ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚೀಯೋನಿನಲ್ಲಿ ನೀತಿಯು ಮೊಳೆಯುತ್ತದೆ

ಚೀಯೋನಿನಲ್ಲಿ ನೀತಿಯು ಮೊಳೆಯುತ್ತದೆ

ಅಧ್ಯಾಯ ಇಪ್ಪತ್ತೆರಡು

ಚೀಯೋನಿನಲ್ಲಿ ನೀತಿಯು ಮೊಳೆಯುತ್ತದೆ

ಯೆಶಾಯ 61:1-11

1, 2. ಇಸ್ರಾಯೇಲಿಗೆ ಯಾವ ಬದಲಾವಣೆ ಸಂಭವಿಸಲಿಕ್ಕಿದೆ, ಮತ್ತು ಅದನ್ನು ಮಾಡುವಾತನು ಯಾರು?

ಸ್ವಾತಂತ್ರ್ಯವು ಘೋಷಿಸಲ್ಪಡಲಿ! ಯೆಹೋವನು ತನ್ನ ಜನರನ್ನು ಬಿಡುಗಡೆಮಾಡುವ ಮತ್ತು ಅವರನ್ನು ತಮ್ಮ ಪಿತೃಗಳ ದೇಶದಲ್ಲಿ ಪುನಸ್ಸ್ಥಾಪಿಸುವ ದೃಢನಿರ್ಧಾರವನ್ನು ಮಾಡಿದ್ದಾನೆ. ಮಂದಮಳೆಯ ಬಳಿಕ ಬೀಜವು ಮೊಳಕೆಯೊಡೆಯುವಂತೆ, ಸತ್ಯಾರಾಧನೆಯು ಪುನಃ ತೋರಿಬರುವುದು. ಆ ದಿನವು ಆಗಮಿಸುವಾಗ, ನಿರಾಶೆಯ ಸ್ಥಾನದಲ್ಲಿ ಹರ್ಷಕರವಾದ ಸ್ತುತಿಯು ಇರುವುದು. ಮತ್ತು ಈ ಹಿಂದೆ ದುಃಖಸೂಚಕ ಬೂದಿಯಿಂದಾವೃತವಾದ ತಲೆಗಳು ದೈವಿಕ ಮೆಚ್ಚಿಕೆಯ ಕಿರೀಟಗಳನ್ನು ಧರಿಸುವವು.

2 ಆದರೆ ಇಂತಹ ಅದ್ಭುತವಾದ ಪರಿವರ್ತನೆಯನ್ನು ಯಾರು ತರುವನು? ಇದನ್ನು ಯೆಹೋವನೊಬ್ಬನೇ ಮಾಡಶಕ್ತನು. (ಕೀರ್ತನೆ 9:​19, 20; ಯೆಶಾಯ 40:25) ಪ್ರವಾದಿಯಾದ ಚೆಫನ್ಯನು ಪ್ರವಾದನಾತ್ಮಕವಾಗಿ ಆಜ್ಞಾಪಿಸಿದ್ದು: “ಚೀಯೋನ್‌ ನಗರಿಯೇ, ಹರ್ಷಧ್ವನಿಗೈ! ಇಸ್ರಾಯೇಲೇ, ಆರ್ಬಟಿಸು! ಯೆರೂಸಲೇಮ್‌ ಪುರಿಯೇ, ಹೃದಯಪೂರ್ವಕವಾಗಿ ಆನಂದಿಸು, ಉಲ್ಲಾಸಿಸು! ನಿನಗೆ ವಿಧಿಸಿದ ದಂಡನೆಗಳನ್ನು ಯೆಹೋವನು ತಪ್ಪಿಸಿದ್ದಾನೆ.” (ಚೆಫನ್ಯ 3:14, 15) ಅದೆಷ್ಟು ಸಂತಸಕರವಾದ ಸಮಯವಾಗಿರುವುದು! ಸಾ.ಶ.ಪೂ. 537ರಲ್ಲಿ ಯೆಹೋವನು ಬಾಬೆಲಿನಿಂದ ಪುನಸ್ಸ್ಥಾಪಿತ ಉಳಿಕೆಯವರನ್ನು ಒಟ್ಟಗೂಡಿಸುವಾಗ ಆ ಕನಸು ನನಸಾಗುವುದು.​—⁠ಕೀರ್ತನೆ 126:⁠1.

3. ಯೆಶಾಯ 61ನೆಯ ಅಧ್ಯಾಯದ ಪ್ರವಾದನ ಮಾತುಗಳಿಗೆ ಯಾವ ನೆರವೇರಿಕೆಗಳಿವೆ?

3 ಈ ಪುನಸ್ಸ್ಥಾಪನೆ ಯೆಶಾಯ 61ನೆಯ ಅಧ್ಯಾಯದಲ್ಲಿ ಮುಂತಿಳಿಸಲ್ಪಟ್ಟಿದೆ. ಆ ಪ್ರವಾದನೆಯು ಸಾ.ಶ.ಪೂ. 537ರಲ್ಲಿ ಸ್ಪಷ್ಟವಾಗಿ ನೆರವೇರಿತಾದರೂ, ಮುಂದಿನ ಒಂದು ಸಮಯದಲ್ಲಿ ಅದು ಹೆಚ್ಚು ವಿವರವಾಗಿ ನೆರವೇರಿತು. ಈ ಹೆಚ್ಚು ವಿವರವಾದ ನೆರವೇರಿಕೆಯು ಒಂದನೆಯ ಶತಮಾನದಲ್ಲಿ ಯೇಸು ಮತ್ತು ಅವನ ಹಿಂಬಾಲಕರನ್ನೂ, ಆಧುನಿಕ ಸಮಯಗಳಲ್ಲಿ ಯೆಹೋವನ ಜನರನ್ನೂ ಒಳಗೊಂಡಿದೆ. ಆದಕಾರಣ, ಈ ಪ್ರೇರಿತ ವಚನಗಳು ಎಷ್ಟು ಅರ್ಥಭರಿತವಾಗಿವೆ!

“ಶುಭವರುಷ”

4. ಯೆಶಾಯ 61:1ರ ಪ್ರಥಮ ನೆರವೇರಿಕೆಯಲ್ಲಿ ಶುಭವರ್ತಮಾನವನ್ನು ಸಾರಲು ಯಾರನ್ನು ನೇಮಿಸಲಾಯಿತು, ಮತ್ತು ಎರಡನೆಯ ನೆರವೇರಿಕೆಯಲ್ಲಿ ಯಾರನ್ನು ನೇಮಿಸಲಾಯಿತು?

4 ಯೆಶಾಯನು ಬರೆದುದು: “ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೂ ಸೆರೆಯವರಿಗೆ ಬಿಡುಗಡೆಯಾಗುವದನ್ನು, ಬಂದಿಗಳಿಗೆ [] ತೆರೆಯುವದನ್ನು” ಮಾಡಲು ಕಳುಹಿಸಿದನು. (ಯೆಶಾಯ 61:1) ಹಾಗಾದರೆ ಶುಭವರ್ತಮಾನವನ್ನು ಸಾರಲು ನೇಮಿತನಾದವನು ಯಾರು? ಪ್ರಥಮವಾಗಿ ಇವನು ಯೆಶಾಯನಾಗಿದ್ದಿರಬಹುದು. ಏಕೆಂದರೆ ಬಾಬೆಲಿನ ಬಂದಿಗಳಿಗಾಗಿ ಸುವಾರ್ತೆಯನ್ನು ದಾಖಲಿಸುವಂತೆ ದೇವರು ಅವನನ್ನು ಪ್ರೇರಿಸಿದನು. ಆದರೆ ಯೇಸು ಆ ಮಾತುಗಳನ್ನು ತನಗೆ ಅನ್ವಯಿಸಿಕೊಂಡಾಗ ಅದರ ಅತಿ ಪ್ರಾಮುಖ್ಯವಾದ ನೆರವೇರಿಕೆಯನ್ನು ಸೂಚಿಸಿದನು. (ಲೂಕ 4:​16-21) ಹೌದು, ದೀನರಿಗೆ ಸುವಾರ್ತೆ ಸಾರಲು ಯೇಸುವನ್ನು ಕಳುಹಿಸಲಾಗಿತ್ತು ಮತ್ತು ಈ ಉದ್ದೇಶದಿಂದಲೇ ತನ್ನ ದೀಕ್ಷಾಸ್ನಾನದ ಸಮಯದಲ್ಲಿ ಅವನು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟನು.​—⁠ಮತ್ತಾಯ 3:​16, 17.

5. ಸುಮಾರು 2,000 ವರ್ಷಗಳಿಂದ ಯಾರು ಸುವಾರ್ತೆಯನ್ನು ಸಾರುತ್ತಿದ್ದಾರೆ?

