ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಾರುಣ್ಯ ಪ್ರಾಪ್ತವಯಸ್ಸಿಗೆ ತಯಾರಿ

ತಾರುಣ್ಯ ಪ್ರಾಪ್ತವಯಸ್ಸಿಗೆ ತಯಾರಿ

ತಾರುಣ್ಯ ಪ್ರಾಪ್ತವಯಸ್ಸಿಗೆ ತಯಾರಿ

ನೀ ವು ಉಷ್ಣವಲಯದ ದ್ವೀಪವೊಂದರಿಂದ ಉತ್ತರ ಧ್ರುವ ವಲಯಕ್ಕೆ ವಿಮಾನದಲ್ಲಿ ಬಂದಿಳಿಯುತ್ತೀರೆಂದು ನೆನಸಿ. ಕೂಡಲೇ ಅಲ್ಲಿನ ವಾತಾವರಣ ಅತಿ ಶೀತಲವೆಂದು ನಿಮಗೆ ಗೊತ್ತಾಗುತ್ತದೆ. ಅದಕ್ಕೆ ನೀವು ಹೊಂದಿಕೊಳ್ಳಬಲ್ಲಿರೊ? ಅದು ಸಾಧ್ಯ. ಆದರೆ ಅದಕ್ಕಾಗಿ ನೀವು ಕೆಲವೊಂದು ಬದಲಾವಣೆಗಳನ್ನು ಮಾಡಲೇಬೇಕು.

ಇದೇ ರೀತಿಯ ಸನ್ನಿವೇಶ ಮಕ್ಕಳು ತಾರುಣ್ಯಾವಸ್ಥೆಗೆ ಕಾಲಿಡುವಾಗ ನಿಮಗೆದುರಾಗುತ್ತದೆ. ದಿನಬೆಳಗಾಗುವುದರೊಳಗೊ ಎಂಬಂತೆ ವಾತಾವರಣ ಬದಲಾಗಿರುತ್ತದೆ. ಮೊನ್ನೆ ಮೊನ್ನೆಯ ವರೆಗೂ ನಿಮ್ಮ ಹಿಂದೆಮುಂದೆಯೇ ಸುತ್ತುತ್ತಿದ್ದ ಮಗನಿಗೆ ಈಗ ಅವನ ಗೆಳೆಯರೇ ಬೇಕು. ದಿನವಿಡೀ ಏನೆಲ್ಲ ನಡೆಯಿತೆಂದು ನಿಮಗೆ ಹೇಳಲು ತುದಿಗಾಲಲ್ಲಿ ನಿಲ್ಲುತ್ತಿದ್ದ ಮಗಳಿಗೆ ಈಗ ಏನೇ ಕೇಳಿದರೂ ಮೊಟಕು ಉತ್ತರ ಕೊಡುತ್ತಾಳೆ. ಉದಾಹರಣೆಗೆ:

“ಸ್ಕೂಲ್‌ನಲ್ಲಿ ಇವತ್ತು ಪಾಠ ಹೇಗಿತ್ತು?” ನೀವು ಕೇಳುತ್ತೀರಿ.

“ಚೆನ್ನಾಗಿತ್ತು” ಎಂದಷ್ಟೇ ಉತ್ತರ.

ಆಮೇಲೆ ಮೌನ.

“ಏನು ಯೋಚಿಸುತ್ತಿದ್ದೀಯಾ?” ಎಂದು ಕೇಳುತ್ತೀರಿ.

“ಏನಿಲ್ಲ,” ಎಂಬ ಉತ್ತರ.

ಮತ್ತೆ ಇನ್ನಷ್ಟು ಮೌನ.

ಏಕೆ ಹೀಗೆ? ನೆನ್ನೆಮೊನ್ನೆಯ ವರೆಗೂ ಮಗನು ಮನಸ್ಸುಬಿಚ್ಚಿ ನಿಮಗೆ ಎಲ್ಲವನ್ನೂ ಹೇಳುತ್ತಿದ್ದ. ಈಗೀಗ ಹೆಚ್ಚೇನು ಹೇಳುವುದಿಲ್ಲವೆಂದು ನಿಮಗನಿಸುತ್ತದೆ. ಅಲ್ಲದೆ ಕೆಲವೊಮ್ಮೆ ನಿಮಗೆ ಹೇಳದ ವಿಷಯಗಳನ್ನು ಬೇರೆಯವರಿಗೆ ಹೇಳುತ್ತಾನೆ. ‘ಈಗ ಮಕ್ಕಳು ದೊಡ್ಡವರಾಗುತ್ತಿದ್ದಾರೆ, ಸುಮ್ಮನೆ ನೋಡುತ್ತಾ ಇರಬೇಕು, ಯಾವ ರೀತಿಯಲ್ಲೂ ನೆರವಾಗಲಾರೆ’ ಎಂದು ನಿಮಗೆ ಅನಿಸುತ್ತಿರಬಹುದು.

ಇದರರ್ಥ ನಿಮ್ಮ ಮಕ್ಕಳ ತಾರುಣ್ಯದಲ್ಲಿ ನೀವು ಅವರಿಗೆ ಆಪ್ತರಾಗಿರಲು ಸಾಧ್ಯವಿಲ್ಲವೆಂದೊ? ಖಂಡಿತ ಅವರಿಗೆ ಆಪ್ತರಾಗಿರಲು ಸಾಧ್ಯವಿದೆ. ಆದರೆ ಮೊದಲಾಗಿ ನೀವು ಮಾಡಬೇಕಾದ ಒಂದು ವಿಷಯವಿದೆ. ಅದೇನೆಂದರೆ, ಮಕ್ಕಳ ಬೆಳವಣಿಗೆಯ ಈ ಅತ್ಯಾಕರ್ಷಕ ಆದರೂ ಕೆಲವೊಮ್ಮೆ ಗಲಿಬಿಲಿಯ ಘಟ್ಟದಲ್ಲಿ ಏನಾಗುತ್ತಿದೆಯೆಂದು ನೀವು ಅರ್ಥಮಾಡಿಕೊಳ್ಳಬೇಕು.

