ಜ್ಞಾನೋಕ್ತಿ 6:1-35
6 ನನ್ನ ಮಗನೇ, ಬೇರೆಯವ್ರ ಸಾಲಕ್ಕೆ ನೀನು ಜಾಮೀನು ಕೊಟ್ಟಿರೋದಾದ್ರೆ,+ಅಪರಿಚಿತನ ಜೊತೆ ಒಂದು ಒಪ್ಪಂದ* ಮಾಡಿರೋದಾದ್ರೆ,+
2 ಮಾತು ಕೊಟ್ಟು ಸಿಕ್ಕಿಕೊಂಡಿರೋದಾದ್ರೆ,ನೀನೇ ಹೇಳಿ ಸಿಕ್ಕಿಹಾಕೊಂಡಿದ್ರೆ,+
3 ನನ್ನ ಮಗನೇ, ಹೀಗೆ ಮಾಡಿ ನಿನ್ನನ್ನೇ ನೀನು ಕಾಪಾಡ್ಕೊ:
ದೀನತೆಯಿಂದ ಅವನ ಹತ್ರ ಹೋಗಿ ಬೇಡ್ಕೊ.
ಯಾಕಂದ್ರೆ ನೀನು ಅವನ ಕೈಯಲ್ಲಿ ಸಿಕ್ಕಿಹಾಕೊಂಡಿದ್ದೀಯ.+
4 ನಿನ್ನ ಕಣ್ಣುಗಳು ನಿದ್ದೆಗೆ ಜಾರದ ಹಾಗೆ ನೋಡ್ಕೊ,ನಿನ್ನ ಕಣ್‌ರೆಪ್ಪೆಗೆ ನಿದ್ದೆ ಹತ್ತೋಕೆ ಬಿಡಬೇಡ.
5 ಬೇಟೆಗಾರನ ಕೈಯಿಂದ ಓಡೋ ಜಿಂಕೆ ತರ,ಬೇಡನ ಕೈಯಿಂದ ಹಾರೋ ಪಕ್ಷಿ ತರ ತಪ್ಪಿಸ್ಕೊ.
6 ಏ ಸೋಮಾರಿ, ಇರುವೆ ನೋಡಿ ಕಲಿ!+
ಅದು ಹೇಗೆ ಕೆಲಸ ಮಾಡುತ್ತೆ ಅಂತ ನೋಡು, ವಿವೇಕಿಯಾಗು.
7 ಅದಕ್ಕೆ ಸೇನಾಪತಿಯಾಗಲಿ ಅಧಿಕಾರಿಯಾಗಲಿ ಒಡೆಯನಾಗಲಿ ಇಲ್ಲ,
8 ಆದ್ರೂ ಬೇಸಿಗೆಯಲ್ಲಿ ಆಹಾರಕ್ಕೆ ಬೇಕಾದ ತಯಾರಿ ಮಾಡ್ಕೊಳ್ಳುತ್ತೆ,+ಕೊಯ್ಲಿನ ಕಾಲದಲ್ಲಿ ತನ್ನ ಆಹಾರ ಕೂಡಿಸಿಡುತ್ತೆ.
9 ಸೋಮಾರಿಯೇ, ಇನ್ನೆಷ್ಟು ಹೊತ್ತು ಬಿದ್ಕೊಂಡಿರ್ತಿಯಾ?
ಯಾವಾಗ ನಿದ್ದೆಯಿಂದ ಎದ್ದೇಳ್ತೀಯಾ?
10 ಇನ್ನು ಸ್ವಲ್ಪ ಹೊತ್ತು ನಿದ್ದೆ, ಇನ್ನು ಸ್ವಲ್ಪ ತೂಕಡಿಕೆ,ಕೈಮುದುರಿಕೊಂಡು ಇನ್ನು ಸ್ವಲ್ಪ ಹೊತ್ತು ಮಲಗ್ತೀನಿ ಅಂದ್ಕೊಳ್ತೀಯ,+
11 ಬಡತನ ದಾರಿಗಳ್ಳನ ತರ ನಿನ್ನ ಮೇಲೆ ಬೀಳುತ್ತೆ,ಕೊರತೆ ಆಯುಧ ಹಿಡ್ಕೊಂಡು ನಿನ್ನ ಮೇಲೆ ದಾಳಿ ಮಾಡುತ್ತೆ.+
12 ಕೆಲಸಕ್ಕೆ ಬಾರದವನು, ಕೆಟ್ಟವನು ಕೊಂಕು ಮಾತಾಡ್ತಾ ಅಡ್ಡಾಡ್ತಾನೆ.+
13 ಅವನು ಕಣ್ಣು ಹೊಡಿತಾನೆ,+ ಕೈ ಆಡಿಸಿ ಕಾಲುಗಳಿಂದ ಸನ್ನೆ ಮಾಡ್ತಾನೆ.
