ವಿವಾಹಕ್ಕೆ ಮುಂಚಿನ ಸಂಭೋಗದ ಕುರಿತೇನು?
ಅಧ್ಯಾಯ 23
ವಿವಾಹಕ್ಕೆ ಮುಂಚಿನ ಸಂಭೋಗದ ಕುರಿತೇನು?
‘ನೀವು ಒಬ್ಬರನ್ನೊಬ್ಬರು ಪ್ರೀತಿಸುವುದಾದರೆ, ಅದು ಸರಿಯೊ? ಅಥವಾ ನೀವು ವಿವಾಹಿತರಾಗುವ ತನಕ ಕಾಯಬೇಕೊ?’ ‘ನಾನಿನ್ನೂ ಕನ್ಯೆಯಾಗಿದ್ದೇನೆ. ನನ್ನಲ್ಲಿ ಏನಾದರೂ ದೋಷವಿದೆಯೊ?’ ಈ ರೀತಿಯ ಪ್ರಶ್ನೆಗಳು, ಯುವ ಜನರ ಮಧ್ಯೆ ತುಂಬಿತುಳುಕುತ್ತವೆ.
ಆದರೂ, “ಇನ್ನೂ ಒಬ್ಬ ಹದಿವಯಸ್ಕನಾಗಿದ್ದಾಗಲೇ ಲೈಂಗಿಕ ಸಂಭೋಗವನ್ನು ಮಾಡಿರದವನು, ಅಸಾಧಾರಣನಾದ ಯುವ ವ್ಯಕ್ತಿಯಾಗಿದ್ದಾನೆ” ಎಂದು ದಿ ಆ್ಯಲನ್ ಗಟ್ಮಾಕರ್ ಸಂಸ್ಥೆಯು ತನ್ನ 1981ರ ವರದಿಯಲ್ಲಿ ತೀರ್ಮಾನಮಾಡಿತು. “10 ಮಂದಿ ಪುರುಷರಲ್ಲಿ ಎಂಟು ಪುರುಷರು ಹಾಗೂ 10 ಮಂದಿ ಸ್ತ್ರೀಯರಲ್ಲಿ ಏಳು ಸ್ತ್ರೀಯರು, ತಮ್ಮ ಹದಿಪ್ರಾಯದಲ್ಲೇ ಸಂಭೋಗವನ್ನು ಮಾಡಿದ್ದಾಗಿ ವರದಿಸುತ್ತಾರೆ.”
‘ಏಕೆ ಮಾಡಬಾರದು?’ ಎಂದು ನೀವು ಕೇಳಬಹುದು. ಎಷ್ಟೆಂದರೂ, ಪ್ರೀತಿಸಲ್ಪಡಬೇಕೆಂಬ ಬಯಕೆಯು ಸ್ವಾಭಾವಿಕವೇ ಆಗಿದೆ. ಮತ್ತು ನೀವು ಯುವಪ್ರಾಯದವರಾಗಿರುವಾಗ, ನಿಮ್ಮ ಕಾಮೋದ್ರೇಕಗಳು ಅಪಕರ್ಷಣೆಯ ಮಟ್ಟಿಗೂ ಪ್ರಬಲವಾಗಿರಸಾಧ್ಯವಿದೆ. ಇದಲ್ಲದೆ, ನಿಮ್ಮ ಸಮಾನಸ್ಥರ ಪ್ರಭಾವವಿರುತ್ತದೆ. ವಿವಾಹಪೂರ್ವದ ಸಂಭೋಗವು ಮಜಾ, ಮತ್ತು ನೀವು ನಿಜವಾಗಿಯೂ ಯಾರನ್ನಾದರೂ ಇಷ್ಟಪಡುವಾಗ, ಶರೀರ ಸಂಬಂಧವಿರಲು ಬಯಸುವುದು ಸ್ವಾಭಾವಿಕವಾದದ್ದೇ ಎಂದು ಅವರು ನಿಮಗೆ ಹೇಳಬಹುದು. ಸಂಭೋಗವನ್ನು ನಡೆಸುವುದು ನಿಮ್ಮ ಪುರುಷತ್ವ ಅಥವಾ ಹೆಣ್ತನವನ್ನು ರುಜುಪಡಿಸುತ್ತದೆ ಎಂದು ಕೆಲವರು ಹೇಳಲೂಬಹುದು. ವಿಚಿತ್ರ ವ್ಯಕ್ತಿಯೆಂದು ದೃಷ್ಟಿಸಲ್ಪಡಲು ಬಯಸದಿರುವುದರಿಂದ, ನಿಮಗೆ ಲೈಂಗಿಕ ಸಂಭೋಗಗಳನ್ನು ಅನುಭವಿಸಲು ಒತ್ತಾಯಿಸಲ್ಪಟ್ಟಿರುವ ಅನಿಸಿಕೆಯಾಗಬಹುದು.
ಜನಪ್ರಿಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ, ಎಲ್ಲಾ ಯುವ ಜನರು ತಮ್ಮ ಕನ್ಯಾವಸ್ಥೆಯನ್ನು ಬಿಟ್ಟುಕೊಡಲು ಆತುರರಾಗಿರುವುದಿಲ್ಲ. ಉದಾಹರಣೆಗೆ, ಎಸ್ತರ್ ಎಂಬ ಹೆಸರಿನ ಅವಿವಾಹಿತ ಯುವತಿಯನ್ನು ಪರಿಗಣಿಸಿರಿ. ಅವಳು ಒಂದು ವೈದ್ಯಕೀಯ ತಪಾಸಣೆಯನ್ನು ಮಾಡಿಸಿಕೊಳ್ಳುತ್ತಿದ್ದಳು. ಆಗ ಅವಳ ವೈದ್ಯನು ಅವಳನ್ನು ವಾಸ್ತವವಾಗಿ ಹೀಗೆ ವಿಚಾರಿಸಿದನು: “ನೀನು ಯಾವ ವಿಧದ ಗರ್ಭನಿರೋಧವನ್ನು ಉಪಯೋಗಿಸುತ್ತಿದ್ದೀ?” “ನಾನು ಯಾವುದೇ ಗರ್ಭನಿರೋಧವನ್ನು ಉಪಯೋಗಿಸುತ್ತಿಲ್ಲ” ಎಂದು ಎಸ್ತರ್ ಉತ್ತರಿಸಿದಾಗ, ಅವಳ ವೈದ್ಯನು ಉದ್ಗರಿಸಿದ್ದು: “ಏನು! ನೀನು ಗರ್ಭವತಿಯಾಗಲು ಬಯಸುತ್ತೀಯೊ? ನೀನು ಯಾವುದೇ ಗರ್ಭನಿರೋಧವನ್ನು ಉಪಯೋಗಿಸದಿರುವಲ್ಲಿ, ನೀನು ಗರ್ಭವತಿಯಾಗದಿರುವುದನ್ನು ಹೇಗೆ ನಿರೀಕ್ಷಿಸುತ್ತೀ?” ಎಸ್ತರ್ ಉತ್ತರಿಸಿದ್ದು: “ಏಕೆಂದರೆ ನಾನು ಸಂಭೋಗ ಮಾಡುತ್ತಿಲ್ಲ!”
ಅವಳ ವೈದ್ಯನು ಅವಳನ್ನು ಅವಿಶ್ವಾಸದಿಂದ ದಿಟ್ಟಿಸಿದನು. “ಇದು ನಂಬಲಸಾಧ್ಯವಾದ ವಿಷಯ” ಎಂದು ಅವನು ಹೇಳಿದನು. “ಇಲ್ಲಿಗೆ 13 ವರ್ಷ ಪ್ರಾಯದ ಮಕ್ಕಳು ಬರುತ್ತಾರೆ, ಮತ್ತು ಅವರು ಕನ್ಯೆಯರಾಗಿರುವುದಿಲ್ಲ. ನೀನು ಅಪರೂಪದ ವ್ಯಕ್ತಿಯಾಗಿದ್ದೀ.”
ಎಸ್ತರಳನ್ನು “ಅಪರೂಪದ” ವ್ಯಕ್ತಿಯನ್ನಾಗಿ ಮಾಡಿದ್ದು ಯಾವುದು? ಅವಳು ಬೈಬಲಿನ ಈ ಬುದ್ಧಿವಾದಕ್ಕೆ ವಿಧೇಯಳಾದಳು: “ದೇಹವು ಹಾದರ [“ವಿವಾಹಪೂರ್ವದ ಸಂಭೋಗವನ್ನೂ ಒಳಗೊಂಡು,” NW]ಕ್ಕೋಸ್ಕರ ಇರುವಂಥದಲ್ಲ, . . . ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ.” (1 ಕೊರಿಂಥ 6:13, 18) ಹೌದು, ಅವಳು ವಿವಾಹಪೂರ್ವದ ಸಂಭೋಗವನ್ನು ದೇವರ ವಿರುದ್ಧವಾಗಿ ಗೈಯುವ ಒಂದು ಗಂಭೀರ ಪಾಪವೆಂದು ಗ್ರಹಿಸಿದಳು! “ದೇವರ ಚಿತ್ತವೇನಂದರೆ ನೀವು . . . ಹಾದರಕ್ಕೆ ದೂರವಾಗಿರಬೇಕು” ಎಂದು 1 ಥೆಸಲೊನೀಕ 4:3 ಹೇಳುತ್ತದೆ. ಬೈಬಲು ವಿವಾಹಪೂರ್ವದ ಸಂಭೋಗವನ್ನು ಏಕೆ ನಿಷೇಧಿಸುತ್ತದೆ?
