ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಸಂಗ್ರಹಾಲಯ

“ಯೆಹೋವನು ನಿಮ್ಮನ್ನು ಫ್ರಾನ್ಸಿಗೆ ತಂದದ್ದೇ ಸತ್ಯ ಕಲಿಯಲಿಕ್ಕಾಗಿ”

“ಯೆಹೋವನು ನಿಮ್ಮನ್ನು ಫ್ರಾನ್ಸಿಗೆ ತಂದದ್ದೇ ಸತ್ಯ ಕಲಿಯಲಿಕ್ಕಾಗಿ”

ಆ್ಯಂಟ್ವಾನ್‌ ಸ್ಕಲೇಕಿ ಎಂಬವರ ತಂದೆ ಗಣಿ ಕುಸಿತದಲ್ಲಿ ಗಾಯಗೊಂಡರು. ಎಷ್ಟರ ಮಟ್ಟಿಗೆಯೆಂದರೆ ಅವರು ಇನ್ನು ಮುಂದೆ ಗಣಿಕೆಲಸಕ್ಕೆ ಹೋಗಲು ಆಗುತ್ತಿರಲಿಲ್ಲ. ಹಾಗಾಗಿ ಆ ಕುಟುಂಬಕ್ಕೆ ಆ್ಯಂಟ್ವಾನ್‍ರನ್ನು ಗಣಿಯಲ್ಲಿ ದುಡಿಯಲು ಕಳುಹಿಸುವುದು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಆ್ಯಂಟ್ವಾನ್‌ ಹುಡುಗನಾಗಿದ್ದಾಗ ಯಾವಾಗಲೂ ಅವರ ಜೊತೆ ಒಂದು ಕುದುರೆ ಇರುತ್ತಿತ್ತು. ಅದರ ಮೇಲೆ ಕಲ್ಲಿದ್ದಲಿನ ಮೂಟೆಗಳನ್ನು ಹಾಕಿ, ಮಂದ ಬೆಳಕಿರುವ ಸುರಂಗಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅವುಗಳನ್ನು ಸಾಗಿಸುತ್ತಿದ್ದರು. ಇದನ್ನು ಅವರು ಮಾಡುತ್ತಿದ್ದದ್ದು ಭೂಮಿಯಿಂದ 1,600 ಅಡಿ ಕೆಳಗಿದ್ದ ಗಣಿಯಲ್ಲಿ. ಅಲ್ಲಿ ಅವರು ದಿನಕ್ಕೆ ಒಂಬತ್ತು ತಾಸು ಕೆಲಸಮಾಡುತ್ತಿದ್ದರು. ಒಮ್ಮೆ ಗಣಿ ಕುಸಿತದಲ್ಲಿ ಆ್ಯಂಟ್ವಾನ್‍ರ ಜೀವ ಕೂದಲೆಳೆಯಷ್ಟರಲ್ಲಿ ಉಳಿಯಿತು.

ಪೋಲಿಷ್‌ ಗಣಿಗಾರರು ಬಳಸುತ್ತಿದ್ದ ಸಾಧನಗಳು. ಸಲನೊಬ್ಲ್‌ ಹತ್ತಿರವಿರುವ ದೆಶಿ ಎಂಬಲ್ಲಿ ಆ್ಯಂಟ್ವಾನ್‌ ಸ್ಕಲೇಕಿ ಕೆಲಸ ಮಾಡುತ್ತಿದ್ದ ಗಣಿ

