ಕೀರ್ತನೆ 68:1-35
ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದನ ಕೀರ್ತನೆ. ಇದೊಂದು ಮಧುರ ಗೀತೆ.
68 ದೇವರು ಎದ್ದೇಳಲಿ, ಆತನ ಶತ್ರುಗಳು ಚೆಲ್ಲಾಪಿಲ್ಲಿ ಆಗಲಿ,ಆತನನ್ನ ದ್ವೇಷಿಸೋರು ಆತನ ಮುಂದಿಂದ ಓಡಿಹೋಗಲಿ.+
2 ಗಾಳಿ ಹೊಗೆನ ಓಡಿಸಿಬಿಡೋ ಹಾಗೆ, ನೀನು ಅವ್ರನ್ನ ಓಡಿಸಿಬಿಡು.
ಬೆಂಕಿ ಮುಂದೆ ಮೇಣ ಕರಗಿಹೋಗೋ ತರ, ಕೆಟ್ಟವರು ದೇವರ ಮುಂದೆ ಅಳಿದು ಹೋಗಲಿ.+
3 ಆದ್ರೆ ನೀತಿವಂತರು ಖುಷಿಪಡಲಿ,+ಅವರು ದೇವರ ಮುಂದೆ ಆನಂದಪಡಲಿ,ಸಂತೋಷದಿಂದ ಸಂಭ್ರಮಿಸಲಿ.
4 ದೇವರಿಗಾಗಿ ಹಾಡಿ, ಆತನ ಹೆಸ್ರಿಗಿರೋ ಗೌರವಕ್ಕಾಗಿ ಹಾಡಿ.*+
ಬಯಲು ಪ್ರದೇಶದ ಮೂಲಕ* ಸವಾರಿ ಮಾಡೋನಿಗಾಗಿ ಹಾಡಿ.
ಆತನ ಹೆಸ್ರು ಯಾಹು!*+ ಆತನ ಮುಂದೆ ಉಲ್ಲಾಸಪಡಿ.
5 ತನ್ನ ಪವಿತ್ರ ನಿವಾಸದಲ್ಲಿರೋ ದೇವರು+ಅಪ್ಪ ಇಲ್ಲದವನಿಗೆ ಅಪ್ಪ ಆಗ್ತಾನೆ, ವಿಧವೆಯರಿಗೆ ಸಂರಕ್ಷಕನಾಗಿ* ಇರ್ತಾನೆ.+
6 ಒಂಟಿಯಾಗಿ ಇರೋರಿಗೆ ದೇವರು ಮನೆ ಕೊಡ್ತಾನೆ,+ಆತನು ಜೈಲಲ್ಲಿ ಇರೋರನ್ನ ಬಿಡಿಸಿ ಅವ್ರನ್ನ ಉದ್ಧಾರ ಮಾಡ್ತಾನೆ.+
ಆದ್ರೆ ಹಠಮಾರಿ* ಬರಡು ಭೂಮಿಯಲ್ಲಿ ಇರಬೇಕಾಗುತ್ತೆ.+
7 ದೇವರೇ, ನೀನು ನಿನ್ನ ಜನ್ರಿಗೆ ದಾರಿ ತೋರಿಸಿದಾಗ,+ಮರುಭೂಮಿ ಮೂಲಕ ಅವ್ರನ್ನ ನಡೆಸಿದಾಗ, (ಸೆಲಾ)
8 ಭೂಮಿ ಕಂಪಿಸ್ತು,+ಆಕಾಶ ಮಳೆ ಸುರಿಸ್ತು,*ಹೌದು ಇಸ್ರಾಯೇಲ್ ದೇವರಾದ ನಿನ್ನಿಂದ ಸಿನಾಯಿ ಬೆಟ್ಟ ನಡುಗ್ತು.+
9 ದೇವರೇ, ಸಮೃದ್ಧವಾಗಿ ಮಳೆಯಾಗೋ ಹಾಗೆ ಮಾಡಿದೆ,ಬಳಲಿ ಹೋಗಿರೋ ನಿನ್ನ ಜನ್ರಿಗೆ* ನೀನು ಮತ್ತೆ ಜೀವ ತುಂಬಿದೆ.
10 ಅವರು ನಿನ್ನ ಡೇರೆಗಳಲ್ಲಿ ವಾಸಿಸಿದ್ರು,+ದೇವರೇ, ಬಡವ್ರಿಗೆ ಬೇಕಾಗಿದ್ದನ್ನೆಲ್ಲ ನೀನು ನಿನ್ನ ಒಳ್ಳೇತನದಿಂದ ಕೊಟ್ಟೆ.
