ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೆಹೆಜ್ಕೇಲ ಪುಸ್ತಕದಲ್ಲಿ ತಿಳಿಸಲಾಗಿರುವ ಮಾಗೋಗಿನ ಗೋಗನು ಯಾರು?

ಸ್ವರ್ಗದಿಂದ ದೊಬ್ಬಲಾದ ಪಿಶಾಚನಾದ ಸೈತಾನನೇ ಮಾಗೋಗಿನ ಗೋಗನೆಂದು ಅನೇಕ ವರ್ಷಗಳಿಂದ ನಮ್ಮ ಪ್ರಕಾಶನಗಳು ವಿವರಿಸಿವೆ. ಲೋಕದೆಲ್ಲೆಡೆ ದೇವಜನರ ಮೇಲೆ ಆಕ್ರಮಣ ಮಾಡುತ್ತಿರುವ ನಾಯಕನು ಸೈತಾನ ಎಂದು ಪ್ರಕಟನೆ ಪುಸ್ತಕದಲ್ಲಿ ತಿಳಿಸಲಾಗಿದೆ. ಈ ನಿಜತ್ವವನ್ನು ಆಧರಿಸಿ ಆ ವಿವರಣೆಯನ್ನು ಕೊಡಲಾಗುತ್ತಿತ್ತು. (ಪ್ರಕ. 12:1-17) ಆದ್ದರಿಂದ ಮಾಗೋಗಿನ ಗೋಗನು ಸೈತಾನನಿಗಿದ್ದ ಇನ್ನೊಂದು ಪ್ರವಾದನಾತ್ಮಕ ಹೆಸರು ಎಂದು ಭಾವಿಸಲಾಗುತ್ತಿತ್ತು.

ಆದರೆ ಈ ವಿವರಣೆ ಕೆಲವು ಪ್ರಾಮುಖ್ಯ ಪ್ರಶ್ನೆಗಳನ್ನು ಎಬ್ಬಿಸಿತು. ಯಾಕೆ? ಇದನ್ನು ಪರಿಗಣಿಸಿ: ಗೋಗನನ್ನು ಸೋಲಿಸುವ ಸಮಯದ ಬಗ್ಗೆ ತಿಳಿಸುತ್ತಾ ಯೆಹೋವನು ಅವನ ಬಗ್ಗೆ ಹೀಗನ್ನುತ್ತಾನೆ: “ನಾನು ನಿಮ್ಮನ್ನು ಮಾಂಸತಿನ್ನುವ ಬಗೆಬಗೆಯ ಹಕ್ಕಿಗಳಿಗೂ ಭೂಜಂತುಗಳಿಗೂ ಆಹಾರಮಾಡುವೆನು.” (ಯೆಹೆ. 39:4) ಯೆಹೋವನು ನಂತರ ಹೇಳಿದ್ದು: “ಆ ದಿನದಲ್ಲಿ ನಾನು ಇಸ್ರಾಯೇಲಿನೊಳಗೆ . . . ಗೋಗನಿಗೆ ಹೂಳುವ ಸ್ಥಳವನ್ನಾಗಿ ಏರ್ಪಡಿಸುವೆನು . . . ಅಲ್ಲೇ ಗೋಗನನ್ನೂ ಅವನ ಸಮೂಹವೆಲ್ಲವನ್ನೂ ಹೂಣಿಡುವರು.” (ಯೆಹೆ. 39:11) ಒಬ್ಬ ಆತ್ಮಜೀವಿಯನ್ನು ‘ಹಕ್ಕಿಗಳು ಮತ್ತು ಭೂಜಂತುಗಳು’ ತಿನ್ನುವುದಾದರೂ ಹೇಗೆ? ಸೈತಾನನನ್ನು ಭೂಮಿಯಲ್ಲಿ ‘ಹೂಣಿಡುವುದು’ ಹೇಗೆ? ಅವನನ್ನು 1,000 ವರ್ಷಗಳ ವರೆಗೆ ಅಗಾಧ ಸ್ಥಳಕ್ಕೆ ದೊಬ್ಬಲಾಗುವುದು ಎಂದು ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದಲ್ಲವಾ? ಹಾಗಾಗಿ ಸೈತಾನನನ್ನು ತಿನ್ನಲಿಕ್ಕಾಗಲಿ ಹೂಣಿಡಲಿಕ್ಕಾಗಲಿ ಆಗುವುದಿಲ್ಲ.—ಪ್ರಕ. 20:1, 2.

