ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಮಿಯು ಪರದೈಸಾಗುವುದೆಂದು ನೀವು ನಂಬಸಾಧ್ಯವಿದೆ

ಭೂಮಿಯು ಪರದೈಸಾಗುವುದೆಂದು ನೀವು ನಂಬಸಾಧ್ಯವಿದೆ

ಭೂಮಿಯು ಪರದೈಸಾಗುವುದೆಂದು ನೀವು ನಂಬಸಾಧ್ಯವಿದೆ

ಇತಿಹಾಸದಾದ್ಯಂತ ಕೋಟ್ಯಂತರ ಜನರು, ತಾವು ಕಟ್ಟಕಡೆಗೆ ಭೂಮಿಯನ್ನು ಬಿಟ್ಟು ಸ್ವರ್ಗಕ್ಕೆ ಹೋಗುವೆವೆಂದು ನಂಬಿಕೆಯಿಟ್ಟಿದ್ದಾರೆ. ಭೂಮಿಯು ನಮ್ಮ ಶಾಶ್ವತ ವಾಸಸ್ಥಳವಾಗಿರಬೇಕೆಂದು ಸೃಷ್ಟಿಕರ್ತನು ಎಂದೂ ಉದ್ದೇಶಿಸಿರಲೇ ಇಲ್ಲ ಎಂದು ಕೆಲವರು ಭಾವಿಸುತ್ತಾರೆ. ಸಂನ್ಯಾಸಿಗಳಾದರೋ ಇನ್ನೂ ಅತಿರೇಕಕ್ಕೆ ಹೋಗಿದ್ದಾರೆ. ಅವರಲ್ಲಿ ಅನೇಕರಿಗೆ, ಭೂಮಿಯೂ ಅದರಲ್ಲಿರುವ ಎಲ್ಲಾ ಭೌತಿಕ ವಸ್ತುಗಳೂ ಕೆಟ್ಟವುಗಳಾಗಿವೆ​—ಇವು ನಿಜವಾದ ಆತ್ಮಿಕ ಸಂತೃಪ್ತಿಗೂ ದೇವರಿಗೆ ಆಪ್ತರಾಗಲಿಕ್ಕೂ ಅಡ್ಡಿಗಳಾಗಿವೆ.

ಈ ಎಲ್ಲಾ ರೀತಿಯ ವಿಚಾರಗಳನ್ನು ಬೆಳೆಸಿಕೊಂಡವರು ಒಂದೇ ಪರದೈಸ್‌ ಭೂಮಿಯ ಕುರಿತು ದೇವರು ಹೇಳಿದ ವಿಷಯವನ್ನು ತಿಳಿಯದೇ ಇದ್ದಾರೆ ಅಥವಾ ಅವರು ಬೇಕುಬೇಕೆಂದೇ ಅದನ್ನು ಅಲಕ್ಷಿಸಲು ಆಯ್ಕೆಮಾಡಿದ್ದಾರೆ. ವಾಸ್ತವದಲ್ಲಿ ಇಂದು ಅನೇಕರು, ದೇವರು ತನ್ನ ವಾಕ್ಯವಾದ ಬೈಬಲಿನಲ್ಲಿ ಈ ವಿಷಯದ ಕುರಿತು ಏನನ್ನು ದಾಖಲಿಸುವಂತೆ ವ್ಯಕ್ತಿಗಳನ್ನು ಪ್ರೇರೇಪಿಸಿದನೋ, ಅದನ್ನು ಪರೀಕ್ಷಿಸಿ ತಿಳಿದುಕೊಳ್ಳಲು ಯಾವುದೇ ಆಸಕ್ತಿಯನ್ನು ಸಹ ತೋರಿಸುವುದಿಲ್ಲ. (2 ತಿಮೊಥೆಯ 3:​16, 17) ಆದರೆ, ಮಾನವರ ತತ್ತ್ವಗಳನ್ನು ಸ್ವೀಕರಿಸುವ ಬದಲಿಗೆ ದೇವರ ವಾಕ್ಯದಲ್ಲಿ ಭರವಸವಿಡುವುದು ವಿವೇಕದ ವಿಷಯವಲ್ಲವೋ? (ರೋಮಾಪುರ 3:4) ನಾವು ಹಾಗೆ ಮಾಡುವುದು ನಿಜವಾಗಿಯೂ ಪ್ರಾಮುಖ್ಯವಾಗಿದೆ, ಏಕೆಂದರೆ ಶಕ್ತಿಶಾಲಿ ಆದರೆ ಅಗೋಚರವಾದ ಒಬ್ಬ ದುಷ್ಟ ಜೀವಿಯು ಜನರನ್ನು ಆತ್ಮಿಕವಾಗಿ ಕುರುಡುಗೊಳಿಸಿದ್ದಾನೆ ಮತ್ತು ಈಗಲೂ ‘ಭೂಲೋಕದವರನ್ನೆಲ್ಲಾ ಮರುಳುಗೊಳಿಸುತ್ತಿದ್ದಾನೆ’ ಎಂದು ಬೈಬಲ್‌ ನಮ್ಮನ್ನು ಎಚ್ಚರಿಸುತ್ತದೆ.​—ಪ್ರಕಟನೆ 12:9; 2 ಕೊರಿಂಥ 4:4.

