ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಸಂಗ್ರಹಾಲಯ

ಉಪಹಾರ ಗೃಹದಲ್ಲಿನ ಕೆಲಸವೆಲ್ಲಾ ಪ್ರೀತಿಯಿಂದ ನಡೆಯುತ್ತಿತ್ತೆಂದು ನೋಡಿದರು

ಉಪಹಾರ ಗೃಹದಲ್ಲಿನ ಕೆಲಸವೆಲ್ಲಾ ಪ್ರೀತಿಯಿಂದ ನಡೆಯುತ್ತಿತ್ತೆಂದು ನೋಡಿದರು

ಎಲ್ಲರೂ ಒಟ್ಟಿಗೆ ಯೆಹೋವನ ಮೇಜಿನಲ್ಲಿ ಅಂದರೆ ಅಧಿವೇಶನಗಳಲ್ಲಿ ಆಧ್ಯಾತ್ಮಿಕ ಆಹಾರ ಸೇವಿಸಲು ಕೂಡಿ ಬರುವುದೇ ಒಂದು ದೊಡ್ಡ ಸೌಭಾಗ್ಯ. ದೇವಜನರು ಈ ಆಧ್ಯಾತ್ಮಿಕ ಔತಣಕ್ಕಾಗಿ ಕೂಡಿಬರುವಾಗ, ಶಾರೀರಿಕ ಆಹಾರವನ್ನು ಹಂಚಿಕೊಂಡಾಗ ಸಂತೋಷ ಇಮ್ಮಡಿಗೊಳ್ಳುತ್ತದೆ.

ಸೆಪ್ಟೆಂಬರ್‌ 1919ರಲ್ಲಿ ಬೈಬಲ್‌ ವಿದ್ಯಾರ್ಥಿಗಳು ಅಮೆರಿಕದ ಒಹಾಯೋ ಸಿಡರ್‌ ಪಾಯಿಂಟ್‍ನಲ್ಲಿ 8 ದಿನಗಳ ಅಧಿವೇಶನವನ್ನು ಆಯೋಜಿಸಿದರು. ಪ್ರತಿನಿಧಿಗಳಿಗೆ ಆ ಊರಿನ ಹೋಟೆಲ್‌ಗಳಲ್ಲಿ ಉಳಿಯಲಿಕ್ಕಾಗಿ ಮತ್ತು ಆಹಾರಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಬಂದವರ ಸಂಖ್ಯೆ ನೆನಸಿದ್ದಕ್ಕಿಂತ ಜಾಸ್ತಿಯೇ ಇತ್ತು. ಅದೂ ಸಾವಿರಗಟ್ಟಲೆ ಹೆಚ್ಚಾಗಿತ್ತು. ಈ ಗುಂಪನ್ನು ನೋಡಿ ಗಾಬರಿಯಾಗಿ ಹೋಟೆಲ್‌ಗಳ ಪರಿಚಾರಕ, ಪರಿಚಾರಕಿಯರು ಒಟ್ಟಿಗೆ ಕೆಲಸ ಬಿಟ್ಟರು. ಹೋಟೆಲ್‌ ಒಂದರ ಮ್ಯಾನೇಜರ್‌ಗೆ ಏನು ಮಾಡುವುದೆಂದು ತೋಚದೆ, ನಮ್ಮ ಯುವಜನರ ಸಹಾಯ ಕೇಳಿಕೊಂಡರು. ಅವರಲ್ಲಿ ಅನೇಕರು ಸಂತೋಷದಿಂದ ಒಪ್ಪಿಕೊಂಡರು. ಸ್ಯಾಡೀ ಗ್ರೀನ್‌ ಅವರಲ್ಲಿ ಒಬ್ಬಳು. ಅವಳು ಹೀಗಂದಳು: “ಪರಿಚಾರಕಿಯಾಗಿ ಅದು ನನ್ನ ಮೊದಲ ಅನುಭವ. ಆದರೆ ಅದು ತುಂಬ ಮಜವಾಗಿತ್ತು.”

