ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಶಾಶ್ವತ ಪ್ರೀತಿಯ ಬಗ್ಗೆ ಧ್ಯಾನಿಸಿ

ಯೆಹೋವನ ಶಾಶ್ವತ ಪ್ರೀತಿಯ ಬಗ್ಗೆ ಧ್ಯಾನಿಸಿ

“ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು.”—ಕೀರ್ತ. 77:12.

ಗೀತೆಗಳು: 18, 61

1, 2. (ಎ) ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆಂದು ನಿಮಗೆ ಯಾಕೆ ಪೂರ್ಣ ಭರವಸೆಯಿದೆ? (ಬಿ) ಮನುಷ್ಯರನ್ನು ಸೃಷ್ಟಿಸಿದಾಗ ಯೆಹೋವನು ಅವರಲ್ಲಿ ಯಾವ ಅಗತ್ಯವನ್ನು ಇಟ್ಟನು?

ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆಂದು ನಿಮಗೆ ಏಕೆ ಪೂರ್ಣ ಭರವಸೆಯಿದೆ? ಉತ್ತರ ಕೊಡುವ ಮುಂಚೆ ಈ ಉದಾಹರಣೆಗಳಿಗೆ ಗಮನಕೊಡಿ: ಸಹೋದರಿ ತಾರಾ * ಎಂಬವರಿಗೆ ತಾನು ಏನೂ ಮಾಡಿದರೂ ತಪ್ಪಾಗುತ್ತದೆ, ಯಾವ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ ಎಂಬ ಭಾವನೆಯಿತ್ತು. ಈ ರೀತಿಯ ಭಾವನೆಯನ್ನು ಬಿಟ್ಟುಬಿಡಬೇಕೆಂದು ಸಭೆಯವರು ದಯೆಯಿಂದ ಹಲವಾರು ವರ್ಷಗಳ ತನಕ ಪ್ರೋತ್ಸಾಹ ಕೊಡುತ್ತಾ ಇದ್ದರು. ಅವಳನ್ನುವುದು: “ಯೆಹೋವನಿಗೆ ನನ್ನ ಮೇಲೆ ಪ್ರೀತಿ ಇಲ್ಲದೆ ಇರುತ್ತಿದ್ದರೆ ಆತನು ಹೀಗೆ ನನಗೆ ಪದೇಪದೇ ಬುದ್ಧಿವಾದ ಕೊಡುತ್ತಿರಲಿಲ್ಲ.” ಸಹೋದರಿ ಭಾವನಾ ಎಂಬವಳ ಗಂಡ ತೀರಿಹೋದನು. ಆಕೆ ತನ್ನ ಇಬ್ಬರು ಮಕ್ಕಳನ್ನು ಒಂಟಿಯಾಗಿ ಬೆಳೆಸಿದಳು. ಅವಳನ್ನುವುದು: “ಸೈತಾನನ ಈ ಲೋಕದಲ್ಲಿ ಮಕ್ಕಳನ್ನು ಬೆಳೆಸುವುದು ತುಂಬ ಕಷ್ಟದ ಸವಾಲು. ಅದರಲ್ಲೂ ಒಂಟಿ ಹೆತ್ತವರಿಗೆ ಇನ್ನೂ ಕಷ್ಟ. ಆದರೆ ಯೆಹೋವನು ನನ್ನನ್ನು ಪ್ರೀತಿಸುತ್ತಾನೆಂದು ನನಗೆ ಪೂರ್ಣ ಭರವಸೆಯಿದೆ. ಏಕೆಂದರೆ ನನ್ನ ದುಃಖ, ಕಣ್ಣೀರು ಇವೆಲ್ಲದ್ದರ ಮಧ್ಯೆಯೂ ಆತನು ನನ್ನ ಕೈಹಿಡಿದು ನಡಿಸಿದ್ದಾನೆ. ನನ್ನಿಂದ ಸಹಿಸಕ್ಕಾಗದಷ್ಟು ಕಷ್ಟ ಅನುಭವಿಸುವಂತೆ ಆತನು ಬಿಟ್ಟಿಲ್ಲ.” (1 ಕೊರಿಂ. 10:13) ಸಹೋದರಿ ಸಾರಿಕಾ ಎಂಬಾಕೆಗೆ ವಾಸಿಯಾಗದಂಥ ಕಾಯಿಲೆಯಿದೆ. ಒಂದು ಅಧಿವೇಶನದಲ್ಲಿ ಸಹೋದರಿಯೊಬ್ಬಳು ಆಕೆಯಲ್ಲಿ ವೈಯಕ್ತಿಕ ಆಸಕ್ತಿ ತೋರಿಸಿದಳು. ಸಾರಿಕಾಳ ಗಂಡ ಹೀಗನ್ನುತ್ತಾನೆ: “ನಮಗೆ ಆ ಸಹೋದರಿಯ ಪರಿಚಯವಿರಲಿಲ್ಲ. ಆದರೂ ಆಕೆ ನಮ್ಮಲ್ಲಿ ಅಷ್ಟೊಂದು ಕಾಳಜಿ ತೋರಿಸಿದ್ದರಿಂದ ನಮಗೆ ತುಂಬ ಖುಷಿಯಾಯಿತು. ಯೆಹೋವನಿಗೆ ನಮ್ಮ ಮೇಲೆ ಎಷ್ಟು ಪ್ರೀತಿಯಿದೆಯೆಂದು ನಮ್ಮ ಸಹೋದರ ಸಹೋದರಿಯರು ಈ ರೀತಿ ಚಿಕ್ಕಪುಟ್ಟ ವಿಧಗಳಲ್ಲಿ ತೋರಿಸುವ ಪ್ರೀತಿಯಿಂದಲೂ ನನಗೆ ಗೊತ್ತಾಗುತ್ತದೆ.”