ತದನಂತರದ ಪರಿಣಾಮಗಳು
ಬೈಬಲ್ ಸಮಯಗಳಲ್ಲಿ ಸಹ, ಕೆಲವರು ವಿವಾಹಪೂರ್ವದ ಸಂಭೋಗದಲ್ಲಿ ಒಳಗೂಡಿದರು. “ಬಾ, ಬೆಳಗಿನ ತನಕ ಬೇಕಾದಷ್ಟು ರಮಿಸುವ, ಕಾಮವಿಲಾಸಗಳಿಂದ ಸಂತೋಷಿಸುವ” ಎಂದು ಹೇಳುತ್ತಾ, ಒಬ್ಬ ಅನೈತಿಕ ಸ್ತ್ರೀಯು ಯುವ ಪುರುಷನೊಬ್ಬನನ್ನು ಸಂಭೋಗಕ್ಕಾಗಿ ಆಮಂತ್ರಿಸಬಹುದು. (ಜ್ಞಾನೋಕ್ತಿ 7:18) ಆದರೂ, ಇಂದು ಆನಂದಿಸಿದಂತಹ ಸುಖಾನುಭವಗಳು, ನಾಳೆ ವೇದನೆಯನ್ನು ಉಂಟುಮಾಡಬಲ್ಲವು ಎಂದು ಬೈಬಲ್ ಎಚ್ಚರಿಸಿತು. “ಜಾರಸ್ತ್ರೀಯ ತುಟಿಗಳಲ್ಲಾದರೋ ಜೇನುಗರೆಯುವದು, ಅವಳ ಮಾತು ಎಣ್ಣೆಗಿಂತಲೂ ನಯವಾಗಿದೆ” ಎಂದು ಸೊಲೊಮೋನನು ಗಮನಿಸಿದನು. “ಅವಳು ಕಡೆಯಲ್ಲಿ ವಿಷದಂತೆ ಕಹಿಯೂ ಇಬ್ಬಾಯಿಕತ್ತಿಯಂತೆ ತೀಕ್ಷ್ಣವೂ ಆಗುವಳು” ಎಂದು ಅವನು ಮುಂದುವರಿಸಿದನು.—ಜ್ಞಾನೋಕ್ತಿ 5:3, 4.
ಸಂಭವಿಸಸಾಧ್ಯವಿರುವ ತದನಂತರದ ಪರಿಣಾಮಗಳಲ್ಲಿ ಒಂದು, ರತಿ ರವಾನಿತ ರೋಗವನ್ನು ಸೋಂಕಿಸಿಕೊಳ್ಳುವುದಾಗಿದೆ. ಅನೇಕ ವರ್ಷಗಳ ಬಳಿಕ, ಒಂದು ಲೈಂಗಿಕ ಅನುಭವವು ಮಾರ್ಪಡಿಸಲಾಗದ ಹಾನಿಯನ್ನು, ಬಹುಶಃ ಬಂಜೆತನ ಅಥವಾ ಗಂಭೀರವಾದ ಒಂದು ಆರೋಗ್ಯ ಸಮಸ್ಯೆಯನ್ನು ಉಂಟುಮಾಡಿದೆಯೆಂಬುದನ್ನು ಒಬ್ಬನು ತಿಳಿದುಕೊಳ್ಳುವಾಗ ಆಗುವ ಹೃದಯವೇದನೆಯನ್ನು ಊಹಿಸಿಕೊಳ್ಳಿರಿ! ಜ್ಞಾನೋಕ್ತಿ 5:11 (NW) ಎಚ್ಚರಿಸುವಂತೆ, “ನಿಮ್ಮ ಶರೀರ ಹಾಗೂ ನಿಮ್ಮ ದೇಹವು ಕ್ಷೀಣಿಸಿದಾಗ, ನಿಮ್ಮ ಭವಿಷ್ಯತ್ತಿನಲ್ಲಿ ನೀವು ವ್ಯಥೆಪಡಬೇಕಾಗುವುದು.” ವಿವಾಹಪೂರ್ವದ ಸಂಭೋಗವು ಜಾರಜತೆ (184-5ನೆಯ ಪುಟಗಳನ್ನು ನೋಡಿರಿ), ಗರ್ಭಪಾತ, ಮತ್ತು ಅಪ್ರಾಪ್ತ ವಿವಾಹಕ್ಕೆ ಸಹ ನಡಿಸುತ್ತದೆ. ಪ್ರತಿಯೊಂದಕ್ಕೂ ಅದರದ್ದೇ ಆದ ವೇದನಾಭರಿತ ಪರಿಣಾಮಗಳಿವೆ. ಹೌದು, ವಿವಾಹಪೂರ್ವದ ಸಂಭೋಗದಲ್ಲಿ ಒಳಗೂಡುತ್ತಿರುವ ಒಬ್ಬರು, ನಿಜವಾಗಿಯೂ ‘ಅವನ ಅಥವಾ ಅವಳ ಸ್ವಂತ ದೇಹದ ವಿರುದ್ಧವಾಗಿ ಪಾಪಮಾಡುತ್ತಾರೆ.’—1 ಕೊರಿಂಥ 6:18, NW.
ಅಂತಹ ಅಪಾಯಗಳನ್ನು ಗ್ರಹಿಸಿಕೊಳ್ಳುತ್ತಾ, ಯೇಲ್ ಜರ್ನಲ್ ಆಫ್ ಬಯಾಲಜಿ ಆ್ಯಂಡ್ ಮೆಡಿಸಿನ್ ಎಂಬ ಪತ್ರಿಕೆಯಲ್ಲಿ ಡಾ. ರಿಚರ್ಡ್ ಲೀ ಬರೆದುದು: “ಅತ್ಯಂತ ವಿಶ್ವಾಸಾರ್ಹವಾದ ಹಾಗೂ ವಿಶೇಷವಾದ, ಖರ್ಚು ಮತ್ತು ವಿಷಪರಿಣಾಮವು ಅತಿ ಕಡಿಮೆಯಾಗಿರುವ, ಗರ್ಭಾವಸ್ಥೆಯನ್ನೂ ರತಿಸಂಬಂಧಿತ ಬೇಗುದಿಯನ್ನೂ ತಡೆಗಟ್ಟುವ, ಪುರಾತನ, ಗೌರವಾರ್ಹ, ಹಾಗೂ ಆರೋಗ್ಯಕರವಾದ ಕನ್ಯಾವಸ್ಥೆಯನ್ನು ಉಪೇಕ್ಷಿಸುತ್ತಾ, ಗರ್ಭಧಾರಣೆಯನ್ನು ತಡೆಗಟ್ಟುವುದರಲ್ಲಿ ಮತ್ತು ರತಿರೋಗಕ್ಕೆ ಚಿಕಿತ್ಸೆಮಾಡುವುದರಲ್ಲಿನ ನಮ್ಮ ಮಹಾ ವಿಜಯಗಳ ಕುರಿತಾಗಿ ನಾವು ನಮ್ಮ ಯುವ ಜನರೊಂದಿಗೆ ಜಂಬಕೊಚ್ಚಿಕೊಳ್ಳುತ್ತೇವೆ.”
ದೋಷಿಭಾವ ಮತ್ತು ಆಶಾಭಂಗ
ಇದಲ್ಲದೆ ಅನೇಕ ಯುವ ಜನರು, ವಿವಾಹಪೂರ್ವದ ಸಂಭೋಗವನ್ನು ಅತ್ಯಂತ ಆಶಾಭಂಗಗೊಳಿಸುವಂತಹದ್ದಾಗಿ ಕಂಡುಕೊಂಡಿದ್ದಾರೆ. ಫಲಿತಾಂಶವೇನು? ದೋಷಿಭಾವ ಮತ್ತು ಕುಂದಿದ ಸ್ವಗೌರವದ ಅನಿಸಿಕೆಗಳೇ. ಇಪ್ಪತ್ತಮೂರು ವರ್ಷ ಪ್ರಾಯದ ಡೆನಿಸ್ ಒಪ್ಪಿಕೊಂಡದ್ದು: “ಅದೊಂದು ದೊಡ್ಡ ನಿರಾಶೆಯಾಗಿತ್ತು—ಒಳ್ಳೆಯ ಅಥವಾ ಪ್ರೀತಿಯ ಹೃತ್ಪೂರ್ವಕ ಅನಿಸಿಕೆಯಾಗಬೇಕಾಗಿತ್ತಾದರೂ, ವಾಸ್ತವವಾಗಿ ಅದು ಹಾಗಾಗಲಿಲ್ಲ. ಬದಲಾಗಿ ಆ ಕೃತ್ಯವು ಎಷ್ಟು ಕೆಟ್ಟದ್ದಾಗಿತ್ತು ಎಂಬುದರ ಸಂಪೂರ್ಣ ಗ್ರಹಿಕೆಯು ನನ್ನನ್ನು ಬಾಧಿಸಿತು. ನನ್ನ ಆತ್ಮಸಂಯಮದ ಕೊರತೆಯ ಕುರಿತು ನಾನು ತೀರ ನಾಚಿಕೆಪಟ್ಟೆ.” ಒಬ್ಬ ಯುವತಿಯು ನಿವೇದಿಸಿದ್ದು: “ಅಸಹ್ಯವಾದ ಆಘಾತದೊಂದಿಗೆ ನಾನು ವಾಸ್ತವತೆಗೆ ಹಿಂದಿರುಗಿದೆ. . . . ಪಾರ್ಟಿ ಮುಗಿದಿತ್ತು ಮತ್ತು ನನಗೆ ಜಿಗುಪ್ಸೆಯ, ಕೀಳಾದ, ಹಾಗೂ ಅಶ್ಲೀಲವಾದ ಅನಿಸಿಕೆಯಾಯಿತು. ‘ವಿಷಯವು ಕೆಟ್ಟದ್ದಕ್ಕೆ ನಡಿಸುವ ಮೊದಲು ನೀನೇಕೆ ತಡೆಯಲಿಲ್ಲ?’ ಎಂದು ಅವನು ಹೇಳಿದ್ದು ಕೇಳಿ, ನನಗೆ ಇನ್ನಷ್ಟು ಕೆಟ್ಟದೆನಿಸಿತು.”
