ಯಾಕೋಬನ ಪತ್ರ 2:1-26

  • ಭೇದಭಾವ ಮಾಡೋದು ಪಾಪ (1-13)

    • ಪ್ರೀತಿ, ಒಂದು ದೊಡ್ಡ ಆಜ್ಞೆ (8)

  • ಒಳ್ಳೇ ಕೆಲಸ ಮಾಡದಿದ್ರೆ ನಂಬಿಕೆ ಇದ್ದೂ ವ್ಯರ್ಥ (14-26)

    • ಕೆಟ್ಟ ದೇವದೂತರೂ ನಂಬ್ತಾರೆ, ಭಯಪಡ್ತಾರೆ (19)

    • ಅಬ್ರಹಾಮನಿಗೆ ಯೆಹೋವನ ಸ್ನೇಹಿತ ಅನ್ನೋ ಹೆಸ್ರು (23)

2  ನನ್ನ ಸಹೋದರರೇ, ಪ್ರಭು ಯೇಸು ಕ್ರಿಸ್ತನ ಮೇಲೆ ನಿಮಗೆ ಗೌರವ, ನಂಬಿಕೆ ಇದೆ. ಆದ್ರೆ ಅದ್ರ ಜೊತೆ ನೀವು ಭೇದಭಾವನೂ ಮಾಡ್ತಾ ಇದ್ದೀರ. ಹಾಗೆ ಮಾಡೋಕೆ ನಿಮಗೆ ಹೇಗೆ ಮನಸ್ಸು ಬಂತು?+  ಚಿನ್ನದ ಉಂಗುರ, ದುಬಾರಿ ಬಟ್ಟೆ ಹಾಕೊಂಡು ಒಬ್ಬ ವ್ಯಕ್ತಿ ನಿಮ್ಮ ಕೂಟಕ್ಕೆ ಬರ್ತಾನೆ ಅಂತ ಇಟ್ಕೊಳ್ಳಿ. ಅದೇ ಸಮಯದಲ್ಲಿ ಗಲೀಜು ಬಟ್ಟೆ ಹಾಕೊಂಡು ಒಬ್ಬ ಬಡವನೂ ಬರ್ತಾನೆ.  ಒಳ್ಳೇ ಬಟ್ಟೆ ಹಾಕೊಂಡು ಬಂದವನಿಗೆ ತುಂಬ ಗೌರವ ಕೊಟ್ಟು “ಇದು ಒಳ್ಳೇ ಜಾಗ, ನೀವು ಇಲ್ಲಿ ಕೂತ್ಕೊಳ್ಳಿ” ಅಂತ ಹೇಳಿ, ಆ ಬಡವನಿಗೆ “ನೀನು ನಿಂತ್ಕೊಂಡೇ ಇರು” ಅಥವಾ “ನನ್ನ ಕಾಲ ಹತ್ರ ಕೂತ್ಕೊ” ಅಂತ ಹೇಳಿದ್ರೆ+  ಒಬ್ರನ್ನ ಮೇಲು ಇನ್ನೊಬ್ರನ್ನ ಕೀಳು ಅಂತ ನೋಡಿದ ಹಾಗೆ ಆಗಲ್ವಾ?+ ನೀವು ಕೆಟ್ಟ ತೀರ್ಮಾನಗಳನ್ನ ಮಾಡೋ ನ್ಯಾಯಾಧೀಶರ ತರ ಆಗಿಬಿಡಲ್ವಾ?+  ಪ್ರೀತಿಯ ಸಹೋದರರೇ, ನನ್ನ ಮಾತನ್ನ ಕೇಳಿ. ಲೋಕದ ದೃಷ್ಟಿಯಲ್ಲಿ ಬಡವ್ರಾಗಿ ಇರುವವ್ರನ್ನ ನಂಬಿಕೆಯಲ್ಲಿ ಶ್ರೀಮಂತರಾಗೋಕೆ,+ ಆತನ ಆಳ್ವಿಕೆಯಲ್ಲಿ ಆಶೀರ್ವಾದ ಪಡ್ಯೋ ವಾರಸುದಾರರು ಆಗೋಕೆ ದೇವರು ಅವ್ರನ್ನ ಆರಿಸ್ಕೊಳ್ಳಲಿಲ್ವಾ? ತನ್ನನ್ನ ಪ್ರೀತಿಸುವವರು ಆತನ ಆಳ್ವಿಕೆಯಲ್ಲಿ ಇರ್ತಾರೆ ಅಂತ ಆತನು ಮಾತು ಕೊಟ್ಟಿದ್ದಾನೆ.