ನಾನು ನನ್ನ ಅಧ್ಯಾಪಕನೊಂದಿಗೆ ಹೇಗೆ ಹೊಂದಿಕೊಂಡುಹೋಗಬಲ್ಲೆ?
ಅಧ್ಯಾಯ 20
ನಾನು ನನ್ನ ಅಧ್ಯಾಪಕನೊಂದಿಗೆ ಹೇಗೆ ಹೊಂದಿಕೊಂಡುಹೋಗಬಲ್ಲೆ?
“ಅನ್ಯಾಯಮಾಡುವ ಅಧ್ಯಾಪಕನನ್ನು ಕಂಡರೆ ನನಗಾಗುವುದಿಲ್ಲ” ಎಂದು ಯುವ ವಿಕಿ ಹೇಳುತ್ತಾಳೆ. ನಿಮಗೂ ಆ ರೀತಿ ಅನಿಸುವುದರಲ್ಲಿ ಸಂದೇಹವಿಲ್ಲ. ಆದರೂ, ಅಮೆರಿಕದ 1,60,000 ಯುವ ಜನರ 1981ರ ಸಮೀಕ್ಷೆಯಲ್ಲಿ, 76 ಪ್ರತಿಶತ ಮಂದಿ ಯಾವುದೋ ಒಂದು ಪಕ್ಷಪಾತದ ಕಾರಣ ತಮ್ಮ ಅಧ್ಯಾಪಕರನ್ನು ನಿಂದಿಸಿದರು!
ಯಾವುದನ್ನು ಯುವ ಜನರು ಉತ್ತಮ ದರ್ಜೆಯ ಕೆಲಸವೆಂದು ಭಾವಿಸುತ್ತಾರೋ ಅದಕ್ಕಾಗಿ ಕಡಿಮೆ ದರ್ಜೆಗಳನ್ನು ಪಡೆದುಕೊಳ್ಳುವಾಗ, ಅವರು ಬೇಸರಗೊಳ್ಳುತ್ತಾರೆ. ಶಿಸ್ತು ಅಧಿಕವಾಗಿ ಅಥವಾ ಅನಾವಶ್ಯಕವಾಗಿ ಕಂಡುಬರುವಾಗ ಅಥವಾ ಕುಲಸಂಬಂಧವಾದ ಪಕ್ಷಪಾತದಿಂದ ಪ್ರಚೋದಿತವಾಗಿದೆಯೆಂದು ತೋರಿಬರುವಾಗ, ಅವರು ಅಸಮಾಧಾನಗೊಳ್ಳುತ್ತಾರೆ. ಅಧ್ಯಾಪಕನ ಅಚ್ಚುಮೆಚ್ಚಿನ ವಿದ್ಯಾರ್ಥಿಯು ವಿಶೇಷ ಗಮನ ಅಥವಾ ಹೆಚ್ಚು ಅಭಿಮಾನದಿಂದ ಉಪಚರಿಸಲ್ಪಡುವಾಗ, ಅವರು ಕುಪಿತರಾಗುತ್ತಾರೆ.
ಅಧ್ಯಾಪಕರು ತಪ್ಪುಮಾಡದೆ ಇರುವುದಿಲ್ಲ ಎಂಬುದು ಒಪ್ಪತಕ್ಕ ವಿಷಯವೇ. ಅವರಿಗೆ ತಮ್ಮದೇ ಆದ ವರ್ತನಾವೈಖರಿಗಳು, ಸಮಸ್ಯೆಗಳು, ಮತ್ತು ಹೌದು, ಪೂರ್ವಕಲ್ಪಿತಾಭಿಪ್ರಾಯಗಳು ಇರುತ್ತವೆ. ಆದರೂ ಬೈಬಲು ಎಚ್ಚರಿಸುವುದು: “ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ.” (ಪ್ರಸಂಗಿ 7:9) ಅಧ್ಯಾಪಕರು ಸಹ “ಅನೇಕ ವಿಷಯಗಳಲ್ಲಿ . . . ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಶಿಕ್ಷಿತನೂ ತನ್ನ ದೇಹವನ್ನೆಲ್ಲಾ ಸ್ವಾದೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.” (ಯಾಕೋಬ 3:2) ಆದುದರಿಂದ ನಿಮ್ಮ ಅಧ್ಯಾಪಕರಿಗೆ, ಅವರು ನಿರ್ದೋಷಿಯೆಂಬ ಸಂದೇಹದ ಲಾಭವನ್ನು ಕೊಡಬಲ್ಲರೊ?
ತನ್ನ ಅಧ್ಯಾಪಕನು “ಪ್ರತಿಯೊಬ್ಬರಿಗೂ ಸಿಡುಕಿಮಾತಾಡುತ್ತಿದ್ದನು” ಎಂಬುದಾಗಿ ಫ್ರೆಡಿ ಎಂಬ ಹೆಸರಿನ ಯೌವನಸ್ಥನು ಗಮನಿಸಿದನು. ಫ್ರೆಡಿ ಚಾತುರ್ಯದಿಂದ ತನ್ನ ಅಧ್ಯಾಪಕನನ್ನು ಸಮೀಪಿಸಿ, ಈ ಒರಟು ನಡತೆಯ ಕಾರಣವನ್ನು ಕಂಡುಕೊಂಡನು. “ಅದೇನಂದರೆ, ಈ ಬೆಳಗ್ಗೆ ನನಗೆ ನನ್ನ ಕಾರಿನ ಸಮಸ್ಯೆಯಿತ್ತು. ಶಾಲೆಗೆ ಬರುವ ದಾರಿಯಲ್ಲಿ ಅದು ತೀರ ಬಿಸಿಯೇರಿ, ನಾನು ಶಾಲೆಗೆ ತಡವಾಗಿ ಬಂದೆ” ಎಂದು ಅಧ್ಯಾಪಕನು ವಿವರಿಸಿದನು.
ಅಧ್ಯಾಪಕರು ಮತ್ತು ಅವರ ಅಚ್ಚುಮೆಚ್ಚಿನ ವಿದ್ಯಾರ್ಥಿಗಳು
ಅಧ್ಯಾಪಕನ ಅಚ್ಚುಮೆಚ್ಚಿನ ವಿದ್ಯಾರ್ಥಿಗಳಿಗೆ ಸಲ್ಲುವ ವಿಶೇಷ ಅನುಗ್ರಹಗಳ ಕುರಿತೇನು? ಒಬ್ಬ ಅಧ್ಯಾಪಕನಿಗೆ ಅದ್ವಿತೀಯವಾದ ಬೇಡಿಕೆಗಳನ್ನೂ ಒತ್ತಡಗಳನ್ನೂ ಎದುರಿಸಲಿಕ್ಕಿರುತ್ತದೆ ಎಂಬುದನ್ನು ಮನಸ್ಸಿನಲ್ಲಿಡಿರಿ. ತರುಣರಾಗಿರುವುದು (ಇಂಗ್ಲಿಷ್) ಎಂಬ ಪುಸ್ತಕವು, ಅಧ್ಯಾಪಕರನ್ನು, “ಗಂಭೀರ ಬಿಕ್ಕಟ್ಟ”ನ್ನು ಎದುರಿಸುತ್ತಿರುವವರಂತೆ ವರ್ಣಿಸುತ್ತದೆ. ಅವರು “ಸಾಮಾನ್ಯವಾಗಿ ಯಾರ ಮನಸ್ಸುಗಳು ಬೇರೆ ಕಡೆಯಲ್ಲಿ ಅಲೆದಾಡುತ್ತಿರುತ್ತವೋ” ಅಂತಹ ಯುವ ಜನರ ಗುಂಪಿನ ಗಮನವನ್ನು ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸಬೇಕು. “. . . ಸಾಮಾನ್ಯವಾಗಿ ಯಾವ ವಿಷಯದ ಮೇಲೇ ಆಗಲಿ, 15 ನಿಮಿಷಗಳಿಗಿಂತ ಹೆಚ್ಚು ಸಮಯ ಮನಸ್ಸನ್ನು ಕೇಂದ್ರೀಕರಿಸುವ ಅಭ್ಯಾಸವಿರದ, ತುಂಬ ದುಗುಡದಿಂದ ಕೂಡಿದ, ಚಂಚಲಚಿತ್ತರಾದ ಹದಿವಯಸ್ಕರ ಒಂದು ಗುಂಪು ಅವರ ಮುಂದಿರುತ್ತದೆ.”
