ಯೋಹಾನ 3:1-36

  • ಯೇಸು ಮತ್ತು ನಿಕೊದೇಮ (1-21)

    • ಮತ್ತೆ ಹುಟ್ಟಬೇಕು (3-8)

    • ದೇವರು ನಮ್ಮನ್ನ ಪ್ರೀತಿಸ್ತಾನೆ (16)

  • ಯೇಸು ಬಗ್ಗೆ ಯೋಹಾನನ ಕೊನೇ ಮಾತುಗಳು (22-30)

  • ಮೇಲಿಂದ ಬರುವವನು (31-36)

3  ನಿಕೊದೇಮ+ ಅನ್ನೋ ಒಬ್ಬ ಫರಿಸಾಯನಿದ್ದ. ಅವನು ಯೆಹೂದ್ಯರ ಒಬ್ಬ ನಾಯಕ.  ಅವನು ರಾತ್ರಿ ಹೊತ್ತಲ್ಲಿ+ ಯೇಸು ಹತ್ರ ಬಂದು “ರಬ್ಬೀ,+ ನೀನು ದೇವರಿಂದ ಬಂದಿರೋ ಒಬ್ಬ ಗುರು ಅಂತ ನಂಗೊತ್ತು. ಯಾಕಂದ್ರೆ ನೀನು ಮಾಡ್ತಿರೋ ಅದ್ಭುತಗಳನ್ನ+ ದೇವರ ಸಹಾಯ ಇಲ್ಲದೆ ಯಾವ ಮನುಷ್ಯನಿಗೂ ಮಾಡೋಕಾಗಲ್ಲ” ಅಂದನು.+  ಅದಕ್ಕೆ ಯೇಸು “ನಿನಗೆ ನಿಜ ಹೇಳ್ತೀನಿ, ಒಬ್ಬ ವ್ಯಕ್ತಿ ಮತ್ತೆ ಹುಟ್ಟದಿದ್ರೆ*+ ಅವನು ದೇವರ ಆಳ್ವಿಕೆ ನೋಡೋಕೆ ಸಾಧ್ಯ ಇಲ್ಲ” ಅಂದನು.+  ಆಗ ನಿಕೊದೇಮ “ಒಬ್ಬ ಮನುಷ್ಯ ಮುದುಕನಾದ ಮೇಲೆ ಮತ್ತೆ ಹುಟ್ಟೋಕೆ ಹೇಗೆ ಸಾಧ್ಯ? ಅವನು ತಾಯಿ ಹೊಟ್ಟೆಯಲ್ಲಿ ಮತ್ತೆ ಹುಟ್ಟಿ ಬರೋಕಾಗಲ್ಲ ತಾನೇ?” ಅಂದ.  ಅದಕ್ಕೆ ಯೇಸು “ನಿನಗೆ ನಿಜ ಹೇಳ್ತೀನಿ, ಒಬ್ಬ ವ್ಯಕ್ತಿ ನೀರಿಂದ+ ಮತ್ತು ಪವಿತ್ರಶಕ್ತಿಯಿಂದ+ ಹುಟ್ಟದಿದ್ರೆ ಅವನು ದೇವರ ಆಳ್ವಿಕೆಗೆ ಹೋಗೋಕೆ ಸಾಧ್ಯನೇ ಇಲ್ಲ.  ಅಪ್ಪಅಮ್ಮನಿಂದ ಹುಟ್ಟುವವರು ಮನುಷ್ಯರ ಮಕ್ಕಳು. ಪವಿತ್ರಶಕ್ತಿಯಿಂದ ಹುಟ್ಟುವವರು ದೇವರ ಮಕ್ಕಳು.  ನೀವು ಮತ್ತೆ ಹುಟ್ಟಬೇಕು ಅಂತ ನಾನು ಹೇಳಿದ್ದಕ್ಕೆ ಆಶ್ಚರ್ಯಪಡಬೇಡ.  ಗಾಳಿ ತನಗೆ ಇಷ್ಟ ಬಂದ ಕಡೆ ಬೀಸುತ್ತೆ. ನಿನಗೆ ಅದ್ರ ಸದ್ದು ಕೇಳಿಸುತ್ತೆ. ಆದ್ರೆ ಅದು ಎಲ್ಲಿಂದ ಬಂತು, ಎಲ್ಲಿಗೆ ಹೋಗುತ್ತೆ ಅಂತ ನಿಂಗೊತ್ತಿಲ್ಲ. ಪವಿತ್ರಶಕ್ತಿಯಿಂದ ಹುಟ್ಟುವವರು ಸಹ ಅದೇ ತರ ಇದ್ದಾರೆ” ಅಂದನು.