ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೊಸ ಲೋಕದ ಜೀವನಕ್ಕೆ ಈಗಲೇ ತಯಾರಿ ಮಾಡಿ

ಹೊಸ ಲೋಕದ ಜೀವನಕ್ಕೆ ಈಗಲೇ ತಯಾರಿ ಮಾಡಿ

‘ವಾಸ್ತವವಾದ ಜೀವನವನ್ನು ಭದ್ರವಾಗಿ ಹಿಡಿಯುವಂತೆ ಒಳ್ಳೇದನ್ನು ಮಾಡುವವರಾಗಿರಲು ಅವರಿಗೆ ಆಜ್ಞಾಪಿಸು.’—1 ತಿಮೊ. 6:18, 19.

ಗೀತೆಗಳು: 125, 40

1, 2. (ಎ) ಪರದೈಸಿನಲ್ಲಿ ನೀವು ಯಾವುದಕ್ಕಾಗಿ ಕಾಯುತ್ತಿದ್ದೀರಿ? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಹೊಸ ಲೋಕದಲ್ಲಿ ನಮಗೆ ಯಾವುದು ಎಲ್ಲಕ್ಕಿಂತ ಹೆಚ್ಚು ಸಂತೋಷ ಕೊಡಲಿದೆ?

“ನಿತ್ಯಜೀವ.” ಇದಕ್ಕಾಗಿ ನಾವು ಕಾತುರದಿಂದ ಕಾಯುತ್ತಿದ್ದೇವೆ. ಅಪೊಸ್ತಲ ಪೌಲನು ಇದನ್ನೇ “ವಾಸ್ತವವಾದ ಜೀವನ” ಎಂದು ವರ್ಣಿಸಿದನು. (1 ತಿಮೊಥೆಯ 6:12, 19 ಓದಿ.) ಹೆಚ್ಚಿನವರಿಗೆ ಭೂಮಿ ಮೇಲಿನ ಪರದೈಸಿನಲ್ಲಿ ಶಾಶ್ವತ ಜೀವನ ಸಿಗಲಿದೆ. ಅಲ್ಲಿ ಪ್ರತಿ ದಿನ ನಿದ್ದೆಯಿಂದ ಏಳುವಾಗ ಆರೋಗ್ಯದಿಂದ, ಸಂತೋಷದಿಂದ, ತೃಪ್ತಿಯಿಂದ ಇರುವುದನ್ನು ಸ್ವಲ್ಪ ಯೋಚಿಸಿ. (ಯೆಶಾ. 35:5, 6) ನಿಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆ ಸಮಯ ಕಳೆಯುವುದು ಎಷ್ಟು ಚೆನ್ನಾಗಿರುತ್ತದಲ್ವಾ? ಪುನರುತ್ಥಾನವಾದವರೂ ಅಲ್ಲಿ ನಿಮ್ಮ ಜೊತೆ ಇರುತ್ತಾರೆ. (ಯೋಹಾ. 5:28, 29; ಅ. ಕಾ. 24:15) ಆಗ ಹೊಸಹೊಸ ಕಲೆಗಳನ್ನು ಕಲಿಯಲು ಮತ್ತು ನಿಮ್ಮ ಇಷ್ಟದ ಕೆಲಸಗಳನ್ನು ಇನ್ನೂ ಚೆನ್ನಾಗಿ ಮಾಡಲು ಸಮಯ ಸಿಗಲಿದೆ. ಉದಾಹರಣೆಗೆ ನೀವು ವಿಜ್ಞಾನದ ಬಗ್ಗೆ ಇನ್ನಷ್ಟು ವಿಷಯಗಳನ್ನು, ಸಂಗೀತ ಉಪಕರಣಗಳನ್ನು ನುಡಿಸಲು ಕಲಿಯಬಹುದು. ನಿಮ್ಮ ಸ್ವಂತ ಮನೆಯ ನಕ್ಷೆ ರಚಿಸಲೂ ಕಲಿಯಬಹುದು.

2 ಈ ಎಲ್ಲ ಒಳ್ಳೇ ವಿಷಯಗಳನ್ನು ನಾವು ಎದುರುನೋಡುತ್ತೇವೆ ನಿಜ. ಆದರೆ ಯೆಹೋವನನ್ನು ಆರಾಧಿಸುವುದೇ ನಮಗೆ ಎಲ್ಲಕ್ಕಿಂತ ಹೆಚ್ಚು ಸಂತೋಷ ಕೊಡಲಿದೆ. ಎಲ್ಲ ಜನರು ಯೆಹೋವನ ನಾಮವನ್ನು ಪವಿತ್ರವೆಂದು ಎಣಿಸಿದಾಗ, ಆತನನ್ನು ತಮ್ಮ ರಾಜನನ್ನಾಗಿ ಸ್ವೀಕರಿಸಿದಾಗ ಜೀವನ ಹೇಗಿರುತ್ತದೆಂದು ಸ್ವಲ್ಪ  ಊಹಿಸಿ. (ಮತ್ತಾ. 6:9, 10) ಯೆಹೋವನ ಉದ್ದೇಶದಂತೆ ಭೂಮಿಯಲ್ಲಿ ಪರಿಪೂರ್ಣ ಮನುಷ್ಯರು ತುಂಬಿಕೊಳ್ಳುವುದನ್ನು ನೋಡಿ ನಮ್ಮ ಮೈಜು೦ ಆಗಲಿದೆ. ನಾವು ಪರಿಪೂರ್ಣರಾಗುತ್ತಾ ಹೋದಂತೆ ಯೆಹೋವನ ಜೊತೆ ನಮಗಿರುವ ಸಂಬಂಧವನ್ನು ಬಲಗೊಳಿಸುವುದು ಸುಲಭವಾಗುತ್ತಾ ಹೋಗುತ್ತದೆ. ಅದು ಹೇಗಿರುತ್ತದೆಂದು ಸ್ವಲ್ಪ ಊಹಿಸಿ!—ಕೀರ್ತ. 73:28; ಯಾಕೋ. 4:8.