ಏಕೆ ಈ ಗಲಿಬಿಲಿ?

ಮಾನವ ಸ್ವರೂಪದ ಕುರಿತಾದ ತದ್ವಿರುದ್ಧವಾದ ವಿಚಾರಗಳು, ಭೂಮಿಗಾಗಿನ ದೇವರ ಉದ್ದೇಶದ ಕುರಿತು ಜನರನ್ನು ಗಲಿಬಿಲಿಗೊಳಿಸಿದೆ. ಮಾನವ ದೇಹದಿಂದ ಪ್ರತ್ಯೇಕವಾಗಿರುವ ಯಾವುದೋ ಒಂದು ಅಗೋಚರವಸ್ತು ನಮ್ಮೊಳಗಿದೆ ಮತ್ತು ಅದು ಮರಣದ ನಂತರವೂ ಬದುಕಿ ಉಳಿಯುತ್ತದೆ ಎಂದು ಅನೇಕರು ನಂಬುತ್ತಾರೆ. ಇನ್ನಿತರರು, ಮಾನವ ದೇಹವು ಸೃಷ್ಟಿಯಾಗುವದಕ್ಕಿಂತಲೂ ಮುಂಚೆಯೇ ಈ ಅಗೋಚರ ಭಾಗವು ಅಸ್ತಿತ್ವದಲ್ಲಿತ್ತು ಎಂದು ನಂಬುತ್ತಾರೆ. ಒಂದು ಕೃತಿಗನುಸಾರ, ಈ ಅಗೋಚರವಾದ ಭಾಗವು “ಅದು ಸ್ವರ್ಗದಲ್ಲಿದ್ದಾಗ ಮಾಡಿದ ಪಾಪಗಳಿಗೆ ಶಿಕ್ಷೆಯೋಪಾದಿ ದೇಹದಲ್ಲಿ ಬಂಧಿಸಲ್ಪಡುತ್ತದೆ” ಎಂದು ಗ್ರೀಕ್‌ ತತ್ತ್ವಜ್ಞಾನಿಯಾದ ಪ್ಲೇಟೋ ಭಾವಿಸಿದನು. ಇದೇ ರೀತಿಯಲ್ಲಿ, ಮೂರನೇ ಶತಮಾನದ ದೇವತಾಶಾಸ್ತ್ರಜ್ಞನಾದ ಒರಿಗನ್‌ ಹೇಳಿದ್ದೇನೆಂದರೆ, ಈ ಅಗೋಚರವಾದ ಭಾಗಗಳು “ದೇಹದೊಂದಿಗೆ ಐಕ್ಯವಾಗುವ ಮುಂಚೆ [ಸ್ವರ್ಗದಲ್ಲಿ] ಪಾಪಮಾಡಿದವು” ಮತ್ತು “ಅವುಗಳ ಪಾಪಗಳಿಗೆ ಶಿಕ್ಷೆಯೋಪಾದಿ [ಭೂಮಿಯಲ್ಲಿರುವ ದೇಹದಲ್ಲಿ] ಬಂಧಿಸಲ್ಪಟ್ಟವು.” ಅಷ್ಟುಮಾತ್ರವಲ್ಲದೆ, ಸ್ವರ್ಗಕ್ಕೆ ಹೋಗುವ ಮಾನವನ ಪ್ರಯಾಣದಲ್ಲಿ ಭೂಮಿಯೆಂಬುದು ಕೇವಲ ಒಂದು ರೀತಿಯ ಪರೀಕ್ಷಾ ಮೈದಾನದಂತಿದೆ ಎಂಬುದಾಗಿ ಲಕ್ಷಾಂತರ ಜನರು ನಂಬುತ್ತಾರೆ.