+  ಆದ್ರೆ ನೀವು ಬಡವ್ರಿಗೆ ಅವಮಾನ ಮಾಡ್ತೀರ. ನಿಜ ಹೇಳಬೇಕಂದ್ರೆ, ನಿಮ್ಮ ಮೇಲೆ ದಬ್ಬಾಳಿಕೆ ಮಾಡಿ+ ನ್ಯಾಯಾಲಯಕ್ಕೆ ಎಳ್ಕೊಂಡು ಹೋಗುವವರು ಶ್ರೀಮಂತ್ರೇ ತಾನೇ?  ದೇವರು ನಿಮಗೆ ಕೊಟ್ಟಿರೋ ಒಳ್ಳೇ ಹೆಸ್ರನ್ನ ಹಾಳು ಮಾಡೋದು ಅವ್ರೇ ಅಲ್ವಾ?  ಆದ್ರೆ ಪವಿತ್ರ ಗ್ರಂಥದಲ್ಲಿ ಹೇಳಿರೋ ತರ “ನೀನು ನಿನ್ನನ್ನ ಪ್ರೀತಿಸೋ ಹಾಗೇ ಬೇರೆಯವ್ರನ್ನೂ ಪ್ರೀತಿಸಬೇಕು”+ ಅನ್ನೋ ದೊಡ್ಡ ಆಜ್ಞೆಯನ್ನ* ನೀವು ಪಾಲಿಸಿದ್ರೆ ಒಳ್ಳೇದನ್ನೇ ಮಾಡ್ತಾ ಇದ್ದೀರ.  ಆದ್ರೆ ನೀವು ಭೇದಭಾವ ಮಾಡ್ತಾ ಇದ್ರೆ+ ಪಾಪ ಮಾಡಿದ ಹಾಗೆ. ನಿಯಮ ಪುಸ್ತಕದ ಪ್ರಕಾರ ಅಪರಾಧಿಗಳು ಆಗ್ತೀರ.+ 10  ಯಾರಾದ್ರೂ ನಿಯಮ ಪುಸ್ತಕದಲ್ಲಿ ಇರೋ ಎಲ್ಲ ನಿಯಮಗಳನ್ನ ಪಾಲಿಸಿ ಒಂದು ನಿಯಮವನ್ನ ಮುರಿದ್ರೆ ಎಲ್ಲ ನಿಯಮಗಳನ್ನ ಮುರಿದ ಹಾಗೆ.+ 11  ಯಾಕಂದ್ರೆ “ವ್ಯಭಿಚಾರ ಮಾಡಬಾರದು”+ ಅಂತ ಹೇಳಿದ ದೇವರೇ “ಕೊಲೆ ಮಾಡಬಾರದು”+ ಅಂತಾನೂ ಹೇಳಿದ್ದಾನೆ. ನೀನು ವ್ಯಭಿಚಾರ ಮಾಡದಿದ್ರೂ ಕೊಲೆ ಮಾಡಿದ್ರೆ ನಿಯಮ ಪುಸ್ತಕದ ಪ್ರಕಾರ ಅಪರಾಧಿ ಆಗ್ತೀಯ. 12  ಈ ನಿಯಮ ಪುಸ್ತಕ ಜನ್ರಿಗೆ ತೀರ್ಪು ಮಾಡಿ ಸ್ವಾತಂತ್ರ್ಯ ಕೊಡುತ್ತೆ. ಹಾಗಾಗಿ ಅದ್ರ ಪ್ರಕಾರ ಮಾತಾಡಿ, ಅದ್ರ ಪ್ರಕಾರ ನಡ್ಕೊಳ್ಳಿ.