ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿತ್ಯಜೀವ ವಾಗ್ದಾನ ಮಾಡಿರುವವನನ್ನು ಅನುಕರಿಸಿರಿ

ನಿತ್ಯಜೀವ ವಾಗ್ದಾನ ಮಾಡಿರುವವನನ್ನು ಅನುಕರಿಸಿರಿ

“ಪ್ರಿಯ ಮಕ್ಕಳಂತೆ ದೇವರನ್ನು ಅನುಕರಿಸುವವರಾಗಿರಿ.”—ಎಫೆ. 5:1.

1. ಯೆಹೋವನನ್ನು ಅನುಕರಿಸಲು ಯಾವ ಸಾಮರ್ಥ್ಯ ನಮಗೆ ಸಹಾಯ ಮಾಡುತ್ತದೆ?

ಯೆಹೋವನು ನಮ್ಮನ್ನು ಸೃಷ್ಟಿಸಿದಾಗ ನಾವು ಬೇರೆಯವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕೊಟ್ಟನು. ಅವರಿದ್ದ ಸನ್ನಿವೇಶದಲ್ಲಿ ನಾವೆಂದಿಗೂ ಇರದಿದ್ದರೂ ಅವರನ್ನು ಅರ್ಥ ಮಾಡಿಕೊಳ್ಳಬಹುದು. (ಎಫೆಸ 5:1, 2 ಓದಿ.) ಈ ಸಾಮರ್ಥ್ಯ ನಾವು ಯೆಹೋವನನ್ನು ಅನುಕರಿಸಲು ಹೇಗೆ ಸಹಾಯ ಮಾಡುತ್ತದೆ? ಇದನ್ನು ಹೇಗೆ ಬಳಸುತ್ತೇವೆ ಎನ್ನುವುದರ ಬಗ್ಗೆ ಎಚ್ಚರವಾಗಿರಬೇಕು ಏಕೆ?

2. ನಾವು ಕಷ್ಟಗಳನ್ನು ಅನುಭವಿಸುವಾಗ ಯೆಹೋವನಿಗೆ ಹೇಗನಿಸುತ್ತದೆ?

2 ಯಾವುದೇ ಕಷ್ಟಗಳಿಲ್ಲದಿರುವ ಒಂದು ಅದ್ಭುತ ಭವಿಷ್ಯವನ್ನು ಯೆಹೋವನು ನಮಗೆ ವಾಗ್ದಾನ ಮಾಡಿದ್ದಾನೆ. ಅಭಿಷಿಕ್ತರು ಸ್ವರ್ಗದಲ್ಲಿ ಮತ್ತು “ಬೇರೆ ಕುರಿ”ಗಳು ಭೂಮಿಯಲ್ಲಿ ನಿತ್ಯ ಜೀವವನ್ನು ಎದುರುನೋಡಬಹುದು. (ಯೋಹಾ. 10:16; 17:3; 1 ಕೊರಿಂ. 15:53) ಇಂದು ನಮ್ಮ ಜೊತೆ ಕೆಟ್ಟದ್ದು ನಡೆದಾಗ ನಮಗಾಗುವ ನೋವು ಯೆಹೋವನಿಗೆ ಅರ್ಥವಾಗುತ್ತದೆ. ಹಿಂದೆ ತನ್ನ ಜನರು ಐಗುಪ್ತದಲ್ಲಿ ಕಷ್ಟಪಡುತ್ತಿದ್ದಾಗ ಯೆಹೋವನಿಗೆ ತುಂಬ ನೋವಾಯಿತು. “ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು.” (ಯೆಶಾ. 63:9) ಮುಂದೆ ಆತನ ಜನರು ಆಲಯವನ್ನು ಪುನಃ ನಿರ್ಮಿಸುತ್ತಿದ್ದಾಗ ಶತ್ರುಗಳಿಗೆ ಭಯಪಟ್ಟರು. ಅದು ಯೆಹೋವನಿಗೆ ಅರ್ಥವಾಯಿತು. ಆದ್ದರಿಂದ, ಅವರನ್ನು ತಾಕುವವನು ಆತನ ಕಣ್ಣುಗುಡ್ಡೆಯನ್ನು ತಾಕುತ್ತಿದ್ದಾರೆಂದು ಹೇಳಿದನು. (ಜೆಕ. 2:8) ತಾಯಿಗೆ ತನ್ನ ಮಗುವಿನ ಮೇಲೆ ಪ್ರೀತಿ ಇರುವ ಹಾಗೆ ಯೆಹೋವನಿಗೆ ಆತನ ಸೇವಕರ ಮೇಲೆ ಪ್ರೀತಿ ಇದೆ ಮತ್ತು ಸಹಾಯ ಮಾಡುವುದಕ್ಕೆ ಬಯಸುತ್ತಾನೆ. (ಯೆಶಾ. 49:15) ಯೆಹೋವನ ಈ ಪ್ರೀತಿಯನ್ನು ನಾವು ಅನುಕರಿಸಬೇಕು. ಹೇಗೆ? ಬೇರೆಯವರಿಗೆ ಹೇಗನಿಸುತ್ತದೆಂದು ಅರ್ಥ ಮಾಡಿಕೊಳ್ಳಲು ನಾವು ಅವರ ಸನ್ನಿವೇಶದಲ್ಲಿ ನಿಂತು ಯೋಚಿಸಬೇಕು.—ಕೀರ್ತ. 103:13, 14.

ಯೇಸು ಯೆಹೋವನನ್ನು ಅನುಕರಿಸಿ ಜನರನ್ನು ಪ್ರೀತಿಸಿದನು

3. ಯೇಸುವಿಗೆ ಜನರ ಬಗ್ಗೆ ಹೇಗನಿಸಿತು?

