ಜ್ಞಾನೋಕ್ತಿ 23:1-35

  • ಅತಿಥಿಯಾಗಿ ಹೋದಾಗ ಹುಷಾರಾಗಿರು (2)

  • ಆಸ್ತಿಪಾಸ್ತಿ ಹಿಂದೆ ಹೋಗಬೇಡ (4)

  • ಆಸ್ತಿ ನಿನ್ನಿಂದ ಹಾರಿ ಹೋಗಬಹುದು (5)

  • ವಿಪರೀತ ದ್ರಾಕ್ಷಾಮದ್ಯ ಕುಡಿಯುವವ್ರ ಜೊತೆ ಸೇರಬೇಡ (20)

  • ಮದ್ಯ ಹಾವಿನ ತರ ಕಚ್ಚುತ್ತೆ (32)

23  ರಾಜನ ಜೊತೆ ಊಟಕ್ಕೆ ಕೂತಾಗ,ನೀನು ಎಲ್ಲಿದ್ದೀಯ ಅನ್ನೋದನ್ನ ಮರಿಬೇಡ.   ನಿನಗೆ ತುಂಬ ಹಸಿವಾಗಿದ್ರೆ,ನಿನ್ನನ್ನೇ ನಿಯಂತ್ರಿಸ್ಕೊ.*   ರಾಜನ ಊಟಕ್ಕೆ ಆಸೆಪಡಬೇಡ,ಯಾಕಂದ್ರೆ ಅದೇ ನಿನಗೆ ಉರ್ಲಾಗಬಹುದು.   ಆಸ್ತಿಪಾಸ್ತಿ ಮಾಡ್ತಾ ಸುಸ್ತಾಗಿ ಹೋಗಬೇಡ.+ ಸ್ವಲ್ಪ ನಿಂತು, ವಿವೇಕವನ್ನ ತೋರಿಸು.*   ನೀನು ಅದನ್ನ ನೋಡಿ ಕಣ್ತುಂಬಿಕೊಳ್ಳುವಷ್ಟರಲ್ಲಿ ಅದು ಮಾಯ ಆಗಿಬಿಡಬಹುದು,+ಯಾಕಂದ್ರೆ ಅದು ರೆಕ್ಕೆ ಕಟ್ಕೊಂಡ ಹದ್ದಿನ ತರ ಆಕಾಶಕ್ಕೆ ಹಾರಿಹೋಗುತ್ತೆ.+   ಜಿಪುಣನ ಮನೆಯಲ್ಲಿ ಊಟ ಮಾಡಬೇಡ,ಅವನ ರುಚಿಯಾದ ಆಹಾರಕ್ಕೆ ಆಸೆಪಡಬೇಡ.   ಯಾಕಂದ್ರೆ ನೀನೆಷ್ಟು ತಿಂತೀಯ ಅಂತ ಅವನು ಲೆಕ್ಕ ಇಡ್ತಾನೆ,ಅವನು ನಿನಗೆ “ತಿನ್ನು ಕುಡಿ” ಅಂತ ಹೇಳಿದ್ರೂ ಮನಸಾರೆ ಹೇಳಿರಲ್ಲ.   ನೀನು ತಿಂದಿರೋ ತುತ್ತನ್ನ ಕಕ್ಕಿಬಿಡ್ತೀಯ,ನಿನ್ನನ್ನ ಹೊಗಳಿದ್ದೆಲ್ಲ ವ್ಯರ್ಥ ಆಗುತ್ತೆ.   ಮೂರ್ಖನ ಜೊತೆ ಮಾತಾಡಬೇಡ,+ಯಾಕಂದ್ರೆ ಅವನು ನಿನ್ನ ಮಾತಲ್ಲಿರೋ ವಿವೇಕವನ್ನ ಕೀಳಾಗಿ ನೋಡ್ತಾನೆ.+ 10  ಪೂರ್ವಜರು ಹಾಕಿದ ಗಡಿಯನ್ನ ಸರಿಸಬೇಡ,+ಅನಾಥರ* ಹೊಲವನ್ನ ಕಿತ್ಕೋಬೇಡ. 11  ಅವ್ರ ರಕ್ಷಕ* ತುಂಬ ಬಲಶಾಲಿ,ಆತನು ಅವ್ರ ಪರವಾಗಿ ನಿಂತು ನಿನ್ನ ಜೊತೆ ವಾದಿಸ್ತಾನೆ.+ 12  ಶಿಸ್ತಿಗೆ ನಿನ್ನ ಹೃದಯ ಮಣಿಯಲಿ,ವಿವೇಕದ ಮಾತುಗಳನ್ನ ನಿನ್ನ ಕಿವಿ ಕೇಳಲಿ. 