ಹಾಗಾದರೆ, ಯಾರು ಕಷ್ಟಪಟ್ಟು ಅಭ್ಯಾಸಮಾಡುತ್ತಾನೋ, ಗಮನವನ್ನು ಕೊಡುತ್ತಾನೋ, ಅವನನ್ನು ಅಥವಾ ಅವಳನ್ನು ಗೌರವದಿಂದ ಉಪಚರಿಸುತ್ತಾನೋ ಅಂತಹ ವಿದ್ಯಾರ್ಥಿಗೆ ಅಧ್ಯಾಪಕನು ಗಮನವನ್ನು ಧಾರಾಳವಾಗಿ ಕೊಡಬಹುದಾದರೆ ಅದರಲ್ಲಿ ಏನಾದರೂ ಆಶ್ಚರ್ಯವಿದೆಯೆ? ‘ಮುಖಸ್ತುತಿ ಮಾಡುವವರಂತೆ’ ತೋರುವವರಿಗೆ ನಿಮಗಿಂತಲೂ ಹೆಚ್ಚು ಗಮನವು ಕೊಡಲ್ಪಡುವುದು ನಿಮ್ಮಲ್ಲಿ ಕಟುಭಾವನೆಯನ್ನು ಉಂಟುಮಾಡಬಹುದೆಂಬುದು ನಿಜ. ಆದರೆ ಶಿಕ್ಷಣ ಸಂಬಂಧವಾದ ನಿಮ್ಮ ಆವಶ್ಯಕತೆಗಳು ನಿರ್ಲಕ್ಷಿಸಲ್ಪಡದಿರುವ ತನಕ, ಯಾವನೇ ಶ್ರದ್ಧಾವಂತ ವಿದ್ಯಾರ್ಥಿಯು ಅಧ್ಯಾಪಕನ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿರುವುದಾದರೆ ನೀವು ಯಾಕೆ ಕ್ಷೋಭೆಗೊಳ್ಳಬೇಕು ಅಥವಾ ಈರ್ಷ್ಯೆಪಡಬೇಕು? ಅದಲ್ಲದೆ, ನೀವು ಸಹ ಸ್ವಲ್ಪ ಹೆಚ್ಚು ಶ್ರದ್ಧಾವಂತರಾಗಿರುವುದು ಒಂದು ಒಳ್ಳೆಯ ಆಲೋಚನೆಯಾಗಿರಬಹುದು.
ತರಗತಿಕೋಣೆಯಲ್ಲಿ ಜಗಳ
ತನ್ನ ಅಧ್ಯಾಪಕನ ಕುರಿತಾಗಿ ವಿದ್ಯಾರ್ಥಿಯೊಬ್ಬನು ಹೇಳಿದ್ದು: “ನಾವೆಲ್ಲರೂ ಅವರ ಮೇಲೆ ಯುದ್ಧವನ್ನು ಘೋಷಿಸಿದ್ದೇವೆಂದು ನೆನಸುತ್ತಾ, ಮೊದಲು ನಮ್ಮ ಮೇಲೆ ಆಕ್ರಮಣಮಾಡಲು ಅವರು ನಿರ್ಧರಿಸಿದರು. ಅವರು ಮತಿಭ್ರಂಶ ವ್ಯಕ್ತಿಯಾಗಿದ್ದರು.” ಹಾಗಿದ್ದರೂ, ತಾವು ಸ್ವಲ್ಪ “ಮತಿಭ್ರಂಶ”ರಾಗಿರಲು ತಮಗೆ ಹಕ್ಕಿದೆಯೆಂದು ಅನೇಕ ಅಧ್ಯಾಪಕರು ಭಾವಿಸುತ್ತಾರೆ. ಬೈಬಲು ಮುಂತಿಳಿಸಿದಂತೆ, ಇವು “ನಿಭಾಯಿಸಲು ಕಷ್ಟಕರವಾದ ಕಠಿನ ಸಮಯ”ಗಳಾಗಿವೆ, ಮತ್ತು ವಿದ್ಯಾರ್ಥಿಗಳು ಅನೇಕವೇಳೆ “ಸ್ವನಿಯಂತ್ರಣವಿಲ್ಲದವರೂ, ಉಗ್ರರೂ, ಒಳ್ಳೆಯದನ್ನು ಪ್ರೀತಿಸದವರೂ” ಆಗಿರುತ್ತಾರೆ. (2 ತಿಮೊಥೆಯ 3:1-3, NW) ಆದುದರಿಂದ ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಹೇಳಿದ್ದು: “ಅನೇಕ ಪೌರ ಶಾಲಾ ಪ್ರದೇಶಗಳಲ್ಲಿರುವ ಅಧ್ಯಾಪಕರು, ಹಿಂಸಾಚಾರದ ಭಯದಿಂದ ಜೀವಿಸುತ್ತಾರೆ.”
