ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ವಿವಾಹಕ್ಕೆ ಸಿದ್ಧನೊ?

ನಾನು ವಿವಾಹಕ್ಕೆ ಸಿದ್ಧನೊ?

ಅಧ್ಯಾಯ 30

ನಾನು ವಿವಾಹಕ್ಕೆ ಸಿದ್ಧನೊ?

ವಿವಾಹ ಒಂದು ಆಟವಲ್ಲ. ಪತಿ ಪತ್ನಿಯರು ಬೇರೆ ಯಾವನೇ ಮಾನವನೊಂದಿಗಿನ ಸಂಬಂಧಕ್ಕಿಂತ ಹೆಚ್ಚು ನಿಕಟವಾದ ಸಂಬಂಧವನ್ನು, ಒಂದು ಶಾಶ್ವತವಾದ ಬಂಧವನ್ನು ಹೊಸೆದುಕೊಳ್ಳಬೇಕೆಂದು ದೇವರು ಉದ್ದೇಶಿಸಿದನು. (ಆದಿಕಾಂಡ 2:24) ಹೀಗೆ ಒಬ್ಬ ವಿವಾಹ ಸಂಗಾತಿಯು, ನಿಮ್ಮ ಜೀವನ ಪರ್ಯಂತ ನೀವು ಅಂಟಿಕೊಳ್ಳುವ ಇಲ್ಲವೆ ನಿಮಗೆ ಅಂಟಿಕೊಳ್ಳುವ ವ್ಯಕ್ತಿಯಾಗಿದ್ದಾರೆ.

ಯಾವುದೇ ವಿವಾಹವು ಖಂಡಿತವಾಗಿಯೂ ಒಂದಿಷ್ಟು “ನೋವು ಮತ್ತು ದುಃಖವನ್ನು” ಅನುಭವಿಸುತ್ತದೆ. (1 ಕೊರಿಂಥ 7:28, ದ ನ್ಯೂ ಇಂಗ್ಲಿಷ್‌ ಬೈಬಲ್‌) ಆದರೆ, ವರ್ತನಾ ವಿಜ್ಞಾನದ ಪ್ರೊಫೆಸರ್‌ ಆಗಿರುವ ಮಾರ್ಸಿಯ ಲ್ಯಾಸ್‌ವೆಲ್‌ ಎಚ್ಚರಿಸುವುದು: “ವಿವಾಹವೊಂದು ಬಾಳುವುದೊ ಇಲ್ಲವೊ ಎಂಬುದರ ಕುರಿತಾಗಿ ನಮ್ಮಲ್ಲಿ ಆಕ್ಷೇಪಣೀಯವಲ್ಲದ ಒಂದಿಷ್ಟು ಮಾಹಿತಿ ಇರುವಲ್ಲಿ, ಅದೇನಾಗಿದೆಯೆಂದರೆ, ತಾವು ವಿವಾಹವಾಗುವಾಗ ಬಹಳ ಎಳೆಯರಾಗಿರುವವರು ಸಫಲರಾಗುವುದು ಅಸಂಭವವಾಗಿದೆ.”

ಅನೇಕ ಯುವ ವಿವಾಹಗಳು ಏಕೆ ವಿಫಲವಾಗುತ್ತವೆ? ಈ ಪ್ರಶ್ನೆಗೆ ಉತ್ತರವು, ನೀವು ವಿವಾಹಕ್ಕೆ ಸಿದ್ಧರಾಗಿದ್ದೀರೊ ಇಲ್ಲವೊ ಎಂಬುದನ್ನು ನಿರ್ಧರಿಸುವುದರ ಮೇಲೆ ಬಲವಾದ ಪ್ರಭಾವವನ್ನು ಬೀರಬಹುದು.