ಡಾ. ಜೇ ಸೇಗಲ್ರಿಗನುಸಾರ, ಅಂತಹ ಪ್ರತಿಕ್ರಿಯೆಗಳು ಅಪರೂಪವೇನಲ್ಲ. 2,436 ಮಂದಿ ಕಾಲೇಜ್ ವಿದ್ಯಾರ್ಥಿಗಳ ಲೈಂಗಿಕ ಚಟುವಟಿಕೆಗಳನ್ನು ಅಭ್ಯಾಸಿಸಿದ ಬಳಿಕ, ಅವರು ತೀರ್ಮಾನಿಸಿದ್ದು: “ಅಸಂತೃಪ್ತಿಕರವಾದ ಮತ್ತು ನಿರಾಶಾದಾಯಕವಾದ ಪ್ರಥಮ [ಲೈಂಗಿಕ ಸಂಭೋಗ] ಅನುಭವಗಳು, ಸಂತೃಪ್ತಿಕರ ಮತ್ತು ಉತ್ತೇಜಕವಾದ ಅನುಭವಗಳನ್ನು ಹೆಚ್ಚುಕಡಿಮೆ ಎರಡಕ್ಕೆ ಒಂದರ ಪ್ರಮಾಣದಲ್ಲಿ ಮೀರಿಸಿದವು. ಪುರುಷರು ಹಾಗೂ ಸ್ತ್ರೀಯರು—ಇಬ್ಬರೂ, ತಾವು ಬಹಳವಾಗಿ ನಿರಾಶೆಗೊಂಡಿದ್ದೆವೆಂದು ನೆನಪಿಸಿಕೊಂಡರು.” ವಿವಾಹಿತ ದಂಪತಿಗಳು ಸಹ, ಲೈಂಗಿಕ ವಿಷಯಗಳ ಸಂಬಂಧದಲ್ಲಿ ಕೆಲವೊಮ್ಮೆ ತೊಂದರೆಗಳನ್ನು ಹೊಂದಿರಬಹುದೆಂಬುದು ಒಪ್ಪತಕ್ಕದ್ದೇ. ಆದರೆ ನಿಜವಾದ ಪ್ರೀತಿ ಹಾಗೂ ಬದ್ಧತೆಯಿರುವ ಒಂದು ವಿವಾಹದಲ್ಲಿ, ಅಂತಹ ಸಮಸ್ಯೆಗಳನ್ನು ಸಾಮಾನ್ಯವಾಗಿ ಬಗೆಹರಿಸಸಾಧ್ಯವಿದೆ.
ಸ್ವೇಚ್ಛಾ ಲೈಂಗಿಕತೆಗೆ ತೆರುವ ಬೆಲೆ
ಕೆಲವು ಯುವ ಜನರು, ಸಂಭೋಗಮಾಡುವುದರ ಕುರಿತು ದೋಷಿಭಾವವನ್ನು ತಾಳುವುದೇ ಇಲ್ಲ. ಇದರಿಂದಾಗಿ ಅವರು ಬೇರೆ ಬೇರೆ ಸಹಭಾಗಿಗಳೊಂದಿಗೆ ಸಂಭೋಗ ನಡಿಸಲು ಪ್ರಯತ್ನಿಸುತ್ತಾ, ಇಂದ್ರಿಯ ಸುಖತೃಪ್ತಿಯನ್ನು ಅರಸುತ್ತಾ ಹೋಗುತ್ತಾರೆ. ಸಂಶೋಧಕರಾದ ರಾಬರ್ಟ್ ಸಾರೆನ್ಸೆನ್, ಹದಿವಯಸ್ಕ ಲೈಂಗಿಕತೆಯ ಕುರಿತಾದ ತಮ್ಮ ಅಧ್ಯಯನದಲ್ಲಿ ಗಮನಿಸಿದ್ದೇನೆಂದರೆ, ಅಂತಹ ಯುವ ಜನರು ತಮ್ಮ ಸ್ವೇಚ್ಛಾ ಲೈಂಗಿಕತೆಗಾಗಿ ಬೆಲೆಯನ್ನು ತೆರುತ್ತಾರೆ. ಸಾರೆನ್ಸೆನ್ ಬರೆಯುವುದು: “ನಮ್ಮ ವೈಯಕ್ತಿಕ ಸಂದರ್ಶನಗಳಲ್ಲಿ, ಅನೇಕರು [ಸ್ವೇಚ್ಛಾ ಲೈಂಗಿಕತೆಯಲ್ಲಿ ಒಳಗೂಡುವ ಯುವ ಜನರು] . . . ತಾವು ಯಾವುದೇ ಉದ್ದೇಶವಿಲ್ಲದೆ ಮತ್ತು ಸ್ವತೃಪ್ತಿರಹಿತವಾಗಿ ಕಾರ್ಯನಡಿಸುತ್ತಿದ್ದೇವೆಂಬುದಾಗಿ ನಂಬುತ್ತೇವೆಂದು ಬಹಿರಂಗವಾಗಿ ಹೇಳುತ್ತಾರೆ.” ಇವರಲ್ಲಿ ನಲ್ವತ್ತಾರು ಪ್ರತಿಶತ ಮಂದಿ, “ನಾನೀಗ ಜೀವಿಸುತ್ತಿರುವ ರೀತಿಯಲ್ಲಿ, ನನ್ನ ಸಾಮರ್ಥ್ಯಗಳಲ್ಲಿ ಹೆಚ್ಚಿನವು ವ್ಯರ್ಥವಾಗುತ್ತಿವೆ” ಎಂಬ ಹೇಳಿಕೆಯನ್ನು ಒಪ್ಪಿಕೊಂಡರು. ಸಾರೆನ್ಸೆನ್ ಇನ್ನೂ ಕಂಡುಕೊಂಡದ್ದೇನೆಂದರೆ, ಈ ಸ್ವೇಚ್ಛಾ ಲೈಂಗಿಕತೆಯಲ್ಲಿ ಒಳಗೂಡುವ ಯುವ ಜನರು ಕಡಿಮೆ “ಆತ್ಮವಿಶ್ವಾಸ ಮತ್ತು ಆತ್ಮಾಭಿಮಾನ”ವನ್ನು ವರದಿಸಿದರು.
ಜ್ಞಾನೋಕ್ತಿ 5:9 (NW) ಹೇಳುವಂತೆಯೇ ಇದೆ: ಅನೈತಿಕತೆಯಲ್ಲಿ ಒಳಗೂಡುವವರು “[ತಮ್ಮ] ಘನತೆಯನ್ನು ಪರಾಧೀನಮಾಡುತ್ತಾರೆ.”
ಅದುಮರುದಿನ ಬೆಳಗ್ಗೆ
ಹುಡುಗ ಹುಡುಗಿಯರು ನಿಷಿದ್ಧ ಸಂಭೋಗಗಳನ್ನು ನಡಿಸಿದ ಬಳಿಕ, ಅವರು ಅನೇಕವೇಳೆ ಒಬ್ಬರನ್ನೊಬ್ಬರು ವಿಭಿನ್ನ ದೃಷ್ಟಿಯಿಂದ ನೋಡುತ್ತಾರೆ. ಹುಡುಗಿಯ ಕಡೆಗಿನ ತನ್ನ ಭಾವನೆಗಳು ಈ ಮುಂಚೆ ಇದ್ದಷ್ಟು ಗಾಢವಾಗಿಲ್ಲವೆಂದು ಒಬ್ಬ ಹುಡುಗನು ಕಂಡುಕೊಳ್ಳಬಹುದು. ಅವನಿಗೆ ಅವಳು ಕಡಿಮೆ ಆಕರ್ಷಕವಾಗಿ ಕಂಡುಬರಲೂಬಹುದು. ಇನ್ನೊಂದು ಕಡೆಯಲ್ಲಿ, ಹುಡುಗಿಗೆ ತಾನು ಶೋಷಿತಳೆಂಬ ಅನಿಸಿಕೆಯಾಗಬಹುದು. ಯುವ ಪುರುಷನಾದ ಅಮ್ನೋನನ ಕುರಿತು ಮತ್ತು ಕನ್ಯೆ ತಾಮರಳಲ್ಲಿ ಅವನೆಷ್ಟು ವಿರಹಿಯಾಗಿದ್ದನೆಂಬುದರ ಕುರಿತಾದ ಬೈಬಲ್ ವೃತ್ತಾಂತವನ್ನು ಜ್ಞಾಪಿಸಿಕೊಳ್ಳಿರಿ. ಆದರೂ, ಅವಳೊಂದಿಗೆ ಸಂಭೋಗನಡೆಸಿದ ಬಳಿಕ, “ಅವನಿಗೆ ಆಕೆಯಲ್ಲಿ ತುಂಬ ದ್ವೇಷಹುಟ್ಟಿತು.”—2 ಸಮುವೇಲ 13:15.
ಮರೀಯ ಎಂಬ ಹೆಸರಿನ ಹುಡುಗಿಯೊಬ್ಬಳಿಗೆ ತದ್ರೀತಿಯ ಅನುಭವವಾಯಿತು. ಲೈಂಗಿಕ ಸಂಭೋಗ ಮಾಡಿದ ಬಳಿಕ, ಅವಳು ಒಪ್ಪಿಕೊಂಡದ್ದು: “(ನನ್ನ ದೌರ್ಬಲ್ಯಕ್ಕಾಗಿ) ನಾನು ನನ್ನನ್ನೇ ದ್ವೇಷಿಸಿದೆ. ಮತ್ತು ನಾನು ನನ್ನ ಬಾಯ್ಫ್ರೆಂಡ್ನನ್ನೂ ದ್ವೇಷಿಸಿದೆ. ವಾಸ್ತವದಲ್ಲಿ, ನಮ್ಮನ್ನು ಹೆಚ್ಚು ಆಪ್ತತೆಗೆ ತರಬಹುದೆಂದು ನಾವು ಭಾವಿಸಿದ ಲೈಂಗಿಕ ಸಂಭೋಗಗಳು, ನಮ್ಮ ಸಂಬಂಧವನ್ನು ಕೊನೆಗೊಳಿಸಿದವು. ನಾನು ಪುನಃ ಅವನನ್ನು ನೋಡಲೂ ಬಯಸಲಿಲ್ಲ.” ಹೌದು, ವಿವಾಹಪೂರ್ವದ ಸಂಭೋಗವನ್ನು ನಡೆಸುವ ಮೂಲಕ, ಹುಡುಗ ಹುಡುಗಿಯರು ಎಂದಿಗೂ ಹಿಂದೆ ಬರಲಾಗದಂತಹ ಒಂದು ರೇಖೆಯನ್ನು ದಾಟಿಹೋಗುತ್ತಾರೆ!