3. ಈಗ ನಾವು ಯಾವುದಕ್ಕಾಗಿ ತಯಾರಿ ಮಾಡಬೇಕು?

3 ಯೆಹೋವನು ಈ ಎಲ್ಲ ಅದ್ಭುತಕರ ವಿಷಯಗಳನ್ನು ಮಾಡುತ್ತಾನೆಂಬ ಭರವಸೆ ನಮಗಿದೆ. ಏಕೆಂದರೆ “ದೇವರಿಗೆ ಎಲ್ಲವೂ ಸಾಧ್ಯ.” (ಮತ್ತಾ. 19:25, 26) ನಾವು ಹೊಸ ಲೋಕದಲ್ಲಿ ಎಂದೆಂದೂ ಜೀವಿಸಬೇಕಾದರೆ ನಿತ್ಯಜೀವವನ್ನು ‘ಭದ್ರವಾಗಿ ಹಿಡಿಯುವ’ ಸಮಯ ಇದೇ ಆಗಿದೆ. ಅಂತ್ಯ ಬೇಗ ಬರುತ್ತದೆಂದು ನಮಗೆ ಗೊತ್ತು. ಹಾಗಾಗಿ ಅದು ಯಾವ ಕ್ಷಣದಲ್ಲಾದರೂ ಬರುತ್ತದೆಂದು ನಿರೀಕ್ಷಿಸುತ್ತೇವೆ. ಇದು ನಾವು ಜೀವಿಸುವಂಥ ರೀತಿಯಲ್ಲಿ ತೋರಿಬರಬೇಕು. ಹೊಸ ಲೋಕದ ಜೀವನಕ್ಕಾಗಿ ತಯಾರಾಗಲು ನಮ್ಮಿಂದಾದ ಎಲ್ಲವನ್ನೂ ಈಗಲೇ ಮಾಡಬೇಕು. ಹೇಗೆಂದು ನೋಡೋಣ.

ಹೇಗೆ ತಯಾರಿ ಮಾಡಬೇಕು?

4. ಹೊಸ ಲೋಕದ ಜೀವನಕ್ಕಾಗಿ ನಾವೀಗ ಹೇಗೆ ತಯಾರಿ ಮಾಡಬಹುದು? ಉದಾಹರಣೆ ಕೊಡಿ.

4 ಹೊಸ ಲೋಕದ ಜೀವನಕ್ಕಾಗಿ ಈಗ ನಾವು ಹೇಗೆ ತಯಾರಿ ಮಾಡಬಹುದು? ನೆನಸಿ, ನಾವು ಬೇರೊಂದು ದೇಶಕ್ಕೆ ಹೋಗಿ ಜೀವಿಸಲಿದ್ದೇವೆ. ಅಲ್ಲಿ ಜೀವಿಸಲು ಬೇಕಾದ ತಯಾರಿ ಹೇಗೆ ಮಾಡುತ್ತೇವೆ? ಬಹುಶಃ ಅಲ್ಲಿನ ಭಾಷೆ, ಪದ್ಧತಿಗಳನ್ನು ಕಲಿಯಲು ಶುರುಮಾಡುತ್ತೇವೆ. ಅಲ್ಲಿನ ಆಹಾರ, ತಿನಿಸುಗಳನ್ನು ಸೇವಿಸಿ ರುಚಿ ತಿಳಿದುಕೊಳ್ಳುತ್ತೇವೆ. ಹಾಗೆಯೇ ಹೊಸ ಲೋಕದಲ್ಲಿ ಈಗಾಗಲೇ ಇದ್ದೇವೊ ಎಂಬಂತೆ ಜೀವಿಸುವ ಮೂಲಕ ನಾವು ಅಲ್ಲಿನ ಜೀವನಕ್ಕಾಗಿ ತಯಾರಿ ಮಾಡಬಹುದು. ಇದನ್ನು ಮಾಡುವುದು ಹೇಗೆನ್ನುವುದರ ಬಗ್ಗೆ ಕೆಲವು ವಿಧಾನಗಳನ್ನು ಈಗ ನೋಡೋಣ.

5, 6. ಯೆಹೋವನ ಸಂಘಟನೆ ಕೊಡುತ್ತಿರುವ ನಿರ್ದೇಶನಗಳಿಗೆ ವಿಧೇಯರಾಗಲು ಕಲಿತರೆ ಹೊಸ ಲೋಕದ ಜೀವನಕ್ಕೆ ತಯಾರಾಗಲು ಹೇಗೆ ಸಹಾಯವಾಗುವುದು?