ಬಾಲ್ಯ ದಾಟಿ ತಾರುಣ್ಯಕ್ಕೆ

ಮಗುವಿನ ಮಿದುಳು ಐದು ವರ್ಷದಷ್ಟಕ್ಕೆ ಪೂರ್ಣ ಬೆಳೆದಿರುತ್ತದೆಂದು ಸಂಶೋಧಕರು ಒಂದೊಮ್ಮೆ ನೆನಸುತ್ತಿದ್ದರು. ಆದರೆ ಈಗ ಅವರ ಅಭಿಮತವೇನೆಂದರೆ, ಆ ವಯಸ್ಸಿನ ನಂತರ ಮಿದುಳಿನ ಗಾತ್ರ ಹೆಚ್ಚೇನೂ ಬದಲಾಗದಿದ್ದರೂ, ಅದರ ಕಾರ್ಯವೈಖರಿ ಖಂಡಿತ ಬದಲಾಗುತ್ತದೆ. ಮಕ್ಕಳು ಹರೆಯಕ್ಕೆ ಕಾಲಿಡುವಾಗ ಹಾರ್ಮೋನುಗಳಲ್ಲಿ ದೊಡ್ಡ ಬದಲಾವಣೆಯಾಗುತ್ತದೆ. ಆದ್ದರಿಂದ ಅವರು ಯೋಚಿಸುವ ರೀತಿಯೇ ಬದಲಾಗುತ್ತದೆ. ಉದಾಹರಣೆಗೆ, ಚಿಕ್ಕ ಮಕ್ಕಳು ವಿಷಯಗಳನ್ನು ‘ಇದು ಸರಿ, ಇದು ತಪ್ಪು’ ಎಂಬ ನಿರ್ದಿಷ್ಟ ರೀತಿಯಲ್ಲಿ ಮಾತ್ರ ನೋಡುತ್ತಾರೆ. ಆದರೆ ತರುಣರು ಹಾಗಿರುವುದಿಲ್ಲ, ಅವರು ಯೋಚಿಸುತ್ತಾರೆ. ಯಾವುದೇ ವಿಷಯದ ಹಿಂದಿನ ಕಾರಣಗಳು, ತೊಂದರೆಗಳು ಇವೆಲ್ಲವನ್ನು ತೂಗಿನೋಡುತ್ತಾರೆ. (1 ಕೊರಿಂಥ 13:11) ಅವರು ವಿಷಯಗಳ ಬಗ್ಗೆ ದೃಢ ಅಭಿಪ್ರಾಯಗಳನ್ನು ಹೊಂದುತ್ತಾರೆ. ಅವುಗಳನ್ನು ವ್ಯಕ್ತಪಡಿಸಲು ನಾಚುವುದಿಲ್ಲ.

ಇಟಲಿಯ ಪೌಲೊ ತನ್ನ ಮಗನಲ್ಲಾದ ಈ ಬದಲಾವಣೆಯನ್ನು ಗಮನಿಸಿದನು. “ಹದಿವಯಸ್ಸಿನ ನನ್ನ ಮಗನನ್ನು ನೋಡುವಾಗ ನನ್ನ ಮುಂದಿರುವುದು ಪುಟ್ಟ ಬಾಲಕನಲ್ಲ, ದೊಡ್ಡ ಗಂಡಸು ಎಂದು ನನಗನಿಸುತ್ತದೆ. ಅವನಲ್ಲಾಗಿರುವ ದೈಹಿಕ ಬದಲಾವಣೆಗಳಿಗಿಂತಲೂ ಹೆಚ್ಚಾಗಿ ಅವನು ಯೋಚಿಸುವ ರೀತಿಯು ನನ್ನನ್ನು ಬೆರಗಾಗಿಸಿದೆ. ಅವನು ತನ್ನ ಅಭಿಪ್ರಾಯಗಳನ್ನು ಹೇಳಲಿಕ್ಕಾಗಲಿ, ಸಮರ್ಥಿಸಲಿಕ್ಕಾಗಲಿ ಹೆದರುವುದಿಲ್ಲ!”

ನಿಮ್ಮ ಮಗನಲ್ಲೂ ನೀವು ತದ್ರೀತಿಯ ಸಂಗತಿಯನ್ನು ಗಮನಿಸಿದ್ದೀರೊ? ಚಿಕ್ಕವನಿದ್ದಾಗ ಬಹುಶಃ ಅವನು ನಿಮ್ಮ ಅಣತಿಯಂತೆ ನಡೆದುಕೊಳ್ಳುತ್ತಿದ್ದನು. ಯಾಕೆ ಅಂತ ಅವನೇನಾದರೂ ಕೇಳಿದರೆ, ‘ನಾನು ಹೇಳಿದಂತೆ ಮಾಡು’ ಎಂದು ಹೇಳಿದರಷ್ಟೇ ಸಾಲುತ್ತಿತ್ತು. ಆದರೆ ಈಗ ತರುಣನಾಗಿರುವ ಅವನಿಗೆ ನೀವೇನಾದರೂ ಹೇಳುವಾಗ ಕಾರಣಗಳನ್ನೂ ಕೊಡಬೇಕು. ನಿಮ್ಮ ಕುಟುಂಬ ಪಾಲಿಸುತ್ತಿರುವ ನೈತಿಕ ಮೌಲ್ಯಗಳನ್ನು ಸಹ ಅವನು ಪ್ರಶ್ನಿಸುತ್ತಿರಬಹುದು. ಅವನು ಕೆಲವೊಮ್ಮೆ ದೃಢವಾಗಿ ಮಾತಾಡುವಾಗ ನಿಮಗೆ ಎದುರುಬೀಳುತ್ತಿದ್ದಾನೇನೊ ಎಂದು ಅನಿಸಬಹುದು.

ತರುಣ ಮಗ ನಿಮ್ಮ ಮೌಲ್ಯಗಳನ್ನೆಲ್ಲ ತಲೆಕೆಳಗೆ ಮಾಡಲು ಹೊರಟಿದ್ದಾನೆಂಬ ತೀರ್ಮಾನಕ್ಕೆ ಬರಬೇಡಿ. ಅವನು ನಿಮ್ಮ ಮೌಲ್ಯಗಳನ್ನು ತನ್ನದಾಗಿ ಮಾಡಲು, ತನ್ನ ಬದುಕಿನಲ್ಲಿ ಅವುಗಳಿಗೆ ಸ್ಥಾನಕೊಡಲು ಹೆಣಗಾಡುತ್ತಿರಬಹುದು ಅಷ್ಟೇ. ನೆನಸಿ, ನೀವು ಒಂದು ಮನೆಯಿಂದ ಇನ್ನೊಂದು ಮನೆಗೆ ಸ್ಥಳಾಂತರಿಸಲಿದ್ದೀರಿ. ಪೀಠೋಪಕರಣಗಳನ್ನೆಲ್ಲ ತೆಗೆದುಕೊಂಡು ಹೋಗಲಿದ್ದೀರಿ. ಹೊಸ ಮನೆಯಲ್ಲಿ ಪ್ರತಿಯೊಂದೂ ಸಾಮಾನನ್ನಿಡಲು ಸೂಕ್ತ ಸ್ಥಳ ಸುಲಭವಾಗಿ ಸಿಗಲಿಕ್ಕಿಲ್ಲ. ಆದರೂ ನಿಮಗೆ ಅಮೂಲ್ಯವಾದ ಯಾವುದೇ ವಸ್ತುವನ್ನು ನೀವು ಬಿಸಾಡುವುದಿಲ್ಲ ನಿಶ್ಚಯ.

“ತಂದೆತಾಯಿಗಳನ್ನು ಬಿಟ್ಟು” ಸ್ವಾವಲಂಬಿಯಾಗುವ ಸಮಯಕ್ಕಾಗಿ ತಯಾರಿ ಮಾಡುತ್ತಿರುವ ನಿಮ್ಮ ತರುಣ ಮಗನು ಅದೇ ರೀತಿಯ ಸನ್ನಿವೇಶದಲ್ಲಿದ್ದಾನೆ. (ಆದಿಕಾಂಡ 2:24) ಆ ದಿನ ತುಂಬ ದೂರದಲ್ಲಿರಬಹುದು ನಿಜ. ಏಕೆಂದರೆ ನಿಮ್ಮ ತರುಣನು ಈಗಿನ್ನೂ ಪ್ರಾಪ್ತವಯಸ್ಕನಾಗಿಲ್ಲ. ಆದರೆ ಒಂದರ್ಥದಲ್ಲಿ ಅವನು ಈಗಾಗಲೇ ಗಂಟುಮೂಟೆ ಕಟ್ಟಲು ಆರಂಭಿಸಿದ್ದಾನೆ. ಹೇಗೆಂದರೆ, ಅವನಲ್ಲಿ ಬೇರೂರಿಸಲಾಗಿದ್ದ ಮೌಲ್ಯಗಳನ್ನು ಅವನು ತನ್ನ ಈ ಹದಿಹರೆಯದ ವರ್ಷಗಳಾದ್ಯಂತ ಪರಿಶೀಲಿಸುತ್ತಿದ್ದಾನೆ. ಪ್ರಾಪ್ತವಯಸ್ಸಿಗೆ ಕಾಲಿಡುವಾಗ ತನ್ನೊಂದಿಗೆ ಯಾವುದನ್ನು ಕೊಂಡೊಯ್ಯಬೇಕೆಂದು ಅವನು ನಿರ್ಣಯಿಸುತ್ತಿದ್ದಾನೆ. *

