ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ದಿನವನ್ನು ತಾಳ್ಮೆಯಿಂದ ಕಾಯುತ್ತಿರುವುದು

ಯೆಹೋವನ ದಿನವನ್ನು ತಾಳ್ಮೆಯಿಂದ ಕಾಯುತ್ತಿರುವುದು

ಯೆಹೋವನ ದಿನವನ್ನು ತಾಳ್ಮೆಯಿಂದ ಕಾಯುತ್ತಿರುವುದು

“ನಿಮಗಿರುವ ನಂಬಿಕೆಗೆ . . . ತಾಳ್ಮೆಯನ್ನೂ . . . ಕೂಡಿಸಿರಿ.”—2 ಪೇತ್ರ 1:5, 7.

ಯೆಹೋವನ ಮಹಾದಿನವು ಅತಿ ಸಮೀಪವಿದೆ. (ಯೋವೇಲ 1:15; ಚೆಫನ್ಯ 1:14) ದೇವರಿಗೆ ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಿರ್ಧರಿಸಿರುವ ಕ್ರೈಸ್ತರಾದ ನಾವು, ಯೆಹೋವನ ಪರಮಾಧಿಕಾರವು ನಿರ್ದೋಷೀಕರಿಸಲ್ಪಡುವ ಸಮಯವನ್ನು ಅತ್ಯಾಸಕ್ತಿಯಿಂದ ಎದುರು ನೋಡುತ್ತೇವೆ. ಅಷ್ಟರವರೆಗೆ, ನಾವು ನಮ್ಮ ನಂಬಿಕೆಯ ನಿಮಿತ್ತ ಹಗೆ, ನಿಂದೆ, ಹಿಂಸೆ ಮತ್ತು ಮರಣವನ್ನು ಎದುರಿಸುತ್ತೇವೆ. (ಮತ್ತಾಯ 5:10-12; 10:22; ಪ್ರಕಟನೆ 2:10) ಇದಕ್ಕಾಗಿಯೇ ಸಂಕಷ್ಟವನ್ನು ಸಹಿಸಿಕೊಳ್ಳುವ ಸಾಮರ್ಥ್ಯವಾದ ತಾಳ್ಮೆ ನಮಗೆ ಅಗತ್ಯ. ಅಪೊಸ್ತಲ ಪೇತ್ರನು, “ನಿಮಗಿರುವ ನಂಬಿಕೆಗೆ . . . ತಾಳ್ಮೆಯನ್ನೂ . . . ಕೂಡಿಸಿರಿ” ಎಂದು ನಮ್ಮನ್ನು ಪ್ರೋತ್ಸಾಹಿಸುತ್ತಾನೆ. (2 ಪೇತ್ರ 1:5, 7) ಹೌದು, ನಮಗೆ ತಾಳ್ಮೆ ಅತ್ಯಗತ್ಯ ಏಕೆಂದರೆ “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು” ಎಂದು ಯೇಸು ಹೇಳಿದನು.—ಮತ್ತಾಯ 24:13.

2 ಇದಲ್ಲದೆ, ನಾವು ಕಾಯಿಲೆ, ವಿಯೋಗ ಮತ್ತು ಇತರ ಕಷ್ಟಗಳನ್ನೂ ಅನುಭವಿಸುತ್ತೇವೆ. ಆಗ ನಾವು ನಮ್ಮ ನಂಬಿಕೆಯನ್ನು ಕಳಕೊಳ್ಳುವಲ್ಲಿ ಸೈತಾನನಿಗೆ ಎಷ್ಟೊಂದು ಸಂತಸವಾಗುವುದು! (ಲೂಕ 22:31, 32) ಆದರೆ ಯೆಹೋವನ ಬೆಂಬಲ ನಮಗಿರುವಲ್ಲಿ ನಾವು ವಿವಿಧ ಕಷ್ಟಗಳನ್ನು ತಾಳಿಕೊಳ್ಳಬಲ್ಲೆವು. (1 ಪೇತ್ರ 5:6-11) ಯೆಹೋವನ ದಿನಕ್ಕಾಗಿ ತಾಳ್ಮೆಯಿಂದ ಮತ್ತು ಕುಂದಿ ಹೋಗದ ಅಚಲ ನಂಬಿಕೆಯಿಂದ ಕಾಯಬಲ್ಲೆವು ಎಂಬುದನ್ನು ಪ್ರಮಾಣೀಕರಿಸುವ ಕೆಲವು ನಿಜ ಜೀವನದ ಅನುಭವಗಳನ್ನು ಪರಿಗಣಿಸಿರಿ.

ಅಸ್ವಸ್ಥತೆ ಅವರಿಗೆ ಅಡ್ಡಿಯಾಗಲಿಲ್ಲ

3 ದೇವರು ಇಂದು ನಮ್ಮ ಅಸ್ವಸ್ಥತೆಯನ್ನು ಅದ್ಭುತಕರವಾಗಿ ಗುಣಪಡಿಸದಿದ್ದರೂ ಅದನ್ನು ತಾಳಿಕೊಳ್ಳಲು ನಮಗೆ ಬಲವನ್ನು ಕೊಡುತ್ತಾನೆ. (ಕೀರ್ತನೆ 41:1-3) ಷ್ಯಾರನ್‌ ಎಂಬಾಕೆ ಹೇಳುವುದು: “ನನಗೆ ನೆನಪು ಬಂದಾಗಿನಿಂದ ನನ್ನ ಒಡನಾಡಿ ಗಾಲಿಕುರ್ಚಿಯೇ. ನಾನು ಹುಟ್ಟಿದಂದಿನಿಂದಲೂ ಮಿದುಳಿನ ಲಕ್ವ ನನ್ನ ಬಾಲ್ಯದ ಉಲ್ಲಾಸವನ್ನು ಕಸಿದುಕೊಂಡಿತು.” ಆದರೆ ಯೆಹೋವನ ಕುರಿತು ಮತ್ತು ಪರಿಪೂರ್ಣ ಆರೋಗ್ಯದ ಬಗ್ಗೆ ಆತನ ವಾಗ್ದಾನಗಳ ಕುರಿತು ಕಲಿತದ್ದು ಷ್ಯಾರನ್‌ಗೆ ನಿರೀಕ್ಷೆಯನ್ನು ಕೊಟ್ಟಿತು. ಮಾತಾಡುವುದು ಮತ್ತು ನಡೆಯುವುದು ಆಕೆಗೆ ಕಷ್ಟಕರವಾಗಿದೆಯಾದರೂ ಕ್ರೈಸ್ತ ಸೇವೆಯಲ್ಲಿ ಆಕೆ ಆನಂದವನ್ನು ಕಂಡುಕೊಳ್ಳುತ್ತಾಳೆ. ಸುಮಾರು 15 ವರುಷಗಳ ಹಿಂದೆ ಅವಳಂದದ್ದು: “ನನ್ನ ಆರೋಗ್ಯ ಸ್ಥಿತಿ ಹದಗೆಡುತ್ತಿರಬಹುದು. ಆದರೆ ದೇವರಲ್ಲಿ ನಾನಿಟ್ಟಿರುವ ಭರವಸೆ ಮತ್ತು ಆತನೊಂದಿಗಿರುವ ನನ್ನ ಸಂಬಂಧವೇ ನನಗೆ ಜೀವಾಧಾರ. ಯೆಹೋವನ ಜನರ ಮಧ್ಯೆ ಇರುವುದು ಮತ್ತು ಆತನು ನನ್ನನ್ನು ಸತತವಾಗಿ ಬೆಂಬಲಿಸುವುದು ಎಷ್ಟೊಂದು ಸಂತೋಷವನ್ನು ತರುತ್ತದೆ!”

