊನೆಗೊಳ್ಳುತ್ತವೆ. ಆದುದರಿಂದ ಮುಂದಿನ ವಚನದಲ್ಲಿ ಬೈಬಲ್ ಉತ್ತೇಜಿಸುವುದು: “ನಿನ್ನ ಹೃದಯದಿಂದ ಕರಕರೆಯನ್ನೂ ದೇಹದಿಂದ ಶ್ರಮೆ [“ವಿಪತ್ತು,” NW]ಯನ್ನೂ ತೊಲಗಿಸು; ಬಾಲ್ಯವೂ ಪ್ರಾಯವೂ ವ್ಯರ್ಥವಷ್ಟೆ.” (ಪ್ರಸಂಗಿ 11:9, 10) “ಕರಕರೆ” ಗಾಢವಾಗಿ ತೊಂದರೆಗೀಡಾಗುವುದಕ್ಕೆ ಇಲ್ಲವೆ ತೀವ್ರವಾಗಿ ಸಂಕಟಪಡುವುದಕ್ಕೆ ಸೂಚಿಸುತ್ತದೆ. “ವಿಪತ್ತು” ವೈಯಕ್ತಿಕ ಆಪತ್ತನ್ನು ಸೂಚಿಸುತ್ತದೆ. ಎರಡೂ ವಿಷಯಗಳು ಜೀವನವನ್ನು ಶೋಚನೀಯಗೊಳಿಸಬಲ್ಲವು.
ಹಾಗಾದರೆ, ಡೇಟಿಂಗ್ ತಾನೇ ಕರಕರೆ ಮತ್ತು ವಿಪತ್ತಿನ ಮೂಲವಾಗಿದೆ ಎಂಬುದನ್ನು
ಇದು ಅರ್ಥೈಸುತ್ತದೊ? ಹಾಗೆ ಅರ್ಥೈಸಬೇಕೆಂದೇನೂ ಇಲ್ಲ. ಆದರೆ ನೀವು ತಪ್ಪಾದ ಕಾರಣಕ್ಕಾಗಿ (‘ವಿನೋದಕ್ಕಾಗಿ’) ಇಲ್ಲವೆ ಅದಕ್ಕೆ ನೀವು ಸಿದ್ಧರಾಗಿರುವ ಮೊದಲೇ ಡೇಟಿಂಗ್ ಮಾಡುವಲ್ಲಿ ಅದು ಕರಕರೆ ಮತ್ತು ವಿಪತ್ತಿನ ಮೂಲವಾಗಿರಸಾಧ್ಯವಿದೆ! ಆದುದರಿಂದ, ಈ ಮುಂದಿನ ಪ್ರಶ್ನೆಗಳು ನಿಮ್ಮ ಸ್ವಂತ ಸನ್ನಿವೇಶವನ್ನು ತೂಗಿನೋಡುವುದರಲ್ಲಿ ಸಹಾಯಕಾರಿಯಾಗಿ ರುಜುವಾಗಬಹುದು.ಡೇಟಿಂಗ್ ನನ್ನ ಭಾವನಾತ್ಮಕ ಬೆಳವಣಿಗೆಗೆ ಸಹಾಯಮಾಡುವುದೊ ಇಲ್ಲವೆ ಅಡ್ಡಿಮಾಡುವುದೊ? ಡೇಟಿಂಗ್ ನಿಮ್ಮನ್ನು ಹುಡುಗ-ಹುಡುಗಿಯ ಸಂಬಂಧಕ್ಕೆ ಮಾತ್ರ ಸೀಮಿತಗೊಳಿಸಬಲ್ಲದು. ಅದರ ಬದಲಿಗೆ ಇತರರೊಂದಿಗಿನ ನಿಮ್ಮ ಸಹವಾಸವನ್ನು ವಿಸ್ತರಿಸುವುದು ನಿಮಗೆ ಪ್ರಯೋಜನವನ್ನು ತರಲಾರದೊ? (2 ಕೊರಿಂಥ 6:12, 13ನ್ನು ಹೋಲಿಸಿರಿ.) ಸೂಸನ್ ಎಂಬ ಯುವ ಸ್ತ್ರೀಯು ಹೇಳುವುದು: “ಸಭೆಯಲ್ಲಿದ್ದ ಹಿರಿಯ ಕ್ರೈಸ್ತ ಸ್ತ್ರೀಯರೊಂದಿಗೆ ನಿಕಟವಾದ ಗೆಳೆತನಗಳನ್ನು ವಿಕಸಿಸಿಕೊಳ್ಳಲು ನಾನು ಕಲಿತೆ. ಅವರಿಗೆ ಒಡನಾಟವು ಬೇಕಿತ್ತು, ಮತ್ತು ನನಗೆ ಅವರ ಸ್ಥಿರವಾಗಿಸುವ ಪ್ರಭಾವದ ಅಗತ್ಯವಿತ್ತು. ಆದುದರಿಂದ, ಕಾಫಿ ಕುಡಿಯಲು ಅವರ ಮನೆಗೆ ನಾನು ಹೋಗುತ್ತಿದ್ದೆ. ನಾವು ಮಾತಾಡುತ್ತಾ, ನಗುತ್ತಾ ಸಮಯ ಕಳೆಯುತ್ತಿದ್ದೆವು. ನಾನು ಅವರೊಂದಿಗೆ ನಿಜವಾದ, ಜೀವಾವಧಿಯ ಗೆಳೆತನಗಳನ್ನು ಮಾಡಿಕೊಂಡೆ.”