2 ಇತರರಿಗೆ ಪ್ರೀತಿ ತೋರಿಸುವ ಮತ್ತು ಇತರರಿಂದ ಪ್ರೀತಿ ಪಡೆಯುವ ಅಗತ್ಯವನ್ನು ಯೆಹೋವನು ಮನುಷ್ಯರಲ್ಲಿ ಇಟ್ಟಿದ್ದಾನೆ. ಆದರೆ ಕಾಯಿಲೆ, ಹಣದ ಸಮಸ್ಯೆ, ಸೇವೆಯಲ್ಲಿ ಯಾವುದೇ ಒಳ್ಳೇ ಫಲಿತಾಂಶ ಸಿಗಲಿಲ್ಲ ಎಂಬ ಕಾರಣಕ್ಕೆಲ್ಲ ನಮಗೆ ನಿರುತ್ಸಾಹ ಆಗಬಹುದು. ಯೆಹೋವನು ನಮ್ಮನ್ನು ಇನ್ನು ಮುಂದೆ ಪ್ರೀತಿಸುವುದಿಲ್ಲವೆಂದು ಅನಿಸಲು ಶುರುವಾಗಬಹುದು. ಒಂದುವೇಳೆ ಹೀಗನಿಸಿದರೆ ಇದನ್ನು ನೆನಪಿಡೋಣ: ಆತನಿಗೆ ನಾವು ತುಂಬ ಅಮೂಲ್ಯರು. ನಮ್ಮ ಬಲಗೈಯನ್ನು ಹಿಡಿದು, ಬೇಕಾದ ಸಹಾಯ ಕೊಡುತ್ತಾ ನಮ್ಮ ಹತ್ತಿರವೇ ಇದ್ದಾನೆ. ನಾವಾತನಿಗೆ ನಂಬಿಗಸ್ತರಾಗಿದ್ದರೆ ಆತನು ನಮ್ಮನ್ನು ಎಂದಿಗೂ ಮರೆಯುವುದಿಲ್ಲ.—ಯೆಶಾ. 41:13; 49:15.

3. ನಮ್ಮ ಮೇಲೆ ಯೆಹೋವನಿಗಿರುವ ಪ್ರೀತಿ ಶಾಶ್ವತ ಎಂಬ ಭರವಸೆಯನ್ನು ಹೇಗೆ ಬಲಪಡಿಸಬಲ್ಲೆವು?

3 ಈ ಮುಂಚೆ ತಿಳಿಸಲಾದ ಸಾಕ್ಷಿಗಳಿಗೆ, ದೇವರು ತಮ್ಮ ಕಷ್ಟಕಾಲದಲ್ಲಿ ಜೊತೆಯಲ್ಲೇ ಇದ್ದನೆಂಬ ವಿಷಯದಲ್ಲಿ ಸಂಶಯವಿಲ್ಲ. ಆತನು ನಮ್ಮ ಜೊತೆ ಇದ್ದಾನೆಂಬ ಭರವಸೆ ನಮಗೂ ಇರಬಲ್ಲದು. (ಕೀರ್ತ. 118:6, 7) ನಮ್ಮ ಮೇಲೆ ಯೆಹೋವನಿಗೆ ಪ್ರೀತಿಯಿದೆಯೆಂದು (1) ಆತನ ಸೃಷ್ಟಿಕಾರ್ಯ, (2) ಬೈಬಲ್‌, (3) ಪ್ರಾರ್ಥನೆ, (4) ವಿಮೋಚನಾ ಮೌಲ್ಯ ಎಂಬ ಉಡುಗೊರೆಗಳು ತೋರಿಸುತ್ತವೆ. ಇವುಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ಯೆಹೋವನು ಮಾಡಿರುವ ಎಲ್ಲ ಒಳ್ಳೇ ವಿಷಯಗಳ ಬಗ್ಗೆ ಧ್ಯಾನಿಸುವುದರಿಂದ ಆತನ ಶಾಶ್ವತ ಪ್ರೀತಿಗಾಗಿರುವ ನಮ್ಮ ಕೃತಜ್ಞತೆ ಹೆಚ್ಚಾಗುತ್ತದೆ.—ಕೀರ್ತನೆ 77:11, 12 ಓದಿ.

ಯೆಹೋವನ ಸೃಷ್ಟಿಕಾರ್ಯಗಳ ಬಗ್ಗೆ ಧ್ಯಾನಿಸಿ

4. ಯೆಹೋವನ ಸೃಷ್ಟಿಯಿಂದ ನಾವೇನು ಕಲಿಯುತ್ತೇವೆ?