ಮಹಾ ನಿರೀಕ್ಷೆಗಳು

“ವಿವಾಹವು ಏನಾಗಿತ್ತೆಂಬುದರ ಕುರಿತು ನಮಗೆ ತೀರ ನಿಕೃಷ್ಟ ಅಭಿಪ್ರಾಯವಿತ್ತು,” ಎಂಬುದಾಗಿ ಒಬ್ಬ ಹದಿವಯಸ್ಕ ಹುಡುಗಿಯು ಒಪ್ಪಿಕೊಳ್ಳುತ್ತಾಳೆ. “ನಾವು ಬೇಕಾದಾಗ ಬಂದು ಹೋಗಬಹುದು, ಬಯಸಿದಂತೆ ಮಾಡಬಹುದು, ಬೇಕಾದರೆ ಪಾತ್ರೆಗಳನ್ನು ತೊಳೆಯಬಹುದು ಬೇಡವಾದರೆ ಇಲ್ಲ ಎಂದು ನಾವು ನೆನಸಿದೆವು, ಆದರೆ ವಿಷಯವು ಆ ರೀತಿಯಲ್ಲಿರುವುದಿಲ್ಲ.” ಅನೇಕ ಯುವ ಜನರು ವಿವಾಹದ ಬಗ್ಗೆ ಇಂತಹ ಅಪಕ್ವ ವಿಚಾರಗಳನ್ನು ಪೋಷಿಸುತ್ತಾರೆ. ಅದೊಂದು ಪ್ರಣಯಾತ್ಮಕ ಭ್ರಮೆಯಾಗಿದೆ ಎಂದು ಅವರು ಊಹಿಸಿಕೊಳ್ಳುತ್ತಾರೆ. ಅಥವಾ ತಾವು ಪ್ರಾಯಸ್ಥರೆಂದು ತೋರಿಸಿಕೊಳ್ಳಲಿಕ್ಕಾಗಿ ಅವರು ವಿವಾಹವಾಗುತ್ತಾರೆ. ಇನ್ನೂ ಇತರರು, ಮನೆಯಲ್ಲಿ, ಶಾಲೆಯಲ್ಲಿ, ಅಥವಾ ತಮ್ಮ ಸಮುದಾಯದಲ್ಲಿನ ಒಂದು ಕೆಟ್ಟ ಸನ್ನಿವೇಶದಿಂದ ಕೇವಲ ತಪ್ಪಿಸಿಕೊಳ್ಳಲು ಬಯಸುತ್ತಾರೆ. ಹುಡುಗಿಯೊಬ್ಬಳು ತನ್ನ ವರನಲ್ಲಿ ಹೇಳಿಕೊಂಡದ್ದು: “ನಾವು ವಿವಾಹವಾದಾಗ ನಾನು ಬಹಳಷ್ಟು ಸಂತೋಷಿಸುವೆ. ನಾನು ಇನ್ನು ಮುಂದೆ ಯಾವ ನಿರ್ಣಯಗಳನ್ನೂ ಮಾಡಬೇಕಾಗಿರುವುದಿಲ್ಲ!”

ಆದರೆ ವಿವಾಹವು ಒಂದು ಭ್ರಮೆಯೂ ಅಲ್ಲ, ಸಮಸ್ಯೆಗಳಿಗೆ ಸರ್ವನಿವಾರಕವೂ ಅಲ್ಲ. ಬದಲಿಗೆ, ಅದು ವ್ಯವಹರಿಸಲು ಸಮಸ್ಯೆಗಳ ಒಂದು ಹೊಸ ಶ್ರೇಣಿಯನ್ನು ಸಾದರಪಡಿಸುತ್ತದೆ. “ಮನೆಯಾಟ ಆಡಲಿಕ್ಕಾಗಿ, ಅನೇಕ ಹದಿವಯಸ್ಕರು ವಿವಾಹವಾಗುತ್ತಾರೆ” ಎಂದು 20ರ ಪ್ರಾಯದಲ್ಲಿ ತನ್ನ ಮೊದಲ ಮಗುವನ್ನು ಹೆತ್ತ ವಿಕಿ ಹೇಳುತ್ತಾಳೆ. “ಅದು ಎಂತಹ ವಿನೋದವಾಗಿ ತೋರುತ್ತದೆ! ಒಂದು ಮಗುವಿನ ಕುರಿತಾಗಿ ನೀವು, ಬಹಳ ಮುದ್ದಾದ ಮತ್ತು ನೀವು ಆಟವಾಡಸಾಧ್ಯವಿರುವ ಒಂದು ಪುಟ್ಟ ಬೊಂಬೆಯಂತೆ ನೆನಸುತ್ತೀರಿ, ಆದರೆ ವಿಷಯವು ಹಾಗಿರುವುದಿಲ್ಲ.”

ಅನೇಕ ಯುವ ಜನರಿಗೆ ಲೈಂಗಿಕ ಸಂಭೋಗಗಳ ಕುರಿತಾಗಿಯೂ ಅವಾಸ್ತವಿಕವಾದ ನಿರೀಕ್ಷೆಗಳಿರುತ್ತವೆ. 18ರ ಪ್ರಾಯದಲ್ಲಿ ವಿವಾಹವಾದ ಯುವ ಪುರುಷನೊಬ್ಬನು ಹೇಳಿದ್ದು: “ನಾನು ವಿವಾಹವಾದ ನಂತರ, ಸಂಭೋಗದ ಮಹಾ ರೋಮಾಂಚನವು ಬಹಳ ಬೇಗನೆ ಅಳಿಸಿಹೋಯಿತೆಂದು ಕಂಡುಕೊಂಡೆ, ಮತ್ತು ನಾವು ಕೆಲವು ನಿಜವಾದ ಸಮಸ್ಯೆಗಳನ್ನು ಅನುಭವಿಸತೊಡಗಿದೆವು.” ಹಣಕಾಸಿನ ಸಮಸ್ಯೆಗಳಿಗೆ ಎರಡನೆಯದಾಗಿ, ಹೆಚ್ಚಿನ ವಾದಗಳು ಲೈಂಗಿಕ ಸಂಭೋಗಗಳ ವಿಷಯವಾಗಿದ್ದವೆಂದು ಹದಿವಯಸ್ಕ ದಂಪತಿಗಳ ಒಂದು ಅಧ್ಯಯನವು ಕಂಡುಕೊಂಡಿತು. ಇದು ಏಕೆಂದರೆ, ತೃಪ್ತಿದಾಯಕ ವೈವಾಹಿಕ ಸಂಬಂಧಗಳು, ನಿಸ್ವಾರ್ಥತೆ ಮತ್ತು ಆತ್ಮನಿಯಂತ್ರಣದಿಂದ ಫಲಿಸುತ್ತವೆ, ಇವು ಯುವ ಜನರು ಅನೇಕ ವೇಳೆ ಬೆಳೆಸಿಕೊಳ್ಳಲು ವಿಫಲರಾಗಿರುವ ಗುಣಗಳಾಗಿವೆ.—1 ಕೊರಿಂಥ 7:3, 4.

