ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾಮಾನ್ಯ ಜನರ ಬಗ್ಗೆ ಯೆಹೋವನು ಚಿಂತಿಸುತ್ತಾನೆ

ಸಾಮಾನ್ಯ ಜನರ ಬಗ್ಗೆ ಯೆಹೋವನು ಚಿಂತಿಸುತ್ತಾನೆ

ಸಾಮಾನ್ಯ ಜನರ ಬಗ್ಗೆ ಯೆಹೋವನು ಚಿಂತಿಸುತ್ತಾನೆ

ದೇವರಿಂದ ಗಮನಿಸಲ್ಪಡಬೇಕಾದರೆ, ಯಾವುದಾದರೊಂದು ರೀತಿಯಲ್ಲಿ ನಾವು ಅಸಾಧಾರಣರು ಅಥವಾ ಎದ್ದುಕಾಣುವವರಾಗಿರುವ ಅವಶ್ಯವಿದೆಯೇ? ಅಮೆರಿಕದ 16ನೆಯ ಅಧ್ಯಕ್ಷರಾದ ಅಬ್ರಹಾಮ್‌ ಲಿಂಕನ್‌ರವರು ಹೀಗಂದರೆಂದು ಉಲ್ಲೇಖಿಸಲಾಗಿದೆ: “ಕರ್ತನು ಸಾಮಾನ್ಯ ಜನರನ್ನು ಇಷ್ಟಪಡುತ್ತಾನೆ. ಆದುದರಿಂದಲೇ ಇಷ್ಟೊಂದು ಸಾಮಾನ್ಯ ಜನರನ್ನು ಆತನು ಸೃಷ್ಟಿಸಿದ್ದಾನೆ.” ಅನೇಕರು, ತಾವು ಯಾವುದೇ ಗಮನಾರ್ಹವಾದ ಅಂಶಗಳಿಲ್ಲದ ಸಾಮಾನ್ಯ ಜನರೆಂದು ಭಾವಿಸುತ್ತಾರೆ. ಸಾಮಾನ್ಯ ಎಂಬ ಪದಕ್ಕೆ “ಬಡ, ಕೀಳ್ಮಟ್ಟದ” ಎಂಬ ಅರ್ಥವಿರಸಾಧ್ಯವಿದೆ. ಅದೇ ರೀತಿಯಲ್ಲಿ, “ಸಾಧಾರಣ” ಎಂಬ ಪದವು, “ಅಧಿಕಾರಸ್ಥಾನವಿಲ್ಲದ ಅಥವಾ ವಿಶೇಷ ಹುದ್ದೆ ಇಲ್ಲದ,” “ಸಾಮಾನ್ಯ ಮಟ್ಟಕ್ಕಿಂತ ಕೆಳಗಿರುವ” ಅಥವಾ “ಎರಡನೆಯ ದರ್ಜೆಯ” ಎಂಬ ಅರ್ಥವುಳ್ಳದ್ದಾಗಿರಬಹುದು. ಯಾವ ರೀತಿಯ ಜನರ ಮಧ್ಯದಲ್ಲಿರಲು ನೀವು ಇಷ್ಟಪಡುತ್ತೀರಿ? ದುರಹಂಕಾರಿ, ತಾವು ಮಾಡಿದ್ದೇ ಸರಿ, ಆಡಿದ್ದೇ ಸೂಕ್ತ ಎಂದು ವಾದಿಸುವ, ಹೆಮ್ಮೆಯುಳ್ಳ ಜನರ ಮಧ್ಯದಲ್ಲೋ? ಅದಕ್ಕೆ ಬದಲಾಗಿ, ಸ್ನೇಹಪರ, ದೀನ, ನಮ್ರರಾಗಿದ್ದು, ಇತರರ ಕಡೆಗೆ ನಿಜವಾದ, ಹೃತ್ಪೂರ್ವಕ ಆಸಕ್ತಿಯನ್ನು ತೋರಿಸುವ ಜನರ ಮಧ್ಯದಲ್ಲಿರಲು ನೀವು ಬಯಸುವುದಿಲ್ಲವೋ?