11 ಯೆಹೋವ ಆಜ್ಞೆ ಕೊಡ್ತಾನೆಸಿಹಿಸುದ್ದಿಯನ್ನ ಹೇಳೋ ಸ್ತ್ರೀಯರು ಒಂದು ದೊಡ್ಡ ಸೈನ್ಯದ ತರ ಇದ್ದಾರೆ.+
12 ರಾಜರು ತಮ್ಮ ಸೈನ್ಯಗಳ ಜೊತೆ ಓಡಿಹೋಗ್ತಾರೆ!+ ಹೌದು ಅವರು ಓಡಿಹೋಗ್ತಾರೆ!
ಮನೆಯಲ್ಲಿರೋ ಸ್ತ್ರೀಯರಿಗೆ ಕೊಳ್ಳೆಯಲ್ಲಿ ಪಾಲು ಸಿಗುತ್ತೆ.+
13 ಗಂಡಸರೇ, ನೀವು ಬಯಲಿನ ಬೆಂಕಿ* ಮಧ್ಯ ಮಲಗಬೇಕಾಗಿ ಬಂದ್ರೂ,ಅಲ್ಲಿ ನಿಮಗೆ ಎಂಥ ಪಾರಿವಾಳ ಸಿಗುತ್ತೆ ಅಂದ್ರೆ,ಅದ್ರ ರೆಕ್ಕೆ ಬೆಳ್ಳಿ, ಅದ್ರ ಗರಿ ಅಪ್ಪಟ ಚಿನ್ನ.*
14 ಸರ್ವಶಕ್ತನು ರಾಜರನ್ನ ಚೆಲ್ಲಾಪಿಲ್ಲಿ ಮಾಡಿದಾಗ,+ಚಲ್ಮೋನಿನಲ್ಲಿ ಹಿಮ ಬಿತ್ತು.*
15 ಬಾಷಾನ್ ದೇವರ ಪರ್ವತ,*+ಅದು ಶಿಖರಗಳಿರೋ ಪರ್ವತ.
16 ಶಿಖರಗಳಿರೋ ಪರ್ವತಗಳೇ,ದೇವರು ವಾಸ ಮಾಡೋಕೆ ಆರಿಸ್ಕೊಂಡಿರೋ ಪರ್ವತವನ್ನ ನೋಡಿ ಯಾಕೆ ನೀವು ಅಸೂಯೆಪಡ್ತೀರಾ?+
ನಿಜವಾಗ್ಲೂ ಯೆಹೋವ ಶಾಶ್ವತಕ್ಕೂ ಅಲ್ಲೇ ವಾಸಿಸ್ತಾನೆ.+
17 ದೇವರ ಹತ್ರ ಸಾವಿರಾರು, ಲಕ್ಷಾಂತರ ಯುದ್ಧ ರಥಗಳಿವೆ.+
ಯೆಹೋವ ಸಿನಾಯಿ ಬೆಟ್ಟದಿಂದ ಪವಿತ್ರ ಸ್ಥಳಕ್ಕೆ ಬಂದಿದ್ದಾನೆ.+
18 ನೀನು ಉನ್ನತ ಸ್ಥಳಕ್ಕೆ ಏರಿಹೋದೆ,+ನೀನು ಕೈದಿಗಳನ್ನ ತಗೊಂಡು ಹೋದೆ,ನೀನು ಗಂಡಸರನ್ನ ಉಡುಗೊರೆಗಳಾಗಿ ತಗೊಂಡು ಹೋದೆ,+ಹೌದು, ದೇವರಾದ ಯಾಹುವೇ, ಅವ್ರ ಜೊತೆ ವಾಸಿಸೋಕೆ ಹಠಮಾರಿಗಳನ್ನೂ+ ನೀನು ತಗೊಂಡು ಹೋದೆ.
19 ಪ್ರತಿದಿನ ನಮ್ಮ ಭಾರವನ್ನ ಹೊರೋ ಯೆಹೋವನಿಗೆ,+ನಮ್ಮ ರಕ್ಷಕನಾದ ಸತ್ಯ ದೇವರಿಗೆ ಹೊಗಳಿಕೆ ಸಿಗಲಿ. (ಸೆಲಾ)
20 ಸತ್ಯದೇವರು ನಮ್ಮನ್ನ ರಕ್ಷಿಸೋ ದೇವರಾಗಿದ್ದಾನೆ,+ವಿಶ್ವದ ರಾಜ ಯೆಹೋವ ಸಾವಿಂದ ನಮ್ಮನ್ನ ತಪ್ಪಿಸ್ತಾನೆ.+
21 ಹೌದು, ದೇವರು ತನ್ನ ಶತ್ರುಗಳ ತಲೆಗಳನ್ನ ಜಜ್ಜಿ ಹಾಕ್ತಾನೆ.