ವಿವೇಕಯುತವಾಗಿ, ತಾವು “ಯೌವನದ ಪರಿಪಕ್ವ ಸ್ಥಿತಿಯನ್ನು ದಾಟಿಹೋದ” (NW) ನಂತರ ವಿವಾಹವಾಗುವಂತೆ ಬೈಬಲು ಕ್ರೈಸ್ತರನ್ನು ಉತ್ತೇಜಿಸುತ್ತದೆ. (1 ಕೊರಿಂಥ 7:36) ಕಾಮೋದ್ರೇಕವು ಉನ್ನತ ಮಟ್ಟದಲ್ಲಿರುವಾಗ ವಿವಾಹವಾಗುವುದು, ನಿಮ್ಮ ಯೋಚನೆಯನ್ನು ವಿರೂಪಗೊಳಿಸಿ, ಭಾವಿ ಸಂಗಾತಿಯ ದೋಷಗಳಿಗೆ ನಿಮ್ಮನ್ನು ಕುರುಡಾಗಿಸಬಲ್ಲದು.

ತಮ್ಮ ಪಾತ್ರಗಳಿಗೆ ಸಿದ್ಧರಾಗಿರದವರು

ಒಬ್ಬ ಹದಿವಯಸ್ಕ ವಧು ತನ್ನ ಪತಿಯ ಕುರಿತಾಗಿ ಹೇಳುವುದು: “ಈಗ ನಾವು ವಿವಾಹಿತರಾಗಿರುವುದರಿಂದ, ಸಂಭೋಗಿಸುವಾಗ ಮಾತ್ರ ಅವನು ನನ್ನಲ್ಲಿ ಆಸಕ್ತಿತೋರಿಸುವವನಾಗಿ ವರ್ತಿಸುತ್ತಾನೆ. ತನ್ನ ಮಿತ್ರರೊಂದಿಗೆ ಇರುವುದು, ನನ್ನೊಂದಿಗೆ ಇರುವಷ್ಟೇ ಪ್ರಾಮುಖ್ಯವಾದದ್ದೆಂದು ಅವನು ನೆನಸುತ್ತಾನೆ. . . . ನಾನು ಅವನ ಏಕಮಾತ್ರ ಸಂಗಾತಿಯಾಗಿರಲಿದ್ದೇನೆಂದು ನೆನಸಿದೆ, ಆದರೆ ನಾನು ವಂಚಿಸಲ್ಪಟ್ಟೆ.” ಇದು ಯುವ ಪುರುಷರಲ್ಲಿ ಸಾಮಾನ್ಯವಾಗಿರುವ ಒಂದು ತಪ್ಪಭಿಪ್ರಾಯವನ್ನು ಎತ್ತಿತೋರಿಸುತ್ತದೆ: ಪತಿಗಳೋಪಾದಿ ತಾವು ಇನ್ನೂ ಒಂಟಿ ಪುರುಷರ ಜೀವನ ಶೈಲಿಯನ್ನು ಜೀವಿಸಬಲ್ಲೆವೆಂದು ಅವರು ನೆನಸುತ್ತಾರೆ.