ನಿಮ್ಮ ಮಗ ಇಂಥ ನಿರ್ಣಯಗಳನ್ನು ಮಾಡುವ ವಿಚಾರ ನಿಮ್ಮನ್ನು ಗಾಬರಿಗೊಳಿಸಬಹುದು. ಹಾಗಿದ್ದರೂ ಒಂದು ವಿಷಯ ಸತ್ಯ. ಅದೇನೆಂದರೆ ಅವನು ಪ್ರಾಪ್ತವಯಸ್ಸಿಗೆ ಕಾಲಿಡುವಾಗ, ತಾನು ಅಮೂಲ್ಯವೆಂದೆಣಿಸುವ ಮೌಲ್ಯಗಳನ್ನು ಮಾತ್ರ ಇಟ್ಟುಕೊಳ್ಳುವನು. ಹೀಗಿರುವುದರಿಂದ ಜೀವನಪೂರ್ತಿ ಪಾಲಿಸಬೇಕೆಂದಿರುವ ಮೂಲತತ್ತ್ವಗಳನ್ನು ಈಗಲೇ ಅಂದರೆ ನಿಮ್ಮೊಂದಿಗಿರುವಾಗಲೇ ಅವನು ಪೂರ್ತಿಯಾಗಿ ಪರಿಶೀಲಿಸಿ ನೋಡುವ ಸಮಯ.—ಅಪೊಸ್ತಲರ ಕಾರ್ಯಗಳು 17:11.

ವಾಸ್ತವದಲ್ಲಿ ಹಾಗೆ ಪರಿಶೀಲಿಸುವುದು ನಿಮ್ಮ ತರುಣನಿಗೆ ಪ್ರಯೋಜನಕರ. ಒಂದುವೇಳೆ ಅವನು ಇವತ್ತು ನಿಮ್ಮ ಮಟ್ಟಗಳನ್ನು ಮರುಸವಾಲಿಲ್ಲದೆ ಸ್ವೀಕರಿಸುತ್ತಿರುವಲ್ಲಿ, ನಾಳೆ ಇತರರ ಮಟ್ಟಗಳನ್ನು ಸಹ ಪ್ರಶ್ನಿಸದೇ ಒಪ್ಪಿಕೊಂಡಾನು. (ವಿಮೋಚನಕಾಂಡ 23:2) “ಜ್ಞಾನಹೀನನಾದ” ಅಂದರೆ ವಿವೇಚಿಸುವ ಸಾಮರ್ಥ್ಯವಿಲ್ಲದ ಇಂಥ ತರುಣನನ್ನು ಸುಲಭವಾಗಿ ಪ್ರಲೋಭನೆಗೆ ಸೆಳೆಯಬಹುದು ಎಂದು ಬೈಬಲ್‌ ತಿಳಿಸುತ್ತದೆ. (ಜ್ಞಾನೋಕ್ತಿ 7:8) ತಾನು ನಂಬುವ ವಿಷಯಗಳ ಬಗ್ಗೆ ದೃಢ ಅಭಿಪ್ರಾಯವಿಲ್ಲದ ಒಬ್ಬ ಯುವ ವ್ಯಕ್ತಿ “ಅಲೆಗಳಿಂದ ಅತ್ತಿತ್ತ ಹೊಯ್ದಾಡಲ್ಪಟ್ಟು ಮನುಷ್ಯರ ಕುಯುಕ್ತಿಯಿಂದಲೂ ವಂಚನಾತ್ಮಕ ಕುತಂತ್ರದಿಂದಲೂ ಕೂಡಿದ ಬೋಧನೆಯ ಪ್ರತಿಯೊಂದು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು” ಹೋಗುತ್ತಾನೆ.—ಎಫೆಸ 4:14.

ನಿಮ್ಮ ಮಗನಿಗೆ ಹಾಗಾಗದಂತೆ ಹೇಗೆ ತಡೆಯಬಲ್ಲಿರಿ? ಈ ಮೂರು ಸಂಗತಿಗಳು ಅವನಿಗಿರುವಂತೆ ನೋಡಿಕೊಳ್ಳಿ:

1 ಗ್ರಹಣ ಶಕ್ತಿ

‘ಪ್ರೌಢರು ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲು ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿದ್ದಾರೆ’ ಎಂದು ಬರೆದನು ಅಪೊಸ್ತಲ ಪೌಲನು. (ಇಬ್ರಿಯ 5:14) ‘ನಾನು ನನ್ನ ಮಗನಿಗೆ ಸರಿ ಯಾವುದು ತಪ್ಪು ಯಾವುದು ಎಂದು ವರ್ಷಗಳ ಹಿಂದೆಯೇ ಕಲಿಸಿದ್ದೇನೆ’ ಎಂದು ನೀವನ್ನಬಹುದು. ನಿಜ. ಆ ಸಮಯದಲ್ಲಿ ಆ ತರಬೇತಿ ಅವನಿಗೆ ಪ್ರಯೋಜನ ತಂದಿರಬಹುದು ಮತ್ತು ಬೆಳವಣಿಗೆಯ ಈ ಹಂತಕ್ಕೆ ಅವನನ್ನು ಅಣಿಗೊಳಿಸಿರಲೂಬಹುದು. (2 ತಿಮೊಥೆಯ 3:14) ಹಾಗಿದ್ದರೂ ಜನರು ತಮ್ಮ ಗ್ರಹಣ ಶಕ್ತಿಗಳನ್ನು ತರಬೇತಿಗೊಳಿಸುವ ಅಗತ್ಯವಿದೆ ಎಂದನು ಪೌಲ. ಚಿಕ್ಕ ಮಕ್ಕಳು ಸರಿ ಮತ್ತು ತಪ್ಪಿನ ಬಗ್ಗೆ ಜ್ಞಾನ ಪಡೆಯಬಲ್ಲರು; ತರುಣರಾದರೊ ‘ತಿಳಿವಳಿಕೆಯ ಸಾಮರ್ಥ್ಯದಲ್ಲಿ ಪೂರ್ಣ ಬೆಳೆದವರು’ ಆಗಬೇಕು. (1 ಕೊರಿಂಥ 14:20; ಜ್ಞಾನೋಕ್ತಿ 1:4; 2:11) ನಿಮ್ಮ ತರುಣ ಮಗನು ಕುರುಡು ವಿಧೇಯತೆ ತೋರಿಸುವವನಾಗಿರದೆ ಉತ್ತಮ ವಿವೇಚನಾ ಕೌಶಲಗಳನ್ನು ಬಳಸಲು ಶಕ್ತನಾಗಿರಬೇಕು. (ರೋಮನ್ನರಿಗೆ 12:1, 2) ಈ ನಿಟ್ಟಿನಲ್ಲಿ ಅವನಿಗೆ ಹೇಗೆ ಸಹಾಯ ಮಾಡಬಲ್ಲಿರಿ?

