ಕೊರಿಂಥದವರಿಗೆ ಬರೆದ ಮೊದಲನೇ ಪತ್ರ 13:1-13

  • ಪ್ರೀತಿ​—ಶ್ರೇಷ್ಠ ಮಾರ್ಗ (1-13)

13  ನಾನು ಮನುಷ್ಯರ ಭಾಷೆಗಳಲ್ಲಿ, ದೇವದೂತರ ಭಾಷೆಗಳಲ್ಲಿ ಮಾತಾಡಿದ್ರೂ ನನ್ನಲ್ಲಿ ಪ್ರೀತಿ ಇಲ್ಲ ಅಂದ್ರೆ ಟಣ್‌ ಟಣ್‌ ಅನ್ನೋ ಗಂಟೆ* ತರ, ಕರ್ಕಶ ಶಬ್ದ ಮಾಡೋ ಝಲ್ಲರಿ ತರ ಇರ್ತಿನಿ. 2  ನನಗೆ ಭವಿಷ್ಯ ಹೇಳೋ ಸಾಮರ್ಥ್ಯ ಇದ್ರೂ, ಎಲ್ಲ ಪವಿತ್ರ ರಹಸ್ಯಗಳನ್ನ ಅರ್ಥ ಮಾಡ್ಕೊಂಡ್ರೂ, ಎಲ್ಲ ಜ್ಞಾನ+ ಇದ್ರೂ, ಬೆಟ್ಟಗಳನ್ನ ಇಲ್ಲಿಂದ ಅಲ್ಲಿಗೆ ಹೋಗೋ ತರ ಮಾಡುವಷ್ಟು ನಂಬಿಕೆ ಇದ್ರೂ ನನ್ನಲ್ಲಿ ಪ್ರೀತಿ ಇಲ್ಲ ಅಂದ್ರೆ ನಾನು ಏನೂ ಅಲ್ಲ.*+ 3  ನನ್ನ ಆಸ್ತಿಯನ್ನೆಲ್ಲ ಮಾರಿ ಬಡವ್ರಿಗೆ ಊಟ ಹಾಕಿದ್ರೂ,+ ನನ್ನ ಪ್ರಾಣ ತ್ಯಾಗ ಮಾಡೋಕೆ ಸಿದ್ಧನಿದ್ದೀನಿ ಅಂತ ಹೆಮ್ಮೆಪಟ್ರೂ ನನ್ನಲ್ಲಿ ಪ್ರೀತಿ ಇಲ್ಲ+ ಅಂದ್ರೆ ನನಗೇನೂ ಪ್ರಯೋಜನ ಇಲ್ಲ. 4  ಪ್ರೀತಿ+ ಇರುವವನು ತಾಳ್ಮೆ*+ ಮತ್ತು ದಯೆ ತೋರಿಸ್ತಾನೆ,+ ಹೊಟ್ಟೆಕಿಚ್ಚು ಪಡಲ್ಲ,+ ಜಂಬ ಕೊಚ್ಕೊಳಲ್ಲ, ಹೆಮ್ಮೆಯಿಂದ ಬೀಗಲ್ಲ,+ 5  ಅಸಭ್ಯವಾಗಿ* ನಡ್ಕೊಳಲ್ಲ,+ ಸ್ವಾರ್ಥಿಯಾಗಿರಲ್ಲ,+ ಬೇಗ ಸಿಟ್ಟು ಮಾಡ್ಕೊಳಲ್ಲ,+ ಅನ್ಯಾಯ ಆಗಿರೋ* ಲೆಕ್ಕ ಇಟ್ಕೊಳಲ್ಲ.+ 6  ಅವನು ಕೆಟ್ಟದ್ರಲ್ಲಿ ಖುಷಿಪಡದೆ+ ಸತ್ಯದಲ್ಲಿ ಖುಷಿಪಡ್ತಾನೆ. 7  ಅವನು ಎಲ್ಲವನ್ನ ಸಹಿಸ್ಕೊಳ್ತಾನೆ,+ ಎಲ್ಲವನ್ನ ನಂಬ್ತಾನೆ,+ ಎಲ್ಲವನ್ನ ನಿರೀಕ್ಷಿಸ್ತಾನೆ,+ ಎಲ್ಲವನ್ನ ತಾಳ್ಕೊಳ್ತಾನೆ.+ 8  ಪ್ರೀತಿ ಯಾವತ್ತೂ ಸೋತು ಹೋಗಲ್ಲ.