4 ಯೆಹೋವನ ಸೃಷ್ಟಿಕಾರ್ಯಗಳನ್ನು ನೋಡುವಾಗ ಆತನಿಗೆ ನಮ್ಮ ಮೇಲೆ ಎಷ್ಟು ಪ್ರೀತಿಯಿದೆಯೆಂದು ಗೊತ್ತಾಗುತ್ತದೆ. (ರೋಮ. 1:20) ಉದಾಹರಣೆಗೆ ಆತನು ಈ ಭೂಮಿಯನ್ನು ಸೃಷ್ಟಿಸಿದ ರೀತಿಯನ್ನೇ ನೋಡಿ. ನಾವು ಹೇಗೊ ಬದುಕಿರಬೇಕು ಎಂಬ ರೀತಿಯಲ್ಲಿ ಅದನ್ನು ಸೃಷ್ಟಿಸದೆ, ನಾವು ಆನಂದದಿಂದ ಬದುಕಲು ಬೇಕಾದದ್ದೆಲ್ಲವನ್ನೂ ಅದರಲ್ಲಿ ಇಟ್ಟಿದ್ದಾನೆ. ಬದುಕಲು ನಮಗೆ ಒಂದು ಬಗೆಯ ಆಹಾರವಿದ್ದರೆ ಸಾಕು. ಆದರೆ ಯೆಹೋವನು ಬಗೆಬಗೆಯ ಆಹಾರ ಕೊಟ್ಟಿದ್ದಾನೆ. ಹಾಗಾಗಿ ಅದನ್ನು ತಿನ್ನುವಾಗ ನಮಗೆ ತೃಪ್ತಿ ಆಗುತ್ತದಲ್ಲವಾ! (ಪ್ರಸಂ. 9:7) ಕೆನಡದ ಕ್ಯಾತರಿನ್‌ ಎಂಬ ಸಹೋದರಿಯು ಸೃಷ್ಟಿಯನ್ನು, ಅದರಲ್ಲೂ ವಿಶೇಷವಾಗಿ ವಸಂತಕಾಲದಲ್ಲಿ (ಏಪ್ರಿಲ್‌ ತಿಂಗಳಿನಷ್ಟಕ್ಕೆ) ಏನೆಲ್ಲ ನಡೆಯುತ್ತದೊ ಅದನ್ನು ನೋಡಿ ಆನಂದಿಸುತ್ತಾರೆ. ಅವರನ್ನುವುದು: “ಎಲ್ಲದ್ದಕ್ಕೂ ಜೀವಕಳೆ ಬರುವುದನ್ನು ನೋಡುವಾಗ ಆನಂದವಾಗುತ್ತದೆ. ಇದೇ ಸಮಯಕ್ಕೆ ಸರಿಯಾಗಿ ಹೂವುಗಳು ಅರಳುವುದು, ಬೇರೆ ಊರುಗಳಿಗೆ ವಲಸೆಹೋಗಿದ್ದ ಹಕ್ಕಿಗಳು ತಿರುಗಿ ಬರುವುದನ್ನು ನೋಡಿ ಆಶ್ಚರ್ಯವಾಗುತ್ತದೆ. ನನ್ನ ಅಡುಗೆಮನೆಯ ಕಿಟಿಕಿಯಾಚೆ ಪಕ್ಷಿಗಳಿಗೆ ತಿನಿಸು ಇಟ್ಟಿರುವ ತಟ್ಟೆಗೆ ಚಿಕ್ಕ ಹಮ್ಮಿಂಗ್‌ಬರ್ಡ್‌ ಕೂಡ ಬರುತ್ತದೆ. ನಮಗೆ ಇಷ್ಟೊಂದು ಸಂತೋಷ ತರುವಂಥ ವಿಷಯಗಳನ್ನು ಕೊಡಬೇಕಾದರೆ ಖಂಡಿತವಾಗಿ ಯೆಹೋವನಿಗೆ ನಮ್ಮ ಮೇಲೆ ಪ್ರೀತಿ ಇರಲೇಬೇಕು.” ನಮ್ಮ ತಂದೆ ತನ್ನ ಸೃಷ್ಟಿಯನ್ನು ಪ್ರೀತಿಸುತ್ತಾನೆ. ನಾವು ಸಹ ಅದರಿಂದ ಸಂತೋಷ ಪಡೆಯಬೇಕೆಂದು ಬಯಸುತ್ತಾನೆ.—ಅ. ಕಾ. 14:16, 17.

5. ಮನುಷ್ಯರನ್ನು ಸೃಷ್ಟಿಸಿದ ರೀತಿಯಲ್ಲಿ ಯೆಹೋವನ ಪ್ರೀತಿ ಹೇಗೆ ತೋರಿಬರುತ್ತದೆ?

5 ಉದ್ದೇಶಭರಿತ ಕೆಲಸವನ್ನು ಮಾಡುವ ಮತ್ತು ಅದರಲ್ಲಿ ಆನಂದಿಸುವ ಸಾಮರ್ಥ್ಯವನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ. (ಪ್ರಸಂ. 2:24) ಭೂಮಿಯಲ್ಲೆಲ್ಲಾ ತುಂಬಿಕೊಂಡು, ಅದನ್ನು ವಶಮಾಡಿ, ಅದರಲ್ಲಿರುವ ಮೀನು, ಪಕ್ಷಿ, ಇತರ ಜೀವಿಗಳನ್ನು ನೋಡಿಕೊಳ್ಳುವ ಕೆಲಸವನ್ನು ಮನುಷ್ಯರಿಗೆ ಕೊಟ್ಟನು. (ಆದಿ. 1:26-28) ನಾವಾತನನ್ನು ಅನುಕರಿಸಲು ಸಾಧ್ಯವಾಗುವಂತೆ ಒಳ್ಳೊಳ್ಳೇ ಗುಣಗಳನ್ನೂ ನಮ್ಮಲ್ಲಿಟ್ಟನು.—ಎಫೆ. 5:1.

ದೇವರ ವಾಕ್ಯ ಅಮೂಲ್ಯ

6. ದೇವರ ವಾಕ್ಯಕ್ಕಾಗಿ ನಾವು ಏಕೆ ತುಂಬ ಕೃತಜ್ಞರಾಗಿರಬೇಕು?

6 ಯೆಹೋವನಿಗೆ ನಮ್ಮ ಮೇಲೆ ತುಂಬ ಪ್ರೀತಿ ಇರುವುದರಿಂದಲೇ ನಮಗೆ ಬೈಬಲನ್ನು ಕೊಟ್ಟಿದ್ದಾನೆ. ಮಾನವರ ಬಗ್ಗೆ ಆತನಿಗೆ ಹೇಗನಿಸುತ್ತದೆ ಮತ್ತು ಮಾನವರು ಆತನ ಬಗ್ಗೆ ಏನೆಲ್ಲ ತಿಳಿಯಬೇಕು ಎಂಬ ಮಾಹಿತಿ ಅದರಲ್ಲಿದೆ. ಉದಾಹರಣೆಗೆ, ಹಲವಾರು ಬಾರಿ ಅವಿಧೇಯರಾದ ಇಸ್ರಾಯೇಲ್ಯರ ಬಗ್ಗೆ ಯೆಹೋವನಿಗೆ ಹೇಗನಿಸಿತೆಂದು ಬೈಬಲ್‌ ಹೇಳುತ್ತದೆ. ಕೀರ್ತನೆ 78:38ರಲ್ಲಿ ಹೀಗಿದೆ: “ಆತನು ಕರುಣಾಳುವೂ ಅಪರಾಧಿಗಳನ್ನು ಸಂಹರಿಸದೆ ಕ್ಷಮಿಸುವವನೂ ಆಗಿ ತನ್ನ ಸಿಟ್ಟನ್ನೆಲ್ಲಾ ಏರಗೊಡದೆ ಅದನ್ನು ಹಲವು ಸಾರಿ ತಡೆಯುತ್ತಾ ಬಂದನು.” ಈ ವಚನದ ಬಗ್ಗೆ ಧ್ಯಾನಿಸಿದರೆ, ಯೆಹೋವನಿಗೆ ನಿಮ್ಮ ಮೇಲೆ ಎಷ್ಟು ಪ್ರೀತಿಯಿದೆ, ನಿಮ್ಮ ಬಗ್ಗೆ ಎಷ್ಟು ಕಾಳಜಿಯಿದೆ ಎಂಬದನ್ನು ಗ್ರಹಿಸಲು ನಿಮಗೆ ಸಹಾಯವಾಗುವುದು. ಯೆಹೋವನಿಗೆ ನಿಮ್ಮ ಬಗ್ಗೆ ಆಳವಾದ ಚಿಂತೆಯಿದೆಯೆಂಬ ದೃಢಭರವಸೆ ನಿಮಗಿರಬಲ್ಲದು.1 ಪೇತ್ರ 5:6, 7 ಓದಿ.