ಕೌಟುಂಬಿಕ ಜೀವನದ ಕ್ಷೇತ್ರದಲ್ಲಿ, ಗೌರವಾನಿತ್ವ ಸಂಶೋಧಕರಾಗಿರುವ ಪೌಲ್ ಏಚ್. ಲ್ಯಾಂಡಿಸ್ ಗಮನಿಸುವುದು: “[ವಿವಾಹಪೂರ್ವದ ಸಂಭೋಗದ] ತಾತ್ಕಾಲಿಕ ಪರಿಣಾಮವು, ಸಂಬಂಧವನ್ನು ಬಲಪಡಿಸಲಿಕ್ಕಾಗಿರಬಹುದು. ಆದರೆ ದೀರ್ಘಾವಧಿಯ ಪರಿಣಾಮಗಳು ತೀರ ಭಿನ್ನವಾಗಿರಬಹುದು.” ವಾಸ್ತವವಾಗಿ, ಲೈಂಗಿಕ ಸಂಭೋಗದಿಂದ ದೂರವಿರುವವರಿಗಿಂತಲೂ, ಲೈಂಗಿಕ ಸಂಭೋಗ ನಡೆಸುವ ಹುಡುಗ ಹುಡುಗಿಯರು ಸಂಬಂಧವನ್ನು ಕೊನೆಗಾಣಿಸುವುದು ಹೆಚ್ಚು ಸಂಭವನೀಯ! ಕಾರಣವೇನು? ನಿಷಿದ್ಧ ಲೈಂಗಿಕತೆಯು ಈರ್ಷ್ಯೆ ಹಾಗೂ ಅಪನಂಬಿಕೆಯನ್ನು ಉತ್ಪಾದಿಸುತ್ತದೆ. ಒಬ್ಬ ಯುವ ವ್ಯಕ್ತಿಯು ಒಪ್ಪಿಕೊಂಡದ್ದು: “ಕೆಲವು ವ್ಯಕ್ತಿಗಳು, ಸಂಭೋಗವನ್ನು ನಡೆಸಿದ ಬಳಿಕ, ‘ಅವಳು ನನ್ನೊಂದಿಗೆ ಸಂಭೋಗ ನಡೆಸಿರುವುದಾದರೆ, ಅವಳು ಬೇರೆ ವ್ಯಕ್ತಿಯೊಂದಿಗೂ ಸಂಭೋಗ ನಡೆಸಿರಬಹುದು’ ಎಂದು ಆಲೋಚಿಸುತ್ತಾರೆ. ವಾಸ್ತವ ಸಂಗತಿಯೇನಂದರೆ, ನನಗೂ ಆ ರೀತಿಯ
ಅನಿಸಿಕೆಯಾಯಿತು. . . . ನಾನು ವಿಪರೀತ ಈರ್ಷ್ಯೆಯುಳ್ಳವನೂ ಸಂದೇಹಾಸ್ಪದನೂ ಶಂಕಾಸ್ಪದನೂ ಆಗಿದ್ದೆ.”“ಹೊಟ್ಟೆಕಿಚ್ಚು [“ಈರ್ಷ್ಯೆ,” NW]ಪಡದ . . . ಮರ್ಯಾದೆಗೆಟ್ಟು ನಡೆಯದ, ಸ್ವಪ್ರಯೋಜನವನ್ನು ಚಿಂತಿಸದ” ನಿಷ್ಕಪಟವಾದ ಪ್ರೀತಿಗಿಂತ ಇದೆಷ್ಟು ಭಿನ್ನವಾಗಿದೆ. (1 ಕೊರಿಂಥ 13:4, 5) ಶಾಶ್ವತವಾದ ಸಂಬಂಧಗಳನ್ನು ಕಟ್ಟುವ ಪ್ರೀತಿಯು, ಅಂಧ ಕಾಮೋದ್ರೇಕದ ಮೇಲೆ ಆಧಾರಿಸಿರುವುದಿಲ್ಲ.
ಜಿತೇಂದ್ರಿಯತ್ವದ ಪ್ರಯೋಜನಗಳು—ಶಾಂತಿ ಮತ್ತು ಸ್ವಗೌರವ
ಹಾಗಿದ್ದರೂ, ಜಿತೇಂದ್ರಿಯನಾಗಿ ಉಳಿಯುವುದು, ಒಬ್ಬ ಯುವ ವ್ಯಕ್ತಿಗೆ ವಿಪತ್ಕಾರಕ ಪರಿಣಾಮಗಳಿಂದ ತಪ್ಪಿಸಕೊಳ್ಳಲು ಸಹಾಯ ಮಾಡುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡುತ್ತದೆ. ತನ್ನ ಬಾಯ್ಫ್ರೆಂಡ್ಗಾಗಿ ತೀವ್ರವಾದ ಪ್ರೀತಿಯಿದ್ದಾಗ್ಯೂ, ಜಿತೇಂದ್ರಿಯಳಾಗಿ ಉಳಿದ ಒಬ್ಬ ಯುವ ಕನ್ಯೆಯ ಕುರಿತು ಬೈಬಲು ತಿಳಿಸುತ್ತದೆ. ಫಲಿತಾಂಶವಾಗಿ, ಅವಳು ಹೆಮ್ಮೆಯಿಂದ ಹೀಗೆ ಹೇಳಸಾಧ್ಯವಾಯಿತು: “ನಾನು ಕೋಟೆ; ನನ್ನ ಸ್ತನಗಳು ಅದರ ಬುರುಜುಗಳು.” ಅವಳು ಅನೈತಿಕ ಒತ್ತಡದ ಕೆಳಗೆ ಸುಲಭವಾಗಿ ‘ತೆರೆದುಕೊಳ್ಳುವ ಜೋಲಾಡುತ್ತಿರುವ ಬಾಗಿಲು’ ಆಗಿರಲಿಲ್ಲ. ಅವಳು ನೈತಿಕವಾಗಿ ತಲಪಲಸಾಧ್ಯವಾದ ಬುರುಜುಗಳುಳ್ಳ ಕೋಟೆಯೊಂದರ ಹತ್ತಲಾಗದ ಗೋಡೆಯಂತೆ ಸ್ಥಿರವಾಗಿ ನಿಂತಳು! ಅವಳು “ನಿರ್ಮಲೆ” ಎಂದು ಕರೆಸಿಕೊಳ್ಳಲು ಅರ್ಹಳಾಗಿದ್ದಳು. ಮತ್ತು ತನ್ನ ಭಾವೀ ಗಂಡನ ಕುರಿತು ಹೀಗೆ ಹೇಳಶಕ್ತಳಾಗಿದ್ದಳು, “ನಾನು ಅವನ ದೃಷ್ಟಿಯಲ್ಲಿ ಶಾಂತಿಯನ್ನು ಕಂಡುಕೊಳ್ಳುವವಳಂತಿರುವೆನು” (NW). ಅವಳ ಸ್ವಂತ ಮನಶ್ಶಾಂತಿಯು, ಅವರಿಬ್ಬರ ನಡುವಿನ ಮನಃತೃಪ್ತಿಗೆ ನೆರವನ್ನಿತ್ತಿತು.—ಪರಮಗೀತ 6:9, 10; 8:9, 10.
ಈ ಹಿಂದೆ ಉಲ್ಲೇಖಿಸಲ್ಪಟ್ಟ ಜಿತೇಂದ್ರಿಯ ಹುಡುಗಿಯಾದ ಎಸ್ತರ್, ತದ್ರೀತಿಯ ಆಂತರಿಕ ಶಾಂತಿ ಮತ್ತು ಆತ್ಮಾಭಿಮಾನವನ್ನು ಹೊಂದಿದ್ದಳು. ಅವಳು ಹೇಳಿದ್ದು: “ನನ್ನ ಕುರಿತು ನನಗೆ ಒಳ್ಳೆಯ ಅನಿಸಿಕೆಯಾಯಿತು. ಜೊತೆಕೆಲಸಗಾರರು ನನ್ನನ್ನು ಅಪಹಾಸ್ಯಮಾಡುವಾಗಲೂ, ನಾನು ನನ್ನ ಕನ್ಯಾವಸ್ಥೆಯನ್ನು ಒಂದು ವಜ್ರದೋಪಾದಿ, ಅಮೂಲ್ಯವೆಂದು ವೀಕ್ಷಿಸಿದೆ. ಏಕೆಂದರೆ ಅದು ಅಷ್ಟೊಂದು ಅಪೂರ್ವವಾಗಿದೆ.” ಇದಲ್ಲದೆ, ಎಸ್ತರಳಂತಹ ಯುವ
ಜನರು, ಒಂದು ದೋಷಿ ಮನಸ್ಸಾಕ್ಷಿಯಿಂದ ಬಾಧಿಸಲ್ಪಡುವುದಿಲ್ಲ. “ಯೆಹೋವ ದೇವರೊಂದಿಗೆ ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ಪಡೆದಿರುವುದಕ್ಕಿಂತಲೂ ಹೆಚ್ಚು ಉತ್ತಮವಾದ ವಿಷಯವು ಬೇರಾವುದೂ ಇಲ್ಲ” ಎಂಬುದಾಗಿ 19 ವರ್ಷ ಪ್ರಾಯದ ಕ್ರೈಸ್ತನಾದ ಸ್ಟೆಫನ್ ಹೇಳಿದನು.‘ಆದರೆ ಹುಡುಗ ಹುಡುಗಿಯರು ಲೈಂಗಿಕ ಸಂಭೋಗವನ್ನು ನಡಿಸದಿರುವುದಾದರೆ, ಅವರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು ಹೇಗೆ?’ ಎಂದು ಕೆಲವು ಯುವ ಜನರು ಚಿಂತಿಸುತ್ತಾರೆ.
