ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ನಿಮ್ಮ ಬದುಕನ್ನು ಈಗಲೂ ಬದಲಾಯಿಸುತ್ತಿದೆಯಾ?

ಬೈಬಲ್‌ ನಿಮ್ಮ ಬದುಕನ್ನು ಈಗಲೂ ಬದಲಾಯಿಸುತ್ತಿದೆಯಾ?

“ನಿಮ್ಮ ಮನಸ್ಸನ್ನು ಮಾರ್ಪಡಿಸಿ ನವೀಕರಿಸಿಕೊಳ್ಳಿರಿ.”—ರೋಮ. 12:2.

ಗೀತೆಗಳು: 61, 52

1-3. (ಎ) ದೀಕ್ಷಾಸ್ನಾನದ ನಂತರ ಯಾವ ಬದಲಾವಣೆಗಳನ್ನು ಮಾಡುವುದು ನಮಗೆ ಕಷ್ಟವೆಂದು ಅನಿಸಬಹುದು? (ಬಿ) ಬದಲಾವಣೆಗಳನ್ನು ಮಾಡುವುದು ನಾವು ನೆನಸಿದ್ದಕ್ಕಿಂತ ಹೆಚ್ಚು ಕಷ್ಟವಾದಾಗ ಯಾವ ಪ್ರಶ್ನೆಗಳು ಬರಬಹುದು? (ಲೇಖನದ ಆರಂಭದ ಚಿತ್ರಗಳನ್ನು ನೋಡಿ.)

ಕೆವಿನ್‌ ಅನೇಕ ವರ್ಷಗಳಿಂದ ತುಂಬ ಕುಡಿಯುತ್ತಿದ್ದ, ಜೂಜಾಡುತ್ತಿದ್ದ, ಸಿಗರೇಟು ಸೇದುತ್ತಿದ್ದ, ಡ್ರಗ್ಸ್‌ ತಕ್ಕೊಳ್ಳುತ್ತಿದ್ದ. [1] ಆಮೇಲೆ ಅವನಿಗೆ ಯೆಹೋವ ದೇವರ ಬಗ್ಗೆ ತಿಳಿಯಿತು. ಯೆಹೋವನ ಸ್ನೇಹಿತನಾಗಲು ಇಷ್ಟಪಟ್ಟ. ಆದರೆ ಅದಕ್ಕಾಗಿ ಅವನು ತನ್ನ ಬದುಕಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಬೇಕಿತ್ತು. ಯೆಹೋವನ ಮತ್ತು ಆತನ ವಾಕ್ಯವಾದ ಬೈಬಲಿನ ಸಹಾಯದಿಂದ ಆ ಬದಲಾವಣೆಗಳನ್ನು ಮಾಡಿದನು.—ಇಬ್ರಿ. 4:12.

2 ಆದರೆ ಒಬ್ಬ ಒಳ್ಳೇ ಕ್ರೈಸ್ತನಾಗಲು ಕೆವಿನ್‌ ದೀಕ್ಷಾಸ್ನಾನದ ನಂತರವೂ ತನ್ನ ವ್ಯಕ್ತಿತ್ವದಲ್ಲಿ ಬದಲಾವಣೆಗಳನ್ನು ಮಾಡಬೇಕಿತ್ತು. (ಎಫೆ. 4:31, 32) ಉದಾಹರಣೆಗೆ, ಅವನಿಗೆ ಮೂಗಿನ ತುದಿಯಲ್ಲೇ ಕೋಪ ಇತ್ತು. ತನ್ನ ಸಿಟ್ಟನ್ನು ತಡೆಯಲು ತನ್ನಿಂದ ಆಗದೇ ಇರುವುದನ್ನು ನೋಡಿ ಅವನಿಗೇ ಆಶ್ಚರ್ಯವಾಗುತ್ತಿತ್ತು. “ನನ್ನ ಕೆಟ್ಟ ಚಟಗಳನ್ನು ಹೇಗೊ ಬಿಟ್ಟುಬಿಟ್ಟೆ. ಆದರೆ ಸಿಟ್ಟನ್ನು ತಡೆಯೋದು ಅದಕ್ಕಿಂತ ತುಂಬ ಕಷ್ಟವೆನಿಸಿತು” ಎಂದನು ಕೆವಿನ್‌. ಹಾಗಾಗಿ ಅವನು ಯೆಹೋವನ ಸಹಾಯ ಬೇಡಿದನು. ಬೈಬಲನ್ನು ಇನ್ನಷ್ಟು ಚೆನ್ನಾಗಿ ಅಧ್ಯಯನ ಮಾಡಿದನು. ಇದರಿಂದ ಅವನಿಗೆ ತನ್ನ ಸ್ವಭಾವದಲ್ಲಿ ಬದಲಾವಣೆಗಳನ್ನು ಮಾಡಲಿಕ್ಕಾಯಿತು.