ಯುವ ಪತ್ನಿಯರಲ್ಲಿ ಸಾಮಾನ್ಯವಾಗಿರುವ ಒಂದು ಸಮಸ್ಯೆಯನ್ನು 19 ವರ್ಷ ಪ್ರಾಯದ ಒಬ್ಬ ವಧು ಸೂಚಿಸುತ್ತಾಳೆ: “ನಾನು ಮನೆಯನ್ನು ಸ್ವಚ್ಛಗೊಳಿಸಿ, ಅಡಿಗೆ ಮಾಡುವುದಕ್ಕಿಂತ ಟಿವಿಯನ್ನು ವೀಕ್ಷಿಸುತ್ತಾ ಮಲಗಲು ಇಷ್ಟಪಡುವೆ. ನನ್ನ ಪತಿಯ ಹೆತ್ತವರು ಸಂದರ್ಶಿಸುವಾಗ ನನಗೆ ಅವಮಾನವಾಗುತ್ತದೆ ಏಕೆಂದರೆ ಅವರ ಮನೆಯು ಸ್ವಚ್ಛವಾಗಿದೆ, ನನ್ನದೊ ಯಾವಾಗಲೂ ಅಸ್ತವ್ಯಸ್ತವಾಗಿರುತ್ತದೆ. ನನಗೆ ಸರಿಯಾಗಿ ಅಡಿಗೆ ಮಾಡಲೂ ಬರುವುದಿಲ್ಲ.” ಹುಡುಗಿಯೊಬ್ಬಳು ಗೃಹಕೃತ್ಯಗಳಲ್ಲಿ ಅಸಮರ್ಥಳಾಗಿರುವಾಗ, ಅದು ವಿವಾಹಕ್ಕೆ ಎಂತಹ ಒತ್ತಡವನ್ನು ಕೂಡಿಸಬಲ್ಲದು! “ವಿವಾಹವು ನಿಜವಾಗಿಯೂ ಬದ್ಧತೆಯನ್ನು ಕೇಳಿಕೊಳ್ಳುತ್ತದೆ,” ಎಂಬುದಾಗಿ (ಈ ಹಿಂದೆ ಉದ್ಧರಿಸಲ್ಪಟ್ಟ) ವಿಕಿ ಹೇಳಿದಳು. “ಇದೊಂದು ಆಟವಲ್ಲ. ವಿವಾಹದಿನದ ವಿನೋದವು ಅಂತ್ಯಗೊಳ್ಳುತ್ತದೆ. ಅದು ಬೇಗನೆ ಅನುದಿನದ ಜೀವಿತವಾಗುತ್ತದೆ ಮತ್ತು ಅದು ಸುಲಭವಾಗಿರುವುದಿಲ್ಲ.”

ಮತ್ತು ಕುಟುಂಬವೊಂದನ್ನು ಪೋಷಿಸುವ ಅನುದಿನದ ದುಡಿಮೆಯ ಕುರಿತೇನು? ವಿಕಿಯ ಪತಿ ಮಾರ್ಕ್‌ ಹೇಳುವುದು: “ನನ್ನ ಪ್ರಥಮ ಕೆಲಸಕ್ಕೆ ನಾನು ಬೆಳಗ್ಗೆ 6 ಗಂಟೆಗೆ ಏಳಬೇಕಿತ್ತು. ‘ಇದು ಕಷ್ಟದ ಕೆಲಸವಾಗಿದೆ. ಒಂದಿಷ್ಟು ಬಿಡುಗಡೆಯನ್ನು ನಾನು ಎಂದಾದರೂ ಪಡೆಯುವೆನೊ?’ ಎಂದು ನಾನು ಯೋಚಿಸುತ್ತಾ ಇರುತ್ತಿದ್ದೆ. ಅನಂತರ ನಾನು ಮನೆಗೆ ಹಿಂದೆ ಹೋದಾಗ, ನಾನು ಅನುಭವಿಸುತ್ತಿರುವುದನ್ನು ವಿಕಿ ಅರ್ಥಮಾಡಿಕೊಳ್ಳುತ್ತಿಲ್ಲವೆಂದು ನನಗನಿಸಿತು.”

ಹಣಕಾಸಿನ ಸಮಸ್ಯೆಗಳು

ಇದು ಯುವ ವಿವಾಹಿತ ದಂಪತಿಗಳಲ್ಲಿನ ವೈವಾಹಿಕ ವೈಷಮ್ಯದ ಮತ್ತೊಂದು ಕಾರಣಕ್ಕೆ ನಮ್ಮನ್ನು ತರುತ್ತದೆ—ಹಣಕಾಸು. ವಿವಾಹದ ಮೂರು ತಿಂಗಳುಗಳ ನಂತರ, ತಮ್ಮ ಅತಿ ದೊಡ್ಡ ಸಮಸ್ಯೆಯು, “ಕುಟುಂಬ ವರಮಾನವನ್ನು ಖರ್ಚುಮಾಡುವುದು” ಆಗಿತ್ತೆಂದು ನಲ್ವತ್ತೆಂಟು ಹದಿವಯಸ್ಕ ದಂಪತಿಗಳು ಒಪ್ಪಿಕೊಂಡರು. ಸುಮಾರು ಮೂರು ವರ್ಷಗಳ ನಂತರ, ಇವರಲ್ಲಿ 37 ದಂಪತಿಗಳಿಗೆ ಅದೇ ಪ್ರಶ್ನೆಯನ್ನು ಕೇಳಲಾಯಿತು. ಪುನಃ ಹಣಕಾಸಿನ ಸಮಸ್ಯೆಗಳು ಅಗ್ರಸ್ಥಾನದಲ್ಲಿದ್ದವು ಮತ್ತು ಅವರ ಸಂಕಟವು ಇನ್ನೂ ಕೆಟ್ಟದ್ದಾಗಿತ್ತು! “ನಿಮ್ಮನ್ನು ಸಂತೃಪ್ತರನ್ನಾಗಿ ಮಾಡಲು ಬೇಕಾದ ವಿಷಯಗಳನ್ನು ಖರೀದಿಸಲಿಕ್ಕಾಗಿ ನಿಮ್ಮಲ್ಲಿ ಸಾಕಷ್ಟು ಹಣ ಎಂದಿಗೂ ಇರದಿರುವಾಗ, ಜೀವಿತದಲ್ಲಿ ಯಾವ ವಿನೋದವನ್ನು ನೀವು ಅನುಭವಿಸಬಲ್ಲಿರಿ?” ಎಂಬುದಾಗಿ ಬಿಲ್‌ ಕೇಳಿದನು “. . . ಒಂದು ವೇತನ ದಿನದಿಂದ ಮುಂದಿನ ವೇತನ ದಿನದ ವರೆಗೆ ಸಾಕಾಗದಷ್ಟು ಹಣವು ನಿಮ್ಮಲ್ಲಿರುವಾಗ, ಅದು ಬಹಳಷ್ಟು ಜಗಳಗಳನ್ನು ಮತ್ತು ಅಸಂತೋಷವನ್ನು ಕೆರಳಿಸಬಲ್ಲದು.”