5 ಜನರು ತಮಗೆ ಇಷ್ಟಬಂದಂತೆ ಏನು ಬೇಕಾದರೂ ಮಾಡಬಹುದೆಂದು ಯೋಚಿಸಬೇಕೆನ್ನುವುದು ಸೈತಾನನ ಉದ್ದೇಶ. ಸ್ವತಂತ್ರರಾಗಿರುವುದೇ ಮುಖ್ಯ, ದೇವರಿಗೆ ವಿಧೇಯರಾಗುವ ಅಗತ್ಯವಿಲ್ಲವೆಂದು ಅನೇಕರು ನೆನಸುತ್ತಾರೆ. ಇದರ ಫಲಿತಾಂಶ? ಎಲ್ಲೆಲ್ಲೂ ತುಂಬ ಕಷ್ಟ ದುಃಖವಿದೆ. (ಯೆರೆ. 10:23) ಆದರೆ ಯೆಹೋವನು ಪ್ರೀತಿಯಿಂದ ಆಳುವ ರಾಜನಾಗಿದ್ದಾನೆ. ಹೊಸ ಲೋಕದಲ್ಲಿ ಎಲ್ಲರೂ ಅವನಿಗೆ ವಿಧೇಯರಾಗುವಾಗ ಜೀವನ ಎಷ್ಟು ಚೆನ್ನಾಗಿರುತ್ತದಲ್ವಾ?

6 ಹೊಸ ಲೋಕದಲ್ಲಿ ಭೂಮಿಯನ್ನು ಸುಂದರ ಪರದೈಸನ್ನಾಗಿ ಮಾಡುವ ಕೆಲಸವಿರುತ್ತದೆ ಮತ್ತು ಪುನರುತ್ಥಾನವಾಗಿ ಬರುವವರಿಗೆ ಅನೇಕ ವಿಷಯಗಳನ್ನು ಕಲಿಸಲಿಕ್ಕಿರುತ್ತದೆ. ಇದನ್ನು ಮಾಡಲು ಯೆಹೋವನ ಸಂಘಟನೆ ಕೊಡುವ ನಿರ್ದೇಶನಗಳಿಗೆ ಸಂತೋಷದಿಂದ ವಿಧೇಯರಾಗುವೆವು. ಅಲ್ಲಿ ನಮಗೆ ಯೆಹೋವನು ತುಂಬ ಕೆಲಸ ಕೊಡಲಿದ್ದಾನೆ. ಆಗ ನಮಗೆ ಇಷ್ಟವಿಲ್ಲದ ಕೆಲಸ ಮಾಡಲು ಹೇಳಿದರೆ ಅದನ್ನು ಮಾಡುತ್ತೇವಾ? ಕೊಟ್ಟ ಕೆಲಸವನ್ನು ಪೂರೈಸಲು ಮತ್ತು ಆನಂದಿಸಲು ನಮ್ಮಿಂದಾದ ಎಲ್ಲ ಪ್ರಯತ್ನ ಹಾಕುತ್ತೇವಾ? ಹೊಸ ಲೋಕದ ಜೀವನಕ್ಕಾಗಿ ತಯಾರಾಗಬೇಕಾದರೆ ಯೆಹೋವನ ಸಂಘಟನೆ ಈಗ ಕೊಡುತ್ತಿರುವ ನಿರ್ದೇಶನಗಳಿಗೆ ನಾವು ವಿಧೇಯರಾಗಬೇಕು.

7, 8. (ಎ) ಮುಂದಾಳತ್ವ ವಹಿಸುವವರೊಟ್ಟಿಗೆ ನಾವೇಕೆ ಸಹಕರಿಸಬೇಕು? (ಬಿ) ಕೆಲವು ಕ್ರೈಸ್ತರ ನೇಮಕಗಳಲ್ಲಿ ಯಾವ ಬದಲಾವಣೆಗಳಾಗಿವೆ? (ಸಿ) ಹೊಸ ಲೋಕದಲ್ಲಿ ನಮಗೆ ಯಾವುದರ ಕುರಿತು ಭರವಸೆ ಇರಬಲ್ಲದು?

7 ಹೊಸ ಲೋಕದ ಜೀವನಕ್ಕಾಗಿ ತಯಾರಾಗಲು ನಾವು ಇರುವುದರಲ್ಲೇ ತೃಪ್ತರಾಗಿರಲು ಮತ್ತು ಯೆಹೋವನ ಸಂಘಟನೆಯ ಜೊತೆ ಹಾಗೂ ಒಬ್ಬರಿನ್ನೊಬ್ಬರ ಜೊತೆ ಸಹಕರಿಸಲು ಕಲಿಯಬೇಕು. ಉದಾಹರಣೆಗೆ ಈಗ ನಮಗೊಂದು ಹೊಸ ನೇಮಕ ಸಿಕ್ಕಿದರೆ ಮನಸಾರೆ ಸಹಕರಿಸಬೇಕು. ಅದರಲ್ಲಿ ಖುಷಿಪಡಲು, ತೃಪ್ತರಾಗಿರಲು ನಮ್ಮಿಂದಾದ ಎಲ್ಲವನ್ನೂ ಮಾಡಬೇಕು. ಮುಂದಾಳತ್ವ ವಹಿಸುವವರೊಟ್ಟಿಗೆ ನಾವೀಗ ಸಹಕರಿಸಲು ಕಲಿತರೆ ಅದನ್ನೇ ಹೊಸ ಲೋಕದಲ್ಲೂ ಮಾಡುತ್ತೇವೆ. (ಇಬ್ರಿಯ 13:17 ಓದಿ.) ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಿದಾಗ ಅವರು ಎಲ್ಲಿ ವಾಸಮಾಡಬೇಕೆಂದು ನೇಮಿಸಲಾಗಿತ್ತು. (ಅರ. 26:52-56; ಯೆಹೋ. 14:1, 2) ಹೊಸ ಲೋಕದಲ್ಲಿ ನಮಗೆಲ್ಲಿ ವಾಸಮಾಡಲು  ನೇಮಕ ಸಿಗಲಿದೆಯೆಂದು ಗೊತ್ತಿಲ್ಲ. ಆದರೆ ನಾವು ಸಹಕರಿಸಲು ಕಲಿತಿರುವಲ್ಲಿ ಮುಂದಕ್ಕೆ ನಮಗೆಲ್ಲೇ ವಾಸಮಾಡಲಿಕ್ಕೆ ಹೇಳಿದರೂ ಯೆಹೋವನ ಚಿತ್ತವನ್ನು ಖುಷಿಯಿಂದ ಮಾಡುತ್ತೇವೆ.

