ವಿಮೋಚನಕಾಂಡ 23:1-33

  • ಇಸ್ರಾಯೇಲ್ಯರಿಗೆ ಕೊಟ್ಟ ತೀರ್ಪುಗಳು (1-19)

    • ಪ್ರಾಮಾಣಿಕತೆ ಮತ್ತು ನ್ಯಾಯವಾಗಿ ನಡ್ಕೊಳ್ಳೋದು (1-9)

    • ಸಬ್ಬತ್‌ ಮತ್ತು ಹಬ್ಬಗಳ ಬಗ್ಗೆ (10-19)

  • ಇಸ್ರಾಯೇಲ್ಯರನ್ನ ಮಾರ್ಗದರ್ಶಿಸೋ ದೇವದೂತ (20-26)

  • ದೇಶದ ಸ್ವಾಧೀನ ಮತ್ತು ಗಡಿ (27-33)

23  “ನೀವು ಸುಳ್ಳು ಸುದ್ದಿ ಹಬ್ಬಿಸಬಾರದು.+ ಬೇರೆಯವರಿಗೆ ಕೆಟ್ಟದು ಮಾಡೋ ಉದ್ದೇಶದಿಂದ ಒಬ್ಬ ಕೆಟ್ಟ ವ್ಯಕ್ತಿ ಸಾಕ್ಷಿ ಹೇಳು ಅಂತ ನಿಮ್ಮನ್ನ ಕೇಳ್ಕೊಂಡ್ರೆ ಸಹಾಯ ಮಾಡಬಾರದು.+  ತುಂಬ ಜನ ಕೆಟ್ಟದು ಮಾಡ್ತಿದ್ದಾರೆ ಅಂತ ನೀವೂ ಅವರ ಜೊತೆ ಸೇರ್ಕೊಂಡು ಕೆಟ್ಟದು ಮಾಡಬಾರದು. ತುಂಬ ಜನ್ರನ್ನ ಮೆಚ್ಚಿಸೋಕೆ ಸುಳ್ಳು ಸಾಕ್ಷಿ ಹೇಳಿ* ಇನ್ನೊಬ್ಬನಿಗೆ ನ್ಯಾಯ ಸಿಗದ ಹಾಗೆ ಮಾಡಬಾರದು.  ಬಡವನ ಸಮಸ್ಯೆಯನ್ನ ವಿಚಾರಣೆ ಮಾಡುವಾಗ ಅವನು ಬಡವ ಅನ್ನೋ ಕಾರಣಕ್ಕೆ ಅವನ ಪರವಾಗಿ ತೀರ್ಪು ಕೊಡಬಾರದು.+  ನಿಮ್ಮ ಶತ್ರುವಿನ ಹೋರಿ ಅಥವಾ ಕತ್ತೆ ತಪ್ಪಿಸ್ಕೊಂಡು ಹೋದಾಗ ಅದು ನಿಮಗೆ ಸಿಕ್ಕಿದ್ರೆ ನೀವು ಅದನ್ನ ಅವನಿಗೆ ಕೊಡಬೇಕು.+  ನಿಮ್ಮನ್ನ ದ್ವೇಷಿಸೋ ವ್ಯಕ್ತಿಯೊಬ್ಬನ ಕತ್ತೆ ಹೊರೆ ಕೆಳಗೆ ಬಿದ್ದಿದ್ರೆ ಅದನ್ನ ನೋಡಿನೂ ನೋಡದ ಹಾಗೆ ಹೋಗಬಾರದು. ಅದ್ರ ಮೇಲಿರೋ ಹೊರೆಯನ್ನ ಎತ್ತೋಕೆ ಆ ವ್ಯಕ್ತಿಗೆ ಸಹಾಯ ಮಾಡಬೇಕು.+  ನಿಮ್ಮಲ್ಲಿರೋ ಬಡವನ ಮೊಕದ್ದಮೆಯನ್ನ ವಿಚಾರಣೆ ಮಾಡುವಾಗ ನ್ಯಾಯವನ್ನ ತಿರುಚಿ ತೀರ್ಪು ಕೊಡಬಾರದು.+  ಸುಳ್ಳು ಆರೋಪದಿಂದ* ದೂರ ಇರಿ. ತಪ್ಪು ಮಾಡದ ನೀತಿವಂತನನ್ನ ಸಾಯಿಸಬೇಡಿ. ಯಾಕಂದ್ರೆ ಅಂಥ ಕೆಟ್ಟ ಕೆಲಸ ಮಾಡೋ ವ್ಯಕ್ತಿಯನ್ನ ನೀತಿವಂತ* ಅಂತ ನಾನು ಹೇಳಲ್ಲ.