ಸಿಯೆರಾ ಲಿಯೋನ್‌, 1982

ವರ್ಷಗಳು ಕಳೆದಂತೆ ಅಧಿವೇಶನಗಳಲ್ಲಿ ಉಪಹಾರ ಗೃಹದ ಏರ್ಪಾಡುಗಳನ್ನು ಮಾಡಲಾಯಿತು. ಇದರಿಂದಾಗಿ ಲೆಕ್ಕವಿಲ್ಲದಷ್ಟು ಸ್ವಯಂಸೇವಕರಿಗೆ ಸಂತೋಷದಿಂದ ಸಹೋದರ ಸಹೋದರಿಯರ ಸೇವೆ ಮಾಡುವ ಅವಕಾಶ ಸಿಕ್ಕಿತು. ಅಷ್ಟೇ ಅಲ್ಲ, ಜೊತೆವಿಶ್ವಾಸಿಗಳೊಂದಿಗೆ ಕೆಲಸ ಮಾಡುವ ಮೂಲಕ ಅನೇಕ ಯುವ ಜನರಿಗೆ ಆಧ್ಯಾತ್ಮಿಕ ಗುರಿಗಳನ್ನಿಡಲೂ ಸಹಾಯವಾಯಿತು. 1937ರ ಅಧಿವೇಶನದ ಉಪಹಾರ ಗೃಹದಲ್ಲಿ ಕೆಲಸ ಮಾಡಿದವರಲ್ಲಿ ಒಬ್ಬರು ಗ್ಲಾಡಿಸ್‌ ಬೊಲ್ಟನ್‌. “ಬೇರೆ ಬೇರೆ ಜಾಗದಿಂದ ಬಂದವರನ್ನು ನನಗೆ ಸಿಕ್ಕಿದರು” ಎಂದು ಹೇಳಿದರು. ಅವರು ಮುಂದುವರಿಸಿದ್ದು: “ಅವರೆಲ್ಲ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಿದ್ದರೆಂದು ನಾನು ಕೇಳಿಸಿಕೊಂಡೆ. ನಾನೂ ಒಬ್ಬ ಪಯನೀಯರ್‌ ಆಗಬಹುದಲ್ಲಾ ಎಂದು ನನಗನಿಸಿದ್ದು ಆಗಲೇ.”

ಆ ಅಧಿವೇಶನಕ್ಕೆ ಹಾಜರಾದವರಲ್ಲಿ ಒಬ್ಬರಾದ ಬ್ಯುಲ ಕೊವೆ ಹೇಳಿದ್ದು: “ಅವರೆಷ್ಟು ಮನಸ್ಸುಕೊಟ್ಟು ಕೆಲಸ ಮಾಡುತ್ತಿದ್ದರೆಂದರೆ, ಎಲ್ಲಾ ಕೆಲಸಗಳು ಗಡಿಯಾರದ ಹಾಗೆ ನಡೆಯುತ್ತಿದ್ದವು.” ಆದರೆ ಈ ಕೆಲಸಕ್ಕೆ ಅದರದ್ದೇ ಆದ ಸವಾಲುಗಳಿದ್ದವು. 1969ರಲ್ಲಿ ಕ್ಯಾಲಿಫೋರ್ನಿಯ ಲಾಸ್‌ ಎಂಜಲಿಸ್‍ನ ಡಾಡ್ಜರ್‌ ಸ್ಟೇಡಿಯಂನಲ್ಲಿ ಅಧಿವೇಶನವನ್ನು ಆಯೋಜಿಸಲಾಗಿತ್ತು. ಸಹೋದರ ಆ್ಯಂಜೆಲೊ ಮನೆರಾ ಅವರನ್ನು ಉಪಹಾರ ಗೃಹದ ಮೇಲ್ವಿಚಾರಕನಾಗಿ ನೇಮಿಸಲಾಗಿದೆ ಎಂದು ಅವರಿಗೆ ಗೊತ್ತಾಗಿದ್ದು ಅಲ್ಲಿಗೆ ಬಂದ ಮೇಲೆಯೇ. ಅವರು ಹೀಗೆ ಒಪ್ಪಿಕೊಂಡರು: “ಇದನ್ನು ಕೇಳಿದಾಗ ನನಗೆ ದೊಡ್ಡ ಆಘಾತವಾಯಿತು.” ಅಡುಗೆಗೆ ಬೇಕಾದ ಅನಿಲ ಸರಬರಾಜು ಮಾಡಲು 0.4 ಕಿ.ಮೀ.ರಷ್ಟು ಕಾಲುವೆ ತೋಡುವುದೂ ಅಧಿವೇಶನಕ್ಕೆ ತಯಾರಿ ನಡೆಸುವುದರಲ್ಲಿ ಸೇರಿತ್ತು.