ಮನುಷ್ಯನು ಸತ್ತ ನಂತರ ಅವನಿಗೆ ಏನು ಸಂಭವಿಸುತ್ತದೆ ಎಂಬುದರ ಕುರಿತಾಗಿಯೂ ವೈವಿಧ್ಯಮಯ ಅಭಿಪ್ರಾಯಗಳಿವೆ. ಪಾಶ್ಚಾತ್ಯ ತತ್ತ್ವಜ್ಞಾನದ ಇತಿಹಾಸ (ಇಂಗ್ಲಿಷ್‌) ಎಂಬ ಪುಸ್ತಕಕ್ಕನುಸಾರ, “ಸತ್ತವರು ಅಧೋಲೋಕಕ್ಕೆ ಇಳಿದುಹೋಗುತ್ತಾರೆಂಬ” ದೃಷ್ಟಿಕೋನವನ್ನು ಐಗುಪ್ತ್ಯರು ಬೆಳೆಸಿಕೊಂಡಿದ್ದರು. ಆದರೆ ಸಮಯಾನಂತರ, ಸತ್ತವರು ಕತ್ತಲೆ ತುಂಬಿದ ಅಧೋಲೋಕಕ್ಕೆ ಇಳಿದುಹೋಗುವುದಿಲ್ಲ ಬದಲಾಗಿ ಅವರು ಎತ್ತರದಲ್ಲಿರುವ ಆತ್ಮ ಜಗತ್ತಿಗೆ ಏರಿಹೋಗುತ್ತಾರೆ ಎಂದು ತತ್ತ್ವಜ್ಞಾನಿಗಳು ವಾದಿಸಿದರು. ಗ್ರೀಕ್‌ ತತ್ತ್ವಜ್ಞಾನಿ ಸೋಕ್ರೇಟಿಸ್‌, ಮರಣದ ಸಮಯದಲ್ಲಿ ವ್ಯಕ್ತಿಯು “[ಒಂದು] ಅಗೋಚರವಾದ ಸ್ಥಳಕ್ಕೆ ಹೋಗುತ್ತಾನೆ . . . ಮತ್ತು ಅವನ ಉಳಿದ ಅಸ್ತಿತ್ವವನ್ನು ದೇವರುಗಳೊಂದಿಗೆ ಕಳೆಯುತ್ತಾನೆ” ಎಂಬ ನಂಬಿಕೆಯನ್ನು ಹೊಂದಿದ್ದನು.

ಬೈಬಲ್‌ ಏನನ್ನುತ್ತದೆ?

ಮಾನವರೊಳಗೆ ಒಂದು ಅಮರವಾದ ಅಗೋಚರ ಭಾಗವಿದೆ ಎಂದು ದೇವರ ಪ್ರೇರಿತ ವಾಕ್ಯವಾದ ಬೈಬಲ್‌ ಎಲ್ಲಿಯೂ ತಿಳಿಸುವುದಿಲ್ಲ. ಆದಿಕಾಂಡ 2:7ರಲ್ಲಿರುವ ವೃತ್ತಾಂತವನ್ನು ಸ್ವತಃ ಓದಿನೋಡಿರಿ. ಅದು ತಿಳಿಸುವುದು: “ಯೆಹೋವದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಪ್ರಾಣಿ [ನೆಫೆಷ್‌ (“ಉಸಿರಾಡುವವನು” ಎಂಬ ಅಕ್ಷರಾರ್ಥವುಳ್ಳ ಹೀಬ್ರು ಪದ)]ಯಾದನು.” ಇದು ಸ್ಪಷ್ಟವಾಗಿಯೂ ಯಾವುದೇ ತಪ್ಪಭಿಪ್ರಾಯಕ್ಕೆ ನಡೆಸದಂಥದ್ದಾಗಿಯೂ ಇದೆ. ದೇವರು ಮೊದಲನೆಯ ಮಾನವನಾದ ಆದಾಮನನ್ನು ಸೃಷ್ಟಿಸಿದಾಗ, ಅವನೊಳಗೆ ಅಶರೀರವಾದ ಯಾವುದೋ ಘಟಕವನ್ನು ಹಾಕಲಿಲ್ಲ. ಬೈಬಲ್‌ ತಿಳಿಸುವುದೇನೆಂದರೆ, ನಿರ್ಜೀವವಾಗಿದ್ದ ದೇಹದೊಳಗೆ ‘ಜೀವಶ್ವಾಸವನ್ನು’ ಊದಲಾಯಿತು ಮತ್ತು ಆಗ ಅದು ಒಬ್ಬ ಮನುಷ್ಯ, ಅಥವಾ ಒಬ್ಬ ಜೀವಂತ ವ್ಯಕ್ತಿಯಾಯಿತು.