3 ಜನರಿಗೆ ಬಂದಂಥ ಎಲ್ಲಾ ಕಷ್ಟಗಳು ಯೇಸುವಿಗೆ ಯಾವತ್ತೂ ಬರಲಿಲ್ಲವಾದರೂ ಅವರಿಗೆ ಹೇಗನಿಸಿತೆಂದು ಅವನಿಗೆ ಅರ್ಥವಾಯಿತು. ಉದಾಹರಣೆಗೆ ಅನೇಕ ಜನರು ತುಂಬ ಕಷ್ಟದ ಜೀವನ ನಡೆಸುತ್ತಿದ್ದಾರೆಂದು ಅವನಿಗೆ ಗೊತ್ತಿತ್ತು. ಧರ್ಮಗುರುಗಳು ಅವರಿಗೆ ಸುಳ್ಳುಗಳನ್ನು ಕಲಿಸುತ್ತಿದ್ದರು ಮತ್ತು ದೇವರು ಹೇಳಿರದ ತುಂಬ ನಿಯಮಗಳನ್ನು ಮಾಡಿದರು. ಜನರು ಇವರಿಗೆ ಭಯಪಡುತ್ತಿದ್ದರು. (ಮತ್ತಾ. 23:4; ಮಾರ್ಕ 7:1-5; ಯೋಹಾ. 7:13) ಆದರೆ ಯೇಸು ಈ ಧರ್ಮಗುರುಗಳಿಗೆ ಭಯಪಡಲಿಲ್ಲ, ಅವರ ಸುಳ್ಳುಗಳನ್ನೂ ನಂಬಲಿಲ್ಲ. ಹಾಗಿದ್ದರೂ ಜನರಿಗೆ ಹೇಗನಿಸಿತೆಂದು ಅವನಿಗೆ ಅರ್ಥವಾಯಿತು. ಅವರೊಟ್ಟಿಗೆ ಧರ್ಮಗುರುಗಳು ಕೆಟ್ಟದ್ದಾಗಿ ನಡೆದುಕೊಳ್ಳುತ್ತಾ ಇದ್ದದ್ದು ಯೇಸುವಿಗೆ ತುಂಬ ನೋವು ತಂದಿತು. ಜನರು “ಕುರುಬನಿಲ್ಲದ ಕುರಿಗಳ ಹಾಗೆ” ನಿಸ್ಸಹಾಯಕರಾಗಿದ್ದರು. (ಮತ್ತಾ. 9:36) ಅವರನ್ನು ಪ್ರೀತಿಸಲು, ಕನಿಕರ, ದಯೆ ತೋರಿಸಲು ಯೇಸು ತನ್ನ ತಂದೆಯಿಂದ ಕಲಿತನು.—ಕೀರ್ತ. 103:8.

4. ಕಷ್ಟದಲ್ಲಿದ್ದ ಜನರನ್ನು ಯೇಸು ನೋಡಿದಾಗ ಅವನು ಏನು ಮಾಡಿದನು?

4 ಕಷ್ಟದಲ್ಲಿದ್ದ ಜನರಿಗೆ ಯೇಸು ಸಹಾಯ ಮಾಡಿದನು ಏಕೆಂದರೆ ಅವನಿಗೆ ಅವರ ಮೇಲೆ ಪ್ರೀತಿಯಿತ್ತು. ಅವನು ತನ್ನ ತಂದೆಯಂತಿದ್ದನು. ಉದಾಹರಣೆಗೆ ಒಮ್ಮೆ ಯೇಸುವಿನ ಅಪೊಸ್ತಲರು ತುಂಬ ದೂರ ಪ್ರಯಾಣ ಮಾಡಿ ಆಯಾಸಗೊಂಡಿದ್ದರು. ಆಗ ಪ್ರಶಾಂತವಾದ ಜಾಗಕ್ಕೆ ಹೋಗಿ ವಿಶ್ರಾಂತಿ ಪಡೆಯಬೇಕೆಂದಿದ್ದರು. ಆದರೆ ತನಗಾಗಿ ಅನೇಕ ಜನರು ಕಾಯುತ್ತಿದ್ದದ್ದನ್ನು ಯೇಸು ಕಂಡನು. ಅವರಿಗೆ ತನ್ನ ಸಹಾಯ ಬೇಕೆಂದು ಅವನಿಗೆ ಅರ್ಥವಾಯಿತು. ಆದ್ದರಿಂದ “ಅವರಿಗೆ ಅನೇಕ ವಿಷಯಗಳನ್ನು ಬೋಧಿಸಲಾರಂಭಿಸಿದನು.”—ಮಾರ್ಕ 6:30, 31, 34.

ಯೆಹೋವನಂತೆ ಪ್ರೀತಿಯುಳ್ಳವರಾಗಿರಿ

5, 6. ಯೆಹೋವನಂತೆ ಪ್ರೀತಿಯುಳ್ಳವರು ಆಗಿರಬೇಕಾದರೆ ನಾವೇನು ಮಾಡಬೇಕು? ಉದಾಹರಣೆ ಕೊಡಿ. (ಲೇಖನದ ಆರಂಭದ ಚಿತ್ರ ನೋಡಿ.)

5 ಯೆಹೋವನಂತೆ ಪ್ರೀತಿಯುಳ್ಳವರು ಆಗಿರಬೇಕಾದರೆ ನಾವೇನು ಮಾಡಬೇಕು? ಈ ಸನ್ನಿವೇಶದ ಬಗ್ಗೆ ಸ್ವಲ್ಪ ಯೋಚಿಸಿ. ಆ್ಯಲನ್‌ ಎಂಬ ಹೆಸರಿನ ಒಬ್ಬ ಯುವ ಸಹೋದರನಿದ್ದಾನೆ. ಚೆನ್ನಾಗಿ ನಡೆಯಲಿಕ್ಕಾಗದ, ಸರಿಯಾಗಿ ಕಣ್ಣು ಕಾಣದ ಒಬ್ಬ ವಯಸ್ಸಾದ ಸಹೋದರನ ಬಗ್ಗೆ ಅವನು ಯೋಚಿಸುತ್ತಿದ್ದಾನೆ. ಯೇಸುವಿನ ಈ ಮಾತು ಅವನ ಮನಸ್ಸಿಗೆ ಬರುತ್ತಿದೆ: “ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅದನ್ನೇ ನೀವು ಸಹ ಅವರಿಗೆ ಮಾಡಿರಿ.” (ಲೂಕ 6:31) ಆದ್ದರಿಂದ ಆ್ಯಲನ್‌ ತನ್ನನ್ನೇ ಹೀಗೆ ಕೇಳಿಕೊಳ್ಳುತ್ತಾನೆ: ‘ಬೇರೆಯವರು ನನಗೆ ಏನು ಮಾಡಬೇಕೆಂದು ಬಯಸುತ್ತೇನೆ?’ ಅವನೇ ಉತ್ತರ ಕೊಡುತ್ತಾ ‘ನನ್ನ ಜೊತೆ ಅವರು ಫುಟ್‌ಬಾಲ್‌ ಆಡಬೇಕಂತ ನನಗಿಷ್ಟ’ ಎಂದು ಹೇಳುತ್ತಾನೆ. ಆದರೆ ವಯಸ್ಸಾದ ಸಹೋದರನಿಗೆ ಓಡಲು ಮತ್ತು ಫುಟ್‌ಬಾಲ್ ಆಡಲು ಆಗುವುದಿಲ್ಲ. ಹಾಗಾಗಿ ನಿಜವಾಗಲೂ ಆ್ಯಲನ್‌ ತನ್ನನ್ನೇ ಏನು ಕೇಳಿಕೊಳ್ಳಬೇಕೆಂದರೆ, ‘ಒಂದುವೇಳೆ ನಾನು ಆ ಸಹೋದರನಾಗಿದ್ದರೆ ಬೇರೆಯವರು ನನಗೆ ಏನು ಮಾಡಬೇಕೆಂದು ಬಯಸುತ್ತಿದ್ದೆ?’