ಒಂದು ವಿಧ, ಅವನನ್ನು ಮಾತಾಡುವಂತೆ ಬಿಡುವುದೇ ಆಗಿದೆ. ನೀವು ಮಧ್ಯೆ ಮಾತಾಡಬೇಡಿ. ನಿಮಗೆ ಕೇಳಲು ಇಷ್ಟವಿಲ್ಲದಿರುವ ಸಂಗತಿಯನ್ನು ಹೇಳಿದರೂ, ನಿಮ್ಮ ಮುಖಚರ್ಯೆ ಬದಲಾಗದಿರಲಿ. ಬದಲಾದಲ್ಲಿ ಅವನು ತನ್ನ ಮಾತನ್ನು ಅಲ್ಲಿಗೇ ನಿಲ್ಲಿಸಿಬಿಡುವನು. “ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ ಆಗಿರಬೇಕು” ಎನ್ನುತ್ತದೆ ಬೈಬಲ್‌. (ಯಾಕೋಬ 1:19; ಜ್ಞಾನೋಕ್ತಿ 18:13) ಅಲ್ಲದೆ ಯೇಸು ಹೀಗಂದನು: “ಹೃದಯದಲ್ಲಿ ತುಂಬಿರುವುದನ್ನೇ ಬಾಯಿ ಮಾತಾಡುತ್ತದೆ.” (ಮತ್ತಾಯ 12:34) ಹಾಗಾಗಿ ನಿಮ್ಮ ತರುಣ ಮಗನಿಗೆ ಕಿವಿಗೊಡಿ. ಆಗ, ಅವನಿಗೆ ನಿಜವಾಗಿ ಯಾವ ಚಿಂತೆಯಿದೆ ಎಂದು ನಿಮಗೆ ತಿಳಿಯಲು ಸಾಧ್ಯವಾಗುವುದು.

ಮಾತಾಡುವ ಸರದಿ ನಿಮ್ಮದಾಗಿರುವಾಗ ನೇರವಾದ ಮೊಂಡ ಹೇಳಿಕೆಗಳನ್ನು ಮಾಡುವ ಬದಲು ಪ್ರಶ್ನೆಗಳನ್ನು ಬಳಸಿರಿ. ಯೇಸು “ನಿಮ್ಮ ಅಭಿಪ್ರಾಯವೇನು?” ಎಂದು ತನ್ನ ಶಿಷ್ಯರನ್ನು ಮಾತ್ರವಲ್ಲ ಹಠಮಾರಿ ಜನರನ್ನೂ ಕೇಳಿ ಅವರ ಮನಸ್ಸಿನಲ್ಲಿದ್ದದ್ದನ್ನು ಹೊರಗೆಳೆದನು. (ಮತ್ತಾಯ 21:23, 28) ನಿಮ್ಮ ತರುಣ ಮಗನೊಂದಿಗೆ ಮಾತಾಡುವಾಗ ನೀವೂ ಹಾಗೆಯೇ ಮಾಡಬಹುದು. ನಿಮ್ಮ ಅಭಿಪ್ರಾಯಕ್ಕೆ ವಿರುದ್ಧವಾದ ಸಂಗತಿಯನ್ನು ಅವನು ಹೇಳಿದರೂ ಸರಿಯೇ. ಉದಾಹರಣೆಗೆ:

ನಿಮ್ಮ ಮಗನು ಹೀಗಂದರೆ: “ದೇವರಿದ್ದಾನೆಂದು ನನಗನಿಸುವುದಿಲ್ಲ.”

ಹೀಗನ್ನಬೇಡಿ: “ದೇವರಿದ್ದಾನೆಂದು ನೀನು ನಂಬಲೇಬೇಕು! ನಾವು ನಿನಗೆ ಕಲಿಸಿದ್ದು ಅದನ್ನೇ.”

ಹೀಗೆ ಕೇಳಿ: “ನಿನಗೆ ಯಾಕೆ ಹಾಗನಿಸುತ್ತದೆ?”

ಮಗನ ಮನಸ್ಸಿನಲ್ಲಿರುವುದನ್ನು ಇನ್ನಷ್ಟು ಹೊರಸೆಳೆಯಲು ನೀವೇಕೆ ಪ್ರಯತ್ನಿಸಬೇಕು? ಅವನು ಏನು ಹೇಳುತ್ತಿದ್ದಾನೆ ಎಂಬುದು ನಿಮಗೆ ಕೇಳಿಸ್ತಾ ಇದೆಯಾದರೂ ಅವನು ಏನು ಯೋಚಿಸುತ್ತಿದ್ದಾನೆ ಎನ್ನುವುದೂ ನಿಮಗೆ ಗೊತ್ತಾಗಬೇಕು. (ಜ್ಞಾನೋಕ್ತಿ 20:5) ಅವನ ಸಮಸ್ಯೆ ದೇವರು ಇದ್ದಾನೊ ಇಲ್ಲವೊ ಎನ್ನುವುದಕ್ಕಿಂತಲೂ ದೇವರ ಮಟ್ಟಗಳನ್ನು ಪಾಲಿಸುವ ವಿಷಯಕ್ಕೆ ಸಂಬಂಧಿಸಿರಬಹುದು.

ಉದಾಹರಣೆಗೆ, ದೇವರ ನೈತಿಕ ನಿಯಮಗಳನ್ನು ಮುರಿಯುವ ಒತ್ತಡಕ್ಕೊಳಗಾಗಿರುವ ಯುವಕನು, ದೇವರೇ ಇಲ್ಲ ಎಂದು ನಂಬಲು ನಿರ್ಣಯಿಸುವ ಮೂಲಕ ತನ್ನ ಕೆಟ್ಟ ಕೆಲಸಗಳನ್ನು ಸಮರ್ಥಿಸಲು ಪ್ರಯತ್ನಿಸಬಹುದು. (ಕೀರ್ತನೆ 14:1) ‘ದೇವರೇ ಇಲ್ಲವೆಂದ ಮೇಲೆ, ನಾನು ಬೈಬಲಿನ ಮಟ್ಟಗಳಿಗನುಸಾರ ಜೀವಿಸಬೇಕಾಗಿಲ್ಲವಲ್ಲ’ ಎಂದವನು ತರ್ಕಿಸಬಹುದು.

ನಿಮ್ಮ ಮಗನು ಹಾಗೆ ಯೋಚಿಸುತ್ತಿದ್ದಾನೆಂದು ತಿಳಿದುಬಂದಲ್ಲಿ, ‘ದೇವರ ಮಟ್ಟಗಳು ನನ್ನ ಒಳಿತಾಗಿಯೇ ಇವೆಯೆಂದು ನಿಜವಾಗಿಯೂ ನಂಬುತ್ತೇನೊ?’ ಎಂದು ಅವನು ವಿವೇಚಿಸಬೇಕು. (ಯೆಶಾಯ 48:17, 18) ಅವು ತನ್ನ ಒಳಿತಿಗಾಗಿವೆಯೆಂದು ಅವನು ನಂಬುವುದಾದರೆ, ತನ್ನ ಸುಕ್ಷೇಮಕ್ಕಾಗಿ ಅವುಗಳ ಪರ ದೃಢವಾಗಿ ನಿಲ್ಲುವುದು ಸಾರ್ಥಕವೆಂದು ಗ್ರಹಿಸಲು ಸಹಾಯಮಾಡಿ.—ಗಲಾತ್ಯ 5:1.

