ಎಫೆಸದವರಿಗೆ ಬರೆದ ಪತ್ರ 1:1-23

  • ವಂದನೆ (1, 2)

  • ದೇವರ ಆಶೀರ್ವಾದಗಳು (3-7)

  • ಕ್ರಿಸ್ತನ ಮೂಲಕ ಎಲ್ಲವನ್ನು ಒಟ್ಟುಸೇರಿಸಲಾಗುತ್ತೆ (8-14)

    • ಅಂದ್ಕೊಂಡ ಸಮಯದಲ್ಲಿ “ಒಂದು ಆಡಳಿತ” (10)

    • ಪವಿತ್ರಶಕ್ತಿಯ ಮುದ್ರೆ ‘ಮುಂಚೆನೇ ಕೊಟ್ಟ ಖಾತ್ರಿ’ (13, 14)

  • ಎಫೆಸದವ್ರ ನಂಬಿಕೆಗಾಗಿ ಪೌಲ ದೇವರಿಗೆ ಧನ್ಯವಾದ ಹೇಳಿದ, ಅವ್ರಿಗಾಗಿ ಪ್ರಾರ್ಥಿಸಿದ (15-23)

1  ಪೌಲನಾದ ನಾನು ದೇವರು ಬಯಸಿದ್ರಿಂದ ಕ್ರಿಸ್ತ ಯೇಸುವಿನ ಅಪೊಸ್ತಲನಾಗಿದ್ದೀನಿ ಮತ್ತು ಕ್ರಿಸ್ತ ಯೇಸು ಜೊತೆ ಒಂದಾಗಿರೋ, ನಂಬಿಗಸ್ತರಾಗಿರೋ ಎಫೆಸದ+ ಪವಿತ್ರ ಜನ್ರಿಗೆ ಈ ಪತ್ರ ಬರಿತಾ ಇದ್ದೀನಿ.  ನಮ್ಮ ತಂದೆಯಾದ ದೇವರು ಮತ್ತು ಪ್ರಭು ಯೇಸು ಕ್ರಿಸ್ತ ನಿಮಗೆ ಅಪಾರ ಕೃಪೆ ತೋರಿಸ್ಲಿ, ಶಾಂತಿ ಕೊಡ್ಲಿ.  ನಮ್ಮ ಪ್ರಭು ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಹೊಗಳಿಕೆ ಸಿಗ್ಲಿ. ಯಾಕಂದ್ರೆ ನಾವು ಕ್ರಿಸ್ತನ ಜೊತೆ ಒಂದಾಗಿರೋದ್ರಿಂದ ದೇವರು ನಮಗೆ ಪವಿತ್ರಶಕ್ತಿಯಿಂದ ಸ್ವರ್ಗದಲ್ಲಿ ಎಲ್ಲ ತರದ ಆಶೀರ್ವಾದಗಳನ್ನ ಕೊಟ್ಟಿದ್ದಾನೆ.+  ಹೇಗಂದ್ರೆ ನಾವು ಕ್ರಿಸ್ತನ ಜೊತೆ ಒಂದಾಗಿರಬೇಕಂತ ಲೋಕ ಹುಟ್ಟೋ* ಮುಂಚೆನೇ ದೇವರು ನಮ್ಮನ್ನ ಆರಿಸ್ಕೊಂಡನು. ನಾವು ಪ್ರೀತಿ ತೋರಿಸ್ತಾ ಆತನ ಮುಂದೆ ಪವಿತ್ರರಾಗಿ ತಪ್ಪಿಲ್ಲದವ್ರಾಗಿ ಇರಬೇಕಂತ+ ಆತನು ನಮ್ಮನ್ನ ಆರಿಸ್ಕೊಂಡನು.  