ಅನೇಕ ರೀತಿಯ ಸ್ನೇಹಿತರನ್ನು—ವೃದ್ಧರು ಮತ್ತು ಎಳೆಯರು, ಅವಿವಾಹಿತರು ಮತ್ತು ವಿವಾಹಿತರು, ಪುರುಷರು ಮತ್ತು ಸ್ತ್ರೀಯರು—ಪಡೆದಿರುವುದರ ಮೂಲಕ, ಡೇಟಿಂಗ್‌ನ ಸಮಯದಲ್ಲಿನ ಒತ್ತಡಕ್ಕಿಂತ ಅತಿ ಕಡಿಮೆ ಒತ್ತಡದೊಂದಿಗೆ, ವಿರುದ್ಧ ಲಿಂಗದವರನ್ನು ಸೇರಿಸಿ, ಜನರೊಂದಿಗೆ ಸಮಚಿತ್ತರಾಗಿರಲು ನೀವು ಕಲಿಯುತ್ತೀರಿ. ಅಲ್ಲದೆ, ವಿವಾಹಿತ ಜೊತೆಗಳೊಂದಿಗೆ ಸಹವಾಸಿಸುವ ಮೂಲಕ, ವಿವಾಹದ ಹೆಚ್ಚು ವಾಸ್ತವಿಕವಾದ ನೋಟವು ನಿಮಗೆ ಸಿಗುತ್ತದೆ. ತದನಂತರ ಒಬ್ಬ ಒಳ್ಳೆಯ ಸಂಗಾತಿಯನ್ನು ಆರಿಸಿಕೊಳ್ಳಲು ಮತ್ತು ವಿವಾಹದಲ್ಲಿ ನಿಮ್ಮ ಸ್ವಂತ ಪಾತ್ರವನ್ನು ಪೂರೈಸಲು ನೀವು ಉತ್ತಮವಾಗಿ ಸಿದ್ಧರಾಗಿರುವಿರಿ. (ಜ್ಞಾನೋಕ್ತಿ 31:10) ಗೇಲ್ ಎಂಬ ಯುವತಿಯು ತೀರ್ಮಾನಿಸುವುದು: “ವಿವಾಹವಾಗಿ ಸಂಸಾರದಲ್ಲಿ ನಿಲ್ಲಲು ನಾನಿನ್ನೂ ಸಿದ್ಧಳಾಗಿರುವುದಿಲ್ಲ. ನಾನಿನ್ನೂ ನನ್ನನ್ನೇ ತಿಳಿದುಕೊಳ್ಳುತ್ತಿದ್ದೇನೆ, ಮತ್ತು ಸಾಧಿಸಲು ನನಗೆ ಇನ್ನೂ ಅನೇಕ ಆತ್ಮಿಕ ಗುರಿಗಳಿವೆ. ಆದುದರಿಂದ ವಿರುದ್ಧ ಲಿಂಗದ ಯಾವ ವ್ಯಕ್ತಿಯೊಂದಿಗೂ ತೀರ ನಿಕಟವಾಗಿರುವ ಅಗತ್ಯ ನನಗಿಲ್ಲ.”
ನೊಂದ ಅನಿಸಿಕೆಗಳನ್ನು ಉಂಟುಮಾಡಲು ನಾನು ಬಯಸುತ್ತೇನೊ? ವಿವಾಹದ ಪ್ರತೀಕ್ಷೆಯಿಲ್ಲದೆ ಪ್ರಣಯಾತ್ಮಕ ಬಂಧಗಳು ಹೊಸೆಯಲ್ಪಡುವಲ್ಲಿ, ನಿಮ್ಮ ಹಾಗೂ ಇತರ ವ್ಯಕ್ತಿಯ ಅನಿಸಿಕೆಗಳು ನುಚ್ಚುನೂರಾಗಬಲ್ಲವು. ವಿರುದ್ಧ ಲಿಂಗದವರೊಂದಿಗೆ ಅನುಭವವನ್ನು ಪಡೆದುಕೊಳ್ಳಲು, ಯಾರಾದರೊಬ್ಬರ ಮೇಲೆ ಪ್ರಣಯಾತ್ಮಕ ಗಮನವನ್ನು ಹೇರುವುದು ನ್ಯಾಯಸಮ್ಮತವೊ?—ಮತ್ತಾಯ 7:12ನ್ನು ನೋಡಿರಿ.