ನಿಮ್ಮ ಮಗನು ಹೀಗಂದರೆ: “ಈ ಧರ್ಮ ನಿಮ್ಮದು. ಹಾಗಂತ ಅದು ನನ್ನ ಧರ್ಮ ಆಗಿರಬೇಕೆಂದಿಲ್ಲವಲ್ಲ.”

ಹೀಗನ್ನಬೇಡಿ: “ಅದು ನಮ್ಮ ಧರ್ಮ, ನೀನು ನಮ್ಮ ಮಗ. ಆದ್ದರಿಂದ ಏನು ನಂಬಬೇಕೆಂದು ನಾವು ಹೇಳುತ್ತೇವೊ ಅದನ್ನೇ ನೀನು ನಂಬಬೇಕು.”

ಹೀಗೆ ಕೇಳಿ: “ನೀನು ಹೇಳಿದ ಮಾತು ಗಂಭೀರವಾದದ್ದು. ಆದರೆ ನನ್ನ ನಂಬಿಕೆಗಳು ನಿನಗೆ ಬೇಡವಾದರೆ, ನಂಬಲಿಕ್ಕಾಗಿ ನಿನಗೆ ಬೇರೇನಾದರೂ ಇರಬೇಕಲ್ಲ. ನಿನ್ನ ನಂಬಿಕೆಗಳೇನು ಅಂತ ಹೇಳುವಿಯಾ? ಯಾವ ಮಟ್ಟಗಳಿಗನುಸಾರ ಜೀವಿಸುವುದು ಯೋಗ್ಯವೆಂದು ನೀನು ನೆನಸುತ್ತೀ?”

ಮಗನ ಮನಸ್ಸಿನಲ್ಲಿರುವುದನ್ನು ಇನ್ನಷ್ಟು ಹೊರಸೆಳೆಯಲು ನೀವೇಕೆ ಪ್ರಯತ್ನಿಸಬೇಕು? ಈ ವಿಧದ ತರ್ಕ ಅವನು ತನ್ನ ಸ್ವಂತ ಯೋಚನಾಧಾಟಿಯನ್ನು ಪರೀಕ್ಷಿಸಿ ನೋಡುವಂತೆ ಸಹಾಯವಾಗುವುದು. ಆಗ ಅವನ ನಂಬಿಕೆಗಳು ನಿಮ್ಮ ನಂಬಿಕೆಗಳಿಗೆ ಹೋಲುವುದನ್ನು ನೋಡಿ ಅವನಿಗೇ ಅಚ್ಚರಿಯಾಗಬಹುದು. ನಿಜವಾಗಿ ಅವನಿಗಿರುವ ಚಿಂತೆ ಬೇರೇನೊ ಆಗಿರಬಹುದು.

ಉದಾಹರಣೆಗೆ, ನಿಮ್ಮ ಮಗನಿಗೆ ತನ್ನ ನಂಬಿಕೆಗಳನ್ನು ಇತರರಿಗೆ ಹೇಗೆ ವಿವರಿಸಿ ಹೇಳಬೇಕೆಂದು ಗೊತ್ತಿರಲಿಕ್ಕಿಲ್ಲ. (ಕೊಲೊಸ್ಸೆ 4:6; 1 ಪೇತ್ರ 3:15) ಅಥವಾ, ತನ್ನ ನಂಬಿಕೆಗಳನ್ನು ಒಪ್ಪದಿರುವ ಹುಡುಗಿಯತ್ತ ಅವನು ಆಕರ್ಷಿತನಾಗಿರಬಹುದು. ಆದ್ದರಿಂದ ಸಮಸ್ಯೆಯ ಮೂಲವೇನೆಂದು ಪತ್ತೆಹಚ್ಚಿರಿ. ಮಗನೂ ಅದನ್ನು ಮಾಡುವಂತೆ ನೆರವಾಗಿ. ಅವನು ತನ್ನ ಗ್ರಹಣ ಶಕ್ತಿಯನ್ನು ಚೆನ್ನಾಗಿ ಬಳಸಲು ಕಲಿತರೆ ಪ್ರಾಪ್ತ ವಯಸ್ಸಿಗೆ ಉತ್ತಮವಾಗಿ ತಯಾರಾಗುವನು.

2 ವಯಸ್ಕ-ಮಾರ್ಗದರ್ಶನ

ಹದಿಹರೆಯದ ಮಕ್ಕಳಲ್ಲಿ “ಗೊಂದಲ, ಗಲಿಬಿಲಿ” ನಿರೀಕ್ಷಿಸಲೇಬೇಕಾದ ವಿಷಯವೆಂದು ಕೆಲವು ಮನಃಶ್ಶಾಸ್ತ್ರಜ್ಞರು ಹೇಳುತ್ತಾರೆ. ಆದರೆ ಅದು ಇಂದಿನ ಕೆಲವು ಸಂಸ್ಕೃತಿಗಳಲ್ಲಿ ನೋಡಲು ಸಿಗುವುದೇ ಇಲ್ಲ. ಇಂಥ ಸಮಾಜಗಳಲ್ಲಿ ಯುವ ಜನರು ಎಳೇ ವಯಸ್ಸಿನಲ್ಲೇ ವಯಸ್ಕ ಜೀವನಕ್ಕೆ ಹೊಂದಿಕೊಳ್ಳುತ್ತಾರೆಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಏಕೆಂದರೆ ಆ ಯುವ ಜನರು ವಯಸ್ಕರೊಂದಿಗೆ ಕೆಲಸಮಾಡುತ್ತಾರೆ, ಅವರೊಂದಿಗೇ ಬೆರೆಯುತ್ತಾರೆ ಮತ್ತು ವಯಸ್ಕರ ಜವಾಬ್ದಾರಿಗಳನ್ನು ಅವರಿಗೆ ವಹಿಸಲಾಗುತ್ತದೆ. ಇಂಥ ಸಮಾಜಗಳಲ್ಲಿ “ಯುವ ಸಂಸ್ಕೃತಿ,” “ಬಾಲಾಪರಾಧ” ಮತ್ತು “ತಾರುಣ್ಯ” ಎಂಬ ಪದಗಳೇ ಇಲ್ಲ.