13  ಹುಡುಗನಿಗೆ ಕೊಡಬೇಕಾದ ಶಿಸ್ತನ್ನ ಹಿಂಜರಿಯದೆ ಕೊಡು,+ಬೆತ್ತದಿಂದ ಹೊಡೆದ್ರೆ ಅವನು ಸಾಯಲ್ಲ. 14  ಸಮಾಧಿಯಿಂದ* ಅವನನ್ನ ಕಾಪಾಡೋಕೆ,ನೀನು ಅವನಿಗೆ ಕೋಲಿಂದ ಹೊಡಿಲೇಬೇಕು. 15  ನನ್ನ ಮಗನೇ, ನಿನ್ನ ಹೃದಯದಲ್ಲಿ ವಿವೇಕ ಇದ್ರೆ,ನನ್ನ ಹೃದಯಕ್ಕೆ ಸಂತೋಷ ಆಗುತ್ತೆ.+ 16  ನಿನ್ನ ತುಟಿಗಳು ಸರಿಯಾದ ಮಾತುಗಳನ್ನ ಆಡಿದ್ರೆ,ನನ್ನ ಅಂತರಾಳಕ್ಕೆ* ಖುಷಿ ಆಗುತ್ತೆ. 17  ಪಾಪಿಗಳನ್ನ ನೋಡಿ ನಿನ್ನ ಹೃದಯ ಹೊಟ್ಟೆಕಿಚ್ಚುಪಡಬಾರದು,+ಅದ್ರ ಬದ್ಲು ಇಡೀ ದಿನ ಯೆಹೋವನಿಗೆ ಭಯಪಡು.+ 18  ಯಾಕಂದ್ರೆ ಆಗ ನಿನಗೆ ಒಳ್ಳೇ ಭವಿಷ್ಯ ಇರುತ್ತೆ,+ನಿನ್ನ ನಿರೀಕ್ಷೆ ಯಾವತ್ತೂ ನೀರು ಪಾಲಾಗಲ್ಲ. 19  ನನ್ನ ಮಗನೇ ಕೇಳು, ವಿವೇಕಿ ಆಗು. ನಿನ್ನ ಹೃದಯವನ್ನ ಸರಿಯಾದ ದಾರಿಗೆ ನಡೆಸು. 20  ಕಂಠಪೂರ್ತಿ ದ್ರಾಕ್ಷಾಮದ್ಯ ಕುಡಿಯುವವ್ರ ಜೊತೆ ಸೇರಬೇಡ,+ಹೊಟ್ಟೆಬಿರಿಯೋ ತರ ಮಾಂಸ ತಿನ್ನುವವರ ಜೊತೆ ಇರಬೇಡ.+ 21  ಯಾಕಂದ್ರೆ ಕುಡುಕ, ಹೊಟ್ಟೆಬಾಕ ಇಬ್ರೂ ಬಡತನಕ್ಕೆ ಬಲಿ ಆಗ್ತಾರೆ,+ತೂಕಡಿಸುವವರು ಚಿಂದಿ ಬಟ್ಟೆ ಹಾಕಬೇಕಾಗುತ್ತೆ. 22  ಹೆತ್ತ ತಂದೆಯ ಮಾತು ಕೇಳು,ವಯಸ್ಸಾಗಿದೆ ಅಂತ ತಾಯಿಯನ್ನ ತಿರಸ್ಕಾರದಿಂದ ನೋಡಬೇಡ.+ 23  ಸತ್ಯವನ್ನ ಕೊಂಡ್ಕೊ, ಅದನ್ನ ಯಾವತ್ತೂ ಮಾರಿಬಿಡಬೇಡ.+ ಜೊತೆಗೆ ವಿವೇಕವನ್ನ, ಶಿಸ್ತನ್ನ, ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯವನ್ನ ಖರೀದಿಸು.+ 24  ನೀತಿವಂತನ ತಂದೆಗೆ ಸಂತೋಷ ಆಗುತ್ತೆ,ವಿವೇಕಿಯಿಂದಾಗಿ ಅವನ ಹೆತ್ತ ತಂದೆ ಖುಷಿ ಪಡ್ತಾನೆ. 25  ನಿನ್ನ ಅಪ್ಪಅಮ್ಮ ಸಂತೋಷ ಪಡ್ತಾರೆ,ನಿನ್ನನ್ನ ಹೆತ್ತ ಅಮ್ಮ ಆನಂದಿಸ್ತಾಳೆ. 26  ನನ್ನ ಮಗನೇ, ನಿನ್ನ ಹೃದಯವನ್ನ ನನಗೆ ಕೊಡು,ನನ್ನ ದಾರಿಯಲ್ಲಿ ನಡಿಯೋದ್ರಿಂದ ನಿನಗೆ ಖುಷಿ ಸಿಗಲಿ.