ಎಫೆಸ 6:1-3) ದೊಡ್ಡವರಾಗುವ ತನಕ ನೀವು ಕಾಯಬೇಕೆಂದು ಬಹುಶಃ ಅವರಿಗೆ ಅನಿಸುತ್ತದೆ.
ನನ್ನ ಹೆತ್ತವರು ಏನು ಹೇಳುತ್ತಾರೆ? ನೀವು ಯಾವ ಅಪಾಯಗಳಿಗೆ ಕುರುಡರಾಗಿರುತ್ತೀರೊ ಅವುಗಳನ್ನು ಹೆತ್ತವರು ಅನೇಕ ವೇಳೆ ಅವಲೋಕಿಸುತ್ತಾರೆ. ಎಷ್ಟೆಂದರೂ, ಅವರೂ ಒಂದು ಕಾಲದಲ್ಲಿ ಯುವ ಜನರಾಗಿದ್ದರು. ವಿರುದ್ಧ ಲಿಂಗದ ಇಬ್ಬರು ಎಳೆಯ ವ್ಯಕ್ತಿಗಳು ಒಟ್ಟಿಗೆ ಬಹಳಷ್ಟು ಸಮಯವನ್ನು ವ್ಯಯಿಸಲು ತೊಡಗುವಾಗ, ಯಾವ ನಿಜವಾದ ಸಮಸ್ಯೆಗಳು ವಿಕಸಿಸಬಲ್ಲವೆಂದು ಅವರಿಗೆ ಗೊತ್ತಿದೆ! ಆದುದರಿಂದ ನಿಮ್ಮ ಡೇಟಿಂಗ್‌ಗೆ ನಿಮ್ಮ ಹೆತ್ತವರು ಅಸಮ್ಮತಿ ಸೂಚಿಸುವಲ್ಲಿ, ಪ್ರತಿಭಟಿಸದಿರಿ. (ಬೈಬಲಿನ ನೈತಿಕತೆಯನ್ನು ಅನುಸರಿಸಲು ನಾನು ಶಕ್ತನಾಗಿರುವೆನೊ? ಒಬ್ಬನು “ಯೌವನದ ಪರಿಪಕ್ವ ಸ್ಥಿತಿಯನ್ನು ದಾಟಿ”ರುವಾಗ, ಅವನು ಲೈಂಗಿಕ ಪ್ರಚೋದನೆಗಳೊಂದಿಗೆ ಉತ್ತಮವಾಗಿ ವ್ಯವಹರಿಸಬಲ್ಲನು—ಆ ಸಮಯದಲ್ಲೂ ಅದು ಸುಲಭವಾಗಿರುವುದಿಲ್ಲ. ಜೀವಿತದ ಈ ಹಂತದಲ್ಲಿ, ವಿರುದ್ಧ ಲಿಂಗದ ಯಾರೊ ಒಬ್ಬರೊಂದಿಗೆ ಒಂದು ನಿಕಟವಾದ ಸಂಬಂಧವನ್ನು ನಿರ್ವಹಿಸಲು ಮತ್ತು ಅದನ್ನು ಪರಿಶುದ್ಧವಾಗಿಡಲು ನೀವು ನಿಜವಾಗಿಯೂ ಸಿದ್ಧರಾಗಿದ್ದೀರೊ?
ಆಸಕ್ತಿಕರವಾಗಿ ಅನೇಕ ಯುವ ಜನರು ಸ್ವತಃ ಈ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದಾರೆ ಮತ್ತು (ಈ ಹಿಂದೆ ಉಲ್ಲೇಖಿಸಲ್ಪಟ್ಟ) ಮೇರಿ ಆ್ಯನಳಂತೆ ತೀರ್ಮಾನಿಸುತ್ತಿದ್ದಾರೆ. ಅವಳು ಹೇಳಿದ್ದು: “ಡೇಟಿಂಗ್‌ನ ಕುರಿತು ನಾನು ಇತರರ ಮನೋಭಾವಗಳಿಂದ ಪ್ರಭಾವಿತಳಾಗದಿರಲು ದೃಢನಿಶ್ಚಯ ಮಾಡಿಕೊಂಡೆ. ನಾನು ಪ್ರಾಯಸ್ಥಳಾಗಿ, ವಿವಾಹವಾಗಲು ಸಿದ್ಧಳಾಗಿರುವ ತನಕ ಮತ್ತು ಒಬ್ಬ ಗಂಡನಲ್ಲಿರಬೇಕೆಂದು ನಾನು ಬಯಸುವ ಗುಣಗಳಿರುವ ವ್ಯಕ್ತಿಯನ್ನು ಕಂಡುಕೊಳ್ಳುವ ತನಕ ಡೇಟಿಂಗ್ ಮಾಡಬಾರದೆಂದು ತೀರ್ಮಾನಿಸಿದೆ.”