4 “ಮನಗುಂದಿದವರಿಗೆ ಸಾಂತ್ವನಗೊಳಿಸುವ ರೀತಿಯಲ್ಲಿ ಮಾತಾಡಿರಿ” ಎಂದು ಅಪೊಸ್ತಲ ಪೌಲನು ಥೆಸಲೊನೀಕದ ಕ್ರೈಸ್ತರನ್ನು ಪ್ರೋತ್ಸಾಹಿಸಿದನು. (1 ಥೆಸಲೊನೀಕ 5:14, NW) ತೀರ ಆಶಾಭಂಗವನ್ನು ತರುವಂಥ ಸನ್ನಿವೇಶಗಳು ಖಿನ್ನತೆಯನ್ನು ಉಂಟುಮಾಡಬಲ್ಲವು. 1993ರಲ್ಲಿ ಷ್ಯಾರನ್‌ ಬರೆದುದು: “ಪೂರ್ತಿ ಸೋತು ಹೋದ ಅನಿಸಿಕೆಯಿಂದ ನಾನು . . . ಮೂರು ವರುಷ ಗಾಢ ಖಿನ್ನತೆಯಲ್ಲಿ ಮುಳುಗಿಹೋದೆ . . . ಹಿರಿಯರು ಸಲಹೆ ಸಾಂತ್ವನಗಳನ್ನು ನೀಡಿದರು . . . ಯೆಹೋವನು ಕಾವಲಿನಬುರುಜು ಪತ್ರಿಕೆಯ ಮೂಲಕ ಕಠಿನ ಖಿನ್ನತೆಯ ವಿಷಯದಲ್ಲಿ ಕೋಮಲ ಒಳದೃಷ್ಟಿಯನ್ನು ಒದಗಿಸಿದನು. ಹೌದು, ಆತನು ತನ್ನ ಜನರನ್ನು ಪರಾಮರಿಸುತ್ತಾನೆ. ನಮ್ಮ ಅನಿಸಿಕೆಗಳನ್ನು ಅರ್ಥಮಾಡಿಕೊಳ್ಳುತ್ತಾನೆ ಎಂಬುದಂತೂ ಖಂಡಿತ.” (1 ಪೇತ್ರ 5:6, 7) ಈಗ ಷ್ಯಾರನ್‌ ಯೆಹೋವನ ಮಹಾದಿನಕ್ಕಾಗಿ ಕಾಯುತ್ತಾ ಆತನನ್ನು ನಂಬಿಗಸ್ತಿಕೆಯಿಂದ ಇನ್ನೂ ಸೇವಿಸುತ್ತ ಇದ್ದಾಳೆ.

5 ಕೆಲವು ಮಂದಿ ಕ್ರೈಸ್ತರು, ತಮಗೆ ಜೀವನದಲ್ಲಿ ಆಗಿರುವ ಗತ ಅನುಭವಗಳ ನಿಮಿತ್ತ ಗಣನೀಯ ಒತ್ತಡವನ್ನು ಅನುಭವಿಸುತ್ತಾರೆ. ಹಾರ್ಲೀ ಎರಡನೆಯ ಲೋಕಯುದ್ಧದ ಭೀಕರ ಹೋರಾಟವನ್ನು ಕಣ್ಣಾರೆ ಕಂಡವನಾಗಿದ್ದನು. ಅವನಿಗೆ ಆಗಾಗ್ಗೆ ದುಃಸ್ವಪ್ನಗಳು ಬೀಳುತ್ತಿತ್ತು. ಅವನು ನಿದ್ರೆಯಲ್ಲಿ “ಅಗೋ ಅಲ್ಲಿ! ಎಚ್ಚರಿಕೆ!” ಎಂದು ಕಿರಿಚಾಡುತ್ತಿದ್ದನು. ಎಚ್ಚರವಾದಾಗ ಅವನು ಬೆವರಿನಿಂದ ಪೂರ್ತಿಯಾಗಿ ನೆನೆದು ಹೋಗಿರುತ್ತಿದ್ದನು. ಆದರೆ ಅವನು ದೇವಭಕ್ತಿಯ ಜೀವಿತವನ್ನು ಬೆನ್ನಟ್ಟಿದನು. ಕ್ರಮೇಣ, ಪದೇ ಪದೇ ಬೀಳುತ್ತಿದ್ದ ಅಂಥ ಭೀಕರ ಕನಸು ಕಡಿಮೆಯಾಯಿತು.

6 ಬೈಪೋಲರ್‌ ಎಂಬ ಮನೋರೋಗದಿಂದ ನರಳುತ್ತಿದ್ದ ಕ್ರೈಸ್ತನೊಬ್ಬನಿಗೆ ಮನೆಯಿಂದ ಮನೆಗೆ ಸಾರುವುದು ತೀರ ಕಷ್ಟಕರವಾಗಿತ್ತು. ಆದರೂ, ಅವನು ಅದರಲ್ಲಿ ಪಟ್ಟುಹಿಡಿದನು. ಏಕೆಂದರೆ, ಶುಶ್ರೂಷೆಯು ತನಗೂ ಒಳ್ಳೇ ಪ್ರತಿಕ್ರಿಯೆ ತೋರಿಸುವವರಿಗೂ ಜೀವದಾಯಕವಾಗಿದೆಯೆಂದು ಗ್ರಹಿಸಿದ್ದನು. (1 ತಿಮೊಥೆಯ 4:16) ಕೆಲವೊಮ್ಮೆ ಅವನು ಒಂದು ಮನೆಯ ಬಳಿ ಹೋಗಿ ನಿಂತುಕೊಳ್ಳುತ್ತಿದ್ದಾಗ ಕರೆಗಂಟೆಯನ್ನು ಒತ್ತುವಷ್ಟು ಧೈರ್ಯವೂ ಇರುತ್ತಿರಲಿಲ್ಲ. ಆದರೆ ಅವನು ಹೇಳಿದ್ದು: ‘ಸ್ವಲ್ಪ ಸಮಯದ ನಂತರ, ನಾನು ನನ್ನ ಭಾವನೆಗಳನ್ನು ನಿಯಂತ್ರಿಸಿಕೊಂಡು ಆ ಮನೆಯವರೊಂದಿಗೆ ಮಾತಾಡುತ್ತಿದ್ದೆ. ಬಳಿಕ ಮುಂದಿನ ಮನೆಗೆ ಹೋಗಿ ಹಾಗೆಯೇ ಪ್ರಯತ್ನಿಸುತ್ತಿದ್ದೆ. ಹೀಗೆ, ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದನ್ನು ಮುಂದುವರಿಸಿದೆ ಮತ್ತು ನನ್ನ ಆಧ್ಯಾತ್ಮಿಕ ಆರೋಗ್ಯವನ್ನು ತಕ್ಕಮಟ್ಟಿಗೆ ಕಾಪಾಡಿಕೊಂಡೆ.’ ಕೂಟಗಳಿಗೆ ಹಾಜರಾಗುವುದೂ ಅವನಿಗೆ ಪಂಥಾಹ್ವಾನವಾಗಿತ್ತು. ಆದರೆ ಈ ಸಹೋದರನಿಗೆ ಆಧ್ಯಾತ್ಮಿಕ ಸಹವಾಸದ ಮೌಲ್ಯ ಮಂದಟ್ಟಾಗಿತ್ತು. ಆದುದರಿಂದ ಕೂಟಗಳಿಗೆ ಹಾಜರಾಗಲು ಸಾಕಷ್ಟು ಪ್ರಯತ್ನವನ್ನು ಅವನು ಮಾಡಿದನು.—ಇಬ್ರಿಯ 10:24, 25,