+ 13  ದಯೆ ತೋರಿಸದ ವ್ಯಕ್ತಿಗೆ ತೀರ್ಪು ಆಗುವಾಗ ದಯೆ ಸಿಗಲ್ಲ.+ ದಯೆ ತೋರಿಸೋ ವ್ಯಕ್ತಿಯ ವಿರುದ್ಧ ಏನೇ ತೀರ್ಪಾದ್ರೂ ಅವನು ಗೆಲ್ತಾನೆ. 14  ನನ್ನ ಸಹೋದರರೇ, ಯಾರಾದ್ರೂ ನಂಬಿಕೆ ಇದೆ ಅಂತ ಹೇಳ್ಕೊಳ್ತಾ ಅದ್ರ ಪ್ರಕಾರ ನಡಿದೇ ಇದ್ರೆ ಏನು ಪ್ರಯೋಜನ?+ ಅಂಥ ನಂಬಿಕೆ ಅವನನ್ನ ಕಾಪಾಡುತ್ತಾ? ಇಲ್ಲ.+ 15  ಯಾರಾದ್ರೂ ನಮ್ಮ ಸಹೋದರ ಅಥವಾ ಸಹೋದರಿಯರ ಹತ್ರ ಹಾಕೊಳ್ಳಕ್ಕೆ ಬಟ್ಟೆ ಇಲ್ಲ, ತಿನ್ನೋಕೆ ಊಟ ಇಲ್ಲ ಅಂದ್ರೆ 16  ನೀವು ಅವ್ರಿಗೆ ಬೇಕಾಗಿರೋ ಊಟಬಟ್ಟೆ ಕೊಡ್ದೆ “ಚಿಂತೆ ಮಾಡಬೇಡಿ, ಮನೆಗೆ ಹೋಗಿ ಚೆನ್ನಾಗಿ ಊಟಮಾಡಿ ಬೆಚ್ಚಗೆ ಮಲ್ಕೊಳ್ಳಿ” ಅಂತ ಹೇಳಿದ್ರೆ ಏನು ಪ್ರಯೋಜನ?+ 17  ಅದೇ ತರ ನಿಮಗೆ ನಂಬಿಕೆ ಇದೆ ಅಂತ ಹೇಳಿ ಅದನ್ನ ಒಳ್ಳೇ ಕೆಲಸ ಮಾಡಿ ತೋರಿಸ್ದೆ ಇದ್ರೆ ನಂಬಿಕೆ ಇದ್ರೂ ಪ್ರಯೋಜನ ಇಲ್ಲ.+ 18  ಈ ಮಾತು ಸುಳ್ಳಾಗಿದ್ರೆ ಒಬ್ಬ ಹೀಗೆ ಕೇಳ್ತಾನೆ: “ನಿನಗೆ ನಂಬಿಕೆ ಇದೆ. ನಾನು ಒಳ್ಳೇ ಕೆಲಸಗಳನ್ನ ಮಾಡ್ತೀನಿ. ನೀನು ಒಳ್ಳೇ ಕೆಲಸಗಳನ್ನ ಮಾಡ್ದೆ ನಿನಗೆ ನಂಬಿಕೆ ಇದೆ ಅಂತ ತೋರಿಸು. ನಾನು ಒಳ್ಳೇ ಕೆಲಸಗಳನ್ನ ಮಾಡಿ ನಂಬಿಕೆ ಇದೆ ಅಂತ ತೋರಿಸ್ತೀನಿ.” 19  ದೇವರು ಒಬ್ಬನೇ ಅಂತ ನೀನು ನಂಬ್ತೀಯ ಅಲ್ವಾ? ಅದು ಒಳ್ಳೇದೇ. ದೇವರಿದ್ದಾನೆ ಅಂತ ಕೆಟ್ಟ ದೇವದೂತರೂ ನಂಬ್ತಾರೆ. ಅಷ್ಟೇ ಅಲ್ಲ, ಭಯದಲ್ಲಿ ನಡುಗ್ತಾರೆ.