+  ನೀವು ಲಂಚ ತಗೊಳ್ಳಬಾರದು. ಯಾಕಂದ್ರೆ ಅದು ವಿವೇಚನೆ ಇರೋರ ಕಣ್ಣನ್ನ ಕುರುಡು ಮಾಡುತ್ತೆ, ನೀತಿವಂತರನ್ನ ಮಾತು ಬದಲಾಯಿಸೋ ತರ ಮಾಡುತ್ತೆ.+  ನೀವು ವಿದೇಶಿಯರಿಗೆ ತೊಂದ್ರೆ ಕೊಡಬಾರದು. ವಿದೇಶಿಯರ ಜೀವನ ಹೇಗಿರುತ್ತೆ* ಅಂತ ನಿಮಗೆ ಗೊತ್ತು. ನೀವೂ ಈಜಿಪ್ಟ್‌ ದೇಶದಲ್ಲಿ ವಿದೇಶಿಯರಾಗಿ ಇದ್ರಲ್ಲಾ.+ 10  ನೀವು ಆರು ವರ್ಷ ನಿಮ್ಮ ಹೊಲದಲ್ಲಿ ಬೀಜ ಬಿತ್ತಿ ಬೆಳೆ ಕೂಡಿಸಬೇಕು.+ 11  ಆದ್ರೆ ಏಳನೇ ವರ್ಷ ಬೇಸಾಯ ಮಾಡದೆ ಹೊಲವನ್ನ ಹಾಗೇ ಬಿಟ್ಟುಬಿಡಬೇಕು. ಆ ವರ್ಷ ಹೊಲದಲ್ಲಿ ಅದರಷ್ಟಕ್ಕೆ ಬೆಳೆದದ್ದನ್ನ ನಿಮ್ಮ ಮಧ್ಯದಲ್ಲಿರೋ ಬಡವರು ತಿಂತಾರೆ. ಅವರು ಕೊಯ್ಯದೆಬಿಟ್ಟಿದ್ದನ್ನ ಕಾಡುಪ್ರಾಣಿಗಳು ತಿನ್ನುತ್ತೆ. ನಿಮ್ಮ ದ್ರಾಕ್ಷಿತೋಟ, ಆಲಿವ್‌ ಮರಗಳ ತೋಪಿನ ವಿಷ್ಯದಲ್ಲೂ ನೀವು ಹೀಗೇ ಮಾಡಬೇಕು. 12  ನೀವು ಆರು ದಿನ ಕೆಲಸ ಮಾಡಬೇಕು. ಆದ್ರೆ ಏಳನೇ ದಿನ ನೀವು ಯಾವ ಕೆಲಸನೂ ಮಾಡಬಾರದು. ಇದ್ರಿಂದ ನಿಮ್ಮ ಹೋರಿ, ಕತ್ತೆಗೆ ವಿಶ್ರಾಂತಿ ಸಿಗುತ್ತೆ. ನಿಮ್ಮ ದಾಸರು, ವಿದೇಶಿಯರು ವಿಶ್ರಾಂತಿ ಪಡೆದು ಚೈತನ್ಯ ಪಡಿತಾರೆ.+ 13  ನಾನು ನಿಮಗೆ ಹೇಳಿದ್ದನ್ನೆಲ್ಲ ತಪ್ಪದೆ ಮಾಡಬೇಕು.+ ನೀವು ಬೇರೆ ದೇವರುಗಳ ಹೆಸರು ಎತ್ತಬಾರದು. ಆ ಹೆಸರುಗಳು ನಿಮ್ಮ ಬಾಯಲ್ಲಿ* ಬರಬಾರದು.+ 14  ನೀವು ವರ್ಷದಲ್ಲಿ ಮೂರು ಸಲ ನನ್ನ ಘನತೆಗಾಗಿ ಹಬ್ಬ ಆಚರಿಸಬೇಕು.+ 15  ಹುಳಿ ಇಲ್ಲದ ರೊಟ್ಟಿ ಹಬ್ಬ ಆಚರಿಸಬೇಕು.