6 ಆ್ಯಲನ್‌ ಇನ್ನೂ ಯುವಕನಾಗಿದ್ದಾನೆ. ಆದರೆ ತನಗೆ ವಯಸ್ಸಾಗಿರುತ್ತಿದ್ದರೆ ಹೇಗನಿಸುತ್ತಿತ್ತೆಂದು ಮನಸ್ಸಲ್ಲೇ ಚಿತ್ರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ವಯಸ್ಸಾದ ಆ ಸಹೋದರನೊಟ್ಟಿಗೆ ಸಮಯ ಕಳೆಯುತ್ತಾನೆ, ಸಹೋದರನು ಮಾತಾಡುವಾಗ ಗಮನಕೊಟ್ಟು ಕೇಳುತ್ತಾನೆ. ಈ ಸಹೋದರನಿಗೆ ಬೈಬಲ್ ಓದಲು, ಸೇವೆಯಲ್ಲಿ ಮನೆಯಿಂದ ಮನೆಗೆ ನಡೆಯಲು ಕಷ್ಟವೆಂದು ಆಗ ಅವನಿಗೆ ಅರ್ಥವಾಗುತ್ತದೆ. ಅವರಿಗೆ ಹೇಗೆ ಸಹಾಯ ಮಾಡಬಹುದೆಂದು ಆ್ಯಲನ್‌ ಯೋಚಿಸುತ್ತಾನೆ. ತನ್ನಿಂದಾದ ಎಲ್ಲಾ ಸಹಾಯ ಮಾಡಲು ಬಯಸುತ್ತಾನೆ. ಬೇರೆಯವರಿಗೆ ಹೇಗನಿಸುತ್ತದೆಂದು ನಾವು ಅರ್ಥಮಾಡಿಕೊಂಡು ಪ್ರೀತಿ ತೋರಿಸುವಾಗ ಯೆಹೋವನನ್ನು ಅನುಕರಿಸುತ್ತಿದ್ದೇವೆ.—1 ಕೊರಿಂ. 12:26.

ಪ್ರೀತಿ ತೋರಿಸುವ ಮೂಲಕ ಯೆಹೋವನನ್ನು ಅನುಕರಿಸಿ (ಪ್ಯಾರ 7 ನೋಡಿ)

7. ನಮ್ಮ ಸಹೋದರರ ಕಷ್ಟವನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬಹುದು?

7 ಬೇರೆಯವರ ಕಷ್ಟ ಅರ್ಥ ಮಾಡಿಕೊಳ್ಳುವುದು ಯಾವಾಗಲೂ ಸುಲಭವಲ್ಲ. ನಮಗೆ ಆ ಸನ್ನಿವೇಶ ಯಾವತ್ತೂ ಬಂದಿಲ್ಲವಾದರೆ ಇನ್ನೂ ಕಷ್ಟ. ಉದಾಹರಣೆಗೆ, ನಮ್ಮ ಅನೇಕ ಸಹೋದರರು ಕಾಯಿಲೆಯಿಂದಲೊ, ದೇಹಕ್ಕಾದ ಗಂಭೀರ ಗಾಯದಿಂದಲೊ, ಇಳಿವಯಸ್ಸಿನಿಂದಲೊ ತುಂಬ ನೋವಿನಲ್ಲಿದ್ದಾರೆ. ಇನ್ನು ಕೆಲವರಿಗೆ ಖಿನ್ನತೆ ಅಥವಾ ಅತಿಯಾದ ಚಿಂತೆ ಕಾಡುತ್ತಿರಬಹುದು. ಅಥವಾ ಹಿಂದೆ ಯಾವತ್ತೊ ನಡೆದ ದೌರ್ಜನ್ಯದ ನೆನಪುಗಳಿಂದ ಒಳಗೊಳಗೇ ಕಷ್ಟಪಡುತ್ತಿರಬಹುದು. ಕೆಲವರು ಒಂಟಿ ಹೆತ್ತವರಾಗಿದ್ದು ಮಕ್ಕಳನ್ನು ಒಬ್ಬರೇ ಬೆಳೆಸುತ್ತಾ ಇರಬಹುದು. ಅಥವಾ ಅವರ ಕುಟುಂಬ ಸದಸ್ಯರು ಯೆಹೋವನ ಆರಾಧಕರಲ್ಲದೆ ಇರಬಹುದು. ಎಲ್ಲರಿಗೂ ಸಮಸ್ಯೆಗಳಿವೆ. ಅದರಲ್ಲಿ ಹೆಚ್ಚಿನ ಸಮಸ್ಯೆಗಳು ನಮ್ಮ ಸಮಸ್ಯೆಗಳಿಗಿಂತ ಭಿನ್ನವಾಗಿರುತ್ತವೆ. ಆದರೆ ನಾವು ಬೇರೆಯವರಿಗೆ ಪ್ರೀತಿ ತೋರಿಸಬೇಕು, ಸಹಾಯ ಮಾಡಬೇಕು. ಇದನ್ನು ಮಾಡುವುದು ಹೇಗೆ? ಎಲ್ಲರಿಗೂ ಒಂದೇ ರೀತಿಯ ಸಹಾಯದ ಅಗತ್ಯವಿರುವುದಿಲ್ಲ. ಆದ್ದರಿಂದ ಆ ವ್ಯಕ್ತಿ ಮಾತಾಡುವಾಗ ನಾವು ಗಮನಕೊಟ್ಟು ಕೇಳಬೇಕು ಮತ್ತು ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಆಗ ಅವರಿಗೆ ಯಾವ ಸಹಾಯಕೊಟ್ಟರೆ ಒಳ್ಳೇದು ಎಂದು ನಮಗೆ ಗೊತ್ತಾಗುತ್ತದೆ. ಬಹುಶಃ ಆ ವ್ಯಕ್ತಿಯ ಸಮಸ್ಯೆ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆಂದು ನಾವು ಅವರಿಗೆ ನೆನಪಿಸಬಹುದು. ಅಥವಾ ಬೇರೆ ವಿಧಗಳಲ್ಲಿ ಅವರಿಗೆ ಸಹಾಯ ಮಾಡಬಹುದು. ಹೀಗೆ ನಾವು ಯೆಹೋವನನ್ನು ಅನುಕರಿಸುತ್ತೇವೆ.—ರೋಮನ್ನರಿಗೆ 12:15; 1 ಪೇತ್ರ 3:8 ಓದಿ.