+ 20  ಬುದ್ಧಿ ಇಲ್ಲದವನೇ, ಒಳ್ಳೇ ಕೆಲಸಗಳನ್ನ ಮಾಡದಿದ್ರೆ ನಂಬಿಕೆ ಇದ್ರೂ ವ್ಯರ್ಥ ಅಂತ ನೀನ್ಯಾಕೆ ಒಪ್ಕೊಳ್ತಾ ಇಲ್ಲ? 21  ನಮ್ಮ ಪೂರ್ವಜ ಅಬ್ರಹಾಮ ಒಳ್ಳೇ ಕೆಲಸ ಮಾಡಿದ ಮೇಲೆ ತಾನೇ ದೇವರು ಅವನನ್ನ ಯಾವ ತಪ್ಪೂ ಇಲ್ಲದವನು ಅಂತ ಹೇಳಿದ್ದು? ಹೌದು. ಅಬ್ರಹಾಮ ತನ್ನ ಮಗ ಇಸಾಕನನ್ನ ಬಲಿ ಕೊಡೋಕೆ ಮುಂದೆ ಬಂದ ಮೇಲೆನೇ ದೇವರು ಅವನನ್ನ ನೀತಿವಂತ ಅಂತ ಹೇಳಿದ.+ 22  ನಿನಗೆ ಅರ್ಥ ಆಯ್ತಾ? ಅಬ್ರಹಾಮ ನಂಬೋದ್ರ ಜೊತೆಗೆ ಒಳ್ಳೇ ಕೆಲಸಗಳನ್ನೂ ಮಾಡಿದ. ಅವನು ಮಾಡಿದ ಒಳ್ಳೇ ಕೆಲಸದಿಂದ ಅವನಲ್ಲಿ ನಿಜವಾಗ್ಲೂ ನಂಬಿಕೆ ಇತ್ತು ಅಂತ ಗೊತ್ತಾಯ್ತು.+ 23  “ಅಬ್ರಹಾಮ ಯೆಹೋವನ* ಮೇಲೆ ನಂಬಿಕೆ ಇಟ್ಟ. ಹಾಗಾಗಿ ಅವನು ದೇವರ ದೃಷ್ಟಿಯಲ್ಲಿ ನೀತಿವಂತನಾಗಿದ್ದ”+ ಅನ್ನೋ ವಚನ ನಿಜ ಆಯ್ತು. ಅಬ್ರಹಾಮನಿಗೆ “ಯೆಹೋವನ* ಸ್ನೇಹಿತ” ಅನ್ನೋ ಹೆಸ್ರು ಬಂತು.+ 24  ಒಂದು ವಿಷ್ಯ ಅರ್ಥ ಮಾಡ್ಕೋ. ನಂಬಿಕೆ ಮಾತ್ರ ಇದ್ರೆ ಸಾಕಾಗಲ್ಲ, ಅದನ್ನ ಕೆಲಸದಲ್ಲಿ ತೋರಿಸಬೇಕು. ಆಗ್ಲೇ ಒಬ್ಬ ವ್ಯಕ್ತಿ ನೀತಿವಂತ ಅಂತ ದೇವರು ಹೇಳ್ತಾನೆ. 25  ಅದೇ ತರ, ವೇಶ್ಯೆ ಆಗಿದ್ದ ರಾಹಾಬ್‌ ಅವಳ ಒಳ್ಳೇ ಕೆಲಸಗಳಿಂದ ನೀತಿವಂತಳು ಅಂತ ತೋರಿಸ್ಕೊಟ್ಟಳು. ಅವಳು ಗೂಡಚಾರರಿಗೆ ಸಹಾಯ ಮಾಡಿದಳು. ಅವ್ರನ್ನ ಬೇರೆ ದಾರಿಯಲ್ಲಿ ಕಳಿಸ್ಕೊಟ್ಟಳು.+ 26  ಉಸಿರು ಇಲ್ಲದಿರೋ ದೇಹ ಸತ್ತಿರೋ ತರ+ ಒಳ್ಳೇ ಕೆಲಸ ಇಲ್ಲದೆ ಇರೋ ನಂಬಿಕೆನೂ ಸತ್ತದ್ದೇ.+

ಪಾದಟಿಪ್ಪಣಿ

ಅಕ್ಷ. “ರಾಜನ ಆಜ್ಞೆ.”