8 ದೇವರ ರಾಜ್ಯದ ಆಳ್ವಿಕೆಯಡಿ ಹೊಸ ಲೋಕದಲ್ಲಿ ಆತನ ಸೇವೆ ಮಾಡುವುದು ಎಂಥ ದೊಡ್ಡ ಸುಯೋಗ ಅಲ್ಲವೇ! ಆದ್ದರಿಂದ ನಾವು ಯೆಹೋವನ ಸಂಘಟನೆಯೊಟ್ಟಿಗೆ ಈಗ ಸಂತೋಷದಿಂದ ಸಹಕರಿಸಿ, ಅದರಿಂದ ಸಿಗುವ ಯಾವುದೇ ಕೆಲಸ ಮಾಡಲು ಸಿದ್ಧರಿರುತ್ತೇವೆ. ಸಮಯಾನಂತರ ನಮ್ಮ ನೇಮಕ ಬದಲಾಗಬಹುದು. ಉದಾಹರಣೆಗೆ ಅಮೆರಿಕದ ಬೆತೆಲ್‍ನಲ್ಲಿದ್ದ ಕೆಲವರಿಗೆ ಹೊಸ ನೇಮಕ ಕೊಟ್ಟು ಕ್ಷೇತ್ರದಲ್ಲಿ ಪೂರ್ಣ ಸಮಯದ ಸೇವೆಗೆ ಕಳುಹಿಸಲಾಯಿತು. ಕೆಲವು ಸಂಚರಣ ಮೇಲ್ವಿಚಾರಕರನ್ನು ಇಳಿವಯಸ್ಸು ಅಥವಾ ಬೇರಾವುದೊ ಪರಿಸ್ಥಿತಿಗಳ ಕಾರಣದಿಂದ ವಿಶೇಷ ಪಯನೀಯರರಾಗಿ ನೇಮಿಸಲಾಯಿತು. ತಮಗೆ ಸಿಕ್ಕಿರುವ ನೇಮಕಗಳಲ್ಲಿ ಅವರು ಆನಂದಿಸುತ್ತಿದ್ದಾರೆ ಮತ್ತು ಯೆಹೋವನು ಅವರನ್ನು ಆಶೀರ್ವದಿಸುತ್ತಿದ್ದಾನೆ. ಹಾಗೆಯೇ ನಮಗೆ ಯಾವುದೇ ನೇಮಕ ಸಿಗಲಿ ಅದರಲ್ಲಿ ತೃಪ್ತರಾಗಿಲು ಕಲಿತರೆ, ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿದರೆ, ಆತನ ಸೇವೆಯಲ್ಲಿ ನಮ್ಮಿಂದಾದ ಎಲ್ಲವನ್ನು ಮಾಡಿದರೆ ಸಂತೋಷದಿಂದಿರುವೆವು ಮತ್ತು ಯೆಹೋವನು ನಮ್ಮನ್ನು ಆಶೀರ್ವದಿಸುವನು. (ಜ್ಞಾನೋಕ್ತಿ 10:22 ಓದಿ.) ನೆನಸಿ, ಹೊಸ ಲೋಕದಲ್ಲಿ ನಮಗೆ ಒಂದು ಸ್ಥಳ ತುಂಬ ಇಷ್ಟವಿದೆ, ಅಲ್ಲಿರಲು ಆಸೆಯಿದೆ. ಆದರೆ ನಮಗೆ ಇನ್ನೊಂದು ಸ್ಥಳದಲ್ಲಿ ವಾಸಿಸಲಿಕ್ಕೆ ಯೆಹೋವನ ಸಂಘಟನೆ ಹೇಳಬಹುದು. ಹಾಗಿದ್ದರೂ ನಮಗೆ ಈ ಭರವಸೆ ಇರಬಲ್ಲದು: ನಾವೆಲ್ಲೇ ವಾಸಮಾಡುತ್ತಿರಲಿ, ಯಾವ ಕೆಲಸವನ್ನೇ ಮಾಡುತ್ತಿರಲಿ ಅದು ಮುಖ್ಯವೆಂದು ಎಣಿಸದೆ, ಹೊಸ ಲೋಕದಲ್ಲಿದ್ದೇವಲ್ಲ ಎಂಬ ಸಂಗತಿಯೇ ಖುಷಿ ತರುತ್ತದೆ.—ನೆಹೆ. 8:10.

9, 10. (ಎ) ಹೊಸ ಲೋಕದಲ್ಲಿ ನಾವು ಯಾಕೆ ತಾಳ್ಮೆ ತೋರಿಸಬೇಕಾದೀತು? (ಬಿ) ನಮಗೆ ತಾಳ್ಮೆ ಇದೆಯೆಂದು ಈಗ ಹೇಗೆ ತೋರಿಸಬಹುದು?