ಆ್ಯಂಟ್ವಾನ್‍ರ ಹೆತ್ತವರು ಪೋಲೆಂಡಿನವರು. ಫ್ರಾನ್ಸ್‌ನಲ್ಲಿದ್ದ ಪೋಲೆಂಡಿನ ಜನರಿಗೆ 1920 ಮತ್ತು 1930ರ ದಶಕಗಳಲ್ಲಿ ಹುಟ್ಟಿದ ಎಷ್ಟೋ ಮಂದಿ ಮಕ್ಕಳಲ್ಲಿ ಆ್ಯಂಟ್ವಾನ್‌ ಒಬ್ಬರು. ಆದರೆ ಪೋಲೆಂಡಿನವರು ಫ್ರಾನ್ಸ್‌ಗೆ ವಲಸೆ ಬಂದದ್ದೇಕೆ? ಮೊದಲ ವಿಶ್ವ ಯುದ್ಧದ ನಂತರ ಪೋಲೆಂಡಿಗೆ ಪುನಃ ಸ್ವಾತಂತ್ರ್ಯ ಸಿಕ್ಕಿದಾಗ ಅಲ್ಲಿನ ಜನಸಂಖ್ಯೆ ಜಾಸ್ತಿಯಾದದ್ದರಿಂದ ದೊಡ್ಡ ಸಮಸ್ಯೆಯುಂಟಾಯಿತು. ಇನ್ನೊಂದು ಕಡೆ ಫ್ರಾನ್ಸ್‌ನಲ್ಲಿ 10 ಲಕ್ಷಕ್ಕಿಂತ ಹೆಚ್ಚು ಗಂಡಸರು ಯುದ್ಧದಲ್ಲಿ ಸತ್ತದ್ದರಿಂದ ಆ ದೇಶಕ್ಕೆ ಗಣಿ ಕೆಲಸಗಾರರ ಅಗತ್ಯ ಹೆಚ್ಚಾಯಿತು. ಹಾಗಾಗಿ 1919ರ ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್‌ ಮತ್ತು ಪೋಲೆಂಡಿನ ಸರ್ಕಾರಗಳು ವಲಸೆಹೋಗುವಿಕೆಯ ಒಪ್ಪಂದ ಮಾಡಿದವು. ಹೀಗೆ ಫ್ರಾನ್ಸ್‌ಗೆ ಬಂದು ನೆಲೆಸಿದ ಪೋಲೆಂಡ್ ಜನರ ಸಂಖ್ಯೆ 1931ರೊಳಗೆ 5,07,800ಕ್ಕೆ ತಲಪಿತು. ಪೋಲೆಂಡಿನಿಂದ ಬಂದ ಹೆಚ್ಚಿನವರು ಫ್ರಾನ್ಸ್‌ನ ಉತ್ತರದಲ್ಲಿದ್ದ ಗಣಿಗಾರಿಕೆಯ ಪ್ರದೇಶಗಳಲ್ಲಿ ನೆಲೆಸಿದರು.

ಶ್ರಮಜೀವಿಗಳಾಗಿದ್ದ ಪೋಲೆಂಡಿನವರು ಹೀಗೆ ವಲಸೆಬಂದಾಗ ಜೊತೆಯಲ್ಲೇ ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ತಂದರು. ಅವರಿಗೆ ದೇವರೆಂದರೆ ತುಂಬ ಭಯಭಕ್ತಿಯೂ ಇತ್ತು. “ನನ್ನ ತಾತ ಜೋಸೆಫ್‌ ಬೈಬಲ್‌ ಬಗ್ಗೆ ತುಂಬ ಭಕ್ತಿಯಿಂದ ಮಾತಾಡುತ್ತಿದ್ದರು. ಇಂಥ ಭಾವನೆಯನ್ನು ಅವರಲ್ಲಿ ಬೇರೂರಿಸಿದ್ದು ಅವರ ತಂದೆ” ಎಂದು ಈಗ 90 ವರ್ಷದವರಾಗಿರುವ ಆ್ಯಂಟ್ವಾನ್‌ ಮೆಲುಕುಹಾಕುತ್ತಾರೆ. ಗಣಿಗಳಲ್ಲಿ ಕೆಲಸಮಾಡುತ್ತಿದ್ದ ಪೋಲೆಂಡಿನವರು ಭಾನುವಾರಗಳಂದು ಒಳ್ಳೇ ಬಟ್ಟೆ ಹಾಕಿ ಕುಟುಂಬ ಸಮೇತ ಚರ್ಚಿಗೆ ಹೋಗುತ್ತಿದ್ದರು. ಫ್ರಾನ್ಸ್‌ನ ಜನರು ಇವರನ್ನು ತಿರಸ್ಕಾರದಿಂದ ನೋಡುತ್ತಿದ್ದರು ಏಕೆಂದರೆ ಅವರಿಗೆ ದೇವರ ಮೇಲೆ ಅಷ್ಟೇನೂ ಭಯಭಕ್ತಿ ಇರಲಿಲ್ಲ.