ಆತನು ತನ್ನ ಖುಷಿಗಾಗಿ, ತಾನು ಇಷ್ಟಪಟ್ಟ ಹಾಗೆ+ ಯೇಸು ಕ್ರಿಸ್ತನ ಮೂಲಕ ನಮ್ಮನ್ನ ತನ್ನ ಮಕ್ಕಳಾಗಿ ದತ್ತು ತಗೊಳ್ಳೋಕೆ+ ಮೊದ್ಲೇ ತೀರ್ಮಾನ ಮಾಡಿದನು.+  ದೇವರು ತನ್ನ ಪ್ರೀತಿಯ ಮಗನ+ ಮೂಲಕ ದಯೆಯಿಂದ ನಮಗೆ ಅಪಾರ ಕೃಪೆ+ ತೋರಿಸಿದ್ರಿಂದ ಜನ್ರು ಆತನನ್ನ ಹೊಗಳೋಕೆ ಈ ತರ ಮಾಡಿದನು.  ದೇವರು ತನ್ನ ಮಗನ ರಕ್ತದ ಮೂಲಕ ಬಿಡುಗಡೆ ಬೆಲೆ ಕೊಟ್ಟು ನಮ್ಮನ್ನ ಬಿಡಿಸಿದನು.+ ಹೌದು ನಮ್ಮ ಪಾಪಗಳನ್ನ ಉದಾರವಾಗಿ ಕ್ಷಮಿಸಿದನು.+ ಹೀಗೆ ನಮಗೆ ಅಪಾರ ಕೃಪೆಯನ್ನ ಧಾರಾಳವಾಗಿ ತೋರಿಸಿದನು.*  ದೇವರು ಹೇರಳವಾಗಿ ಈ ಅಪಾರ ಕೃಪೆಯನ್ನ ನಮಗೆ ತೋರಿಸಿದ್ದಾನೆ. ಅದ್ರ ಜೊತೆ ಎಲ್ಲ ವಿವೇಕ ಮತ್ತು ತಿಳುವಳಿಕೆನೂ ಕೊಟ್ಟಿದ್ದಾನೆ.  ಆತನು ನಮಗೆ ತನ್ನ ಇಷ್ಟ ಏನು ಅನ್ನೋ ಪವಿತ್ರ ರಹಸ್ಯವನ್ನ+ ಅರ್ಥ ಮಾಡಿಸಿದನು. ಆ ರಹಸ್ಯವನ್ನ ಆತನು ತನ್ನ ಇಷ್ಟದ ಪ್ರಕಾರ ಮೊದ್ಲೇ ಯೋಜನೆ ಮಾಡಿದ್ದನು. 10  ಅದೇನಂದ್ರೆ ಅಂದ್ಕೊಂಡ ಸಮಯ ಮುಗಿದಾಗ, ಒಂದು ಆಡಳಿತವನ್ನ ಸ್ಥಾಪಿಸಿ ಸ್ವರ್ಗದಲ್ಲಿರೋ ಮತ್ತು ಭೂಮಿಯಲ್ಲಿರೋ ವಿಷ್ಯಗಳನ್ನ ಹೀಗೆ ಎಲ್ಲವನ್ನ ಕ್ರಿಸ್ತನ ಮೂಲಕ ಒಟ್ಟುಸೇರಿಸೋಕೆ ಯೋಜನೆ ಮಾಡಿದನು.+ ಹೌದು ಕ್ರಿಸ್ತನಲ್ಲಿ ಎಲ್ಲ ಒಟ್ಟುಸೇರುತ್ತೆ. 11  ಆತನ ಜೊತೆ ನಾವು ಒಂದಾಗಿದ್ದೀವಿ. ವಾರಸುದಾರರಾಗಿ ನೇಮಕ ಪಡ್ಕೊಂಡಿದ್ದೀವಿ.+ ಎಲ್ಲವನ್ನೂ ತನ್ನ ಇಷ್ಟದ ಪ್ರಕಾರ ನಿರ್ಧರಿಸಿ ಸಾಧಿಸೋ ದೇವರು ತನ್ನ ಉದ್ದೇಶಕ್ಕೆ ತಕ್ಕ ಹಾಗೆ ನಮ್ಮನ್ನ ಮೊದ್ಲೇ ಆರಿಸ್ಕೊಂಡನು. 