7 ಕೆಲವು ಕ್ರೈಸ್ತರಿಗೆ ನಿರ್ದಿಷ್ಟ ಸನ್ನಿವೇಶ ಹಾಗೂ ವಿಷಯಗಳ ಕುರಿತು ವಿಪರೀತ ಭೀತಿ (ಫೋಭೀಅ) ಇರುತ್ತದೆ. ಉದಾಹರಣೆಗೆ, ಅವರು ಬಹಿರಂಗವಾಗಿ ಮಾತಾಡಲು ಇಲ್ಲವೆ ಕೂಟಕ್ಕೆ ಹಾಜರಾಗಲು ಸಹ ಭಯಪಡಬಹುದು. ಹೀಗಿರುವಾಗ, ಕ್ರೈಸ್ತ ಕೂಟಗಳಲ್ಲಿ ಉತ್ತರ ಕೊಡುವುದಾಗಲಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಒಂದು ಭಾಷಣವನ್ನು ನೀಡುವುದಾಗಲಿ ಅವರಿಗೆ ಎಷ್ಟೊಂದು ಕಷ್ಟಕರವಾಗಿರಬಹುದು ಎಂದು ಊಹಿಸಿರಿ! ಆದರೂ ಅವರು ತಾಳಿಕೊಳ್ಳುತ್ತಿದ್ದಾರೆ. ಅವರ ಉಪಸ್ಥಿತಿ ಮತ್ತು ಭಾಗವಹಿಸುವಿಕೆಯನ್ನು ನಾವು ಬಹಳವಾಗಿ ಗಣ್ಯಮಾಡುತ್ತೇವೆ.

8 ಭಾವಾತ್ಮಕ ಕಷ್ಟಗಳನ್ನು ತಾಳಿಕೊಳ್ಳಲು ಹೆಚ್ಚು ವಿಶ್ರಾಂತಿ ಮತ್ತು ನಿದ್ದೆ ಒಬ್ಬ ವ್ಯಕ್ತಿಗೆ ಸಹಾಯ ಮಾಡೀತು. ಕೆಲವೊಮ್ಮೆ ವೈದ್ಯಕೀಯ ಸಹಾಯವು ಯುಕ್ತವಾಗಿರಬಹುದು. ಆದರೂ, ಪ್ರಾರ್ಥನಾಪೂರ್ವಕವಾಗಿ ದೇವರ ಮೇಲೆ ಹೊಂದಿಕೊಳ್ಳುವುದೇ ವಿಶೇಷವಾಗಿ ಕಾರ್ಯಸಾಧಕವಾಗಿದೆ. “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು” ಎನ್ನುತ್ತದೆ ಕೀರ್ತನೆ 55:22. ಆದಕಾರಣ, ಅವಶ್ಯವಾಗಿ ‘ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡಿರಿ.’—ಜ್ಞಾನೋಕ್ತಿ 3:5, 6.

ವಿಯೋಗವನ್ನು ತಾಳಿಕೊಳ್ಳುವುದು

9 ಮರಣವು ಕುಟುಂಬ ಸದಸ್ಯರನ್ನು ನಮ್ಮಿಂದ ಅಗಲಿಸುವಾಗ ಆ ಮಹಾನಷ್ಟವು ವಿಪರೀತ ದುಃಖದಲ್ಲಿ ಮುಳುಗಿಸಿಬಿಡಬಲ್ಲದು. ಅಬ್ರಹಾಮನು ತನ್ನ ಪ್ರಿಯ ಪತ್ನಿ ಸಾರಳು ಸತ್ತಾಗ ಗೋಳಾಡಿದನು. (ಆದಿಕಾಂಡ 23:2) ಅಷ್ಟೇಕೆ, ಪರಿಪೂರ್ಣ ಮನುಷ್ಯನಾದ ಯೇಸುವೇ ತನ್ನ ಮಿತ್ರನಾಗಿದ್ದ ಲಾಜರನು ಮರಣಪಟ್ಟಾಗ “ಕಣ್ಣೀರು ಬಿಟ್ಟನು.” (ಯೋಹಾನ 11:35) ಹೀಗೆ ನೀವು ಪ್ರೀತಿಸುವ ಒಬ್ಬನನ್ನು ಮರಣವು ಅಗಲಿಸುವಾಗ ದುಃಖ ಉಮ್ಮಳಿಸಿ ಬರುವುದು ಸ್ವಾಭಾವಿಕ. ಆದರೂ, ಪುನರುತ್ಥಾನವಿದೆಯೆಂದು ಕ್ರೈಸ್ತರಿಗೆ ತಿಳಿದದೆ. (ಅ. ಕೃತ್ಯಗಳು 24:15) ಆದಕಾರಣ, “ನಿರೀಕ್ಷೆಯಿಲ್ಲದವರಾದ ಇತರರಂತೆ” ಅವರು ದುಃಖಿಸುವುದಿಲ್ಲ.—1 ಥೆಸಲೊನೀಕ 4:13.