14 ಅವನ ಹೃದಯದಲ್ಲಿ ಬರೀ ಮೋಸ, ವಂಚನೆ ತುಂಬ್ಕೊಂಡಿದೆ,ಯಾವಾಗ್ಲೂ ಕೆಟ್ಟದೇ ಯೋಚ್ನೆ ಮಾಡ್ತಾನೆ,+ ಹೋದಲ್ಲೆಲ್ಲ ಜಗಳ ಮಾಡಿಸ್ತಾನೆ.+
15 ಅದಕ್ಕೇ ಕಷ್ಟ ಅವನ ಮೇಲೆ ದಿಢೀರಂತ ಬರುತ್ತೆ,ಸುಧಾರಿಸ್ಕೊಳ್ಳೋಕೆ ಸಮಯನೇ ಸಿಗದೆ ನಾಶ ಆಗಿ ಬಿಡ್ತಾನೆ.+
16 ಯೆಹೋವನಿಗೆ ಇಷ್ಟ ಇಲ್ಲದ ವಿಷ್ಯಗಳು ಆರು,ಹೌದು, ಏಳು ವಿಷ್ಯ ಆತನಿಗೆ ಇಷ್ಟ ಇಲ್ಲ. ಅದು ಯಾವುದಂದ್ರೆ:
17 ಅಹಂಕಾರ ತುಂಬಿರೋ ಕಣ್ಣು,+ ಸುಳ್ಳು ಹೇಳೋ ನಾಲಿಗೆ,+ ಅಮಾಯಕರ ರಕ್ತ ಸುರಿಸೋ ಕೈ,+
18 ಸಂಚು ಮಾಡೋ ಹೃದಯ,+ ಕೆಟ್ಟ ವಿಷ್ಯಗಳನ್ನ ಮಾಡೋಕೆ ಓಡೋ ಕಾಲು,
19 ಬಾಯಿ ಬಿಟ್ರೆ ಬರೀ ಸುಳ್ಳೇ ಹೇಳೋ ಸುಳ್ಳು ಸಾಕ್ಷಿ,+ಸಹೋದರರ ಮಧ್ಯ ಜಗಳ ಬಿತ್ತೋ ವ್ಯಕ್ತಿ.+
20 ನನ್ನ ಮಗನೇ, ನಿನ್ನ ಅಪ್ಪನ ಆಜ್ಞೆಯನ್ನ ಪಾಲಿಸು,ನಿನ್ನ ಅಮ್ಮ ಕಲಿಸುವಾಗ* ಕೇಳಿಸ್ಕೊ.+
21 ಯಾವಾಗ್ಲೂ ಅವುಗಳನ್ನ ನಿನ್ನ ಮನಸ್ಸಲ್ಲಿ ಇಟ್ಕೊ,ನಿನ್ನ ಕುತ್ತಿಗೆಗೆ ಕಟ್ಕೊ.
22 ನೀನು ನಡಿಯುವಾಗ ಅವು ನಿನಗೆ ದಾರಿ ತೋರಿಸುತ್ತೆ,ಮಲಗುವಾಗ ನಿನಗೆ ಕಾವಲಾಗಿರುತ್ತೆ,ಎದ್ದಾಗ ನಿನ್ನ ಹತ್ರ ಮಾತಾಡುತ್ತೆ.*
23 ಯಾಕಂದ್ರೆ ಆಜ್ಞೆ ದೀಪ,+ದೇವರ ನಿಯಮ ಬೆಳಕು,+ನೀನು ತಿದ್ಕೊಳ್ಳಬೇಕು ಅಂತ ಕೊಡೋ ಶಿಸ್ತು ಜೀವನಕ್ಕೆ ದಾರಿ ತೋರಿಸುತ್ತೆ.+
24 ಅವು ನಿನ್ನನ್ನ ಕೆಟ್ಟ ಹೆಂಗಸಿಂದ ಕಾಪಾಡುತ್ತೆ,+ನಾಚಿಕೆಗೆಟ್ಟ* ಹೆಂಗಸಿನ ಮೋಹಕ ಮಾತುಗಳಿಂದ ಕಾದುಕಾಪಾಡುತ್ತೆ.+
25 ಅವಳ ಅಂದ ನೋಡಿ ಹೃದಯದಲ್ಲಿ ಆಸೆಪಡಬೇಡ.+
ಅವಳ ಮಾದಕ ಕಣ್ಣುಗಳನ್ನ ನೋಡಿ ಅವಳ ಬುಟ್ಟಿಗೆ ಬೀಳಬೇಡ.