+ ನಾನು ಆಜ್ಞೆ ಕೊಟ್ಟ ಹಾಗೆ ಅಬೀಬ್‌* ತಿಂಗಳಲ್ಲಿ ನಾನು ಹೇಳಿರೋ ಸಮಯದಲ್ಲೇ ಏಳು ದಿನ ಹುಳಿ ಇಲ್ಲದ ರೊಟ್ಟಿ ತಿನ್ನಬೇಕು.+ ಯಾಕಂದ್ರೆ ನೀವು ಈಜಿಪ್ಟಿಂದ ಹೊರಗೆ ಬಂದಿದ್ದು ಆ ಸಮಯದಲ್ಲೇ. ನಿಮ್ಮಲ್ಲಿ ಯಾರೂ ಕಾಣಿಕೆ ಇಲ್ಲದೆ ನನ್ನ ಮುಂದೆ ಬರಬಾರದು.+ 16  ನೀವು ಹೊಲದಲ್ಲಿ ಬೀಜಬಿತ್ತಿ ಶ್ರಮಪಟ್ಟು ಕೆಲಸಮಾಡಿ ವರ್ಷದ ಮೊದಲ ಬೆಳೆ ಕೊಯ್ದಾಗ ಕೊಯ್ಲಿನ ಹಬ್ಬ* ಆಚರಿಸಬೇಕು.+ ನಿಮ್ಮ ಶ್ರಮದ ಪ್ರತಿಫಲವಾಗಿ ಹೊಲದಿಂದ ವರ್ಷದ ಕೊನೇ ಬೆಳೆ ಕೂಡಿಸಿದಾಗ ಫಸಲು ಸಂಗ್ರಹ ಹಬ್ಬ* ಆಚರಿಸಬೇಕು.+ 17  ವರ್ಷಕ್ಕೆ ಮೂರು ಸಲ ನಿಮ್ಮಲ್ಲಿರೋ ಗಂಡಸರೆಲ್ಲ ನಿಜವಾದ ಒಡೆಯನಾದ ಯೆಹೋವನ ಮುಂದೆ ಬರಬೇಕು.+ 18  ನೀವು ನನಗೆ ಬಲಿಯಾಗಿ ಕೊಟ್ಟ ಪ್ರಾಣಿಯ ರಕ್ತದ ಜೊತೆಗೆ ಹುಳಿ ಇರೋ ಯಾವುದನ್ನೂ ಅರ್ಪಿಸಬಾರದು. ನನ್ನ ಹಬ್ಬಗಳ ಸಮಯದಲ್ಲಿ ಅರ್ಪಿಸಿದ ಕೊಬ್ಬನ್ನ ಬೆಳಿಗ್ಗೆ ತನಕ ಇಡಬಾರದು. 19  ನಿಮ್ಮ ಹೊಲದ ಮೊದಲ ಬೆಳೆಯಲ್ಲಿ ತುಂಬ ಚೆನ್ನಾಗಿರೋದನ್ನ ನಿಮ್ಮ ದೇವರಾದ ಯೆಹೋವನ ಮಂದಿರಕ್ಕೆ ತರಬೇಕು.+ ನೀವು ಆಡುಮರಿಯ ಮಾಂಸವನ್ನ ಅದ್ರ ತಾಯಿ ಹಾಲಲ್ಲಿ ಬೇಯಿಸಬಾರದು.+ 20  ದಾರಿಯಲ್ಲಿ ಕಾವಲಿದ್ದು ನಿಮ್ಮನ್ನ ಕಾಪಾಡೋಕೆ, ನಾನು ಸಿದ್ಧಮಾಡಿದ ಜಾಗಕ್ಕೆ ನಿಮ್ಮನ್ನ ಕರ್ಕೊಂಡು ಹೋಗೋಕೆ ನಿಮ್ಮ ಮುಂದೆ ಒಬ್ಬ ದೂತನನ್ನ+ ಕಳಿಸ್ತೀನಿ.+ 21  ಅವನು ಹೇಳೋದನ್ನ ಗಮನಕೊಟ್ಟು ಕೇಳಿ, ಅದೇ ತರ ಮಾಡಿ. ಅವನ ವಿರುದ್ಧ ದಂಗೆ ಏಳಬೇಡಿ. ದಂಗೆ ಎದ್ರೆ ಅವನು ನಿಮ್ಮನ್ನ ಕ್ಷಮಿಸಲ್ಲ.+ ಯಾಕಂದ್ರೆ ಅವನು ನನ್ನ ಹೆಸ್ರಲ್ಲಿ ಬರ್ತಾನೆ. 