ಹಣಕಾಸಿನ ಸಮಸ್ಯೆಗಳು ಹದಿವಯಸ್ಕರಲ್ಲಿ ಸಾಮಾನ್ಯವಾದ ಸಮಸ್ಯೆಗಳಾಗಿವೆ, ಏಕೆಂದರೆ ಅವರಲ್ಲಿ ಅನೇಕ ವೇಳೆ ನಿರುದ್ಯೋಗದ ಅತ್ಯುನ್ನತ ಪ್ರಮಾಣವಿರುತ್ತದೆ ಮತ್ತು ಅವರು ಅತಿ ಕಡಿಮೆ ಕೂಲಿಯನ್ನು ಪಡೆಯುತ್ತಾರೆ. “ನನ್ನ ಕುಟುಂಬಕ್ಕೆ ಒದಗಿಸಲು ನನ್ನಿಂದ ಸಾಧ್ಯವಿರದಿದ್ದ ಕಾರಣ, ನಾವು ನಮ್ಮ ಹೆತ್ತವರೊಂದಿಗೆ ವಾಸಿಸಬೇಕಿತ್ತು,” ಎಂಬುದಾಗಿ ರಾಯ್‌ ಒಪ್ಪಿಕೊಂಡನು. “ಇದು ನಿಜವಾದ ಉದ್ವೇಗವನ್ನು ಸೃಷ್ಟಿಸಿತು, ವಿಶೇಷವಾಗಿ ನಮಗೊಂದು ಮಗುವಿದ್ದ ಕಾರಣ.” ಜ್ಞಾನೋಕ್ತಿ 24:27 ಬುದ್ಧಿಹೇಳುವುದು: “ನಿನ್ನ ಕೆಲಸದ ಸಾಮಾನುಗಳನ್ನು ಸುತ್ತಲು ಅಣಿಮಾಡು, ನಿವೇಶನದಲ್ಲಿ ಸಿದ್ಧಪಡಿಸು, ಆಮೇಲೆ ನಿನ್ನ ಮನೆಯನ್ನು ಕಟ್ಟು.” ಬೈಬಲ್‌ ಸಮಯಗಳಲ್ಲಿ ಪುರುಷರು, ತದನಂತರ ಒಂದು ಕುಟುಂಬವನ್ನು ಪೋಷಿಸುವ ಸ್ಥಾನದಲ್ಲಿರಲು ಕಷ್ಟಪಟ್ಟು ಕೆಲಸಮಾಡಿದರು. ಅಂತಹ ಯಥೋಚಿತ ಸಿದ್ಧತೆಗಳನ್ನು ಮಾಡಿಕೊಳ್ಳಲು ವಿಫಲರಾದ ಅನೇಕ ಯುವ ಪತಿಯರು ಇಂದು, ಒದಗಿಸುವವನ ಪಾತ್ರವನ್ನು ಒಂದು ಹೊರೆಯಾಗಿ ಕಂಡುಕೊಳ್ಳುತ್ತಾರೆ.

ಆದರೆ ದಂಪತಿಗಳಿಗೆ ಪ್ರಾಪಂಚಿಕ ವಸ್ತುಗಳ ಕುರಿತು ಒಂದು ಬಾಲಿಶ ನೋಟವಿರುವಲ್ಲಿ, ಸಮರ್ಪಕವಾದ ಸಂಬಳವೂ ಹಣಕಾಸಿನ ಸಮಸ್ಯೆಗಳನ್ನು ಕೊನೆಗೊಳಿಸದು. ಒಂದು ಅಧ್ಯಯನವು ಪ್ರಕಟಿಸಿದ್ದೇನೆಂದರೆ, “ತಮ್ಮ ಹೆತ್ತವರಿಗೆ ಸಂಪಾದಿಸಲು ಬಹುಶಃ ಅನೇಕ ವರ್ಷಗಳು ಹಿಡಿದಿರಸಾಧ್ಯವಿದ್ದ ವಸ್ತುಗಳಲ್ಲಿ ಹೆಚ್ಚಿನವುಗಳನ್ನು, ತಮ್ಮ ಕುಟುಂಬಗಳಿಗಾಗಿ ಕೂಡಲೇ ಖರೀದಿಸಲು ಶಕ್ತರಾಗಿರಬೇಕೆಂದು ಹದಿವಯಸ್ಕರು ನಿರೀಕ್ಷಿಸಿದರು.” ಈ ಪ್ರಾಪಂಚಿಕ ವಸ್ತುಗಳನ್ನು ಈಗ ಅನುಭವಿಸಲು ನಿಶ್ಚಯಿಸಿಕೊಂಡ ಅನೇಕರು, ಸಾಲದಲ್ಲಿ ಮುಳುಗಿದರು. “ಅನ್ನವಸ್ತ್ರ”ಗಳಿಂದ ಸಂತೃಪ್ತರಾಗುವ ಪಕ್ವತೆಯಿರದ ಇವರು ತಮ್ಮ ವಿವಾಹದಲ್ಲಿನ ಒತ್ತಡವನ್ನು ಹೆಚ್ಚಿಸಿಕೊಂಡರು.—1 ತಿಮೊಥೆಯ 6:8-10.