ತದ್ವಿರುದ್ಧವಾಗಿ, ಅನೇಕ ದೇಶಗಳಲ್ಲಿ ವಿದ್ಯಾರ್ಥಿಗಳಿಂದ ಕಿಕ್ಕಿರಿದಿರುವ ಶಾಲೆಗಳಿಗೆ ಹೋಗುತ್ತಿರುವ ಯುವ ಜನರ ಕುರಿತು ಯೋಚಿಸಿ. ಅವರಿಗಲ್ಲಿ ಸಿಗುವ ಒಂದೇ ಅರ್ಥಪೂರ್ಣ ಸಹವಾಸವು ಇತರ ಯುವ ಜನರೊಂದಿಗಷ್ಟೇ. ಶಾಲೆಯಿಂದ ಮನೆಗೆ ಬರುವಾಗ, ಮನೆಯಲ್ಲಿ ಯಾರೂ ಇರುವುದಿಲ್ಲ. ಅಪ್ಪಅಮ್ಮ ಕೆಲಸಕ್ಕೆ ಹೋಗಿರುತ್ತಾರೆ. ಸಂಬಂಧಿಕರೆಲ್ಲ ಇರುವುದು ದೂರದಲ್ಲಿ. ಇಂಥ ಯುವ ಜನರಿಗೆ ತುಂಬ ಸುಲಭವಾಗಿ ಸಿಗುವಂಥ ಸಹವಾಸವೆಂದರೆ ತಮ್ಮ ಸಮಪ್ರಾಯದವರದ್ದೇ. * ಇದರಿಂದಾಗುವ ಅಪಾಯವನ್ನು ನೋಡಬಲ್ಲಿರೋ? ಕೆಟ್ಟ ಮಕ್ಕಳೊಂದಿಗಿನ ಸಹವಾಸ ಅಪಾಯಕಾರಿ ಮಾತ್ರವಲ್ಲ ವಯಸ್ಕರ ಸಹವಾಸ ಇಲ್ಲದಿರುವುದು ಸಹ ಅಪಾಯಕಾರಿ. ಇದರಿಂದಾಗಿ ಆದರ್ಶಪ್ರಾಯ ಯುವಕರು ಸಹ ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ಸಾಧ್ಯತೆಯಿದೆಯೆಂದು ಸಂಶೋಧಕರಿಗೆ ತಿಳಿದುಬಂದಿದೆ.

ಯುವ ಜನರನ್ನು ವಯಸ್ಕರಿಂದ ದೂರವಿಡದಿದ್ದ ಒಂದು ಸಮಾಜವೆಂದರೆ ಪ್ರಾಚೀನಕಾಲದ ಇಸ್ರಾಯೇಲ್‌ ಜನಾಂಗ. * ಉದಾಹರಣೆಗೆ, ಉಜ್ಜೀಯ ಎಂಬವನ ಕುರಿತು ಬೈಬಲ್‌ ತಿಳಿಸುತ್ತದೆ. ಇವನು ಹದಿಹರೆಯದಲ್ಲಿ ಯೆಹೂದ ರಾಜ್ಯದ ಅರಸನಾದನು. ಆ ಭಾರವಾದ ಜವಾಬ್ದಾರಿಯನ್ನು ಅವನು ಹೊರಲು ಸಾಧ್ಯವಾದದ್ದು ಹೇಗೆ? ಅವನಿಗೆ ನೆರವಾದ ಒಂದು ಅಂಶ, ಜೆಕರ್ಯ ಎಂಬ ಒಬ್ಬ ವಯಸ್ಕನ ಪ್ರಭಾವವೇ. ಜೆಕರ್ಯನು “ದೇವಭಕ್ತಿಯನ್ನು ಬೋಧಿಸುತ್ತಿದ್ದ”ನೆಂದು ಬೈಬಲ್‌ ವರ್ಣಿಸುತ್ತದೆ.—2 ಪೂರ್ವಕಾಲವೃತ್ತಾಂತ 26:5.

ನಿಮ್ಮ ಯುವ ಮಕ್ಕಳಿಗೆ ನಿಮ್ಮಂಥದ್ದೇ ಮೌಲ್ಯಗಳಿರುವ ಅನುಭವಿಗಳಾದ ಒಬ್ಬಿಬ್ಬ ವಯಸ್ಕ ಸ್ನೇಹಿತರಿದ್ದಾರೊ? ನಿಮ್ಮ ಮಕ್ಕಳಿಗೆ ಅವರೊಂದಿಗಿರುವ ಸ್ನೇಹದ ಬಗ್ಗೆ ಹೊಟ್ಟೆಕಿಚ್ಚುಪಡಬೇಡಿ. ಏಕೆಂದರೆ ಇಂಥ ಸ್ನೇಹಿತರು ನಿಮ್ಮ ಮಕ್ಕಳಿಗೆ ಸರಿಯಾದದ್ದನ್ನು ಮಾಡಲು ಸಹಾಯಮಾಡುವರು. “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು” ಎನ್ನುತ್ತದೆ ಬೈಬಲಿನ ಒಂದು ನುಡಿಮುತ್ತು.—ಜ್ಞಾನೋಕ್ತಿ 13:20.

3 ಜವಾಬ್ದಾರಿಯ ಅರಿವು

ಕೆಲವೊಂದು ದೇಶಗಳಲ್ಲಿ ಯುವ ಜನರು ವಾರದಲ್ಲಿ ಇಂತಿಷ್ಟು ತಾಸುಗಳಿಗಿಂತ ಹೆಚ್ಚು ಸಮಯ ಕೆಲಸಮಾಡುವುದನ್ನು ಅಥವಾ ನಿರ್ದಿಷ್ಟ ರೀತಿಯ ಕೆಲಸ ಮಾಡುವುದನ್ನು ಕಾನೂನು ನಿಷೇಧಿಸುತ್ತದೆ. ಈ ನಿಷೇಧಗಳನ್ನು ಕೆಲಸದ ಸ್ಥಳಗಳಲ್ಲಿನ ಅಪಾಯಕಾರಿ ಸ್ಥಿತಿಗಳಿಂದ ಮಕ್ಕಳನ್ನು ರಕ್ಷಿಸಲಿಕ್ಕಾಗಿ ರಚಿಸಲಾಯಿತು. ಇವು 18ನೇ ಹಾಗೂ 19ನೇ ಶತಮಾನಗಳಲ್ಲಿ ನಡೆದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಜಾರಿಗೆ ಬಂದವು.

ಬಾಲ ದುಡಿಮೆಗೆ ಸಂಬಂಧಪಟ್ಟ ಈ ಕಾನೂನುಗಳು ಮಕ್ಕಳನ್ನು ಅಪಾಯ ಹಾಗೂ ದೌರ್ಜನ್ಯದಿಂದ ರಕ್ಷಿಸುತ್ತವಾದರೂ ಜವಾಬ್ದಾರಿ ಹೊರುವುದರಿಂದಲೂ ಅವರನ್ನು ತಡೆಯುತ್ತವೆಂದು ಕೆಲವು ತಜ್ಞರು ಹೇಳುತ್ತಾರೆ. ಅದರಿಂದಾಗಿ ಅನೇಕ ಹದಿವಯಸ್ಕರು, “ಸ್ವತಃ ಯಾವುದೇ ಪರಿಶ್ರಮಮಾಡದಿದ್ದರೂ ತಮಗೆ ಬೇಕಾದದ್ದು ತಮಗೆ ಕೊಡಲ್ಪಡಬೇಕು, ತಾವದಕ್ಕೆ ಪೂರ್ಣ ಅರ್ಹರು ಎಂಬ ಹಮ್ಮಿನ ಮನೋಭಾವವನ್ನು” ಬೆಳೆಸಿಕೊಂಡಿದ್ದಾರೆ ಎನ್ನುತ್ತದೆ ಎಸ್ಕೇಪಿಂಗ್‌ ದ ಎಂಡ್ಲೆಸ್‌ ಅಡೊಲೊಸೆನ್ಸ್‌ ಎಂಬ ಪುಸ್ತಕ. ಈ ಮನೋಭಾವವು “ಹದಿವಯಸ್ಕರಿಂದ ಏನಾದರೂ ಒಳ್ಳೇದನ್ನು ನಿರೀಕ್ಷಿಸುವುದರ ಬದಲು ಅವರ ಮನರಂಜಿಸಲಿಕ್ಕಾಗಿಯೇ ಸಿದ್ಧವಾಗಿ ನಿಂತಿರುವ ಜಗತ್ತಿನಲ್ಲಿ ಜೀವಿಸುತ್ತಿರುವ ಹದಿವಯಸ್ಕರ ಸಹಜ ಪ್ರತಿಕ್ರಿಯೆ ಆಗಿದೆ” ಎನ್ನುತ್ತಾರೆ ಆ ಪುಸ್ತಕದ ಲೇಖಕರು.