7. ನಾವು ಬೈಬಲನ್ನು ಏಕೆ ಅಮೂಲ್ಯವೆಂದು ಎಣಿಸಬೇಕು?

7 ಬೈಬಲನ್ನು ನಾವು ತುಂಬ ಅಮೂಲ್ಯವೆಂದು ಎಣಿಸಬೇಕು. ಏಕೆ? ಏಕೆಂದರೆ ಯೆಹೋವನು ತನ್ನ ಈ ವಾಕ್ಯದ ಮೂಲಕವೇ ನಮ್ಮ ಜೊತೆ ಮಾತಾಡುತ್ತಾನೆ. ಹೆತ್ತವರ ಮತ್ತು ಮಕ್ಕಳ ಮಧ್ಯೆ ಬಿಚ್ಚುಮನಸ್ಸಿನ ಮಾತುಕತೆ ಇದ್ದರೆ ಅವರ ನಡುವೆ ಪ್ರೀತಿ, ಭರವಸೆ ಹೆಚ್ಚಾಗುತ್ತದೆ. ಯೆಹೋವನು ಸಹ ನಮ್ಮ ಪ್ರೀತಿಯ ತಂದೆಯಾಗಿದ್ದಾನೆ. ನಾವಾತನನ್ನು ಯಾವತ್ತೂ ನೋಡಿಲ್ಲ, ಆತನ ಸ್ವರ ಕೇಳಿಲ್ಲ. ಆದರೂ ಬೈಬಲಿನ ಮೂಲಕ ಆತನು ನೇರವಾಗಿ ನಮ್ಮ ಜೊತೆ ಮಾತಾಡುವಂತಿದೆ! ಹಾಗಾಗಿ ನಾವಾತನಿಗೆ ಕಿವಿಗೊಡುತ್ತಾ ಇರಬೇಕು! (ಯೆಶಾ. 30:20, 21) ದೇವರ ವಾಕ್ಯವನ್ನು ಓದುವಾಗ ಯೆಹೋವನ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳುತ್ತೇವೆ, ಆತನಲ್ಲಿ ಭರವಸೆಯಿಡುತ್ತೇವೆ. ಆತನು ನಮಗೆ ಮಾರ್ಗದರ್ಶನ ಹಾಗೂ ಸಂರಕ್ಷಣೆ ಕೊಡುತ್ತಾನೆ.—ಕೀರ್ತನೆ 19:7-11; ಜ್ಞಾನೋಕ್ತಿ 1:33 ಓದಿ.

ಯೆಹೋಷಾಫಾಟನಿಗೆ ಬುದ್ಧಿವಾದ ಸಿಕ್ಕಿದರೂ ರಾಜನಾದ ಅವನ ‘ಉತ್ತಮ ಕಾರ್ಯಗಳನ್ನು’ ಸಹ ಯೆಹೋವನು ನೋಡಿದನು(ಪ್ಯಾರ 8, 9 ನೋಡಿ)

8, 9. ನಮಗೆ ಏನು ತಿಳಿದಿರಬೇಕೆನ್ನುವುದು ಯೆಹೋವನ ಆಸೆ? ಬೈಬಲಿನಿಂದ ಒಂದು ಉದಾಹರಣೆ ಕೊಡಿ.

8 ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ, ನಮ್ಮ ಲೋಪದೋಷಗಳನ್ನು ಮಾತ್ರವಲ್ಲ ಒಳ್ಳೇ ವಿಷಯಗಳನ್ನೂ ನೋಡುತ್ತಾನೆಂದು ನಮಗೆ ತಿಳಿದಿರಬೇಕೆನ್ನುವುದು ಆತನ ಆಸೆ. (2 ಪೂರ್ವ. 16:9) ಯೆಹೂದದ ರಾಜನಾದ ಯೆಹೋಷಾಫಾಟನ ವಿಷಯದಲ್ಲಿ ಇದನ್ನೇ ಮಾಡಿದನು. ಒಮ್ಮೆ ಯೆಹೋಷಾಫಾಟನು ಇಸ್ರಾಯೇಲಿನ ರಾಜನಾದ ಆಹಾಬನ ಜೊತೆ ಸೇರಿ, ರಾಮೋತ್‍ಗಿಲ್ಯಾದಿನಲ್ಲಿ ಅರಾಮ್ಯರ ವಿರುದ್ಧ ಯುದ್ಧಮಾಡುವ ತಪ್ಪು ತೀರ್ಮಾನ ಮಾಡಿದನು. 400 ಮಂದಿ ಸುಳ್ಳು ಪ್ರವಾದಿಗಳು ದುಷ್ಟನಾದ ಆಹಾಬನಿಗೆ ಅವನು ಯುದ್ಧದಲ್ಲಿ ಗೆಲ್ಲುವನೆಂದು ಹೇಳಿದರು. ಆದರೆ ಯೆಹೋಷಾಫಾಟ ಮತ್ತು ಆಹಾಬ ಯುದ್ಧಕ್ಕೆ ಹೋದರೆ ಅವರಿಗೆ ಸೋಲು ಖಂಡಿತ ಎಂದು ಯೆಹೋವನ ಸತ್ಯ ಪ್ರವಾದಿಯಾದ ಮಿಾಕಾಯೆಹು ಹೇಳಿದ್ದನು. ಹಾಗೆಯೇ ಆಯಿತು. ಆಹಾಬ ಯುದ್ಧದಲ್ಲಿ ಸತ್ತುಹೋದನು. ಯೆಹೋಷಾಫಾಟನು ಕೂದಲೆಳೆಯಷ್ಟರಲ್ಲಿ ಪಾರಾದನು. ಯೆಹೋವನು ಯುದ್ಧದ ನಂತರ ಯೆಹೂವನ್ನು ಕಳುಹಿಸಿ ಯೆಹೋಷಾಫಾಟನು ಮಾಡಿದ ತಪ್ಪಿಗೆ ಬುದ್ಧಿವಾದ ಹೇಳಿದನು. ಅದೇ ಸಮಯದಲ್ಲಿ “ನಿನ್ನಲ್ಲಿ ಉತ್ತಮವಾದ ಕಾರ್ಯಗಳು ಕಾಣಲ್ಪಟ್ಟಿವೆ” (ಪವಿತ್ರ ಗ್ರಂಥ ಭಾಷಾಂತರ) ಎಂದು ಯೆಹೂವಿನ ಮೂಲಕ ಹೇಳಿದನು.—2 ಪೂರ್ವ. 18:4, 5, 18-22, 33, 34; 19:1-3.