“ಅಜಗಜಾಂತರ”

ಮೋರೀನ್‌ ಜ್ಞಾಪಿಸಿಕೊಳ್ಳುವುದು: “ನಾನು ಡಾನ್‌ನಲ್ಲಿ ಅನುರಕ್ತಳಾಗಿದ್ದೆ. ಅವನು ಬಹಳಷ್ಟು ಸುಂದರನೂ, ಬಲಿಷ್ಠನೂ, ಒಳ್ಳೆಯ ಕ್ರೀಡಾಪಟು ಮತ್ತು ಬಹಳ ಜನಪ್ರಿಯನಾದ ವ್ಯಕ್ತಿಯಾಗಿದ್ದನು . . . ನಮ್ಮ ವಿವಾಹವು ಕೊನೆಯ ವರೆಗೂ ಬಾಳಲೇಬೇಕಿತ್ತು.” ಆದರೆ ಅದು ಬಾಳಲಿಲ್ಲ. ಅಸಮಾಧಾನವು ಎಷ್ಟರ ಮಟ್ಟಿಗೆ ತಲಪಿತೆಂದರೆ, ಮೋರೀನ್‌ ಹೇಳುವಂತೆ, “ಡಾನ್‌ ಮಾಡಿದ ಪ್ರತಿಯೊಂದು ವಿಷಯವು—ನಾವು ಊಟಮಾಡುವಾಗ ಅವನು ತನ್ನ ಬಾಯಿಯನ್ನು ಚಪ್ಪರಿಸುತ್ತಿದ್ದ ವಿಧವೂ—ನನ್ನನ್ನು ರೇಗಿಸಿತು. ಕೊನೆಗೆ ನಮಗಿಬ್ಬರಿಗೂ ಇನ್ನುಮುಂದೆ ತಡೆದುಕೊಳ್ಳಲಾಗಲಿಲ್ಲ.” ಅವರ ವಿವಾಹವು ಎರಡು ವರ್ಷಗಳೊಳಗೆ ಕುಸಿದುಬಿತ್ತು.

ಸಮಸ್ಯೆಯು ಏನಾಗಿತ್ತು? “ನಮ್ಮ ಜೀವನದ ಗುರಿಗಳು ಅಜಗಜಾಂತರವುಳ್ಳವುಗಳಾಗಿದ್ದವು,” ಎಂದು ಮೋರೀನ್‌ ವಿವರಿಸಿದಳು. “ನಾನು ಬೌದ್ಧಿಕವಾಗಿ ಸಂಬಂಧಿಸಸಾಧ್ಯವಿದ್ದ ವ್ಯಕ್ತಿಯ ಅಗತ್ಯ ನನಗಿತ್ತೆಂದು ನಾನೀಗ ಗ್ರಹಿಸಿದೆ. ಆದರೆ ಡಾನ್‌ನ ಇಡೀ ಜೀವನವು ಕ್ರೀಡೆಯಾಗಿತ್ತು. 18ರ ಪ್ರಾಯದಲ್ಲಿ ನಾನು ಬಹಳಷ್ಟು ಮಹತ್ವದ್ದೆಂದು ನೆನಸಿದ್ದ ವಿಷಯಗಳು ಹಠಾತ್ತನೆ ಕ್ಷುಲ್ಲಕವಾದ ವಿಷಯಗಳಾದವು.” ಸೌಂದರ್ಯವನ್ನು ಒಂದು ಆದ್ಯತೆಯಾಗಿ ಮಾಡಿಕೊಳ್ಳುತ್ತಾ, ಯುವ ಜನರಿಗೆ ಅನೇಕ ವೇಳೆ ಒಂದು ವಿವಾಹದ ಸಂಗಾತಿಯಲ್ಲಿ ತಮಗೆ ಬೇಕಾದುದರ ವಿಷಯವಾಗಿ ಬಾಲಿಶ ನೋಟವಿರುತ್ತದೆ. ಜ್ಞಾನೋಕ್ತಿ 31:30 ಎಚ್ಚರಿಸುವುದು: “ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ.”