ಸೈತಾನನನ್ನು 1,000 ವರ್ಷಗಳ ಕೊನೆಯಲ್ಲಿ ಅಗಾಧ ಸ್ಥಳದಿಂದ ಬಿಡುಗಡೆ ಮಾಡಲಾಗುವುದು. ಆಗ “ಅವನು ಹೊರಗೆ ಬಂದು ಭೂಮಿಯ ನಾಲ್ಕು ಮೂಲೆಗಳಲ್ಲಿರುವ ಗೋಗ್‌ ಮತ್ತು ಮಾಗೋಗ್‌ ಎಂಬ ಜನಾಂಗಗಳನ್ನು ದಾರಿತಪ್ಪಿಸಲು, ಅವರನ್ನು ಯುದ್ಧಕ್ಕಾಗಿ ಒಟ್ಟುಗೂಡಿಸಲು ಹೋಗುವನು” ಎಂದು ಬೈಬಲ್‌ ಹೇಳುತ್ತದೆ. (ಪ್ರಕ. 20:8) ಸೈತಾನನೇ ಗೋಗನಾಗಿರುವಲ್ಲಿ ಅವನು ಗೋಗನನ್ನು ದಾರಿತಪ್ಪಿಸುವುದು ಹೇಗೆ? ಆದ್ದರಿಂದ ಯೆಹೆಜ್ಕೇಲನ ಪ್ರವಾದನೆಯಲ್ಲಿ ಮತ್ತು ಪ್ರಕಟನೆ ಪುಸ್ತಕದಲ್ಲಿ ತಿಳಿಸಲಾಗಿರುವ ‘ಗೋಗನು’ ಸೈತಾನನಲ್ಲ ಎಂದು ಗೊತ್ತಾಗುತ್ತದೆ.

ಹಾಗಾದರೆ ಮಾಗೋಗಿನ ಗೋಗನು ಯಾರು? ಈ ಪ್ರಶ್ನೆಗೆ ಉತ್ತರ ತಿಳಿಯಲು ದೇವಜನರ ಮೇಲೆ ಆಕ್ರಮಣ ಮಾಡುವವರು ಯಾರು ಎಂದು ಬೈಬಲಿನಿಂದ ಕಂಡುಹಿಡಿಯಬೇಕು. ಬೈಬಲಿನಲ್ಲಿ ಮಾಗೋಗಿನ ಗೋಗನ ಆಕ್ರಮಣದ ಬಗ್ಗೆ ಮಾತ್ರವಲ್ಲ ‘ಉತ್ತರರಾಜ’ ಮತ್ತು ‘ಭೂರಾಜರ’ ಆಕ್ರಮಣದ ಕುರಿತೂ ಹೇಳಲಾಗಿದೆ. (ಯೆಹೆ. 38:2, 10-13; ದಾನಿ. 11:40, 44, 45; ಪ್ರಕ. 17:14; 19:19) ಇವೆಲ್ಲಾ ಬೇರೆ ಬೇರೆ ಆಕ್ರಮಣಗಳನ್ನು ಸೂಚಿಸುತ್ತದಾ? ಇಲ್ಲ. ಬೇರೆ ಬೇರೆ ಹೆಸರಿನ ಒಂದೇ ಆಕ್ರಮಣಕ್ಕೆ ಬೈಬಲ್‌ ಸೂಚಿಸುತ್ತಿರುವುದರಲ್ಲಿ ಸಂಶಯವಿಲ್ಲ. ಇದನ್ನು ಹೇಗೆ ಹೇಳಬಹುದು? ಈ ಕೊನೆಯ ದಾಳಿಯಲ್ಲಿ ಭೂಮಿಯ ಎಲ್ಲಾ ರಾಜ್ಯಗಳೂ  ಒಂದುಗೂಡುತ್ತವೆ. ಆಗ ಅರ್ಮಗೆದೋನ್‌ ಯುದ್ಧ ಆರಂಭವಾಗುತ್ತದೆ ಎಂದು ಬೈಬಲ್‌ ವಚನಗಳು ತಿಳಿಸುತ್ತವೆ.—ಪ್ರಕ. 16:14, 16.