ಹೀಗೆ ಡೇಟಿಂಗ್ ಮಾಡುವ ಮೊದಲು ನೀವು ಕೇಳಿಕೊಳ್ಳಬೇಕಾದ ಈ ನಿರ್ಧಾರಕ ಪ್ರಶ್ನೆಯನ್ನು ಮೇರಿ ಆ್ಯನ್ ಎಬ್ಬಿಸುತ್ತಾಳೆ.
ಚರ್ಚೆಗಾಗಿ ಪ್ರಶ್ನೆಗಳು
◻ “ಡೇಟಿಂಗ್” ಎಂಬ ಪದ ನಿಮಗೆ ಯಾವ ಅರ್ಥದಲ್ಲಿದೆ?
◻ ಕೆಲವು ಯುವ ಜನರಿಗೆ ಡೇಟಿಂಗ್ ಮಾಡುವ ಒತ್ತಡವಿರುತ್ತದೆ ಏಕೆ?
◻ “ಯೌವನದ ಪರಿಪಕ್ವ ಸ್ಥಿತಿ”ಯಲ್ಲಿರುವ ಒಬ್ಬರಿಗೆ ಡೇಟಿಂಗ್ ಮಾಡುವುದು ವಿವೇಕಯುತವಾಗಿರುವುದಿಲ್ಲ ಏಕೆ?
◻ ಯೌವನಸ್ಥನೊಬ್ಬನು ಡೇಟಿಂಗ್ ವಿಷಯದಲ್ಲಿ ಹೇಗೆ ‘ವಿಪತ್ತನ್ನು ಹೋಗಲಾಡಿಸ’ಬಲ್ಲನು?
◻ ಒಬ್ಬ ಹುಡುಗ ಮತ್ತು ಹುಡುಗಿಯು ‘ಕೇವಲ ಮಿತ್ರ’ರಾಗಿರುವಾಗ ಏಳಬಲ್ಲ ಕೆಲವು ಸಮಸ್ಯೆಗಳಾವುವು?
◻ ಡೇಟಿಂಗ್ ಮಾಡಲು ನೀವು ಸಿದ್ಧರೊ ಎಂದು ನಿಮಗೆ ಹೇಗೆ ತಿಳಿಯಸಾಧ್ಯವಿದೆ?
[ಪುಟ 231 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಚುಂಬಿಸುವುದು ಬೇಗನೆ ನೀರಸವಾಯಿತು ಮತ್ತು ನಾವು ದೇಹದ ಗುಪ್ತಾಂಗಗಳನ್ನು ಸ್ಪರ್ಶಿಸಲಾರಂಭಿಸಿದೆವು. ನನಗೆ ಹೇವರಿಕೆಯಾದ ಕಾರಣ, ನಾನು ಉದ್ವಿಗ್ನತೆಯಿಂದ ನುಚ್ಚುನೂರಾದೆ. ಡೇಟಿಂಗ್‌ಗಾಗಿ ನನ್ನೊಂದಿಗಿದ್ದ ವ್ಯಕ್ತಿಯು, ತನ್ನೊಂದಿಗೆ ‘ಲೈಂಗಿಕ ಸಂಭೋಗವನ್ನು’ ಮಾಡುವುದನ್ನು ನನ್ನಿಂದ ನಿರೀಕ್ಷಿಸಿದನು”
[ಪುಟ 234 ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ಆಕೆಯ ಅನಿಸಿಕೆಗಳಿಗೆ ನೋವನ್ನುಂಟುಮಾಡದೆ ನಾನು ಕ್ಯಾಥಿಯನ್ನು ಹೇಗೆ ತೊರೆಯಬಲ್ಲೆ?’
[ಪುಟ 232,233ರಲ್ಲಿರುವಚೌಕ]
ಒಬ್ಬ ಹುಡುಗ ಮತ್ತು ಹುಡುಗಿಯು ‘ಕೇವಲ ಮಿತ್ರರಾಗಿರ’ಬಲ್ಲರೊ?