26 ವೇಶ್ಯೆಯಿಂದಾಗಿ ಒಬ್ಬ ವ್ಯಕ್ತಿಗೆ ಕೊನೇಲಿ ಉಳಿಯೋದು ಒಂದು ರೊಟ್ಟಿ ತುಂಡು ಮಾತ್ರ,+ಇನ್ನೊಬ್ಬನ ಹೆಂಡತಿ ಹಿಂದೆ ಹೋದ್ರೆ ಅವಳು ನಿನ್ನ ಅಮೂಲ್ಯವಾದ ಪ್ರಾಣ ಬೇಟೆ ಆಡ್ತಾಳೆ.
27 ಎದೆ ಮೇಲೆ ಬೆಂಕಿ ಇಟ್ಕೊಂಡ್ರೆ ಅದು ಬಟ್ಟೆ ಸುಟ್ಟು ಹಾಕಲ್ವಾ?+
28 ಸುಡ್ತಿರೋ ಕೆಂಡದ ಮೇಲೆ ನಡೆದ್ರೆ ಕಾಲು ಸುಟ್ಟು ಹೋಗಲ್ವಾ?
29 ಪಕ್ಕದ ಮನೆಯವನ ಹೆಂಡತಿ ಜೊತೆ ಸಂಬಂಧ ಇಟ್ಕೊಳ್ಳುವವನಿಗೂ ಹೀಗೇ ಆಗುತ್ತೆ,ಅವಳನ್ನ ಮುಟ್ಟುವವನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ.+
30 ಹಸಿವು ನೀಗಿಸೋಕೆ ಆಹಾರ ಕದ್ರೆ,ಯಾರು ಕೂಡ ಆ ಕಳ್ಳನನ್ನ ಕೀಳಾಗಿ ನೋಡಲ್ಲ.
31 ಆದ್ರೆ ಅವನು ಸಿಕ್ಕಿಬಿದ್ರೆ ಏಳು ಪಟ್ಟು ಅವನು ವಾಪಸ್ ಕೊಡಬೇಕಾಗುತ್ತೆ,ತನ್ನ ಮನೆಯಲ್ಲಿ ಇರೋದನ್ನೆಲ್ಲ ಕೊಡಬೇಕಾಗುತ್ತೆ.+
32 ವ್ಯಭಿಚಾರ ಮಾಡುವವನಿಗೆ ಬುದ್ಧಿ ಇಲ್ಲ,*ಅವನು ತನ್ನ ಮೇಲೆನೇ ನಾಶ ತಂದ್ಕೊಳ್ತಾನೆ.+
33 ನೋವು, ಅವಮಾನ ಬಿಟ್ರೆ ಬೇರೇನೂ ಅವನಿಗೆ ಸಿಗಲ್ಲ,+ಅವನಿಗೆ ಹತ್ಕೊಳ್ಳೋ ಕಳಂಕ ತೆಗಿಯೋಕೆ ಆಗಲ್ಲ.+
34 ಹೆಂಡತಿ ನಂಬಿಕೆದ್ರೋಹ ಮಾಡಿದ್ರೆ ಗಂಡನಿಗೆ ತುಂಬ ಕೋಪ ಬರುತ್ತೆ,ಸೇಡು ತೀರಿಸ್ಕೊಳ್ಳುವಾಗ ಅವನು ಯಾವುದೇ ಕಾರಣಕ್ಕೂ ದಯೆ ತೋರಿಸಲ್ಲ.+
35 ಅವನಿಗೆ ಏನೇ ಪರಿಹಾರ ಕೊಟ್ರೂ ಒಪ್ಕೊಳ್ಳಲ್ಲ,ಎಷ್ಟೇ ದೊಡ್ಡ ಉಡುಗೊರೆ ಕೊಟ್ರೂ ಅವನ ಕೋಪ ತಣ್ಣಗಾಗಲ್ಲ.
ಪಾದಟಿಪ್ಪಣಿ
^ ಅದು, ಪ್ರತಿಜ್ಞೆ.
^ ಅಥವಾ “ಅಮ್ಮ ಕೊಡೋ ನಿಯಮವನ್ನ.”
^ ಅಥವಾ “ನಿನಗೆ ಕಲಿಸುತ್ತೆ.”
^ ಅಕ್ಷ. “ವಿದೇಶಿ.” ಜ್ಞಾನೋಕ್ತಿ 2:16 ನೋಡಿ.
^ ಅಕ್ಷ. “ಹೃದಯ ಇಲ್ಲ.”