ಅಧ್ಯಾಪಕರ ಕುರಿತಾಗಿ ಮಾಜಿ ಅಧ್ಯಾಪಕ ರೋಲೆಂಡ್ ಬೆಟ್ಸ್ ಹೇಳುವುದು: “ಮಕ್ಕಳು,
[ಸಾಂಕೇತಿಕವಾಗಿ] ಅವರನ್ನು ತಳ್ಳುವುದು, ಅವರನ್ನು ತಿವಿಯುವುದು, ಮತ್ತು ಅವರು ಎಷ್ಟರ ಮಟ್ಟಿಗೆ ಮಣಿಯುತ್ತಾರೆ ಅಥವಾ ತಾವು ಸಿಡಿಗುಟ್ಟುವುದಕ್ಕೆ ಮೊದಲು ಅವರು ಎಷ್ಟು ಬಾಗುತ್ತಾರೆ . . . ಎಂಬುದನ್ನು ಅವಲೋಕಿಸುವುದು, ತಮ್ಮ ಅಂತರ್ಗತ ಜವಾಬ್ದಾರಿಯಾಗಿದೆ ಎಂದು ಭಾವಿಸುತ್ತಾರೆ . . . ಅವರ ಛೇದನ ಬಿಂದುವಿಗೆ ಕೂದಲೆಳೆಯಷ್ಟು ಹತ್ತಿರ ಅಂತರವಿರುವ ತನಕ ತಾವು ಹೊಸ ಅಧ್ಯಾಪಕನನ್ನು ತಳ್ಳಿಬಿಟ್ಟಿದ್ದೇವೆಂದು ಮಕ್ಕಳು ಪರಿಗ್ರಹಿಸುವಾಗ, ಅವರೂ ಇನ್ನೂ ಸ್ವಲ್ಪ ತಳ್ಳುತ್ತಾರೆ.” ನೀವಾಗಲಿ ನಿಮ್ಮ ಸಹಪಾಠಿಗಳಾಗಲಿ ಅಧ್ಯಾಪಕರನ್ನು ರೇಗಿಸುವುದರಲ್ಲಿ ಭಾಗವಹಿಸಿದ್ದೀರೊ? ಹಾಗಿದ್ದಲ್ಲಿ ನಿಮ್ಮ ಅಧ್ಯಾಪಕನ ಪ್ರತಿಕ್ರಿಯೆಗೆ ಆಶ್ಚರ್ಯಪಡಬೇಡಿರಿ.ಬೈಬಲು ಹೇಳುವುದು: “ದಬ್ಬಾಳಿಕೆಯು ತಾನೇ ಜ್ಞಾನಿಯೊಬ್ಬನನ್ನು ಹುಚ್ಚನಾಗಿ ವರ್ತಿಸುವಂತೆ ಮಾಡಬಹುದು.” (ಪ್ರಸಂಗಿ 7:7, NW) ಕೆಲವು ಶಾಲೆಗಳಲ್ಲಿ ವ್ಯಾಪಕವಾಗಿರುವ ಭಯ ಮತ್ತು ಅಗೌರವದ ವಾತಾವರಣದಲ್ಲಿ, ಕೆಲವು ಅಧ್ಯಾಪಕರು ಅರ್ಥಭರಿತವಾಗಿಯೇ ವಿಪರೀತವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಕಟ್ಟುನಿಟ್ಟಿನ ಶಿಸ್ತುಪಾಲಕರಾಗುತ್ತಾರೆ. ಪ್ರೌಢಾವಸ್ಥೆಯ ಕುಟುಂಬ ಕೈಪಿಡಿ (ಇಂಗ್ಲಿಷ್) ಪುಸ್ತಕವು ಗಮನಿಸುವುದು: “ಯಾವ ವಿದ್ಯಾರ್ಥಿಗಳು . . . ತಮ್ಮ ನಡವಳಿಕೆಯಿಂದ ಅಧ್ಯಾಪಕರ ವಿಶ್ವಾಸಗಳನ್ನು ಅಲ್ಪವಾಗೆಣಿಸುವಂತೆ ತೋರುತ್ತಾರೋ ಅವರು, ಪ್ರತಿಯಾಗಿ ಅಲ್ಪವಾಗೆಣಿಸಲ್ಪಡುವುದು ಸಾಮಾನ್ಯ ವಿಷಯವಾಗಿದೆ.” ಹೌದು, ಹಗೆಸಾಧಕ ಅಧ್ಯಾಪಕನು ಅನೇಕವೇಳೆ ತನ್ನ ವಿದ್ಯಾರ್ಥಿಗಳಿಂದಲೇ ಹಾಗೆ ರೂಪಿಸಲ್ಪಡುತ್ತಾನೆ!
ತರಗತಿಯ ಕ್ರೂರವಾದ ಕುಚೇಷ್ಟೆಗಳ ಪರಿಣಾಮಗಳನ್ನೂ ಪರಿಗಣಿಸಿರಿ. ಯುವ ಜನರು ಬದಲಿ ಅಧ್ಯಾಪಕರಿಗೆ ಒಡ್ಡುವ “ಚಿತ್ರಹಿಂಸೆ, ಯಾತನೆ”ಯ ಕುರಿತು ಯುವ ವೆಲರಿಯು ಮಾತಾಡುವಾಗ, ಅವಳು ಸ್ವಲ್ಪ ವಿಪರೀತವಾಗಿ ಮಾತಾಡುತ್ತಾಳೆ. ರೋಲೆಂಡ್ ಬೆಟ್ಸ್ ಕೂಡಿಸುವುದು: “ಬದಲಿ ಅಧ್ಯಾಪಕರು ತಮ್ಮ ತರಗತಿಗಳಿಂದ ನಿಷ್ಕಾರುಣ್ಯವಾಗಿ ಅಟ್ಟಲ್ಪಡುತ್ತಾರೆ. ಅನೇಕವೇಳೆ ಕೋಪದಿಂದ ಸಿಡಿದೇಳುವ ಮತ್ತು ಕೆರಳಿಸಲ್ಪಡುವ ಮಟ್ಟದ ವರೆಗೂ ಒತ್ತಾಯಿಸಲ್ಪಡುತ್ತಾರೆ.” ತಾವು ಅದರಿಂದ ತಪ್ಪಿಸಿಕೊಳ್ಳಸಾಧ್ಯವಿದೆಯೆಂದು ನಿಶ್ಚಿತರಾಗಿದ್ದು, ವಿದ್ಯಾರ್ಥಿಗಳು ಒಡ್ಡೊಡ್ಡಾದ ವರ್ತನೆಯ—ತಮ್ಮ ಪುಸ್ತಕಗಳನ್ನು ಅಥವಾ ಪೆನ್ಸಿಲ್ಗಳನ್ನು ಏಕಕಾಲದಲ್ಲಿ ನೆಲದ ಮೇಲೆ ಬೀಳಿಸುವುದು—ಅನಿರೀಕ್ಷಿತ ಆಕ್ರಮಣಗಳನ್ನು ಮಾಡುವುದರಲ್ಲಿ ಆನಂದಪಡುತ್ತಾರೆ. ಅಥವಾ ‘ಮೂರ್ಖರಂತೆ ವರ್ತಿಸು’ವ ಮೂಲಕ ಮತ್ತು ಅವನು ಹೇಳುವ ಯಾವ ಮಾತೂ ತಮಗೆ ಅರ್ಥವಾಗುವುದಿಲ್ಲವೆಂಬಂತೆ ನಟಿಸುವ ಮೂಲಕ, ಅವರು ತಮ್ಮ ಅಧ್ಯಾಪಕನನ್ನು ಆಶಾಭಂಗಪಡಿಸಲು
ಪ್ರಯತ್ನಿಸಬಹುದು. “ನಾವು ವಿನೋದಕ್ಕಾಗಿ ಹಾನಿಮಾಡುತ್ತೇವೆ” ಎಂದು ಯುವ ಬಾಬಿ ಹೇಳುತ್ತಾನೆ.ಆದರೂ, ನೀವು ತರಗತಿಯ ಕ್ರೂರತ್ವವನ್ನು ಬಿತ್ತುವುದಾದರೆ, ನೀವು ಕೀಳು ಮನಸ್ಸಿನ, ಹಗೆಯ ವ್ಯಕ್ತಿತ್ವವಿರುವ ಅಧ್ಯಾಪಕನನ್ನು ಪಡೆಯುವುದರಲ್ಲಿ ಆಶ್ಚರ್ಯಚಕಿತರಾಗಬೇಡಿರಿ. (ಹೋಲಿಸಿರಿ ಗಲಾತ್ಯ 6:7.) ಈ ಸುವರ್ಣ ನಿಯಮವನ್ನು ನೆನಪಿನಲ್ಲಿಡಿರಿ: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ತರಗತಿಯ ಕುಚೇಷ್ಟೆಗಳಲ್ಲಿ ಸೇರಲು ನಿರಾಕರಿಸಿರಿ. ನಿಮ್ಮ ಅಧ್ಯಾಪಕನು ಹೇಳುವ ವಿಷಯಕ್ಕೆ ಗಮನಕೊಡುವವರಾಗಿರಿ. ಸಹಕರಿಸುವವರಾಗಿರಿ. ಬಹುಶಃ ಸಕಾಲದಲ್ಲಿ ಅವನು, ನಿಮ್ಮ ಕಡೆಗಾದರೂ ಸ್ವಲ್ಪ ಕಡಿಮೆ ಹಗೆಯುಳ್ಳವನಾಗಿ ಕಂಡುಬಂದಾನು.