22  ನೀವು ಅವನ ಮಾತನ್ನ ತಪ್ಪದೆ ಕೇಳಿದ್ರೆ, ನಾನು ಹೇಳೋದನ್ನೆಲ್ಲ ಮಾಡಿದ್ರೆ ನಾನು ನಿಮ್ಮ ಶತ್ರುಗಳಿಗೆ ಶತ್ರು ಆಗಿರ್ತೀನಿ, ನಿಮ್ಮ ವಿರೋಧಿಗಳನ್ನ ವಿರೋಧಿಸ್ತೀನಿ. 23  ನನ್ನ ದೂತ ನಿಮ್ಮ ಮುಂದೆ ಹೋಗ್ತಾನೆ. ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು, ಹಿವ್ವಿಯರು, ಯೆಬೂಸಿಯರು ಇರೋ ದೇಶಕ್ಕೆ ನಿಮ್ಮನ್ನ ಸೇರಿಸ್ತಾನೆ. ನಾನು ಅವರನ್ನೆಲ್ಲ ನಾಶ ಮಾಡ್ತೀನಿ.+ 24  ನೀವು ಅವರ ದೇವರುಗಳಿಗೆ ಅಡ್ಡಬೀಳಬಾರದು, ಬೇರೆಯವರ ಮಾತಿಗೆ ಮರುಳಾಗಿ ಅವುಗಳ ಸೇವೆ ಮಾಡಲೂಬಾರದು.+ ಅವರ ಪದ್ಧತಿಗಳನ್ನ ಪಾಲಿಸಬಾರದು. ನೀವು ಅವರ ಮೂರ್ತಿಗಳನ್ನ ನಾಶ ಮಾಡಬೇಕು, ವಿಗ್ರಹಸ್ತಂಭಗಳನ್ನ ಪುಡಿಪುಡಿ ಮಾಡಬೇಕು.+ 25  ನೀವು ನಿಮ್ಮ ದೇವರಾಗಿರೋ ಯೆಹೋವನಾದ ನನ್ನ ಸೇವೆ ಮಾಡಬೇಕು.+ ಆಗ ನಾನು ನಿಮ್ಮನ್ನ ಆಶೀರ್ವದಿಸ್ತೀನಿ. ಇದ್ರಿಂದ ನಿಮಗೆ ಊಟಕ್ಕೂ ನೀರಿಗೂ ಏನೂ ಕಮ್ಮಿ ಆಗಲ್ಲ.+ ನಿಮ್ಮ ಕಾಯಿಲೆಗಳನ್ನ ತೆಗೆದುಹಾಕ್ತೀನಿ.*+ 26  ನಿಮ್ಮ ದೇಶದಲ್ಲಿರೋ ಸ್ತ್ರೀಯರಿಗೆ ಗರ್ಭಸ್ರಾವ ಆಗಲ್ಲ, ಅವರು ಬಂಜೆ ಆಗಿರಲ್ಲ.+ ಅಷ್ಟೇ ಅಲ್ಲ ನಿಮಗೆ ಪೂರ್ತಿ ಆಯಸ್ಸು ಕೊಡ್ತೀನಿ. 27  ನೀವು ಅಲ್ಲಿಗೆ ತಲುಪೋ ಮುಂಚೆನೇ ಅಲ್ಲಿನ ಜನ ನನಗೆ ಹೆದರೋ ತರ ಮಾಡ್ತೀನಿ.+ ನಿಮ್ಮ ವಿರುದ್ಧ ಹೋರಾಡೋ ಎಲ್ಲ ಜನ್ರನ್ನ ಗಲಿಬಿಲಿ ಮಾಡ್ತೀನಿ. ನಿಮ್ಮ ಶತ್ರುಗಳೆಲ್ಲ ಸೋತು* ಓಡಿಹೋಗೋ ತರ ಮಾಡ್ತೀನಿ.+ 28  ನೀವು ಅಲ್ಲಿ ತಲುಪೋ ಮುಂಚೆನೇ ನಿಮ್ಮ ಶತ್ರುಗಳು ಕಂಗಾಲಾಗಿ ಹೋಗೋ ತರ ಮಾಡ್ತೀನಿ.+ ಹಾಗಾಗಿ ಹಿವ್ವಿಯರು, ಕಾನಾನ್ಯರು, ಹಿತ್ತಿಯರು ನಿಮ್ಮ ಮುಂದೆ ನಿಲ್ಲದೆ ಓಡಿಹೋಗ್ತಾರೆ.