9 ಯೆಹೋಷಾಫಾಟನು ಕೆಲವು ವರ್ಷಗಳ ಹಿಂದೆ ಸರದಾರರಿಗೆ, ಲೇವಿಯರಿಗೆ, ಯಾಜಕರಿಗೆ ಯೆಹೂದದ ಎಲ್ಲ ಪಟ್ಟಣಗಳಿಗೆ ಹೋಗಿ ಯೆಹೋವನ ಧರ್ಮಶಾಸ್ತ್ರವನ್ನು ಕಲಿಸಲು ಹೇಳಿದ್ದನು. ಅವರು ಈ ಕೆಲಸವನ್ನು ಎಷ್ಟು ಚೆನ್ನಾಗಿ ಮಾಡಿದ್ದರೆಂದರೆ ಬೇರೆ ಜನಾಂಗಗಳವರಿಗೂ ಯೆಹೋವನ ಬಗ್ಗೆ ತಿಳಿದುಬಂತು. (2 ಪೂರ್ವ. 17:3-10) ಹಾಗಾಗಿ ಯೆಹೋಷಾಫಾಟನು ಒಂದು ತಪ್ಪು ತೀರ್ಮಾನ ಮಾಡಿದ್ದರೂ ಈ ಹಿಂದೆ ತನ್ನ ಜೀವನದಲ್ಲಿ ಮಾಡಿದ್ದ ಒಳ್ಳೇ ಕೆಲಸಗಳನ್ನು ಯೆಹೋವನು ಮರೆತಿರಲಿಲ್ಲ. ಇದು ನಮಗೆ ತುಂಬ ನೆಮ್ಮದಿ ಕೊಡುತ್ತದೆ. ಯಾಕೆಂದರೆ ನಾವೂ ಒಮ್ಮೊಮ್ಮೆ ತಪ್ಪುಗಳನ್ನು ಮಾಡುತ್ತೇವೆ. ಹಾಗಿದ್ದರೂ ಯೆಹೋವನ ಸೇವೆಯಲ್ಲಿ ನಮ್ಮಿಂದ ಏನು ಆಗುತ್ತದೊ ಅದೆಲ್ಲವನ್ನು ಮಾಡುತ್ತಾ ಇದ್ದರೆ ಆತನು ನಮ್ಮನ್ನು ಪ್ರೀತಿಸುತ್ತಾ ಇರುವನು. ನಾವು ಮಾಡಿರುವ ಒಳ್ಳೇ ವಿಷಯಗಳನ್ನು ಆತನೆಂದೂ ಮರೆಯುವುದಿಲ್ಲ.

ಪ್ರಾರ್ಥನೆಯ ಸುಯೋಗಕ್ಕಾಗಿ ಕೃತಜ್ಞರಾಗಿರಿ

10, 11. (ಎ) ಪ್ರಾರ್ಥನೆಯು ಯೆಹೋವನಿಂದ ಒಂದು ವಿಶೇಷ ಉಡುಗೊರೆಯಾಗಿದೆ ಏಕೆ? (ಬಿ) ನಮ್ಮ ಪ್ರಾರ್ಥನೆಗಳಿಗೆ ದೇವರು ಹೇಗೆ ಉತ್ತರ ಕೊಡಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

10 ಒಬ್ಬ ಪ್ರೀತಿಯ ತಂದೆಯು ಮಕ್ಕಳು ತನ್ನ ಜೊತೆ ಮಾತಾಡಲು ಬಯಸುವಾಗ ಅವರಿಗೆ ಕಿವಿಗೊಡಲು ಸಮಯ ಕೊಡುತ್ತಾನೆ. ಅವರಿಗೆ ಯಾವೆಲ್ಲ ಚಿಂತೆ, ಭಯಗಳಿವೆ ಎಂದು ತಿಳಿಯಲು ಇಷ್ಟಪಡುತ್ತಾನೆ. ಏಕೆಂದರೆ ಅವರ ಬಗ್ಗೆ ಅವನಿಗೆ ತುಂಬ ಕಾಳಜಿಯಿದೆ. ನಮ್ಮ ಪ್ರೀತಿಯ ತಂದೆಯಾದ ಯೆಹೋವನೂ ಹಾಗೆಯೇ. ನಾವಾತನಿಗೆ ಪ್ರಾರ್ಥನೆ ಮಾಡುವಾಗ ಕಿವಿಗೊಡುತ್ತಾನೆ. ನಮ್ಮ ತಂದೆಯಾದ ಯೆಹೋವನ ಜೊತೆ ಮಾತಾಡುವುದು ಅಮೂಲ್ಯ ಸುಯೋಗ. ಅಲ್ಲವೇ?