ಇಂದು, ಭಾವನಾತ್ಮಕ ಪೀಡೆ ಮತ್ತು ಅಪಹಾಸ್ಯವೆಂಬುದು ಲೋಕದಲ್ಲಿ ಸರ್ವಸಾಮಾನ್ಯವಾಗಿದೆ. ಹೀಗಿರುವದರಿಂದ, ದೇವರಿಗೆ ತಮ್ಮಲ್ಲಿ ವೈಯಕ್ತಿಕ ಆಸಕ್ತಿಯಿದೆ ಎಂಬುದನ್ನು ನಂಬಲು ಕೆಲವರಿಗೆ ಕಷ್ಟಕರವಾಗಿದೆ. “ನನ್ನ ಕುಟುಂಬದಿಂದ ನನಗೆ ಕೊಂಚವೇ ಪ್ರೀತಿಯು ತೋರಿಸಲ್ಪಟ್ಟಿತು. ನನ್ನನ್ನು ತುಚ್ಛೀಕರಿಸಲಾಯಿತು, ಕೀಟಲೆ ಮಾಡಲಾಯಿತು ಮತ್ತು ಅಪಹಾಸ್ಯ ಮಾಡಲಾಯಿತು. ಆದುದರಿಂದ ಬಹಳ ಚಿಕ್ಕ ಪ್ರಾಯದಲ್ಲಿಯೇ ನನ್ನಲ್ಲಿ ಯಾವುದೇ ಯೋಗ್ಯತೆಯಿಲ್ಲ ಎಂಬ ಅನಿಸಿಕೆ ನನಗಾಯಿತು,” ಎಂಬುದಾಗಿ ಈ ಪತ್ರಿಕೆಯ ವಾಚಕನೊಬ್ಬನು ಬರೆದನು. ಅವನು ಮುಂದುವರಿಸಿದ್ದು: “ನನ್ನ ಗತಕಾಲದ ಅನುಭವದಿಂದಾಗಿ, ಆಳವಾಗಿ ಬೇರೂರಿದ ಭಾವನೆಗಳು ಈಗಲೂ ನಾನು ವಿಪತ್ತನ್ನು ಅನುಭವಿಸುವಾಗ ನನ್ನನ್ನು ನಿರುತ್ತೇಜನಗೊಳಿಸುತ್ತವೆ.” ಆದರೂ, ದೇವರು ಸಾಮಾನ್ಯ ಜನರಲ್ಲಿ ವೈಯಕ್ತಿಕವಾಗಿ ಆಸಕ್ತನಾಗಿದ್ದಾನೆಂದು ನಂಬಲು ಅನೇಕ ಕಾರಣಗಳಿವೆ.

ಸಾಧಾರಣ ಜನರಲ್ಲಿ ದೇವರ ಆಸಕ್ತಿ

“ಯೆಹೋವನು ಮಹೋನ್ನತನೂ ಮಹಾಸ್ತುತಿ ಪಾತ್ರನೂ ಆಗಿದ್ದಾನೆ; ಆತನ ಮಹತ್ತು ಅಪಾರವಾದದ್ದು” ಎಂಬುದಾಗಿ ರಾಜ ದಾವೀದನು ಬರೆದನು. (ಕೀರ್ತನೆ 145:3) ಹಾಗಿದ್ದರೂ, ನಮ್ಮನ್ನು ಪ್ರೀತಿ ಮತ್ತು ಕನಿಕರದಲ್ಲಿ ಪರಾಮರಿಸುವುದರಿಂದ ಇದು ಯೆಹೋವನನ್ನು ತಡೆಯುವುದಿಲ್ಲ. (1 ಪೇತ್ರ 5:7) ಉದಾಹರಣೆಗೆ, ಕೀರ್ತನೆಗಾರನು ತಿಳಿಸಿದ್ದು: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.”​—ಕೀರ್ತನೆ 34:18.

ಲೋಕದ ಜನರನ್ನು ಆಕರ್ಷಿಸುವಂಥ ವಿಷಯಗಳಾದ ಶಾರೀರಿಕ ಸೌಂದರ್ಯ, ಸ್ಥಾನಮಾನ, ಅಥವಾ ಸಂಪತ್ತು ಮುಂತಾದವುಗಳನ್ನು ದೇವರು ಪ್ರಾಮುಖ್ಯವಾಗಿ ಪರಿಗಣಿಸುವುದಿಲ್ಲ. ದೇವರು ಇಸ್ರಾಯೇಲ್ಯರಿಗೆ ಕೊಟ್ಟ ನಿಯಮಶಾಸ್ತ್ರದಲ್ಲಿ, ಬಡವರ, ಅನಾಥರ, ವಿಧವೆಯರ, ಮತ್ತು ಪರದೇಶಸ್ಥರ ಕಡೆಗೆ ಆತನ ಕನಿಕರಭರಿತ ಆಸಕ್ತಿಯು ತೋರಿಬರುತ್ತದೆ. ಐಗುಪ್ತದಲ್ಲಿ ಸ್ವತಃ ಕ್ರೂರವಾಗಿ ಉಪಚರಿಸಲ್ಪಟ್ಟ ಇಸ್ರಾಯೇಲ್ಯರಿಗೆ ದೇವರು ಹೀಗಂದನು: “ಪರದೇಶಸ್ಥನಿಗೆ ಅನ್ಯಾಯಮಾಡಬಾರದು, ಉಪದ್ರವಕೊಡಲೂ ಬಾರದು. . . . ವಿಧವೆಯರನ್ನಾಗಲಿ ದಿಕ್ಕಿಲ್ಲದ ಮಕ್ಕಳನ್ನಾಗಲಿ ಬಾಧಿಸಬಾರದು. ನೀವು ಇಂಥವರನ್ನು ಬಾಧಿಸಿದರೆ ಅವರು ನನಗೆ ಮೊರೆಯಿಡುವರು; ಆ ಮೊರೆಗೆ ನಾನು ಕಿವಿಗೊಡುವೆನೆಂದು ತಿಳಿದುಕೊಳ್ಳಿರಿ.” (ವಿಮೋಚನಕಾಂಡ 22:21-24) ಅಷ್ಟುಮಾತ್ರವಲ್ಲದೆ, ಪ್ರವಾದಿಯಾದ ಯೆಶಾಯನೂ ದೀನರನ್ನು ದೇವರು ಪರಾಮರಿಸುವನು ಎಂಬ ಭರವಸೆಯನ್ನು ವ್ಯಕ್ತಪಡಿಸಿದನು. ಅವನಂದದ್ದು: “ನೀನು ದೀನರಿಗೆ ಕೋಟೆ, ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣದುರ್ಗ, ಬಿಸಿಲಿಗೆ ನೆರಳು, ಭೀಕರರ ಶ್ವಾಸವು ಗೋಡೆಗೆ ಬಡಿದುಬಿಡುವ ಬಿರುಗಾಳಿಯಂತಿರುವಾಗ ಆಶ್ರಯವೂ ಆಗಿದ್ದೀ.”​—ಯೆಶಾಯ 25:4.