5 ಇದಲ್ಲದೆ, ತನ್ನ ಹಿಂಬಾಲಕರು ಸೌವಾರ್ತಿಕರು ಅಥವಾ ಸುವಾರ್ತೆಯನ್ನು ಸಾರುವವರಾಗಬೇಕೆಂದು ಯೇಸು ಬೋಧಿಸಿದನು. ಸಾ.ಶ. 33ರ ಪಂಚಾಶತ್ತಮದಲ್ಲಿ, ಇವರಲ್ಲಿ ಸುಮಾರು 120 ಮಂದಿ ಪವಿತ್ರಾತ್ಮದಿಂದ ಅಭಿಷೇಕಹೊಂದಿ ದೇವರ ಆತ್ಮಿಕ ಪುತ್ರರಾದರು. (ಅ. ಕೃತ್ಯಗಳು 2:​1-4, 14-42; ರೋಮಾಪುರ 8:​14-16) ದೀನರಿಗೆ ಮತ್ತು ಮನಮುರಿದವರಿಗೆ ಸುವಾರ್ತೆಯನ್ನು ಸಾರುವಂತೆ ಅವರಿಗೂ ಆಜ್ಞೆ ದೊರಕಿತು. 1,44,000 ಮಂದಿಯಲ್ಲಿ ಈ ರೀತಿ ಅಭಿಷಿಕ್ತರಾಗುವವರಲ್ಲಿ ಆ 120 ಮಂದಿ ಮೊದಲಿಗರು. ಈ ಗುಂಪಿನವರಲ್ಲಿ ಕೊನೆಯವರು ಈ ಭೂಮಿಯ ಮೇಲೆ ಇನ್ನೂ ಕ್ರಿಯಾಶೀಲರಾಗಿದ್ದಾರೆ. ಹೀಗೆ, ಸುಮಾರು 2,000 ವರ್ಷಗಳಿಂದ ಯೇಸುವಿನ ಅಭಿಷಿಕ್ತ ಹಿಂಬಾಲಕರು, ಜನರು “ದೇವರ ಕಡೆಗೆ ತಿರುಗಬೇಕೆಂತಲೂ ನಮ್ಮ ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡಬೇಕೆಂತಲೂ” ಹೇಳುತ್ತ ಸಾಕ್ಷಿಕೊಡುತ್ತಿದ್ದಾರೆ.​—⁠ಅ. ಕೃತ್ಯಗಳು 20:⁠21.

6. ಪುರಾತನ ಕಾಲಗಳಲ್ಲಿ ಸಾರಲ್ಪಟ್ಟ ಸುವಾರ್ತೆಯನ್ನು ಕೇಳಿ ಯಾರು ಉಪಶಮನವನ್ನು ಪಡೆದರು, ಮತ್ತು ಇಂದಿನ ಕುರಿತೇನು?

6 ಯೆಶಾಯನ ಪ್ರೇರಿತ ಸಂದೇಶವು ಬಾಬೆಲಿನಲ್ಲಿದ್ದ ಪಶ್ಚಾತ್ತಾಪಿಗಳಾದ ಯೆಹೂದ್ಯರಿಗೆ ಉಪಶಮನವನ್ನು ತಂದಿತು. ಯೇಸುವಿನ ಮತ್ತು ಅವನ ಶಿಷ್ಯರ ದಿನಗಳಲ್ಲಿ, ಅದು ಇಸ್ರಾಯೇಲಿನಲ್ಲಿ ನಡೆಯುತ್ತಿದ್ದ ದುಷ್ಟತ್ವದ ಕಾರಣ ಮನಗುಂದಿದ್ದ ಮತ್ತು ಒಂದನೆಯ ಶತಮಾನದ ಯೆಹೂದಿ ಮತದ ಸುಳ್ಳು ಧಾರ್ಮಿಕ ಸಂಪ್ರದಾಯಗಳಲ್ಲಿ ಬಂದಿಗಳಾಗಿ ನರಳಾಡುತ್ತಿದ್ದ ಯೆಹೂದ್ಯರಿಗೆ ಉಪಶಮನವನ್ನು ಕೊಟ್ಟಿತು. (ಮತ್ತಾಯ 15:​3-6) ಇಂದು ಕ್ರೈಸ್ತಪ್ರಪಂಚದ ವಿಧರ್ಮಿ ಪದ್ಧತಿಗಳು ಮತ್ತು ದೇವರಿಗೆ ಅಗೌರವವನ್ನು ಉಂಟುಮಾಡುವಂತಹ ಸಂಪ್ರದಾಯಗಳ ಬಲೆಗೆ ಬಿದ್ದಿರುವ ದಶಲಕ್ಷಾಂತರ ಜನರು, ಆ ಧಾರ್ಮಿಕ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಸಹ್ಯ ವಿಷಯಗಳಿಂದಾಗಿ “ನರಳಿ ಗೋಳಾಡು”ತ್ತಿದ್ದಾರೆ. (ಯೆಹೆಜ್ಕೇಲ 9:⁠4) ಆ ಸುವಾರ್ತೆಗೆ ಒಳ್ಳೆಯ ಪ್ರತಿವರ್ತನೆ ತೋರಿಸುವವರು, ಆ ದುರವಸ್ಥೆಯಿಂದ ಬಿಡುಗಡೆಹೊಂದುತ್ತಾರೆ. (ಮತ್ತಾಯ 9:​35-38) ಅವರು ಯೆಹೋವನನ್ನು “ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ” ಆರಾಧಿಸಲು ಕಲಿಯುವಾಗ ಅವರ ತಿಳಿವಳಿಕೆಯ ಕಣ್ಣುಗಳು ವಿಶಾಲವಾಗಿ ತೆರೆಯುತ್ತವೆ.​—⁠ಯೋಹಾನ 4:⁠24.

7, 8. (ಎ) ಎರಡು ‘ಶುಭವರುಷಗಳು’ ಯಾವುವು? (ಬಿ) ಯೆಹೋವನು ‘ಮುಯ್ಯಿತೀರಿಸುವ ದಿನಗಳು’ ಯಾವುವು?

7 ಸುವಾರ್ತೆಯನ್ನು ಸಾರಲಿಕ್ಕಾಗಿ ಒಂದು ವೇಳಾಪಟ್ಟಿಯಿದೆ. ಯೇಸು ಮತ್ತು ಅವನ ಹಿಂಬಾಲಕರಿಗೆ, “ಯೆಹೋವನು ನೇಮಿಸಿರುವ ಶುಭವರುಷ, ನಮ್ಮ ದೇವರು ಮುಯ್ಯಿತೀರಿಸುವ ದಿನ, ಇವುಗಳನ್ನು ಪ್ರಚುರಗೊಳಿಸುವದಕ್ಕೂ ದುಃಖಿತರೆಲ್ಲರನ್ನು ಸಂತೈಸುವದಕ್ಕೂ” ನೇಮಕವನ್ನು ಕೊಡಲಾಗಿತ್ತು. (ಯೆಶಾಯ 61:2) ಒಂದು ವರುಷದ ಅವಧಿ ದೀರ್ಘವಾಗಿರುವುದಾದರೂ ಅದಕ್ಕೆ ಆದಿ ಅಂತ್ಯಗಳಿವೆ. ಯೆಹೋವನ “ಶುಭವರುಷ”ವು, ಆತನು ದೀನರಿಗೆ ಸ್ವಾತಂತ್ರ್ಯದ ಕುರಿತಾದ ತನ್ನ ಘೋಷಣೆಗೆ ಪ್ರತಿವರ್ತನೆ ತೋರಿಸಲು ಸದವಕಾಶವನ್ನು ಕೊಡುವ ಸಮಯಾವಧಿಯಾಗಿದೆ.

8 ಒಂದನೆಯ ಶತಮಾನದಲ್ಲಿ, ಯೆಹೂದಿ ಜನಾಂಗದ ಶುಭವರುಷವು ಸಾ.ಶ. 29ರಲ್ಲಿ ಯೇಸು ತನ್ನ ಭೂಶುಶ್ರೂಷೆಯನ್ನು ಶುರುಮಾಡಿದಾಗ ಆರಂಭಗೊಂಡಿತು. ಅವನು ಯೆಹೂದ್ಯರಿಗೆ, “ಪರಲೋಕರಾಜ್ಯವು ಸಮೀಪಿಸಿತು; ದೇವರ ಕಡೆಗೆ ತಿರುಗಿಕೊಳ್ಳಿರಿ” ಎಂದು ಸಾರಿದನು. (ಮತ್ತಾಯ 4:17) ಆ ಶುಭವರುಷವು, ಯೆಹೋವನ “ಮುಯ್ಯಿತೀರಿಸುವ ದಿನ”ದ ತನಕ ಅಂದರೆ ಸಾ.ಶ. 70ರಲ್ಲಿ ಪರಮಾವಧಿಗೇರುವ ತನಕ ಮುಂದುವರಿಯಿತು. ಆ ವರ್ಷದಲ್ಲಿ ರೋಮನ್‌ ಸೈನ್ಯಗಳು ಯೆರೂಸಲೇಮನ್ನೂ ಅದರ ದೇವಾಲಯವನ್ನೂ ನಾಶಮಾಡುವಂತೆ ಯೆಹೋವನು ಅನುಮತಿಸಿದನು. (ಮತ್ತಾಯ 24:​3-22) ನಾವು ಇಂದು ಇನ್ನೊಂದು ಶುಭವರುಷದಲ್ಲಿ ಜೀವಿಸುತ್ತಿದ್ದೇವೆ. ಅದು 1914ರಲ್ಲಿ ಸ್ವರ್ಗದಲ್ಲಿ ದೇವರ ರಾಜ್ಯವು ಸ್ಥಾಪನೆಯಾದಾಗ ಪ್ರಾರಂಭವಾಯಿತು. ಈ ಶುಭವರುಷವು ಇನ್ನೊಂದು, ಆದರೆ ಹೆಚ್ಚು ವ್ಯಾಪಕವಾದ ಮುಯ್ಯಿತೀರಿಸುವ ದಿನವು ಬರುವಾಗ ಅಂತ್ಯಗೊಳ್ಳುವುದು. ಆಗ ಯೆಹೋವನು ಇಡೀ ಲೋಕ ವ್ಯವಸ್ಥೆಯನ್ನು “ಮಹಾಸಂಕಟ”ದಲ್ಲಿ ನಾಶಗೊಳಿಸುವನು.​—⁠ಮತ್ತಾಯ 24:⁠21, NW.

9. ಯೆಹೋವನ ಶುಭವರುಷದಿಂದ ಇಂದು ಯಾರು ಪ್ರಯೋಜನ ಪಡೆಯುತ್ತಾರೆ?