ಯೆಹೋವನಂತೆ ದಯೆ ತೋರಿಸಿ

8. ದಯೆ ತೋರಿಸಲು ಯೇಸುವಿಗೆ ಸಹಾಯ ಮಾಡಿದ್ದೇನು?

8 ಯೆಹೋವನು ಎಲ್ಲಾ ಮನುಷ್ಯರಿಗೆ ದಯೆ ತೋರಿಸುತ್ತಾನೆ. (ಲೂಕ 6:35) ತನ್ನ ತಂದೆಗಿರುವ ಈ ಗುಣ ಯೇಸುವಿಗೂ ಇದೆ. ಭೂಮಿಯಲ್ಲಿದ್ದಾಗ ಜನರಿಗೆ ದಯೆ ತೋರಿಸಲು ಯೇಸುವಿಗೆ ಸಹಾಯ ಮಾಡಿದ್ದು ಯಾವುದು? ತಾನೇನು ಮಾಡುತ್ತೇನೊ, ಹೇಳುತ್ತೇನೊ ಅದರ ಬಗ್ಗೆ ಜನರಿಗೆ ಏನು ಅನಿಸಬಹುದೆಂದು ಯೇಸು ಮನಸ್ಸಲ್ಲಿ ಚಿತ್ರಿಸಿಕೊಂಡನು. ಉದಾಹರಣೆಗೆ ಕೆಟ್ಟ ಕೆಲಸ ಮಾಡುತ್ತಿದ್ದ ಸ್ತ್ರೀಯೊಬ್ಬಳು ಯೇಸುವಿನ ಹತ್ತಿರ ಬಂದಳು. ಅವಳೆಷ್ಟು ಅಳುತ್ತಿದ್ದಳೆಂದರೆ ಯೇಸುವಿನ ಕಾಲ ಬಳಿ ಕೂತು ಅತ್ತಾಗ ಅವನ ಪಾದಗಳ ಮೇಲೆ ಅವಳ ಕಣ್ಣೀರು ಬಿತ್ತು. ಅವಳು ಮಾಡಿದ ತಪ್ಪು ಕೆಲಸದ ಬಗ್ಗೆ ತುಂಬ ದುಃಖಪಟ್ಟು ಪಶ್ಚಾತ್ತಾಪಪಟ್ಟಿದ್ದು ಯೇಸುವಿಗೆ ಕಾಣುತ್ತಿತ್ತು. ಒಂದುವೇಳೆ ಅವನು ಅವಳೊಂದಿಗೆ ಒರಟಾಗಿ ನಡೆದುಕೊಳ್ಳುತ್ತಿದ್ದರೆ ಅವಳಿನ್ನೂ ನೊಂದುಕೊಳ್ಳುತ್ತಿದ್ದಳೆಂದು ಯೇಸುವಿಗೆ ಗೊತ್ತಾಯಿತು. ಅವಳು ಮಾಡಿದ ಒಳ್ಳೇ ಕೆಲಸಕ್ಕೆ ಅವಳನ್ನು ಶ್ಲಾಘಿಸಿ ಕ್ಷಮಿಸಿದನು. ಯೇಸು ಆ ಸ್ತ್ರೀಗಾಗಿ ಮಾಡಿದ್ದನ್ನು ಒಪ್ಪದೇ ಇದ್ದ ಫರಿಸಾಯನೊಟ್ಟಿಗೂ ಯೇಸು ದಯೆಯಿಂದ ಮಾತಾಡಿದನು.—ಲೂಕ 7:36-48.

9. ಯೆಹೋವನಂತೆ ದಯೆ ತೋರಿಸಲಿಕ್ಕೆ ನಮಗೆ ಯಾವುದು ಸಹಾಯ ಮಾಡುತ್ತದೆ? ಉದಾಹರಣೆ ಕೊಡಿ.