3 ಬೈಬಲಿಗೆ ಅನುಸಾರ ಜೀವಿಸಲು ದೀಕ್ಷಾಸ್ನಾನಕ್ಕೆ ಮುಂಚೆ ನಮ್ಮಲ್ಲಿ ಹೆಚ್ಚಿನವರು ದೊಡ್ಡದೊಡ್ಡ ಬದಲಾವಣೆಗಳನ್ನು ಮಾಡಬೇಕಾಗಿತ್ತು. ಆದರೆ ಯೆಹೋವನನ್ನು ಮತ್ತು ಯೇಸುವನ್ನು ಹೆಚ್ಚು ನಿಕಟವಾಗಿ ಅನುಕರಿಸಲು ದೀಕ್ಷಾಸ್ನಾನದ ನಂತರವೂ ನಮ್ಮ ಬದುಕಲ್ಲಿ ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡಬೇಕಿರುತ್ತದೆ. (ಎಫೆ. 5:1, 2; 1 ಪೇತ್ರ 2:21) ಉದಾಹರಣೆಗೆ ಯಾವಾಗಲೂ ಗೊಣಗುವ, ಇತರರ ಬಗ್ಗೆ ಕೆಟ್ಟಕೆಟ್ಟದಾಗಿ ಹರಟೆ ಹೊಡೆಯುವ ಸ್ವಭಾವ ನಮ್ಮಲ್ಲಿ ಇರಬಹುದು. ಅಥವಾ ಯಾವುದು ಸರಿ ಎಂದು ಗೊತ್ತಿದ್ದರೂ ಬೇರೆಯವರು ಏನು ಅಂದುಕೊಳ್ಳುತ್ತಾರೋ ಎಂಬ ಹೆದರಿಕೆಯಿಂದ ಕೆಲವೊಮ್ಮೆ ಅದನ್ನು ಮಾಡದೇ ಇರಬಹುದು. ಈ ವಿಷಯಗಳಲ್ಲಿ ಬದಲಾವಣೆ ಮಾಡಲು ನಾವು ಅನೇಕ ವರ್ಷಗಳಿಂದ ಪ್ರಯತ್ನಪಟ್ಟರೂ ಮತ್ತೆಮತ್ತೆ ಅದೇ ತಪ್ಪುಗಳನ್ನು ಮಾಡುತ್ತಿರಬಹುದು. ಹಾಗಾಗಿ ನಮಗೆ ಈ ಪ್ರಶ್ನೆಗಳು ಬರಬಹುದು: ‘ಬದುಕಲ್ಲಿ ದೊಡ್ಡದೊಡ್ಡ ಬದಲಾವಣೆಗಳನ್ನು ಮಾಡಿದ ನನಗೆ ಈ ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡುವುದು ಯಾಕಿಷ್ಟು ಕಷ್ಟ? ಬೈಬಲ್‌ ನನ್ನ ಬದುಕನ್ನು ಈಗಲೂ ಬದಲಾಯಿಸುತ್ತಾ ಇರಬೇಕಾದರೆ ನಾನೇನು ಮಾಡಬೇಕು?’

ಯೆಹೋವನನ್ನು ಮೆಚ್ಚಿಸಲು ನಿಮ್ಮಿಂದ ಆಗುತ್ತದೆ!

4. ನಾವು ಕೆಲವೊಮ್ಮೆ ಯೆಹೋವನನ್ನು ಮೆಚ್ಚಿಸಲು ತಪ್ಪುತ್ತೇವೆ ಯಾಕೆ?

4 ನಾವು ಯೆಹೋವನನ್ನು ಪ್ರೀತಿಸುತ್ತೇವೆ ಮತ್ತು ಆತನನ್ನು ಮೆಚ್ಚಿಸಲು ನಮಗೆ ತುಂಬ ಮನಸ್ಸಿದೆ. ಆದರೆ ನಾವು ಅಪರಿಪೂರ್ಣರಾದ ಕಾರಣ ಕೆಲವೊಮ್ಮೆ ಆತನನ್ನು ಮೆಚ್ಚಿಸಲು ತಪ್ಪುತ್ತೇವೆ. “ಒಳ್ಳೇದನ್ನು ಬಯಸುವ ಸಾಮರ್ಥ್ಯವು ನನ್ನಲ್ಲಿದೆ, ಆದರೆ ಒಳ್ಳೇದನ್ನು ಮಾಡುವ ಸಾಮರ್ಥ್ಯ ನನ್ನಲ್ಲಿಲ್ಲ” ಎಂದನು ಅಪೊಸ್ತಲ ಪೌಲ. ನಮಗೂ ಆಗಾಗ ಅವನಂತೆ ಅನಿಸುತ್ತದೆ.—ರೋಮ. 7:18; ಯಾಕೋ. 3:2.

5. (ಎ) ದೀಕ್ಷಾಸ್ನಾನಕ್ಕೆ ಮುಂಚೆ ನಾವು ಯಾವ ಬದಲಾವಣೆಗಳನ್ನು ಮಾಡಿದೆವು? (ಬಿ) ನಾವು ಈಗಲೂ ಯಾವ ಬಲಹೀನತೆಗಳ ವಿರುದ್ಧ ಹೋರಾಡುತ್ತಿರಬಹುದು?

5 ಯೆಹೋವನು ದ್ವೇಷಿಸುವ ಎಲ್ಲ ವಿಷಯಗಳನ್ನು ಬಿಟ್ಟುಬಿಟ್ಟದ್ದರಿಂದ ನಮಗೆ ಸಭೆಯ ಸದಸ್ಯರಾಗುವ ಅವಕಾಶ ಸಿಕ್ಕಿತು. (1 ಕೊರಿಂ. 6:9, 10) ಆದರೆ ಈಗಲೂ ನಮ್ಮಲ್ಲಿ ಕುಂದುಕೊರತೆಗಳಿವೆ. (ಕೊಲೊ. 3:9, 10) ಹಾಗಾಗಿ ನಾವು ದೀಕ್ಷಾಸ್ನಾನ ಪಡೆದು ಎಷ್ಟೇ ವರ್ಷಗಳಾಗಿದ್ದರೂ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಆಗಾಗ ನಮ್ಮಲ್ಲಿ ಕೆಟ್ಟ ಆಶೆಗಳು, ಭಾವನೆಗಳು ಹುಟ್ಟಬಹುದು ಅಥವಾ ನಮ್ಮಲ್ಲಿರುವ ಯಾವುದೋ ಒಂದು ಬಲಹೀನತೆಯನ್ನು ನಿಯಂತ್ರಣದಲ್ಲಿ ಇಡುವುದು ಕಷ್ಟವೆನಿಸಬಹುದು. ಎಷ್ಟೆಂದರೆ ಅದೇ ಬಲಹೀನತೆಯ ವಿರುದ್ಧ ಅನೇಕ ವರ್ಷಗಳ ವರೆಗೆ ಹೋರಾಡುತ್ತಾ ಇರಬಹುದು.