ನಿಷ್ಕಾಮ ಸಂಬಂಧಗಳೆಂದು ಕರೆಯಲ್ಪಡುವ ಸಂಬಂಧಗಳು (ಪುರುಷರ ಮತ್ತು ಸ್ತ್ರೀಯರ ನಡುವಿನ ಸ್ನೇಹಪೂರ್ಣ ಸಂಬಂಧಗಳು, ಇವುಗಳಲ್ಲಿ ಲೈಂಗಿಕ ವಿಷಯವು ಮಧ್ಯೆಪ್ರವೇಶಿಸುವುದಿಲ್ಲ) ಯುವ ಜನರಲ್ಲಿ ಬಹಳ ಜನಪ್ರಿಯವಾಗಿವೆ. 17 ವರ್ಷ ಪ್ರಾಯದ ಗ್ರೆಗರಿ ಪ್ರತಿಪಾದಿಸುವುದು: “ನನಗೆ ಹುಡುಗಿಯರೊಂದಿಗೆ ಮಾತಾಡುವುದು ಹೆಚ್ಚು ಸುಲಭ, ಏಕೆಂದರೆ ಅವರು ಸಾಮಾನ್ಯವಾಗಿ ಹೆಚ್ಚು ಸಹಾನುಭೂತಿಯುಳ್ಳವರೂ ಸೂಕ್ಷ್ಮಸಂವೇದಿಗಳೂ ಆಗಿರುತ್ತಾರೆ.” ಇಂತಹ ಮಿತ್ರತ್ವಗಳು ತಮಗೆ ಹೆಚ್ಚು ಸಂಪೂರ್ಣವಾದ ವ್ಯಕ್ತಿತ್ವವನ್ನು ವಿಕಸಿಸಿಕೊಳ್ಳಲು ಸಹಾಯಮಾಡುತ್ತವೆಂದು ಇತರ ಯುವ ಜನರು ವಾದಿಸುತ್ತಾರೆ.
“ಯೌವನಸ್ತ್ರೀಯರನ್ನು ಪೂರ್ಣಶುದ್ಧಭಾವದಿಂದ ಅಕ್ಕತಂಗಿಯರೆಂದೂ” ಉಪಚರಿಸಬೇಕೆಂದು ಬೈಬಲ್ ಯುವ ಪುರುಷರನ್ನು ಪ್ರೇರಿಸುತ್ತದೆ. (1 ತಿಮೊಥೆಯ 5:2) ಈ ಮೂಲತತ್ವವನ್ನು ಅನ್ವಯಿಸುವ ಮೂಲಕ, ವಿರುದ್ಧ ಲಿಂಗದವರೊಂದಿಗೆ ಖಂಡಿತವಾಗಿಯೂ ಶುದ್ಧ, ಹಿತಕರವಾದ ಮಿತ್ರತ್ವಗಳನ್ನು ಅನುಭವಿಸಲು ಸಾಧ್ಯವಿದೆ. ಉದಾಹರಣೆಗೆ ಅಪೊಸ್ತಲ ಪೌಲನು, ಅನೇಕ ಕ್ರೈಸ್ತ ಸ್ತ್ರೀಯರೊಂದಿಗೆ ಮಿತ್ರತ್ವಗಳನ್ನು ಅನುಭವಿಸಿದ ಅವಿವಾಹಿತ ಪುರುಷನಾಗಿದ್ದನು. (ರೋಮಾಪುರ 16:1, 3, 6, 12ನ್ನು ನೋಡಿರಿ.) ಅವನು, ‘ನನ್ನೊಂದಿಗೆ ಸುವಾರ್ತೆಯಲ್ಲಿ ಒತ್ತಾಗಿ ಪ್ರಯಾಸಪಟ್ಟ’ ಇಬ್ಬರು ‘ಸ್ತ್ರೀಯರ’ ಕುರಿತಾಗಿ ಬರೆದನು. (ಫಿಲಿಪ್ಪಿ 4:3, NW) ಯೇಸು ಕ್ರಿಸ್ತನು ಸಹ ಸ್ತ್ರೀಯರೊಂದಿಗೆ ಸಮತೂಕದ, ಹಿತಕರವಾದ ಸಹವಾಸವನ್ನು ಅನುಭವಿಸಿದನು. ಹಲವಾರು ಸಂದರ್ಭಗಳಲ್ಲಿ, ಅವನು ಮಾರ್ಥ ಮತ್ತು ಮರಿಯಳ ಆತಿಥ್ಯ ಮತ್ತು ಸಂಭಾಷಣೆಯಲ್ಲಿ ಆನಂದಿಸಿದನು.—ಲೂಕ 10:38, 39; ಯೋಹಾನ 11:5.