‘ನನ್ನ ಅಧ್ಯಾಪಕನು ನನ್ನನ್ನು ಇಷ್ಟಪಡುವುದಿಲ್ಲ’
ಕೆಲವೊಮ್ಮೆ ವ್ಯಕ್ತಿತ್ವಗಳ ಘರ್ಷಣೆ ಅಥವಾ ಯಾವುದಾದರೂ ತಪ್ಪಭಿಪ್ರಾಯವು, ನಿಮ್ಮ ಅಧ್ಯಾಪಕನನ್ನು ನಿಮ್ಮ ವಿರುದ್ಧ ಏಳುವಂತೆ ಮಾಡುತ್ತದೆ; ಕೆಣಕಿ ಕೇಳುವ ಮನೋಭಾವವನ್ನು ದಂಗೆಯೋಪಾದಿ ಅಥವಾ ಒಂದು ಲಘುವಾದ ವಿಪರೀತ ಕಲ್ಪನೆಯನ್ನು ಮೂರ್ಖತನದೋಪಾದಿ ಅನರ್ಥಮಾಡಿಕೊಳ್ಳಲಾಗುತ್ತದೆ. ಮತ್ತು ಅಧ್ಯಾಪಕನೊಬ್ಬನು ನಿಮ್ಮನ್ನು ಇಷ್ಟಪಡದಿರುವಲ್ಲಿ, ಅವನು ನಿಮ್ಮನ್ನು ಕಂಗೆಡಿಸುವ ಅಥವಾ ಅಪಮಾನಮಾಡುವ ಪ್ರವೃತ್ತಿಯುಳ್ಳವನಾಗಿರಬಹುದು. ಪರಸ್ಪರ ಬದ್ಧವೈರವು ಹಸನಾಗಿ ಬೆಳೆಯಬಹುದು.
ಬೈಬಲು ಹೇಳುವುದು: “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. . . . ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.” (ರೋಮಾಪುರ 12:17, 18) ನಿಮ್ಮ ಅಧ್ಯಾಪಕನೊಂದಿಗೆ ಶತ್ರುತ್ವ ಬೆಳೆಸಿಕೊಳ್ಳದಿರಲು ಪ್ರಯತ್ನಿಸಿರಿ. ಅನಗತ್ಯವಾದ ಎದುರಿಸುವಿಕೆಗಳಿಂದ ದೂರವಿರಿ. ಆಪಾದನೆಗಾಗಿ ನಿಮ್ಮ ಅಧ್ಯಾಪಕನಿಗೆ ಯಾವುದೇ ನ್ಯಾಯಸಮ್ಮತ ಕಾರಣವನ್ನು ಕೊಡಬೇಡಿರಿ. ಅದಕ್ಕೆ ಬದಲಾಗಿ, ಸ್ನೇಹಪರರಾಗಿರಲು ಪ್ರಯತ್ನಿಸಿರಿ. ‘ಸ್ನೇಹಪರರಾಗಿಯೊ? ಅದೂ ಅವನ ಜೊತೆಗೊ?’ ಎಂದು ನೀವು ಕೇಳಬಹುದು. ಹೌದು, ನೀವು ತರಗತಿಗೆ ಬರುವಾಗ, ನಿಮ್ಮ ಅಧ್ಯಾಪಕನನ್ನು ಗೌರವಪೂರ್ಣವಾಗಿ ಅಭಿವಂದಿಸುವ ಮೂಲಕ ಶಿಷ್ಟಾಚಾರವನ್ನು ತೋರಿಸಿರಿ. ನಿಮ್ಮ ಪಟ್ಟುಬಿಡದ ವಿನಯಶೀಲತೆಯು, ಆಗಿಂದಾಗ್ಗೆ ಒಂದು ನಸುನಗುವು ಸಹ, ನಿಮ್ಮ ಕುರಿತಾದ ಅವನ ಅಭಿಪ್ರಾಯವನ್ನು ಬದಲಾಯಿಸಬಹುದು.—ಹೋಲಿಸಿರಿ ರೋಮಾಪುರ 12:20, 21.
ನೀವು ನಸುನಗುತ್ತ, ಯಾವಾಗಲೂ ಒಂದು ಸನ್ನಿವೇಶವನ್ನು ದಾಟಿಬರಲಾರಿರಿ ಎಂಬುದು ನಿಜ. ಆದರೆ ಪ್ರಸಂಗಿ 10:4 ಹೀಗೆ ಬುದ್ಧಿಹೇಳುತ್ತದೆ: “ದೊರೆಯು [ಅಥವಾ ಅಧಿಕಾರದಲ್ಲಿರುವ ವ್ಯಕ್ತಿಯು] ನಿನ್ನ ಮೇಲೆ ಸಿಟ್ಟುಗೊಂಡರೆ [ನಿನ್ನನ್ನು ನ್ಯಾಯವಿರುದ್ಧವಾಗಿ ಉಪಚರಿಸಿದರೆ] ಉದ್ಯೋಗವನ್ನು ಬಿಡಬೇಡ; ತಾಳ್ಮೆಯು ದೊಡ್ಡ ದೋಷಗಳನ್ನು ಅಡಗಿಸುತ್ತದಲ್ಲವೆ.” “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು” ಎಂಬುದನ್ನೂ ನೆನಪಿನಲ್ಲಿಡಿರಿ.—ಜ್ಞಾನೋಕ್ತಿ 15:1.
‘ನಾನು ಹೆಚ್ಚು ಉತ್ತಮವಾದ ದರ್ಜೆಗೆ ಯೋಗ್ಯನಾಗಿದ್ದೆ’
ಇದು ಸರ್ವಸಾಮಾನ್ಯವಾದ ದೂರಾಗಿದೆ. ಸಮಸ್ಯೆಯ ಕುರಿತು ನಿಮ್ಮ ಅಧ್ಯಾಪಕನೊಂದಿಗೆ ಮಾತಾಡಲು ಪ್ರಯತ್ನಿಸಿರಿ. ರಾಜ ದಾವೀದನ ಗಂಭೀರವಾದ ಒಂದು ಕುಂದುಕೊರತೆಯನ್ನು ಬಯಲುಮಾಡುವ ಕಷ್ಟಕರ ಕೆಲಸವನ್ನು, ನಾತಾನನು ಹೇಗೆ ನಿರ್ವಹಿಸಿದನೆಂಬುದನ್ನು ಬೈಬಲು ತಿಳಿಸುತ್ತದೆ. ನಾತಾನನು ನಿಂದಾತ್ಮಕವಾದ ಮಾತುಗಳನ್ನು ಕೂಗಿಹೇಳುತ್ತಾ ಅರಮನೆಯೊಳಗೆ ನುಗ್ಗಲಿಲ್ಲ. ಬದಲಾಗಿ ಅವನು ಜಾಣ್ಮೆಯಿಂದ ದಾವೀದನನ್ನು ಸಮೀಪಿಸಿದನು.—2 ಸಮುವೇಲ 12:1-7.