10 ವಿಯೋಗದ ದುಃಖವನ್ನು ನಾವು ಹೇಗೆ ನಿಭಾಯಿಸಬಲ್ಲೆವು? ಪ್ರಾಯಶಃ ಈ ದೃಷ್ಟಾಂತವು ಸಹಾಯಕರವಾಗುವುದು. ಸಾಮಾನ್ಯವಾಗಿ ಒಬ್ಬ ಸ್ನೇಹಿತನು ದೂರದ ಊರಿಗೆ ಪ್ರಯಾಣಿಸಿದಾಗ, ನಾವು ಅದನ್ನೇ ಯೋಚಿಸುತ್ತಾ ದೀರ್ಘಕಾಲದ ವರೆಗೆ ದುಃಖಿಸುವುದಿಲ್ಲ. ಏಕೆಂದರೆ ಅವನು ಹಿಂದಿರುಗಿ ಬರುವಾಗ ನಾವು ಅವನನ್ನು ಪುನಃ ನೋಡುತ್ತೇವೆಂಬ ನಿರೀಕ್ಷೆ ನಮಗಿದೆ. ನಂಬಿಗಸ್ತ ಕ್ರೈಸ್ತನೊಬ್ಬನ ಮರಣದ ಬಗ್ಗೆ ತದ್ರೀತಿಯ ವೀಕ್ಷಣವು ನಮ್ಮ ಶೋಕವನ್ನು ಕಡಮೆಮಾಡೀತು. ಏಕೆಂದರೆ ಪುನರುತ್ಥಾನವಾಗುವವರ ಸಾಲಿನಲ್ಲಿ ಅವನಿದ್ದಾನೆಂದು ನಮಗೆ ತಿಳಿದಿದೆ.—ಪ್ರಸಂಗಿ 7:1.

11 ‘ಸಕಲವಿಧವಾಗಿ ಸಂತೈಸುವ ದೇವರ’ ಮೇಲೆ ಸಂಪೂರ್ಣವಾಗಿ ಅವಲಂಬಿಸುವುದು ನಾವು ವಿಯೋಗದ ದುಃಖವನ್ನು ತಾಳಿಕೊಳ್ಳುವಂತೆ ಸಹಾಯಮಾಡುವುದು. (2 ಕೊರಿಂಥ 1:3, 4) ಒಂದನೆಯ ಶತಮಾನದಲ್ಲಿದ್ದ ಅನ್ನಳೆಂಬ ವಿಧವೆ ಏನು ಮಾಡಿದಳೊ ಅದರ ಕುರಿತು ಚಿಂತಿಸುವುದೂ ಸಹಾಯಕರ. ವಿವಾಹವಾಗಿ ಕೇವಲ ಏಳು ವರ್ಷದಲ್ಲಿಯೇ ಆಕೆ ವಿಧವೆಯಾದಳು. ಆದರೆ ತನ್ನ 84ನೆಯ ಇಳಿವಯಸ್ಸಿನಲ್ಲಿಯೂ ಆಕೆ ದೇವಾಲಯದಲ್ಲಿ ಯೆಹೋವನಿಗೆ ಪವಿತ್ರ ಸೇವೆಸಲ್ಲಿಸುತ್ತಿದ್ದಳು. (ಲೂಕ 2:36-38) ಅಂಥ ಸಮರ್ಪಿತ ಜೀವಿತವು ಆಕೆಗೆ ತನ್ನ ಶೋಕ ಮತ್ತು ಒಂಟಿ ಭಾವನೆಯನ್ನು ನಿಭಾಯಿಸಲು ಸಹಾಯಮಾಡಿತು ಎಂಬುದು ನಿಸ್ಸಂಶಯ. ರಾಜ್ಯ ಸಾರುವಿಕೆ ಮತ್ತು ಕ್ರೈಸ್ತ ಚಟುವಟಿಕೆಯಲ್ಲಿ ಕ್ರಮದ ಪಾಲ್ಗೊಳ್ಳುವಿಕೆಯು ನಾವು ವಿಯೋಗದ ಪರಿಣಾಮಗಳನ್ನು ತಾಳಿಕೊಳ್ಳುವಂತೆ ಸಹಾಯ ಮಾಡಬಲ್ಲದು.

ವಿವಿಧ ಪರೀಕ್ಷೆಗಳನ್ನು ಎದುರಿಸುವುದು

12 ಕೆಲವು ಮಂದಿ ಕ್ರೈಸ್ತರಿಗೆ ಕುಟುಂಬ ಜೀವನಕ್ಕೆ ಸಂಬಂಧಪಟ್ಟ ಪರೀಕ್ಷೆಗಳನ್ನು ತಾಳಿಕೊಳ್ಳಬೇಕಾಗುತ್ತದೆ. ದೃಷ್ಟಾಂತಕ್ಕೆ, ವಿವಾಹ ಸಂಗಾತಿಯಲ್ಲಿ ಒಬ್ಬರು ವ್ಯಭಿಚಾರ ಮಾಡುವಲ್ಲಿ ಪರಿಣಾಮವು ಎಷ್ಟೊಂದು ವಿಧ್ವಂಸವಾಗಬಲ್ಲದು! ವಂಚಿತ ಸಂಗಾತಿ ಆಘಾತ ಮತ್ತು ಶೋಕದ ನಿಮಿತ್ತ ನಿದ್ರಿಸಲಾಗದೆ ಎಡೆಬಿಡದೆ ಅಳುತ್ತಾ ಇರಬಹುದು. ಚಿಕ್ಕಪುಟ್ಟ ಕೆಲಸಗಳನ್ನು ಮಾಡುವುದೂ ಆ ಸಂಗಾತಿಗೆ ಎಷ್ಟು ಪ್ರಯಾಸಕರವಾಗಬಹುದೆಂದರೆ ಅವನೊ ಆಕೆಯೊ ಅದರಲ್ಲಿ ತಪ್ಪುಮಾಡಬಹುದು ಇಲ್ಲವೆ ಅಪಘಾತ ಸಂಭವಿಸಬಹುದು. ನಿರ್ದೋಷಿ ಸಂಗಾತಿಗೆ ಆಹಾರವೇ ಬೇಡವಾಗಬಹುದು, ಶರೀರ ಕ್ಷೀಣಿಸಬಹುದು ಮತ್ತು ಭಾವಾತ್ಮಕವಾಗಿ ತೊಂದರೆಗೊಳಗಾಗಬಹುದು. ಕ್ರೈಸ್ತ ಚಟುವಟಿಕೆಗಳಲ್ಲಿ ತೊಡಗುವುದೂ ಕಷ್ಟಕರವಾಗಬಹುದು. ಅವರ ಮಕ್ಕಳು ಇದರಿಂದ ಇನ್ನೆಷ್ಟು ಬಾಧಿಸಲ್ಪಡಬಹುದು!