+  ಅದಕ್ಕೆ ನಿಕೊದೇಮ “ಇದೆಲ್ಲ ಹೇಗೆ ಸಾಧ್ಯ?” ಅಂತ ಕೇಳಿದ. 10  ಆಗ ಯೇಸು ಹೀಗಂದನು “ನೀನು ಇಸ್ರಾಯೇಲ್ಯರ ಗುರು ಆಗಿದ್ರೂ ಈ ವಿಷ್ಯಗಳು ನಿನಗೆ ಯಾಕೆ ಗೊತ್ತಿಲ್ಲ? 11  ನಿನಗೆ ನಿಜ ಹೇಳ್ತೀನಿ, ನಮಗೆ ಗೊತ್ತಿರೋ ವಿಷ್ಯಗಳನ್ನೇ ನಾವು ಹೇಳ್ತಿದ್ದೀವಿ, ನೋಡಿದ್ದರ ಬಗ್ಗೆನೇ ಸಾಕ್ಷಿ ಕೊಡ್ತಿದ್ದೀವಿ, ಆದ್ರೆ ನೀವು ನಮ್ಮನ್ನ ನಂಬಲ್ಲ. 12  ನಾನು ಭೂಮಿಯಲ್ಲಿ ಆಗೋ ವಿಷ್ಯಗಳನ್ನ ಹೇಳಿದಾಗ ನೀವು ನಂಬಲಿಲ್ಲ. ಹಾಗಿರುವಾಗ ಸ್ವರ್ಗದಲ್ಲಿ ಆಗೋ ವಿಷ್ಯಗಳನ್ನ ಹೇಳಿದ್ರೆ ನಂಬ್ತೀರಾ? 13  ಅಷ್ಟೇ ಅಲ್ಲ ಯಾವ ಮನುಷ್ಯನೂ ಸ್ವರ್ಗಕ್ಕೆ ಹೋಗಿಲ್ಲ.+ ಆದ್ರೆ ಒಬ್ಬನೇ ಒಬ್ಬ ಸ್ವರ್ಗದಿಂದ ಇಳಿದು ಬಂದಿದ್ದಾನೆ,+ ಅವನೇ ಮನುಷ್ಯಕುಮಾರ. 14  ಮೋಶೆ ಕಾಡಲ್ಲಿ ಹಾವನ್ನ ಕಂಬಕ್ಕೆ ಏರಿಸಿದ.+ ಅದೇ ತರ ಮನುಷ್ಯಕುಮಾರನನ್ನ ಕಂಬಕ್ಕೆ ಏರಿಸಲಾಗುತ್ತೆ.+ 15  ಇದ್ರಿಂದಾಗಿ ಆತನಲ್ಲಿ ನಂಬಿಕೆ ಇಡೋ ಪ್ರತಿಯೊಬ್ಬರು ಶಾಶ್ವತ ಜೀವ ಪಡ್ಕೊಬಹುದು.+ 16  ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ. ಅದಕ್ಕೇ ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಕೊಟ್ಟನು.+ ಯಾಕಂದ್ರೆ ಆತನ ಮೇಲೆ ನಂಬಿಕೆ ಇಡೋ ಒಬ್ಬನೂ ನಾಶವಾಗದೆ ಶಾಶ್ವತ ಜೀವ ಪಡ್ಕೊಳ್ಳಬೇಕು ಅನ್ನೋದೇ ದೇವರ ಆಸೆ.+ 17  ದೇವರು ಲೋಕಕ್ಕೆ ಶಿಕ್ಷೆ ಕೊಡಬೇಕಂತ ತನ್ನ ಮಗನನ್ನ ಕಳಿಸಲಿಲ್ಲ. ಬದಲಿಗೆ ಆತನ ಮೂಲಕ ಲೋಕಕ್ಕೆ ರಕ್ಷಣೆ ಸಿಗಬೇಕಂತ ಕಳಿಸಿದ.+ 18  ಆತನ ಮೇಲೆ ನಂಬಿಕೆ ಇಡುವವ್ರಿಗೆ ಶಿಕ್ಷೆ ಸಿಗಲ್ಲ.