ಹಾಗಿದ್ದರೂ, ಒಂದು “ನಿಷ್ಕಾಮ” ಮಿತ್ರತ್ವವು ಅನೇಕ ವೇಳೆ ನವಿರಾಗಿ ಮರೆಮಾಚಲ್ಪಟ್ಟ ಪ್ರಣಯ ಅಥವಾ ಕಟ್ಟುಪಾಡಿಲ್ಲದೆ ವಿರುದ್ಧ ಲಿಂಗದ ಯಾರೊ ಒಬ್ಬರಿಂದ ಗಮನವನ್ನು ಪಡೆದುಕೊಳ್ಳುವ ಒಂದು ಮಾರ್ಗಕ್ಕಿಂತ ಸ್ವಲ್ಪ ಹೆಚ್ಚಿನ ವಿಷಯವಾಗಿದೆ. ಮತ್ತು ಅನಿಸಿಕೆಗಳು ಸುಲಭವಾಗಿ ಬದಲಾಗಸಾಧ್ಯವಿರುವುದರಿಂದ, ಎಚ್ಚರಿಕೆಯ ಅಗತ್ಯವಿದೆ. ಡಾ. ಮ್ಯಾರಿಯನ್ ಹಿಲಿಯರ್ಡ್ ಎಚ್ಚರಿಸಿದ್ದು: “ತಾಸಿಗೆ ಸುಮಾರು ಹತ್ತು ಮೈಲುಗಳ ವೇಗದಲ್ಲಿ ಸಂಚರಿಸುತ್ತಿರುವ ಸುಸೂತ್ರವಾದ ಒಡನಾಟವು, ಎಚ್ಚರಿಕೆ ನೀಡದೆ ತಾಸಿಗೆ ನೂರು ಮೈಲುಗಳ ವೇಗದಲ್ಲಿ ಹೋಗುತ್ತಿರುವ ಕುರುಡು ಕಾಮೋದ್ರೇಕಕ್ಕೆ ಬದಲಾಗಬಲ್ಲದು.”
ಹದಿನಾರು ವರ್ಷ ಪ್ರಾಯದ ಮೈಕ್, 14 ವರ್ಷ ಪ್ರಾಯದ ಒಬ್ಬ ಹುಡುಗಿಯೊಂದಿಗೆ “ಮಿತ್ರ”ನಾದಾಗ, ಈ ವಿಷಯವನ್ನು ಕಲಿತುಕೊಂಡನು: “ಇಬ್ಬರು ವ್ಯಕ್ತಿಗಳು ಪರಸ್ಪರರನ್ನು ಪ್ರತ್ಯೇಕವಾಗಿ ಕಾಣುತ್ತಾ ಇರುವಾಗ ಕೇವಲ ಮಿತ್ರರಾಗಿ ಉಳಿಯಲು ಸಾಧ್ಯವಿಲ್ಲ [ಎಂಬುದನ್ನು] ನಾನು ಬೇಗನೆ ಕಂಡುಕೊಂಡೆ. ನಮ್ಮ ಸಂಬಂಧವು ಬೆಳೆಯುತ್ತಾ ಹೋಯಿತು. ಬೇಗನೆ ನಮ್ಮಲ್ಲಿ ಪರಸ್ಪರರಿಗಾಗಿ ವಿಶೇಷ ಅನಿಸಿಕೆಗಳಿದ್ದವು, ಮತ್ತು ಇನ್ನೂ ಇವೆ.” ವಿವಾಹವಾಗಲು ಇಬ್ಬರೂ ಸಾಕಷ್ಟು ಪ್ರಾಯಸ್ಥರಾಗಿರದ ಕಾರಣ, ಆ ಅನಿಸಿಕೆಗಳು ಆಶಾಭಂಗದ ಮೂಲವಾಗಿವೆ.