ನೀವು ತದ್ರೀತಿಯಲ್ಲಿ ದೀನಭಾವದಿಂದ, ಮತ್ತು ಶಾಂತಚಿತ್ತರಾಗಿ, ನಿಮ್ಮ ಅಧ್ಯಾಪಕನನ್ನು ಸಮೀಪಿಸಸಾಧ್ಯವಿದೆ. ಮಾಜಿ ಶಾಲಾ ಅಧ್ಯಾಪಕರಾದ ಬ್ರೂಸ್ ವೆಬರ್ ನಮಗೆ ಎಚ್ಚರಿಸುವುದು: “ಒಬ್ಬ ವಿದ್ಯಾರ್ಥಿಯಲ್ಲಿನ ದಂಗೆಯು, ಅಧ್ಯಾಪಕನಲ್ಲಿ ಹಟಮಾರಿತನವನ್ನು ಕೆರಳಿಸುತ್ತದೆ. ನೀವು ಹುಚ್ಚು ಕೂಗಾಟ ಮಾಡುವಲ್ಲಿ ಅಥವಾ ಬಹಳ ಅನ್ಯಾಯವಾಯಿತೆಂದು ಪ್ರತಿಪಾದಿಸುವಲ್ಲಿ ಅಥವಾ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆಮಾಡುವಲ್ಲಿ, ನಿಮಗೆ ಯಾವ ಪ್ರಯೋಜನವೂ ಆಗುವುದಿಲ್ಲ.” ಹೆಚ್ಚು ವಯಸ್ಕ ಸಮೀಪಿಸುವಿಕೆಯನ್ನು ಪ್ರಯತ್ನಿಸಿರಿ. ಬಹುಶಃ ನಿಮ್ಮ ಅಧ್ಯಾಪಕನ ದರ್ಜೆ ನೀಡುವ ರೀತಿಯನ್ನು ನೀವು ಅರ್ಥಮಾಡಿಕೊಳ್ಳಲು ಸಹಾಯ ಮಾಡುವಂತೆ, ನಿಮ್ಮ ಅಧ್ಯಾಪಕನ ಬಳಿ ಕೇಳಿಕೊಳ್ಳುವ ಮೂಲಕ ನೀವು ಪ್ರಾರಂಭಿಸಸಾಧ್ಯವಿದೆ. ವೆಬರ್ ಹೇಳುವುದೇನಂದರೆ, ತದನಂತರ ನೀವು “ತಪ್ಪು ತೀರ್ಮಾನಕ್ಕೆ ಒಳಗಾಗಿದ್ದೀರಿ ಎಂಬುದಕ್ಕೆ ಬದಲಾಗಿ, ನೀವು ಅಜಾಗರೂಕತೆ ಅಥವಾ ತಪ್ಪೆಣಿಕೆಯ ಬಲಿಪಶುವಿನೋಪಾದಿ ರುಜುಪಡಿಸಿಕೊಳ್ಳಲು ಪ್ರಯತ್ನಿಸಸಾಧ್ಯವಿದೆ. ನಿಮ್ಮ ಅಧ್ಯಾಪಕಿಯು ದರ್ಜೆಯನ್ನು ನೀಡುವ ರೀತಿಯನ್ನೇ ಉಪಯೋಗಿಸಿರಿ; ನಿಮ್ಮ ದರ್ಜೆಯಲ್ಲಿ ನೀವು ದೋಷವನ್ನು ಎಲ್ಲಿ ಕಂಡುಕೊಳ್ಳುತ್ತೀರೆಂಬುದನ್ನು ಅವಳಿಗೆ ತೋರಿಸಿರಿ.” ನಿಮ್ಮ ದರ್ಜೆಯು ಬದಲಾಯಿಸಲ್ಪಡದಿದ್ದಾಗ್ಯೂ, ನಿಮ್ಮ ಪ್ರೌಢತೆಯು ನಿಮ್ಮ ಅಧ್ಯಾಪಕಿಯ ಮೇಲೆ ಸಕಾರಾತ್ಮಕವಾದ ಪ್ರಭಾವವನ್ನು ಬೀರುವುದು.
ನಿಮ್ಮ ಹೆತ್ತವರಿಗೆ ತಿಳಿಸಿರಿ
ಆದರೂ, ಅನೇಕವೇಳೆ ಬರೀ ಮಾತು ನಿಷ್ಫಲವಾಗಿ ಪರಿಣಮಿಸುತ್ತದೆ. ಸೂಸನಳ ಅನುಭವವನ್ನು ತೆಗೆದುಕೊಳ್ಳಿರಿ. ಗೌರವೋಚಿತ ವಿದ್ಯಾರ್ಥಿನಿಯಾಗಿದ್ದರೂ, ಅವಳ ಅಧ್ಯಾಪಕಿಯರಲ್ಲಿ ಒಬ್ಬರು ಅವಳಿಗೆ ಅನುತ್ತೀರ್ಣ ದರ್ಜೆಗಳನ್ನು ಕೊಡಲಾರಂಭಿಸಿದಾಗ ಅವಳು ತಲ್ಲಣಗೊಂಡಳು.
ಸಮಸ್ಯೆಯು ಏನಾಗಿತ್ತು? ಸೂಸನಳು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದಳು. ಈ ಕಾರಣದಿಂದಾಗಿಯೇ ತಾನು ಸೂಸನಳನ್ನು ಇಷ್ಟಪಡಲಿಲ್ಲವೆಂಬುದನ್ನು ಅವಳ ಅಧ್ಯಾಪಕಿಯು ಒಪ್ಪಿಕೊಂಡಿದ್ದಳು. “ನಿಜವಾಗಿಯೂ ಅದು ಆಶಾಭಂಗಪಡಿಸುವಂಥದಾಗಿತ್ತು, ಮತ್ತು ನನಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ” ಎಂದು ಸೂಸನ್ ಹೇಳುತ್ತಾಳೆ.ಸೂಸನ್ ಮರುಜ್ಞಾಪಿಸಿಕೊಳ್ಳುವುದು: “ನಾನು ಧೈರ್ಯಮಾಡಿ, ಈ ಅಧ್ಯಾಪಕಿಯ ಕುರಿತು ನನ್ನ ತಾಯಿಗೆ [ಒಬ್ಬ ಒಂಟಿ ಹೆತ್ತವಳು] ಹೇಳಿದೆ. ‘ಒಳ್ಳೇದು, ನಾನು ನಿನ್ನ ಅಧ್ಯಾಪಕಿಯೊಂದಿಗೆ ಮಾತಾಡಬಲ್ಲೆ’ ಎಂದು ಅವರು ಹೇಳಿದರು. ಮತ್ತು ಓಪನ್ ಹೌಸ್ ಆತಿಥ್ಯದ ಸಮಯದಲ್ಲಿ ಅವರು ಶಾಲೆಗೆ ಹೋಗಿ, ಸಮಸ್ಯೆ ಏನೆಂಬುದನ್ನು ನನ್ನ ಅಧ್ಯಾಪಕಿಯ ಬಳಿ ಕೇಳಿದರು. ನನ್ನ ತಾಯಿ ನಿಜವಾಗಿಯೂ ರೇಗುವರೆಂದು ನಾನು ಭಾವಿಸಿದ್ದೆ, ಆದರೆ ಅವರು ರೇಗಲಿಲ್ಲ. ಅವರು ಶಾಂತಚಿತ್ತರಾಗಿ ಅಧ್ಯಾಪಕಿಯೊಂದಿಗೆ ಮಾತಾಡಿದರು.” ಸೂಸನಳಿಗೆ ಬೇರೊಬ್ಬ ಅಧ್ಯಾಪಕಿಯು ಕಲಿಸುವಂತೆ, ಆ ಅಧ್ಯಾಪಕಿಯು ಏರ್ಪಡಿಸಿದಳು.