ಪೋಲೆಂಡಿನ ಅನೇಕ ನಿವಾಸಿಗಳಿಗೆ ಬೈಬಲ್‌ ವಿದ್ಯಾರ್ಥಿಗಳ ಜೊತೆ ಮೊದಲ ಸಂಪರ್ಕವಾದದ್ದು ನೊಹ್‌ಪದ್‌ಕಲೆ ಎಂಬಲ್ಲಿ. ಅಲ್ಲಿದ್ದ ಬೈಬಲ್‌ ವಿದ್ಯಾರ್ಥಿಗಳು 1904ರಿಂದ ಆ ಪ್ರದೇಶದಲ್ಲಿ ಹುರುಪಿನಿಂದ ಸಾರುತ್ತಿದ್ದರು. 1915ರಿಂದ ಪ್ರತಿ ತಿಂಗಳು ಪೋಲಿಷ್‌ ಭಾಷೆಯಲ್ಲಿ ಕಾವಲಿನಬುರುಜು ಪತ್ರಿಕೆಯ ಮುದ್ರಣ ಆರಂಭವಾಯಿತು. ಅದೇ ಭಾಷೆಯಲ್ಲಿ ದ ಗೋಲ್ಡನ್‌ ಏಜ್ (ಈಗ ಎಚ್ಚರ!) ಪತ್ರಿಕೆಯ ಮುದ್ರಣ 1925ರಲ್ಲಿ ಆರಂಭವಾಯಿತು. ಅನೇಕ ಕುಟುಂಬಗಳು ಈ ಪತ್ರಿಕೆಗಳಲ್ಲಿರುವ ಬೈಬಲಾಧರಿತ ವಿಷಯಗಳಿಗೆ ಮತ್ತು ಪೋಲಿಷ್‌ ಭಾಷೆಯಲ್ಲಿದ್ದ ದ ಹಾರ್ಪ್‌ ಆಫ್‌ ಗಾಡ್ ಪುಸ್ತಕಕ್ಕೆ ಒಳ್ಳೇ ಪ್ರತಿಕ್ರಿಯೆ ತೋರಿಸಿದವು.

ಆ್ಯಂಟ್ವಾನ್‍ರ ಕುಟುಂಬವು ಬೈಬಲ್‌ ವಿದ್ಯಾರ್ಥಿಗಳ ಬಗ್ಗೆ  ತಿಳಿದುಕೊಂಡದ್ದು ತಮ್ಮ ಸೋದರಮಾವನಿಂದ. ಈ ಸೋದರಮಾವ ತಮ್ಮ ಪ್ರಥಮ ಕೂಟಕ್ಕೆ ಹಾಜರಾದದ್ದು 1924ರಲ್ಲಿ. ಇದೇ ವರ್ಷದಲ್ಲಿ ಬೈಬಲ್‌ ವಿದ್ಯಾರ್ಥಿಗಳು ಪೋಲಿಷ್‌ ಭಾಷೆಯಲ್ಲಿ ಮೊದಲ ಸಮ್ಮೇಳನವನ್ನು ಬ್ರೂಯೆ-ಓನಾಟ್ವ ಎಂಬಲ್ಲಿ ನಡೆಸಿದರು. ಇದಾಗಿ ಒಂದು ತಿಂಗಳೊಳಗೆ ಜಾಗತಿಕ ಮುಖ್ಯಕಾರ್ಯಾಲಯದ ಪ್ರತಿನಿಧಿಯಾಗಿ ಬಂದ ಜೋಸೆಫ್‌ ಎಫ್‌. ರದರ್‌ಫರ್ಡ್‌ರವರು ಒಂದು ಸಾರ್ವಜನಿಕ ಕೂಟ ನಡೆಸಿದರು. ಇದಕ್ಕೆ 2,000 ಜನರು ಬಂದಿದ್ದರು. ಅವರಲ್ಲಿ ಹೆಚ್ಚಿನವರು ಪೋಲಿಷ್‌ ಜನರೇ ಆಗಿದ್ದರು. ಇದರಿಂದ ಪ್ರಭಾವಿತರಾದ ಸಹೋದರ ರದರ್‌ಫರ್ಡ್‌ ಹೇಳಿದ್ದು: “ಯೆಹೋವನು ನಿಮ್ಮನ್ನು ಫ್ರಾನ್ಸಿಗೆ ತಂದದ್ದೇ ಸತ್ಯ ಕಲಿಯಲಿಕ್ಕಾಗಿ. ಈಗ ಫ್ರೆಂಚ್‌ ಜನರು ಸತ್ಯ ಕಲಿಯಲು ನೀವೂ ನಿಮ್ಮ ಮಕ್ಕಳೂ ಸಹಾಯ ಮಾಡಬೇಕು. ಸಾರುವ ಕೆಲಸ ಇನ್ನೂ ಬಹಳಷ್ಟಿದೆ. ಈ ಕೆಲಸಕ್ಕಾಗಿ ಯೆಹೋವನು ಬೇಕಾದ ಪ್ರಚಾರಕರನ್ನು ಖಂಡಿತ ಒದಗಿಸುವನು.”