9 ಯೆಹೋವನಂತೆ ನಾವು ಹೇಗೆ ದಯೆ ತೋರಿಸಬಹುದು? ಏನನ್ನಾದರೂ ಹೇಳುವ ಅಥವಾ ಮಾಡುವ ಮುಂಚೆ ಯೋಚನೆ ಮಾಡುವುದು ಒಳ್ಳೇದು. ಹೀಗೆ ಮಾಡಿದರೆ ಬೇರೆಯವರ ಮನನೋಯಿಸದೆ ಸೌಮ್ಯವಾಗಿ ನಡೆದುಕೊಳ್ಳಲು ನೆರವಾಗುತ್ತದೆ. ಒಬ್ಬ ಕ್ರೈಸ್ತನು “ಜಗಳವಾಡದೆ ಎಲ್ಲರೊಂದಿಗೆ ಕೋಮಲಭಾವದಿಂದಿರಬೇಕು” ಎಂದು ಪೌಲ ಬರೆದನು. (2 ತಿಮೊ. 2:24) ಉದಾಹರಣೆಗೆ ಈ ಸನ್ನಿವೇಶಗಳಲ್ಲಿ ಹೇಗೆ ದಯೆ ತೋರಿಸಬಹುದೆಂದು ಯೋಚಿಸಿ: ಕೆಲಸದ ಸ್ಥಳದಲ್ಲಿ ನಿಮಗಿಂತ ಮೇಲಿನ ಸ್ಥಾನದಲ್ಲಿರುವ ವ್ಯಕ್ತಿ ತನ್ನ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಅವನೊಂದಿಗೆ ಹೇಗೆ ವರ್ತಿಸುತ್ತೀರಾ? ಅನೇಕ ತಿಂಗಳುಗಳಿಂದ ರಾಜ್ಯ ಸಭಾಗೃಹಕ್ಕೆ ಬಂದಿರದ ಒಬ್ಬ ಸಹೋದರನು ಕೂಟಗಳಿಗೆ ಬಂದರೆ ಅವರಿಗೆ ಏನನ್ನುತ್ತೀರಾ? ಸೇವೆಗೆ ಹೋದಾಗ ಮನೆಯವರೊಬ್ಬರು ‘ನನಗೀಗ ಸಮಯವಿಲ್ಲ’ ಎಂದು ಹೇಳಿದರೆ ಅವರಿಗೆ ಹೇಗೆ ದಯೆ ತೋರಿಸುತ್ತೀರಾ? ನೀವು ಮಾಡಿದ ಯಾವುದೊ ಯೋಜನೆ ಬಗ್ಗೆ ಯಾಕೆ ಹೇಳಲಿಲ್ಲ ಎಂದು ಹೆಂಡತಿ ಕೇಳಿದಾಗ ಅವಳೊಟ್ಟಿಗೆ ದಯೆಯಿಂದ ಮಾತಾಡುತ್ತೀರಾ? ಬೇರೆಯವರಿಗೆ ಹೇಗನಿಸುತ್ತದೆ, ನಮ್ಮ ಮಾತುಗಳು ಅವರ ಮೇಲೆ ಯಾವ ಪ್ರಭಾವ ಬೀರಬಹುದೆಂದು ನಾವು ಮನಸ್ಸಲ್ಲಿ ಚಿತ್ರಿಸಿಕೊಳ್ಳಬೇಕು. ಆಗ ಯೆಹೋವನಂತೆ ದಯೆ ತೋರಿಸಲು ನಾವೇನು ಮಾಡಬೇಕು ಮತ್ತು ಹೇಳಬೇಕೆಂದು ನಮಗೆ ಗೊತ್ತಾಗುತ್ತದೆ.—ಜ್ಞಾನೋಕ್ತಿ 15:28 ಓದಿ.

ಯೆಹೋವನಂತೆ ವಿವೇಕಿಗಳಾಗಿರಿ

10, 11. ದೇವರ ವಿವೇಕವನ್ನು ನಾವು ಹೇಗೆ ಅನುಕರಿಸಬಹುದು? ಒಂದು ಉದಾಹರಣೆ ಕೊಡಿ.

10 ನಮ್ಮಿಂದ ಊಹಿಸಲಿಕ್ಕಾದಷ್ಟು ವಿವೇಕ ಯೆಹೋವನಿಗಿದೆ. ಭವಿಷ್ಯದಲ್ಲಿ ಏನಾಗಲಿದೆ ಎಂದು ಆತನಿಗೆ ಚೆನ್ನಾಗಿ ಗೊತ್ತು. ಆದರೆ ನಾವೀಗ ಏನು ಮಾಡುತ್ತೇವೊ ಭವಿಷ್ಯದಲ್ಲಿ ಅದರ ಪರಿಣಾಮ ಏನಾಗಲಿದೆಯೆಂದು ನಮಗೆ ನಿಖರವಾಗಿ ಗೊತ್ತಿಲ್ಲ. ಹಾಗಿದ್ದರೂ ನಾವು ವಿವೇಕಿಗಳಾಗಿರಬಹುದು. ಹೇಗೆ? ನಾವು ಮಾಡಲಿರುವ ತೀರ್ಮಾನ ನಮ್ಮ ಮೇಲೆ ಅಥವಾ ಬೇರೆಯವರ ಮೇಲೆ ಯಾವ ಪರಿಣಾಮ ಬೀರಬಹುದೆಂದು ಮುಂಚೆಯೇ ಮನಸ್ಸಲ್ಲಿ ಚಿತ್ರಿಸಿಕೊಳ್ಳಬಹುದು. ಇಸ್ರಾಯೇಲ್ಯರಂತೆ ನಾವಿರಬಾರದು. ಯೆಹೋವನಿಗೆ ಅವಿಧೇಯರಾದರೆ ತಮಗೆ ಏನಾಗಬಹುದು ಎಂದಾಗಲಿ ಆತನೊಟ್ಟಿಗಿದ್ದ ಸಂಬಂಧದ ಬಗ್ಗೆಯಾಗಲಿ ಅವರು ಒಂದು ಕ್ಷಣವೂ ಯೋಚಿಸಲಿಲ್ಲ. ಆತನು ಅವರಿಗಾಗಿ ಮಾಡಿದ ವಿಷಯಗಳ ಬಗ್ಗೆಯೂ ಚಿಂತಿಸಲಿಲ್ಲ. ಮೋಶೆಗೆ ಇದರ ಬಗ್ಗೆ ಗೊತ್ತಿತ್ತು. ಆದ್ದರಿಂದಲೇ ಅವರು ತಪ್ಪು ಮಾಡಲಿದ್ದಾರೆಂದು ಅವನಿಗೆ ತಿಳಿದುಬಂತು. ಅವನು ಹೀಗಂದನು: “ಅವರು ಆಲೋಚನೆಯಿಲ್ಲದ ಜನರು; ಅವರಿಗೆ ಸ್ವಲ್ಪವಾದರೂ ವಿವೇಕವಿಲ್ಲ. ಅವರಿಗೆ ಜ್ಞಾನವಿದ್ದರೆ ಈ ಸಂಗತಿಗಳನ್ನೆಲ್ಲಾ ಗ್ರಹಿಸುತ್ತಿದ್ದರು; ತಮಗೆ ಅಂತ್ಯದಲ್ಲಿ ದುರವಸ್ಥೆಪ್ರಾಪ್ತವಾಗುವದೆಂದು ತಿಳಿದುಕೊಳ್ಳುತ್ತಿದ್ದರು.”—ಧರ್ಮೋ. 31:29, 30; 32:28, 29.