ತೀರ ಹೆಚ್ಚು ನಿಕಟವಾದ ಸಹವಾಸಕ್ಕೆ ಇನ್ನೂ ದುಃಖಕರವಾದ ಪರಿಣಾಮಗಳಿರಬಲ್ಲವು. ಗೆಳತಿಯೊಬ್ಬಳು ತನ್ನ ಸಮಸ್ಯೆಗಳಲ್ಲಿ ಕೆಲವನ್ನು
ಒಬ್ಬ ಯುವಕನಲ್ಲಿ ಹೇಳಿಕೊಂಡಾಗ, ಅವಳನ್ನು ಸಂತೈಸಲು ಅವನು ಪ್ರಯತ್ನಿಸಿದನು. ಕೊಂಚ ಸಮಯದಲ್ಲೇ ಅವರು ಮುದ್ದಾಡುತ್ತಿದ್ದರು. ಪರಿಣಾಮವು ಏನಾಗಿತ್ತು? ತೊಂದರೆಗೀಡಾದ ಮನಸ್ಸಾಕ್ಷಿಗಳು ಮತ್ತು ಅವರ ನಡುವೆ ಕೆಟ್ಟ ಅನಿಸಿಕೆಗಳೇ. ಇತರರ ವಿಷಯದಲ್ಲಿ ಅದು ಲೈಂಗಿಕ ಸಂಭೋಗಗಳಲ್ಲಿ ಪರಿಣಮಿಸಿವೆ. ಸೈಕಾಲಜಿ ಟುಡೇ ಎಂಬ ಪತ್ರಿಕೆಯಿಂದ ನಡೆಸಲ್ಪಟ್ಟ ಒಂದು ಸಮೀಕ್ಷೆಯು ಪ್ರಕಟಿಸಿದ್ದು: “ಪ್ರತಿವಾದಿಗಳಲ್ಲಿ ಸುಮಾರು ಅರ್ಧದಷ್ಟು (49 ಪ್ರತಿಶತ) ಜನರ ಮಿತ್ರತ್ವವು ಒಂದು ಲೈಂಗಿಕ ಸಂಬಂಧವಾಗಿ ಬದಲಾಗಿದೆ.” ವಾಸ್ತವವಾಗಿ, “ಬಹುಮಟ್ಟಿಗೆ ಮೂರನೆಯ ಒಂದಂಶ (31 ಪ್ರತಿಶತ)ದಷ್ಟು ಜನರು ಕಳೆದ ತಿಂಗಳಿನಲ್ಲಿ ಮಿತ್ರನೊಂದಿಗೆ ಲೈಂಗಿಕ ಸಂಭೋಗವನ್ನು ಮಾಡಿರುವುದಾಗಿ ವರದಿಸಿದರು.”‘ಆದರೆ ನಾನು ನನ್ನ ಮಿತ್ರನ ಕಡೆಗೆ ಆಕರ್ಷಿತಳಾಗಿರುವುದಿಲ್ಲ ಮತ್ತು ಅವನೊಂದಿಗೆ [ಅಥವಾ ಅವಳೊಂದಿಗೆ] ಎಂದಿಗೂ ಪ್ರಣಯಾತ್ಮಕವಾಗಿ ಒಳಗೊಳ್ಳಲಾರೆ.’ ಪ್ರಾಯಶಃ ಒಳಗೊಳ್ಳಲಾರಿರಿ. ಆದರೆ ಭವಿಷ್ಯತ್ತಿನಲ್ಲಿ ನಿಮಗೆ ಹೇಗನಿಸಬಹುದು? ಅಲ್ಲದೆ, “ತನ್ನಲ್ಲೇ [“ಸ್ವಂತ ಹೃದಯದಲ್ಲಿ,” NW] ಭರವಸವಿಡುವವನು ಮೂಢನು.” (ಜ್ಞಾನೋಕ್ತಿ 28:26) ನಮ್ಮ ಹೃದಯಗಳು ಮೋಸಕರ, ವಂಚಕ, ನಮ್ಮ ನಿಜವಾದ ಉದ್ದೇಶಗಳಿಗೆ ನಮ್ಮನ್ನು ಕುರುಡಾಗಿಸುವಂತಹದ್ದಾಗಿರಬಲ್ಲವು. ಮತ್ತು ನಿಮ್ಮ ಕುರಿತು ನಿಮ್ಮ ಮಿತ್ರನಿಗೆ ಹೇಗನಿಸುತ್ತದೆಂದು ನಿಮಗೆ ನಿಜವಾಗಿಯೂ ಗೊತ್ತಿದೆಯೊ?
ತಮ್ಮ ಪುಸ್ತಕವಾದ ಮೈತ್ರಿ ಘಟಕಾಂಶ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ, ಆ್ಯಲನ್ ಲಾಯ್ ಮೆಕಿನಿಸ್ ಸಲಹೆನೀಡುವುದು: “ನಿಮ್ಮ ಮೇಲೆಯೇ ಬಹಳಷ್ಟು ಭರವಸೆಯನ್ನಿಡಬೇಡಿ.” ನಿಮ್ಮ ಸಹವಾಸವನ್ನು ಯೋಗ್ಯವಾಗಿ ಮೇಲ್ವಿಚಾರಿಸಲ್ಪಟ್ಟ ಗುಂಪು ಚಟುವಟಿಕೆಗಳಿಗೆ ಸೀಮಿತಗೊಳಿಸುತ್ತಾ, ಎಚ್ಚರಿಕೆ ವಹಿಸಿರಿ. ಪ್ರೀತಿಯ ಅಯೋಗ್ಯ ಪ್ರದರ್ಶನಗಳನ್ನು ಅಥವಾ ಪ್ರಣಯಾತ್ಮಕ ಪರಿಸ್ಥಿತಿಗಳಲ್ಲಿ ಒಬ್ಬಂಟಿಗರಾಗಿರುವುದನ್ನು ದೂರವಿರಿಸಿರಿ. ತೊಂದರೆಗೊಳಗಾದಾಗ, ವಿರುದ್ಧ ಲಿಂಗದ ಒಬ್ಬ ಯೌವನಸ್ಥನಿಗಿಂತ ಹೆತ್ತವರಲ್ಲಿ ಮತ್ತು ಹಿರಿಯ ವ್ಯಕ್ತಿಗಳಲ್ಲಿ ಅಂತರಂಗವನ್ನು ತೋಡಿಕೊಳ್ಳಿರಿ.