6, 7. (ಎ) ನಾವು ಅಪರಿಪೂರ್ಣರಾಗಿದ್ದರೂ ಯೆಹೋವನ ಸ್ನೇಹಿತರಾಗಿ ಉಳಿಯಲು ಯಾವುದರಿಂದ ಸಾಧ್ಯವಾಗುತ್ತದೆ? (ಬಿ) ನಾವು ಯೆಹೋವನ ಹತ್ತಿರ ಕ್ಷಮೆ ಕೇಳುವುದನ್ನು ಯಾಕೆ ನಿಲ್ಲಿಸಬಾರದು?

6 ನಾವು ಅಪರಿಪೂರ್ಣರಾಗಿದ್ದರೂ ಯೆಹೋವನ ಸ್ನೇಹಿತರಾಗಲು ಮತ್ತು ಆತನ ಸೇವೆಯನ್ನು ಮಾಡಲು ಆಗಿದೆ. ಇದು ಹೇಗೆ ಸಾಧ್ಯವಾಯಿತೆಂದು ನೆನಪಿಸಿಕೊಳ್ಳಿ. ನಮ್ಮಲ್ಲಿರುವ ಒಳ್ಳೇದನ್ನು ನೋಡಿ ಯೆಹೋವನೇ ನಮ್ಮನ್ನು ಆತನ ಕಡೆಗೆ ಸೆಳೆದನಲ್ಲವೇ? (ಯೋಹಾ. 6:44) ನಮ್ಮಲ್ಲಿ ಕುಂದುಕೊರತೆಗಳು, ಬಲಹೀನತೆಗಳು ಇವೆಯೆಂದು ಆತನಿಗೆ ಗೊತ್ತಿತ್ತು. ಮುಂದಕ್ಕೆ ತಪ್ಪುಗಳನ್ನು ಮಾಡುವೆವು ಅನ್ನೋದು ಕೂಡ ಆತನಿಗೆ ಗೊತ್ತಿತ್ತು. ಆದರೂ ನಾವು ಆತನ ಸ್ನೇಹಿತರಾಗಬೇಕೆಂದು ಯೆಹೋವನು ಬಯಸಿದನು.

7 ಯೆಹೋವನು ನಮ್ಮನ್ನು ಎಷ್ಟು ಪ್ರೀತಿಸಿದನೆಂದರೆ ನಮಗೊಂದು ಅಮೂಲ್ಯ ಉಡುಗೊರೆಯನ್ನು ಕೊಟ್ಟನು. ಅದೇನೆಂದರೆ ನಮ್ಮನ್ನು ಪಾಪಗಳಿಂದ ಬಿಡುಗಡೆ ಮಾಡಲಿಕ್ಕಾಗಿ ಯೇಸು ತನ್ನ ಜೀವವನ್ನು ಕೊಡುವಂತೆ ಆತನನ್ನು ಭೂಮಿಗೆ ಕಳುಹಿಸಿಕೊಟ್ಟನು. (ಯೋಹಾ. 3:16) ಇದರಿಂದಾಗಿ ನಾವು ನಮ್ಮ ತಪ್ಪುಗಳಿಗೆ ಯೆಹೋವನ ಹತ್ತಿರ ಕ್ಷಮೆ ಕೇಳಲಿಕ್ಕೆ ಆಗುತ್ತದೆ. ಹಾಗೆ ಕೇಳಿದಾಗ ಯೆಹೋವನು ಖಂಡಿತವಾಗಿ ನಮ್ಮನ್ನು ಕ್ಷಮಿಸುತ್ತಾನೆ ಮತ್ತು ನಾವು ಆತನ ಸ್ನೇಹಿತರಾಗಿ ಉಳಿಯಬಹುದು. (ರೋಮ. 7:24, 25; 1 ಯೋಹಾ. 2:1, 2) ‘ನಾನೊಬ್ಬ ಪಾಪಿ’ ಎಂದು ನೆನಸುತ್ತಾ ಯೆಹೋವನ ಹತ್ತಿರ ಕ್ಷಮೆ ಕೇಳುವುದನ್ನು ಎಂದೂ ನಿಲ್ಲಿಸಬಾರದು. ಯೇಸು ಸತ್ತದ್ದೇ ಪಶ್ಚಾತ್ತಾಪಪಡುವ ಪಾಪಿಗಳಿಗಾಗಿ. ನಾವು ಕ್ಷಮೆ ಕೇಳದೆ ಇರುವುದು ಕೈ ಕೊಳಕಾಗಿದ್ದರೂ ಅದನ್ನು ತೊಳೆಯದೆ ಇರುವುದಕ್ಕೆ ಸಮ. ನಿಜ, ನಾವು ಅಪರಿಪೂರ್ಣರಾದರೂ ಯೆಹೋವನ ಸ್ನೇಹಿತರಾಗಿ ಉಳಿಯಲಿಕ್ಕೆ ಆಗುತ್ತದೆ. ಇದಕ್ಕಾಗಿ ನಾವು ಆತನಿಗೆ ನಿಜಕ್ಕೂ ಕೃತಜ್ಞರು!1 ತಿಮೊಥೆಯ 1:15 ಓದಿ.