13 ನಾವು ಇಂಥ ಪರೀಕ್ಷೆಗಳನ್ನು ಎದುರಿಸುವಾಗ ಯೆಹೋವನು ನಮಗೆ ಬೇಕಾಗುವ ಸಹಾಯವನ್ನು ನೀಡುತ್ತಾನೆ. (ಕೀರ್ತನೆ 94:19) ರಾಜ ಸೊಲೊಮೋನನು ಯೆಹೋವನ ಆಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ಮಾಡಿದ ಪ್ರಾರ್ಥನೆಯು ತೋರಿಸುವಂತೆ ದೇವರು ತನ್ನ ಜನರ ಪ್ರಾರ್ಥನೆಗಳನ್ನು ಆಲಿಸುತ್ತಾನೆ. ಸೊಲೊಮೋನನು ದೇವರಿಗೆ ಪ್ರಾರ್ಥಿಸಿದ್ದು: “ಮನಸ್ಸಾಕ್ಷಿಪೀಡಿತರಾದ ಎಲ್ಲಾ ಇಸ್ರಾಯೇಲ್ಯರಾಗಲಿ ಅವರಲ್ಲಿ ಒಬ್ಬನಾಗಲಿ ಈ ಆಲಯದ ಕಡೆಗೆ ಕೈಯೆತ್ತಿ ನಿನಗೆ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡುವದಾದರೆ ಮನುಷ್ಯರ ಹೃದಯಗಳನ್ನು ಬಲ್ಲಂಥ ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಲಾಲಿಸಿ ಅವರಿಗೆ ಪಾಪಪರಿಹಾರವನ್ನು ಅನುಗ್ರಹಿಸು; ನೀನೊಬ್ಬನೇ ಎಲ್ಲಾ ಮನುಷ್ಯರ ಹೃದಯಗಳನ್ನು ಬಲ್ಲವನಾಗಿರುವದರಿಂದ ಪ್ರತಿಯೊಬ್ಬನಿಗೂ ಅವನವನು ಹಿಡಿಯುವ ಮಾರ್ಗಕ್ಕೆ ತಕ್ಕ ಹಾಗೆ ಫಲವನ್ನು ಕೊಡು. ಆಗ ನಮ್ಮ ಪಿತೃಗಳಿಗೆ ನೀನು ಕೊಟ್ಟ ದೇಶದಲ್ಲಿ ಅವರು ವಾಸಿಸುವ ಕಾಲದಲ್ಲೆಲ್ಲಾ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿರುವರು.”—1 ಅರಸುಗಳು 8:38-40.

14 ಪವಿತ್ರಾತ್ಮಕ್ಕಾಗಿ ಪ್ರಾರ್ಥನೆ ಮಾಡುತ್ತ ಇರುವುದಂತೂ ವಿಶೇಷವಾಗಿ ಸಹಾಯಕರವಾಗಿರಬಲ್ಲದು. (ಮತ್ತಾಯ 7:7-11) ಪವಿತ್ರಾತ್ಮದ ಫಲಗಳಲ್ಲಿ ಸಂತೋಷ ಮತ್ತು ಸಮಾಧಾನ ಅಂದರೆ ಶಾಂತಿಯಂಥ ಗುಣಗಳು ಸೇರಿವೆ. (ಗಲಾತ್ಯ 5:22, 23) ನಮ್ಮ ಸ್ವರ್ಗೀಯ ತಂದೆಯು ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡುವಾಗ ನಮಗೆಂಥ ಉಪಶಮನ ಸಿಗುವುದು! ದುಃಖ ಹೋಗಿ ಸಂತೋಷವೂ ಸಂಕಟ ಹೋಗಿ ಶಾಂತಿಯೂ ನೆಲೆಸುವುದು.

15 ನಾವು ಭಾರೀ ಒತ್ತಡವನ್ನು ಸಹಿಸಿಕೊಳ್ಳಬೇಕಾಗುವಾಗ ಸ್ವಲ್ಪ ಮಟ್ಟಿಗೆ ಕಳವಳವನ್ನು ಅನುಭವಿಸುವುದು ಸಂಭಾವ್ಯ. ಆದರೆ ಯೇಸುವಿನ ಈ ಮಾತುಗಳನ್ನು ನಾವು ಮನಸ್ಸಿನಲ್ಲಿಡುವಲ್ಲಿ ಚಿಂತೆಯು ತುಸು ಕಡಮೆಯಾದೀತು: “ನಮ್ಮ ಪ್ರಾಣಧಾರಣೆಗೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ . . . ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:25, 33, 34) ಅಪೊಸ್ತಲ ಪೇತ್ರನು ಸಹ ನಮ್ಮನ್ನು ಪ್ರೋತ್ಸಾಹಿಸುವುದು: “ನಿಮ್ಮ ಚಿಂತೆಯನ್ನೆಲ್ಲಾ [ದೇವರ] ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:6, 7) ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದು ಯೋಗ್ಯವಾಗಿದೆ. ಆದರೆ ನಾವು ಮಾಡಸಾಧ್ಯವಿರುವುದನ್ನು ಮಾಡಿ ಮುಗಿಸಿದ ಮೇಲೆ ಅದರ ಕುರಿತು ಚಿಂತಿಸುತ್ತಾ ಇರುವ ಬದಲು ಪ್ರಾರ್ಥಿಸುವುದೇ ಅತ್ಯುತ್ತಮವಾಗಿದೆ. ಕೀರ್ತನೆಗಾರನು ಹಾಡಿದ್ದು: “ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು.”—ಕೀರ್ತನೆ 37:5.

16 ಪೌಲನು ಬರೆದುದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ಆದಾಮನ ಅಪರಿಪೂರ್ಣ ವಂಶಜರು ಚಿಂತೆಯಿಂದ ಸಂಪೂರ್ಣವಾಗಿ ಮುಕ್ತರಾಗಿರಲು ಸಾಧ್ಯವಿಲ್ಲ ಎಂಬುದೇನೊ ನಿಶ್ಚಯ. (ರೋಮಾಪುರ 5:12) ಏಸಾವನ ಹಿತ್ತೀಯ ಪತ್ನಿಯರು ಅವನ ದೇವಭಕ್ತ ಹೆತ್ತವರಾದ ಇಸಾಕ ಮತ್ತು ರೆಬೆಕ್ಕಳ ‘ಮನೋವ್ಯಥೆಗೆ’ ಕಾರಣರಾದರು. (ಆದಿಕಾಂಡ 26:34, 35) ಅಸ್ವಸ್ಥತೆಯಿಂದ ತಿಮೊಥೆಯ ಮತ್ತು ತ್ರೊಫಿಮರಂಥ ಕ್ರೈಸ್ತರು ಚಿಂತೆಗೊಳಗಾಗಿದ್ದಿರಬೇಕು. (1 ತಿಮೊಥೆಯ 5:23; 2 ತಿಮೊಥೆಯ 4:20) ಜೊತೆವಿಶ್ವಾಸಿಗಳ ಬಗ್ಗೆ ಪೌಲನು ಚಿಂತೆಗೊಳಗಾದನು. (2 ಕೊರಿಂಥ 11:28) ಆದರೆ ‘ಪ್ರಾರ್ಥನೆಯನ್ನು ಕೇಳುವವನು’ ತನ್ನನ್ನು ಪ್ರೀತಿಸುವವರ ಸಹಾಯಕ್ಕೆ ಸದಾ ಸಿದ್ಧನಿರುತ್ತಾನೆ.—ಕೀರ್ತನೆ 65:2.