ತೊಡಕಿಗೊಳಗಾದ ಎಲ್ಲಾ ವಿಚಾರಗಳು ಸುಗಮವಾಗಿ ಕೊನೆಗೊಳ್ಳುವುದಿಲ್ಲ, ಮತ್ತು ಅನೇಕವೇಳೆ ನೀವು ಪರಿಸ್ಥಿತಿಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂಬುದು ಒಪ್ಪತಕ್ಕ ವಿಷಯವೇ. ಆದರೆ ಈ ವರ್ಷ ನೀವು ನಿಮ್ಮ ಅಧ್ಯಾಪಕನೊಂದಿಗೆ ಸಮಾಧಾನದಿಂದ ಸಹಭಾಗಿಯಾಗಿರಬಲ್ಲಿರಾದರೆ, ಮುಂದಿನ ವರ್ಷವಂತೂ ಇದ್ದೇ ಇರುತ್ತದೆ. ಆಗ ನಿಮಗೆ ಹೊಸ ಆರಂಭವಿರುತ್ತದೆ, ಬಹುಶಃ ಬೇರೆ ಬೇರೆ ಸಹಪಾಠಿಗಳಿರುತ್ತಾರೆ. ಮತ್ತು ಹೊಂದಿಕೊಂಡುಹೋಗುವುದನ್ನು ಕಲಿಯಲಿಕ್ಕಾಗಿ ಒಬ್ಬ ಹೊಸ ಅಧ್ಯಾಪಕನೂ ಇರಬಹುದು.
ಚರ್ಚೆಗಾಗಿ ಪ್ರಶ್ನೆಗಳು
◻ ನಿಮ್ಮನ್ನು ತರವಲ್ಲದ ರೀತಿಯಲ್ಲಿ ಉಪಚರಿಸುವ ಒಬ್ಬ ಅಧ್ಯಾಪಕನ ಕುರಿತು ನಿಮ್ಮ ನೋಟವೇನಾಗಿರಸಾಧ್ಯವಿದೆ?
◻ ತಮ್ಮ ಅಚ್ಚುಮೆಚ್ಚಿನ ವಿದ್ಯಾರ್ಥಿಗಳೆಂದು ಕರೆಸಿಕೊಳ್ಳುವವರ ಮೇಲೆ, ಅನೇಕವೇಳೆ ಅಧ್ಯಾಪಕರು ಏಕೆ ಅಪಾರ ಗಮನವನ್ನು ಕೇಂದ್ರೀಕರಿಸುತ್ತಾರೆ?
◻ ಬೇಸರಹುಟ್ಟಿಸುವವನೋಪಾದಿ ಕಂಡುಬರುವ ಒಬ್ಬ ಅಧ್ಯಾಪಕನಿಂದ ನೀವು ಹೇಗೆ ಪಾಠವನ್ನು ಕಲಿಯಸಾಧ್ಯವಿದೆ?
◻ ಕೆಲವು ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳ ಕಡೆಗೆ ಹಗೆತನ ತೋರಿಸುವವರಂತೆ ಏಕೆ ಕಂಡುಬರುತ್ತಾರೆ?
◻ ತರಗತಿಯಲ್ಲಿ ನೀವು ಸುವರ್ಣ ನಿಯಮವನ್ನು ಹೇಗೆ ಅನ್ವಯಿಸಿಕೊಳ್ಳಬಲ್ಲಿರಿ?
◻ ನೀವು ತರವಲ್ಲದ ದರ್ಜೆ ನೀಡುವಿಕೆ ಅಥವಾ ಅನುಪಚಾರಕ್ಕೆ ಬಲಿಪಶುಗಳಾಗಿದ್ದೀರೆಂದು ಭಾವಿಸುವಲ್ಲಿ, ನೀವೇನು ಮಾಡಬಲ್ಲಿರಿ?
[ಪುಟ 269 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಅಧ್ಯಾಪಕನ ಅಚ್ಚುಮೆಚ್ಚಿನ ವಿದ್ಯಾರ್ಥಿಗಳಿಗೆ ಕೊಡಲ್ಪಡುವ ಗಮನವು, ಅನೇಕವೇಳೆ ಅಸಮಾಧಾನವನ್ನು ಕೆರಳಿಸುತ್ತದೆ
[ಪುಟ 274 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಅನೇಕ ಪೌರ ಶಾಲಾ ಪ್ರದೇಶಗಳಲ್ಲಿರುವ ಅಧ್ಯಾಪಕರು, ಹಿಂಸಾಚಾರದ ಭಯದಿಂದ ಜೀವಿಸುತ್ತಾರೆ.”—ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್
[Box/Picture on page 160, 161]
‘ನನ್ನ ಅಧ್ಯಾಪಕನು ಬೇಸರಹುಟ್ಟಿಸುವವನಾಗಿದ್ದಾನೆ!’
ಪ್ರೌಢಾವಸ್ಥೆಯ ಕುಟುಂಬ ಕೈಪಿಡಿ (ಇಂಗ್ಲಿಷ್) ಹೇಳುವುದು: “ಅಧಿಕಾಂಶ ಪ್ರೌಢಾವಸ್ಥೆಯ ವಿದ್ಯಾರ್ಥಿಗಳು, ಅಧ್ಯಾಪಕರ ವಿಷಯದಲ್ಲಿ ಟೀಕಿಸುವ ಮನೋಭಾವವುಳ್ಳವರಾಗಿದ್ದಾರೆಂದು ಕೆಲವು ಸಮೀಕ್ಷೆಗಳು ತೋರಿಸುತ್ತವೆ. ಅವರು ಬೇಸರ ಹುಟ್ಟಿಸುತ್ತಾರೆ ಅಥವಾ ಅವರಲ್ಲಿ ಹಾಸ್ಯರಸವಿಲ್ಲ ಎಂದು ಅವರು ಆರೋಪಿಸುತ್ತಾರೆ.” ಇಂದೊ ಮುಂದೊ, ನೀವು ಸಹ, ‘ಅಳುಬರಿಸುವಷ್ಟು’ ಬೇಸರಹುಟ್ಟಿಸುವ ಒಬ್ಬ ಅಧ್ಯಾಪಕನನ್ನು ಪಡೆದುಕೊಳ್ಳಬಹುದು. ನೀವೇನು ಮಾಡಸಾಧ್ಯವಿದೆ?
ಇತ್ತೀಚಿನ ಒಂದು ಪ್ರಯೋಗವು ಪ್ರಕಟಿಸಿದ್ದೇನಂದರೆ, ಕೈಗಾರಿಕಾ ಕಲೆ, ಶಾರೀರಿಕ ಶಿಕ್ಷಣ, ಮತ್ತು ಸಂಗೀತದ ತರಗತಿಗಳಲ್ಲಿ, ಹದಿವಯಸ್ಕನೊಬ್ಬನು ಗಮನವನ್ನು ಕೇಂದ್ರೀಕರಿಸುವುದರ ಮಟ್ಟವು ತುಂಬಾ ಮೇಲ್ಮುಖವಾಗಿರುತ್ತದೆ. ಆದರೆ, ಭಾಷೆ ಮತ್ತು ಇತಿಹಾಸದೊಂದಿಗೆ ವ್ಯವಹರಿಸುವ ತರಗತಿಗಳಲ್ಲಿ, ಕೇಂದ್ರೀಕರಣದ ಮಟ್ಟವು ವಿಪರೀತ ಇಳಿಮುಖವಾಗುತ್ತದೆ.