9 ದೇವರ ಶುಭವರುಷದಿಂದ ಇಂದು ಯಾರು ಪ್ರಯೋಜನ ಪಡೆಯುತ್ತಾರೆ? ಯಾರು ಸಂದೇಶವನ್ನು ಸ್ವೀಕರಿಸಿ, ದೀನತೆಯನ್ನು ಪ್ರದರ್ಶಿಸಿ, “ಎಲ್ಲಾ ಜನಾಂಗಗಳಿಗೆ” ಮಾಡಲಾಗುತ್ತಿರುವ ದೇವರ ರಾಜ್ಯದ ಘೋಷಣೆಯನ್ನು ಹುರುಪಿನಿಂದ ಬೆಂಬಲಿಸುತ್ತಾರೊ ಅವರೇ. (ಮಾರ್ಕ 13:10) ಸುವಾರ್ತೆಯು ನಿಜ ಸಾಂತ್ವನವನ್ನು ಕೊಡುತ್ತದೆಂದು ಇಂಥವರು ಕಂಡುಕೊಳ್ಳುತ್ತಾರೆ. ಆದರೆ ಯೆಹೋವನ ಶುಭವರುಷದ ಪ್ರಯೋಜನಗಳನ್ನು ನಿರಾಕರಿಸಿ, ಈ ಸಂದೇಶವನ್ನು ಯಾರು ತಿರಸ್ಕರಿಸುತ್ತಾರೊ ಅವರು, ಬೇಗನೆ ಆತನ ಮುಯ್ಯಿತೀರಿಸುವ ದಿನದ ನಿಜತ್ವವನ್ನು ಎದುರಿಸಲೇಬೇಕು.​—⁠2 ಥೆಸಲೊನೀಕ 1:​6-9.

ದೇವರನ್ನು ಮಹಿಮೆಪಡಿಸುವ ಆತ್ಮಿಕ ಫಲ

10. ಬಾಬೆಲಿನಿಂದ ಹಿಂದಿರುಗುತ್ತಿರುವ ಯೆಹೂದ್ಯರು ಯೆಹೋವನು ತಮ್ಮ ಪರವಾಗಿ ಮಾಡಿದ ಮಹಾ ಕಾರ್ಯದಿಂದ ಹೇಗೆ ಪ್ರಭಾವಿತರಾಗಿದ್ದಾರೆ?

10 ಬಾಬೆಲಿನಿಂದ ಹಿಂದಿರುಗುವ ಯೆಹೂದ್ಯರಿಗೆ ಯೆಹೋವನು ತಮ್ಮ ಪರವಾಗಿ ಒಂದು ಮಹಾ ಕಾರ್ಯವನ್ನು ನಡೆಸಿದ್ದಾನೆಂಬುದು ತಿಳಿದಿದೆ. ಕೊನೆಗೂ ಅವರು ಸ್ವತಂತ್ರರಾಗಿರುವುದರಿಂದ, ಬಂದಿಗಳಾಗಿದ್ದ ಅವರ ಶೋಕವು ಉಲ್ಲಾಸಕರವಾದ ಸ್ತುತಿಯಾಗಿ ಬದಲಾಗುತ್ತದೆ. ಹೀಗೆ ಯೆಶಾಯನು ತನ್ನ ಪ್ರವಾದನ ನೇಮಕವನ್ನು ಪೂರೈಸುತ್ತಾನೆ. ಅಂದರೆ, “ದುಃಖಿತರೆಲ್ಲರನ್ನು ಸಂತೈಸುವದಕ್ಕೂ ಚೀಯೋನಿನಲ್ಲಿ ಶೋಕಿಸುವವರಿಗೆ ಬೂದಿಗೆ ಬದಲಾಗಿ ಶಿರೋಭೂಷಣ, ದುಃಖವಿದ್ದಲ್ಲಿ ಆನಂದತೈಲ, ಕುಂದಿದ ಮನಕ್ಕೆ ಪ್ರತಿಯಾಗಿ ಉತ್ಸಾಹಸ್ತೋತ್ರದ ವಸ್ತ್ರ ಇವುಗಳನ್ನು ಒದಗಿಸಿಕೊಡುವದಕ್ಕೂ . . . ಯೆಹೋವನು ತನ್ನ ಪ್ರಭಾವಕ್ಕೋಸ್ಕರ ಹಾಕಿದ ನೀತಿವೃಕ್ಷಗಳು ಎಂಬ ಬಿರುದು ಇವರಿಗಾಗುವದು.”​—⁠ಯೆಶಾಯ 61:⁠3.

11. ಒಂದನೆಯ ಶತಮಾನದಲ್ಲಿ ಯೆಹೋವನ ಮಹಾ ಕಾರ್ಯಕ್ಕಾಗಿ ಆತನನ್ನು ಸ್ತುತಿಸಲು ಯಾರಿಗೆ ಸಕಾರಣವಿತ್ತು?

11 ಒಂದನೆಯ ಶತಮಾನದಲ್ಲಿ ಸುಳ್ಳು ಧರ್ಮದ ಬಂದಿಗಳಾಗಿದ್ದು ಬಳಿಕ ಬಿಡುಗಡೆಹೊಂದಿದ ಯೆಹೂದ್ಯರು ಸಹ ದೇವರು ಅವರ ಪರವಾಗಿ ಮಾಡಿದ ಮಹಾ ಕಾರ್ಯಕ್ಕಾಗಿ ಆತನನ್ನು ಸ್ತುತಿಸಿದರು. ಆತ್ಮಿಕವಾಗಿ ಸತ್ತಿದ್ದ ಜನಾಂಗದಿಂದ ಅವರಿಗೆ ಬಿಡುಗಡೆಯಾದಾಗ, ಅವರ ಕುಂದಿದ ಮನ “ಉತ್ಸಾಹಸ್ತೋತ್ರದ ವಸ್ತ್ರ”ವನ್ನು ಧರಿಸಿತು. ಅಂತಹ ಒಂದು ಪರಿವರ್ತನೆಯನ್ನು ಮೊದಲಾಗಿ ಯೇಸುವಿನ ಶಿಷ್ಯರು ಅನುಭವಿಸಿದರು. ಯೇಸುವಿನ ಮರಣದ ದೆಸೆಯಿಂದ ಅವರಿಗಿದ್ದ ಶೋಕವು ಅವರ ಪುನರುತ್ಥಿತ ಕರ್ತನು ಅವರನ್ನು ಪವಿತ್ರಾತ್ಮದಿಂದ ಅಭಿಷೇಕಿಸಿದಾಗ ಹರ್ಷವಾಗಿ ಬದಲಾವಣೆಹೊಂದಿತು. ಬಳಿಕ ಸ್ವಲ್ಪ ಸಮಯದಲ್ಲೇ ತದ್ರೀತಿಯ ಬದಲಾವಣೆಯನ್ನು 3,000 ಮಂದಿ ದೀನ ವ್ಯಕ್ತಿಗಳು ಅನುಭವಿಸಿದರು. ಇವರು ಹೊಸದಾಗಿ ಅಭಿಷಿಕ್ತರಾಗಿದ್ದ ಕ್ರೈಸ್ತರು ನಡೆಸಿದ ಸಾರುವ ಕಾರ್ಯಕ್ಕೆ ಪ್ರತಿವರ್ತನೆ ತೋರಿಸಿ, ಸಾ.ಶ. 33ರ ಪಂಚಾಶತ್ತಮದಂದು ದೀಕ್ಷಾಸ್ನಾನ ಪಡೆದವರಾಗಿದ್ದರು. (ಅ. ಕೃತ್ಯಗಳು 2:41) ಯೆಹೋವನ ಆಶೀರ್ವಾದವಿದೆಯೆಂಬ ಭರವಸೆಯಿಂದಿರುವುದು ಅದೆಷ್ಟು ಒಳ್ಳೇದಾಗಿತ್ತು! “ಚೀಯೋನಿನಲ್ಲಿ ಶೋಕಿಸುವ” ಬದಲು, ಅವರು ಪವಿತ್ರಾತ್ಮವನ್ನು ಪಡೆದು ಯೆಹೋವನಿಂದ ಹೇರಳವಾಗಿ ಆಶೀರ್ವದಿತರಾಗುವವರ ಉಲ್ಲಾಸವನ್ನು ಸೂಚಿಸುವ “ಆನಂದತೈಲ”ದಿಂದ ಚೈತನ್ಯವನ್ನು ಪಡೆದರು.​—⁠ಇಬ್ರಿಯ 1:⁠9.

12, 13. (ಎ) ಸಾ.ಶ.ಪೂ. 537ರಲ್ಲಿ ಹಿಂದಿರುಗಿ ಬಂದ ಯೆಹೂದ್ಯರ ಮಧ್ಯೆ ಯಾರು ದೊಡ್ಡ “ನೀತಿವೃಕ್ಷಗಳು” ಆಗಿದ್ದರು? (ಬಿ) ಸಾ.ಶ. 33ರ ಪಂಚಾಶತ್ತಮದಂದಿನಿಂದ ಯಾರು ದೊಡ್ಡ “ನೀತಿವೃಕ್ಷಗಳು” ಆಗಿದ್ದಾರೆ?

12 ಯೆಹೋವನು ತನ್ನ ಜನರಿಗೆ ದೊಡ್ಡ “ನೀತಿವೃಕ್ಷ”ಗಳನ್ನು ಕೊಟ್ಟು ಆಶೀರ್ವದಿಸುತ್ತಾನೆ. ಈ ದೊಡ್ಡ ವೃಕ್ಷಗಳು ಯಾರು? ಸಾ.ಶ.ಪೂ. 537ರ ಅನಂತರದ ವರುಷಗಳಲ್ಲಿ, ಇವರು ದೇವರ ವಾಕ್ಯವನ್ನು ಅಭ್ಯಸಿಸಿ, ಅದರ ಕುರಿತು ಮನನಮಾಡಿ, ಯೆಹೋವನ ನೀತಿಯ ಮಟ್ಟಗಳನ್ನು ಬೆಳೆಸಿಕೊಂಡಂಥ ವ್ಯಕ್ತಿಗಳಾಗಿದ್ದರು. (ಕೀರ್ತನೆ 1:​1-3; ಯೆಶಾಯ 44:​2-4; ಯೆರೆಮೀಯ 17:​7, 8) ಎಜ್ರ, ಹಗ್ಗಾಯ, ಜೆಕರ್ಯ ಮತ್ತು ಮಹಾಯಾಜಕ ಯೆಹೋಶುವರಂತಹ ಪುರುಷರು, “ನೀತಿವೃಕ್ಷ”ಗಳಾಗಿ ಅಂದರೆ ಸತ್ಯದ ಪರವಾಗಿ ಮತ್ತು ಜನಾಂಗದ ಆತ್ಮಿಕ ಮಾಲಿನ್ಯದ ವಿರುದ್ಧವಾಗಿ ನಿಂತ ಧೀರರಾಗಿ ಪರಿಣಮಿಸಿದರು.