11 ನಾವು ಯಾವುದೇ ಸಮಯದಲ್ಲಿ ಯೆಹೋವನಿಗೆ ಪ್ರಾರ್ಥನೆ ಮಾಡಬಹುದು. ಆತನು ನಮ್ಮ ಸ್ನೇಹಿತನು. ಹಾಗಾಗಿ ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡಲು ಆತನು ಯಾವಾಗಲೂ ಸಿದ್ಧನಿರುತ್ತಾನೆ. ಈ ಮುಂಚೆ ತಿಳಿಸಲಾದ ತಾರಾ ಹೇಳುವುದು: “ನೀವು ಆತನಿಗೆ ಏನು ಬೇಕಾದರೂ ಹೇಳಬಹುದು. ಎಲ್ಲವನ್ನೂ ಹೇಳಬಹುದು.” ನಮ್ಮ ಮನದಾಳದ ಯೋಚನೆಗಳನ್ನು ಯೆಹೋವನಿಗೆ ಹೇಳುವಾಗ ಆತನು ಒಂದು ವಚನದ ಮೂಲಕ, ನಮ್ಮ ಸಾಹಿತ್ಯದಲ್ಲಿನ ಒಂದು ಲೇಖನದ ಮೂಲಕ ಇಲ್ಲವೆ ಒಬ್ಬ ಸಹೋದರ ಅಥವಾ ಸಹೋದರಿಯ ಪ್ರೋತ್ಸಾಹದ ಮಾತುಗಳ ಮೂಲಕ ನಮ್ಮ ಪ್ರಾರ್ಥನೆಗೆ ಉತ್ತರ ಕೊಡಬಹುದು. ಆತನು ನಮ್ಮ ಶ್ರದ್ಧಾಪೂರ್ವಕ ಬೇಡಿಕೆಗಳಿಗೆ ಕಿವಿಗೊಡುತ್ತಾನೆ. ಬೇರಾರೂ ನಮ್ಮನ್ನು ಅರ್ಥಮಾಡಿಕೊಳ್ಳದಿದ್ದರೂ ಆತನು ಅರ್ಥಮಾಡಿಕೊಳ್ಳುತ್ತಾನೆ. ಆತನು ನಮ್ಮ ಪ್ರಾರ್ಥನೆಗಳಿಗೆ ಕೊಡುವ ಉತ್ತರಗಳು ನಮ್ಮ ಮೇಲೆ ಆತನಿಗಿರುವ ಪ್ರೀತಿ ಶಾಶ್ವತವೆಂದು ತೋರಿಸುತ್ತವೆ.

12. ಬೈಬಲಿನಲ್ಲಿರುವ ಪ್ರಾರ್ಥನೆಗಳನ್ನು ನಾವೇಕೆ ಅಧ್ಯಯನ ಮಾಡಬೇಕು? ಒಂದು ಉದಾಹರಣೆ ಕೊಡಿ.

12 ಬೈಬಲಿನಲ್ಲಿರುವ ಪ್ರಾರ್ಥನೆಗಳಿಂದ ನಾವು ಮುಖ್ಯವಾದ ಪಾಠಗಳನ್ನು ಕಲಿಯಬಹುದು. ಕುಟುಂಬ ಆರಾಧನೆಯಲ್ಲಿ ನಾವು ಈ ಪ್ರಾರ್ಥನೆಗಳ ಬಗ್ಗೆ ಅಧ್ಯಯನ ಮಾಡಿದರೆ ತುಂಬ ಸಹಾಯವಾಗುವುದು. ದೇವರ ಹಿಂದಿನ ಕಾಲದ ಸೇವಕರ ಮನಃಪೂರ್ವಕ ಪ್ರಾರ್ಥನೆಗಳ ಕುರಿತು ಧ್ಯಾನಿಸಿದರೆ ನಮ್ಮ ಪ್ರಾರ್ಥನೆಗಳ ಗುಣಮಟ್ಟ ಹೆಚ್ಚುವುದು. ಉದಾಹರಣೆಗೆ ಯೋನನು ದೊಡ್ಡ ಮೀನಿನ ಹೊಟ್ಟೆಯಲ್ಲಿದ್ದಾಗ ದೀನತೆಯಿಂದ ಮಾಡಿದ ಪ್ರಾರ್ಥನೆಯನ್ನು ಅಧ್ಯಯನ ಮಾಡಿ. (ಯೋನ 1:17–2:10) ದೇವಾಲಯವನ್ನು ಪ್ರತಿಷ್ಠಾಪಿಸುವ ಸಮಯದಲ್ಲಿ ಸೊಲೊಮೋನನು ಯಥಾರ್ಥಮನಸ್ಸಿನಿಂದ ಯೆಹೋವನಿಗೆ ಮಾಡಿದ ಪ್ರಾರ್ಥನೆಯನ್ನು ಪರಿಶೀಲಿಸಿರಿ. (1 ಅರ. 8:22-53) ಯೇಸು ಕಲಿಸಿದ ಮಾದರಿ ಪ್ರಾರ್ಥನೆಯ ಬಗ್ಗೆ ಧ್ಯಾನಿಸಿರಿ. (ಮತ್ತಾ. 6:9-13) ಆದರೆ ಇದೆಲ್ಲಕ್ಕಿಂತಲೂ ಮುಖ್ಯವಾಗಿ ಪ್ರತಿದಿನವೂ “ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ.” ಆಗ “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.” ಯೆಹೋವನ ಶಾಶ್ವತ ಪ್ರೀತಿಗಾಗಿ ನಮಗಿರುವ ಕೃತಜ್ಞತೆ ಹೆಚ್ಚುತ್ತಾ ಹೋಗುವುದು.—ಫಿಲಿ. 4:6, 7.

ವಿಮೋಚನಾ ಮೌಲ್ಯಕ್ಕಾಗಿ ನಿಮಗಿರುವ ಕೃತಜ್ಞತೆ ತೋರಿಸಿ

13. ವಿಮೋಚನಾ ಮೌಲ್ಯದಿಂದಾಗಿ ನಮಗೆ ಯಾವ ಅವಕಾಶ ಸಿಕ್ಕಿದೆ?