ದೇವಜನರ ಮೇಲೆ ನಡೆಯುವ ಕೊನೆಯ ಆಕ್ರಮಣದ ಕುರಿತ ಈ ಎಲ್ಲಾ ವಚನಗಳನ್ನು ಹೋಲಿಸುವಾಗ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ ಮಾಗೋಗಿನ ಗೋಗ ಎಂಬ ಹೆಸರು ಸೈತಾನನನ್ನು ಅಲ್ಲ, ಜನಾಂಗಗಳ ಗುಂಪನ್ನು ಸೂಚಿಸುತ್ತದೆ. ಈ ಗುಂಪನ್ನು ಸಾಂಕೇತಿಕ ‘ಉತ್ತರರಾಜ’ ಮುನ್ನಡೆಸುವನೇ? ಅದನ್ನು ಖಂಡಿತವಾಗಿ ಹೇಳಲು ಆಗುವುದಿಲ್ಲ. ಆದರೆ ಇದು ಯೆಹೋವನು ಗೋಗನ ಬಗ್ಗೆ ಹೇಳಿರುವ ವಿಷಯಕ್ಕೆ ಹೊಂದಿಕೆಯಲ್ಲಿದೆ. ಆತನು ಹೇಳಿದ್ದು: ‘ನೀನು ನಿನ್ನ ಸ್ಥಳವನ್ನು ಬಿಟ್ಟು ಅಶ್ವಬಲದ ಮಹಾಸೈನ್ಯವಾಗಿ ಗುಂಪುಕೂಡಿದ ಬಹುಜನಾಂಗಗಳೊಡನೆ ಉತ್ತರದಿಕ್ಕಿನ ಕಟ್ಟಕಡೆಯಿಂದ ಬರುವಿ.’—ಯೆಹೆ. 38:6, 15.

ಯೆಹೆಜ್ಕೇಲನ ಸಮಯದಲ್ಲಿ ಜೀವಿಸಿದ ದಾನಿಯೇಲನು ಸಹ ಉತ್ತರರಾಜನ ಬಗ್ಗೆ ಹೀಗನ್ನುತ್ತಾನೆ: “ಹೀಗಿರಲು ಮೂಡಲಿಂದಲೂ ಬಡಗಲಿಂದಲೂ ಬರುವ ಸುದ್ದಿಯು ಅವನನ್ನು ಬಾಧಿಸುವದು; ಅವನು ಅತಿರೋಷಗೊಂಡು ಬಹು ಜನರನ್ನು ಧ್ವಂಸಿಸಿ ನಿರ್ನಾಮ ಮಾಡುವದಕ್ಕೆ ಹೊರಡುವನು. ಸಮುದ್ರಕ್ಕೂ ಅಂದಚಂದದ ಪರಿಶುದ್ಧಪರ್ವತಕ್ಕೂ ನಡುವೆ ಅರಮನೆಯಂಥ ತನ್ನ ಗುಡಾರಗಳನ್ನು ಹಾಕಿಸುವನು; ಆಹಾ, ಅವನು ಕೊನೆಗಾಣುವನು, ಯಾರೂ ಅವನಿಗೆ ಸಹಾಯಮಾಡರು.” (ದಾನಿ. 11:44, 45) ಗೋಗನ ಚಟುವಟಿಕೆಯ ಬಗ್ಗೆ ಯೆಹೆಜ್ಕೇಲ ಪುಸ್ತಕ ಹೇಳುವ ವಿಷಯಕ್ಕೆ ಇದು ಸ್ಪಷ್ಟವಾಗಿ ಹೋಲುತ್ತದೆ.—ಯೆಹೆ. 38:8-12, 16.