ಶಾಶ್ವತವಾದ ಆಪ್ತತೆಯನ್ನು ಕಟ್ಟುವುದು
ಸಂಭೋಗವು ತಾನೇ ಒಂದು ಚಿರಸ್ಥಾಯಿ ಸಂಬಂಧವನ್ನು ರಚಿಸಲಾರದು; ಅಥವಾ ಮುತ್ತನ್ನು ಕೊಡುವಂತಹ ಮಮತೆಯ ತೋರ್ಪಡಿಸುವಿಕೆಗಳು ಸಹ ಚಿರಸ್ಥಾಯಿ ಸಂಬಂಧವನ್ನು ರಚಿಸಲಾರವು. ಆ್ಯನ್ ಎಂಬ ಹೆಸರಿನ ಒಬ್ಬ ಯುವತಿಯು ಎಚ್ಚರಿಸುವುದು: “ಕೆಲವೊಮ್ಮೆ ನೀವು ಅತಿ ಬೇಗನೆ ಶಾರೀರಿಕವಾಗಿ ಅತಿ ಆಪ್ತರಾಗಸಾಧ್ಯವಿದೆ ಎಂಬುದನ್ನು ನಾನು ಅನುಭವದಿಂದ ಕಲಿತುಕೊಂಡೆ.” ಹುಡುಗ ಹುಡುಗಿಯರು ಪರಸ್ಪರ ಅತಿಯಾಗಿ ಮಮತೆಯನ್ನು ತೋರ್ಪಡಿಸುತ್ತಾ ತಮ್ಮ ಸಮಯವನ್ನು ಕಳೆಯುವಾಗ, ಅರ್ಥಭರಿತ ಸಂಸರ್ಗವು ನಿಂತುಹೋಗುತ್ತದೆ. ಹೀಗೆ ಅವರು ವಿವಾಹದ ಬಳಿಕ ಮೇಲೆ ಬರಸಾಧ್ಯವಿರುವ ಗಂಭೀರ ಭಿನ್ನಾಭಿಪ್ರಾಯಗಳಿಗೆ ಬಣ್ಣಕಟ್ಟಬಹುದು. ತದನಂತರ ಆ್ಯನ್ ಇನ್ನೊಬ್ಬ ಪುರುಷನೊಂದಿಗೆ ಡೇಟಿಂಗ್ ಆರಂಭಿಸಿದಾಗ, ಶಾರೀರಿಕವಾಗಿ ತೀರ ಆಪ್ತಳಾಗುವುದನ್ನು ತಡೆಗಟ್ಟಲು ಅವಳು ತುಂಬಾ ಜೋಕೆಯಿಂದಿದ್ದಳು. ಕಟ್ಟಕಡೆಗೆ ಅವಳು ಅವನನ್ನೇ ವಿವಾಹವಾದಳು. ಆ್ಯನ್ ವಿವರಿಸುವುದು: “ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಮತ್ತು ಜೀವಿತದಲ್ಲಿನ ನಮ್ಮ ಗುರಿಗಳನ್ನು ಚರ್ಚಿಸುವುದರಲ್ಲಿ ನಾವು ನಮ್ಮ ಸಮಯವನ್ನು ಕಳೆದೆವು. ನಾನು ಎಂತಹ ರೀತಿಯ ವ್ಯಕ್ತಿಯನ್ನು ವಿವಾಹವಾಗುತ್ತಿದ್ದೇನೆ ಎಂಬುದನ್ನು ನಾನು ತಿಳಿದುಕೊಂಡೆ. ವಿವಾಹದ ಬಳಿಕ ಕೇವಲ ಹಿತಕರವಾದ ಆಶ್ಚರ್ಯಗಳಿದ್ದವು.”
ಆ್ಯನ್ಗೆ ಮತ್ತು ಅವಳ ಬಾಯ್ಫ್ರೆಂಡ್ಗೆ, ಅಂತಹ ಆತ್ಮಸಂಯಮವನ್ನು
ತೋರಿಸುವುದು ಕಷ್ಟಕರವಾಗಿತ್ತೊ? “ಹೌದು, ಕಷ್ಟಕರವಾಗಿತ್ತು!” ಎಂದು ಆ್ಯನ್ ಒಪ್ಪಿಕೊಂಡಳು. “ನಾನು ಸ್ವಾಭಾವಿಕವಾಗಿ ಮಮತೆ ತೋರಿಸುವ ವ್ಯಕ್ತಿಯಾಗಿದ್ದೇನೆ. ಆದರೆ ನಾವು ಅದರ ಅಪಾಯಗಳ ಕುರಿತು ಮಾತಾಡಿ, ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡಿದೆವು. ನಾವಿಬ್ಬರೂ ದೇವರನ್ನು ಮೆಚ್ಚಿಸಲು ಮತ್ತು ನಮ್ಮ ಮುಂಬರುವ ವಿವಾಹವನ್ನು ಹಾಳುಮಾಡದಿರಲು ಬಹಳವಾಗಿ ಅಪೇಕ್ಷಿಸಿದೆವು.”ಆದರೆ ಈ ಹಿಂದೆ ಲೈಂಗಿಕ ಅನುಭವವನ್ನು ಹೊಂದಿರುವುದು, ಒಬ್ಬ ಹೊಸ ಗಂಡನಿಗೆ ಅಥವಾ ಹೆಂಡತಿಗೆ ಸಹಾಯ ಮಾಡುವುದಿಲ್ಲವೊ? ಇಲ್ಲ, ಇದಕ್ಕೆ ವ್ಯತಿರಿಕ್ತವಾಗಿ, ಇದು ಅನೇಕವೇಳೆ ವೈವಾಹಿಕ ಆಪ್ತತೆಯಿಂದ ಅಪಕರ್ಷಿಸುತ್ತದೆ! ವಿವಾಹಪೂರ್ವದ ಸಂಬಂಧಗಳಲ್ಲಿ, ಪ್ರಮುಖತೆಯು ಸ್ವತೃಪ್ತಿಯ ಮೇಲೆ, ಲೈಂಗಿಕತೆಯ ಶಾರೀರಿಕ ಅಂಶಗಳ ಮೇಲೆ ನೀಡಲ್ಪಡುತ್ತದೆ. ಪರಸ್ಪರ ಗೌರವವು, ಅನಿಯಂತ್ರಿತ ಕಾಮೋದ್ರೇಕದಿಂದ ಶಿಥಿಲಗೊಳಿಸಲ್ಪಡುತ್ತದೆ. ಒಮ್ಮೆ ಅಂತಹ ಸ್ವಾರ್ಥ ವಿಧಾನಗಳನ್ನು ರೂಢಿಸಿಕೊಂಡ ಮೇಲೆ, ಅವುಗಳನ್ನು ನಿಲ್ಲಿಸುವುದು ಕಷ್ಟಕರ. ಮತ್ತು ಕಟ್ಟಕಡೆಗೆ ಅದು ಸಂಬಂಧವನ್ನು ಹಾಳುಮಾಡಸಾಧ್ಯವಿದೆ.
ಆದರೆ, ವಿವಾಹದಲ್ಲಿನ ಒಂದು ಸ್ವಸ್ಥಕರವಾದ ಆಪ್ತ ಸಂಬಂಧವು, ನಿಗ್ರಹವನ್ನು, ಆತ್ಮಸಂಯಮವನ್ನು ಕೇಳಿಕೊಳ್ಳುತ್ತದೆ. ಕೇಂದ್ರಬಿಂದುವು, ತೆಗೆದುಕೊಳ್ಳುವುದರ ಮೇಲಲ್ಲ, ಬದಲಾಗಿ ‘ಒಬ್ಬನ ಲೈಂಗಿಕ ಪಾಲನ್ನು ಕೊಡುವುದರ’ ಮೇಲೆ ಕೇಂದ್ರೀಕೃತವಾಗಿರಬೇಕು. (1 ಕೊರಿಂಥ 7:3, 4) ಜಿತೇಂದ್ರಿಯರಾಗಿ ಉಳಿಯುವುದು, ಅಂತಹ ಆತ್ಮಸಂಯಮವನ್ನು ಬೆಳೆಸಿಕೊಳ್ಳುವಂತೆ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಸ್ವಂತ ಅಪೇಕ್ಷೆಗಳಿಗಿಂತಲೂ, ಇತರರ ಕ್ಷೇಮಕ್ಕಾಗಿ ನಿಸ್ವಾರ್ಥ ಚಿಂತೆಯನ್ನು ಪ್ರಥಮವಾಗಿಡುವಂತೆ ಅದು ನಿಮಗೆ ಕಲಿಸುತ್ತದೆ. ವೈವಾಹಿಕ ಸಂತೃಪ್ತಿಯು, ಕೇವಲ ಶಾರೀರಿಕ ಅಂಶಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂಬುದನ್ನೂ ನೆನಪಿನಲ್ಲಿಡಿರಿ. ಸಮಾಜಶಾಸ್ತ್ರಜ್ಞ ಸೀಮೋರ್ ಫಿಶರ್ ಹೇಳುವುದೇನಂದರೆ, ಒಬ್ಬ ಸ್ತ್ರೀಯ ಲೈಂಗಿಕ ಪ್ರತಿಕ್ರಿಯೆಯು, ಅವಳು “ಆಪ್ತತೆ, ನಿಕಟ ಪರಿಚಯ, ಮತ್ತು ವಿಶ್ವಾಸಪಾತ್ರತೆ”ಯನ್ನು ಹೊಂದಿರುವುದರ ಮೇಲೆ ಹಾಗೂ ಅವಳ ಗಂಡನು “ತನ್ನ ಹೆಂಡತಿಯೊಂದಿಗೆ ಸಮೀಕರಿಸುವ ಸಾಮರ್ಥ್ಯ”ದ ಮೇಲೆ “ಮತ್ತು . . . ಅವಳಿಗೆ ಅವನಲ್ಲಿ ಎಷ್ಟು ಭರವಸೆಯಿದೆ” ಎಂಬುದರ ಮೇಲೆ ಸಹ ಆಧಾರಿಸಿರುತ್ತದೆ.