ಭೂಮಿಯನ್ನು ಮತ್ತು ಮಾನವ ಕುಟುಂಬವನ್ನು ಸೃಷ್ಟಿಸುವಾಗ, ಮನುಷ್ಯನು ಸಾಯಬೇಕೆಂದು ದೇವರು ಎಂದೂ ಉದ್ದೇಶಿಸಿರಲಿಲ್ಲ. ಮಾನವರು ಈ ಭೂಮಿಯ ಮೇಲೆ ಪರದೈಸೀಯ ಪರಿಸ್ಥಿತಿಗಳಲ್ಲಿ ಸದಾ ಜೀವಿಸಬೇಕೆಂಬದೇ ದೇವರ ಉದ್ದೇಶವಾಗಿತ್ತು. ದೇವರ ನಿಯಮಕ್ಕೆ ಅವಿಧೇಯನಾದ ಕಾರಣ ಮಾತ್ರಕ್ಕೆ ಆದಾಮನು ಮರಣಹೊಂದಿದನು. (ಆದಿಕಾಂಡ 2:8, 15-17; 3:​1-6; ಯೆಶಾಯ 45:18) ಮೊದಲನೆಯ ಮಾನವನು ಮರಣಹೊಂದಿದಾಗ, ಅವನು ಯಾವುದೋ ಒಂದು ಆತ್ಮ ಜಗತ್ತಿಗೆ ಹೋದನೋ? ಇಲ್ಲ! ಅವನು​—ಮನುಷ್ಯನಾದ ಆದಾಮನು​—ಯಾವುದರಿಂದ ಸೃಷ್ಟಿಸಲ್ಪಟ್ಟಿದ್ದನೋ ಆ ಜೀವರಹಿತ ಮಣ್ಣಿಗೇ ಪುನಃ ಸೇರಿದನು.​—ಆದಿಕಾಂಡ 3:​17-19.

ನಾವೆಲ್ಲರೂ ನಮ್ಮ ಪೂರ್ವಿಕನಾದ ಆದಾಮನಿಂದ ಪಾಪ ಮತ್ತು ಮರಣವನ್ನು ಬಾಧ್ಯತೆಯಾಗಿ ಹೊಂದಿದ್ದೇವೆ. (ರೋಮಾಪುರ 5:12) ಈ ಮರಣವು ಆದಾಮನಿಗೆ ಹೇಗೋ ಹಾಗೆ ನಮಗೂ ಅಸ್ತಿತ್ವದ ಕೊನೆಯಾಗಿದೆ. (ಕೀರ್ತನೆ 146:​3, 4) ವಾಸ್ತವದಲ್ಲಿ, ಬೈಬಲಿನ ಎಲ್ಲಾ 66 ಪುಸ್ತಕಗಳಲ್ಲಿ ಎಲ್ಲಿಯೂ, ಮನುಷ್ಯನು ಸತ್ತಾಗ ಅವನೊಳಗಿರುವ ಯಾವುದೋ ಒಂದು ಅಮರವಾದ ಅಗೋಚರವಸ್ತು ಬದುಕಿ ಉಳಿಯುತ್ತದೆಂದು ತಿಳಿಸುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಮನುಷ್ಯನು ಸತ್ತಾಗ ಅವನ ಜೀವನವು ಸಂಪೂರ್ಣವಾಗಿ ಅಂತ್ಯವಾಗುತ್ತದೆ ಎಂದು ಶಾಸ್ತ್ರವಚನಗಳು ಸ್ಪಷ್ಟವಾಗಿ ತಿಳಿಸುತ್ತವೆ.​—ಪ್ರಸಂಗಿ 9:​5, 10.

ಭೌತಿಕ ವಸ್ತುಗಳು ಮೂಲಸ್ವರೂಪವಾಗಿ ಕೆಟ್ಟವುಗಳಾಗಿವೆಯೋ?