11 ಉದಾಹರಣೆಗೆ ವಿವಾಹದ ಮುಂಚೆ ನಿಮ್ಮ ಸಂಗಾತಿಯ ಪರಿಚಯ ಮಾಡಿಕೊಳ್ಳಲು ಒಟ್ಟಿಗೆ ಸಮಯ ಕಳೆಯುತ್ತಿದ್ದೀರೆಂದು ನೆನಸಿ. ಆ ವ್ಯಕ್ತಿ ಕಡೆಗೆ ನೀವು ಆಕರ್ಷಿತರಾಗಿರುವುದರಿಂದ ನಿಮ್ಮ ಭಾವನೆಗಳನ್ನು ಮತ್ತು ಲೈಂಗಿಕ ಆಸೆಗಳನ್ನು ನಿಯಂತ್ರಿಸುವುದು ಕಷ್ಟ ಎಂದು ನೆನಪಿಡಿ. ಆದ್ದರಿಂದ ಯೆಹೋವನೊಟ್ಟಿಗಿರುವ ಅಮೂಲ್ಯ ಸಂಬಂಧಕ್ಕೆ ಹಾನಿ ತರುವ ಯಾವುದನ್ನೂ ಮಾಡಬೇಡಿ. ವಿವೇಕಿಗಳಾಗಿದ್ದು ಅಪಾಯದಿಂದ ದೂರವಿರಿ. ಯೆಹೋವನ ಈ ಬುದ್ಧಿಮಾತಿಗೆ ಕಿವಿಗೊಡಿ: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.”—ಜ್ಞಾನೋ. 22:3.

ನಿಮ್ಮ ಯೋಚನೆಗಳನ್ನು ಹತೋಟಿಯಲ್ಲಿಡಿ

12. ನಾವು ಯೋಚಿಸುವ ವಿಷಯಗಳು ನಮಗೆ ಹೇಗೆ ಹಾನಿ ತರಬಹುದು?

12 ಒಬ್ಬ ವಿವೇಕಿಯು ತನ್ನ ಯೋಚನೆಗಳನ್ನು ಹತೋಟಿಯಲ್ಲಿಡುತ್ತಾನೆ. ನಮ್ಮ ಯೋಚನೆಗಳಿಂದ ನಮಗೆ ಸಹಾಯವಾಗುತ್ತದೆ ಅಥವಾ ಹಾನಿಯಾಗುತ್ತದೆ. ಅದು ಬೆಂಕಿಯ ಹಾಗಿದೆ. ಬೆಂಕಿಯಿಂದ ಅಡುಗೆಯನ್ನೂ ಮಾಡಬಹುದು. ಜಾಗ್ರತೆ ವಹಿಸಲಿಲ್ಲವೆಂದರೆ ಅದೇ ಬೆಂಕಿ ಮನೆಯನ್ನು ಸುಟ್ಟು ಹಾಕಬಹುದು ಅಥವಾ ನಮ್ಮ ಜೀವವನ್ನೂ ತೆಗೆಯಬಹುದು. ಇದು ನಮ್ಮ ಯೋಚನೆಗಳ ವಿಷಯದಲ್ಲೂ ನಿಜ. ನಾವು ಯೆಹೋವನಿಂದ ಕಲಿಯುವ ವಿಷಯಗಳ ಬಗ್ಗೆ ಯೋಚಿಸುವಾಗ ನಮಗೇ ಒಳ್ಳೇದಾಗುತ್ತದೆ. ಆದರೆ ಲೈಂಗಿಕ ಅನೈತಿಕತೆ ಬಗ್ಗೆ ಯೋಚನೆ ಮಾಡುತ್ತಾ ಅದನ್ನು ಮನಸ್ಸಲ್ಲಿ ಚಿತ್ರಿಸಿಕೊಳ್ಳುತ್ತಿದ್ದರೆ ಆ ಆಸೆ ಬಲಗೊಂಡು ಕೊನೆಗೊಂದು ದಿನ ಅದನ್ನು ಮಾಡೇಬಿಡುತ್ತೇವೆ. ಇದರಿಂದ ಯೆಹೋವನೊಟ್ಟಿಗಿನ ನಮ್ಮ ಸಂಬಂಧ ಕಡಿದುಹೋಗುವ ಸಾಧ್ಯತೆ ಇದೆ.—ಯಾಕೋಬ 1:14, 15 ಓದಿ.

13. ಹವ್ವಳು ತನ್ನ ಜೀವನದ ಕುರಿತು ಮನಸ್ಸಲ್ಲಿ ಏನನ್ನು ಚಿತ್ರಿಸಿಕೊಂಡಳು?

13 ಮೊದಲನೇ ಸ್ತ್ರೀಯಾದ ಹವ್ವಳಿಂದ ನಾವೊಂದು ಪಾಠ ಕಲಿಯುತ್ತೇವೆ. ಯೆಹೋವನು ಆದಾಮಹವ್ವರಿಗೆ ‘ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು’ ತಿನ್ನಬಾರದೆಂದು ಆಜ್ಞೆ ಕೊಟ್ಟಿದ್ದನು. (ಆದಿ. 2:16, 17) ಆದರೆ ಸೈತಾನ ಹವ್ವಳಿಗೆ ಹೀಗಂದನು: “ನೀವು ಹೇಗೂ ಸಾಯುವದಿಲ್ಲ; ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು.” ಒಳ್ಳೇದು ಯಾವುದು ಕೆಟ್ಟದ್ದು ಯಾವುದೆಂದು ತಾನೇ ತೀರ್ಮಾನ ಮಾಡಿದರೆ ತನ್ನ ಜೀವನ ಎಷ್ಟು ಚೆನ್ನಾಗಿರುತ್ತದೆಂದು ಹವ್ವಳು ಮನಸ್ಸಲ್ಲಿ ಚಿತ್ರಿಸಿಕೊಂಡಳು. ಅವಳು ಇದರ ಬಗ್ಗೆಯೇ ಯೋಚನೆ ಮಾಡುತ್ತಾ “ಆ ಮರದ ಹಣ್ಣು ತಿನ್ನುವದಕ್ಕೆ ಉತ್ತಮವಾಗಿಯೂ ನೋಡುವದಕ್ಕೆ ರಮ್ಯವಾಗಿಯೂ ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ” ಎಂದು ಅಂದುಕೊಂಡಳು. ಆಮೇಲೆ ಏನಾಯಿತು? “ಅದನ್ನು ತೆಗೆದುಕೊಂಡು ತಿಂದಳು. ಸಂಗಡ ಇದ್ದ ಗಂಡನಿಗೂ ಕೊಡಲು ಅವನೂ ತಿಂದನು.” (ಆದಿ. 3:1-6) ಇದರ ಪರಿಣಾಮವಾಗಿ ‘ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿತು.’ (ರೋಮ. 5:12) ತಪ್ಪಾದ ವಿಷಯದ ಬಗ್ಗೆ ಹವ್ವ ಯೋಚಿಸುತ್ತಾ ಇರಬಾರದಾಗಿತ್ತು.