13 ಸಾ.ಶ. 33ರ ಪಂಚಾಶತ್ತಮದಿಂದ ಹಿಡಿದು, ದೇವರು ಅಂಥದ್ದೇ ದೊಡ್ಡ “ನೀತಿವೃಕ್ಷ”ಗಳನ್ನು ಅಂದರೆ ಧೈರ್ಯವಂತ ಅಭಿಷಿಕ್ತ ಕ್ರೈಸ್ತರನ್ನು, ತನ್ನ ಹೊಸ ಜನಾಂಗವಾದ ‘ದೇವರ ಇಸ್ರಾಯೇಲಿನ’ ಆತ್ಮಿಕ ಆಸ್ತಿಯಲ್ಲಿ ನೆಟ್ಟನು. (ಗಲಾತ್ಯ 6:16) ಶತಮಾನಗಳು ಕಳೆದಂತೆ ಈ “ವೃಕ್ಷಗಳು” ಸಂಖ್ಯೆಯಲ್ಲಿ 1,44,000ವನ್ನು ತಲಪಿವೆ. ಅವು ಯೆಹೋವ ದೇವರನ್ನು ಅಂದಗೊಳಿಸಲು ಅಥವಾ ಆತನಿಗೆ ಮಹಿಮೆಯನ್ನು ತರಲು ನೀತಿಫಲಗಳನ್ನು ಫಲಿಸಿವೆ. (ಪ್ರಕಟನೆ 14:⁠3) ಈ ಭವ್ಯ ‘ವೃಕ್ಷಗಳಲ್ಲಿ’ ಕೊನೆಯವು, 1919ರ ನಂತರದ ವರ್ಷಗಳಲ್ಲಿ ಹುಲುಸಾಗಿ ಬೆಳೆದಿವೆ; ಆ ಸಮಯದಲ್ಲಿ ಯೆಹೋವನು, ದೇವರ ಇಸ್ರಾಯೇಲಿನಲ್ಲಿ ಉಳಿದವರನ್ನು ಅವರ ತಾತ್ಕಾಲಿಕ ನಿಷ್ಕ್ರಿಯ ಸ್ಥಿತಿಯಿಂದ ಪುನರುಜ್ಜೀವಿಸಿದನು. ಅವರಿಗೆ ಸಮೃದ್ಧವಾಗಿ ಆತ್ಮಿಕ ಜಲವನ್ನು ಒದಗಿಸುವ ಮೂಲಕ ಯೆಹೋವನು ವಾಸ್ತವವಾಗಿ ನೀತಿಫಲಗಳನ್ನು ಫಲಿಸುವಂತಹ ವೃಕ್ಷಗಳ ಒಂದು ಕಾಡನ್ನೇ ಉಂಟುಮಾಡಿದ್ದಾನೆ.​—⁠ಯೆಶಾಯ 27:⁠6.

14, 15. ಬಿಡುಗಡೆ ಹೊಂದಿದ ಯೆಹೋವನ ಆರಾಧಕರು (ಎ) ಸಾ.ಶ.ಪೂ. 537ರಲ್ಲಿ, (ಬಿ) ಸಾ.ಶ. 33ರಲ್ಲಿ ಮತ್ತು (ಸಿ) 1919ರಲ್ಲಿ ಯಾವ ಕಾರ್ಯಯೋಜನೆಗಳನ್ನು ಕೈಗೊಂಡರು?

14 ಈ “ವೃಕ್ಷಗಳ” ಕೆಲಸವನ್ನು ಎತ್ತಿಹೇಳುತ್ತ ಯೆಶಾಯನು ಮುಂದುವರಿಸುವುದು: “ಪುರಾತನಕಾಲದಲ್ಲಿ ಹಾಳಾದ ನಿವೇಶನಗಳನ್ನು ತಿರಿಗಿ ಕಟ್ಟುವರು, ಪೂರ್ವದಲ್ಲಿ ಪಾಳುಬಿದ್ದದ್ದನ್ನು ಪುನಃ ಎಬ್ಬಿಸುವರು, ತಲತಲಾಂತರಗಳಿಂದ ಹಾಳುಬೀಳಾದ ಪಟ್ಟಣಗಳನ್ನು ಜೀರ್ಣೋದ್ಧಾರಮಾಡುವರು.” (ಯೆಶಾಯ 61:4) ಪಾರಸಿಯ ಅರಸನಾದ ಕೋರೆಷನ ಆಜ್ಞಾನುಸಾರ, ಬಾಬೆಲಿನಿಂದ ಹಿಂದಿರುಗಿದ ನಂಬಿಗಸ್ತ ಯೆಹೂದ್ಯರು ದೀರ್ಘಕಾಲದಿಂದ ಹಾಳುಸ್ಥಿತಿಯಲ್ಲಿ ಬಿದ್ದಿದ್ದ ಯೆರೂಸಲೇಮ್‌ ಮತ್ತು ಅದರ ದೇವಾಲಯದ ಜೀರ್ಣೋದ್ಧಾರ ಮಾಡಿದರು. ತದ್ರೀತಿ, ಸಾ.ಶ. 33 ಮತ್ತು 1919ನೆಯ ಇಸವಿಗಳ ನಂತರವೂ ಪುನಸ್ಸ್ಥಾಪನೆಯ ಯೋಜನೆಗಳು ನಡೆಯಲಿದ್ದವು.

15 ಸಾ.ಶ. 33ರಲ್ಲಿ ಯೇಸುವಿನ ದಸ್ತಗಿರಿ, ನ್ಯಾಯವಿಚಾರಣೆ ಮತ್ತು ಮರಣದ ಕಾರಣ ಅವನ ಶಿಷ್ಯರು ತುಂಬ ದುಃಖಿತರಾದರು. (ಮತ್ತಾಯ 26:31) ಆದರೆ ಅವನ ಪುನರುತ್ಥಾನದ ಬಳಿಕ ಅವನು ಅವರಿಗೆ ಕಾಣಿಸಿಕೊಂಡಾಗ ಅವರ ದೃಷ್ಟಿಕೋನವು ಬದಲಾಯಿತು. ಮತ್ತು ಪವಿತ್ರಾತ್ಮವನ್ನು ಯಾವಾಗ ಅವರ ಮೇಲೆ ಸುರಿಸಲಾಯಿತೊ ಅಂದಿನಿಂದ ಅವರು “ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ” ಸುವಾರ್ತೆಯನ್ನು ಸಾರುವ ಕಾರ್ಯದಲ್ಲಿ ಮಗ್ನರಾದರು. (ಅ. ಕೃತ್ಯಗಳು 1:8) ಹೀಗೆ ಅವರು ಶುದ್ಧಾರಾಧನೆಯನ್ನು ಪುನಸ್ಸ್ಥಾಪಿಸತೊಡಗಿದರು. ಅದೇ ರೀತಿಯಲ್ಲಿ, ಯೇಸು ಕ್ರಿಸ್ತನು 1919ರಿಂದ ಹಿಡಿದು ತನ್ನ ಅಭಿಷಿಕ್ತ ಸಹೋದರರಲ್ಲಿ ಉಳಿಕೆಯವರು “ತಲತಲಾಂತರಗಳಿಂದ ಹಾಳುಬೀಳಾದ” ಸ್ಥಳಗಳನ್ನು ಪುನಃ ಕಟ್ಟುವಂತೆ ಮಾಡಿದನು. ಅನೇಕ ಶತಮಾನಗಳಿಂದ ಕ್ರೈಸ್ತಪ್ರಪಂಚದ ಪಾದ್ರಿವರ್ಗದವರು ಯೆಹೋವನ ಜ್ಞಾನವನ್ನು ಜನರಿಗೆ ನೀಡದೇ ಹೋಗಿದ್ದರು. ಅದರ ಸ್ಥಾನದಲ್ಲಿ ಅವರು ಮನುಷ್ಯನಿರ್ಮಿತ ಸಂಪ್ರದಾಯಗಳನ್ನೂ ಅಶಾಸ್ತ್ರೀಯವಾದ ಸಿದ್ಧಾಂತಗಳನ್ನೂ ಒಳಗೆ ತಂದಿದ್ದರು. ಆದರೆ ಅಭಿಷಿಕ್ತ ಕ್ರೈಸ್ತರು ಸತ್ಯಾರಾಧನೆಯ ಪುನಸ್ಸ್ಥಾಪನೆಯು ಮುಂದುವರಿಯುವಂತೆ, ಸುಳ್ಳು ಧರ್ಮದಿಂದ ಕಳಂಕಿತವಾಗಿದ್ದ ಪದ್ಧತಿಗಳನ್ನು ತಮ್ಮ ಸಭೆಗಳಿಂದ ತೊಲಗಿಸಿದರು. ಮತ್ತು ಜಗತ್ತು ಈ ವರೆಗೂ ಕಂಡುಕೇಳಿರದಷ್ಟು ದೊಡ್ಡದಾದ ಸಾರುವ ಕಾರ್ಯಾಚರಣೆಯನ್ನು ಅವರು ಆರಂಭಿಸಿದರು.​—⁠ಮಾರ್ಕ 13:⁠10.

