ಲೂಕ 10:1-42

  • ಯೇಸು 70 ಶಿಷ್ಯರನ್ನ ಕಳಿಸಿದನು (1-12)

  • ತಿದ್ಕೊಳ್ಳದೆ ಇರೋ ಜನ್ರ ಗತಿ (13-16)

  • 70 ಶಿಷ್ಯರು ವಾಪಸ್‌ (17-20)

  • ದೇವರು ದೀನ ಜನ್ರನ್ನ ಇಷ್ಟಪಟ್ಟಿದ್ದಕ್ಕೆ ಯೇಸು ಹೊಗಳಿದನು (21-24)

  • ಒಳ್ಳೇ ನೆರೆಯವನ ಉದಾಹರಣೆ (25-37)

  • ಮಾರ್ಥ ಮತ್ತು ಮರಿಯ ಮನೆಗೆ ಯೇಸು ಹೋದನು (38-42)

10  ಆಮೇಲೆ ಒಡೆಯ ತನ್ನ ಶಿಷ್ಯರಲ್ಲಿ ಬೇರೆ 70 ಜನ್ರನ್ನ ಆರಿಸ್ಕೊಂಡನು. ತಾನೇ ಹೋಗಬೇಕಿದ್ದ ಒಂದೊಂದು ಊರಿಗೆ, ಸ್ಥಳಕ್ಕೆ ತನಗಿಂತ ಮುಂಚೆ ಅವ್ರನ್ನ ಇಬ್ಬಿಬ್ಬರನ್ನಾಗಿ ಕಳಿಸಿದನು.+  ಕಳಿಸುವಾಗ ಹೀಗಂದನು “ಕೊಯ್ಲು ಜಾಸ್ತಿ ಇದೆ. ಕೆಲಸದವರು ಕಮ್ಮಿ ಇದ್ದಾರೆ. ಹಾಗಾಗಿ ಹೊಲದ ಯಜಮಾನನ ಹತ್ರ ಕೆಲಸದವ್ರನ್ನ ಕಳಿಸು ಅಂತ ಬೇಡ್ಕೊಳ್ಳಿ.+  ನೀವು ಹೋಗಿ. ಆದ್ರೆ ನೋಡಿ! ನಾನು ನಿಮ್ಮನ್ನ ತೋಳಗಳ ಮಧ್ಯ ಕುರಿಮರಿಗಳನ್ನ ಕಳಿಸೋ ತರ ಕಳಿಸ್ತಾ ಇದ್ದೀನಿ.+  ಹೋಗುವಾಗ ಹಣದ ಚೀಲ, ಆಹಾರದ ಚೀಲ, ಚಪ್ಪಲಿ ತಗೊಂಡು ಹೋಗಬೇಡಿ.+ ದಾರಿಯಲ್ಲಿ ಯಾರಿಗೂ ನಮಸ್ಕಾರ ಹೇಳಬೇಡಿ.*  ಮನೆ ಒಳಗೆ ಹೋಗೋ ಮುಂಚೆ ‘ಈ ಮನೆಯವ್ರಿಗೆ ಆಶೀರ್ವಾದ ಸಿಗಲಿ’+ ಅಂತ ಹೇಳಿ.  ಆ ಮನೆಯಲ್ಲಿ ಆಶೀರ್ವಾದ ಪಡೆಯೋಕೆ ಯೋಗ್ಯನಿದ್ರೆ ಆಶೀರ್ವಾದ ಸಿಗುತ್ತೆ. ಇಲ್ಲದಿದ್ರೆ ಆ ಆಶೀರ್ವಾದ ನಿಮಗೇ ವಾಪಸ್‌ ಬರುತ್ತೆ.  ಯಾವ ಮನೆಯಲ್ಲಿ ಆಶೀರ್ವಾದ ಪಡೆಯೋಕೆ ಯೋಗ್ಯನು ಇರ್ತಾನೋ ಆ ಮನೆಯಲ್ಲೇ ಉಳ್ಕೊಳಿ.