14. ಲೈಂಗಿಕ ಅನೈತಿಕತೆಯ ಬಗ್ಗೆ ಯಾವ ಎಚ್ಚರಿಕೆಗಳನ್ನು ಬೈಬಲ್‌ ನಮಗೆ ಕೊಡುತ್ತದೆ?

14 ಹವ್ವಳು ಮಾಡಿದ ತಪ್ಪಲ್ಲಿ ಲೈಂಗಿಕ ಅನೈತಿಕತೆ ಇರಲಿಲ್ಲ ನಿಜ. ಆದರೆ ಬೈಬಲ್‌ ನಮಗೆ ಸ್ಪಷ್ಟವಾಗಿ ಎಚ್ಚರಿಸುವುದೇನೆಂದರೆ ಯಾವುದೇ ರೀತಿಯ ಅನೈತಿಕ ವಿಷಯಗಳನ್ನು ನಾವು ಯೋಚಿಸುತ್ತಾ ಇರಬಾರದು. ಯೇಸು ಹೀಗಂದನು: “ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ.” (ಮತ್ತಾ. 5:28) ಪೌಲನು ಎಚ್ಚರಿಸಿದ್ದು: “ಶಾರೀರಿಕ ಇಚ್ಛೆಗಳನ್ನು ಪೂರೈಸಲು ಮುಂದಾಗಿಯೇ ಯೋಜಿಸುವವರಾಗಬೇಡಿರಿ.”—ರೋಮ. 13:14.

15. ಯಾವ ನಿಕ್ಷೇಪಗಳ ಮೇಲೆ ನಮ್ಮ ಗಮನ ಇರಬೇಕು? ಏಕೆ?

15 ಯೆಹೋವನನ್ನು ಸಂತೋಷಪಡಿಸುವುದಕ್ಕೆ ನಾವು ಗಮನ ಕೊಡಬೇಕು ಮತ್ತು ಶ್ರೀಮಂತರಾಗುವುದರ ಬಗ್ಗೆ ಯೋಚಿಸುತ್ತಾ ಇರಬಾರದೆಂದು ಬೈಬಲ್‌ ಹೇಳುತ್ತದೆ. ಒಬ್ಬ ವ್ಯಕ್ತಿ ಶ್ರೀಮಂತನಾಗಿದ್ದರೂ ಅವನ ಹಣ ಅವನನ್ನು ನಿಜವಾಗಲೂ ಕಾಪಾಡುವುದಿಲ್ಲ. (ಜ್ಞಾನೋ. 18:11) ತನ್ನ ಜೀವನದಲ್ಲಿ ಯೆಹೋವನಿಗೆ ಮೊದಲ ಸ್ಥಾನ ಕೊಡದೆ ತನಗಾಗಿಯೇ ನಿಕ್ಷೇಪಗಳನ್ನು ಕೂಡಿಸಿ ಇಡುವ ವ್ಯಕ್ತಿ ಬುದ್ಧಿಹೀನನೆಂದು ಯೇಸು ಹೇಳಿದನು. ಅವನು ‘ದೇವರ ವಿಷಯದಲ್ಲಿ ಐಶ್ವರ್ಯವಂತನಲ್ಲ.’ (ಲೂಕ 12:16-21) ಹಾಗಾಗಿ ನಾವು ‘ಸ್ವರ್ಗದಲ್ಲಿ ಸಂಪತ್ತನ್ನು’ ಕೂಡಿಸಿಡಬೇಕಾದರೆ ಯೆಹೋವನು ಮೆಚ್ಚುವ ವಿಷಯಗಳನ್ನು ಮಾಡಬೇಕು. ಹೀಗೆ ಯೆಹೋವನನ್ನೂ ಸಂತೋಷಪಡಿಸುತ್ತೇವೆ. ನಮಗೂ ಖುಷಿಯಾಗುತ್ತದೆ. (ಮತ್ತಾ. 6:20; ಜ್ಞಾನೋ. 27:11) ಯೆಹೋವನೊಟ್ಟಿಗಿರುವ ಒಳ್ಳೇ ಸಂಬಂಧ ಬೇರೆಲ್ಲದ್ದಕ್ಕಿಂತಲೂ ಅಮೂಲ್ಯವಾದದ್ದು.

ಚಿಂತೆ ಮಾಡುತ್ತಾ ಇರಬೇಡಿ

16. ತುಂಬ ಚಿಂತೆಗಳಿರುವಾಗ ನಮಗೆ ಯಾವುದು ಸಹಾಯಮಾಡಬಹುದು?