ಆಸಕ್ತಿಕರವಾಗಿ, 177 ಮಂದಿ ವಿವಾಹಿತ ಸ್ತ್ರೀಯರ ಅಧ್ಯಯನವೊಂದರಲ್ಲಿ, ವಿವಾಹಪೂರ್ವದ ಸಂಭೋಗದಲ್ಲಿ ಒಳಗೂಡಿದ್ದವರಲ್ಲಿ ಮುಕ್ಕಾಲಂಶದಷ್ಟು ಮಂದಿಗೆ, ವಿವಾಹದ ಮೊದಲ ಎರಡು ವಾರಗಳಲ್ಲಿ ಲೈಂಗಿಕ ತೊಂದರೆಗಳು ಇದ್ದವೆಂದು ವರದಿಸಿದರು. ಇದಲ್ಲದೆ, ದೀರ್ಘಾವಧಿಯ ಲೈಂಗಿಕ ತೊಂದರೆಗಳನ್ನು ವರದಿಸಿದವರೆಲ್ಲರಿಗೂ “ವಿವಾಹಪೂರ್ವದ ಸಂಭೋಗದ ಇತಿಹಾಸವಿತ್ತು.” ಅಷ್ಟು ಮಾತ್ರವಲ್ಲದೆ, ವಿವಾಹಪೂರ್ವದ ಸಂಭೋಗದಲ್ಲಿ ಒಳಗೂಡುತ್ತಿದ್ದವರು, ವಿವಾಹದ ಬಳಿಕ ವ್ಯಭಿಚಾರ ಗೈಯುವುದು ಎರಡರಷ್ಟು ಹೋಶೇಯ 4:11.
ಸಂಭವನೀಯವೆಂದೂ ಸಂಶೋಧನೆಯು ತೋರಿಸಿದೆ! ಬೈಬಲಿನ ಮಾತುಗಳು ಎಷ್ಟು ಸತ್ಯ: ‘ಜಾರತ್ವವು . . . ಒಳ್ಳೆಯ ಉದ್ದೇಶವನ್ನು ಕೆಡಿಸುತ್ತದೆ.’—ಆದುದರಿಂದ, ‘ನೀವು ಏನನ್ನು ಬಿತ್ತುತ್ತೀರೋ ಅದನ್ನೇ ಕೊಯ್ಯುವಿರಿ.’ (ಗಲಾತ್ಯ 6:7, 8) ಕಾಮೋದ್ರೇಕವನ್ನು ಬಿತ್ತಿ, ಸಂದೇಹಗಳು ಹಾಗೂ ಅಭದ್ರತೆಗಳ ಸಮೃದ್ಧ ಬೆಳೆಯನ್ನು ಕೊಯ್ಯಿರಿ. ಆದರೆ ನೀವು ಆತ್ಮಸಂಯಮವನ್ನು ಬಿತ್ತುವಲ್ಲಿ, ನೀವು ನಿಷ್ಠೆ ಹಾಗೂ ಭದ್ರತೆಯ ಕೊಯ್ಲನ್ನು ಕೊಯ್ಯುವಿರಿ. ಈ ಮುಂಚೆ ಉಲ್ಲೇಖಿಸಲ್ಪಟ್ಟ ಎಸ್ತರ್, ಅಂದಿನಿಂದ—ಅನೇಕ ವರ್ಷಗಳಿಂದ ವಿವಾಹವಾಗಿ ಸಂತೋಷವಾಗಿದ್ದಾಳೆ. ಅವಳ ಗಂಡನು ಹೀಗನ್ನುತ್ತಾನೆ, “ಮನೆಯಲ್ಲಿ ಪತ್ನಿಯ ಬಳಿಗೆ ಬಂದು, ನಾವಿಬ್ಬರು ನಮಗೆ ಮಾತ್ರ ಸೇರಿದವರೆಂದು ತಿಳಿಯುವುದು ಅವರ್ಣನೀಯವಾದ ಒಂದು ಆನಂದವಾಗಿದೆ. ಈ ದೃಢಭರವಸೆಯ ಭಾವನೆಯನ್ನು, ಯಾವುದೇ ವಿಷಯವು ಸ್ಥಾನಪಲ್ಲಟಮಾಡಲು ಸಾಧ್ಯವಿಲ್ಲ.”
ವಿವಾಹದ ತನಕ ಕಾಯುವವರು, ತಾವು ದೇವರ ಮನಸ್ಸನ್ನು ಸಂತೋಷಪಡಿಸುತ್ತಿದ್ದೇವೆಂದು ತಿಳಿದವರಾಗಿದ್ದು, ಮನಶ್ಶಾಂತಿಯನ್ನೂ ಅನುಭವಿಸುತ್ತಾರೆ. ಆದರೂ, ಈ ದಿವಸಗಳಲ್ಲಿ ಜಿತೇಂದ್ರಿಯರಾಗಿ ಉಳಿಯುವುದು ಬಹಳ ಕಷ್ಟಕರವಾಗಿದೆ. ಜಿತೇಂದ್ರಿಯರಾಗಿ ಉಳಿಯಲು ನಿಮಗೆ ಯಾವುದು ಸಹಾಯ ಮಾಡಬಲ್ಲದು?
ಚರ್ಚೆಗಾಗಿ ಪ್ರಶ್ನೆಗಳು
◻ ನಿಮಗೆ ತಿಳಿದಿರುವ ಯುವ ಜನರ ನಡುವೆ ವಿವಾಹಪೂರ್ವದ ಸಂಭೋಗವು ಎಷ್ಟು ಚಾಲ್ತಿಯಲ್ಲಿದೆ? ಇದು ನಿಮಗೆ ಯಾವುದೇ ಸಮಸ್ಯೆಗಳನ್ನು ಅಥವಾ ಒತ್ತಡಗಳನ್ನು ಉಂಟುಮಾಡುತ್ತದೊ?
◻ ವಿವಾಹಪೂರ್ವದ ಸಂಭೋಗದ ತದನಂತರದ ನಕಾರಾತ್ಮಕ ಪರಿಣಾಮಗಳಲ್ಲಿ ಕೆಲವು ಯಾವುವು? ಈ ರೀತಿಗಳಲ್ಲಿ ಕಷ್ಟಾನುಭವಿಸಿರುವ ಯಾವುದೇ ಯುವ ಜನರು ನಿಮಗೆ ಗೊತ್ತಿದ್ದಾರೊ?
◻ ಹದಿವಯಸ್ಕ ಗರ್ಭಾವಸ್ಥೆಯ ಸಮಸ್ಯೆಗೆ ಗರ್ಭನಿರೋಧವು ಪರಿಹಾರವಾಗಿದೆಯೊ?
◻ ನಿಷಿದ್ಧ ಲೈಂಗಿಕತೆಯಲ್ಲಿ ಒಳಗೂಡಿದ ಬಳಿಕ, ಕೆಲವರಿಗೆ ದೋಷಿಭಾವದ ಹಾಗೂ ಆಶಾಭಂಗದ ಅನಿಸಿಕೆ ಏಕೆ ಆಗುತ್ತದೆ?
◻ ಅವಿವಾಹಿತ ಹುಡುಗ ಹುಡುಗಿಯರು ಪರಸ್ಪರ ಆಪ್ತರಾಗಲು, ಲೈಂಗಿಕ ಸಂಭೋಗಗಳು ಸಹಾಯ ಮಾಡುವವೆಂದು ನೀವು ಭಾವಿಸುತ್ತೀರೊ? ನೀವೇಕೆ ಹಾಗೆ ಉತ್ತರಿಸುವಿರಿ?
◻ ಹುಡುಗ ಹುಡುಗಿಯರು, ಡೇಟಿಂಗ್ ಮಾಡುತ್ತಿರುವಾಗಲೇ ಒಬ್ಬರನ್ನೊಬ್ಬರು ಹೇಗೆ ತಿಳಿದುಕೊಳ್ಳಸಾಧ್ಯವಿದೆ?
◻ ವಿವಾಹದ ತನಕ ಕನ್ಯಾವಸ್ಥೆಯಲ್ಲಿ ಉಳಿಯುವುದರ ಪ್ರಯೋಜನಗಳು ಯಾವುವೆಂದು ನೀವು ಎಣಿಸುತ್ತೀರಿ?