9 ಹೊಸ ಲೋಕದಲ್ಲಿಯೂ ನಾವು ಒಮ್ಮೊಮ್ಮೆ ತಾಳ್ಮೆ ತೋರಿಸಬೇಕಾಗಬಹುದು. ಉದಾಹರಣೆಗೆ, ಆಗ ಕೆಲವರ ಪುನರುತ್ಥಾನವಾಗಿದೆ ಎಂದು ನಮಗೆ ಗೊತ್ತಾಗಬಹುದು. ಅವರ ಸಂಬಂಧಿಕರು, ಸ್ನೇಹಿತರು ತುಂಬ ಖುಷಿಪಡುತ್ತಿರುತ್ತಾರೆ. ಆದರೆ ನಮ್ಮ ಪ್ರಿಯರ ಪುನರುತ್ಥಾನ ಆಗಿರದಿದ್ದರೆ ನಾವಿನ್ನೂ ಕಾಯಬೇಕಾಗಿ ಬರಬಹುದು. ಆಗ ನಮಗೆ ತಾಳ್ಮೆಯ ಅಗತ್ಯವಿದೆ. ಬೇರೆಯವರ ಜೊತೆ ಆನಂದಿಸುತ್ತಾ, ತಾಳ್ಮೆಯಿಂದ ಕಾಯುತ್ತೇವಾ? (ರೋಮ. 12:15) ಯೆಹೋವನು ತನ್ನ ವಾಗ್ದಾನಗಳನ್ನು ಖಂಡಿತ ನೆರವೇರಿಸುವನೆಂದು ನಾವು ಈಗ ತಾಳ್ಮೆಯಿಂದ ಕಾಯಲು ಕಲಿತರೆ, ಮುಂದಕ್ಕೆ ತಾಳ್ಮೆಯಿಂದಿರಲು ನಮಗೆ ನೆರವಾಗಲಿದೆ.—ಪ್ರಸಂ. 7:8.

10 ಈಗ ಬೈಬಲ್‌ ಸತ್ಯಗಳ ತಿಳುವಳಿಕೆಯಲ್ಲಿ ಹೊಂದಾಣಿಕೆಗಳು ಬರುವಾಗ ತಾಳ್ಮೆಯಿಂದಿರುವ ಮೂಲಕವೂ ಹೊಸ ಲೋಕಕ್ಕೆ ತಯಾರಾಗುತ್ತೇವೆ. ಈ ಹೊಸ ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತೇವಾ? ಅದು ಪೂರ್ತಿಯಾಗಿ ಅರ್ಥವಾಗದಿದ್ದರೆ ತಾಳ್ಮೆ ತೋರಿಸುತ್ತೇವಾ? ಹಾಗೆ ತೋರಿಸಿದರೆ ಹೊಸ ಲೋಕದಲ್ಲಿ ಯೆಹೋವನು ನಮಗೆ ಹೊಸ ನಿರ್ದೇಶನಗಳನ್ನು ಕೊಟ್ಟಾಗಲೆಲ್ಲ ತಾಳ್ಮೆ ತೋರಿಸುತ್ತೇವೆ.—ಜ್ಞಾನೋ. 4:18; ಯೋಹಾ. 16:12.

11. (ಎ) ಬೇರೆಯವರನ್ನು ಕ್ಷಮಿಸಲು ನಾವು ಈಗ ಏಕೆ ಕಲಿಯಬೇಕು? (ಬಿ) ಇದು ಹೊಸ ಲೋಕದಲ್ಲಿ ನಮಗೆ ಹೇಗೆ ಸಹಾಯಮಾಡಲಿದೆ?

11 ಹೊಸ ಲೋಕದ ಜೀವನಕ್ಕಾಗಿ ತಯಾರಾಗುತ್ತಿದ್ದೇವೆ ಎಂದು ತೋರಿಸುವ ಇನ್ನೊಂದು ವಿಧ ಕ್ಷಮಿಸಲು ಕಲಿಯುವುದೇ. ಕ್ರಿಸ್ತನ ಸಾವಿರ ವರ್ಷ ಆಳ್ವಿಕೆಯಲ್ಲಿ ಎಲ್ಲರೂ ಪರಿಪೂರ್ಣರಾಗಲು ಸಮಯ ಹಿಡಿಯುತ್ತದೆ. (ಅ. ಕಾ. 24:15) ಹಾಗಾಗಿ ನಾವಲ್ಲಿ ಒಬ್ಬರಿನ್ನೊಬ್ಬರನ್ನು ಪ್ರೀತಿಸುತ್ತೇವಾ, ಕ್ಷಮಿಸುತ್ತೇವಾ? ಈಗ ಬೇರೆಯವರನ್ನು ಕ್ಷಮಿಸಲು ಕಲಿತು ಅವರೊಟ್ಟಿಗೆ ಚೆನ್ನಾಗಿದ್ದರೆ ಹೊಸ ಲೋಕದಲ್ಲೂ ಹಾಗೆ ಮಾಡಲು ಸುಲಭವಾಗುತ್ತದೆ.ಕೊಲೊಸ್ಸೆ 3:12-14 ಓದಿ.

12. ಹೊಸ ಲೋಕದ ಜೀವನಕ್ಕಾಗಿ ನಾವು ಈಗ ಏಕೆ ತಯಾರಿ ಮಾಡಬೇಕು?