16 ಈ ಲೋಕದಲ್ಲಿ ಶ್ರೀಮಂತರಾಗಲು ಪ್ರಯತ್ನ ಮಾಡಿದರೆ ನೂರಾರು ಚಿಂತೆ ನಮ್ಮ ಬೆನ್ನು ಹತ್ತುವುದಂತೂ ಖಂಡಿತ. (ಮತ್ತಾ. 6:19) ಯಾವಾಗಲೂ ಹಣದ ಬಗ್ಗೆ ಚಿಂತೆ ಮಾಡುವವರಿಗೆ ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡಲು ಕಷ್ಟವಾಗುತ್ತದೆಂದು ಯೇಸು ಹೇಳಿದನು. (ಮತ್ತಾ. 13:18, 19, 22) ಇನ್ನು ಕೆಲವರು ತಮಗೆ ಆಗಬಹುದಾದ ಕೆಟ್ಟ ವಿಷಯಗಳ ಬಗ್ಗೆಯೇ ಯಾವಾಗಲೂ ಚಿಂತೆ ಮಾಡುತ್ತಾ ಇರುತ್ತಾರೆ. ಆದರೆ ಹೀಗೆ ಮಾಡುವುದರಿಂದ ಯೆಹೋವನ ಮೇಲಿರುವ ನಂಬಿಕೆಯನ್ನು ನಾವು ಕಳೆದುಕೊಳ್ಳಬಹುದು ಅಥವಾ ಕಾಯಿಲೆಬೀಳಬಹುದು. ಚಿಂತೆ ಮಾಡುವ ಬದಲು ಯೆಹೋವನು ಸಹಾಯ ಮಾಡುತ್ತಾನೆಂದು ನಾವು ಭರವಸೆ ಇಡಬೇಕು. ಬೈಬಲ್ ಹೀಗನ್ನುತ್ತದೆ: “ಕಳವಳವು [ಚಿಂತೆ, ನೂತನ ಲೋಕ ಭಾಷಾಂತರ] ಮನಸ್ಸನ್ನು ಕುಗ್ಗಿಸುವದು; ಕನಿಕರದ ಮಾತು ಅದನ್ನು ಹಿಗ್ಗಿಸುವದು.” (ಜ್ಞಾನೋ. 12:25) ಹಾಗಾಗಿ ಯಾವುದಾದರೂ ವಿಷಯದ ಬಗ್ಗೆ ನಿಮಗೆ ತುಂಬ ಚಿಂತೆಯಿದ್ದರೆ ಯೆಹೋವನ ಸೇವೆ ಮಾಡುತ್ತಿರುವ ಮತ್ತು ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವವರ ಜೊತೆ ಮಾತಾಡಿ. ತಂದೆ ಅಥವಾ ತಾಯಿ, ಗಂಡ ಅಥವಾ ಹೆಂಡತಿ, ಅಥವಾ ಒಳ್ಳೇ ಸ್ನೇಹಿತರು ನಿಮಗೆ ಯೆಹೋವನಲ್ಲಿ ನಂಬಿಕೆಯಿಡಲು ಪ್ರೋತ್ಸಾಹ ಕೊಟ್ಟು, ಚಿಂತೆ ಕಡಿಮೆ ಮಾಡಲು ನೆರವಾಗುತ್ತಾರೆ.

17. ತುಂಬ ಚಿಂತೆಯಲ್ಲಿರುವಾಗ ಯೆಹೋವನು ನಮಗೆ ಹೇಗೆ ಸಹಾಯಮಾಡುತ್ತಾನೆ?

17 ನಮಗೆ ಹೇಗನಿಸುತ್ತದೆಂದು ಬೇರಾರಿಗಿಂತಲೂ ಚೆನ್ನಾಗಿ ಯೆಹೋವನಿಗೆ ಅರ್ಥವಾಗುತ್ತದೆ. ನಾವು ತುಂಬ ಚಿಂತೆಯಲ್ಲಿದ್ದಾಗ ನಮ್ಮ ಮನಸ್ಸನ್ನು ಶಾಂತಗೊಳಿಸುತ್ತಾನೆ. ಪೌಲನು ಹೀಗೆ ಬರೆದನು: “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.” (ಫಿಲಿ. 4:6, 7) ನಿಮಗೆ ತುಂಬ ಚಿಂತೆ ಇದ್ದರೆ ಯೆಹೋವನೊಟ್ಟಿಗಿನ ನಿಮ್ಮ ಸ್ನೇಹಸಂಬಂಧವನ್ನು ಗಟ್ಟಿಯಾಗಿರಿಸಲು ಆತನು ಕೊಡುವ ಸಹಾಯದ ಬಗ್ಗೆ ಯೋಚಿಸಿ. ಈ ಸಹಾಯ ಸಹೋದರ ಸಹೋದರಿಯರಿಂದ, ಹಿರಿಯರಿಂದ, ನಂಬಿಗಸ್ತ ಆಳಿನಿಂದ, ದೇವದೂತರಿಂದ ಮತ್ತು ಯೇಸುವಿನಿಂದ ಸಿಗಬಹುದು.

18. ಮನಸ್ಸಲ್ಲಿ ಚಿತ್ರಿಸಿಕೊಳ್ಳುವ ಸಾಮರ್ಥ್ಯದಿಂದ ನಮಗೆ ಹೇಗೆ ಸಹಾಯವಾಗುತ್ತದೆ?

18 ಬೇರೆಯವರಿಗೆ ಹೇಗನಿಸುತ್ತದೆಂದು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ನಾವು ಉಪಯೋಗಿಸುವಾಗ ಯೆಹೋವನನ್ನು ಅನುಕರಿಸುತ್ತಿದ್ದೇವೆ ಎಂದು ಕಲಿತೆವು. (1 ತಿಮೊ. 1:11; 1 ಯೋಹಾ. 4:8) ಬೇರೆಯವರಿಗೆ ಪ್ರೀತಿ, ದಯೆಯನ್ನು ತೋರಿಸುವಾಗ, ನಮ್ಮ ಕ್ರಿಯೆಗಳ ಪರಿಣಾಮದ ಬಗ್ಗೆ ಯೋಚಿಸುವಾಗ ಮತ್ತು ಯಾವಾಗಲೂ ಚಿಂತಿಸುವುದರಿಂದ ದೂರವಿರುವಾಗ ನಮಗೆ ಖುಷಿಯಾಗುತ್ತದೆ. ರಾಜ್ಯದ ಆಳ್ವಿಕೆಯ ಕೆಳಗೆ ಜೀವನ ಹೇಗಿರುತ್ತದೆಂದು ಮನಸ್ಸಲ್ಲಿ ಚಿತ್ರಿಸಿಕೊಳ್ಳೋಣ ಮತ್ತು ಯೆಹೋವನನ್ನು ಅನುಕರಿಸಲು ಕೈಲಾದದ್ದೆಲ್ಲವನ್ನು ಮಾಡೋಣ.—ರೋಮ. 12:12.