ಮತ್ತು ರಕ್ಷಣೆಗಳ ಹೊರತೂ, ಪ್ರತ್ಯೇಕವಾದ ಪ್ರಣಯಾತ್ಮಕ ಅನಿಸಿಕೆಗಳು ವಿಕಸಿಸುವುದಾದರೆ ಆಗೇನು? “ಸತ್ಯವನ್ನೇ ಆಡಿರಿ,” ಮತ್ತು ನಿಮ್ಮ ನಿಲುವು ಏನೆಂದು ಆ ವ್ಯಕ್ತಿಗೆ ತಿಳಿಯಪಡಿಸಿರಿ. (ಎಫೆಸ 4:25) ಇದು ವಿಷಯಗಳನ್ನು ಸರಿಪಡಿಸದಿದ್ದಲ್ಲಿ, ಅಂತರವನ್ನಿಡುವುದು ಅತ್ಯುತ್ತಮವಾಗಿರುವುದು. “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.” (ಜ್ಞಾನೋಕ್ತಿ 22:3) ಅಥವಾ ಮೈತ್ರಿ ಘಟಕಾಂಶ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವಂತೆ: “ಅವಶ್ಯವಿದ್ದಲ್ಲಿ ಆ ಮಿತ್ರತ್ವದಿಂದ ಹೊರಬನ್ನಿರಿ. ಯಾವಾಗಲಾದರೊಮ್ಮೆ, ನಾವೆಷ್ಟೇ ಪ್ರಯತ್ನಿಸಲಿ, ವಿರುದ್ಧ ಲಿಂಗದವರೊಂದಿಗಿನ ಮಿತ್ರತ್ವವು ನಿಯಂತ್ರಣತಪ್ಪಿ ಹೋಗುತ್ತದೆ ಮತ್ತು ಅದು ಎಲ್ಲಿಗೆ ನಡೆಸುತ್ತಿದೆ ಎಂದು ನಮಗೆ ಗೊತ್ತಿದೆ.” ಆಗ, ಅದು “ಹಿಮ್ಮೆಟ್ಟುವ” ಸಮಯವಾಗಿದೆ.
[ಪುಟ 227 ರಲ್ಲಿರುವ ಚಿತ್ರಗಳು]
ಯುವ ಜನರಿಗೆ ಅನೇಕ ವೇಳೆ ಡೇಟಿಂಗ್ ಮಾಡುವ ಅಥವಾ ಜೊತೆಯಾಗಿ ಹೋಗುವ ಒತ್ತಡವಿರುತ್ತದೆ
[ಪುಟ 228 ರಲ್ಲಿರುವ ಚಿತ್ರಗಳು]
ಡೇಟಿಂಗ್‌ನಲ್ಲಿ ಅನೇಕ ವೇಳೆ ಮಮತೆಯ ಬೇಡವಾದ ಪ್ರದರ್ಶನಗಳನ್ನು ಸಲ್ಲಿಸುವ ಒತ್ತಡ ಯುವ ಜನರಿಗಿರುತ್ತದೆ
[ಪುಟ 229 ರಲ್ಲಿರುವ ಚಿತ್ರಗಳು]
ಒಬ್ಬರು ವಿರುದ್ಧ ಲಿಂಗದವರ ಸಹವಾಸವನ್ನು ಡೇಟಿಂಗ್‌ನ ಒತ್ತಡಗಳಿಂದ ಮುಕ್ತವಾದ ಸಂದರ್ಭಗಳಲ್ಲಿ ಅನುಭವಿಸಸಾಧ್ಯವಿದೆ
[ಪುಟ 230 ರಲ್ಲಿರುವ ಚಿತ್ರಗಳು]
ನಿಷ್ಕಾಮ ಸಂಬಂಧಗಳೆಂದು ಕರೆಯಲ್ಪಡುವ ಸಂಬಂಧಗಳು ಅನೇಕ ವೇಳೆ ಎದೆಯೊಡೆತದಲ್ಲಿ ಕೊನೆಗೊಳ್ಳುತ್ತವೆ