ಭೂಮಿಯನ್ನು ಸೇರಿಸಿ ಎಲ್ಲಾ ಭೌತಿಕ ವಸ್ತುಗಳು ಕೆಟ್ಟವುಗಳಾಗಿವೆ ಎಂಬ ವಿಚಾರದ ಕುರಿತಾಗಿ ಏನು? ಇಂಥ ದೃಷ್ಟಿಕೋನವು, ಮ್ಯಾನೀ ಎಂಬ ಹೆಸರಿನ ಒಬ್ಬ ವ್ಯಕ್ತಿಯಿಂದ ಸಾ.ಶ. ಮೂರನೇ ಶತಮಾನದಲ್ಲಿ ಪರ್ಷಿಯದಲ್ಲಿ ಆರಂಭಿಸಲ್ಪಟ್ಟ ಧಾರ್ಮಿಕ ಚಳವಳಿಯಾದ ಮ್ಯಾನಿಕೀಇಸಮ್‌ ಎಂಬ ದ್ವೈತ ಸಿದ್ಧಾಂತದ ಅನುಯಾಯಿಗಳಿಗಿತ್ತು. ದ ನ್ಯೂ ಎನ್‌ಸೈಕ್ಲಪೀಡೀಯಾ ಬ್ರಿಟ್ಯಾನಿಕ ಹೇಳುವುದು: “ಮಾನವ ಸ್ಥಿತಿಯಲ್ಲಿ ಅಂತರ್ಗತವಾಗಿರುವ ಯಾತನೆಯಿಂದ ಮ್ಯಾನಿಕೀಇಸಮ್‌ ಎಂಬ ಸಿದ್ಧಾಂತವು ಉಂಟಾಯಿತು.” ಮನುಷ್ಯನಾಗಿರುವುದು “ಅಸಹಜವು, ಸಹಿಸಲಸಾಧ್ಯವಾದದ್ದು, ಮತ್ತು ಸಂಪೂರ್ಣವಾಗಿ ಕೆಟ್ಟದ್ದು,” ಎಂಬುದಾಗಿ ಮ್ಯಾನೀ ನಂಬಿದನು. ಅಷ್ಟುಮಾತ್ರವಲ್ಲದೆ, ಈ “ಯಾತನೆ”ಯಿಂದ ಹೊರಬರುವ ಒಂದೇ ಒಂದು ಮಾರ್ಗವು, ಮನುಷ್ಯನ ದೇಹದೊಳಗಿರುವ ಆ ಅಗೋಚರ ಭಾಗವು ದೇಹದಿಂದ ತಪ್ಪಿಸಿಕೊಂಡು, ಭೂಮಿಯನ್ನು ಬಿಟ್ಟು, ಆತ್ಮ ಲೋಕದಲ್ಲಿ ಆತ್ಮಿಕ ಅಸ್ತಿತ್ವವನ್ನು ಹೊಂದುವುದೇ ಆಗಿದೆ ಎಂಬುದಾಗಿಯೂ ಅವನು ನಂಬಿದನು.

ಇದಕ್ಕೆ ವ್ಯತಿರಿಕ್ತವಾಗಿ ಬೈಬಲ್‌ ನಮಗೆ ತಿಳಿಸುವುದೇನೆಂದರೆ, ದೇವರು ಭೂಮಿ ಮತ್ತು ಮಾನವಕುಲವನ್ನು ಸೃಷ್ಟಿಮಾಡಿದಾಗ ಆತನ ದೃಷ್ಟಿಯಲ್ಲಿ ‘ತಾನು ಉಂಟುಮಾಡಿದ್ದೆಲ್ಲಾ ಬಹು ಒಳ್ಳೇದಾಗಿತ್ತು.’ (ಆದಿಕಾಂಡ 1:31) ಆ ಸಮಯದಲ್ಲಿ, ಮಾನವರ ಮತ್ತು ದೇವರ ಮಧ್ಯೆ ಯಾವುದೇ ತಡೆಯಿರಲಿಲ್ಲ. ಪರಿಪೂರ್ಣ ಮಾನವನಾದ ಯೇಸು ಕ್ರಿಸ್ತನು ಹೇಗೆ ತನ್ನ ಸ್ವರ್ಗೀಯ ತಂದೆಯೊಂದಿಗೆ ಒಂದು ಆಪ್ತ ಸಂಬಂಧದಲ್ಲಿ ಆನಂದಿಸಿದನೋ ಹಾಗೆಯೇ ಆದಾಮಹವ್ವರು ಸಹ ಯೆಹೋವನೊಂದಿಗೆ ನಿಕಟ ಸಂಬಂಧವನ್ನು ಆನಂದಿಸಿದರು.​—ಮತ್ತಾಯ 3:17.