[ಪುಟ 182 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಇನ್ನೂ ಒಬ್ಬ ಹದಿವಯಸ್ಕನಾಗಿದ್ದಾಗಲೇ, ಲೈಂಗಿಕ ಸಂಭೋಗವನ್ನು ಮಾಡಿರದವನು, ಅಸಾಧಾರಣನಾದ ಯುವ ವ್ಯಕ್ತಿಯಾಗಿದ್ದಾನೆ.”—ದಿ ಆ್ಯಲನ್ ಗಟ್ಮಾಕರ್ ಸಂಸ್ಥೆ
[ಪುಟ 187 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಅದೊಂದು ದೊಡ್ಡ ನಿರಾಶೆಯಾಗಿತ್ತು—ಒಳ್ಳೆಯ ಅಥವಾ ಪ್ರೀತಿಯ ಹೃತ್ಪೂರ್ವಕ ಅನಿಸಿಕೆಯಾಗಬೇಕಾಗಿತ್ತಾದರೂ, ವಾಸ್ತವವಾಗಿ ಅದು ಹಾಗಾಗಲಿಲ್ಲ”
[ಪುಟ 190 ರಲ್ಲಿರುವ ಸಂಕ್ಷಿಪ್ತ ವಿವರಣೆ]
ವಿವಾಹಪೂರ್ವದ ಸಂಭೋಗವನ್ನು ನಡೆಸುವ ಮೂಲಕ, ಹುಡುಗ ಹುಡುಗಿಯರು ಎಂದಿಗೂ ಹಿಂದೆ ಬರಲಾಗದಂತಹ ಒಂದು ರೇಖೆಯನ್ನು ದಾಟಿಹೋಗುತ್ತಾರೆ!
[ಪುಟ 184,185ರಲ್ಲಿರುವಚೌಕ]
‘ಅದು ನನಗೆ ಸಂಭವಿಸಲಾರದು!’—ಹದಿಪ್ರಾಯದ ಗರ್ಭಧಾರಣೆಯ ಸಮಸ್ಯೆ
“ಪ್ರತಿ ವರ್ಷ, 10 ಮಂದಿ ಹದಿವಯಸ್ಕರಲ್ಲಿ ಒಬ್ಬರಿಗಿಂತಲೂ ಹೆಚ್ಚು ಮಂದಿ ಗರ್ಭವತಿಯರಾಗುತ್ತಾರೆ. ಮತ್ತು ಅದರ ಅನುಪಾತವು ಹೆಚ್ಚುತ್ತಿದೆ. ವಿಧಾನಗಳು ಬದಲಾಗದಿದ್ದಲ್ಲಿ, 10 ಮಂದಿ ಯುವತಿಯರಲ್ಲಿ ನಾಲ್ವರು, ಇನ್ನೂ ತಮ್ಮ ಹದಿಪ್ರಾಯದಲ್ಲಿರುವಾಗಲೇ ಕಡಿಮೆ ಪಕ್ಷ ಒಮ್ಮೆ ಗರ್ಭವತಿಯರಾಗುತ್ತಾರೆ.” ಹೀಗೆಂದು ಹದಿವಯಸ್ಕ ಗರ್ಭಧಾರಣೆ: ಇನ್ನೂ ಬಗೆಹರಿಯದೆ ಇರುವ ಒಂದು ಸಮಸ್ಯೆ (ಇಂಗ್ಲಿಷ್) ವರದಿಸುತ್ತದೆ. ಮತ್ತು ಯಾವ ರೀತಿಯ ಹುಡುಗಿಯರು ಗರ್ಭವತಿಯರಾಗುತ್ತಾರೆ? ಪ್ರೌಢಾವಸ್ಥೆ (ಇಂಗ್ಲಿಷ್) ಎಂಬ ಪತ್ರಿಕೆಯು ಹೇಳಿದ್ದು: “ಗರ್ಭವತಿಯರಾಗುವ ಶಾಲಾಪ್ರಾಯದ ಹುಡುಗಿಯರು, ಎಲ್ಲಾ ಸಾಮಾಜಿಕಆರ್ಥಿಕ ವರ್ಗಗಳಿಂದ ಬರುತ್ತಾರೆ . . . ಎಲ್ಲಾ ಕುಲಗಳು, ಎಲ್ಲಾ ನಂಬಿಕೆಗಳು, ಹಾಗೂ ದೇಶದ ಎಲ್ಲಾ ಭಾಗಗಳಿಂದ—ಗ್ರಾಮೀಣ ಹಾಗೂ ನಗರ—ಬರುತ್ತಾರೆ.”
ನಿಜವಾಗಿಯೂ ಗರ್ಭವತಿಯರಾಗಲು ಬಯಸುವ ಹುಡುಗಿಯರು, ಕಾರ್ಯತಃ ಕೊಂಚ ಮಂದಿ. 400ಕ್ಕಿಂತಲೂ ಹೆಚ್ಚು ಹದಿವಯಸ್ಕ ಗರ್ಭಿಣಿಯರ ಕುರಿತಾದ ತನ್ನ ಪ್ರಸಿದ್ಧ ಅಧ್ಯಯನದಲ್ಲಿ, ಫ್ರಾಂಕ್ ಫಸ್ಟನ್ಬರ್ಗ್ ಜೂನಿಯರ್ ಗಮನಿಸಿದ್ದೇನಂದರೆ, “ಸಂದರ್ಶನದಲ್ಲಿ ಅನೇಕರು ‘ಅದು ನನಗೆ ಸಂಭವಿಸುತ್ತದೆಂದು ನಾನೆಂದೂ ಆಲೋಚಿಸಿರಲಿಲ್ಲ’ ಎಂದು ಪುನಃ ಪುನಃ ಹೇಳಿದರು.”
ಆದರೆ ತಮ್ಮ ಸ್ನೇಹಿತೆಯರಲ್ಲಿ ಕೆಲವರು, ಗರ್ಭವತಿಯರಾಗದೇ ಲೈಂಗಿಕ ಸಂಭೋಗಗಳಲ್ಲಿ ಆನಂದಿಸಿದರೆಂಬುದನ್ನು ಗಮನಿಸಿ, ಕೆಲವು ಹುಡುಗಿಯರು ತಾವು ಸಹ ಹಾಗೆ ಮಾಡಸಾಧ್ಯವಿದೆಯೆಂದು ಭಾವಿಸಿದರು. ಫಸ್ಟನ್ಬರ್ಗ್ ಮತ್ತೂ ಹೇಳಿದ್ದು: “ಅವರಲ್ಲಿ ಅನೇಕರು ಹೇಳಿದ್ದೇನಂದರೆ, ‘ಆ ಕೂಡಲೆ’ ತಾವು ಗರ್ಭವತಿಯರಾಗಲು ಸಾಧ್ಯವಿತ್ತೆಂದು ನಾವು ಭಾವಿಸಿರಲಿಲ್ಲ. ತಾವು ಕೇವಲ ‘ಅಪರೂಪವಾಗಿ’ ಲೈಂಗಿಕ ಸಂಭೋಗಗಳನ್ನು ನಡಿಸಿದರೆ ಗರ್ಭವತಿಯರಾಗುವುದಿಲ್ಲ ಎಂದು ಇತರರು ಭಾವಿಸಿದ್ದರು . . . ಅವರು ದೀರ್ಘ ಸಮಯದ ವರೆಗೆ ಗರ್ಭಧರಿಸದೆ ಹೋದಂತೆ, ಅವರು ಹೆಚ್ಚು ಕಷ್ಟಕರವಾದ ಅಪಾಯಗಳನ್ನು ಸ್ವೀಕರಿಸುವ ಮನೋಭಾವದವರಾಗುವುದು ಹೆಚ್ಚು ಸಂಭವನೀಯ.”
ಹಾಗಿದ್ದರೂ, ಸತ್ಯವೇನೆಂದರೆ, ಒಬ್ಬರು ಲೈಂಗಿಕ ಸಂಬಂಧಗಳಲ್ಲಿ ಒಳಗೂಡುವಾಗಲೆಲ್ಲಾ, ಗರ್ಭಧರಿಸುವ ಅಪಾಯವು ಇದ್ದೇ ಇರುತ್ತದೆ. (544 ಮಂದಿ ಹುಡುಗಿಯರ ಒಂದು ಗುಂಪಿನಲ್ಲಿ, ‘ಬಹುಮಟ್ಟಿಗೆ ಐದನೇ ಒಂದಂಶ ಮಂದಿ, ಲೈಂಗಿಕ ಸಂಭೋಗವನ್ನು ಆರಂಭಿಸಿದ ಬಳಿಕ, ಆರು ತಿಂಗಳುಗಳೊಳಗೆ ಗರ್ಭವತಿಯರಾದರು.’) ರಾಬಿನ್ ಎಂಬ ಹೆಸರಿನ ಅವಿವಾಹಿತ ತಾಯಿಯಂತೆ, ಅನೇಕರು ಗರ್ಭನಿರೋಧವನ್ನು ಬಳಸದಿರುವ ಆಯ್ಕೆಯನ್ನು ಉದ್ದೇಶಪೂರ್ವಕವಾಗಿ ಮಾಡುತ್ತಾರೆ. ಅನೇಕ ಯುವತಿಯರು ಭಯಗೊಳ್ಳುವಂತೆ, ಗರ್ಭನಿರೋಧ ಮಾತ್ರೆಯನ್ನು ಉಪಯೋಗಿಸುವುದು, ತನ್ನ ಆರೋಗ್ಯವನ್ನು ಹಾಳುಮಾಡುವುದೆಂದು ರಾಬಿನ್ ಭಯಗೊಂಡಳು. ಅವಳು ಮತ್ತೂ ಒಪ್ಪಿಕೊಳ್ಳುವುದು: “ನಾನು ಗರ್ಭನಿರೋಧವನ್ನು ಪಡೆದುಕೊಳ್ಳಬೇಕಾದರೆ, ನಾನು ಏನೋ ತಪ್ಪು ಮಾಡುತ್ತಿದ್ದೇನೆ ಎಂಬುದನ್ನು ಸ್ವತಃ ಒಪ್ಪಿಕೊಳ್ಳಲೇಬೇಕಾಗಿತ್ತು. ನನಗದನ್ನು ಮಾಡಸಾಧ್ಯವಾಗಲಿಲ್ಲ. ಆದುದರಿಂದ ನಾನು ಯಾವ ಕ್ರಿಯೆಗೈಯುತ್ತಿದ್ದೆನೋ
ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ, ನನಗೆ ಏನೂ ಆಗುವುದಿಲ್ಲ ಎಂಬ ನಿರೀಕ್ಷೆಯಿಂದಿದ್ದೆ.”ಅಂತಹ ತರ್ಕಗಳು ಅವಿವಾಹಿತ ತಾಯಂದಿರ ನಡುವೆ ಸರ್ವಸಾಮಾನ್ಯವಾಗಿವೆ. ಫಸ್ಟನ್ಬರ್ಗ್ ಅವರ ಅಧ್ಯಯನದಲ್ಲಿ, “ಸಂಭೋಗ ನಡೆಸಲಾರಂಭಿಸಲು, ಸ್ತ್ರೀಯೊಬ್ಬಳು ವಿವಾಹದ ತನಕ ಕಾಯುವುದು ಅತ್ಯಂತ ಪ್ರಾಮುಖ್ಯವಾಗಿತ್ತೆಂದು ಹದಿವಯಸ್ಕರಲ್ಲಿ ಬಹುಮಟ್ಟಿಗೆ ಅರ್ಧ ಮಂದಿ ಹೇಳಿದರು . . . ನಿರ್ವಿವಾದಕರವಾಗಿ, ನುಡಿಗಳು ಹಾಗೂ ಕೃತ್ಯಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವಿತ್ತು . . . ಅವರಿಗೆ ಒಂದು ರೀತಿಯ ಮಟ್ಟಗಳಿದ್ದವು ಮತ್ತು ಅವರು ಇನ್ನೊಂದು ರೀತಿಯ ಮಟ್ಟಗಳಿಗನುಸಾರ ಜೀವಿಸಲು ಕಲಿತುಕೊಂಡಿದ್ದರು.” ಈ ಭಾವನಾತ್ಮಕ ಘರ್ಷಣೆಯು, “ಈ ಸ್ತ್ರೀಯರು ತಮ್ಮ ಲೈಂಗಿಕ ನಡವಳಿಕೆಯ ಪರಿಣಾಮಗಳೊಂದಿಗೆ ವಾಸ್ತವಿಕವಾಗಿ ವ್ಯವಹರಿಸುವುದನ್ನು ವಿಶೇಷವಾಗಿ ಕಷ್ಟಕರವನ್ನಾಗಿ ಮಾಡಿತು.”