16. ಪುನಸ್ಸ್ಥಾಪನೆಯ ಕೆಲಸದಲ್ಲಿ ಅಭಿಷಿಕ್ತ ಕ್ರೈಸ್ತರಿಗೆ ಯಾರು ಸಹಾಯ ನೀಡುತ್ತಿದ್ದಾರೆ, ಮತ್ತು ಅವರಿಗೆ ಯಾವ ಕೆಲಸಗಳು ವಹಿಸಿಕೊಡಲ್ಪಟ್ಟಿವೆ?

16 ಇದೊಂದು ದೊಡ್ಡ ನೇಮಕವಾಗಿತ್ತು. ದೇವರ ಇಸ್ರಾಯೇಲಿನ ಉಳಿದಿದ್ದ ಕೊಂಚ ಮಂದಿ ಇಂಥ ಭಾರೀ ಕೆಲಸವನ್ನು ಹೇಗೆ ಪೂರೈಸಬಲ್ಲರು? ಯೆಶಾಯನು ಹೀಗೆ ಹೇಳುವಂತೆ ಯೆಹೋವನು ಪ್ರೇರಿಸಿದನು: “ಆಗ ವಿದೇಶೀಯರು ನಿಂತುಕೊಂಡು ನಿಮ್ಮ ಮಂದೆಗಳನ್ನು ಮೇಯಿಸುವರು, ಅನ್ಯರು ನಿಮಗೆ ಉಳುವವರೂ ತೋಟಗಾರರೂ ಆಗುವರು.” (ಯೆಶಾಯ 61:5) ಯೇಸುವಿನ “ಬೇರೆ ಕುರಿ”ಗಳ “ಮಹಾ ಸಮೂಹ”ದವರು ಈ ಸಾಂಕೇತಿಕ ಅನ್ಯರೂ ವಿದೇಶೀಯರೂ ಆಗಿ ಪರಿಣಮಿಸಿದ್ದಾರೆ. * (ಪ್ರಕಟನೆ 7:9; ಯೋಹಾನ 10:​11, 16) ಸ್ವರ್ಗೀಯ ಬಾಧ್ಯತೆಯನ್ನು ಪಡೆಯುವ ದೃಷ್ಟಿಯಿಂದ ಇವರಿಗೆ ಪವಿತ್ರಾತ್ಮಾಭಿಷೇಕವಾಗುವುದಿಲ್ಲ. ಬದಲಾಗಿ, ಅವರಿಗೆ ಭೂಪರದೈಸಿನಲ್ಲಿ ನಿತ್ಯಜೀವದ ನಿರೀಕ್ಷೆಯಿದೆ. (ಪ್ರಕಟನೆ 21:​3, 4) ಆದರೂ, ಅವರು ಯೆಹೋವನನ್ನು ಪ್ರೀತಿಸುವ ಕಾರಣ ಅವರಿಗೆ ಆತ್ಮಿಕ ಕುರಿಪಾಲನೆ, ಸಾಗುವಳಿ ಮತ್ತು ದ್ರಾಕ್ಷೇಬಳ್ಳಿ ಸವರುವಿಕೆಯ ಕೆಲಸ ವಹಿಸಿಕೊಡಲ್ಪಟ್ಟಿದೆ. ಇಂತಹ ಚಟುವಟಿಕೆಗಳು ಕೂಲಿ ಕೆಲಸಗಳಲ್ಲ. ಈ ಕೆಲಸಗಾರರು ದೇವರ ಇಸ್ರಾಯೇಲಿನ ಉಳಿಕೆಯವರ ನಿರ್ದೇಶನದ ಕೆಳಗೆ ಜನರ ಕುರಿಪಾಲನೆ ಮಾಡುವ, ಪೋಷಿಸುವ ಮತ್ತು ಕೊಯ್ಯುವ ಕೆಲಸದಲ್ಲಿ ಸಹಾಯ ನೀಡುತ್ತಾರೆ.​—⁠ಲೂಕ 10:2; ಅ. ಕೃತ್ಯಗಳು 20:28; 1 ಪೇತ್ರ 5:2; ಪ್ರಕಟನೆ 14:​15, 16.

17. (ಎ) ದೇವರ ಇಸ್ರಾಯೇಲಿನ ಸದಸ್ಯರನ್ನು ಏನೆಂದು ಕರೆಯಲಾಗುವುದು? (ಬಿ) ಪಾಪಗಳ ಕ್ಷಮಾಪಣೆಗೆ ಬೇಕಾಗಿರುವ ಒಂದೇ ಯಜ್ಞವು ಯಾವುದು?

17 ದೇವರ ಇಸ್ರಾಯೇಲಿನ ಕುರಿತೇನು? ಯೆಹೋವನು ಯೆಶಾಯನ ಮೂಲಕ ಅವರಿಗೆ ಹೇಳುವುದು: “ನೀವೋ ಯೆಹೋವನ ಯಾಜಕರೆಂಬ ಬಿರುದನ್ನು ಹೊಂದುವಿರಿ, ಜನರು ನಿಮ್ಮನ್ನು ನಮ್ಮ ದೇವರ ಸೇವಕರು ಎಂದು ಕರೆಯುವರು; ಜನಾಂಗಗಳ ಆಸ್ತಿಯನ್ನನುಭವಿಸುವಿರಿ, ಅವುಗಳ ವೈಭವವನ್ನು ಪಡೆದು ಹೊಗಳಿಕೊಳ್ಳುವಿರಿ.” (ಯೆಶಾಯ 61:6) ಪೂರ್ವಕಾಲದ ಇಸ್ರಾಯೇಲಿನಲ್ಲಿ ಸ್ವತಃ ಯಾಜಕರ ಪರವಾಗಿ ಮತ್ತು ಜೊತೆ ಇಸ್ರಾಯೇಲ್ಯರ ಪರವಾಗಿ ಯಜ್ಞಗಳನ್ನು ಅರ್ಪಿಸಲು ಯೆಹೋವನು ಲೇವಿಕುಲದ ಯಾಜಕತ್ವವನ್ನು ಒದಗಿಸಿದನು. ಆದರೆ ಯೆಹೋವನು ಸಾ.ಶ. 33ರಲ್ಲಿ ಲೇವಿಕುಲದ ಯಾಜಕತ್ವವನ್ನು ಉಪಯೋಗಿಸುವುದನ್ನು ನಿಲ್ಲಿಸಿ, ಅದಕ್ಕಿಂತಲೂ ಉತ್ತಮವಾದ ಇನ್ನೊಂದು ಏರ್ಪಾಡನ್ನು ಆರಂಭಿಸಿದನು. ಆತನು ಮಾನವಕುಲದ ಪಾಪಕ್ಕಾಗಿ ಯೇಸುವಿನ ಪರಿಪೂರ್ಣ ಜೀವವನ್ನು ಯಜ್ಞವಾಗಿ ಅಂಗೀಕರಿಸಿದನು. ಅಂದಿನಿಂದ ಇನ್ನು ಯಾವ ಯಜ್ಞವೂ ಬೇಕಾಗಿದ್ದದ್ದಿಲ್ಲ. ಏಕೆಂದರೆ ಯೇಸು ಕ್ರಿಸ್ತನ ಯಜ್ಞವು ಸದಾಕಾಲಕ್ಕೆ ಅನ್ವಯಿಸುತ್ತದೆ.​—⁠ಯೋಹಾನ 14:6; ಕೊಲೊಸ್ಸೆ 2:​13, 14; ಇಬ್ರಿಯ 9:​11-14, 24.

18. ದೇವರ ಇಸ್ರಾಯೇಲ್‌ ಯಾವ ವಿಧದ ಯಾಜಕತ್ವವನ್ನು ರೂಪಿಸುತ್ತದೆ, ಮತ್ತು ಅವರಿಗಿರುವ ನೇಮಕವೇನು?

18 ಹಾಗಾದರೆ, ದೇವರ ಇಸ್ರಾಯೇಲಿನ ಸದಸ್ಯರು “ಯೆಹೋವನ ಯಾಜಕರು” ಆಗುವುದು ಹೇಗೆ? ಅಭಿಷಿಕ್ತ ಜೊತೆ ಕ್ರೈಸ್ತರಿಗೆ ಬರೆಯುತ್ತಾ ಅಪೊಸ್ತಲ ಪೇತ್ರನು ಹೇಳಿದ್ದು: “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ.” (1 ಪೇತ್ರ 2:9) ಹೀಗೆ, ಒಂದು ಗುಂಪಿನೋಪಾದಿ ಅಭಿಷಿಕ್ತ ಕ್ರೈಸ್ತರು ನಿರ್ದಿಷ್ಟ ನೇಮಕವಿರುವ, ಅಂದರೆ ಯೆಹೋವನ ಮಹಿಮೆಯ ಕುರಿತಾಗಿ ಜನಾಂಗಗಳಿಗೆ ತಿಳಿಸುವ ಯಾಜಕತ್ವವನ್ನು ರೂಪಿಸುತ್ತಾರೆ. ಅವರು ಆತನಿಗೆ ಸಾಕ್ಷಿಗಳಾಗಿರಬೇಕು. (ಯೆಶಾಯ 43:​10-12) ಈ ಕಡೇ ದಿವಸಗಳಲ್ಲೆಲ್ಲ, ಅಭಿಷಿಕ್ತ ಕ್ರೈಸ್ತರು ಈ ಮಹತ್ವಪೂರ್ಣವಾದ ನೇಮಕವನ್ನು ನಂಬಿಗಸ್ತಿಕೆಯಿಂದ ಪೂರೈಸಿರುತ್ತಾರೆ. ಇದರ ಪರಿಣಾಮವಾಗಿ, ಈಗ ದಶಲಕ್ಷಾಂತರ ಜನರು ಯೆಹೋವನ ರಾಜ್ಯದ ಕುರಿತು ಸಾಕ್ಷಿನೀಡುವ ಕೆಲಸದಲ್ಲಿ ಅವರೊಂದಿಗೆ ಭಾಗಿಗಳಾಗುತ್ತಾರೆ.