ನಮ್ಮ ಮೊದಲ ಹೆತ್ತವರಾದ ಆದಾಮಹವ್ವರು ಪಾಪದ ಮಾರ್ಗವನ್ನು ಬೆನ್ನಟ್ಟದಿರುತ್ತಿದ್ದಲ್ಲಿ, ಪರದೈಸ್‌ ಭೂಮಿಯಲ್ಲಿ ಯೆಹೋವ ದೇವರೊಂದಿಗೆ ಸದಾಕಾಲಕ್ಕೂ ಒಂದು ನಿಕಟ ಸಂಬಂಧವನ್ನು ಹೊಂದಿರುತ್ತಿದ್ದರು. ಅವರು ಜೀವನವನ್ನು ಪರದೈಸಿನಲ್ಲಿ ಆರಂಭಿಸಿದರೆಂದು ಶಾಸ್ತ್ರವಚನವು ತಿಳಿಸುತ್ತದೆ: “ಯೆಹೋವದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್‌ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದನು.” (ಆದಿಕಾಂಡ 2:8) ಹವ್ವಳ ಸೃಷ್ಟಿಯಾದದ್ದು ಆ ಪರದೈಸ್‌ ಉದ್ಯಾನವನದಲ್ಲೇ. ಆದಾಮಹವ್ವರು ಪಾಪಮಾಡದಿರುತ್ತಿದ್ದಲ್ಲಿ, ಅವರು ಮತ್ತು ಅವರ ಪರಿಪೂರ್ಣ ಸಂತತಿಯು ಸಂತೋಷದಿಂದ ಒಟ್ಟಾಗಿ ಕೆಲಸಮಾಡುತ್ತಾ ಇಡೀ ಭೂಮಿಯನ್ನು ಪರದೈಸನ್ನಾಗಿ ಮಾಡಬಹುದಿತ್ತು. (ಆದಿಕಾಂಡ 2:21; 3:​23, 24) ಭೂಪರದೈಸವು ಮಾನವಕುಲದ ನಿತ್ಯ ಬೀಡಾಗುತ್ತಿತ್ತು.

ಕೆಲವರು ಸ್ವರ್ಗಕ್ಕೆ ಹೋಗುವುದಾದರೂ ಏಕೆ?

‘ಆದರೆ, ಸ್ವರ್ಗಕ್ಕೆ ಹೋಗುವವರ ಕುರಿತು ಬೈಬಲ್‌ ತಿಳಿಸುತ್ತದೆ ಅಲ್ಲವೇ?’ ಎಂದು ನೀವು ಕೇಳಬಹುದು. ಹೌದು. ಆದಾಮನು ಪಾಪಮಾಡಿದ ನಂತರ, ಯೆಹೋವನು ಒಂದು ಸ್ವರ್ಗೀಯ ರಾಜ್ಯವನ್ನು ಸ್ಥಾಪಿಸಲು ಉದ್ದೇಶಿಸಿದನು. ಮತ್ತು ಅದರಲ್ಲಿ, ಆದಾಮನ ಸಂತತಿಯವರಾದ ಕೆಲವರು ಯೇಸು ಕ್ರಿಸ್ತನೊಂದಿಗೆ “ರಾಜರುಗಳಾಗಿ ಭೂಮಿಯ ಮೇಲೆ ಆಳುವರು.” (ಪ್ರಕಟನೆ 5:​10, NW; ರೋಮಾಪುರ 8:17) ಅವರು ಸ್ವರ್ಗದಲ್ಲಿನ ಅಮರ ಜೀವನಕ್ಕಾಗಿ ಪುನರುತ್ಥಾನಗೊಳಿಸಲ್ಪಡುವರು. ಅವರ ಸಂಪೂರ್ಣ ಸಂಖ್ಯೆಯು 1,44,000ವಾಗಿದ್ದು, ಒಂದನೇ ಶತಮಾನದ ಯೇಸುವಿನ ನಂಬಿಗಸ್ತ ಶಿಷ್ಯರು ಅವರಲ್ಲಿ ಮೊದಲಿಗರಾಗಿದ್ದರು.​—ಲೂಕ 12:32; 1 ಕೊರಿಂಥ 15:​42-44; ಪ್ರಕಟನೆ 14:​1-5.

ಹಾಗಿದ್ದರೂ, ಯಥಾರ್ಥ ಮಾನವರು ಭೂಮಿಯನ್ನು ಬಿಟ್ಟು ಸ್ವರ್ಗಕ್ಕೆ ಹೋಗುವುದು ದೇವರ ಆದಿ ಉದ್ದೇಶವಾಗಿರಲಿಲ್ಲ. ವಾಸ್ತವದಲ್ಲಿ, ಯೇಸು ಭೂಮಿಯಲ್ಲಿದ್ದಾಗ ಹೇಳಿದ್ದು: “ಪರಲೋಕದಿಂದ ಇಳಿದುಬಂದವನೇ ಅಂದರೆ ಮನುಷ್ಯಕುಮಾರನೇ ಹೊರತು ಮತ್ತಾರೂ ಪರಲೋಕಕ್ಕೆ ಏರಿಹೋದವನಲ್ಲ.” (ಯೋಹಾನ 3:13) “ಮನುಷ್ಯಕುಮಾರ”ನಾದ ಯೇಸು ಕ್ರಿಸ್ತನ ಮೂಲಕ ದೇವರು ವಿಮೋಚನೆಯನ್ನು ಒದಗಿಸಿದನು ಮತ್ತು ಯೇಸುವಿನ ಯಜ್ಞದಲ್ಲಿ ನಂಬಿಕೆಯನ್ನಿಡುವ ಎಲ್ಲರಿಗೂ ಅದು ನಿತ್ಯಜೀವವನ್ನು ಸಾಧ್ಯಗೊಳಿಸುತ್ತದೆ. (ರೋಮಾಪುರ 5:8) ಆದರೆ ಅಂಥ ಲಕ್ಷಾಂತರ ಜನರು ನಿತ್ಯಕ್ಕೂ ಎಲ್ಲಿ ಜೀವಿಸುವರು?