12 ನಮಗೇನು ಬೇಕೊ ಅದೆಲ್ಲ ಹೊಸ ಲೋಕದಲ್ಲಿ ಯಾವಾಗಲೂ ಸಿಗದೇ ಇರಬಹುದು ಅಥವಾ ಅದಕ್ಕಾಗಿ ಕಾಯಬೇಕಾಗಿ ಬರಬಹುದು. ಆದರೆ ನಾವು ಯಾವುದೇ ಪರಿಸ್ಥಿತಿಯಲ್ಲಿರಲಿ ಇರುವುದರಲ್ಲೇ ತೃಪ್ತರಾಗಿದ್ದು, ಕೃತಜ್ಞತೆ ತೋರಿಸಬೇಕು. ನಾವೀಗ ಯಾವ ಗುಣಗಳನ್ನು ತೋರಿಸುವಂತೆ ಯೆಹೋವನು ಕಲಿಸುತ್ತಿದ್ದಾನೊ ಆ ಗುಣಗಳನ್ನೇ ಅಲ್ಲಿಯೂ ತೋರಿಸಬೇಕಾಗುತ್ತದೆ. ಹಾಗಾಗಿ ನಾವು ಈಗ ಆ ಗುಣಗಳನ್ನು  ತೋರಿಸಲು ಕಲಿಯುವಾಗ ಹೊಸ ಲೋಕ ನಮಗೆ ನೈಜವಾಗಿದೆ, ನಿತ್ಯಜೀವಕ್ಕಾಗಿ ತಯಾರಾಗುತ್ತಿದ್ದೇವೆ ಎಂದು ಸಾಬೀತುಪಡಿಸುತ್ತೇವೆ. (ಇಬ್ರಿ. 2:5; 11:1) ಜೊತೆಗೆ, ಎಲ್ಲರೂ ಯೆಹೋವನಿಗೆ ವಿಧೇಯರಾಗುವ ಆ ಲೋಕದಲ್ಲಿ ಇರಲು ನಮಗೆ ನಿಜವಾಗಿಯೂ ಆಸೆಯಿದೆಯೆಂದು ತೋರಿಸುತ್ತೇವೆ.

ಯೆಹೋವನ ಸೇವೆ ಮಾಡುವುದರ ಮೇಲೆ ಗಮನವಿಡಿ

ಹುರುಪಿನಿಂದ ಸುವಾರ್ತೆ ಸಾರಿರಿ

13. ಹೊಸ ಲೋಕದಲ್ಲಿದ್ದಾಗ ನಮ್ಮ ಜೀವನದಲ್ಲಿ ಯಾವುದಕ್ಕೆ ಮೊದಲ ಸ್ಥಾನ ಕೊಡುತ್ತೇವೆ?

13 ಬದುಕನ್ನು ಆನಂದಿಸಲು ಬೇಕಾದ ಎಲ್ಲವೂ ಹೊಸ ಲೋಕದಲ್ಲಿ ನಮಗಿರುತ್ತದೆ. ಆದರೆ ಎಲ್ಲಕ್ಕಿಂತ ಹೆಚ್ಚು ಆನಂದ ಯೆಹೋವನ ಜೊತೆ ನಮಗಿರುವ ಆಪ್ತ ಸಂಬಂಧದಿಂದ ಸಿಗಲಿದೆ. (ಮತ್ತಾ. 5:3) ನಾವು ಯೆಹೋವನ ಸೇವೆಯಲ್ಲಿ ಮುಳುಗಿರುತ್ತೇವೆ. ಅದನ್ನು ಮಾಡಲು ಆನಂದಿಸುತ್ತೇವೆ. (ಕೀರ್ತ. 37:4) ಆದ್ದರಿಂದ ನಾವೀಗ ಯೆಹೋವನಿಗೆ ನಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಟ್ಟರೆ ಹೊಸ ಲೋಕದ ಜೀವನಕ್ಕಾಗಿ ತಯಾರಾಗುತ್ತಿದ್ದೇವೆ.—ಮತ್ತಾಯ 6:19-21 ಓದಿ.

14. ಯುವ ಜನರು ಯೆಹೋವನ ಸೇವೆಯಲ್ಲಿ ಯಾವ ಗುರಿಗಳನ್ನು ಇಡಬಹುದು?

14 ನಾವು ಯೆಹೋವನ ಸೇವೆ ಮಾಡುವುದನ್ನು ಹೇಗೆ ಹೆಚ್ಚಿಸಬಹುದು? ಗುರಿಗಳನ್ನು ಇಡುವ ಮೂಲಕ. ನೀವೊಬ್ಬ ಯುವ ವ್ಯಕ್ತಿಯಾಗಿದ್ದರೆ ನಿಮ್ಮ ಜೀವನವನ್ನು ಯೆಹೋವನ ಸೇವೆಗಾಗಿ ಉಪಯೋಗಿಸುವುದರ ಬಗ್ಗೆ ಯೋಚಿಸಿ. ಪೂರ್ಣ ಸಮಯ ಸೇವೆಯ ಬೇರೆಬೇರೆ ವಿಧಗಳ ಬಗ್ಗೆ ನಮ್ಮ ಪ್ರಕಾಶನಗಳಲ್ಲಿ ಸಂಶೋಧನೆ ಮಾಡಿ. ಇದರಲ್ಲಿ ಯಾವುದಾದರೂ ಒಂದನ್ನು ನಿಮ್ಮ ಗುರಿಯನ್ನಾಗಿ ಮಾಡಬಹುದು. * (ಪಾದಟಿಪ್ಪಣಿ ನೋಡಿ.) ಅನೇಕ ವರ್ಷಗಳಿಂದ ಪೂರ್ಣ ಸಮಯ ಸೇವೆಮಾಡಿರುವವರ ಜೊತೆ ಮಾತಾಡಿ. ಯೆಹೋವನ ಸೇವೆಗಾಗಿ ನಿಮ್ಮ ಜೀವನವನ್ನು ಬಳಸಿದರೆ ನಿಮಗೆ ಅಮೂಲ್ಯವಾದ ತರಬೇತಿ ಸಿಗುತ್ತದೆ. ಮುಂದೆ ಹೊಸ ಲೋಕದಲ್ಲಿ ಯೆಹೋವನ ಸೇವೆಮಾಡಲು ಈ ಅನುಭವ ನಿಮಗೆ ನೆರವಾಗುತ್ತದೆ.