ಶಾರೀರಿಕ ಶಿಕ್ಷಣ ಅಥವಾ ಸಂಗೀತದ ಬೋಧಕರು, ಶೈಕ್ಷಣಿಕ ವಿಷಯಗಳ ಅಧ್ಯಾಪಕರಿಗಿಂತಲೂ ಹೆಚ್ಚು ಪ್ರತಿಭೆಯುಳ್ಳವರಾಗಿದ್ದಾರೊ? ನಿಶ್ಚಯವಾಗಿಯೂ ಇಲ್ಲ. ಅನೇಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಷಯಗಳ ಕಡೆಗೆ ನಕಾರಾತ್ಮಕ ಮನೋಭಾವವಿದೆ ಎಂಬುದು ಸುವ್ಯಕ್ತ. ಮತ್ತು ಒಂದು ವಿಷಯವು ಬೇಸರಕರವಾಗಿದೆಯೆಂದು ವಿದ್ಯಾರ್ಥಿಗಳು ಮುಂದಾಗಿಯೇ ನಿರ್ಧರಿಸುವಲ್ಲಿ, ಸಾಕ್ರಟೀಸನಂತಹ ಕೌಶಲಗಳಿರುವ ಅಧ್ಯಾಪಕನು ಸಹ, ಅವರ ಗಮನವನ್ನು ಸೆರೆಹಿಡಿಯುವುದರಲ್ಲಿ ಕಷ್ಟವನ್ನು ಕಂಡುಕೊಳ್ಳುವನು! ಹಾಗಾದರೆ, ಕೆಲವು ವಿಷಯಗಳ ಕಡೆಗೆ ನೀವು ತೋರಿಸುವ ಮನೋಭಾವವನ್ನು ಸರಿಹೊಂದಿಸುವ ಅಗತ್ಯವಿದೆಯೆ? ನೀವು ಕಲಿಯುವ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುವುದು, ಶಾಲೆಯಲ್ಲಿನ ಬೇಸರಹುಟ್ಟಿಸುವಿಕೆಯನ್ನು ತೆಗೆದುಹಾಕಬಹುದು.
ಕೆಲವೊಮ್ಮೆ ಕಲಿಯುವುದರಲ್ಲಿ ಅಭಿರುಚಿಯಿರುವ ವಿದ್ಯಾರ್ಥಿಗಳು ಸಹ, ತಮಗೆ “ಕೆಟ್ಟ” ಅಧ್ಯಾಪಕರಿದ್ದಾರೆಂದು ದೂರುತ್ತಾರೆ. ಆದರೆ “ಒಳ್ಳೆಯ” ಅಧ್ಯಾಪಕನು ಎಂದರೇನು? ಒಬ್ಬ ಯುವ ಹುಡುಗಿಯು ಹೇಳಿದ್ದು: “ನಾನು ಗಣಿತದ ಅಧ್ಯಾಪಕಿಯನ್ನು ಇಷ್ಟಪಡುತ್ತೇನೆ. ಏಕೆಂದರೆ ಅವರು ತುಂಬ ತಮಾಷೆ ಮಾಡುತ್ತಾರೆ.” ‘ತುಂಬ ಜೋಕ್ಸ್ಗಳನ್ನು ಮಾಡುವ’ ಕಾರಣದಿಂದ, ಹುಡುಗನೊಬ್ಬನು ತನ್ನ ಇಂಗ್ಲಿಷ್ ಅಧ್ಯಾಪಕನನ್ನು ಹೊಗಳಿದನು.
ಆದರೆ ಇಷ್ಟಪಡುವವನಾಗಿರುವುದು ಅಥವಾ ಮನೋರಂಜಕನಾಗಿರುವುದು ಸಹ ಅಧ್ಯಾಪಕನೊಬ್ಬನಿಗೆ ಒಂದು ಆಸ್ತಿಯಾಗಿರಸಾಧ್ಯವಿರುವಾಗ, ಅದು “ಇತರರಿಗೆ ಕಲಿಸಲು ಸಾಕಷ್ಟು ಅರ್ಹ”ನಾಗಿರುವುದಕ್ಕೆ (NW) ಒಂದು ಬದಲಿಯಾಗಿರುವುದಿಲ್ಲ. (2 ತಿಮೊಥೆಯ 2:2) ಇಲ್ಲಿ ಬೈಬಲು ಆತ್ಮಿಕ ಅರ್ಹತೆಗಳಿಗೆ ಸೂಚಿಸುತ್ತದಾದರೂ, ಒಬ್ಬ ಒಳ್ಳೆಯ ಅಧ್ಯಾಪಕನು ತನ್ನ ವಿಷಯದ ಕುರಿತು ಚೆನ್ನಾಗಿ ತಿಳಿದವನಾಗಿರಬೇಕು ಎಂಬ ಸಂಗತಿಯನ್ನು ಅದು ಎತ್ತಿಹೇಳುತ್ತದೆ.
ಅಸಂತೋಷಕರವಾಗಿ, ಜ್ಞಾನ ಅಥವಾ ವರ್ಣರಂಜಿತ ವ್ಯಕ್ತಿತ್ವವು ಯಾವಾಗಲೂ ಒಟ್ಟೊಟ್ಟಿಗೆ ಬರುವುದಿಲ್ಲ. ಉದಾಹರಣೆಗಾಗಿ, ಅಪೊಸ್ತಲ ಪೌಲನು ದೇವರ ವಾಕ್ಯದ ಒಬ್ಬ ಬೋಧಕನೋಪಾದಿ ಅತ್ಯುತ್ಕೃಷ್ಟವಾಗಿ ಅರ್ಹನಾಗಿದ್ದನು. 2 ಕೊರಿಂಥ 10:10; 11:6) ಕೆಲವರು ಪೌಲನು ಹೇಳಲಿಕ್ಕಿದ್ದ ವಿಷಯವನ್ನು ಅಲಕ್ಷಿಸಿ, ಒಬ್ಬ ಭಾಷಣಕರ್ತನೋಪಾದಿ ಅವನ ನ್ಯೂನತೆಗಳನ್ನು ಮಾತ್ರವೇ ಅವಲೋಕಿಸಿದ್ದಲ್ಲಿ, ಅವರು ಅಮೂಲ್ಯವಾದ ಜ್ಞಾನವನ್ನು ಪಡೆದುಕೊಳ್ಳುವಂತಹ ಸುಯೋಗವನ್ನು ಕಳೆದುಕೊಂಡರು. ಶಾಲೆಯ ವಿಷಯದಲ್ಲಿ ಅದೇ ತಪ್ಪನ್ನು ಮಾಡಬೇಡಿರಿ! ಒಬ್ಬ ಅಧ್ಯಾಪಕನನ್ನು “ಕೆಟ್ಟವ”ನೆಂದು ತೊಡೆದುಹಾಕುವ ಮೊದಲು, ‘ಅವನು ಯಾವುದರ ಕುರಿತಾಗಿ ಮಾತಾಡುತ್ತಿದ್ದಾನೆಂಬುದು ಅವನಿಗೆ ತಿಳಿದಿದೆಯೊ? ನಾನು ಅವನಿಂದ ಪಾಠವನ್ನು ಕಲಿಯಬಲ್ಲೆನೊ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿರಿ.