ತದ್ವಿರುದ್ಧವಾಗಿ, ಎಳೇ ಪ್ರಾಯದಲ್ಲೇ ಭಾರವಾದ ಜವಾಬ್ದಾರಿಗಳನ್ನು ವಹಿಸಿಕೊಂಡ ಯುವಜನರ ಕುರಿತು ಬೈಬಲ್‌ ತಿಳಿಸುತ್ತದೆ. ತಿಮೊಥೆಯ ಎಂಬವನನ್ನು ತೆಗೆದುಕೊಳ್ಳಿ. ಬಹುಶಃ ಅವನ ಹದಿಹರೆಯದಲ್ಲಿ ಅವನಿಗೆ ಅಪೊಸ್ತಲ ಪೌಲನ ಭೇಟಿಯಾಯಿತು. ಅವನ ಮೇಲೆ ತುಂಬ ಪ್ರಭಾವ ಬೀರಿದ ಈ ವಯಸ್ಕ ಪೌಲನು ತಿಮೊಥೆಯನಿಗೆ, “ನಿನಗೆ ದೇವರಿಂದ ದೊರೆತ ವರವನ್ನು ಬೆಂಕಿಯ ಹಾಗೆ ಪ್ರಜ್ವಲಿಸು” ಇಲ್ಲವೆ ವಹಿಸಲಾಗಿದ್ದ ಕೆಲಸವನ್ನು ಅವನು ಪೂರ್ಣ ಮನಸ್ಸು ಹಾಗೂ ಶಕ್ತಿಯಿಂದ ಮಾಡುವಂತೆ ಪ್ರೋತ್ಸಾಹಿಸಿದ್ದನು. (2 ತಿಮೊಥೆಯ 1:6) ಸಭೆಗಳನ್ನು ಸ್ಥಾಪಿಸಲು ಹಾಗೂ ಸಹೋದರರನ್ನು ಉತ್ತೇಜಿಸಲು ನೆರವಾಗಲಿಕ್ಕಾಗಿ ಅಪೊಸ್ತಲ ಪೌಲನೊಂದಿಗೆ ಸಂಚರಿಸಲು ಮನೆಯನ್ನು ಬಿಟ್ಟಾಗ ತಿಮೊಥೆಯನಿಗೆ ಬಹುಶಃ 18-22ರ ವಯಸ್ಸು. ತಿಮೊಥೆಯನೊಂದಿಗೆ ಸುಮಾರು ಒಂದು ದಶಕದ ವರೆಗೆ ಸೇವೆಮಾಡಿದ ಬಳಿಕ ಪೌಲನು ಫಿಲಿಪ್ಪಿಯಲ್ಲಿದ್ದ ಕ್ರೈಸ್ತರಿಗೆ ಹೀಗನ್ನಶಕ್ತನಾದನು: “ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ.”—ಫಿಲಿಪ್ಪಿ 2:20.

ಎಷ್ಟೋ ಸಲ ತರುಣರು ಜವಾಬ್ದಾರಿಯನ್ನು ವಹಿಸಿಕೊಳ್ಳಲು ಕಾತುರರಾಗಿರುತ್ತಾರೆ. ತಾವು ಮಾಡುತ್ತಿರುವ ಅರ್ಥಭರಿತ ಕೆಲಸ ಬೇರೆಯವರಿಗೆ ಪ್ರಯೋಜನಕರವೆಂದು ಅವರಿಗೆ ಅರಿವಾದಾಗಲಂತೂ ಇದು ವಿಶೇಷವಾಗಿ ಸತ್ಯ. ಈ ರೀತಿಯ ಕೆಲಸವು ಅವರಿಗೆ ಮುಂದೆ ಜವಾಬ್ದಾರಿಯುತ ವಯಸ್ಕರಾಗಲು ತರಬೇತು ಕೊಡುತ್ತದೆ ಮಾತ್ರವಲ್ಲ ಈಗಲೇ ಅವರಲ್ಲಿನ ಉತ್ತಮ ಗುಣ/ಸಾಮರ್ಥ್ಯಗಳನ್ನು ಹೊರತರುತ್ತದೆ.

ಹೊಸ “ವಾತಾವರಣಕ್ಕೆ” ಹೊಂದಿಕೊಳ್ಳಿರಿ

ಈ ಲೇಖನದ ಆರಂಭದಲ್ಲಿ ತಿಳಿಸಲಾದಂತೆ ತರುಣ ಮಗ ಇಲ್ಲವೆ ಮಗಳ ಹೆತ್ತವರು ನೀವಾಗಿರುವಲ್ಲಿ, ಕೆಲವೇ ವರ್ಷಗಳ ಹಿಂದೆ ನೀವಿದ್ದ ‘ವಾತಾವರಣ’ಕ್ಕಿಂತ ಈಗ ಭಿನ್ನವಾದ ‘ವಾತಾವರಣ’ದಲ್ಲಿದ್ದೀರೆಂದು ನಿಮಗನಿಸಬಹುದು. ಆದರೆ ಅದಕ್ಕೆ ಹೊಂದಿಕೊಳ್ಳಲು ಸಾಧ್ಯ ಎಂಬ ಭರವಸೆ ನಿಮಗಿರಲಿ. ನಿಮ್ಮ ಮಗುವಿನ ಬೆಳವಣಿಗೆಯ ಇತರ ಹಂತಗಳಿಗೆ ನೀವು ಹೊಂದಿಕೊಂಡು ಹೋಗಲಿಲ್ಲವೋ? ಹಾಗೆಯೇ ಇದಕ್ಕೂ ಹೊಂದಿಕೊಳ್ಳುವಿರಿ.

ನಿಮ್ಮ ಮಗನ ಹದಿಹರೆಯದ ವರ್ಷಗಳನ್ನು (1) ಗ್ರಹಣ ಶಕ್ತಿಯನ್ನು ಬೆಳೆಸಿಕೊಳ್ಳುವಂತೆ ಅವನಿಗೆ ಸಹಾಯಮಾಡುವ, (2) ವಯಸ್ಕ-ಮಾರ್ಗದರ್ಶನವನ್ನು ಒದಗಿಸುವ, ಮತ್ತು (3) ಅವನಲ್ಲಿ ಜವಾಬ್ದಾರಿಯ ಅರಿವನ್ನು ಮೂಡಿಸುವ ಅವಕಾಶವಾಗಿ ವೀಕ್ಷಿಸಿ. ನೀವು ಅವೆಲ್ಲವನ್ನು ಮಾಡುವಲ್ಲಿ ನಿಮ್ಮ ಮಗನನ್ನು ಪ್ರಾಪ್ತವಯಸ್ಸಿಗೆ ತಯಾರಿಸುತ್ತಿರುವಿರಿ. (g11-E 10)

[ಪಾದಟಿಪ್ಪಣಿಗಳು]