19. ಅಭಿಷಿಕ್ತ ಕ್ರೈಸ್ತರಿಗೆ ಮಾಡಲು ಯಾವ ಸೇವಾ ಸುಯೋಗವಿರುವುದು?

19 ಇದಲ್ಲದೆ, ದೇವರ ಇಸ್ರಾಯೇಲಿನ ಸದಸ್ಯರಿಗೆ ಇನ್ನೊಂದು ವಿಧದಲ್ಲೂ ಯಾಜಕರಾಗಿ ಸೇವೆಮಾಡುವ ಪ್ರತೀಕ್ಷೆಯಿದೆ. ಅವರ ಮರಣಾನಂತರ, ಸ್ವರ್ಗದಲ್ಲಿ ಅಮರವಾದ ಆತ್ಮ ಜೀವನಕ್ಕೆ ಅವರಿಗೆ ಪುನರುತ್ಥಾನವಾಗುತ್ತದೆ. ಅಲ್ಲಿ ಅವರು ಯೇಸುವಿನ ರಾಜ್ಯದಲ್ಲಿ ಅವನೊಂದಿಗೆ ಆಳುವವರಾಗಿರುವರು ಮಾತ್ರವಲ್ಲ ದೇವರ ಯಾಜಕರೂ ಆಗಿರುವರು. (ಪ್ರಕಟನೆ 5:​10; 20:⁠6) ಹೀಗಿರುವುದರಿಂದ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಪ್ರಯೋಜನಗಳನ್ನು ಭೂಮಿಯಲ್ಲಿರುವ ನಂಬಿಗಸ್ತ ಮಾನವರಿಗೆ ಅನ್ವಯಿಸುವ ಸುಯೋಗ ಅವರಿಗಿರುವುದು. ಪ್ರಕಟನೆ 22ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ಅಪೊಸ್ತಲ ಯೋಹಾನನ ದರ್ಶನದಲ್ಲಿ ಅವರನ್ನು ಪುನಃ “ವೃಕ್ಷ”ಗಳೆಂದು ಕರೆಯಲಾಗಿದೆ. ಈ 1,44,000 “ವೃಕ್ಷ”ಗಳು ಸ್ವರ್ಗದಲ್ಲಿ ಕಂಡುಬರುತ್ತವೆ ಮತ್ತು ‘ಅವು ತಿಂಗಳು ತಿಂಗಳಿಗೆ ಫಲವನ್ನು ಫಲಿಸುತ್ತಾ ಹನ್ನೆರಡು ತರದ ಫಲಗಳನ್ನು ಕೊಡುತ್ತವೆ. ಆ ಮರಗಳ ಎಲೆಗಳು ಜನಾಂಗದವರನ್ನು ವಾಸಿಮಾಡುವುದಕ್ಕೆ ಪ್ರಯೋಜನವಾಗಿವೆ.’ (ಪ್ರಕಟನೆ 22:1, 2) ಅದೆಷ್ಟು ಅದ್ಭುತಕರವಾದ ಯಾಜಕತ್ವದ ಸೇವೆಯಾಗಿರುವುದು!

ನಾಚಿಕೆ, ಅವಮಾನ, ಬಳಿಕ ಸಂತೋಷ

20. ವಿರೋಧವಿದ್ದರೂ ರಾಜ್ಯವೈಭವದ ಯಾಜಕತ್ವವು ಯಾವ ಆಶೀರ್ವಾದವನ್ನು ಮುನ್ನೋಡುತ್ತಿದೆ?

20 ಯೆಹೋವನ ಶುಭವರುಷವು ಪ್ರಾರಂಭವಾದ 1914ರಿಂದೀಚೆಗೆ ರಾಜ್ಯವೈಭವದ ಯಾಜಕತ್ವವು ಕ್ರೈಸ್ತಪ್ರಪಂಚದ ಪಾದ್ರಿವರ್ಗದಿಂದ ಸತತವಾದ ವಿರೋಧವನ್ನು ಎದುರಿಸಿದೆ. (ಪ್ರಕಟನೆ 12:17) ಹೀಗಿದ್ದರೂ, ಸುವಾರ್ತೆಯ ಸಾರುವಿಕೆಯನ್ನು ನಿಲ್ಲಿಸಲು ಮಾಡಿರುವ ಸಕಲ ಪ್ರಯತ್ನಗಳು ಅಂತಿಮವಾಗಿ ವಿಫಲಗೊಂಡಿವೆ. ಯೆಶಾಯನ ಪ್ರವಾದನೆ ಇದನ್ನು ಹೀಗೆ ಹೇಳುವ ಮೂಲಕ ಮುಂತಿಳಿಸಿತು: “ನಿಮಗಾದ ಅವಮಾನಕ್ಕೆ ಬದಲಾಗಿ ಎರಡರಷ್ಟು ಮಾನವನ್ನು ಹೊಂದುವಿರಿ; ನಾಚಿಕೆಪಟ್ಟದ್ದಕ್ಕೆ ಪ್ರತಿಯಾಗಿ ಇವರು ತಮ್ಮ ಸ್ವಾಸ್ತ್ಯದಲ್ಲಿ ಹಿಗ್ಗುವರು; ಹೀಗೆ ತಮ್ಮ ದೇಶದಲ್ಲಿ ಎರಡರಷ್ಟನ್ನು ಅನುಭವಿಸುವರು; ಇವರಿಗೆ ಶಾಶ್ವತಸಂತೋಷವಾಗುವದು.”​—ಯೆಶಾಯ 61:⁠7.

21. ಅಭಿಷಿಕ್ತ ಕ್ರೈಸ್ತರು ಎರಡರಷ್ಟು ಆಶೀರ್ವಾದಗಳನ್ನು ಅನುಭವಿಸುವಂತಾದದ್ದು ಹೇಗೆ?

21 ಒಂದನೆಯ ಲೋಕ ಯುದ್ಧದ ಸಮಯದಲ್ಲಿ ಅಭಿಷಿಕ್ತ ಉಳಿಕೆಯವರು ರಾಷ್ಟ್ರವಾದಿ ಕ್ರೈಸ್ತಪ್ರಪಂಚದ ಕೆಳಗೆ ನಾಚಿಕೆ ಮತ್ತು ಅವಮಾನಗಳನ್ನು ಅನುಭವಿಸಿದರು. ಬ್ರೂಕ್ಲಿನ್‌ನ ಮುಖ್ಯಕಾರ್ಯಾಲಯದಲ್ಲಿದ್ದ ಎಂಟು ಮಂದಿ ನಂಬಿಗಸ್ತ ಸಹೋದರರ ಮೇಲೆ ದೇಶದ್ರೋಹದ ಸುಳ್ಳು ಅಪವಾದವನ್ನು ಹೊರಿಸಿದವರಲ್ಲಿ ಪಾದ್ರಿವರ್ಗದ ಸದಸ್ಯರೂ ಇದ್ದರು. ಈ ಸಹೋದರರನ್ನು ಅನ್ಯಾಯವಾಗಿ ಒಂಬತ್ತು ತಿಂಗಳುಗಳ ವರೆಗೆ ಸೆರೆಮನೆಯಲ್ಲಿ ಹಾಕಲಾಯಿತು. ಕೊನೆಗೆ, 1919ರ ವಸಂತಕಾಲದಲ್ಲಿ ಅವರಿಗೆ ಬಿಡುಗಡೆಯಾಗಿ, ಆ ಬಳಿಕ ಅವರ ಮೇಲಿದ್ದ ಎಲ್ಲ ಅಪವಾದಗಳನ್ನು ರದ್ದುಮಾಡಲಾಯಿತು. ಹೀಗೆ ಸಾರುವ ಕೆಲಸವನ್ನು ನಿಲ್ಲಿಸುವ ಒಳಸಂಚು ತಿರುಗುಬಾಣವಾಯಿತು. ತನ್ನ ಜನರು ನಿತ್ಯ ನಾಚಿಕೆಯನ್ನು ಅನುಭವಿಸುವಂತೆ ಬಿಡುವ ಬದಲಾಗಿ, ಯೆಹೋವನು ಅವರನ್ನು ಬಿಡುಗಡೆಮಾಡಿ ಅವರ ಆತ್ಮಿಕ ಸ್ಥಿತಿಗೆ ಅಂದರೆ ಅವರ “ದೇಶ”ಕ್ಕೆ ಅವರನ್ನು ಹಿಂದಿರುಗಿಸಿದನು. ಅಲ್ಲಿ ಅವರು ಎರಡರಷ್ಟು ಆಶೀರ್ವಾದಗಳನ್ನು ಅನುಭವಿಸಿದರು. ಅವರ ಕಷ್ಟಾನುಭವಕ್ಕೆ ಪ್ರತಿಯಾಗಿ ಯೆಹೋವನ ಆಶೀರ್ವಾದವು ಅವರಿಗೆ ಧಾರಾಳವಾದ ನಷ್ಟಭರ್ತಿಯನ್ನು ಮಾಡಿತು. ಹರ್ಷಧ್ವನಿಗೈಯಲು ಅವರಿಗೆ ನಿಜವಾಗಿಯೂ ಸಕಾರಣವಿತ್ತು!

22, 23. ಅಭಿಷಿಕ್ತ ಕ್ರೈಸ್ತರು ಯೆಹೋವನನ್ನು ಹೇಗೆ ಅನುಕರಿಸಿದ್ದಾರೆ, ಮತ್ತು ಆತನು ಅವರಿಗೆ ಪ್ರತಿಫಲವನ್ನು ಕೊಟ್ಟಿರುವುದು ಹೇಗೆ?