ಸ್ವಪರೀಕ್ಷೆಯನ್ನು ಮಾಡಿಕೊಳ್ಳುವುದು

ದೇವರಿಗೆ ಒಂದು ಗಂಭೀರವಾದ ಪ್ರತಿಜ್ಞೆಯನ್ನು ಮಾಡಿ, ‘ಪ್ರತಿಜ್ಞೆಮಾಡಿದ ಮೇಲೆ ವಿಚಾರಮಾಡುವ’ (NW) ವ್ಯಕ್ತಿಯನ್ನು ಬೈಬಲು ದುಡುಕಿನ ಸ್ವಭಾವದವನೆಂದು ಕರೆಯುತ್ತದೆ. (ಜ್ಞಾನೋಕ್ತಿ 20:25) ಹಾಗಾದರೆ, ವಿವಾಹದ ಪ್ರತಿಜ್ಞೆಯಂತಹ ಒಂದು ಗಂಭೀರವಾದ ಬಂಧದೊಳಗೆ ಪ್ರವೇಶಿಸುವ ಮೊದಲು ಶಾಸ್ತ್ರವಚನಗಳ ಬೆಳಕಿನಲ್ಲಿ ನಿಮ್ಮನ್ನು ಪರೀಕ್ಷಿಸಿಕೊಳ್ಳುವುದು ವಿವೇಕಯುತವಾಗಿರದೊ? ಜೀವಿತದಲ್ಲಿನ ನಿಮ್ಮ ಗುರಿಗಳಾವುವು? ಇವು ವಿವಾಹದಿಂದ ಹೇಗೆ ಬಾಧಿಸಲ್ಪಡುವವು? ಕೇವಲ ಲೈಂಗಿಕ ಸಂಭೋಗಗಳನ್ನು ಅನುಭವಿಸಲು ಇಲ್ಲವೆ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ನೀವು ವಿವಾಹವಾಗಬಯಸುತ್ತೀರೊ?

ಅಲ್ಲದೆ, ಪತಿ ಅಥವಾ ಪತ್ನಿಯ ಪಾತ್ರವನ್ನು ನಿರ್ವಹಿಸಲು ನೀವು ಎಷ್ಟರ ಮಟ್ಟಿಗೆ ಸಿದ್ಧರಾಗಿದ್ದೀರಿ? ಒಂದು ಮನೆವಾರ್ತೆಯನ್ನು ನಡೆಸುವ ಇಲ್ಲವೆ ಹೊಟ್ಟೆಪಾಡಿಗಾಗಿ ದುಡಿಯುವ ಸಾಮರ್ಥ್ಯ ನಿಮಗಿದೆಯೊ? ನಿಮ್ಮ ಹೆತ್ತವರೊಂದಿಗೆ ನೀವು ಸತತವಾಗಿ ಸಂಘರ್ಷಿಸುತ್ತಿರುವಲ್ಲಿ, ಒಬ್ಬ ವಿವಾಹ ಸಂಗಾತಿಯೊಂದಿಗೆ ನೀವು ಹೊಂದಿಕೊಂಡು ಹೋಗಲು ಶಕ್ತರಾಗಿರುವಿರೊ? ವಿವಾಹದೊಂದಿಗೆ ಬರುವ ಪರೀಕ್ಷೆಗಳು ಮತ್ತು ಸಂಕಟಗಳನ್ನು ನೀವು ಎದುರಿಸಿ ನಿಲ್ಲಬಲ್ಲಿರೊ? ಹಣವನ್ನು ನಿರ್ವಹಿಸುವ ವಿಷಯದಲ್ಲಿ ನೀವು ನಿಜವಾಗಿಯೂ ‘ಶಿಶುವಿನ ಗುಣಲಕ್ಷಣಗಳನ್ನು’ (NW) ತೊರೆದಿದ್ದೀರೊ? (1 ಕೊರಿಂಥ 13:11) ನೀವು ಎಷ್ಟರ ಮಟ್ಟಿಗೆ ಈ ಮಟ್ಟಗಳನ್ನು ತಲಪುತ್ತೀರಿ ಎಂಬುದರ ಕುರಿತು ನಿಮ್ಮ ಹೆತ್ತವರಿಗೆ ಬಹಳಷ್ಟು ಹೇಳಲಿಕ್ಕಿದೆ ಎಂಬುದು ನಿಸ್ಸಂಶಯ.