^ ಒಂದು ಪರಾಮರ್ಶೆ ಕೃತಿಯು ತಾರುಣ್ಯವನ್ನು ಯಥೋಚಿತವಾಗಿಯೇ “ಸುದೀರ್ಘ ಬೀಳ್ಕೊಡುವಿಕೆ” ಎಂದು ಕರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ 2009, ಅಕ್ಟೋಬರ್‌ 1ರ ಕಾವಲಿನಬುರುಜುವಿನ ಪುಟ 10-12 ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ಹದಿಹರೆಯದವರಿಗೆಂದೇ ತಯಾರಿಸಲಾಗಿರುವ ಮನೋರಂಜನೆಯು ಅವರು ಸಮಪ್ರಾಯದವರೊಂದಿಗೇ ಸಹವಾಸಮಾಡಬೇಕೆಂಬ ಪ್ರವೃತ್ತಿಗೆ ಕುಮ್ಮಕ್ಕುಕೊಡುತ್ತದೆ. ಯುವಜನರಿಗೆ ತಮ್ಮದೇ ಆದ ‘ಸಂಸ್ಕೃತಿ’ ಇದೆಯೆಂದೂ ಅದನ್ನು ವಯಸ್ಕರು ಅರ್ಥಮಾಡಿಕೊಳ್ಳಲಾರರು ಇಲ್ಲವೇ ಭೇದಿಸಿ ತಿಳಿಯಲಾರರೆಂಬ ವಿಚಾರವನ್ನೂ ಅದು ಪ್ರವರ್ಧಿಸುತ್ತದೆ.

^ “ತರುಣ” ಮತ್ತು “ಹದಿಹರೆಯದವ” ಎಂಬ ಪದಗಳು ಬೈಬಲಿನಲ್ಲಿಲ್ಲ. ಏಕೆಂದರೆ ಕ್ರಿಸ್ತಪೂರ್ವದ ಹಾಗೂ ಕ್ರಿಸ್ತ ಶಕಗಳ ದೇವಜನರ ಮಧ್ಯೆ ಇದ್ದ ಯುವಜನರು ಅತಿ ಚಿಕ್ಕ ವಯಸ್ಸಿನಲ್ಲೇ ವಯಸ್ಕ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಇಂದಿನ ಹೆಚ್ಚಿನ ಸಂಸ್ಕೃತಿಗಳಲ್ಲಿ ಇದು ಇಲ್ಲ.

[ಪುಟ 20ರಲ್ಲಿರುವ ಚೌಕ/ಚಿತ್ರ]

“ನನ್ನ ಅಪ್ಪಅಮ್ಮನಷ್ಟು ಒಳ್ಳೇ ಹೆತ್ತವರು ಸಿಗಸಾಧ್ಯವಿಲ್ಲ”

ಯೆಹೋವನ ಸಾಕ್ಷಿಗಳಾಗಿರುವ ಹೆತ್ತವರು ತಮ್ಮ ಮಕ್ಕಳಿಗೆ ಬೈಬಲ್‌ ತತ್ತ್ವಗಳಿಗನುಸಾರ ಜೀವಿಸಲು ಕಲಿಸುವುದು ತಮ್ಮ ನಡೆನುಡಿಗಳ ಮೂಲಕವೇ. (ಎಫೆಸ 6:4) ಆದರೆ ಹಾಗೆ ಜೀವಿಸುವಂತೆ ಅವರು ಒತ್ತಾಯಿಸುವುದಿಲ್ಲ. ಮಗನಾಗಲಿ ಮಗಳಾಗಲಿ ದೊಡ್ಡವರಾದಾಗ, ಯಾವ ಮೌಲ್ಯಗಳಿಗನುಸಾರ ಜೀವಿಸಬೇಕೆಂದು ಸ್ವತಃ ಅವರೇ ನಿರ್ಣಯಿಸುವಂತೆ ಸಾಕ್ಷಿಗಳಾದ ಹೆತ್ತವರು ಬಿಡುತ್ತಾರೆ.

18 ವರ್ಷದ ಆ್ಯಶ್ಲಿನ್‌ ಎಂಬಾಕೆ ತನ್ನ ಹೆತ್ತವರು ಬಾಲ್ಯದಲ್ಲಿ ಕಲಿಸಿದಂಥ ಮೌಲ್ಯಗಳನ್ನೇ ತನ್ನದಾಗಿಸಿಕೊಂಡಿದ್ದಾಳೆ. ಆಕೆ ಅನ್ನುವುದು: “ನನ್ನ ಧರ್ಮ ವಾರಕ್ಕೊಂದು ದಿನ ಮಾತ್ರ ಪಾಲಿಸುವಂಥ ವಿಷಯವಲ್ಲ. ಅದು ನನ್ನ ನಿತ್ಯದ ಜೀವನರೀತಿ. ನಾನು ಮಾಡುವ ಎಲ್ಲ ವಿಷಯವನ್ನೂ ಪ್ರತಿಯೊಂದು ನಿರ್ಣಯವನ್ನೂ ಅಂದರೆ ಸ್ನೇಹಿತರು, ಶಿಕ್ಷಣ, ಪುಸ್ತಕಗಳ ಆಯ್ಕೆ ಇವೆಲ್ಲವನ್ನೂ ಅದು ಪ್ರಭಾವಿಸುತ್ತದೆ.”

ಯೆಹೋವನ ಸಾಕ್ಷಿಗಳಾಗಿರುವ ತನ್ನ ಹೆತ್ತವರು ತನ್ನನ್ನು ಬೆಳೆಸಿರುವ ರೀತಿಗಾಗಿ ಆ್ಯಶ್ಲಿನ್‌ ತುಂಬ ಆಭಾರಿ. “ನನ್ನ ಅಪ್ಪಅಮ್ಮನಷ್ಟು ಒಳ್ಳೇ ಹೆತ್ತವರು ಸಿಗಸಾಧ್ಯವಿಲ್ಲ. ನಾನೂ ಯೆಹೋವನ ಸಾಕ್ಷಿಯಾಗಬೇಕು ಮತ್ತು ಸಾಕ್ಷಿಯಾಗಿ ಉಳಿಯಬೇಕು ಎಂಬ ಅಪೇಕ್ಷೆಯನ್ನು ಅವರು ನನ್ನಲ್ಲಿ ಬೇರೂರಿಸಿದ್ದು ನನಗೆ ತುಂಬ ಸಂತೋಷ. ನನ್ನ ಅಪ್ಪಅಮ್ಮ ಕೊಟ್ಟ ಮಾರ್ಗದರ್ಶನವನ್ನು ಜೀವನವಿಡೀ ಪಾಲಿಸುವೆ” ಎನ್ನುತ್ತಾಳಾಕೆ.

[ಪುಟ 17ರಲ್ಲಿರುವ ಚಿತ್ರ]

ನಿಮ್ಮ ಯುವ ಮಕ್ಕಳಿಗೆ ಮಾತಾಡಲು ಅವಕಾಶಕೊಡಿ

[ಪುಟ 18ರಲ್ಲಿರುವ ಚಿತ್ರ]

ಅನುಭವಿಗಳಾದ ವಯಸ್ಕ ಸ್ನೇಹಿತರು ನಿಮ್ಮ ಮಕ್ಕಳ ಮೇಲೆ ಒಳ್ಳೇ ಪ್ರಭಾವ ಬೀರಬಲ್ಲರು

[ಪುಟ 19ರಲ್ಲಿರುವ ಚಿತ್ರ]

ಅರ್ಥಪೂರ್ಣ ಕೆಲಸವು ತರುಣರಿಗೆ ಜವಾಬ್ದಾರಿಯುತ ವಯಸ್ಕರಾಗಲು ನೆರವಾಗುತ್ತದೆ