22 ಯೆಹೋವನು ಮುಂದೆ ಏನು ಹೇಳುತ್ತಾನೊ ಅದು, ಇಂದಿನ ಕ್ರೈಸ್ತರಿಗೆ ಹರ್ಷಿಸಲು ಇನ್ನೊಂದು ಕಾರಣವನ್ನು ಕೊಡುತ್ತದೆ: “ಯೆಹೋವನೆಂಬ ನಾನು ನ್ಯಾಯವನ್ನು ಪ್ರೀತಿಸುತ್ತೇನೆ, ಕೊಳ್ಳೆಯನ್ನೂ ಅನ್ಯಾಯವನ್ನೂ ದ್ವೇಷಿಸುತ್ತೇನೆ; ಸತ್ಯಸಂಧತೆಯನ್ನು ಅನುಸರಿಸಿ ಇವರ ನಷ್ಟಕ್ಕೆ ಪ್ರತಿಫಲವನ್ನು ಕೊಟ್ಟು ಇವರೊಂದಿಗೆ ನಿತ್ಯವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು.” (ಯೆಶಾಯ 61:8) ಅಭಿಷಿಕ್ತ ಉಳಿಕೆಯವರು ತಮ್ಮ ಬೈಬಲ್‌ ಅಧ್ಯಯನದ ಮೂಲಕ, ನ್ಯಾಯವನ್ನು ಪ್ರೀತಿಸಿ ದುಷ್ಟತ್ವವನ್ನು ದ್ವೇಷಿಸಲು ಕಲಿತರು. (ಜ್ಞಾನೋಕ್ತಿ 6:​12-19; 11:20) ಅವರು ಮಾನವಕುಲದ ಯುದ್ಧ ಮತ್ತು ರಾಜಕೀಯ ಉತ್‌ಪ್ಲವನಗಳಲ್ಲಿ ತಟಸ್ಥರಾಗಿ ಉಳಿದು, “ತಮ್ಮ ಕತ್ತಿಗಳನ್ನು ಗುಳಗಳನ್ನಾಗಿ” ಮಾಡಲು ಕಲಿತರು. (ಯೆಶಾಯ 2:⁠4) ಅವರು ದೇವರಿಗೆ ಅಗೌರವವನ್ನು ಉಂಟುಮಾಡುವ ಚಾಡಿಮಾತು, ವ್ಯಭಿಚಾರ, ಕಳ್ಳತನ ಮತ್ತು ಕುಡಿಕತನಗಳಂತಹ ಆಚಾರಗಳನ್ನು ಸಹ ಬಿಟ್ಟುಬಿಟ್ಟರು.​—⁠ಗಲಾತ್ಯ 5:​19-21.

23 ಸೃಷ್ಟಿಕರ್ತನಿಗಿರುವ ನ್ಯಾಯದ ಮೇಲಿನ ಪ್ರೀತಿಯು ಅಭಿಷಿಕ್ತ ಕ್ರೈಸ್ತರಿಗೂ ಇರುವುದರಿಂದ, ಯೆಹೋವನು ಅವರಿಗೆ “ಸತ್ಯಸಂಧತೆಯನ್ನು . . . ಪ್ರತಿಫಲ”ವಾಗಿ ಕೊಟ್ಟಿದ್ದಾನೆ. ಇಂತಹ “ಪ್ರತಿಫಲ”ಗಳಲ್ಲಿ ಒಂದು, ಸದಾಕಾಲ ಬಾಳುವ ಹೊಸ ಒಡಂಬಡಿಕೆಯೇ ಆಗಿದೆ. ಯೇಸು ಇದನ್ನು ತನ್ನ ಹಿಂಬಾಲಕರಿಗೆ ತನ್ನ ಮರಣದ ಹಿಂದಿನ ರಾತ್ರಿ ಪ್ರಕಟಪಡಿಸಿದನು. ಈ ಒಡಂಬಡಿಕೆಯ ಆಧಾರದ ಮೇಲೆಯೇ ಅವರು ಒಂದು ಆತ್ಮಿಕ ಜನಾಂಗವೂ ದೇವರ ಸ್ವಕೀಯ ಜನರೂ ಆದರು. (ಯೆರೆಮೀಯ 31:​31-34; ಲೂಕ 22:20) ಈ ಒಡಂಬಡಿಕೆಯ ಮೇರೆಗೆ, ಯೆಹೋವನು ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಎಲ್ಲ ಪ್ರಯೋಜನಗಳನ್ನು ಅನ್ವಯಿಸುವನು. ಈ ಪ್ರಯೋಜನಗಳಲ್ಲಿ, ಅಭಿಷಿಕ್ತರ ಹಾಗೂ ಮಾನವಕುಲದ ಇತರ ಎಲ್ಲ ನಂಬಿಗಸ್ತರ ಪಾಪಗಳಿಗಾಗಿರುವ ಕ್ಷಮೆಯೂ ಸೇರಿರುವುದು.

ಯೆಹೋವನ ಆಶೀರ್ವಾದಗಳಲ್ಲಿ ಉಲ್ಲಾಸಿಸುವುದು

24. ಜನಾಂಗಗಳಿಂದ ಬಂದಿರುವ ಆಶೀರ್ವದಿತ “ವಂಶ” ಯಾರು, ಮತ್ತು ಅವರು “ವಂಶ” ಆಗಿರು ವುದು ಹೇಗೆ?

24 ಜನಾಂಗಗಳಲ್ಲಿ ಕೆಲವರು ಯೆಹೋವನು ತನ್ನ ಜನರಿಗೆ ಕೊಟ್ಟಿರುವ ಆಶೀರ್ವಾದಗಳನ್ನು ಗುರುತಿಸಿದ್ದಾರೆ. ಇದು ಯೆಹೋವನ ಈ ವಾಗ್ದಾನದಲ್ಲಿ ಮುಂತಿಳಿಸಲ್ಪಟ್ಟಿದೆ: “ಇವರ ಸಂತಾನವು ಜನಾಂಗಗಳಲ್ಲಿ ಪ್ರಖ್ಯಾತವಾಗುವದು, ಇವರ ಸಂತತಿಯು ಅನ್ಯದೇಶೀಯರಲ್ಲಿ ಹೆಸರುಗೊಳ್ಳುವದು; ಇವರನ್ನು ನೋಡುವವರೆಲ್ಲರು ಯೆಹೋವನು ಆಶೀರ್ವದಿಸಿದ ವಂಶವು ಇದೇ ಎಂದು ಒಪ್ಪಿಕೊಳ್ಳುವರು.” (ಯೆಶಾಯ 61:9) ದೇವರ ಇಸ್ರಾಯೇಲಿನ ಸದಸ್ಯರಾದ ಅಭಿಷಿಕ್ತ ಕ್ರೈಸ್ತರು, ಯೆಹೋವನ ಶುಭವರುಷದಲ್ಲಿ ಜನಾಂಗಗಳ ಮಧ್ಯೆ ತುಂಬ ಕ್ರಿಯಾಶೀಲರಾಗಿದ್ದಾರೆ. ಇದರ ಫಲವಾಗಿ, ಅವರ ಶುಶ್ರೂಷೆಗೆ ಒಳ್ಳೆಯ ಪ್ರತಿವರ್ತನೆ ತೋರಿಸಿದವರ ಸಂಖ್ಯೆ ದಶಲಕ್ಷಗಳಿಗೆ ಮುಟ್ಟಿದೆ. ಜನಾಂಗಗಳಿಂದ ಬಂದಿರುವ ಈ ಜನರು ದೇವರ ಇಸ್ರಾಯೇಲಿನೊಂದಿಗೆ ಒತ್ತಾಗಿ ಕೆಲಸಮಾಡುವ ಕಾರಣ, “ಯೆಹೋವನು ಆಶೀರ್ವದಿಸಿದ ವಂಶ”ವಾಗುವ ಸುಯೋಗ ಅವರಿಗಿದೆ. ಅವರ ಸಂತೋಷಕರವಾದ ಸ್ಥಿತಿಯು ಎಲ್ಲ ಮಾನವಕುಲಕ್ಕೆ ಪ್ರತ್ಯಕ್ಷವಾಗಿದೆ.

25, 26. ಎಲ್ಲ ಕ್ರೈಸ್ತರು ಯೆಶಾಯ 61:10ರಲ್ಲಿ ವ್ಯಕ್ತಪಡಿಸಲಾಗಿರುವ ಭಾವನೆಗಳನ್ನು ಹೇಗೆ ಪ್ರತಿಧ್ವನಿಸುತ್ತಾರೆ?

25 ಎಲ್ಲ ಕ್ರೈಸ್ತರು, ಅವರು ಅಭಿಷಿಕ್ತರಾಗಿರಲಿ ಬೇರೆ ಕುರಿಗಳಾಗಿರಲಿ, ಯೆಹೋವನನ್ನು ಶಾಶ್ವತವಾಗಿ ಸ್ತುತಿಸುವುದನ್ನು ಮುನ್ನೋಡುತ್ತಿದ್ದಾರೆ. ಪ್ರೇರಿತನಾಗಿ ಹೀಗೆ ಹೇಳುವ ಪ್ರವಾದಿಯಾದ ಯೆಶಾಯನ ಮಾತುಗಳನ್ನು ಅವರು ಪೂರ್ಣಹೃದಯದಿಂದ ಒಪ್ಪಿಕೊಳ್ಳುತ್ತಾರೆ: “ನಾನು ಯೆಹೋವನಲ್ಲಿ ಪರಮಾನಂದಪಡುವೆನು, ನನ್ನ ಆತ್ಮವು ನನ್ನ ದೇವರಲ್ಲಿ ಹಿಗ್ಗುವದು; ವರನು ಬಾಸಿಂಗವನ್ನು ಧರಿಸಿಕೊಳ್ಳುವಂತೆಯೂ ವಧುವು ತನ್ನನ್ನು ಆಭರಣಗಳಿಂದ ಅಲಂಕರಿಸಿಕೊಳ್ಳುವ ಹಾಗೂ ಆತನು ನನಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸಿ ಧರ್ಮವೆಂಬ ನಿಲುವಂಗಿಯನ್ನು ತೊಡಿಸಿದ್ದಾನಲ್ಲಾ.”​—ಯೆಶಾಯ 61:⁠10.