ವಿವಾಹವು, ಹೇರಳವಾದ ಸಂತೋಷ ಇಲ್ಲವೆ ಅತ್ಯಂತ ಕಹಿಯಾದ ವೇದನೆಯ ಮೂಲವಾಗಿರಸಾಧ್ಯವಿದೆ. ಅದಕ್ಕಾಗಿ ನೀವು ಎಷ್ಟರ ಮಟ್ಟಿಗೆ ಸಿದ್ಧರಾಗಿದ್ದೀರಿ ಎಂಬುದರ ಮೇಲೆ ಬಹಳಷ್ಟು ಅವಲಂಬಿಸಿರುತ್ತದೆ. ನೀವು ಇನ್ನೂ ಒಬ್ಬ ಹದಿವಯಸ್ಕರಾಗಿರುವಲ್ಲಿ, ಡೇಟಿಂಗ್‌ ಮಾಡುವುದನ್ನು ಆರಂಭಿಸುವ ಮೊದಲು, ಸ್ವಲ್ಪ ಸಮಯ ಕಾಯಬಾರದೇಕೆ? ಕಾಯುವುದು ನಿಮ್ಮನ್ನು ಹಾನಿಗೊಳಿಸದು. ಮತ್ತು ವಿವಾಹದ ಆ ಗಂಭೀರವಾದ ಹಾಗೂ ಕಾಯಂ ಹೆಜ್ಜೆಯನ್ನು ನೀವು ಇಟ್ಟರೆ ಮತ್ತು ಇಡುವಾಗ, ಅದು ನಿಮಗೆ ನಿಜವಾಗಿಯೂ ಸಿದ್ಧರಾಗಲು ಅಗತ್ಯವಿರುವ ಸಮಯವನ್ನು ಕೊಡುವುದು, ಅಷ್ಟೆ.

ಚರ್ಚೆಗಾಗಿ ಪ್ರಶ್ನೆಗಳು

◻ ವಿವಾಹದ ಕುರಿತು ಯಾವ ಅಪಕ್ವ ನೋಟಗಳನ್ನು ಕೆಲವು ಯುವ ಜನರು ಪೋಷಿಸುತ್ತಾರೆ?

◻ ಸಂಭೋಗಕ್ಕಾಗಿ ಮಾತ್ರ ವಿವಾಹವಾಗುವುದು ಅವಾಸ್ತವಿಕವಾಗಿರುವುದೆಂದು ನೀವು ಏಕೆ ನೆನಸುತ್ತೀರಿ?

◻ ಪತಿ ಅಥವಾ ಪತ್ನಿಯ ಪಾತ್ರಕ್ಕೆ ಕೆಲವು ಯುವ ಜನರು ಹೇಗೆ ಸಿದ್ಧರಾಗಿರದವರಾಗಿ ರುಜುವಾಗಿದ್ದಾರೆ?

◻ ಹಣಕಾಸಿನ ವಿಷಯದಲ್ಲಿ ಅನೇಕ ವೇಳೆ ಯುವ ದಂಪತಿಗಳಿಗೆ ಗಂಭೀರವಾದ ಸಮಸ್ಯೆಗಳಿರುವುದೇಕೆ?

◻ ವಿವಾಹದ ಸಂಗಾತಿಯನ್ನು ಆರಿಸಿಕೊಳ್ಳುವುದರಲ್ಲಿ ಕೆಲವು ಯುವ ಜನರು ಯಾವ ತಪ್ಪನ್ನು ಮಾಡುತ್ತಾರೆ?

◻ ವಿವಾಹಕ್ಕಾಗಿರುವ ನಿಮ್ಮ ಸಿದ್ಧತೆಯ ಕುರಿತಾಗಿ ಯಾವ ಪ್ರಶ್ನೆಗಳನ್ನು ನೀವು ಸ್ವತಃ ಕೇಳಿಕೊಳ್ಳಬಹುದು? ಈ ಮಾಹಿತಿಯನ್ನು ಪರಿಗಣಿಸಿದ ಬಳಿಕ, ವಿವಾಹವಾಗಲು ನೀವು ಎಷ್ಟರ ಮಟ್ಟಿಗೆ ಸಿದ್ಧರಿದ್ದೀರೆಂದು ನಿಮಗನಿಸುತ್ತದೆ?

[ಪುಟ 240 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ವಿವಾಹವೊಂದು ಬಾಳುವುದೊ ಇಲ್ಲವೊ ಎಂಬುದರ ಕುರಿತಾಗಿ ನಮಲ್ಲಿ ಆಕ್ಷೇಪಣೀಯವಲ್ಲದ ಒಂದಿಷ್ಟು ಮಾಹಿತಿ ಇರುವಲ್ಲಿ, ಅದೇನಾಗಿದೆಯೆಂದರೆ, ತಾವು ವಿವಾಹವಾಗುವಾಗ ಬಹಳ ಎಳೆಯರಾಗಿರುವವರು ಸಫಲರಾಗುವುದು ಅಸಂಭವವಾಗಿದೆ.”—ವರ್ತನಾ ವಿಜ್ಞಾನದ ಪ್ರೊಫೆಸರ್‌ ಆಗಿರುವ ಮಾರ್ಸಿಯ ಲ್ಯಾಸ್‌ವೆಲ್‌

[ಪುಟ 237 ರಲ್ಲಿರುವ ಚಿತ್ರಗಳು]

ಅನೇಕ ಯುವ ಜನರು, ಇವರಿಗಿಂತ ತುಸು ಹೆಚ್ಚು ಸಿದ್ಧರಾಗಿರುತ್ತಾ, ವಿವಾಹವನ್ನು ಪ್ರವೇಶಿಸುತ್ತಾರೆ