12  ಕ್ರಿಸ್ತನಲ್ಲಿ ಮೊದ್ಲು ನಿರೀಕ್ಷೆಯಿಟ್ಟ ನಮ್ಮಿಂದ ದೇವರಿಗೆ ಹೊಗಳಿಕೆ, ಗೌರವ ಸಿಗಬೇಕಂತ ದೇವರು ಹಾಗೆ ಮಾಡಿದನು. 13  ನೀವೂ ಸತ್ಯವನ್ನ ಅಂದ್ರೆ ನಿಮ್ಮ ರಕ್ಷಣೆಯ ಬಗ್ಗೆ ಸಿಹಿಸುದ್ದಿಯನ್ನ ಕೇಳಿಸ್ಕೊಂಡ ಮೇಲೆ ಕ್ರಿಸ್ತನಲ್ಲಿ ನಿರೀಕ್ಷೆ ಇಟ್ರಿ. ನೀವು ಆತನಲ್ಲಿ ನಂಬಿಕೆಯಿಟ್ಟ ಮೇಲೆ ಆತನ ಮೂಲಕ ದೇವರು ನಿಮಗೆ ಮುದ್ರೆ ಒತ್ತಿದನು.+ ಮಾತು ಕೊಟ್ಟ ಹಾಗೆ ಪವಿತ್ರಶಕ್ತಿಯಿಂದ ಅದನ್ನ ಮಾಡಿದನು. 14  ಆ ಪವಿತ್ರಶಕ್ತಿ ನಮಗೆ ಸಿಗೋ ಆಸ್ತಿಗೆ ಮುಂಚೆನೇ ಕೊಟ್ಟ ಖಾತ್ರಿ.*+ ಬಿಡುಗಡೆ ಬೆಲೆಯಿಂದ+ ದೇವರ ಸ್ವಂತ ಜನ್ರನ್ನ*+ ಬಿಡಿಸೋಕಂತಾನೇ ಆ ಮುದ್ರೆಯನ್ನ ಒತ್ತಿದನು. ಇದ್ರಿಂದ ದೇವರಿಗೆ ಹೊಗಳಿಕೆ, ಗೌರವ ಸಿಗುತ್ತೆ. 15  ಪ್ರಭು ಯೇಸು ಮೇಲೆ ನಿಮಗಿರೋ ನಂಬಿಕೆ ಬಗ್ಗೆ ಮತ್ತು ಎಲ್ಲ ಪವಿತ್ರ ಜನ್ರಿಗೆ ನೀವು ತೋರಿಸ್ತಿರೋ ಪ್ರೀತಿ ಬಗ್ಗೆ ನಾನು ಕೇಳಿಸ್ಕೊಂಡಿದ್ದೀನಿ. ಹಾಗಾಗಿ ನಾನೂ 16  ನಿಮ್ಮ ಬಗ್ಗೆ ದೇವರಿಗೆ ಧನ್ಯವಾದ ಹೇಳೋದನ್ನ ಯಾವತ್ತೂ ನಿಲ್ಲಿಸಲಿಲ್ಲ. ನಾನು ನಿಮಗಾಗಿ ಯಾವಾಗ್ಲೂ ಪ್ರಾರ್ಥಿಸ್ತೀನಿ. 17  ನಮ್ಮ ಪ್ರಭು ಯೇಸು ಕ್ರಿಸ್ತನ ದೇವರೂ ಮಹಿಮೆಯಿಂದ ತುಂಬಿರೋ ತಂದೆಯೂ ಆಗಿರುವಾತನು ನಿಮಗೆ ಶಕ್ತಿ ಕೊಡ್ಲಿ, ಅದ್ರಿಂದ ನೀವು ವಿವೇಕಿಗಳಾಗಿ ದೇವರು ಹೇಳೋ ವಿಷ್ಯಗಳನ್ನ ಅರ್ಥ ಮಾಡ್ಕೊಳ್ಳೋಕೆ ಆಗ್ಲಿ, ಹೀಗೆ ನೀವು ಆತನ ಬಗ್ಗೆ ಚೆನ್ನಾಗಿ ತಿಳ್ಕೊಬೇಕು ಅನ್ನೋದೇ ನನ್ನ ಪ್ರಾರ್ಥನೆ.