8. ನಮ್ಮ ಬಲಹೀನತೆಗಳನ್ನು ನಾವೇಕೆ ಅಲಕ್ಷಿಸಬಾರದು?

8 ನಾವು ಅಪರಿಪೂರ್ಣರು ಎಂದು ಹೇಳುತ್ತಾ ನಮ್ಮ ಬಲಹೀನತೆಗಳನ್ನು ಅಲಕ್ಷಿಸಬಾರದು ಅಥವಾ ನಮ್ಮ ತಪ್ಪುಗಳಿಗೆ ನೆಪ ಕೊಡುತ್ತಿರಬಾರದು. ಯೆಹೋವನು ತನ್ನ ಸ್ನೇಹಿತರಾಗಲು ಇಷ್ಟಪಡುವವರು ಎಂಥವರಾಗಿರಬೇಕು ಎಂದು ಹೇಳಿದ್ದಾನೆ. (ಕೀರ್ತ. 15:1-5) ಹಾಗಾಗಿ ನಾವು ಆತನಿಗೆ ಹತ್ತಿರವಾಗಬೇಕಾದರೆ ಆತನನ್ನು ಮತ್ತು ಆತನ ಮಗನನ್ನು ಅನುಕರಿಸಲು ಪ್ರಯತ್ನಿಸುತ್ತಾ ಇರಬೇಕು. ಅಷ್ಟೇ ಅಲ್ಲ, ನಮ್ಮಲ್ಲಿರುವ ಕೆಟ್ಟ ಆಶೆಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಇವುಗಳಲ್ಲಿ ಕೆಲವೊಂದನ್ನು ನಾವು ಕಿತ್ತೆಸೆಯಲೂ ಆಗಬಹುದು. ನಾವು ದೀಕ್ಷಾಸ್ನಾನ ಪಡೆದು ಎಷ್ಟೇ ವರ್ಷಗಳಾಗಿದ್ದರೂ ನಮ್ಮ ಗುಣಗಳನ್ನು, ಸ್ವಭಾವವನ್ನು ಉತ್ತಮಗೊಳಿಸುತ್ತಾ ಇರಬೇಕು.—2 ಕೊರಿಂ. 13:11.

9. ನಮ್ಮ ವ್ಯಕ್ತಿತ್ವವನ್ನು ನೂತನಗೊಳಿಸುತ್ತಾ ಇರಬೇಕೆಂದು ಹೇಗೆ ಗೊತ್ತಾಗುತ್ತದೆ?

9 ಅಪೊಸ್ತಲ ಪೌಲನು ಕ್ರೈಸ್ತರಿಗೆ ಹೀಗೆ ಹೇಳಿದನು: “ಹಳೆಯ ವ್ಯಕ್ತಿತ್ವವನ್ನು ಅದರ ಅಭ್ಯಾಸಗಳೊಂದಿಗೆ ತೆಗೆದುಹಾಕಿರಿ ಮತ್ತು ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ; ಈ ವ್ಯಕ್ತಿತ್ವವು ಇದನ್ನು ಸೃಷ್ಟಿಸಿದಾತನ ಸ್ವರೂಪಕ್ಕನುಸಾರ ನಿಷ್ಕೃಷ್ಟ ಜ್ಞಾನದ ಮೂಲಕ ನೂತನಗೊಳಿಸಲ್ಪಡುತ್ತಿದೆ.” (ಕೊಲೊ. 3:9, 10) “ನೂತನಗೊಳಿಸಲ್ಪಡುತ್ತಿದೆ” ಎಂಬ ಪದವು ಮುಂದುವರಿಯುವ ಕ್ರಿಯೆಯನ್ನು ಸೂಚಿಸುತ್ತದೆ. ಹಾಗಾಗಿ ನಮ್ಮ ವ್ಯಕ್ತಿತ್ವವನ್ನು ನೂತನಗೊಳಿಸಲು ನಾವು ಪ್ರಯತ್ನಿಸುತ್ತಾ ಇರಬೇಕು. ಎಷ್ಟೇ ವರ್ಷಗಳಿಂದ ನಾವು ಯೆಹೋವನ ಸೇವೆ ಮಾಡುತ್ತಾ ಇದ್ದರೂ ಆತನ ವ್ಯಕ್ತಿತ್ವದ ಬಗ್ಗೆ ಎಷ್ಟೋ ಕಲಿಯಲಿಕ್ಕಿರುತ್ತದೆ. ಹಾಗಾಗಿ ಯೆಹೋವನ ಗುಣಗಳನ್ನು ನಿಕಟವಾಗಿ ಅನುಕರಿಸಲಿಕ್ಕಾಗಿ ನಮ್ಮ ಸ್ವಭಾವದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಇರಬೇಕು. ಈ ವಿಷಯದಲ್ಲಿ ಬೈಬಲ್‌ ನಮಗೆ ಸಹಾಯಮಾಡುತ್ತದೆ.

ಯಾಕೆ ಇಷ್ಟು ಕಷ್ಟ?