17 ನಾವು ಯೆಹೋವನ ದಿನವನ್ನು ಕಾದುಕೊಂಡಿರುವಾಗ “ಶಾಂತಿದಾಯಕನಾದ ದೇವರ” ಬೆಂಬಲವೂ ಸಾಂತ್ವನವೂ ನಮಗಿದೆ. (ಫಿಲಿಪ್ಪಿ 4:9) ಯೆಹೋವನು “ಕನಿಕರವೂ ದಯೆಯೂ” ಉಳ್ಳಾತನು. ಆತನು “ಒಳ್ಳೆಯವನೂ ಕ್ಷಮಿಸುವವನೂ” ಆಗಿದ್ದು, “ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ವಿಮೋಚನಕಾಂಡ 34:6; ಕೀರ್ತನೆ 86:5; 103:13, 14) ಆದಕಾರಣ ನಾವು ‘ನಮ್ಮ ವಿಜ್ಞಾಪನೆಗಳನ್ನು ದೇವರಿಗೆ ತಿಳಿಯಪಡಿಸೋಣ.’ ಇದು ನಮ್ಮಲ್ಲಿ ‘ದೇವಶಾಂತಿಯನ್ನು’ ಅಂದರೆ ಮಾನವ ಗ್ರಹಿಕೆಗೆ ಮೀರುವ ಪ್ರಶಾಂತತೆಯನ್ನು ಉಂಟುಮಾಡುವುದು.

18 ನಮ್ಮ ಪ್ರಾರ್ಥನೆಗಳಿಗೆ ಉತ್ತರ ದೊರೆಯುವಾಗ ದೇವರು ನಮ್ಮೊಂದಿಗಿದ್ದಾನೆ ಎಂಬ ಅರಿವು ನಮಗಾಗುವುದು. ಯೋಬನು ಪರೀಕ್ಷೆಗಳನ್ನು ತಾಳಿಕೊಂಡ ಬಳಿಕ ಹೇಳಿದ್ದು: “ಕಿವಿಯಿಂದ ನಿನ್ನ [ಯೆಹೋವನ] ವಿಷಯವನ್ನು ಕೇಳಿದ್ದೆನು. ಈಗಲಾದರೋ ನಿನ್ನನ್ನೇ ಕಣ್ಣಾರೆ ಕಂಡೆನು.” (ಯೋಬ 42:5) ನಾವು ತಿಳಿವಳಿಕೆಯ ದೃಷ್ಟಿ, ನಂಬಿಕೆ ಮತ್ತು ಕೃತಜ್ಞತೆಯ ಮೂಲಕ ದೇವರು ನಮಗಾಗಿ ಮಾಡಿರುವುದೆಲ್ಲವನ್ನು ಚಿಂತನೆ ಮಾಡುವಾಗ, ನಾವು ಆತನನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ‘ಕಾಣಬಲ್ಲೆವು.’ ಇಂಥ ಆಪ್ತತೆಯು ನಮಗೆ ಎಂಥ ಹೃದಮನಗಳ ಶಾಂತಿಯನ್ನು ತರುತ್ತದೆ!

19 ನಾವು ನಮ್ಮ ‘ಚಿಂತಾಭಾರವನ್ನೆಲ್ಲಾ ಯೆಹೋವನ ಮೇಲೆ ಹಾಕುವಲ್ಲಿ’ ನಮ್ಮ ಹೃದಯ ಮತ್ತು ಮಾನಸಿಕ ಶಕ್ತಿಗಳನ್ನು ಕಾಯುವ ಆಂತರಿಕ ಪ್ರಶಾಂತತೆಯಿಂದ ಪರೀಕ್ಷೆಗಳನ್ನು ತಾಳಿಕೊಳ್ಳಬಲ್ಲೆವು. ನಮ್ಮ ಸಾಂಕೇತಿಕ ಹೃದಯದಾಳದಲ್ಲಿ ಕಳವಳ, ಭಯ ಮತ್ತು ದಿಗಿಲಿನಿಂದ ಮುಕ್ತಿಯನ್ನೂ ಅನುಭವಿಸುವೆವು. ನಮ್ಮ ಮನಸ್ಸು ದಿಗ್ಭ್ರಮೆ ಅಥವಾ ಆತಂಕದಿಂದ ಅಸ್ತವ್ಯಸ್ತಗೊಳ್ಳದಿರುವುದು.

20 ಶಿಷ್ಯ ಸ್ತೆಫನನು ತನ್ನ ನಂಬಿಕೆಯ ಕಠಿನ ಪರೀಕ್ಷೆಯನ್ನು ತಾಳಿಕೊಳ್ಳುವಾಗ ಪ್ರಶಾಂತಭಾವವನ್ನು ತೋರಿಸಿದನು. ಸ್ತೆಫನನು ತನ್ನ ಅಂತಿಮ ಸಾಕ್ಷಿಯನ್ನು ಕೊಡುವ ಮೊದಲು ಹಿರೀಸಭೆಯವರು, “ಅವನ ಮುಖವು ದೇವದೂತನ ಮುಖದಂತೆ ಇರುವದನ್ನು ಕಂಡರು.” (ಅ. ಕೃತ್ಯಗಳು 6:15) ಅವನ ಮುಖಚರ್ಯೆಯು ದೇವರ ಸಂದೇಶವಾಹಕನಾದ ಒಬ್ಬ ದೂತನಂತೆ ಪ್ರಶಾಂತವಾಗಿತ್ತು. ಯೇಸುವಿನ ಮರಣದಲ್ಲಿ ನ್ಯಾಯಾಧಿಪತಿಗಳು ವಹಿಸಿದ ಅಪರಾಧವನ್ನು ಸ್ತೆಫನನು ಬಯಲುಪಡಿಸಿದಾಗ “ಅವರು ರೌದ್ರಮನಸ್ಸುಳ್ಳವರಾಗಿ ಅವನ ಮೇಲೆ ಹಲ್ಲುಕಡಿದರು.” ಆದರೆ ಸ್ತೆಫನನು “ಪವಿತ್ರಾತ್ಮಭರಿತನಾಗಿ ಆಕಾಶದ ಕಡೆಗೆ ದೃಷ್ಟಿಸಿ ನೋಡಿ ದೇವರ ಪ್ರಭಾವವನ್ನೂ ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ” ಕಂಡನು. ಆ ದರ್ಶನದಿಂದ ಸ್ತೆಫನನು ಬಲಗೊಂಡು ಮರಣಪರ್ಯಂತ ನಂಬಿಗಸ್ತನಾಗಿ ಉಳಿದನು. (ಅ. ಕೃತ್ಯಗಳು 7:52-60) ನಮಗೆ ಇಂದು ಅಂಥ ದರ್ಶನಗಳಿಲ್ಲವಾದರೂ, ಹಿಂಸೆಗೊಳಗಾದಾಗ ದೇವದತ್ತ ಪ್ರಶಾಂತತೆ ನಮಗೆ ದೊರೆಯಬಲ್ಲದು.