ಯೆಹೋವ ದೇವರು ಹಾಗೇ ಮಾಡಿದನು! ಪೋಲಿಷ್‌ ಭಾಷೆಯಾಡುವ ಈ ಕ್ರೈಸ್ತರು ಗಣಿಗಳಲ್ಲಿ ಎಷ್ಟು ಶ್ರಮಪಟ್ಟು ಕೆಲಸಮಾಡುತ್ತಿದ್ದರೊ ಸಾರುವ ಕೆಲಸವನ್ನೂ ಅಷ್ಟೇ ಮನಃಪೂರ್ವಕವಾಗಿ ಮಾಡಿದರು. ಅವರಲ್ಲಿ ಕೆಲವರಂತೂ ತಾವು ಕಲಿತ ಅಮೂಲ್ಯ ಸತ್ಯಗಳನ್ನು ಹಂಚಿಕೊಳ್ಳಲು ತಮ್ಮ ಸ್ವದೇಶವಾದ ಪೋಲೆಂಡಿಗೆ ವಾಪಸ್‌ ಹೋದರು. ಪೋಲೆಂಡಿನ ವಿಸ್ತಾರವಾದ ಕ್ಷೇತ್ರಗಳಲ್ಲಿ ಸುವಾರ್ತೆಯನ್ನು ಹಬ್ಬಿಸಲಿಕ್ಕೆಂದು ಫ್ರಾನ್ಸ್‌ ಬಿಟ್ಟು ಹೋದವರಲ್ಲಿ ಟಿಯೊಫಿಲ್‌ ಪಾಯಸ್ಕೊವ್‌ಸ್ಕಿ, ಶ್ಟೆಪನ್‌ ಕೊಸೆಕ್‌, ಯಾನ್‌ ಜಬುಡ ಎಂಬವರೂ ಇದ್ದರು.

ಆದರೆ ಪೋಲಿಷ್‌ ಭಾಷೆಯಾಡುವ ಅನೇಕ ಪ್ರಚಾರಕರು ಫ್ರಾನ್ಸ್‌ನಲ್ಲೇ ಉಳಿದುಕೊಂಡರು. ಫ್ರೆಂಚ್‌ ಸಹೋದರ ಸಹೋದರಿಯರೊಟ್ಟಿಗೆ ಸೇರಿ ಹುರುಪಿನಿಂದ ಸಾರುವುದನ್ನು ಮುಂದುವರಿಸಿದರು. 1926ರಲ್ಲಿ ಸಲನೊಬ್ಲ್‌ ಎಂಬಲ್ಲಿ ನಡೆದ ಸಮ್ಮೇಳನದಲ್ಲಿ ಪೋಲಿಷ್‌ ಭಾಷೆಗೆ ಹಾಜರಾದವರು 1,000 ಮಂದಿ. ಫ್ರೆಂಚ್‌ ಭಾಷೆಗೆ ಹಾಜರಾದವರು 300 ಮಂದಿ. 1929 ವರ್ಷಪುಸ್ತಕ (ಇಂಗ್ಲಿಷ್‌) ಹೀಗೆ ವರದಿಸಿತು: “ಕಳೆದ ವರ್ಷದಲ್ಲಿ ಪೋಲಿಷ್‌ ಭಾಷೆಯಾಡುವ 332 ಸಹೋದರರು ತಾವು ಮಾಡಿದ ಸಮರ್ಪಣೆಯನ್ನು ದೀಕ್ಷಾಸ್ನಾನದ ಮೂಲಕ ತೋರಿಸಿದರು.” ಎರಡನೇ ವಿಶ್ವ ಯುದ್ಧ ಆರಂಭವಾಗುವ ಮುಂಚೆ ಫ್ರಾನ್ಸ್‌ನಲ್ಲಿದ್ದ 84 ಸಭೆಗಳಲ್ಲಿ 32 ಪೋಲಿಷ್‌ ಭಾಷೆಯದ್ದಾಗಿದ್ದವು.