13 ‘ನಾವು ಜೀವವನ್ನು ಪಡೆದುಕೊಳ್ಳಸಾಧ್ಯವಾಗುವಂತೆ’ ಯೆಹೋವನು ವಿಮೋಚನಾ ಮೌಲ್ಯದ ಉಡುಗೊರೆ ಕೊಟ್ಟನು. (1 ಯೋಹಾ. 4:9) ದೇವರ ಪ್ರೀತಿಯ ಈ ಕೃತ್ಯಕ್ಕೆ ಸೂಚಿಸುತ್ತಾ ಅಪೊಸ್ತಲ ಪೌಲನು ಹೀಗೆ ಬರೆದನು: “ಕ್ರಿಸ್ತನು ನೇಮಿತ ಕಾಲದಲ್ಲಿ ಭಕ್ತಿಹೀನ ಜನರಿಗೋಸ್ಕರ ಸತ್ತನು. ಒಬ್ಬ ನೀತಿವಂತನಿಗೋಸ್ಕರ ಯಾರಾದರೂ ಸಾಯುವುದು ಅಪರೂಪವೇ; ವಾಸ್ತವದಲ್ಲಿ ಒಬ್ಬ ಒಳ್ಳೆಯ ಮನುಷ್ಯನಿಗಾಗಿ ಯಾವನಾದರೂ ಸಾಯಲು ಒಂದುವೇಳೆ ಧೈರ್ಯಮಾಡಬಹುದು. ಆದರೆ ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಸತ್ತ”ನು. (ರೋಮ. 5:6-8) ದೇವರ ಪ್ರೀತಿಯ ಅತೀ ದೊಡ್ಡ ಉದಾಹರಣೆ ವಿಮೋಚನಾ ಮೌಲ್ಯ ಆಗಿದೆ. ಅದು ಮಾನವರಿಗೆ ದೇವರ ಜೊತೆ ಆಪ್ತ ಸಂಬಂಧ ಇಟ್ಟುಕೊಳ್ಳಲು ಅವಕಾಶ ಕೊಡುತ್ತದೆ.

14, 15. (ಎ) ವಿಮೋಚನಾ ಮೌಲ್ಯದಿಂದಾಗಿ ಅಭಿಷಿಕ್ತ ಕ್ರೈಸ್ತರಿಗೆ ಏನು ಸಾಧ್ಯವಾಗುತ್ತದೆ? (ಬಿ) ಭೂಮಿ ಮೇಲೆ ಜೀವಿಸುವ ನಿರೀಕ್ಷೆಯಿರುವವರಿಗೆ ಏನು ಸಾಧ್ಯವಾಗುತ್ತದೆ?

14 ಕ್ರೈಸ್ತರ ಒಂದು ಚಿಕ್ಕ ಗುಂಪಿಗೆ ಯೆಹೋವನ ಶಾಶ್ವತ ಪ್ರೀತಿಯನ್ನು ಒಂದು ವಿಶೇಷವಾದ ರೀತಿಯಲ್ಲಿ ಅನುಭವಿಸುತ್ತಾರೆ. (ಯೋಹಾ. 1:12, 13; 3:5-7) ಇವರನ್ನು ದೇವರು ತನ್ನ ಪವಿತ್ರಾತ್ಮದಿಂದ ಅಭಿಷೇಕಿಸಿದ್ದಾನೆ. ಈ ಕಾರಣದಿಂದ ಅವರು ಈಗಲೇ ಆತನ ಮಕ್ಕಳಾಗಿದ್ದಾರೆ. (ರೋಮ. 8:15, 16) ಇವರಲ್ಲಿ ಕೆಲವರು ಈಗಲೂ ಭೂಮಿಯಲ್ಲೇ ಇರುವುದರಿಂದ ಅವರನ್ನು ‘ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿ ಎಬ್ಬಿಸಿ ಸ್ವರ್ಗೀಯ ಸ್ಥಳಗಳಲ್ಲಿ ಕೂರಿಸಲಾಗಿದೆ’ ಎಂದು ಪೌಲನು ಹೇಳಿದ್ದೇಕೆ? (ಎಫೆ. 2:6) ಏಕೆಂದರೆ ಯೆಹೋವನು ಅವರಿಗೆ ಸ್ವರ್ಗದಲ್ಲಿ ನಿತ್ಯಜೀವದ ನಿರೀಕ್ಷೆಯನ್ನು ಕೊಟ್ಟಿದ್ದಾನೆ.—ಎಫೆ. 1:13, 14; ಕೊಲೊ. 1:5.

15 ಅಭಿಷಿಕ್ತರಲ್ಲದವರು ವಿಮೋಚನಾ ಮೌಲ್ಯದಲ್ಲಿ ನಂಬಿಕೆ ತೋರಿಸಿದರೆ ದೇವರ ಸ್ನೇಹಿತರಾಗಬಹುದು. ಇವರು ಸಹ ಮುಂದೆ ದೇವರ ಮಕ್ಕಳಾಗಿ ದತ್ತುತೆಗೆಯಲ್ಪಟ್ಟು, ಭೂಮಿ ಮೇಲೆ ಪರದೈಸಿನಲ್ಲಿ ಸದಾಕಾಲ ಜೀವಿಸುವ ಸಾಧ್ಯತೆ ಇದೆ. ವಿಮೋಚನಾ ಮೌಲ್ಯವು ಎಲ್ಲ ಮಾನವರ ಮೇಲೆ ಯೆಹೋವನಿಗಿರುವ ಪ್ರೀತಿಯನ್ನು ತೋರಿಸುತ್ತದೆ. (ಯೋಹಾ. 3:16) ನಾವು ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡಿದರೆ ಆತನು ನಮಗೆ ಇರುವುದರಲ್ಲೇ ಅತ್ಯುತ್ತಮ ಜೀವನವನ್ನು ಹೊಸ ಲೋಕದಲ್ಲಿ ಕೊಡುವನೆಂಬ ಸಂಗತಿ ರೋಮಾಂಚಕಾರಿ ಆಗಿದೆ! ನಮ್ಮ ಮೇಲೆ ದೇವರಿಗಿರುವ ಶಾಶ್ವತ ಪ್ರೀತಿಯ ಅತ್ಯಂತ ಮಹಾನ್‌ ಪುರಾವೆಯಾದ ವಿಮೋಚನಾ ಮೌಲ್ಯಕ್ಕೆ ಕೃತಜ್ಞರಾಗಿದ್ದೇವೆಂದು ತೋರಿಸೋಣ.

ಯೆಹೋವನ ಮೇಲೆ ನಿಮಗಿರುವ ಪ್ರೀತಿಯನ್ನು ತೋರಿಸಿ

16. ದೇವರ ಪ್ರೀತಿಯ ಬಗ್ಗೆ ಧ್ಯಾನಿಸಿದ ನಂತರ ಏನಾಗುತ್ತದೆ?