+ ಆದ್ರೆ ಆತನ ಮೇಲೆ ನಂಬಿಕೆ ಇಡದವ್ರಿಗೆ ಈಗಾಗಲೇ ಶಿಕ್ಷೆ ಏನಂತ ಹೇಳಿ ಆಗಿದೆ. ಯಾಕಂದ್ರೆ ದೇವರ ಒಬ್ಬನೇ ಮಗನ ಮೇಲೆ* ಅವರು ನಂಬಿಕೆ ಇಡಲಿಲ್ಲ.+ 19  ಲೋಕಕ್ಕೆ ಬೆಳಕು ಬಂತು,+ ಆದ್ರೆ ಜನ ಬೆಳಕಿಗಿಂತ ಕತ್ತಲನ್ನೇ ಪ್ರೀತಿಸಿದ್ರು. ಯಾಕಂದ್ರೆ ಅವರು ಕೆಟ್ಟ ಕೆಲಸಗಳನ್ನ ಮಾಡ್ತಾ ಇದ್ರು. ಅದಕ್ಕೇ ಅವ್ರಿಗೆ ಶಿಕ್ಷೆ ಸಿಗುತ್ತೆ. 20  ನೀಚ ಕೆಲಸಗಳನ್ನ ಮಾಡುವವನಿಗೆ ಬೆಳಕಂದ್ರೆ ಇಷ್ಟ ಇಲ್ಲ. ತಮ್ಮ ಕೆಲಸಗಳು ಎಲ್ಲಿ ಬೇರೆಯವ್ರಿಗೆ ಗೊತ್ತಾಗುತ್ತೋ ಅಂತ ಅವರು ಬೆಳಕಿಗೆ ಬರಲ್ಲ. 21  ಆದ್ರೆ ಒಳ್ಳೇ ಕೆಲಸ ಮಾಡುವವನು ಬೆಳಕಿಗೆ ಬರ್ತಾನೆ.+ ಯಾಕಂದ್ರೆ ಅವನು ಮಾಡೋ ಎಲ್ಲ ಕೆಲಸಗಳು ದೇವರ ಇಷ್ಟದ ಪ್ರಕಾರ ಇದೆ ಅನ್ನೋದು ಎಲ್ರಿಗೆ ಗೊತ್ತಾಗಬೇಕು ಅಂತ ಅವನು ಬಯಸ್ತಾನೆ.” 22  ಯೇಸು ಶಿಷ್ಯರ ಜೊತೆ ಯೂದಾಯದ ಒಂದು ಪ್ರದೇಶಕ್ಕೆ ಹೋದನು. ಅವ್ರ ಜೊತೆ ಸ್ವಲ್ಪ ಸಮಯ ಕಳೆದು ಜನ್ರಿಗೆ ದೀಕ್ಷಾಸ್ನಾನ ಮಾಡಿಸಿದನು.+ 23  ಯೋಹಾನ ಕೂಡ ಸಾಲೀಮ್‌ ಊರಿನ ಐನೋನ ಅನ್ನೋ ಜಾಗದಲ್ಲಿ ದೀಕ್ಷಾಸ್ನಾನ ಮಾಡಿಸ್ತಾ ಇದ್ದನು. ಯಾಕಂದ್ರೆ ಅಲ್ಲಿ ತುಂಬ ನೀರಿತ್ತು.+ ಜನ ಬಂದು ದೀಕ್ಷಾಸ್ನಾನ ಮಾಡಿಸ್ಕೊಳ್ತಾ ಇದ್ರು.+ 24  ಆಗಿನ್ನೂ ಯೋಹಾನನನ್ನ ಜೈಲಿಗೆ ಹಾಕಿರಲಿಲ್ಲ.+ 25  ಯೋಹಾನನ ಶಿಷ್ಯರಿಗೂ ಒಬ್ಬ ಯೆಹೂದ್ಯನಿಗೂ ಶುದ್ಧತೆ ವಿಷ್ಯದಲ್ಲಿ ಜಗಳ ಆಯ್ತು. 26  ಆ ಶಿಷ್ಯರು ಯೋಹಾನನಿಗೆ “ರಬ್ಬೀ, ಯೋರ್ದನ್‌ ನದಿಯ ಆಕಡೆ ದಡದಲ್ಲಿ ನಿನ್ನ ಹತ್ರ ಬಂದಿದ್ದ ಒಬ್ಬ ವ್ಯಕ್ತಿ ಬಗ್ಗೆ ನೀನು ಹೇಳಿದ್ದಿಯಲ್ಲಾ,+ ಆತನು ದೀಕ್ಷಾಸ್ನಾನ ಮಾಡಿಸ್ತಿದ್ದಾನೆ. ಜನ್ರೆಲ್ಲ ಆತನ ಹತ್ರ ಹೋಗ್ತಿದ್ದಾರೆ” ಅಂದ್ರು. 