* ಆದ್ರೆ ಭವಿಷ್ಯ ಹೇಳೋ ಸಾಮರ್ಥ್ಯ ಇದ್ರೆ ಅದು ನಿಂತು ಹೋಗುತ್ತೆ. ಬೇರೆ ಬೇರೆ ಭಾಷೆ ಮಾತಾಡೋ ಸಾಮರ್ಥ್ಯ* ಇದ್ರೆ ಅದೂ ಕೊನೆ ಆಗುತ್ತೆ. ಜ್ಞಾನ ಇದ್ರೆ ಅದೂ ಇಲ್ಲದೇ ಹೋಗುತ್ತೆ.  9  ಯಾಕಂದ್ರೆ ನಮಗೆ ಅರ್ಧಂಬರ್ಧ ಜ್ಞಾನ ಇದೆ,+ ನಾವು ಅರ್ಧಂಬರ್ಧ ಭವಿಷ್ಯ ಹೇಳ್ತೀವಿ. 10  ಆದ್ರೆ ಪೂರ್ಣವಾಗಿರೋದು ಬಂದಾಗ ಅರ್ಧಂಬರ್ಧ ಇರೋದು ಇಲ್ಲದೇ ಹೋಗುತ್ತೆ. 11  ನಾನು ಮಗು ಆಗಿದ್ದಾಗ ಮಗು ತರ ಮಾತಾಡ್ತಿದ್ದೆ, ಮಗು ತರ ಯೋಚಿಸ್ತಿದ್ದೆ, ಮಗು ತರ ವಿಷ್ಯಗಳನ್ನ ನೋಡ್ತಿದ್ದೆ. ಆದ್ರೆ ನಾನೀಗ ಬೆಳೆದು ದೊಡ್ಡವನಾಗಿದ್ದೀನಿ. ಹಾಗಾಗಿ ಮಗು ತರ ನಡ್ಕೊಳ್ಳೋದನ್ನ ಬಿಟ್ಟುಬಿಟ್ಟಿದ್ದೀನಿ. 12  ಈಗ ನಮಗೆ ಲೋಹದ ಕನ್ನಡಿಯಲ್ಲಿ ಮಬ್ಬುಮಬ್ಬಾಗಿ ಕಾಣ್ತಿದೆ, ಆದ್ರೆ ಮುಂದೆ ಸ್ಪಷ್ಟವಾಗಿ* ಕಾಣುತ್ತೆ. ಈಗ ನನಗೆ ದೇವರ ಬಗ್ಗೆ ಅರ್ಧಂಬರ್ಧ ಗೊತ್ತಿದೆ, ಆದ್ರೆ ದೇವರಿಗೆ ನನ್ನ ಬಗ್ಗೆ ಪೂರ್ತಿ ಗೊತ್ತಿರೋ ಹಾಗೆ ಮುಂದೆ ನನಗೆ ದೇವರ ಬಗ್ಗೆ ಪೂರ್ತಿ ಗೊತ್ತಾಗುತ್ತೆ. 13  ಈಗ ನಂಬಿಕೆ, ನಿರೀಕ್ಷೆ, ಪ್ರೀತಿ ಈ ಮೂರು ಮಾತ್ರ ಉಳಿಯುತ್ತೆ. ಇದ್ರಲ್ಲಿ ಪ್ರೀತಿನೇ ದೊಡ್ಡದು.+

ಪಾದಟಿಪ್ಪಣಿ

ಅಥವಾ “ಜಾಗಟೆ.”
ಅಕ್ಷ. “ಪ್ರಯೋಜನಕ್ಕೆ ಬಾರದವನು.”
ಅಥವಾ “ದೀರ್ಘ ಸಹನೆ.”
ಅಥವಾ “ತಪ್ಪುಗಳ.”
ಅಥವಾ “ಒರಟಾಗಿ.”
ಅಥವಾ “ಪ್ರೀತಿಗೆ ಕೊನೆ ಇಲ್ಲ.”
ಅದು, ದೇವರ ಸಹಾಯದಿಂದ ಬೇರೆ ಬೇರೆ ಭಾಷೆ ಮಾತಾಡೋ ಸಾಮರ್ಥ್ಯ.
ಅಥವಾ “ನಿಖರವಾಗಿ.”