10. (ಎ) ಬೈಬಲಿನ ಸಹಾಯದಿಂದ ಬದಲಾವಣೆಗಳನ್ನು ಮಾಡುತ್ತಾ ಇರಲು ನಾವೇನು ಮಾಡಬೇಕು? (ಬಿ) ಯಾವ ಪ್ರಶ್ನೆಗಳು ಏಳಬಹುದು?

10 ಬೈಬಲ್‌ ಹೇಳುವಂತೆ ನಡೆಯಲು ನಮ್ಮೆಲ್ಲರಿಗೂ ಇಷ್ಟ. ಆದರೆ ಅದಕ್ಕನುಸಾರ ನಾವು ಬದಲಾವಣೆಗಳನ್ನು ಮಾಡುತ್ತಾ ಇರಬೇಕಾದರೆ ತುಂಬ ಪ್ರಯತ್ನ ಹಾಕಬೇಕು. ಅಷ್ಟು ಪ್ರಯತ್ನ ಯಾಕೆ ಹಾಕಬೇಕು? ಪ್ರಯತ್ನವೇ ಇಲ್ಲದೆ ನಾವು ಬದಲಾಗುವಂತೆ ಯೆಹೋವನು ಮಾಡಬಹುದಲ್ಲಾ?

11-13. ಬಲಹೀನತೆಗಳನ್ನು ಕಿತ್ತೆಸೆಯಲು ನಾವು ಪ್ರಯತ್ನ ಹಾಕಬೇಕೆಂದು ಯೆಹೋವನು ಏಕೆ ನಿರೀಕ್ಷಿಸುತ್ತಾನೆ?

11 ಇಡೀ ವಿಶ್ವ ಮತ್ತು ಅದರಲ್ಲಿ ಇರುವ ಎಲ್ಲದರ ಬಗ್ಗೆ ನಾವು ಯೋಚಿಸುವಾಗ ಯೆಹೋವನಿಗೆ ಏನು ಬೇಕಾದರೂ ಮಾಡಲು ಶಕ್ತಿಯಿದೆ ಎಂದು ಗೊತ್ತಾಗುತ್ತದೆ. ಆತನು ಸೃಷ್ಟಿಮಾಡಿದ ಸೂರ್ಯ ಇದಕ್ಕೊಂದು ಉದಾಹರಣೆ. ಅದಕ್ಕೆ ಅಪಾರ ಶಕ್ತಿಯಿದೆ. ಪ್ರತಿ ಕ್ಷಣ ಸೂರ್ಯ ದೊಡ್ಡ ಪ್ರಮಾಣದಲ್ಲಿ ಶಾಖ ಮತ್ತು ಬೆಳಕನ್ನು ಉತ್ಪಾದಿಸುತ್ತದೆ. ಭೂಮಿಯ ಮೇಲೆ ಎಲ್ಲ ಜೀವಿಗಳ ಪೋಷಣೆಗೆ ಅದರ ಶಕ್ತಿಯ ಕೇವಲ ಒಂದು ಚಿಕ್ಕ ಅಂಶ ಸಾಕು. (ಕೀರ್ತ. 74:16; ಯೆಶಾ. 40:26) ಯೆಹೋವನು ಭೂಮಿಯಲ್ಲಿರುವ ತನ್ನ ಸೇವಕರಿಗೆ ಸಹ ಅಗತ್ಯವಿದ್ದಾಗೆಲ್ಲ ಶಕ್ತಿಯನ್ನು ಕೊಡುತ್ತಾನೆ. (ಯೆಶಾ. 40:29) ಇದರಿಂದ ಏನು ಗೊತ್ತಾಗುತ್ತದೆ? ಯೆಹೋವನು ಮನಸ್ಸು ಮಾಡಿದರೆ ಸಾಕು, ನಾವು ನಮ್ಮಲ್ಲಿರುವ ಬಲಹೀನತೆಗಳನ್ನು ತುಂಬ ಸುಲಭವಾಗಿ ಕಿತ್ತೆಸೆಯುವಂತೆ ಮಾಡಬಲ್ಲನು. ನಮ್ಮಲ್ಲಿ ಕೆಟ್ಟ ಆಶೆಗಳು ಬರದಂತೆಯೂ ತಡೆಯಬಲ್ಲನು. ಹಾಗಾದರೆ ಆತನು ಯಾಕೆ ಹಾಗೆ ಮಾಡುತ್ತಿಲ್ಲ?