ಪಾಪ ಮಾಡ್ತಾನೇ ಇರೋ ಜನ್ರ* ತಲೆಗಳನ್ನ ಜಜ್ಜಿ ಹಾಕ್ತಾನೆ.+
22 ಯೆಹೋವ ಹೀಗೆ ಹೇಳಿದ್ದಾನೆ “ನಾನು ಅವ್ರನ್ನ ಬಾಷಾನಿನಿಂದ+ ಹಿಂದೆ ಕರ್ಕೊಂಡು ಬರ್ತಿನಿ,ನಾನು ಅವ್ರನ್ನ ಸಮುದ್ರದ ಆಳದಿಂದ ಹಿಂದೆ ಕರ್ಕೊಂಡು ಬರ್ತಿನಿ,
23 ಆಗ ನಿಮ್ಮ ಕಾಲು ಶತ್ರುಗಳ ರಕ್ತದಲ್ಲಿ ತೇಲುತ್ತೆ+ನಿಮ್ಮ ನಾಯಿಗಳು ಶತ್ರುಗಳ ರಕ್ತವನ್ನು ನೆಕ್ಕುತ್ತವೆ”
24 ದೇವರೇ, ನಿನ್ನ ವಿಜಯದ ಮೆರವಣಿಗೆಯನ್ನ ಅವರು ನೋಡ್ತಾರೆ,ಪವಿತ್ರ ಸ್ಥಳದ ಕಡೆ ಹೋಗೋ ನನ್ನ ದೇವರ ಮೆರವಣಿಗೆಯನ್ನ, ನನ್ನ ರಾಜನ ಮೆರವಣಿಗೆಯನ್ನ ಅವರು ನೋಡ್ತಾರೆ.+
25 ಗಾಯಕರು ಮುಂದೆಮುಂದೆ ನಡೆದ್ರೆ, ತಂತಿವಾದ್ಯ ನುಡಿಸೋರು ಅವ್ರ ಹಿಂದೆಹಿಂದೆ ಹೋಗ್ತಾರೆ,+ಅವರ ಮಧ್ಯ ಹುಡುಗಿಯರು ದಮ್ಮಡಿ ಬಾರಿಸ್ತಾ ಹೋಗ್ತಾರೆ.+
26 ಮಹಾ ಸಭೆಯಲ್ಲಿ ದೇವರನ್ನ ಹೊಗಳಿ,ಇಸ್ರಾಯೇಲಿನ ಕಾಲುವೆಯಿಂದ ಬಂದಿರೋರೇ, ಯೆಹೋವನನ್ನ ಕೊಂಡಾಡಿ.+
27 ಅವ್ರಲ್ಲಿ ಚಿಕ್ಕವನಾದ ಬೆನ್ಯಾಮೀನ+ ಜನ್ರನ್ನ ವಶಮಾಡ್ಕೊಳ್ತಿದ್ದಾನೆ,ಕೂಗಾಡ್ತಿರೋ ತಮ್ಮ ಗುಂಪಿನ ಜೊತೆ ಯೆಹೂದದ ಅಧಿಪತಿಗಳೂ ಜನ್ರನ್ನ ವಶಮಾಡ್ಕೊಳ್ತಿದ್ದಾರೆ,ಜೆಬುಲೂನಿನ ಮತ್ತು ನಫ್ತಾಲಿಯ ಅಧಿಪತಿಗಳೂ ಜನ್ರನ್ನ ವಶಮಾಡ್ಕೊಳ್ತಿದ್ದಾರೆ.
28 ನಿನಗೆ ಶಕ್ತಿ ಸಿಗುತ್ತೆ ಅಂತ ನಿನ್ನ ದೇವರು ಆಜ್ಞೆ ಕೊಟ್ಟಿದ್ದಾನೆ.
ನಮ್ಮ ಪರವಾಗಿ ಹೆಜ್ಜೆ ತಗೊಂಡ ದೇವರೇ, ನಿನ್ನ ಶಕ್ತಿಯನ್ನ ತೋರಿಸು.+
29 ಯೆರೂಸಲೇಮಲ್ಲಿರೋ ನಿನ್ನ ಆಲಯಕ್ಕಾಗಿ+ರಾಜರು ನಿನ್ನ ಹತ್ರ ಉಡುಗೊರೆಗಳನ್ನ ತಗೊಂಡು ಬರ್ತಾರೆ.+
30 ಜನ್ರು ಬೆಳ್ಳಿ ತುಂಡುಗಳನ್ನ ತಂದು ನಿನಗೆ ಬಗ್ಗಿ ನಮಸ್ಕಾರ ಮಾಡ್ತಾರೆ,ಅಲ್ಲಿ ತನಕ ಹುಲ್ಲಿನ ಮಧ್ಯ ವಾಸಿಸೋ ಮೃಗಗಳನ್ನ,ಹೋರಿಗಳನ್ನ+ ಮತ್ತು ಕರುಗಳನ್ನ ಗದರಿಸು,ಯುದ್ಧದಲ್ಲಿ ಸಂತೋಷಿಸೋ ಜನ್ರನ್ನ ಚೆದರಿಸು.