ಯೆಹೋವನ ಸೇವೆಯಲ್ಲಿ ಗುರಿಗಳನ್ನಿಡಿರಿ

15. ಯೆಹೋವನ ಸೇವೆಯಲ್ಲಿ ನಾವು ಇನ್ಯಾವ ಗುರಿಗಳನ್ನು ಇಡಬಹುದು?

15 ಯೆಹೋವನ ಸೇವೆಯಲ್ಲಿ ನಾವು ಅನೇಕ ಗುರಿಗಳನ್ನು ಇಡಬಹುದು. ಉದಾಹರಣೆಗೆ, ಸೇವೆಯಲ್ಲಿ ಯಾವುದೊ ನಿರ್ದಿಷ್ಟ ವಿಷಯದಲ್ಲಿ ನಿಪುಣತೆ ಹೆಚ್ಚಿಸಿಕೊಳ್ಳುವ ಗುರಿ ಇಡಬಹುದು. ಅಥವಾ ಬೈಬಲ್‌ ತತ್ವಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಜೀವನದಲ್ಲಿ ಹೇಗೆ ಅನ್ವಯಿಸಬಹುದೆಂದು ಕಲಿಯಬಹುದು. ನಮ್ಮ ಸಾರ್ವಜನಿಕ ಓದುವಿಕೆಯ, ಭಾಷಣಗಳ ಮತ್ತು ಕೂಟಗಳಲ್ಲಿ ಕೊಡುವ ಹೇಳಿಕೆಗಳ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನ ಮಾಡಬಹುದು. ಯೆಹೋವನ ಸೇವೆಯಲ್ಲಿ ಗುರಿಗಳನ್ನು ಇಟ್ಟಾಗ ಅದು ನಿಮ್ಮ ಹುರುಪನ್ನು ಹೆಚ್ಚಿಸುತ್ತದೆ ಮತ್ತು ಹೊಸ ಲೋಕದ ಜೀವನಕ್ಕೆ ತಯಾರಾಗಲು ನೆರವಾಗುತ್ತದೆ.

 ನಮಗೆ ಈಗಾಗಲೇ ಆಶೀರ್ವಾದಗಳು ಸಿಗುತ್ತಿವೆ!

ಯೆಹೋವನು ನಿಮಗೆ ಕೊಟ್ಟಿರುವ ಎಲ್ಲದ್ದಕ್ಕೂ ಕೃತಜ್ಞರಾಗಿರಿ

16. ಯೆಹೋವನ ಸೇವೆಮಾಡುವುದು ಏಕೆ ಅತ್ಯುತ್ತಮ ಜೀವನವಾಗಿದೆ?

16 ದೇವರ ಹೊಸ ಲೋಕಕ್ಕಾಗಿ ತಯಾರಾಗಲು ನಾವು ಈಗ ನಮ್ಮ ಸಮಯ ಬಳಸುವುದರಿಂದ ಯಾವುದನ್ನು ಲೋಕವು ಅತ್ಯುತ್ತಮ ಜೀವನ ಎಂದು ನೆನಸುತ್ತದೊ ಅದು ಕೈಜಾರಿ ಹೋಗುತ್ತಿದೆಯಾ? ಇಲ್ಲ! ಏಕೆಂದರೆ ಯೆಹೋವನ ಸೇವೆ ಮಾಡುವುದೇ ಉತ್ತಮ ಜೀವನ. ಬೇರೆಯವರ ಒತ್ತಾಯದಿಂದಲೊ ಮಹಾ ಸಂಕಟವನ್ನು ಪಾರಾಗಲಿಕ್ಕೊ ನಾವು ಆತನ ಸೇವೆ ಮಾಡುವುದಿಲ್ಲ. ಆತನೊಂದಿಗೆ ಒಳ್ಳೇ ಸಂಬಂಧವಿದ್ದರೆ ನಮ್ಮ ಜೀವನ ಅತ್ಯುತ್ತಮ ಆಗಿರುತ್ತದೆ, ನಾವು ಖುಷಿಖುಷಿ ಆಗಿರುತ್ತೇವೆ. ನಾವು ಈ ರೀತಿ ಜೀವಿಸಬೇಕೆಂದೇ ಯೆಹೋವನು ಸೃಷ್ಟಿಸಿದನು. ಯೆಹೋವನ ಪ್ರೀತಿ ಮತ್ತು ಮಾರ್ಗದರ್ಶನ ಪಡೆಯುವುದು ನಮ್ಮ ಜೀವನದಲ್ಲಿ ಬೇರೆಲ್ಲದಕ್ಕಿಂತಲೂ ಉತ್ತಮ. (ಕೀರ್ತನೆ 63:1-3 ಓದಿ.) ಯೆಹೋವನನ್ನು ಪೂರ್ಣ ಹೃದಯದಿಂದ ಆರಾಧಿಸುವಾಗ ಸಿಗುವ ಆನಂದವನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಇದೇ ನಿಜವಾಗಲೂ ಅತ್ಯುತ್ತಮವಾದ ಜೀವನವೆಂದು ಆತನನ್ನು ಅನೇಕ ವರ್ಷಗಳಿಂದ ಸೇವೆಮಾಡಿರುವವರು ಹೇಳುತ್ತಾರೆ.—ಕೀರ್ತ. 1:1-3; ಯೆಶಾ. 58:13, 14.