+ ಬೇರೆ ಮನೆ ಹುಡುಕಬೇಡಿ.+ ಅಲ್ಲೇ ಊಟ ಮಾಡಿ, ಕುಡೀರಿ. ಯಾಕಂದ್ರೆ ಕೆಲಸಗಾರನಿಗೆ ಕೂಲಿ ಸಿಗಲೇಬೇಕು.+  ನೀವು ಒಂದು ಊರಿಗೆ ಹೋದಾಗ ಜನ ಸಂದೇಶ ಕೇಳಿದ್ರೆ ಅವರು ಏನೇ ಕೊಟ್ರೂ ತಿನ್ನಿ.  ಅಲ್ಲಿರೋ ರೋಗಿಗಳನ್ನ ವಾಸಿಮಾಡಿ ‘ದೇವರ ಆಳ್ವಿಕೆ ಹತ್ರ ಇದೆ’+ ಅಂತ ಹೇಳಿ. 10  ನೀವು ಒಂದು ಊರಿಗೆ ಹೋದಾಗ ಜನ ಸಂದೇಶ ಕೇಳದಿದ್ರೆ ಆ ಊರಿನ ಸಾರ್ವಜನಿಕ ಸ್ಥಳಕ್ಕೆ ಹೋಗಿ 11  ಜನ್ರಿಗೆ ಹೀಗೆ ಹೇಳಿ ‘ನಿಮ್ಮ ಊರಲ್ಲಿ ನಮ್ಮ ಕಾಲಿಗೆ ಹತ್ತಿದ ಧೂಳನ್ನ ಸಹ ಝಾಡಿಸಿ ಬಿಡ್ತೀವಿ.+ ಇದು ನಿಮಗೆ ಒಂದು ಎಚ್ಚರಿಕೆ ಆಗಿರಲಿ. ದೇವರ ಆಳ್ವಿಕೆ ತುಂಬ ಹತ್ರ ಇದೆ ಅನ್ನೊದನ್ನ ಮನಸ್ಸಲ್ಲಿಡಿ.’ 12  ನಾನು ನಿಮಗೆ ಹೇಳ್ತೀನಿ, ತೀರ್ಪಿನ ದಿನದಲ್ಲಿ ಆ ಊರಿನ ಸ್ಥಿತಿ ಸೊದೋಮಿಗಿಂತ ಕೆಟ್ಟದಾಗಿರುತ್ತೆ.+ 13  ಖೊರಾಜಿನ ಜನ್ರೇ, ಬೇತ್ಸಾಯಿದದ ಜನ್ರೇ, ನಿಮಗಾಗೋ ಗತಿ ನೆನಸ್ಕೊಂಡ್ರೆ ಬೇಜಾರಾಗುತ್ತೆ! ನಿಮ್ಮ ಮುಂದೆ ಮಾಡಿದ ಅದ್ಭುತಗಳನ್ನ ತೂರ್‌, ಸೀದೋನ್‌ ಪಟ್ಟಣದಲ್ಲಿ ಮಾಡಿದ್ರೆ ಅವರು ಇಷ್ಟೊತ್ತಿಗಾಗಲೇ ಗೋಣಿ ಸುತ್ತಿ ಬೂದಿಯಲ್ಲಿ ಕೂತ್ಕೊಳ್ತಿದ್ರು.+ 14  ಹಾಗಾಗಿ ತೀರ್ಪಿನ ದಿನದಲ್ಲಿ ನಿಮ್ಮ ಸ್ಥಿತಿ ತೂರ್‌, ಸೀದೋನಿನ ಸ್ಥಿತಿಗಿಂತ ಕೆಟ್ಟದಾಗಿರುತ್ತೆ. 15  ಕಪೆರ್ನೌಮ್‌ ಜನ್ರೇ, ದೇವರು ನಿಮ್ಮನ್ನ ಆಕಾಶದ ಎತ್ರಕ್ಕೆ ಎತ್ತುತ್ತಾನೆ ಅಂದ್ಕೊಂಡಿದ್ದೀರಾ? ಇಲ್ಲ. ಸಮಾಧಿಗೇ* ಕರ್ಕೊಂಡು ಹೋಗ್ತಾನೆ. 