27  ಅದಕ್ಕೆ ಯೋಹಾನ “ದೇವರು ಒಬ್ಬ ವ್ಯಕ್ತಿಗೆ ಅಧಿಕಾರ ಕೊಡದಿದ್ರೆ ಅವನು ಏನೂ ಮಾಡೋಕಾಗಲ್ಲ. 28  ‘ನಾನು ಕ್ರಿಸ್ತನಲ್ಲ,+ ನನ್ನನ್ನ ದೇವರು ಆತನಿಗಿಂತ ಮುಂಚೆ ಕಳಿಸಿದ್ದಾನೆ’ ಅಂತ ನಿಮಗೆ ಹೇಳಿದ್ನಲ್ವಾ?+ 29  ಯಾರ ಹತ್ರ ಮದುಮಗಳು ಇದ್ದಾಳೋ ಅವನೇ ಮದುಮಗ.+ ಆದ್ರೆ ಮದುಮಗ ಮಾತಾಡೋದನ್ನ ಕೇಳಿಸ್ಕೊಂಡಾಗ ಅವನ ಸ್ನೇಹಿತನಿಗೆ ತುಂಬ ಖುಷಿಯಾಗುತ್ತೆ. ಅದೇ ತರ ಇವತ್ತು ನನಗೆ ತುಂಬ ಖುಷಿ ಆಗ್ತಿದೆ. 30  ಆತನ ಸೇವೆ ಇದೇ ತರ ಹೆಚ್ಚಾಗ್ತಾ ಹೋಗಬೇಕು, ನನ್ನ ಸೇವೆ ಕಡಿಮೆ ಆಗ್ತಾ ಹೋಗಬೇಕು” ಅಂದ. 31  ಮೇಲಿಂದ ಬರೋನು+ ಎಲ್ರಿಗಿಂತ ಮೇಲೆ ಇದ್ದಾನೆ. ಭೂಮಿಯಿಂದ ಬಂದಿರೋನು ಭೂಮಿಗೆ ಸೇರಿದವನು. ಅವನು ಸರ್ಗಕ್ಕೆ ಸೇರಿದ ವಿಷ್ಯಗಳನ್ನ ಮಾತಾಡಲ್ಲ. ಸ್ವರ್ಗದಿಂದ ಬಂದಿರೋನು ಎಲ್ರಿಗಿಂತ ಮೇಲೆ ಇದ್ದಾನೆ.+ 32  ಆತನು ನೋಡಿದ, ಕೇಳಿದ ವಿಷ್ಯಗಳನ್ನ ಹೇಳ್ತಾನೆ,+ ಆದ್ರೆ ಯಾರೂ ಆತನು ಹೇಳೋದನ್ನ ನಂಬಲ್ಲ.+ 33  ಆದ್ರೆ ಆತನು ಹೇಳೋದನ್ನ ನಂಬುವವ್ರೆಲ್ಲ ದೇವರು ಸತ್ಯವಂತ ಅನ್ನೋದನ್ನ ಪಕ್ಕಾ ಒಪ್ಪಿಕೊಳ್ತಾರೆ.*+ 34  ದೇವರು ಕಳಿಸಿರೋ ವ್ಯಕ್ತಿ ದೇವರ ಮಾತುಗಳನ್ನ ಮಾತಾಡ್ತಾನೆ.+ ಯಾಕಂದ್ರೆ ದೇವರು ಪವಿತ್ರಶಕ್ತಿಯನ್ನ ಸ್ವಲ್ಪಸ್ವಲ್ಪ* ಕೊಡಲ್ಲ. 35  ಅಪ್ಪ ಮಗನನ್ನ ಪ್ರೀತಿಸ್ತಾನೆ.+ ಎಲ್ಲಾ ಅಧಿಕಾರವನ್ನೂ ಆತನ ಕೈಯಲ್ಲಿ ಇಟ್ಟಿದ್ದಾನೆ.+ 36  ಮಗನ ಮೇಲೆ ನಂಬಿಕೆ ಇಡೋ ಪ್ರತಿಯೊಬ್ಬನೂ ಶಾಶ್ವತ ಜೀವ ಪಡಿತಾನೆ.+ ಮಗನ ಮಾತು ಕೇಳದವನು ಶಾಶ್ವತ ಜೀವ ಪಡಿಯಲ್ಲ,+ ದೇವರ ಕಡುಕೋಪ ಅವನ ಮೇಲೆ ಇರುತ್ತೆ.+

ಪಾದಟಿಪ್ಪಣಿ

ಬಹುಶಃ, “ಮೇಲಿಂದ ಹುಟ್ಟದಿದ್ರೆ.”
ಅಕ್ಷ. “ಹೆಸ್ರಿನ ಮೇಲೆ.”
ಅಕ್ಷ. “ಮುದ್ರೆ ಒತ್ತುತ್ತಾರೆ.”
ಅಥವಾ “ಅಳೆದು.”