+ 27  ವೇಶ್ಯೆ ಆಳವಾದ ಗುಂಡಿ ತರ,ನಾಚಿಕೆಗೆಟ್ಟ* ಹೆಂಗಸು ಇಕ್ಕಟ್ಟಾದ ಬಾವಿ ತರ.+ 28  ಅವಳು ಕಳ್ಳನ ತರ ಹೊಂಚುಹಾಕಿ ಕಾದು ಕೂತಿರ್ತಾಳೆ,+ಅವಳಿಂದಾಗಿ ನಂಬಿಕೆದ್ರೋಹ ಮಾಡೋ ಗಂಡಸರು ಜಾಸ್ತಿ ಆಗ್ತಾರೆ. 29  ಯಾರಿಗೆ ಕಷ್ಟ? ಯಾರಿಗೆ ದುಃಖ? ಯಾರಿಗೆ ಜಗಳ ಇದೆ? ಯಾರಿಗೆ ದೂರಿದೆ? ಯಾರಿಗೆ ಕಾರಣ ಇಲ್ಲದೆ ಗಾಯ ಆಗಿದೆ? ಯಾರ ಕಣ್ಣು ಮಬ್ಬಾಗಿದೆ? 30  ಯಾರಿಗಂದ್ರೆ ದ್ರಾಕ್ಷಾಮದ್ಯ ಕುಡಿದು ಕಾಲಹರಣ ಮಾಡುವವರಿಗೆ,+ಅಮಲೇರಿಸೋ ದ್ರಾಕ್ಷಾಮದ್ಯ ಹುಡುಕುವವರಿಗೆ. 31  ಲೋಟದಲ್ಲಿ ಮಿನುಗೋ, ಸಲೀಸಾಗಿ ಇಳಿದುಹೋಗೋ,ದ್ರಾಕ್ಷಾಮದ್ಯದ ಕೆಂಪು ಬಣ್ಣ ನೋಡಬೇಡ. 32  ಯಾಕಂದ್ರೆ ಕೊನೇಲಿ ಅದು ಹಾವಿನ ತರ ಕಚ್ಚುತ್ತೆ,ವಿಷ ತುಂಬಿರೋ ಹಾವಿನ ತರ ವಿಷ ಕಾರುತ್ತೆ. 33  ನಿನ್ನ ಕಣ್ಣುಗಳು ವಿಚಿತ್ರ ವಿಷ್ಯಗಳನ್ನ ನೋಡುತ್ತೆ,ನಿನ್ನ ಹೃದಯ ತಪ್ಪನ್ನ ಸಾಧಿಸೋ ಮಾತುಗಳನ್ನ ಆಡುತ್ತೆ.+ 34  ಸಮುದ್ರದ ಅಲ್ಲೋಲಕಲ್ಲೋಲ ಅಲೆಗಳ ಮಧ್ಯ ಮಲಗೋ ವ್ಯಕ್ತಿ ತರ,ಹಡಗಿನ ಪಟ ಕಟ್ಟೋ ಕಂಬದ ಮೇಲೆ ಬಿದ್ಕೊಂಡಿರೋ ವ್ಯಕ್ತಿ ತರ ನೀನಿರ್ತಿಯ. 35  ನೀನು ಹೀಗೆ ಹೇಳ್ತೀಯ: “ಅವರು ನನಗೆ ಹೊಡೆದ್ರು. ನನಗೆ ನೋವಾಗ್ಲೇ ಇಲ್ಲ.* ಅವರು ನನಗೆ ಬಾರಿಸಿದ್ರು, ನನಗೆ ಗೊತ್ತಾಗ್ಲೇ ಇಲ್ಲ. ನಾನು ಯಾವಾಗ ಎದ್ದು+ ಇನ್ನು ಸ್ವಲ್ಪ ಕುಡಿಯೋದು?”*

ಪಾದಟಿಪ್ಪಣಿ

ಅಕ್ಷ. “ಕಂಠಕ್ಕೆ ಕತ್ತಿ ಹಾಕ್ಕೊ.”
ಬಹುಶಃ, “ನಿನ್ನ ಸ್ವಂತ ಬುದ್ಧಿಯನ್ನೇ ಆಶ್ರಯಿಸಿಕೊಳ್ಳಬೇಡ.”
ಅಕ್ಷ. “ತಂದೆ ಇಲ್ಲದವರ.”
ಅಕ್ಷ. “ವಿಮೋಚಕ.”
ಅಕ್ಷ. “ಮೂತ್ರ ಪಿಂಡಗಳು.”
ಅಕ್ಷ. “ವಿದೇಶಿ.” ಜ್ಞಾನೋಕ್ತಿ 2:16 ನೋಡಿ.
ಅಥವಾ “ನನಗೇನೂ ಅನಿಸ್ಲೇ ಇಲ್ಲ.”
ಅಥವಾ “ನಾನು ಅದನ್ನ ಪುನಃ ಹುಡುಕ್ತೀನಿ.”