16  ನಿಮ್ಮ ಮಾತು ಕೇಳುವವನು ನನ್ನ ಮಾತೂ ಕೇಳ್ತಾನೆ.+ ನಿಮ್ಮ ಮಾತಿಗೆ ಗೌರವ ಕೊಡದವನು, ನನ್ನ ಮಾತಿಗೂ ಗೌರವ ಕೊಡಲ್ಲ. ನನಗೆ ಗೌರವ ಕೊಡದವನು ನನ್ನನ್ನ ಕಳಿಸಿದ ದೇವರಿಗೂ ಗೌರವ ಕೊಡಲ್ಲ.”+ 17  ಆಮೇಲೆ ಆ 70 ಜನ ಸಂತೋಷದಿಂದ ವಾಪಸ್‌ ಬಂದು “ಸ್ವಾಮಿ, ನಿನ್ನ ಹೆಸ್ರಲ್ಲಿ ಆಜ್ಞೆ ಕೊಟ್ರೆ ಕೆಟ್ಟ ದೇವದೂತರೂ ನಮ್ಮ ಮಾತು ಕೇಳ್ತಿದ್ದಾರೆ”+ ಅಂದ್ರು. 18  ಆಗ ಆತನು “ಸೈತಾನ ಈಗಲೇ ಮಿಂಚಿನ ತರ ಆಕಾಶದಿಂದ ಬಿದ್ದಿರೋದನ್ನ+ ನೋಡ್ತಾ ಇದ್ದೀನಿ. 19  ನೋಡಿ! ಹಾವುಗಳನ್ನ, ಚೇಳುಗಳನ್ನ ಕಾಲಿಂದ ತುಳಿಯೋಕೆ ನಿಮಗೆ ಅಧಿಕಾರ ಕೊಟ್ಟಿದ್ದೀನಿ. ನಿಮ್ಮ ಶತ್ರುಗೆ ಇರೋ ಶಕ್ತಿಗಿಂತ ಹೆಚ್ಚಿನ ಶಕ್ತಿ ಕೊಟ್ಟಿದ್ದೀನಿ.+ ಯಾವುದೂ ನಿಮಗೆ ಹಾನಿ ಮಾಡಲ್ಲ. 20  ಆದ್ರೆ ಕೆಟ್ಟ ದೇವದೂತರು ನಿಮ್ಮ ಮಾತು ಕೇಳ್ತಿದ್ದಾರೆ ಅನ್ನೋದಕ್ಕೆ ಸಂತೋಷಪಡದೆ, ನಿಮ್ಮ ಹೆಸ್ರನ್ನ ಸ್ವರ್ಗದಲ್ಲಿ ಬರೆದಾಗಿದೆ ಅನ್ನೋದಕ್ಕೆ ಖುಷಿಪಡಿ”+ ಅಂದನು. 21  ಆ ಕ್ಷಣದಲ್ಲೇ ದೇವರು ಆತನಿಗೆ ಪವಿತ್ರಶಕ್ತಿ ಕೊಟ್ಟಿದ್ರಿಂದ ಯೇಸುಗೆ ತುಂಬ ಖುಷಿ ಆಯ್ತು. ಹಾಗಾಗಿ ಯೇಸು “ಅಪ್ಪಾ, ಭೂಮಿ ಆಕಾಶದ ಒಡೆಯನೇ, ನಿನ್ನನ್ನ ಎಲ್ರ ಮುಂದೆ ಹೊಗಳ್ತೀನಿ. ಯಾಕಂದ್ರೆ ನೀನು ಈ ವಿಷ್ಯಗಳನ್ನ ವಿದ್ಯಾವಂತರಿಗೆ+ ಹೇಳದೆ ಚಿಕ್ಕ ಮಕ್ಕಳಿಗೆ ಹೇಳಿದ್ದೀಯ. ಅಪ್ಪಾ, ಅದೇ ನಿನ್ನ ಇಷ್ಟ ಆಗಿತ್ತು”+ ಅಂದನು. 