12 ಯೆಹೋವನು ನಮಗೆ ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ ಅಂದರೆ ಆತನಿಗೆ ವಿಧೇಯರಾಗುತ್ತೇವಾ ಇಲ್ಲವಾ ಎಂಬುದನ್ನು ನಾವೇ ಆರಿಸಿಕೊಳ್ಳುವ ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ನಾವು ಯೆಹೋವನಿಗೆ ವಿಧೇಯರಾಗಲು ಆರಿಸಿಕೊಂಡು, ಆತನ ಚಿತ್ತಕ್ಕನುಸಾರ ನಡೆಯಲು ಪ್ರಯಾಸಪಟ್ಟರೆ ಆತನನ್ನು ಪ್ರೀತಿಸುತ್ತೇವೆಂದು, ಆತನನ್ನು ಮೆಚ್ಚಿಸಲು ಬಯಸುತ್ತೇವೆಂದು ತೋರಿಸುತ್ತೇವೆ. ಮತ್ತೊಂದು ವಿಷಯ ಏನೆಂದರೆ, ಯೆಹೋವನಿಗೆ ಆಳುವ ಹಕ್ಕು ಇಲ್ಲ ಎಂಬುದು ಸೈತಾನನ ವಾದವಾಗಿದೆ. ನಾವು ಯೆಹೋವನಿಗೆ ವಿಧೇಯರಾದರೆ ಆತನ ಆಳ್ವಿಕೆಯನ್ನು ಇಷ್ಟಪಡುತ್ತೇವೆಂದು ತೋರಿಸುತ್ತೇವೆ. ಆತನಿಗೆ ವಿಧೇಯರಾಗಲು ನಾವು ಮಾಡುವ ಪ್ರತಿ ಪ್ರಯತ್ನವನ್ನು ಯೆಹೋವನು ಖಂಡಿತವಾಗಿ ಅಮೂಲ್ಯವಾಗಿ ಕಾಣುತ್ತಾನೆ. (ಯೋಬ 2:3-5; ಜ್ಞಾನೋ. 27:11) ಕಷ್ಟವೆನಿಸಿದಾಗಲೂ ನಮ್ಮ ಬಲಹೀನತೆಯ ವಿರುದ್ಧ ಹೋರಾಡಲು ಶ್ರಮಹಾಕಿದಾಗ ನಾವು ಯೆಹೋವನಿಗೆ ನಿಷ್ಠೆ ತೋರಿಸುತ್ತೇವೆ ಮತ್ತು ಆತನ ಆಳ್ವಿಕೆ ನಮಗೆ ಇಷ್ಟವೆಂದು ತೋರಿಸುತ್ತೇವೆ.

13 ಯೆಹೋವನು ನಾವು ಆತನ ಗುಣಗಳನ್ನು ತೋರಿಸಲು ಶ್ರದ್ಧೆಯಿಂದ ಪ್ರಯತ್ನಿಸಬೇಕೆಂದು ಹೇಳುತ್ತಾನೆ. (ಕೊಲೊ. 3:12; 2 ಪೇತ್ರ 1:5-7 ಓದಿ.) ನಮ್ಮ ಯೋಚನೆಗಳನ್ನು ಮತ್ತು ಭಾವನೆಗಳನ್ನು ನಿಯಂತ್ರಿಸಲು ನಾವು ಶ್ರಮಪಡಬೇಕು ಎನ್ನುವುದು ಆತನ ಇಷ್ಟ. (ರೋಮ. 8:5; 12:9) ಹೀಗೆ ಶ್ರಮಪಟ್ಟು ನಮ್ಮ ಜೀವನದಲ್ಲಿ ಒಂದೊಂದೇ ಬದಲಾವಣೆ ಮಾಡುತ್ತಾ ಹೋದಾಗ ನಮಗೆ ಸಂತೋಷವೂ ಸಿಗುತ್ತದೆ.

ಬೈಬಲ್‌ ನಿಮ್ಮ ಬದುಕನ್ನು ಬದಲಾಯಿಸುತ್ತಾ ಇರಲಿ

14, 15. ಯೆಹೋವನು ಮೆಚ್ಚುವ ಗುಣಗಳನ್ನು ಬೆಳೆಸಿಕೊಳ್ಳಲು ನಾವೇನು ಮಾಡಬಹುದು? (“ ಬೈಬಲ್‌ ಮತ್ತು ಪ್ರಾರ್ಥನೆ ಅವರ ಬದುಕನ್ನು ಬದಲಾಯಿಸಿತು” ಚೌಕ ನೋಡಿ.)

14 ಯೆಹೋವನು ಮೆಚ್ಚುವ ಗುಣಗಳನ್ನು ಬೆಳೆಸಿಕೊಳ್ಳಬೇಕಾದರೆ ನಾವೇನು ಮಾಡಬೇಕು? ಏನೇನು ಬದಲಾವಣೆಗಳನ್ನು ಮಾಡಬೇಕೆಂದು ನಾವೇ ಯೋಚಿಸಿ ನಿರ್ಣಯಿಸದೆ ದೇವರ ಮಾರ್ಗದರ್ಶನಕ್ಕೆ ಅನುಸಾರ ನಡೆಯಬೇಕು. “ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳಲ್ಪಡುವುದನ್ನು ಬಿಟ್ಟು, ದೇವರ ಉತ್ತಮವಾದ, ಸ್ವೀಕೃತವಾದ ಮತ್ತು ಪರಿಪೂರ್ಣವಾದ ಚಿತ್ತವು ಯಾವುದೆಂದು ಪರಿಶೋಧಿಸಿ ತಿಳಿದುಕೊಳ್ಳುವಂತೆ ನಿಮ್ಮ ಮನಸ್ಸನ್ನು ಮಾರ್ಪಡಿಸಿ ನವೀಕರಿಸಿಕೊಳ್ಳಿರಿ” ಎಂದು ರೋಮನ್ನರಿಗೆ 12:2 ಹೇಳುತ್ತದೆ. ಯೆಹೋವನ ಚಿತ್ತವೇನೆಂದು ತಿಳಿಯಲು ಆತನು ಕೊಟ್ಟಿರುವ ಸಹಾಯವನ್ನು ಸ್ವೀಕರಿಸಬೇಕು. ಅಂದರೆ ಬೈಬಲನ್ನು ದಿನಾಲೂ ಓದಬೇಕು, ಓದಿದ್ದನ್ನು ಧ್ಯಾನಿಸಬೇಕು ಮತ್ತು ಪವಿತ್ರಾತ್ಮಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಬೇಕು. (ಲೂಕ 11:13; ಗಲಾ. 5:22, 23) ಇದೆಲ್ಲ ಮಾಡಿದಾಗ ನಾವು ಯೆಹೋವನಂತೆ ಯೋಚಿಸಲು ಕಲಿಯುತ್ತೇವೆ. ನಮ್ಮ ಯೋಚನೆ, ಮಾತು, ಕ್ರಿಯೆ ಯೆಹೋವನಿಗೆ ಮೆಚ್ಚಿಗೆಯಾಗುತ್ತದೆ. ಅಲ್ಲದೆ ನಮ್ಮ ಬಲಹೀನತೆಗಳನ್ನು ನಿಯಂತ್ರಣದಲ್ಲಿಡಲು ಕಲಿಯುತ್ತೇವೆ. ನಂತರವೂ ನಾವು ನಮ್ಮ ಬಲಹೀನತೆಗಳ ವಿಷಯದಲ್ಲಿ ಎಚ್ಚರವಹಿಸುತ್ತಾ ಇರಬೇಕು.—ಜ್ಞಾನೋ. 4:23.