+ 18  ದೇವರು ನಿಮ್ಮ ಹೃದಯವನ್ನ ತೆರೆದಿದ್ದಾನೆ. ಇದ್ರಿಂದ ಆತನು ನಿಮಗೆ ಕೊಟ್ಟಿರೋ ನಿರೀಕ್ಷೆಯನ್ನ ಮತ್ತು ಪವಿತ್ರ ಜನ್ರಿಗೆ ಆಸ್ತಿಯಾಗಿ ಕೊಡೋ ಮಹಿಮಾಭರಿತ ಆಶೀರ್ವಾದಗಳನ್ನ* ನೀವು ನೋಡೋಕೆ, ತಿಳ್ಕೊಳ್ಳೋಕೆ ಆಗುತ್ತೆ.+ 19  ಅಷ್ಟೇ ಅಲ್ಲ ನಂಬಿಕೆ ಇರೋ ನಮ್ಮಲ್ಲಿ ಆತನ ಮಹಾ ಶಕ್ತಿ ಕೆಲಸ ಮಾಡ್ತಿದೆ+ ಅಂತ ನೀವು ತಿಳ್ಕೊಳ್ಳೋಕೆ ಆಗುತ್ತೆ. ಇದು ಆತನು ತನ್ನ ಬಲಿಷ್ಠ ಶಕ್ತಿಯಿಂದ ಮಾಡಿದ ಕೆಲಸಗಳಿಂದ ಗೊತ್ತಾಗಿದೆ. 20  ಕ್ರಿಸ್ತನಿಗೆ ಮತ್ತೆ ಜೀವ ಕೊಟ್ಟು ಎಬ್ಬಿಸಿ ಸ್ವರ್ಗದಲ್ಲಿ ತನ್ನ ಬಲಗಡೆಯಲ್ಲಿ+ ಕೂರಿಸುವಾಗ್ಲೂ ಆತನು ತನ್ನ ಈ ಶಕ್ತಿ ತೋರಿಸಿದನು. 21  ದೇವರು ಕ್ರಿಸ್ತನನ್ನ ಎಲ್ಲ ಸರ್ಕಾರ, ಅಧಿಕಾರ, ಶಕ್ತಿ, ಆಳ್ವಿಕೆ ಮತ್ತು ಈಗಷ್ಟೇ* ಅಲ್ಲ, ಮುಂದೆನೂ ಕೊಡೋ ಎಲ್ಲ ಹೆಸ್ರುಗಳಿಗಿಂತ+ ಮಹಾ ಸ್ಥಾನಕ್ಕೆ ಏರಿಸಿದನು. 22  ದೇವರು ಎಲ್ಲವನ್ನೂ ಕ್ರಿಸ್ತನ ಕಾಲಕೆಳಗೆ ಹಾಕಿ+ ಆತನಿಗೆ ಅಧೀನ ಮಾಡಿದನು. ಅಷ್ಟೇ ಅಲ್ಲ ಸಭೆಗೆ ಸಂಬಂಧಿಸಿದ ಎಲ್ಲ ವಿಷ್ಯಗಳಿಗೆ ಆತನನ್ನ ಯಜಮಾನನಾಗಿ* ಮಾಡಿದನು.+ 23  ಸಭೆ ಕ್ರಿಸ್ತನ ದೇಹವಾಗಿದೆ.+ ಅದು ಆತನ ಗುಣಗಳಿಂದ ತುಂಬಿದೆ. ಆತನು ಎಲ್ಲವನ್ನ ಪೂರ್ಣ ಮಾಡ್ತಾನೆ.

ಪಾದಟಿಪ್ಪಣಿ

ಅಂದ್ರೆ ಆದಾಮ ಹವ್ವರಿಗೆ ಮಕ್ಕಳಾಗೋ ಮುಂಚೆ.
ಅಥವಾ “ಅಪಾರ ಕೃಪೆ ಅನ್ನೋ ಐಶ್ವರ್ಯ ಕೊಟ್ಟನು.”
ಅಥವಾ “ಸಂಚಕಾರ, ಮುಂಗಡ ಹಣ.”
ಅಕ್ಷ. “ಆಸ್ತಿ.”
ಅಕ್ಷ. “ಐಶ್ವರ್ಯಗಳನ್ನ.”
ಪದವಿವರಣೆಯಲ್ಲಿ “ಲೋಕದ ವ್ಯವಸ್ಥೆ” ನೋಡಿ.
ಅಕ್ಷ. “ತಲೆಯಾಗಿ.”