ದೇವರ ಆದಿ ಉದ್ದೇಶವು ನೆರವೇರಲಿದೆ

ಯೇಸು ಕ್ರಿಸ್ತನೊಂದಿಗೆ ಸ್ವರ್ಗೀಯ ರಾಜ್ಯದಲ್ಲಿ ಜೊತೆರಾಜರುಗಳಾಗಿ ಆಳಲು ಮಾನವಕುಟುಂಬದಿಂದ ಕೆಲವರನ್ನು ತೆಗೆದುಕೊಳ್ಳಲು ದೇವರು ಉದ್ದೇಶಿಸಿದರೂ, ಇದರ ಅರ್ಥ ಎಲ್ಲಾ ಒಳ್ಳೇ ಜನರು ಸ್ವರ್ಗಕ್ಕೆ ಹೋಗುವರೆಂದಲ್ಲ. ಯೆಹೋವನು ಭೂಮಿಯನ್ನು ಮಾನವಕುಟುಂಬದ ಪರದೈಸೀಯ ಬೀಡಾಗಿರುವಂತೆ ಸೃಷ್ಟಿಸಿದನು. ಇಂದು ಅತಿ ಶೀಘ್ರದಲ್ಲಿ, ದೇವರು ತನ್ನ ಆ ಆರಂಭದ ಉದ್ದೇಶವನ್ನು ನೆರವೇರಿಸಲಿದ್ದಾನೆ.​—ಮತ್ತಾಯ 6:​9, 10.

ಯೇಸು ಕ್ರಿಸ್ತನ ಮತ್ತು ಅವನ ಸ್ವರ್ಗೀಯ ಸಹರಾಜರುಗಳ ಆಳ್ವಿಕೆಯ ಕೆಳಗೆ, ಶಾಂತಿ ಮತ್ತು ಸಂತೋಷವು ಇಡೀ ಭೂಮಿಯಲ್ಲಿ ರಾರಾಜಿಸುವುದು. (ಕೀರ್ತನೆ 37:​9-11) ದೇವರ ಜ್ಞಾಪಕದಲ್ಲಿರುವವರು ಪುನರುತ್ಥಾನಗೊಳಿಸಲ್ಪಡುವರು ಮತ್ತು ಪರಿಪೂರ್ಣ ಆರೋಗ್ಯವನ್ನು ಆನಂದಿಸುವರು. (ಅ. ಕೃತ್ಯಗಳು 24:15) ವಿಧೇಯ ಮಾನವಕುಲವು ದೇವರಿಗೆ ತೋರಿಸುವ ನಂಬಿಗಸ್ತಿಕೆಯ ಕಾರಣ, ಅವರು ನಮ್ಮ ಪ್ರಥಮ ಹೆತ್ತವರು ಕಳೆದುಕೊಂಡಂತಹ ಪರದೈಸ್‌ ಭೂಮಿಯ ಮೇಲೆ ಮಾನವ ಪರಿಪೂರ್ಣತೆಯಲ್ಲಿ ನಿತ್ಯಜೀವವನ್ನು ಹೊಂದಲಿರುವರು.​—ಪ್ರಕಟನೆ 21:​3, 4.

ಯೆಹೋವ ದೇವರು ಏನನ್ನು ಉದ್ದೇಶಿಸುತ್ತಾನೋ ಅದನ್ನು ನೆರವೇರಿಸಲು ಎಂದಿಗೂ ತಪ್ಪುವುದಿಲ್ಲ. ತನ್ನ ಪ್ರವಾದಿಯಾದ ಯೆಶಾಯನ ಮೂಲಕ ಆತನು ಘೋಷಿಸಿದ್ದು: “ಮಳೆಯೂ ಹಿಮವೂ ಆಕಾಶದಿಂದ ಬಿದ್ದು ಭೂಮಿಯನ್ನು ತೋಯಿಸಿ ಹಸರುಗೊಳಿಸಿ ಫಲಿಸುವಂತೆ ಮಾಡಿ ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸಿದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವದಿಲ್ಲವೋ ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”​—ಯೆಶಾಯ 55:​10, 11.