ಫ್ರಾನ್ಸ್‌ನಲ್ಲಿರುವ ಪೋಲಿಷ್‌ ಸಹೋದರ ಸಹೋದರಿಯರು ಅಧಿವೇಶನಕ್ಕೆ ಪ್ರಯಾಣಿಸುತ್ತಿದ್ದಾರೆ. ಫಲಕದ ಮೇಲೆ “ಯೆಹೋವನ ಸಾಕ್ಷಿಗಳು” ಎಂದು ಬರೆಯಲಾಗಿದೆ

1947ರಲ್ಲಿ ಪೋಲಿಷ್‌ ಸರ್ಕಾರವು ಜನರಿಗೆ ಪೋಲೆಂಡಿಗೆ ಹಿಂದಿರುಗಲು ಆಮಂತ್ರಣ ಕೊಟ್ಟಾಗ ಅನೇಕ ಯೆಹೋವನ ಸಾಕ್ಷಿಗಳು ಅದನ್ನು ಸ್ವೀಕರಿಸಿದರು. ಅವರು ಫ್ರಾನ್ಸ್‌ ಬಿಟ್ಟು ಹೋದರೂ ಫ್ರೆಂಚ್‌ ಜೊತೆ-ವಿಶ್ವಾಸಿಗಳೊಟ್ಟಿಗೆ ಸೇರಿ ಅವರು ಮಾಡಿದ್ದ ಕೆಲಸ ಫಲಕೊಟ್ಟಿತ್ತು. ಅದೇ ವರ್ಷ ರಾಜ್ಯ ಪ್ರಚಾರಕರಲ್ಲಿ ಶೇ.10ರಷ್ಟು ವೃದ್ಧಿಯಿತ್ತು. 1948-1950ರ ವರೆಗಿನ ವರ್ಷಗಳಲ್ಲಿ 20, 23 ಮತ್ತು 40 ಶೇಕಡ ವೃದ್ಧಿಯೂ ಆಯಿತು! ಈ ಹೊಸ ಪ್ರಚಾರಕರನ್ನು ತರಬೇತಿಗೊಳಿಸಲು ಫ್ರಾನ್ಸ್‌ನ ಬ್ರಾಂಚ್‌ 1948ರಲ್ಲಿ ಮೊದಲ ಸರ್ಕಿಟ್‌ ಮೇಲ್ವಿಚಾರಕರನ್ನು ನೇಮಿಸಿತು. ಆಯ್ಕೆಯಾದ 5 ಮಂದಿ ಮೇಲ್ವಿಚಾರಕರಲ್ಲಿ 4 ಮಂದಿ ಪೋಲಿಷ್‌ ಭಾಷೆಯಾಡುವವರಾಗಿದ್ದರು. ಅವರಲ್ಲಿ ಆ್ಯಂಟ್ವಾನ್‌ ಸ್ಕಲೇಕಿ ಸಹ ಒಬ್ಬರಾಗಿದ್ದರು.

ಫ್ರಾನ್ಸ್‌ನಲ್ಲಿರುವ ಅನೇಕ ಯೆಹೋವನ ಸಾಕ್ಷಿಗಳಿಗೆ ಈಗಲೂ ತಮ್ಮ ಪೂರ್ವಜರ ಪೋಲಿಷ್‌ ಕುಲನಾಮಗಳಿವೆ. ಆ ಪೂರ್ವಜರು ಗಣಿಗಳಲ್ಲಿ ಮತ್ತು ಕ್ಷೇತ್ರ ಸೇವೆಯಲ್ಲಿ ಶ್ರಮಪಟ್ಟು ದುಡಿದವರಾಗಿದ್ದರು. ಇಂದು ಕೂಡ ಫ್ರಾನ್ಸಿಗೆ ವಲಸೆಬರುವವರಲ್ಲಿ ತುಂಬ ಜನರು ಸತ್ಯ ಕಲಿಯುತ್ತಿದ್ದಾರೆ. ಪ್ರಚಾರಕರು ತಮ್ಮ ಸ್ವದೇಶಕ್ಕೆ ಹಿಂದಿರುಗಲಿ ಇಲ್ಲವೇ ಈ ಹೊಸ ದೇಶವನ್ನೇ ತಮ್ಮ ಮನೆಯಾಗಿ ಮಾಡಿಕೊಳ್ಳಲಿ ತಮಗಿಂತ ಮುಂಚೆಯಿದ್ದ ಪೋಲಿಷ್‌ ಪ್ರಚಾರಕರಂತೆ ಅವರು ಹುರುಪಿನಿಂದ ರಾಜ್ಯ ಘೋಷಕರಾಗಿ ಕೆಲಸಮಾಡುತ್ತಿದ್ದಾರೆ.—ಫ್ರಾನ್ಸ್‌ನಲ್ಲಿರುವ ನಮ್ಮ ಸಂಗ್ರಹಾಲಯದಿಂದ.