22  ಅಷ್ಟೇ ಅಲ್ಲ ಯೇಸು “ನನ್ನ ಅಪ್ಪ ಎಲ್ಲ ವಿಷ್ಯಗಳನ್ನ ನನ್ನ ಕೈಗೆ ಒಪ್ಪಿಸಿದ್ದಾನೆ. ನನ್ನ* ಬಗ್ಗೆ ಅಪ್ಪನಿಗೆ ಮಾತ್ರ ಚೆನ್ನಾಗಿ ಗೊತ್ತು. ಅದೇ ತರ ಅಪ್ಪನ ಬಗ್ಗೆ ನನಗೆ ಮಾತ್ರ ಚೆನ್ನಾಗಿ ಗೊತ್ತು.+ ಅಪ್ಪನ ಬಗ್ಗೆ ನಾನು ಬೇರೆಯವ್ರಿಗೆ ಕಲಿಸದೆ ಇದ್ರೆ ಯಾರಿಗೂ ಅಪ್ಪನ ಬಗ್ಗೆ ಗೊತ್ತಾಗಲ್ಲ”+ ಅಂದನು. 23  ಆಮೇಲೆ ಶಿಷ್ಯರು ಮಾತ್ರ ಇದ್ದಾಗ ಯೇಸು ಅವ್ರಿಗೆ “ನೀವು ನೋಡ್ತಿರೋ ವಿಷ್ಯಗಳನ್ನ ನೋಡುವವರು ಸಂತೋಷವಾಗಿ ಇರ್ತಾರೆ.+ 24  ಯಾಕಂದ್ರೆ ನಿಮಗೆ ಹೇಳ್ತೀನಿ, ನೀವು ನೋಡ್ತಿರೋ ವಿಷ್ಯಗಳನ್ನ ಅನೇಕ ಪ್ರವಾದಿಗಳು, ರಾಜರು ನೋಡೋಕೆ ಇಷ್ಟಪಟ್ರು. ಆದ್ರೆ ಅವರು ನೋಡಲಿಲ್ಲ.+ ನೀವು ಕೇಳಿಸ್ಕೊಳ್ತಿರೋ ವಿಷ್ಯಗಳನ್ನ ಕೇಳಿಸ್ಕೊಳ್ಳೋಕೆ ಇಷ್ಟಪಟ್ರು. ಆದ್ರೆ ಅವರು ಕೇಳಿಸ್ಕೊಳ್ಳಲಿಲ್ಲ” ಅಂದನು. 25  ಇದಾದ ಮೇಲೆ ನಿಯಮ ಪುಸ್ತಕವನ್ನ ಅರಿದು ಕುಡಿದಿದ್ದ ಒಬ್ಬ ಯೇಸುವನ್ನ ಪರೀಕ್ಷಿಸೋಕೆ ಎದ್ದುನಿಂತು “ಗುರು, ಶಾಶ್ವತ ಜೀವ ಸಿಗಬೇಕಾದ್ರೆ ನಾನೇನು ಮಾಡಬೇಕು?”+ ಅಂತ ಕೇಳಿದ. 26  ಅದಕ್ಕೆ ಯೇಸು “ನಿಯಮ ಪುಸ್ತಕದಲ್ಲಿ ಏನು ಮಾಡಬೇಕಂತ ಇದೆ? ನಿನಗೇನು ಅರ್ಥ ಆಯ್ತು?” ಅಂತ ಕೇಳಿದನು. 