ಫ್ರಾ್ಯಂಕ್‌ಫರ್ಟ್, ಜರ್ಮನಿ, 1951

1982ರಲ್ಲಿ ಸಿಯೆರಾ ಲಿಯೋನ್‍ನಲ್ಲಿ ಶ್ರಮಶೀಲ ಸ್ವಯಂಸೇವಕರು ಮೊದಲು ಗದ್ದೆಗಳನ್ನು ಸಮನೆಲಮಾಡಿ ಉಪಹಾರ ಗೃಹವನ್ನು ಕಟ್ಟಬೇಕಿತ್ತು. 1951ರಲ್ಲಿ ಜರ್ಮನಿಯ ಫ್ರಾ್ಯಂಕ್‌ಫರ್ಟ್ನಲ್ಲಿ ಕೆಲವು ಸಹೋದರರು ಪ್ರಾಯೋಗಿಕವಾಗಿ ಯೋಚಿಸಿ 40 ಅಡುಗೆ ಪಾತ್ರೆಗಳಲ್ಲಿ ಆಹಾರವನ್ನು  ಹಬೆಯಲ್ಲಿ ಬೇಯಿಸಲು ರೈಲಿನ ಇಂಜಿನ್‍ನನ್ನು ಬಾಡಿಗೆಗೆ ಪಡೆದರು. ಊಟ ಬಡಿಸುವವರು ಗಂಟೆಗೆ 30,000 ತಟ್ಟೆಗಳಿಗೆ ಊಟ ಬಡಿಸಿದರು. ಪಾತ್ರೆ ತೊಳೆಯಲು 576 ಮಂದಿ ಇದ್ದರು. ಅವರ ಕೆಲಸ ಕಡಿಮೆ ಮಾಡಲೆಂದು ಅಧಿವೇಶನಕ್ಕೆ ಬಂದವರು ಊಟಮಾಡಲಿಕ್ಕಾಗಿ ತಮ್ಮತಮ್ಮ ಚಾಕು, ಮುಳ್ಳು ಚಮಚಗಳನ್ನು ತರುತ್ತಿದ್ದರು. ಮ್ಯಾನ್‌ಮಾರ್‌ನ ಯಾಂಗಾನ್‍ನಲ್ಲಿ ಅಂತಾರಾಷ್ಟ್ರೀಯ ಪ್ರತಿನಿಧಿಗಳಿಗೆಂದು ಅಡುಗೆ ಮಾಡುವವರು ಅವರ ಕಡೆಗೆ ಕಾಳಜಿ ತೋರಿಸುತ್ತಾ ಸಾಮಾನ್ಯವಾಗಿ ಹಾಕುವುದಕ್ಕಿಂತ ಕಡಿಮೆ ಮೆಣಸಿನಕಾಯಿಗಳನ್ನು ಹಾಕಿದರು.

“ಇವರು ನಿಂತುಕೊಂಡೇ ಊಟಮಾಡುತ್ತಾರೆ!”

1950ರಲ್ಲಿ ಅಮೆರಿಕದಲ್ಲಿ ಆಯೋಜಿಸಲಾಗಿದ್ದ ಅಧಿವೇಶನಕ್ಕೆ ಹಾಜರಾದ ಆ್ಯನಿ ಪೊಗೆನ್ಸಿ, ಉರಿ ಬಿಸಿಲಿನಲ್ಲಿ ಊಟಕ್ಕಾಗಿ ಉದ್ದದ ಸಾಲಿನಲ್ಲಿ ನಿಂತಿದ್ದಳು. ಆದರೂ ಇದರಿಂದ ಸಿಕ್ಕಿದ ಆಶೀರ್ವಾದದ ಬಗ್ಗೆ ಅವಳು ಹೇಳಿದ್ದು: “ಯೂರೋಪ್‍ನಿಂದ ಹಡಗಲ್ಲಿ ಬಂದಿದ್ದ ಇಬ್ಬರು ಸಹೋದರಿಯರ ಮಾತುಕತೆ ಕೇಳುತ್ತಾ ಅದರಲ್ಲೇ ಪೂರ್ತಿ ಮುಳುಗಿಹೋದೆ.” ಅಧಿವೇಶನಕ್ಕೆ ಬರಲು ಯೆಹೋವನು ತಮಗೆ ಹೇಗೆಲ್ಲಾ ಸಹಾಯ ಮಾಡಿದನೆಂದು ಅವರಿಬ್ಬರೂ ಹೇಳುತ್ತಿದ್ದರು. “ಅವರಿಬ್ಬರಿಗಿದ್ದಷ್ಟು ಖುಷಿ ಅಲ್ಲಿ ಬೇರೆ ಯಾರಿಗೂ ಇರಲಿಲ್ಲ” ಎಂದಳು ಆ್ಯನಿ. “ಉರಿಬಿಸಿಲಿದ್ದರೂ ಸಾಲಿನಲ್ಲಿ ನಿಂತು ಕಾಯುವುದು ಅವರಿಗೆ ಲೆಕ್ಕಕ್ಕೇ ಬರಲಿಲ್ಲ” ಎಂದೂ ಹೇಳಿದಳು.