31 ಈಜಿಪ್ಟಿಂದ ಕಂಚಿನ ವಸ್ತುಗಳನ್ನ ತರ್ತಾರೆ,*+ದೇವರಿಗೆ ಉಡುಗೊರೆಗಳನ್ನ ಕೊಡೋಕೆ ಕೂಷ್ ಆತುರಪಡುತ್ತೆ.
32 ಭೂಮಿಯ ರಾಜ್ಯಗಳೇ, ದೇವರಿಗಾಗಿ ಗೀತೆಗಳನ್ನ ಹಾಡಿ,+ಯೆಹೋವನಿಗಾಗಿ ಹಾಡಿ,* (ಸೆಲಾ)
33 ಪ್ರಾಚೀನ ಕಾಲದಿಂದಾನೂ ಆಕಾಶದ ಮೇಲೆ ಸವಾರಿ ಮಾಡ್ತಿರೋನಿಗೆ ಹಾಡಿ.+
ಕೇಳಿರಿ! ಆತನ ಧ್ವನಿಯಲ್ಲಿ ತುಂಬ ಶಕ್ತಿಯಿದೆ, ಆತನು ಮಾತಾಡುವಾಗ ಗುಡುಗ್ತಾನೆ.
34 ದೇವರಿಗೆ ಶಕ್ತಿ ಇದೆ ಅಂತ ಒಪ್ಕೊಳ್ಳಿ,+ಆತನ ವೈಭವ ಇಸ್ರಾಯೇಲಿನ ಮೇಲಿದೆ,ಆತನ ಶಕ್ತಿ ಆಕಾಶದಲ್ಲಿದೆ.*
35 ತನ್ನ* ಆರಾಧನಾ ಸ್ಥಳದಿಂದ ದೇವರು ಭಯವಿಸ್ಮಯ ಹುಟ್ಟಿಸ್ತಾನೆ.+
ಆತನು ಇಸ್ರಾಯೇಲಿನ ದೇವರು,ಆತನು ತನ್ನ ಜನ್ರಿಗೆ ಶಕ್ತಿ ಕೊಡ್ತಾನೆ, ಬಲ ಕೊಡ್ತಾನೆ.+
ದೇವರಿಗೆ ಹೊಗಳಿಕೆ ಸಿಗಲಿ.
ಪಾದಟಿಪ್ಪಣಿ
^ ಅಥವಾ “ಸಂಗೀತ ರಚಿಸಿ.”
^ ಬಹುಶಃ, “ಮೋಡಗಳ ಮೇಲೆ.”
^ “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.
^ ಅಕ್ಷ. “ನ್ಯಾಯಾಧೀಶನಾಗಿ.”
^ ಅಥವಾ “ದಂಗೆಕೋರ.”
^ ಅಕ್ಷ. “ತೊಟ್ಟಿಕ್ಕಿತು.”
^ ಅಕ್ಷ. “ಆಸ್ತಿಗೆ.”
^ ಬಹುಶಃ, “ಕುರಿಯ ದೊಡ್ಡಿಗಳ ಮಧ್ಯ.”
^ ಅಥವಾ “ಹಳದಿ ಮಿಶ್ರಿತ ಹಸಿರು ಬಣ್ಣದ್ದು.”
^ ಅಥವಾ “ಅದು ಚಲ್ಮೋನಿನಲ್ಲಿ ಹಿಮ ಬಿದ್ದಂತೆ ಇತ್ತು.”
^ ಅಥವಾ “ಭವ್ಯವಾದ ಬೆಟ್ಟ”
^ ಅಥವಾ “ಪಾಪದ ದಾರಿಯಲ್ಲಿ ನಡೆಯೋ ಜನ್ರ.”
^ ಬಹುಶಃ, “ರಾಯಭಾರಿಗಳು ಬರ್ತಾರೆ.”
^ ಅಥವಾ “ಸಂಗೀತ ರಚಿಸಿ.”
^ ಅಕ್ಷ. “ಮೋಡಗಳಲ್ಲಿದೆ.”
^ ಅಕ್ಷ. “ನಿನ್ನ.”