ಈ ಕೊನೆಯ ಆಕ್ರಮಣದ ಫಲಿತಾಂಶದಿಂದ ಮುಂದೇನಾಗುವುದು? ದಾನಿಯೇಲನು ಉತ್ತರಕೊಡುತ್ತಾನೆ: “ನಿನ್ನ ಜನರ ಪಕ್ಷವನ್ನು ಹಿಡಿದಿರುವ [1914ರಿಂದ] ಮಹಾ ಪಾಲಕನಾದ ಮಿಾಕಾಯೇಲನು [ಯೇಸು ಕ್ರಿಸ್ತ] ಆ ಕಾಲದಲ್ಲಿ [ಅರ್ಮಗೆದೋನಿನ ಸಮಯದಲ್ಲಿ] ಏಳುವನು; ಮೊಟ್ಟಮೊದಲು ಜನಾಂಗವು ಉಂಟಾದಂದಿನಿಂದ ಅಂದಿನವರೆಗೆ ಸಂಭವಿಸದಂಥ ಸಂಕಟವು [ಮಹಾ ಸಂಕಟ] ಸಂಭವಿಸುವದು; ಆಗ ನಿನ್ನ ಜನರೊಳಗೆ ಯಾರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಸಿಕ್ಕುವವೋ ಅವರೆಲ್ಲರೂ ರಕ್ಷಿಸಲ್ಪಡುವರು.” (ದಾನಿ. 12:1) ದೇವರ ಪ್ರತಿನಿಧಿಯಾದ ಯೇಸು ತೆಗೆದುಕೊಳ್ಳುವ ಈ ಕ್ರಮದ ಬಗ್ಗೆ ಪ್ರಕಟನೆ 19:11-21ರಲ್ಲಿ ವಿವರಿಸಲಾಗಿದೆ.

ಆದರೆ ಪ್ರಕಟನೆ 20:8ರಲ್ಲಿ ತಿಳಿಸಲಾಗಿರುವ “ಗೋಗ್‌ ಮತ್ತು ಮಾಗೋಗ್‌” ಯಾರು? ಸಾವಿರ ವರ್ಷದ ಕೊನೆಯಲ್ಲಿರುವ ಅಂತಿಮ ಪರೀಕ್ಷೆಯಲ್ಲಿ ಯೆಹೋವನ ವಿರುದ್ಧ ದಂಗೆಯೇಳುವವರು. ಇವರು ಮಹಾ ಸಂಕಟದ ಕೊನೆಯಲ್ಲಿ ದೇವಜನರ ಮೇಲೆ ಆಕ್ರಮಣ ಮಾಡುವ ಜನಾಂಗಗಳಾಗಿರುವ ಮಾಗೋಗಿನ ಗೋಗನ ಕೊಲೆಗಡುಕ ಮನೋಭಾವವನ್ನು ತೋರಿಸುವರು. ಈ ಎರಡು ಗುಂಪಿನವರಿಗೆ ಒಂದೇ ಶಿಕ್ಷೆ. ಅದು ಶಾಶ್ವತ ಮರಣ. (ಪ್ರಕ. 19:20, 21; 20:9) ಆದ್ದರಿಂದ 1,000 ವರ್ಷಗಳ ಕೊನೆಯಲ್ಲಿ ದಂಗೆ ಏಳುವ ಎಲ್ಲರನ್ನು “ಗೋಗ್‌ ಮತ್ತು ಮಾಗೋಗ್‌” ಎಂದು ಕರೆಯುವುದು ಸೂಕ್ತ.

ಬೈಬಲಿನ ಉತ್ಸುಕ ವಿದ್ಯಾರ್ಥಿಗಳಾದ ನಾವು ಭವಿಷ್ಯದಲ್ಲಿ ‘ಉತ್ತರರಾಜ’ ಯಾರಾಗುವರು ಎಂದು ತಿಳಿಯಲು ಕಾತುರದಿಂದ ಕಾಯುತ್ತಿದ್ದೇವೆ. ಆದರೆ ಜನಾಂಗಗಳ ಗುಂಪನ್ನು ಯಾರೇ ಮುನ್ನಡೆಸಲಿ ಈ ಎರಡು ವಿಷಯ ಮಾತ್ರ ನಿಜ: (1) ಮಾಗೋಗಿನ ಗೋಗನನ್ನು ಮತ್ತು ಅವನ ಸೈನ್ಯವನ್ನು ಸೋಲಿಸಿ ನಾಶಮಾಡಲಾಗುವುದು. (2) ಈಗ ಸ್ವರ್ಗದಲ್ಲಿ ಆಳುತ್ತಿರುವ ರಾಜನಾದ ಯೇಸು ಕ್ರಿಸ್ತನು ದೇವಜನರನ್ನು ರಕ್ಷಿಸಿ ಶಾಂತಿ ತುಂಬಿರುವ ಮತ್ತು ನಿಜ ಭದ್ರತೆ ಇರುವ ನೂತನ ಲೋಕಕ್ಕೆ ನಡೆಸುವನು.—ಪ್ರಕ. 7:14-17.