27  ಅದಕ್ಕೆ ಅವನು “‘ನಿನ್ನ ದೇವರಾದ ಯೆಹೋವನನ್ನ* ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಶಕ್ತಿಯಿಂದ, ಪೂರ್ಣ ಮನಸ್ಸಿಂದ ಪ್ರೀತಿಸಬೇಕು’+ ಮತ್ತು ‘ನೀನು ನಿನ್ನನ್ನ ಪ್ರೀತಿಸೋ ತರ ಬೇರೆಯವ್ರನ್ನೂ ಪ್ರೀತಿಸಬೇಕು’”+ ಅಂತ ಉತ್ರ ಕೊಟ್ಟ. 28  ಆಗ ಯೇಸು “ನೀನು ಸರಿಯಾಗಿ ಉತ್ರ ಕೊಟ್ಟೆ. ಅದನ್ನೇ ಮಾಡ್ತಾ ಇರು, ಆಗ ನಿನಗೆ ಶಾಶ್ವತ ಜೀವ ಸಿಗುತ್ತೆ”+ ಅಂದನು. 29  ಆದ್ರೆ ಆ ವ್ಯಕ್ತಿ ತಾನೊಬ್ಬ ನೀತಿವಂತ+ ಅಂತ ರುಜುಪಡಿಸೋಕೆ ಯೇಸು ಹತ್ರ “ಅಷ್ಟಕ್ಕೂ ನನ್ನ ನೆರೆಯವನು ಯಾರು?” ಅಂತ ಕೇಳಿದ. 30  ಅದಕ್ಕೆ ಯೇಸು “ಒಬ್ಬ ವ್ಯಕ್ತಿ ಯೆರೂಸಲೇಮಿಂದ ಯೆರಿಕೋಗೆ ಹೋಗ್ತಾ ಇದ್ದಾಗ ಕಳ್ಳರ ಕೈಗೆ ಸಿಕ್ಕಿಬಿದ್ದ. ಕಳ್ಳರು ಅವನ ಬಟ್ಟೆ ಸಮೇತ ಎಲ್ಲ ದೋಚಿದ್ರು. ಚೆನ್ನಾಗಿ ಹೊಡೆದು ಸಾಯೋ ಸ್ಥಿತಿಯಲ್ಲಿ ಬಿಟ್ಟುಹೋದ್ರು. 31  ಒಬ್ಬ ಪುರೋಹಿತ ಆ ದಾರಿಯಲ್ಲಿ ಇಳಿದು ಬರ್ತಿದ್ದ. ಆ ಮನುಷ್ಯನನ್ನ ನೋಡಿ ಆಕಡೆಯಿಂದ ಹೋಗಿಬಿಟ್ಟ. 32  ಆಮೇಲೆ ಒಬ್ಬ ಲೇವಿ ಬಂದ. ಅವನೂ ನೋಡಿ ಆಕಡೆಯಿಂದ ಹೋಗಿಬಿಟ್ಟ. 33  ಆದ್ರೆ ಒಬ್ಬ ಸಮಾರ್ಯದವನು+ ಪ್ರಯಾಣ ಮಾಡ್ತಾ ಆ ದಾರಿಯಲ್ಲಿ ಹೋಗ್ತಿದ್ದಾಗ ಆ ಮನುಷ್ಯನನ್ನ ನೋಡಿ ಅವನಿಗೆ ಅಯ್ಯೋ ಪಾಪ ಅನಿಸ್ತು. 34  ಅವನ ಹತ್ರ ಹೋಗಿ ಗಾಯಗಳ ಮೇಲೆ ಎಣ್ಣೆ, ದ್ರಾಕ್ಷಾಮದ್ಯ ಸುರಿದು ಪಟ್ಟಿಕಟ್ಟಿದ. ಆಮೇಲೆ ಅವನನ್ನ ತನ್ನ ಕತ್ತೆ ಮೇಲೆ ಹತ್ತಿಸಿ ಛತ್ರಕ್ಕೆ ಕರ್ಕೊಂಡು ಹೋಗಿ ಅವನನ್ನ ನೋಡ್ಕೊಂಡ. 35  ಮಾರನೇ ದಿನ ಛತ್ರದ ಯಜಮಾನನಿಗೆ ಎರಡು ದಿನಾರು* ಕೊಟ್ಟು ‘ಇವನನ್ನ ನೋಡ್ಕೊ. ಇದಕ್ಕಿಂತ ಜಾಸ್ತಿ ಖರ್ಚು ಆದ್ರೆ ಮತ್ತೆ ಇದೇ ದಾರಿಯಲ್ಲಿ ಹೋಗುವಾಗ ಕೊಡ್ತೀನಿ’ ಅಂದ. 36  ಈಗ ಹೇಳು, ಕಳ್ಳರ ಕೈಗೆ ಸಿಕ್ಕಿಬಿದ್ದ ಆ ಮನುಷ್ಯನಿಗೆ ಈ ಮೂವರಲ್ಲಿ ಯಾರು ನೆರೆಯವನಾದ?”