ಗರ್ಭನಿರೋಧವನ್ನು ಉಪಯೋಗಿಸುವುದು ಸಹ, ಒಬ್ಬ ಹುಡುಗಿಯು ಅವಿವಾಹಿತ ತಾಯ್ತನದಿಂದ ತಪ್ಪಿಸಿಕೊಳ್ಳುವಳು ಎಂಬ ಖಾತ್ರಿಯನ್ನು ನೀಡುವುದಿಲ್ಲ. ಮಕ್ಕಳು ಮಕ್ಕಳನ್ನು ಹಡೆಯುವುದು (ಇಂಗ್ಲಿಷ್) ಎಂಬ ಪುಸ್ತಕವು ನಮಗೆ ಜ್ಞಾಪಕಹುಟ್ಟಿಸುವುದು: “ಪ್ರತಿಯೊಂದು ವಿಧಾನಕ್ಕೆ ಅಸಾಫಲ್ಯವಿರುತ್ತದೆ. . . . ಅವಿವಾಹಿತ ಹದಿಪ್ರಾಯಸ್ಥರು ನಿರಂತರವಾಗಿ ಗರ್ಭನಿರೋಧ ವಿಧಾನಗಳನ್ನು ಉಪಯೋಗಿಸುವುದಾದರೂ . . . ಪ್ರತಿ ವರ್ಷ 5,00,000 [ಅಮೆರಿಕದಲ್ಲಿ] ಮಂದಿ ಇನ್ನೂ ಗರ್ಭವತಿಯರಾಗಸಾಧ್ಯವಿದೆ.” ಪ್ಯಾಟ್ ಎಂಬ ಹೆಸರಿನ, 16 ವರ್ಷ ಪ್ರಾಯದ ಒಬ್ಬ ಅವಿವಾಹಿತ ತಾಯಿಯು, ಹೀಗೆ ಪ್ರಲಾಪಿಸುವವಳಾಗಿ ಉಲ್ಲೇಖಿಸಲ್ಪಟ್ಟಿದ್ದಾಳೆ: “ನಾನು ತಪ್ಪದೆ [ಗರ್ಭನಿರೋಧ ಮಾತ್ರೆಗಳನ್ನು] ತೆಗೆದುಕೊಂಡೆ. ನಿಜವಾಗಿಯೂ ನಾನು ಒಂದು ದಿನವೂ ತಪ್ಪಿಸಲಿಲ್ಲ.”
“ಮೋಸಹೋಗಬೇಡಿರಿ,” ಎಂದು ಬೈಬಲು ಎಚ್ಚರಿಸುತ್ತದೆ. “ದೇವರು ತಿರಸ್ಕಾರ ಸಹಿಸುವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.” (ಗಲಾತ್ಯ 6:7) ಒಬ್ಬಳು ಜಾರತ್ವದಿಂದ ಅಹಿತಕರವಾದ ಫಲವನ್ನು ಕೊಯ್ಯಸಾಧ್ಯವಿರುವ ವಿಧಾನಗಳಲ್ಲಿ ಕೇವಲ ಒಂದು ವಿಧಾನವು, ಗರ್ಭಧರಿಸುವಿಕೆಯಾಗಿದೆ. ಸಂತೋಷಕರವಾಗಿ, ಅನೈತಿಕತೆಯಲ್ಲಿ ಸಿಕ್ಕಿಹಾಕಿಕೊಂಡಿರುವವರಾಗಿ ಪರಿಣಮಿಸಿರುವ ಇತರ ಎಲ್ಲರಂತೆ, ಅವಿವಾಹಿತ ತಾಯಂದಿರು, ತಮ್ಮ ಜೀವಿತಗಳಲ್ಲಿ ಬದಲಾವಣೆ ಮಾಡಿಕೊಂಡು, ರಾಜ ದಾವೀದನಂತಹ ಪಶ್ಚಾತ್ತಾಪದ ಮನೋಭಾವದೊಂದಿಗೆ ದೇವರ ಸಮೀಪಕ್ಕೆ ಬರಸಾಧ್ಯವಿದೆ. ಅವನು ಪ್ರಾರ್ಥಿಸಿದ್ದು: “ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಿಗೊಳಿಸು.” (ಕೀರ್ತನೆ 51:2) ಪಶ್ಚಾತ್ತಾಪಪಡುವ ಅಂತಹ ಜನರು, ತಮ್ಮ ಮಕ್ಕಳನ್ನು “ಯೆಹೋವನ ನೀತಿಶಿಕ್ಷೆ ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ಬೆಳೆಸಲು ಮಾಡುವ ಪ್ರಯತ್ನಗಳನ್ನು ದೇವರು ಆಶೀರ್ವದಿಸುವನು.—ಎಫೆಸ 6:4, NW.
ಆದರೂ, ವಿವಾಹಪೂರ್ವದ ಲೈಂಗಿಕತೆಯಿಂದ ದೂರವಿರುವುದು ಹೆಚ್ಚು ಉತ್ತಮವಾದ ಸಂಗತಿಯಾಗಿದೆ! ನೀವು ಅದರ ಪರಿಣಾಮದಿಂದ ತಪ್ಪಿಸಿಕೊಳ್ಳಸಾಧ್ಯವಿದೆಯೆಂದು ಹೇಳುವವರಿಂದ ನೀವು ಮೋಸಹೋಗಬೇಡಿರಿ.
[ಪುಟ 183 ರಲ್ಲಿರುವ ಚಿತ್ರಗಳು]
ಅನೈತಿಕ ಸಂಭೋಗವನ್ನು ನಡಿಸಿದ ಒಬ್ಬ ಯುವ ವ್ಯಕ್ತಿಗೆ, ಅನೇಕವೇಳೆ ಶೋಷಣೆಗೊಳಗಾದ ಅಥವಾ ಆತ್ಮಗೌರವಕ್ಕೆ ಕುಂದುತರಲ್ಪಟ್ಟ ಅನಿಸಿಕೆಯೂ ಆಗುತ್ತದೆ
[ಪುಟ 186 ರಲ್ಲಿರುವ ಚಿತ್ರಗಳು]
ವಿವಾಹಪೂರ್ವದ ಸಂಭೋಗದಿಂದ ಅನೇಕವೇಳೆ ರತಿ ರವಾನಿತ ರೋಗಗಳು ಫಲಿಸುತ್ತವೆ
[ಪುಟ 188 ರಲ್ಲಿರುವ ಚಿತ್ರಗಳು]
ಮಮತೆಯ ವಿಪರೀತ ತೋರ್ಪಡಿಸುವಿಕೆಗಳು, ಹುಡುಗ ಹುಡುಗಿಯರನ್ನು ನೈತಿಕ ಅಪಾಯಗಳಿಗೆ ಒಡ್ಡಬಲ್ಲವು ಹಾಗೂ ಅರ್ಥಭರಿತ ಸಂಸರ್ಗವನ್ನು ನಿಲ್ಲಿಸಿಬಿಡಬಲ್ಲವು
[ಪುಟ 189 ರಲ್ಲಿರುವ ಚಿತ್ರಗಳು]
ವೈವಾಹಿಕ ಸಂತೋಷವು, ಹುಡುಗ ಹುಡುಗಿಯರ ಶಾರೀರಿಕ ಸಂಬಂಧಕ್ಕಿಂತಲೂ ಹೆಚ್ಚಿನ ವಿಷಯಗಳ ಮೇಲೆ ಅವಲಂಬಿಸಿರುತ್ತದೆ