ಬೈಬಲಿನ ಪುಸ್ತಕವಾದ ಯೆಶಾಯದಲ್ಲಿ, ಪರದೈಸ್‌ ಭೂಮಿಯಲ್ಲಿನ ಜೀವನವು ಹೇಗಿರುತ್ತದೆಂಬ ಮುನ್‌ನೋಟವು ನಮಗೆ ಸಿಗುತ್ತದೆ. ಪರದೈಸ್‌ ಭೂಮಿಯ ಯಾವ ನಿವಾಸಿಯೂ “ತಾನು ಅಸ್ವಸ್ಥನು” ಎಂದು ಹೇಳನು. (ಯೆಶಾಯ 33:24) ಪ್ರಾಣಿಗಳು ಮನುಷ್ಯರಿಗೆ ಯಾವುದೇ ಹಾನಿಯನ್ನು ಮಾಡುವುದಿಲ್ಲ. (ಯೆಶಾಯ 11:​6-9) ಅಲ್ಲಿ ಜನರು ಸುಂದರವಾದ ಮನೆಗಳನ್ನು ಕಟ್ಟಿ, ಅದರಲ್ಲಿ ತಾವೇ ವಾಸಿಸುವರು ಮತ್ತು ತೋಟದಲ್ಲಿ ಬೆಳೆಯನ್ನು ನೆಟ್ಟು, ಅದರ ಫಲವನ್ನು ತಾವೇ ಅನುಭವಿಸುವರು. (ಯೆಶಾಯ 65:​21-25) ಅಷ್ಟುಮಾತ್ರವಲ್ಲದೆ, ದೇವರು “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.”​—ಯೆಶಾಯ 25:8.

ಬೇಗನೆ, ಇಂತಹ ಆಶೀರ್ವದಿತ ಪರಿಸ್ಥಿತಿಗಳ ಕೆಳಗೆ ವಿಧೇಯ ಮಾನವಕುಲವು ಜೀವಿಸಲಿದೆ. ಅವರು ‘ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವರು.’ (ರೋಮಾಪುರ 8:21) ವಾಗ್ದಾನಿತ ಭೂಪರದೈಸಿನಲ್ಲಿ ಸದಾ ಜೀವಿಸುವುದು ಎಷ್ಟು ಅದ್ಭುತಕರವಾಗಿರುವುದು! (ಲೂಕ 23:43) ಶಾಸ್ತ್ರವಚನಗಳ ನಿಷ್ಕೃಷ್ಟ ಜ್ಞಾನಕ್ಕನುಸಾರ ನೀವು ಈಗ ಕ್ರಿಯೆಗೈಯುವುದಾದರೆ ಮತ್ತು ಯೆಹೋವ ದೇವರು ಹಾಗೂ ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವುದಾದರೆ ನೀವು ಸಹ ಅಲ್ಲಿರಬಲ್ಲಿರಿ. ಮತ್ತು ಪರದೈಸ್‌ ಭೂಮಿಯಲ್ಲಿ ನಂಬಿಕೆಯನ್ನಿಡುವುದು ನಿಜವಾಗಿಯೂ ಅರ್ಥವತ್ತಾಗಿದೆ ಎಂದು ನೀವೀಗ ದೃಢಭರವಸದಿಂದಿರಬಲ್ಲಿರಿ.

[ಪುಟ 5ರಲ್ಲಿರುವ ಚಿತ್ರ]

ಆದಾಮಹವ್ವರು ಭೂಪರದೈಸಿನಲ್ಲಿ ನಿತ್ಯಕ್ಕೂ ಜೀವಿಸುವಂಥ ರೀತಿಯಲ್ಲಿ ಸೃಷ್ಟಿಸಲ್ಪಟ್ಟರು

[ಪುಟ 7ರಲ್ಲಿರುವ ಚಿತ್ರಗಳು]

ಭೂಪರದೈಸಿನಲ್ಲಿ . . .

ಅವರು ಮನೆಗಳನ್ನು ಕಟ್ಟುವರು

ಅವರು ದ್ರಾಕ್ಷೆತೋಟಗಳನ್ನು ನೆಡುವರು

ಅವರು ಯೆಹೋವನಿಂದ ಆಶೀರ್ವದಿಸಲ್ಪಡುವರು

[ಪುಟ 4ರಲ್ಲಿರುವ ಚಿತ್ರ ಕೃಪೆ]

U.S. Fish & Wildlife Service, Washington, D.C./NASA