ಬೈಬಲಿನಿಂದ ಮಾರ್ಗದರ್ಶನ ಪಡೆಯಿರಿ

17. ನಮಗಿಷ್ಟವಾದ ವಿಷಯಗಳು, ಆಟ-ಮನೋರಂಜನೆ ಇವೆಲ್ಲ ಪರದೈಸಿನಲ್ಲಿ ಎಷ್ಟು ಪ್ರಾಮುಖ್ಯ ಆಗಿರುತ್ತವೆ?

17 ಪರದೈಸಿನಲ್ಲಿ ನಮಗೆ ಇಷ್ಟವಾದ ವಿಷಯಗಳಲ್ಲಿ, ಆಟ-ಮನೋರಂಜನೆಯಲ್ಲಿ ಸಹ ಸಮಯ ಕಳೆಯಲಿದ್ದೇವೆ. ಎಷ್ಟೆಂದರೂ ಸಂತೋಷಪಡಬೇಕೆಂಬ ಈ ಆಸೆಯನ್ನು ನಮ್ಮಲ್ಲಿಟ್ಟವನು ಯೆಹೋವನಲ್ಲವೇ? “ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸು”ವೆನೆಂದು ಆತನು ಮಾತುಕೊಟ್ಟಿದ್ದಾನೆ. (ಕೀರ್ತ. 145:16; ಪ್ರಸಂ. 2:24) ನಮಗೆ ಮನೋರಂಜನೆ ಮತ್ತು ವಿಶ್ರಾಂತಿ ಬೇಕು ನಿಜ. ಆದರೆ ಯೆಹೋವನೊಟ್ಟಿಗಿನ ನಮ್ಮ ಸಂಬಂಧಕ್ಕೆ ಪ್ರಥಮ ಸ್ಥಾನ ಕೊಟ್ಟು ನಂತರ ಈ ಚಟುವಟಿಕೆಯಲ್ಲಿ ತೊಡಗಿದರೆ ಅದರಿಂದ ಸಿಗುವ ಆನಂದ ಇನ್ನೂ ಹೆಚ್ಚಾಗುತ್ತದೆ. ಹೊಸ ಲೋಕದಲ್ಲೂ ಹೀಗೆ ಇರುತ್ತದೆ. ಹಾಗಾಗಿ ‘ಮೊದಲು ರಾಜ್ಯವನ್ನು ಹುಡುಕುವುದು’ ಮತ್ತು ಆತನ ಸೇವೆ ಮಾಡುವುದರಿಂದ ಸಿಗುವ ಆಶೀರ್ವಾದಗಳಿಗೆ ಹೆಚ್ಚು ಗಮನಕೊಡುವುದು ವಿವೇಕಯುತ.—ಮತ್ತಾ. 6:33.

18. ಪರದೈಸಿನಲ್ಲಿನ ನಿತ್ಯಜೀವಕ್ಕೆ ತಯಾರಾಗುತ್ತಿದ್ದೇವೆಂದು ಹೇಗೆ ತೋರಿಸಬಹುದು?

18 ಹೊಸ ಲೋಕದಲ್ಲಿನ ನಮ್ಮ ಜೀವನ ಎಷ್ಟು ಚೆನ್ನಾಗಿರುತ್ತದೆಂದರೆ ನಮಗದನ್ನು ಊಹಿಸಲಿಕ್ಕೂ ಆಗುವುದಿಲ್ಲ! ಅಲ್ಲಿರಬೇಕೆಂಬ ಆಸೆ ನಮಗಿದೆಯೆಂದು ಆ “ವಾಸ್ತವವಾದ ಜೀವನ”ಕ್ಕಾಗಿ ಈಗಲೇ ತಯಾರಿಮಾಡುವ ಮೂಲಕ ತೋರಿಸೋಣ. ಯೆಹೋವನು ನಮಗೆ ಕಲಿಸಿಕೊಡುತ್ತಿರುವ ಗುಣಗಳನ್ನು ಬೆಳೆಸಿಕೊಳ್ಳೋಣ. ಹುರುಪಿನಿಂದ ಸುವಾರ್ತೆ ಸಾರೋಣ. ಯೆಹೋವನ ಆರಾಧನೆಗೆ ನಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡುವುದರಿಂದ ಸಿಗುವ ಆನಂದವನ್ನು ಅನುಭವಿಸೋಣ. ಯೆಹೋವನು ಕೊಟ್ಟಿರುವ ಎಲ್ಲ ಮಾತುಗಳನ್ನು ಹೊಸ ಲೋಕದಲ್ಲಿ ಪೂರೈಸುವನೆಂದು ನಮಗೆ ಪೂರ್ಣ ಭರವಸೆ ಇದೆ. ಹಾಗಾಗಿ ನಾವು ಈಗಾಗಲೇ ಅಲ್ಲಿದ್ದೇವೆಂಬ ರೀತಿಯಲ್ಲಿ ಜೀವಿಸೋಣ!

^ ಪ್ಯಾರ. 14 ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, (ಇಂಗ್ಲಿಷ್‌) ಸಂಪುಟ 2 ಪುಟ 311-318 ಮತ್ತು ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಟ 109-119 ನೋಡಿ.