16 ಯೆಹೋವನು ನಮಗೆ ಪ್ರೀತಿ ತೋರಿಸಿರುವ ವಿಧಗಳನ್ನು ಲೆಕ್ಕಮಾಡಲು ಸಾಧ್ಯವೇ ಇಲ್ಲ. ರಾಜ ದಾವೀದನು ಹೀಗೆ ಹಾಡಿದನು: “ದೇವರೇ, ನಿನ್ನ ಸಂಕಲ್ಪಗಳು ನನ್ನ ಎಣಿಕೆಯಲ್ಲಿ ಎಷ್ಟೋ ಗೌರವವಾಗಿವೆ; ಅವುಗಳ ಒಟ್ಟು ಅಸಂಖ್ಯವಾಗಿದೆ. ಅವುಗಳನ್ನು ಲೆಕ್ಕಿಸುವದಾದರೆ ಸಮುದ್ರದ ಮರಳಿಗಿಂತ ಹೆಚ್ಚಾಗಿವೆ.” (ಕೀರ್ತ. 139:17, 18) ಯೆಹೋವನು ನಮ್ಮನ್ನು ಪ್ರೀತಿಸುವ ಅನೇಕ ವಿಧಗಳ ಬಗ್ಗೆ ನಾವು ಧ್ಯಾನಿಸಬೇಕು. ಆಗ ಆತನನ್ನು ಪ್ರೀತಿಸಲು ಮತ್ತು ಆತನಿಗಾಗಿ ನಮ್ಮಿಂದ ಆದದ್ದೆಲ್ಲವನ್ನು ಮಾಡಲು ಬೇಕಾದ ಪ್ರೇರೇಪಣೆ ನಮಗೆ ಸಿಗುತ್ತದೆ.

17, 18. ದೇವರ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸುವ ಕೆಲವು ವಿಧಗಳಾವುವು?

17 ನಾವು ಯೆಹೋವನನ್ನು ಪ್ರೀತಿಸುತ್ತೇವೆಂದು ಹಲವಾರು ವಿಧಗಳಲ್ಲಿ ತೋರಿಸಬಹುದು. ಉದಾಹರಣೆಗೆ, ಇತರರಿಗೆ ರಾಜ್ಯದ ಸುವಾರ್ತೆ ಬಗ್ಗೆ ಉತ್ಸಾಹದಿಂದ ಹೇಳುವ ಮೂಲಕ ಆ ಪ್ರೀತಿಯನ್ನು ತೋರಿಸಬಲ್ಲೆವು. (ಮತ್ತಾ. 24:14; 28:19, 20) ನಮ್ಮ ನಂಬಿಕೆಯನ್ನು ಪರೀಕ್ಷಿಸುವಂಥ ಕಷ್ಟಸಂಕಟಗಳನ್ನು ನಿಷ್ಠೆಯಿಂದ ತಾಳಿಕೊಳ್ಳುವ ಮೂಲಕವೂ ದೇವರ ಮೇಲಿನ ಪ್ರೀತಿಯನ್ನು ತೋರಿಸಬಲ್ಲೆವು. (ಕೀರ್ತನೆ 84:11; ಯಾಕೋಬ 1:2-5 ಓದಿ.) ನಮ್ಮ ಕಷ್ಟಪರೀಕ್ಷೆಗಳು ತುಂಬ ಕಠಿಣವಾಗಿದ್ದರೂ, ಯೆಹೋವನು ನಮ್ಮ ಕಷ್ಟಗಳನ್ನು ನೋಡುತ್ತಾನೆ ಮತ್ತು ಸಹಾಯ ಮಾಡುತ್ತಾನೆಂಬ ಭರವಸೆ ನಮಗಿರಬಲ್ಲದು. ಯಾಕೆಂದರೆ ನಾವು ಆತನಿಗೆ ತುಂಬ ಅಮೂಲ್ಯರಾಗಿದ್ದೇವೆ.—ಕೀರ್ತ. 56:8.

18 ಯೆಹೋವನ ಮೇಲೆ ನಮಗಿರುವ ಪ್ರೀತಿಯು ಆತನು ಸೃಷ್ಟಿಸಿರುವ ಎಲ್ಲ ಅದ್ಭುತ ವಿಷಯಗಳ ಕುರಿತು ಧ್ಯಾನಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಬೈಬಲಿನ ಒಳ್ಳೇ ವಿದ್ಯಾರ್ಥಿಗಳಾಗಿದ್ದು ಶ್ರದ್ಧೆಯಿಂದ ಅದರ ಅಧ್ಯಯನ ಮಾಡುವ ಮೂಲಕ ಆತನ ಮೇಲೆ ಹಾಗೂ ಆತನ ವಾಕ್ಯದ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸುತ್ತೇವೆ. ತಪ್ಪದೇ ಯೆಹೋವನಿಗೆ ಪ್ರಾರ್ಥನೆಯನ್ನೂ ಮಾಡುತ್ತೇವೆ ಯಾಕೆಂದರೆ ನಾವಾತನನ್ನು ಪ್ರೀತಿಸುತ್ತೇವೆ ಮತ್ತು ಆತನೊಟ್ಟಿಗೆ ನಮಗಿರುವ ಸಂಬಂಧವನ್ನು ಬಲಪಡಿಸಲು ಬಯಸುತ್ತೇವೆ. ವಿಮೋಚನಾ ಮೌಲ್ಯವೆಂಬ ಅಮೂಲ್ಯ ಉಡುಗೊರೆಯ ಬಗ್ಗೆ ನಾವು ಧ್ಯಾನಿಸುವಾಗ, ಆತನ ಮೇಲೆ ನಮಗಿರುವ ಪ್ರೀತಿ ಇನ್ನಷ್ಟು ಬಲವಾಗುತ್ತದೆ. (1 ಯೋಹಾ. 2:1, 2) ಯೆಹೋವನಿಗೆ ನಮ್ಮ ಮೇಲಿರುವ ಶಾಶ್ವತ ಪ್ರೀತಿಯನ್ನು ತುಂಬ ಅಮೂಲ್ಯವಾಗಿ ಎಣಿಸುತ್ತೇವೆಂದು ತೋರಿಸಬಹುದಾದ ಹಲವಾರು ವಿಧಗಳಲ್ಲಿ ಇವು ಕೆಲವು ಮಾತ್ರ.

^ ಪ್ಯಾರ. 1 ಹೆಸರುಗಳನ್ನು ಬದಲಾಯಿಸಲಾಗಿದೆ.