+ ಅಂತ ಕೇಳಿದನು. 37  ಅದಕ್ಕೆ ಅವನು “ಆ ಮನುಷ್ಯನಿಗೆ ಕರುಣೆ ತೋರಿಸಿದವನೇ”+ ಅಂದ. ಆಗ ಯೇಸು “ನೀನೂ ಹೋಗಿ ಅದೇ ತರ ಮಾಡು”+ ಅಂದನು. 38  ಆಮೇಲೆ ಅವರು ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದ್ರು. ಅಲ್ಲಿ ಮಾರ್ಥ+ ಅನ್ನೋ ಸ್ತ್ರೀ ಆತನನ್ನ ಮನೆಗೆ ಊಟಕ್ಕೆ ಕರೆದಳು. 39  ಅವಳಿಗೊಬ್ಬ ತಂಗಿ ಇದ್ದಳು. ಅವಳ ಹೆಸ್ರು ಮರಿಯ. ಅವಳು ಒಡೆಯನ ಕಾಲ ಹತ್ರ ಕೂತು ಆತನ ಮಾತುಗಳನ್ನ ಕೇಳಿಸ್ಕೊಳ್ತಾ ಇದ್ದಳು. 40  ಆದ್ರೆ ಮಾರ್ಥ ಕೆಲಸ ಮಾಡೋದ್ರಲ್ಲಿ ಮುಳುಗಿದ್ದಳು. ಅವಳು ಯೇಸು ಹತ್ರ ಬಂದು “ಸ್ವಾಮಿ, ನನ್ನ ತಂಗಿ ಎಲ್ಲ ಕೆಲಸ ನನ್ನ ತಲೆ ಮೇಲೆ ಹಾಕಿದ್ದಾಳೆ. ಅವಳಿಗೆ ಸ್ವಲ್ಪ ಬುದ್ಧಿ ಹೇಳು. ಬಂದು ನನಗೆ ಸಹಾಯ ಮಾಡಲಿ” ಅಂದಳು. 41  ಅದಕ್ಕೆ ಒಡೆಯ “ಮಾರ್ಥ ಮಾರ್ಥ, ನೀನು ತುಂಬ ವಿಷ್ಯಗಳ ಬಗ್ಗೆ ಚಿಂತೆ ಮಾಡ್ತಾ ಇದ್ದೀಯ. 42  ಆದ್ರೆ ಬೇಕಾಗಿರೋದು ಸ್ವಲ್ಪ ವಿಷ್ಯಗಳೇ, ಒಂದು ಇದ್ರೂ ಸಾಕು. ಮರಿಯ ಸರಿಯಾದ* ಆಯ್ಕೆ ಮಾಡಿದ್ದಾಳೆ.+ ಅದನ್ನ ಅವಳಿಂದ ಯಾರೂ ಕಿತ್ಕೊಳ್ಳಲ್ಲ” ಅಂದನು.

ಪಾದಟಿಪ್ಪಣಿ

ಅಥವಾ “ನಮಸ್ಕಾರ ಹೇಳಿ ತಬ್ಬಿಕೊಳ್ಳಬೇಡಿ.”
ಅಕ್ಷ. “ಮಗನ.”
ಅಥವಾ “ಒಳ್ಳೇ.”