ಆದರೂ ಪೌಲನ ದಿನದಲ್ಲಿದ್ದ ಕೆಲವು ಕ್ರೈಸ್ತರು, “ಅವನು ಸಾಕ್ಷಾತ್ತಾಗಿ ಬಂದರೆ ಅವನು ನಿರ್ಬಲನು, ಅವನ ಮಾತು ಗಣನೆಗೆ ಬಾರದ್ದು” ಎಂದು ಆಪಾದಿಸಿದರು. ಪೌಲನು ಉತ್ತರಿಸಿದ್ದು: “ನಾನು ವಾಕ್ಚಾತುರ್ಯದಲ್ಲಿ ನಿಪುಣನಲ್ಲದಿದ್ದರೂ ಜ್ಞಾನದಲ್ಲಿ ನಿಪುಣನಾಗಿದ್ದೇನೆ.” (ಬೇಸರ ಹಿಡಿಸುವ ಒಬ್ಬ ಭಾಷಣಕರ್ತನಾಗಿರುವ ಅಧ್ಯಾಪಕನಿಗೆ, ನೀವು ಸಾಮಾನ್ಯವಾದುದಕ್ಕಿಂತಲೂ ಹೆಚ್ಚಿನ ಗಮನವನ್ನು ಕೊಡಬೇಕಾಗಬಹುದು. ಅವನಿಗೆ ಏನು ಹೇಳಲಿಕ್ಕಿದೆಯೋ ಆ ವಿಷಯದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಲಿಕ್ಕಾಗಿ, ನೋಟ್ಸ್ಗಳನ್ನು ಬರೆದುಕೊಳ್ಳಲು ಪ್ರಯತ್ನಿಸಿರಿ. ನೀರಸವಾದ ತರಗತಿಕೋಣೆಯ ಚರ್ಚೆಗಳನ್ನು, ಮನೆಯಲ್ಲಿ ಹೆಚ್ಚಿನ ಅಧ್ಯಯನ ನಡೆಸುವುದರೊಂದಿಗೆ ಸ್ಪಷ್ಟಪಡಿಸಿಕೊಳ್ಳಿರಿ.
ಸ್ವತಃ ಅಧ್ಯಾಪಕಿಯಾಗಿರುವ ಬಾರ್ಬರ ಮೇಯರ್ ಕೂಡಿಸುವುದು: “ನೆನಪಿಸಿಕೊಳ್ಳಸಾಧ್ಯವಿರುವುದಕ್ಕಿಂತಲೂ ಹೆಚ್ಚು ಬಾರಿ ಅವೇ ಪಾಠಗಳನ್ನು ಪುನರಾವರ್ತಿಸಿದ್ದಿರಬಹುದಾದ ಅಧ್ಯಾಪಕರು, ಒಂದು ನಿಯತಕ್ರಮಕ್ಕೆ ಒಗ್ಗಿಕೊಂಡಿರುವ ಪ್ರವೃತ್ತಿಯವರಾಗಿರುತ್ತಾರೆ.” ವಿಷಯಗಳನ್ನು ಸಜೀವವಾಗಿರಿಸಲು ನೀವೇನು ಮಾಡಸಾಧ್ಯವಿದೆ? “ಸ್ವಲ್ಪ ಬದಲಾವಣೆಗಾಗಿ ನಿಮ್ಮ ಕೈಯನ್ನು ಮೇಲಕ್ಕೆತ್ತಿ, ಹೆಚ್ಚಿನ ಮಾಹಿತಿಯನ್ನು ಒದಗಿಸುವಂತೆ ಕೇಳಿರಿ . . . ಅವನು ತನಗೆ ತಿಳಿದಿರುವುದೆಲ್ಲವನ್ನೂ ನಿಜವಾಗಿಯೂ ನಿಮಗೆ ಹೇಳುವಂತೆ ಮಾಡಿರಿ.” ಅಧ್ಯಾಪಕನು ಇದಕ್ಕಾಗಿ ಅಸಮಾಧಾನಗೊಳ್ಳುವನೊ? ನೀವದನ್ನು ಗೌರವಪೂರ್ಣವಾಗಿ ಮಾಡುವುದಾದರೆ, ಅಸಮಾಧಾನಗೊಳ್ಳಲಿಕ್ಕಿಲ್ಲ. (ಕೊಲೊಸ್ಸೆ 4:6) ಮೇಯರ್ ಹೇಳುವುದು: “ನಿಮ್ಮ ಅಧ್ಯಾಪಕನು ತರಗತಿಗೆ ಸ್ವಲ್ಪ ಹೆಚ್ಚು ತಯಾರಿಮಾಡಿಕೊಂಡು ಬರುತ್ತಿದ್ದಾನೆ, ಮತ್ತು ಕೇವಲ ಮೇಲ್ಮೈ ಸಮಾಚಾರಕ್ಕಿಂತಲೂ ಹೆಚ್ಚಿನ ವಿಷಯವನ್ನು ಸಾದರಪಡಿಸುತ್ತಿದ್ದಾನೆ ಎಂಬುದನ್ನು ನೀವು ಕಂಡುಕೊಳ್ಳುವಿರಿ.”
ಅತ್ಯುತ್ಸಾಹವು ಸಾಂಕ್ರಾಮಿಕವಾಗಿದೆ. ಮತ್ತು ನಿಮ್ಮ ಕಲಿಯುವ ಅಪೇಕ್ಷೆಯು ತಾನೇ ನಿಮ್ಮ ಅಧ್ಯಾಪಕನಲ್ಲಿ ಸ್ವಲ್ಪ ಜೀವವನ್ನು ತುಂಬಬಹುದು. ನಿಶ್ಚಯವಾಗಿಯೂ ಒಂದು ನಾಟಕೀಯವಾದ ರೂಪಾಂತರವನ್ನು ನಿರೀಕ್ಷಿಸಬೇಡಿ. ಮತ್ತು ಕೆಲವು ತರಗತಿಗಳಲ್ಲಿ ನೀವು ಹೇಗೂ ಕಷ್ಟದಿಂದ ಕಾಲಕಳೆಯಲೇಬೇಕಾದೀತು. ಆದರೆ ನೀವು ಒಬ್ಬ ಒಳ್ಳೆಯ ಕೇಳುಗರಾಗಿರುವಲ್ಲಿ, ನಡೆಯುತ್ತಿರುವ ವಿಷಯದಲ್ಲಿ ನೀವು ಪ್ರಾಮಾಣಿಕವಾಗಿ ಆಸಕ್ತರಾಗಿರುವಲ್ಲಿ, ನೀವು ಪಾಠವನ್ನು ಕಲಿಯಬಲ್ಲಿರಿ—ಬೇಸರಹುಟ್ಟಿಸುವ ಒಬ್ಬ ಅಧ್ಯಾಪಕನಿಂದಲೂ.
[ಪುಟ 162 ರಲ್ಲಿರುವ ಚಿತ್ರಗಳು]
ಶಾಲಾ ಹಿಂಸಾಚಾರದ ಉಬ್ಬರವು, ಅಧ್ಯಾಪಕನ ಕೆಲಸವನ್ನು ಹೆಚ್ಚು ಕಷ್ಟಕರವಾದದ್ದಾಗಿ ಮಾಡಿದೆ
[ಪುಟ 164 ರಲ್ಲಿರುವ ಚಿತ್ರಗಳು]
ಯಾವುದೋ ಅನ್ಯಾಯವು ಸಂಭವಿಸಿದೆಯೆಂದು ನಿಮಗನಿಸುವಲ್ಲಿ, ನಿಮ್ಮ ಅಧ್ಯಾಪಕನನ್ನು ಗೌರವಪೂರ್ಣವಾಗಿ ಸಮೀಪಿಸಿರಿ