ನಿಮ್ಮ ಬಲಹೀನತೆಗಳ ವಿರುದ್ಧ ಹೋರಾಡಲು ಸಹಾಯಮಾಡುವ ಲೇಖನಗಳನ್ನು ಮತ್ತು ವಚನಗಳನ್ನು ಸಂಗ್ರಹಿಸಿ, ಅವನ್ನು ಮತ್ತೆಮತ್ತೆ ಓದಿ (ಪ್ಯಾರ 15 ನೋಡಿ)

15 ಬೈಬಲನ್ನು ಪ್ರತಿದಿನ ಓದುವುದರ ಜೊತೆಗೆ ಕಾವಲಿನಬುರುಜು, ಎಚ್ಚರ! ಪತ್ರಿಕೆಗಳಂಥ ಪ್ರಕಾಶನಗಳ ಸಹಾಯದಿಂದ ಬೈಬಲಿನ ಅಧ್ಯಯನವನ್ನೂ ಮಾಡಬೇಕು. ಉದಾಹರಣೆಗೆ ಈ ಪತ್ರಿಕೆಗಳಲ್ಲಿ ಬರುವ ಅನೇಕ ಲೇಖನಗಳು ನಾವು ಹೇಗೆ ಯೆಹೋವನ ಗುಣಗಳನ್ನು ಅನುಕರಿಸಬೇಕೆಂದು ಮತ್ತು ನಮ್ಮ ಬಲಹೀನತೆಗಳ ವಿರುದ್ಧ ಹೇಗೆ ಹೋರಾಡಬೇಕೆಂದು ಕಲಿಸುತ್ತವೆ. ಅದರಲ್ಲಿರುವ ಕೆಲವು ನಿರ್ದಿಷ್ಟ ಲೇಖನಗಳು ಅಥವಾ ವಚನಗಳು ವೈಯಕ್ತಿಕವಾಗಿ ನಮಗೆ ತುಂಬ ಸಹಾಯಮಾಡಬಲ್ಲವು. ಈ ಲೇಖನಗಳನ್ನು, ವಚನಗಳನ್ನು ಒಂದು ಕಡೆ ಸಂಗ್ರಹಿಸಿಟ್ಟರೆ ಆಗಾಗ ಅವನ್ನು ಓದಬಹುದು.

16. ನಮ್ಮಲ್ಲಿ ಬದಲಾವಣೆಗಳನ್ನು ಮಾಡಲು ಸಮಯ ಹಿಡಿದರೆ ಏಕೆ ಬೇಸರಪಡಬಾರದು?

16 ಯೆಹೋವನಲ್ಲಿರುವ ಗುಣಗಳನ್ನು ನಾವು ಬೆಳೆಸಿಕೊಳ್ಳಲು ಸಮಯ ಹಿಡಿಯುತ್ತದೆ. ನೀವು ನೆನಸಿದಷ್ಟು ಬದಲಾವಣೆಗಳನ್ನು ಮಾಡಲು ಇನ್ನೂ ಆಗದಿದ್ದರೆ ಬೇಸರಪಡಬೇಡಿ, ತಾಳ್ಮೆಯಿಂದಿರಿ. ಬೈಬಲ್‌ ಹೇಳುವ ವಿಷಯಗಳನ್ನು ಮಾಡುವಂತೆ ನೀವು ಮೊದಮೊದಲು ನಿಮ್ಮನ್ನೇ ಒತ್ತಾಯ ಮಾಡಬೇಕಾಗಬಹುದು. ಯೆಹೋವನು ಮೆಚ್ಚುವ ರೀತಿಯಲ್ಲಿ ಯೋಚಿಸುವುದನ್ನು, ನಡೆಯುವುದನ್ನು ರೂಢಿಮಾಡಿಕೊಳ್ಳಿರಿ. ಆಗ ಆತನು ಯೋಚಿಸುವಂತೆ ಯೋಚಿಸಲು ಮತ್ತು ಸರಿಯಾದದ್ದನ್ನು ಮಾಡಲು ನಿಮಗೆ ಸುಲಭವಾಗುವುದು.—ಕೀರ್ತ. 37:31; ಜ್ಞಾನೋ. 23:12; ಗಲಾ. 5:16, 17.

ಸುಂದರ ಭವಿಷ್ಯದ ಬಗ್ಗೆ ಯೋಚಿಸಿ

17. ಯಾವ ಸುಂದರ ಭವಿಷ್ಯಕ್ಕಾಗಿ ನಾವು ಕಾಯುತ್ತಿದ್ದೇವೆ?