21 ಎರಡನೆಯ ಲೋಕಯುದ್ಧ ಕಾಲದಲ್ಲಿ, ನಾಸಿಗಳ ಕೈಯಿಂದ ಮರಣಪಟ್ಟ ಕೆಲವು ಮಂದಿ ಕ್ರೈಸ್ತರ ಭಾವಾಭಿಪ್ರಾಯಗಳನ್ನು ಪರಿಗಣಿಸಿರಿ. ನ್ಯಾಯಾಲಯದಲ್ಲಿ ತನಗಾದ ಅನುಭವವನ್ನು ಹೇಳುತ್ತ ಒಬ್ಬನು ಅಂದದ್ದು: “ನನಗೆ ಮರಣದಂಡನೆ ವಿಧಿಸಲಾಯಿತು. ಅದು ನನ್ನ ಕಿವಿಗೆ ಬಿದ್ದಾಕ್ಷಣವೇ ‘ಮರಣದ ವರೆಗೆ ನಂಬಿಗಸ್ತನಾಗಿರು’ ಎಂಬ ಮಾತುಗಳನ್ನೂ ಕರ್ತನ ಇನ್ನಿತರ ಮಾತುಗಳನ್ನೂ ನನ್ನಲ್ಲೇ ಹೇಳಿಕೊಂಡೆ. ಅಷ್ಟೇ! ಮುಗಿಯಿತು. ಆದರೆ ಅದರ ಕುರಿತು ಚಿಂತೆ ಬೇಡ. ನಿಮ್ಮಿಂದ ಊಹಿಸಲು ಸಾಧ್ಯವಿಲ್ಲದಂಥ ಶಾಂತಿ, ನೆಮ್ಮದಿ ನನ್ನಾವರಿಸಿತು!” ಶಿರಚ್ಛೇದನದ ಮೂಲಕ ಮರಣವನ್ನು ಕಾಯುತ್ತಿದ್ದ ಒಬ್ಬ ಯುವ ಕ್ರೈಸ್ತನು ತನ್ನ ಹೆತ್ತವರಿಗೆ ಹೀಗೆ ಬರೆದನು: “ಮಧ್ಯರಾತ್ರಿ ಆಗಲೇ ದಾಟಿಹೋಗಿದೆ. ಮನಸ್ಸು ಬದಲಾಯಿಸಲು ನನಗಿನ್ನೂ ಸಮಯ ಇದೆ. ಆದರೆ, ನನ್ನ ಕರ್ತನನ್ನು ಅಲ್ಲಗಳೆದ ಮೇಲೆ ನಾನು ಈ ಲೋಕದಲ್ಲಿ ಪುನಃ ಸಂತೋಷದಿಂದ ಇರುವೆನೋ? ಇಲ್ಲವೇ ಇಲ್ಲ! ಆದರೆ ಈಗ, ನಾನು ಸಂತೋಷ ಮತ್ತು ಶಾಂತಿಯಿಂದ ಈ ಲೋಕವನ್ನು ಅಗಲಿ ಹೋಗುತ್ತಿದ್ದೇನೆಂಬ ಆಶ್ವಾಸನೆ ನಿಮಗಿರಲಿ.” ಹೌದು, ಯೆಹೋವನು ತನ್ನ ನಿಷ್ಠಾವಂತ ಸೇವಕರನ್ನು ಬೆಂಬಲಿಸುತ್ತಾನೆ ಎಂಬುದಕ್ಕೆ ಸಂದೇಹವೇ ಇಲ್ಲ.

ನೀವು ತಾಳಿಕೊಳ್ಳಬಲ್ಲಿರಿ!

22 ನಾವು ಚರ್ಚಿಸಿರುವ ಕೆಲವು ಪಂಥಾಹ್ವಾನಗಳನ್ನು ನೀವು ಎದುರಿಸಿರಲಿಕ್ಕಿಲ್ಲ. ಆದರೂ, “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು” ಎಂದು ದೇವಭಯವಿದ್ದ ಯೋಬನು ಆಡಿದ ಮಾತು ಸತ್ಯ. (ಯೋಬ 14:1) ನಿಮ್ಮ ಮಕ್ಕಳಿಗೆ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಕೊಡಲು ಪ್ರಯಾಸಪಟ್ಟು ಕೆಲಸಮಾಡುವ ಹೆತ್ತವರು ನೀವಾಗಿರಬಹುದು. ಶಾಲೆಯಲ್ಲಿ ಬರುವ ಒತ್ತಡಗಳನ್ನು ಮಕ್ಕಳು ತಾಳಿಕೊಳ್ಳಬೇಕಾಗಿರುವುದಾದರೂ, ಯೆಹೋವನಿಗಾಗಿ ಮತ್ತು ಆತನ ನೀತಿಸೂತ್ರಗಳಿಗಾಗಿ ಸ್ಥಿರ ನಿಲುವನ್ನು ತೆಗೆದುಕೊಳ್ಳುವಾಗ ನೀವೆಷ್ಟು ಹರ್ಷಿತರಾಗುತ್ತೀರಿ! ಇಲ್ಲವೆ ನಿಮ್ಮ ಕೆಲಸದ ಸ್ಥಳದಲ್ಲಿ ಯಾವುದಾದರೂ ಕಷ್ಟಗಳನ್ನು ಮತ್ತು ಪ್ರಲೋಭನೆಗಳನ್ನು ನೀವು ಎದುರಿಸುತ್ತಿರಬಹುದು. ಆದರೂ, ಇಂಥ ಮತ್ತು ಇನ್ನಿತರ ಸನ್ನಿವೇಶಗಳನ್ನು ನಾವು ತಾಳಿಕೊಳ್ಳಲು ಸಾಧ್ಯವಿದೆ. ಏಕೆಂದರೆ ‘ನಮ್ಮ ಭಾರವನ್ನು ಯೆಹೋವನು ಅನುದಿನವೂ ಹೊರುತ್ತಾನೆ.’—ಕೀರ್ತನೆ 68:19.

23 ನೀವು, ನಿಮ್ಮನ್ನು ಒಬ್ಬ ಸಾಧಾರಣ ವ್ಯಕ್ತಿಯೆಂದು ನೆನಸಬಹುದು. ಆದರೆ, ಯೆಹೋವನು ನಿಮ್ಮ ಕೆಲಸವನ್ನೂ ಆತನ ಪವಿತ್ರ ನಾಮಕ್ಕೆ ನೀವು ತೋರಿಸುವ ಪ್ರೀತಿಯನ್ನೂ ಎಂದಿಗೂ ಮರೆಯನು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. (ಇಬ್ರಿಯ 6:10) ಆತನ ಸಹಾಯದಿಂದ ನೀವು ನಂಬಿಕೆಯ ಪರೀಕ್ಷೆಗಳನ್ನು ತಾಳಿಕೊಳ್ಳಬಲ್ಲಿರಿ. ಆದುದರಿಂದ ದೇವರ ಚಿತ್ತ ಮಾಡುವುದನ್ನು ನಿಮ್ಮ ಪ್ರಾರ್ಥನೆಗಳಲ್ಲಿಯೂ ಯೋಜನೆಗಳಲ್ಲಿಯೂ ಒಳಗೂಡಿಸಿರಿ. ಆಗ ನೀವು ತಾಳ್ಮೆಯಿಂದ ಯೆಹೋವನ ದಿನಕ್ಕಾಗಿ ಕಾಯುತ್ತ ದೈವಿಕ ಆಶೀರ್ವಾದ ಮತ್ತು ಬೆಂಬಲದ ಭರವಸೆಯನ್ನು ಹೊಂದಿರಬಲ್ಲಿರಿ. (w07 7/15)

ನಿಮ್ಮ ಪ್ರತ್ಯುತ್ತರವೇನು?