+ 29  ಆದ್ರೆ ನಾನು ಅವರನ್ನೆಲ್ಲ ಒಂದೇ ವರ್ಷದಲ್ಲಿ ನಿಮ್ಮ ಎದುರಿಂದ ಓಡಿಸಲ್ಲ. ಹಾಗೆ ಓಡಿಸಿದ್ರೆ ದೇಶ ನಿರ್ಜನ ಆಗೋದ್ರಿಂದ ಕಾಡುಪ್ರಾಣಿಗಳು ಹೆಚ್ಚಾಗಿ, ನಿಮಗೆ ಹಾನಿ ಆಗುತ್ತೆ.+ 30  ನಿಮ್ಮ ವಂಶ ವೃದ್ಧಿಯಾಗಿ ನೀವು ದೇಶವನ್ನ ಸ್ವಾಧೀನ ಮಾಡ್ಕೊಳ್ಳೋ ತನಕ ನಾನು ಅವರನ್ನ ಸ್ವಲ್ಪಸ್ವಲ್ಪವಾಗಿ ನಿಮ್ಮ ಎದುರಿಂದ ಓಡಿಸ್ತೀನಿ.+ 31  ನಿಮ್ಮ ದೇಶದ ಗಡಿಯನ್ನ ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ತನಕ, ಈ ಕಾಡಿಂದ ಮಹಾನದಿ* ತನಕ ವಿಸ್ತರಿಸ್ತೀನಿ.+ ಆ ದೇಶದ ಜನ್ರು ನಿಮ್ಮ ಕೈಯಲ್ಲಿ ಸೋಲೋ ತರ ಮಾಡ್ತೀನಿ. ನೀವು ಅವರನ್ನ ನಿಮ್ಮ ಎದುರಿಂದ ಓಡಿಸಿಬಿಡ್ತೀರ.+ 32  ನೀವು ಅವರ ಜೊತೆ, ಅವರ ದೇವರುಗಳ ಜೊತೆ ಒಪ್ಪಂದ ಮಾಡ್ಕೊಬಾರದು.+ 33  ಅವರು ನಿಮ್ಮ ದೇಶದಲ್ಲಿ ವಾಸ ಮಾಡಬಾರದು. ವಾಸ ಮಾಡಿದ್ರೆ ನೀವು ನನ್ನ ವಿರುದ್ಧ ಪಾಪ ಮಾಡೋ ತರ ನಿಮ್ಮನ್ನ ಪುಸಲಾಯಿಸ್ತಾರೆ. ನೀವು ಅವರ ದೇವರುಗಳ ಸೇವೆ ಮಾಡಿದ್ರೆ ಅದು ಖಂಡಿತ ನಿಮಗೆ ಉರ್ಲು ಆಗುತ್ತೆ.”+

ಪಾದಟಿಪ್ಪಣಿ

ಅಥವಾ “ಜನಪ್ರಿಯವಾದ ಸಾಕ್ಷಿ ಹೇಳಿ.”
ಅಕ್ಷ. “ಮಾತು.”
ಅಥವಾ “ನಿರಪರಾಧಿ.”
ಅಕ್ಷ. “ವಿದೇಶಿ ಆಗಿರೋವಾಗ ಹೇಗನಿಸುತ್ತೆ.”
ಅಥವಾ “ತುಟಿಗಳಲ್ಲಿ.”
ಅಥವಾ “ನೈಸಾನ್‌.” ಪರಿಶಿಷ್ಟ ಬಿ15 ನೋಡಿ.
ಇದಕ್ಕೆ ವಾರಗಳ ಹಬ್ಬ, 50ನೇ ದಿನದ ಹಬ್ಬ ಅನ್ನೋ ಹೆಸರು ಕೂಡ ಇದೆ.
ಈ ಹಬ್ಬಕ್ಕೆ ಚಪ್ಪರಗಳ (ಡೇರೆಗಳ) ಹಬ್ಬ ಅನ್ನೋ ಹೆಸರೂ ಇದೆ.
ಅಥವಾ “ಕಾಯಿಲೆ ಬರದ ಹಾಗೆ ಕಾಪಾಡ್ತೀನಿ.”
ಅಥವಾ “ನಿಮ್ಮ ಶತ್ರುಗಳೆಲ್ಲ ನಿಮಗೆ ಬೆನ್ನು ತೋರಿಸಿ.”
ಅದು, ಯೂಫ್ರೆಟಿಸ್‌.