ಸೋಲ್‌, ಕೊರಿಯ, 1963

ದೊಡ್ಡ ಅಧಿವೇಶನಗಳಲ್ಲಿ ಊಟ ಮಾಡಲಿಕ್ಕಾಗಿ ಶಾಮಿಯಾನಗಳನ್ನು ಕಟ್ಟಿ ಅಲ್ಲಿ ಎತ್ತರದ ಮೇಜುಗಳನ್ನು ಸಾಲಾಗಿ ಇಡಲಾಗುತ್ತಿತ್ತು. ಹೀಗೆ ಊಟಮಾಡುವವರು ಬೇಗಬೇಗ ಮುಗಿಸಿ ಬೇರೆಯವರಿಗೆ ಜಾಗ ಕೊಡಲು ಸಾಧ್ಯವಾಗುತ್ತಿತ್ತು. ಸಾವಿರಾರು ಮಂದಿ ಮಧ್ಯಾಹ್ನ ಊಟ ಮಾಡಬೇಕಾಗಿದ್ದರಿಂದ ಹೀಗೆ ಮಾಡಲೇಬೇಕಿತ್ತು. ಸಾಕ್ಷಿಯಲ್ಲದ ಒಬ್ಬ ವ್ಯಕ್ತಿ ಹೀಗಂದಿದ್ದನು: “ಇದೊಂದು ವಿಚಿತ್ರ ಧರ್ಮ. ಇವರು ನಿಂತುಕೊಂಡೇ ಊಟಮಾಡುತ್ತಾರೆ!”

ಎಲ್ಲಾ ಕೆಲಸಗಳು ಇಷ್ಟು ಚೆನ್ನಾಗಿ, ಸಂಘಟಿತವಾಗಿ ನಡೆಯುವುದನ್ನು ನೋಡಿ ಮಿಲಿಟರಿ ಮತ್ತು ಪೊಲೀಸ್‌ ಅಧಿಕಾರಿಗಳು ಸಹ ತಮ್ಮ ಮೂಗಿನ ಮೇಲೆ ಬೆರಳಿಟ್ಟರು. ನ್ಯೂ ಯಾರ್ಕ್‍ನಲ್ಲಿರುವ ಯಾಂಕೀ ಸ್ಟೇಡಿಯಂನ ಉಪಹಾರ ಗೃಹವನ್ನು ಅಮೆರಿಕದ ಸೇನಾ ಸಿಬ್ಬಂದಿ ಪರಿಶೀಲಿಸಿತು. ನಂತರ ಅವರು ಬ್ರಿಟಿಷ್‌ ವಾರ್‌ ಡಿಪಾರ್ಟ್‍ಮೆಂಟ್‍ನ ಮೇಜರ್‌ ಫಾಲ್ಕ್ನರ್‌ಗೂ ಅದನ್ನೇ ಮಾಡುವಂತೆ ಉತ್ತೇಜಿಸಿದರು. ಹಾಗಾಗಿ ಅವರೂ ಅವರ ಹೆಂಡತಿ 1955ರಲ್ಲಿ ಇಂಗ್ಲೆಂಡಿನ ಟ್ವಿಕೆನ್‌ಹಾಮ್‍ನಲ್ಲಿ ನಡೆದ “ವಿಜಯಿ ರಾಜ್ಯ” ಎಂಬ ಸಮ್ಮೇಳನಕ್ಕೆ ಹೋದರು. ಉಪಹಾರ ಗೃಹದಲ್ಲಿನ ಕೆಲಸವೆಲ್ಲಾ ಪ್ರೀತಿಯಿಂದ ನಡೆಯುತ್ತಿತ್ತೆಂದು ನೋಡಿದರು.