• ಕ್ರೈಸ್ತರಿಗೆ ತಾಳ್ಮೆಯು ಏಕೆ ಆವಶ್ಯಕ?

• ಅಸ್ವಸ್ಥತೆ ಮತ್ತು ವಿಯೋಗವನ್ನು ತಾಳಿಕೊಳ್ಳುವಂತೆ ನಮಗೆ ಯಾವುದು ಸಹಾಯ ಮಾಡಬಲ್ಲದು?

• ಪರೀಕ್ಷೆಗಳನ್ನು ತಾಳಿಕೊಳ್ಳಲು ಪ್ರಾರ್ಥನೆ ನಮಗೆ ಹೇಗೆ ಸಹಾಯಮಾಡುತ್ತದೆ?

• ಯೆಹೋವನ ದಿನವನ್ನು ತಾಳ್ಮೆಯಿಂದ ಕಾಯುವುದು ಸಾಧ್ಯವಿರುವ ವಿಷಯವೇಕೆ?

[ಅಧ್ಯಯನ ಪ್ರಶ್ನೆಗಳು]

1, 2. ತಾಳ್ಮೆಯೆಂದರೇನು ಮತ್ತು ಕ್ರೈಸ್ತರಿಗೆ ಇದು ಅಗತ್ಯವೇಕೆ?

3, 4. ಅಸ್ವಸ್ಥತೆಯ ಮಧ್ಯೆಯೂ ನಾವು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸಬಲ್ಲೆವು ಎಂಬುದಕ್ಕೆ ಒಂದು ದೃಷ್ಟಾಂತವನ್ನು ಕೊಡಿ.

5. ಕ್ರೈಸ್ತರು ಹೆಚ್ಚು ಒತ್ತಡವನ್ನು ತಾಳಿಕೊಳ್ಳಬಲ್ಲರೆಂಬುದಕ್ಕೆ ಯಾವ ರುಜುವಾತಿದೆ?

6. ಒಬ್ಬ ಕ್ರೈಸ್ತನು ತನ್ನ ಮನೋರೋಗದ ಸಮಸ್ಯೆಗಳನ್ನು ಹೇಗೆ ಎದುರಿಸಿದನು?

7. ಕೆಲವರು ಬಹಿರಂಗವಾಗಿ ಮಾತಾಡಲು ಮತ್ತು ಕೂಟಗಳಿಗೆ ಹಾಜರಾಗಲು ಭಯಪಡುವುದಾದರೂ ಹೇಗೆ ತಾಳ್ಮೆಯನ್ನು ತೋರಿಸುತ್ತಾರೆ?

8. ಭಾವಾತ್ಮಕ ಕಷ್ಟಪರಿಸ್ಥಿತಿಗಳನ್ನು ನಿಭಾಯಿಸುವುದರಲ್ಲಿ ಯಾವುದು ವಿಶೇಷವಾಗಿ ಕಾರ್ಯಸಾಧಕವಾಗಿದೆ?

9-11. (ಎ) ಪ್ರಿಯರಾದವರೊಬ್ಬರು ಸಾಯುವಾಗ ಶೋಕವನ್ನು ತಾಳಿಕೊಳ್ಳುವಂತೆ ನಮಗೆ ಯಾವುದು ಸಹಾಯ ಮಾಡಬಲ್ಲದು? (ಬಿ) ವಿಯೋಗವನ್ನು ತಾಳಿಕೊಳ್ಳಲು ಅನ್ನಳ ಮಾದರಿಯು ನಮಗೆ ಹೇಗೆ ಸಹಾಯ ಮಾಡಬಲ್ಲದು?

12. ಕುಟುಂಬ ಜೀವನಕ್ಕೆ ಸಂಬಂಧಿಸಿದ ಯಾವ ಪರೀಕ್ಷೆಯನ್ನು ಕೆಲವು ಕ್ರೈಸ್ತರು ತಾಳಿಕೊಂಡಿದ್ದಾರೆ?

13, 14. (ಎ) ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ಸೊಲೊಮೋನನು ಮಾಡಿದ ಪ್ರಾರ್ಥನೆಯಿಂದ ನೀವು ಯಾವ ಉತ್ತೇಜನವನ್ನು ಪಡೆಯುತ್ತೀರಿ? (ಬಿ) ಪವಿತ್ರಾತ್ಮಕ್ಕಾಗಿ ನಾವು ಏಕೆ ಪ್ರಾರ್ಥಿಸುತ್ತೇವೆ?

15. ನಮ್ಮ ಚಿಂತೆಯನ್ನು ಕಡಮೆಮಾಡಲು ಯಾವ ಶಾಸ್ತ್ರವಚನಗಳು ಸಹಾಯ ಮಾಡಬಲ್ಲವು?

16, 17. (ಎ) ನಾವು ಚಿಂತೆಯಿಂದ ಪೂರ್ತಿಯಾಗಿ ಮುಕ್ತರಾಗಿರುವುದಿಲ್ಲವೇಕೆ? (ಬಿ) ಫಿಲಿಪ್ಪಿ 4:6, 7ನ್ನು ಅನ್ವಯಿಸುವಲ್ಲಿ ನಮಗೆ ಯಾವ ಅನುಭವವಾಗುವುದು?

18. ಯೋಬ 42:5ರಲ್ಲಿ ಹೇಳಲಾಗಿರುವಂತೆ, ದೇವರನ್ನು ‘ಕಣ್ಣಾರೆ ಕಾಣುವುದು’ ಹೇಗೆ ಸಾಧ್ಯ?

19. ನಮ್ಮ ‘ಚಿಂತಾಭಾರವನ್ನೆಲ್ಲಾ ಯೆಹೋವನ ಮೇಲೆ ಹಾಕುವಲ್ಲಿ’ ಏನಾಗುವದು?

20, 21. (ಎ) ಹಿಂಸೆಯ ಮಧ್ಯೆ ಅನುಭವಿಸುವ ಪ್ರಶಾಂತತೆಯ ಯಾವ ರುಜುವಾತನ್ನು ಸ್ತೆಫನನ ಅನುಭವವು ಕೊಡುತ್ತದೆ? (ಬಿ) ಪರೀಕ್ಷೆಗಳನ್ನು ತಾಳಿಕೊಳ್ಳುತ್ತಿರುವಾಗ ಅನುಭವಿಸುವ ಶಾಂತತೆಗೆ ಆಧುನಿಕ ದಿನದ ಒಂದು ಉದಾಹರಣೆಯನ್ನು ಕೊಡಿ.

22, 23. ಯೆಹೋವನ ದಿನವನ್ನು ತಾಳ್ಮೆಯಿಂದ ಕಾಯುತ್ತಿರುವಾಗ ನಿಮಗೆ ಯಾವ ಭರವಸೆಯಿರಬಲ್ಲದು?