26 “ಧರ್ಮವೆಂಬ ನಿಲುವಂಗಿಯನ್ನು” ತೊಟ್ಟುಕೊಂಡು, ಅಭಿಷಿಕ್ತ ಕ್ರೈಸ್ತರು ಯೆಹೋವನ ದೃಷ್ಟಿಯಲ್ಲಿ ನಿರ್ಮಲರೂ ಶುದ್ಧರೂ ಆಗಿರಲು ನಿರ್ಧರಿಸಿದ್ದಾರೆ. (2 ಕೊರಿಂಥ 11:​1, 2) ಅವರು ಸ್ವರ್ಗೀಯ ಜೀವನದ ಬಾಧ್ಯತೆಗಾಗಿ ಯೆಹೋವನಿಂದ ನೀತಿವಂತರೆಂದು ನಿರ್ಣಯಿಸಲ್ಪಟ್ಟಿದ್ದು, ಅವರು ಯಾವುದರಿಂದ ಬಿಡುಗಡೆಹೊಂದಿದ್ದಾರೋ ಆ ಮಹಾ ಬಾಬೆಲಿನ ಹಾಳುಬಿದ್ದಿರುವ ಸ್ಥಿತಿಗೆ ಎಂದಿಗೂ ಹಿಂದಿರುಗರು. (ರೋಮಾಪುರ 5:9; 8:30) ಅವರ ರಕ್ಷಣಾವಸ್ತ್ರಗಳು ಅವರಿಗೆ ಅತ್ಯಮೂಲ್ಯವಾಗಿವೆ. ಅವರ ಸಂಗಡಿಗರಾದ ಬೇರೆ ಕುರಿಗಳೂ ಅದೇ ರೀತಿ ಯೆಹೋವ ದೇವರ ಶುದ್ಧಾರಾಧನೆಯ ಉನ್ನತ ಮಟ್ಟಗಳನ್ನು ಪಾಲಿಸಲು ದೃಢನಿಶ್ಚಯ ಮಾಡಿದ್ದಾರೆ. “ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿ”ಕೊಂಡಿರುವುದರಿಂದ, ಅವರೂ ನೀತಿವಂತರೆಂದು ನಿರ್ಣಯಿಸಲ್ಪಟ್ಟು “ಮಹಾ ಸಂಕಟ”ವನ್ನು ಪಾರಾಗುವರು. (ಪ್ರಕಟನೆ 7:​14, NW; ಯಾಕೋಬ 2:​23, 25) ಅಷ್ಟರ ತನಕ ಅವರು ಮಹಾ ಬಾಬೆಲಿನ ಮಾಲಿನ್ಯದಿಂದ ದೂರವಿರುವ ವಿಷಯದಲ್ಲಿ ತಮ್ಮ ಅಭಿಷಿಕ್ತ ಸಂಗಾತಿಗಳನ್ನು ಅನುಕರಿಸುವರು.

27. (ಎ) ಸಹಸ್ರ ವರುಷಗಳ ಆಳ್ವಿಕೆಯಲ್ಲಿ ಯಾವ ಗಮನಾರ್ಹವಾದ ‘ಮೊಳಿಕೆ’ ಆಗುವುದು? (ಬಿ) ಮಾನವಕುಲದಲ್ಲಿ ಈಗಾಗಲೇ ನೀತಿಯು ಮೊಳೆದಿರುವುದು ಹೇಗೆ?

27 ಇಂದು ಯೆಹೋವನ ಆರಾಧಕರು ಒಂದು ಆತ್ಮಿಕ ಪರದೈಸಿನಲ್ಲಿರುವುದಕ್ಕಾಗಿ ಹರ್ಷಿಸುತ್ತಾರೆ. ಮತ್ತು ಅವರು ಬೇಗನೆ ಭೌತಿಕ ರೀತಿಯಲ್ಲಿಯೂ ಪರದೈಸನ್ನು ಅನುಭವಿಸುವರು. ನಾವು ಹೃತ್ಪೂರ್ವಕವಾಗಿ ಆ ಸಮಯವನ್ನು ಎದುರುನೋಡುತ್ತೇವೆ. ಅದು ಯೆಶಾಯ 61ನೆಯ ಅಧ್ಯಾಯದ ಕೊನೆಯ ಮಾತುಗಳಲ್ಲಿ ಕಣ್ಣಿಗೆ ಕಟ್ಟುವಂಥ ರೀತಿಯಲ್ಲಿ ವರ್ಣಿಸಲ್ಪಟ್ಟಿದೆ: “ಭೂಮಿಯು ತನ್ನೊಳಗಿಂದ ಮೊಳಿಕೆಯನ್ನು ಹೊರಡಿಸುವಂತೆಯೂ ತೋಟವು ತನ್ನಲ್ಲಿ ಬಿತ್ತಿದ್ದನ್ನು ಮೊಳೆಯಿಸುವ ಹಾಗೂ ಕರ್ತನಾದ ಯೆಹೋವನು ಎಲ್ಲಾ ಜನಾಂಗಗಳ ಎದುರಿನಲ್ಲಿ ಧರ್ಮವನ್ನೂ [“ನೀತಿಯನ್ನೂ,” NW] ಸ್ತೋತ್ರವನ್ನೂ ಮೊಳೆಯಿಸುವನು.” (ಯೆಶಾಯ 61:11) ಕ್ರಿಸ್ತನ ಸಹಸ್ರ ವರುಷಗಳ ಆಳ್ವಿಕೆಯಲ್ಲಿ, ಭೂಮಿಯು ‘ಧರ್ಮದ ಮೊಳಿಕೆ’ಯನ್ನು ಅನುಭವಿಸುವುದು. ಮಾನವರು ವಿಜಯೋತ್ಸಾಹದಿಂದ ಹರ್ಷಧ್ವನಿಗೈಯುವರು ಮತ್ತು ನೀತಿಯು ಭೂಮಿಯ ಕಟ್ಟಕಡೆಯ ವರೆಗೆ ಹರಡುವುದು. (ಯೆಶಾಯ 26:⁠9) ಆದರೆ ಎಲ್ಲಾ ಜನಾಂಗಗಳ ಮುಂದೆ ಸ್ತುತಿಯನ್ನು ಅರ್ಪಿಸಲು ನಾವು ಆ ಮಹಿಮಾಭರಿತ ದಿನದ ವರೆಗೆ ಕಾಯಬೇಕಾಗಿರುವುದಿಲ್ಲ. ಏಕೆಂದರೆ, ಪರಲೋಕದ ದೇವರಿಗೆ ಘನತೆಯನ್ನು ಸಲ್ಲಿಸಿ, ಆತನ ರಾಜ್ಯದ ಸುವಾರ್ತೆಯನ್ನು ಪ್ರಸಿದ್ಧಪಡಿಸುವ ದಶಲಕ್ಷಾಂತರ ಜನರ ಮಧ್ಯೆ ನೀತಿಯು ಈಗಾಗಲೇ ಮೊಳೆಯುತ್ತಿದೆ. ಈ ಕಾರಣದಿಂದ, ನಮ್ಮ ನಂಬಿಕೆ ಮತ್ತು ನಮ್ಮ ನಿರೀಕ್ಷೆಯು ನಾವು ಈಗಲೂ ದೇವರ ಆಶೀರ್ವಾದಗಳಲ್ಲಿ ಉಲ್ಲಾಸಿಸಲು ನಮಗೆ ಕಾರಣಗಳನ್ನು ಕೊಡುತ್ತದೆ.

[ಪಾದಟಿಪ್ಪಣಿ]

^ ಪ್ಯಾರ. 16 ಯೆಶಾಯ 61:5ಕ್ಕೆ ಪುರಾತನ ಕಾಲದಲ್ಲಿ ಒಂದು ನೆರವೇರಿಕೆ ಇದ್ದಿರಸಾಧ್ಯವಿದೆ. ಆಗ ಮಾಂಸಿಕ ಯೆಹೂದ್ಯರು ಯೆರೂಸಲೇಮಿಗೆ ಹಿಂದೆ ಹೋಗುತ್ತಿದ್ದಾಗ, ಯೆಹೂದ್ಯೇತರರು ಅವರ ಜೊತೆಯಲ್ಲಿ ಹೋಗಿ ಪ್ರಾಯಶಃ ದೇಶದ ಜೀರ್ಣೋದ್ಧಾರ ಕಾರ್ಯದಲ್ಲಿ ಸಹಾಯ ನೀಡಿದ್ದರು. (ಎಜ್ರ 2:​43-58) ಆದರೆ, 6ನೆಯ ವಚನದಿಂದ ಆ ಪ್ರವಾದನೆಯು ದೇವರ ಇಸ್ರಾಯೇಲಿಗೆ ಮಾತ್ರ ಅನ್ವಯಿಸುವಂತೆ ಕಾಣುತ್ತದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 323ರಲ್ಲಿರುವ ಚಿತ್ರ]

ಯೆಶಾಯನ ಬಳಿ ಯೆಹೂದಿ ಬಂದಿಗಳಿಗೆ ಸಾರಲು ಸುವಾರ್ತೆಯಿದೆ

[ಪುಟ 331ರಲ್ಲಿರುವ ಚಿತ್ರ]

ಸಾ.ಶ. 33ರಿಂದ ಆರಂಭಿಸಿ ಯೆಹೋವನು 1,44,000 ದೊಡ್ಡ “ನೀತಿವೃಕ್ಷ”ಗಳನ್ನು ನೆಟ್ಟಿದ್ದಾನೆ

[ಪುಟ 334ರಲ್ಲಿರುವ ಚಿತ್ರ]

ಭೂಮಿಯು ನೀತಿಯನ್ನು ಮೊಳೆಯಿಸುವುದು