17 ಎಲ್ಲರೂ ಪರಿಪೂರ್ಣರಾಗಿದ್ದು ಯೆಹೋವನನ್ನು ಎಂದೆಂದಿಗೂ ಆರಾಧಿಸುವ ಸಮಯಕ್ಕಾಗಿ ನಾವು ಕಾಯುತ್ತಿದ್ದೇವೆ. ಅಲ್ಲಿ ಬಲಹೀನತೆಗಳ ವಿರುದ್ಧ ಹೋರಾಡುವ ಪ್ರಶ್ನೆಯೇ ಬರುವುದಿಲ್ಲ. ಯೆಹೋವನ ಗುಣಗಳನ್ನು ಅನುಕರಿಸುವುದು ಆಗ ತುಂಬ ಸುಲಭ. ಆದರೆ ಇಂದು ಕೂಡ ನಾವು ಯೆಹೋವನನ್ನು ಆರಾಧಿಸಲು ಸಾಧ್ಯವಿದೆ. ಯಾಕೆಂದರೆ ಆತನು ನಮಗೆ ವಿಮೋಚನಾ ಮೌಲ್ಯವೆಂಬ ಉಡುಗೊರೆಯನ್ನು ಒದಗಿಸಿದ್ದಾನೆ. ನಾವು ಅಪರಿಪೂರ್ಣರಾಗಿದ್ದರೂ ಬದಲಾವಣೆಗಳನ್ನು ಮಾಡಲು ಪ್ರಯತ್ನ ಹಾಕುತ್ತಾ ಇದ್ದರೆ ಮತ್ತು ಬೈಬಲಿನಿಂದ ಆತನು ಕಲಿಸುವ ವಿಷಯಗಳನ್ನು ಪಾಲಿಸುತ್ತಾ ಇದ್ದರೆ ಯೆಹೋವನನ್ನು ಮೆಚ್ಚಿಸಲು ಆಗುತ್ತದೆ.

18, 19. ನಮ್ಮ ಬದುಕಲ್ಲಿ ಬದಲಾವಣೆಗಳನ್ನು ಮಾಡುತ್ತಾ ಇರಲು ಬೈಬಲ್‌ ಸಹಾಯಮಾಡುತ್ತದೆ ಎಂದು ನಾವ್ಯಾಕೆ ಭರವಸೆಯಿಂದ ಇರಬಹುದು?

18 ಲೇಖನದ ಆರಂಭದಲ್ಲಿ ತಿಳಿಸಲಾದ ಕೆವಿನ್‌ ಏನು ಮಾಡಿದನು? ಸಿಟ್ಟನ್ನು ಹತೋಟಿಯಲ್ಲಿಡಲು ಕೈಲಾದದ್ದೆಲ್ಲವನ್ನೂ ಮಾಡಿದನು. ಬೈಬಲಿನಲ್ಲಿ ಓದಿದ ವಿಷಯಗಳನ್ನು ಧ್ಯಾನಿಸಿದನು ಮತ್ತು ಬದಲಾವಣೆಗಳನ್ನು ಮಾಡಲು ತುಂಬ ಪ್ರಯತ್ನಿಸಿದನು. ತನ್ನ ಜೊತೆ ಕ್ರೈಸ್ತರು ಕೊಟ್ಟ ಸಲಹೆಯನ್ನು ಪಾಲಿಸಿದನು. ಸಿಟ್ಟನ್ನು ತಡೆಯಲು ಅವನಿಗೆ ಕೆಲವು ವರ್ಷಗಳೇ ಹಿಡಿದವು. ನಂತರ ಅವನು ಸಹಾಯಕ ಸೇವಕನಾದನು. ಕಳೆದ 20 ವರ್ಷಗಳಿಂದ ಅವನು ಸಭಾ ಹಿರಿಯನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಆದರೆ ಈಗಲೂ ತನ್ನ ಬಲಹೀನತೆಗಳ ವಿಷಯದಲ್ಲಿ ಎಚ್ಚರವಹಿಸುತ್ತಾ ಇರಬೇಕೆನ್ನುವುದನ್ನು ಅವನು ಮರೆತಿಲ್ಲ.

19 ಕೆವಿನ್‌ನಂತೆ ನಾವು ಸಹ ನಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸುತ್ತಾ ಇರಬೇಕು. ಆಗ ನಾವು ಯೆಹೋವನಿಗೆ ಹತ್ತಿರವಾಗುತ್ತಾ ಇರುತ್ತೇವೆ. (ಕೀರ್ತ. 25:14) ಯೆಹೋವನನ್ನು ಮೆಚ್ಚಿಸಲಿಕ್ಕಾಗಿ ನಾವು ಬದಲಾವಣೆಗಳನ್ನು ಮಾಡಲು ನಮ್ಮಿಂದಾದ ಎಲ್ಲ ಪ್ರಯತ್ನಮಾಡುವಾಗ ಆತನು ಸಹಾಯಕೊಡುತ್ತಾನೆ. ಬೈಬಲಿನ ಸಹಾಯದಿಂದ ನಮ್ಮ ಬದುಕಲ್ಲಿ ಬದಲಾವಣೆಗಳನ್ನು ಮಾಡಲು ಖಂಡಿತ ನಮ್ಮಿಂದ ಆಗುತ್ತದೆ!—ಕೀರ್ತ. 34:8.

^ [1] (ಪ್ಯಾರ 1) ಹೆಸರನ್ನು ಬದಲಾಯಿಸಲಾಗಿದೆ.