ಅಧಿವೇಶನಗಳಿಗೆ ಹಾಜರಾಗುವವರಿಗೆ ಪೌಷ್ಟಿಕಾಂಶ ಕೂಡಿದ ಆಹಾರವನ್ನು ಕಡಿಮೆ ದರದಲ್ಲಿ ಕೊಡಲಾಗುತ್ತಿತ್ತು. ಈ ಪ್ರೀತಿಯ ಏರ್ಪಾಡು ಹತ್ತಾರು ವರ್ಷಗಳ ವರೆಗೆ ಇತ್ತು. ಆದರೆ ಈ ದೊಡ್ಡ ಕೆಲಸಕ್ಕೆ ಅನೇಕ ಮಂದಿ ಸ್ವಯಂಸೇವಕರು ಬೇಕಾಗುತ್ತಿದ್ದರು. ಅವರು ತುಂಬ ಸಮಯ ಕೆಲಸ ಮಾಡಬೇಕಾಗುತ್ತಿತ್ತು. ಆದ್ದರಿಂದ ಕೆಲವರಿಗೆ ಅಧಿವೇಶನದ ಕೆಲವು ಕಾರ್ಯಕ್ರಮಗಳು ಮಾತ್ರ ಸಿಗುತ್ತಿತ್ತು. ಇನ್ನು ಕೆಲವರಿಗಂತೂ ಅದೂ ಸಿಗುತ್ತಿರಲಿಲ್ಲ. ಹಾಗಾಗಿ 1980ಕ್ಕೆ ಹತ್ತಿರದ ವರ್ಷಗಳಲ್ಲಿ ಅಧಿವೇಶನದ ಆಹಾರದ ಏರ್ಪಾಡನ್ನು ಅನೇಕ ಸ್ಥಳಗಳಲ್ಲಿ ಸರಳೀಕರಿಸಲಾಯಿತು. ನಂತರ 1995ರಿಂದ ಅಧಿವೇಶನಕ್ಕೆ ಹಾಜರಾಗುವವರು ಅವರೇ ಊಟವನ್ನು ತೆಗೆದುಕೊಂಡು ಬರುವಂತೆ ಉತ್ತೇಜಿಸಲಾಯಿತು. ಹೀಗೆ ಮಾಡಿದ್ದರಿಂದ ಹಿಂದೆ ಅಡುಗೆ ಮಾಡುವುದರಲ್ಲಿ, ಊಟ ಬಡಿಸುವುದರಲ್ಲಿ ಮುಳುಗಿರುತ್ತಿದ್ದ ಅನೇಕ ಸಹೋದರ ಸಹೋದರಿಯರು ಆಧ್ಯಾತ್ಮಿಕ ಕಾರ್ಯಕ್ರಮ ಮತ್ತು ಕ್ರೈಸ್ತ ಸಹವಾಸ ಆನಂದಿಸಲು ಸಾಧ್ಯವಾಯಿತು. *

ತಮ್ಮ ಜೊತೆ ವಿಶ್ವಾಸಿಗಳಿಗೋಸ್ಕರ ಅಷ್ಟೊಂದು ಶ್ರಮಪಟ್ಟು ಕೆಲಸ ಮಾಡಿದವರನ್ನು ಯೆಹೋವನು ಎಂದಿಗೂ ಮರೆಯುವುದಿಲ್ಲ! ಪುನಃ ಆ ಆನಂದದ ದಿನಗಳು ಬರಬಾರದಾ ಎಂದು ಕೆಲವರು ಹಂಬಲಿಸಬಹುದು. ಆದರೆ ಒಂದಂತೂ ಖಂಡಿತ: ಇಂದಿಗೂ ನಮ್ಮ ಅಧಿವೇಶನಗಳ ಮುಖ್ಯ ಸಾಮಾಗ್ರಿ ಪ್ರೀತಿಯೇ.—ಯೋಹಾ. 13:34, 35.

^ ಪ್ಯಾರ. 12 ಆದರೆ ಅಧಿವೇಶನದ ಇತರ ಡಿಪಾರ್ಟ್‍ಮೆಂಟ್‌ಗಳಿಗೆ ಸ್ವಯಂಸೇವಕರು ನೆರವು ನೀಡುವ ಅವಕಾಶಗಳು ಈಗಲೂ ಇವೆ.