ದೇವರ “ತತ್ವದ ಮೂರ್ತಿ” ಆಗಿರುವ ಯೇಸು ಕ್ರಿಸ್ತನು ತನ್ನ ಶುಶ್ರೂಷೆಯಾದ್ಯಂತ, ಸಾಮಾನ್ಯ ಜನರಲ್ಲಿ ನೈಜವಾದ ಆಸಕ್ತಿ ತೋರಿಸುವುದರಲ್ಲಿ ತನ್ನ ಶಿಷ್ಯರಿಗೆ ಒಂದು ಮಾದರಿಯಾಗಿದ್ದನು. (ಇಬ್ರಿಯ 1:3) ‘ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದ’ ಜನರ ಗುಂಪುಗಳನ್ನು ನೋಡಿ, ಯೇಸು “ಅವರ ಮೇಲೆ ಕನಿಕರಪಟ್ಟನು.”​—ಮತ್ತಾಯ 9:​36.

ತನ್ನ ಅಪೊಸ್ತಲರಾಗಲು ಯೇಸು ಯಾವ ರೀತಿಯ ಜನರನ್ನು ಆರಿಸಿಕೊಂಡನೆಂಬುದನ್ನೂ ಗಮನಿಸಿರಿ. “ಶಾಸ್ತ್ರಾಭ್ಯಾಸ ಮಾಡದ ಸಾಧಾರಣರೆಂದು” ವರ್ಣಿಸಲಾದ ಜನರನ್ನು ಅವನು ಆರಿಸಿಕೊಂಡನು. (ಅ. ಕೃತ್ಯಗಳು 4:​13) ಯೇಸುವಿನ ಮರಣದ ನಂತರ, ದೇವರ ವಾಕ್ಯವನ್ನು ಆಲಿಸುವಂತೆ ಎಲ್ಲಾ ರೀತಿಯ ಜನರನ್ನು ಅವನ ಹಿಂಬಾಲಕರು ಆಮಂತ್ರಿಸತೊಡಗಿದರು. “ಕ್ರಿಸ್ತನಂಬಿಕೆಯಿಲ್ಲದವನಾಗಲಿ ಈ ವರವಿಲ್ಲದವನಾಗಲಿ [“ಸಾಮಾನ್ಯ ವ್ಯಕ್ತಿಯಾಗಲಿ,” NW]” ಕ್ರೈಸ್ತ ಸಭೆಯೊಳಗೆ ಬಂದು, ಒಬ್ಬ ವಿಶ್ವಾಸಿಯಾಗಸಾಧ್ಯವಿದೆ ಎಂಬುದಾಗಿ ಅಪೊಸ್ತಲ ಪೌಲನು ಬರೆದನು. (1 ಕೊರಿಂಥ 14:24, 25) ಲೋಕದ ಮಟ್ಟಗಳಿಗನುಸಾರ ಮೆಚ್ಚಿಹೊಗಳಲ್ಪಡುವ ವ್ಯಕ್ತಿಗಳನ್ನು ಮಾತ್ರ ಆರಿಸಿಕೊಳ್ಳುವ ಬದಲು, ದೇವರು ತನ್ನ ಸೇವೆಗಾಗಿ ಅನೇಕ ಸರಳ, ಸಾಮಾನ್ಯ ಜನರನ್ನು ಆರಿಸಿದನು. ಪೌಲನಂದದ್ದು: “ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ. ನಿಮ್ಮೊಳಗೆ ಲೌಕಿಕದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಅಧಿಕಾರಿಗಳೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ. ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಠರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಈ ಲೋಕದ ಕುಲಹೀನರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣ್ಯರನ್ನು ಇಲ್ಲದಂತೆ ಮಾಡುವದಕ್ಕಾಗಿ ಗಣನೆಗೆ ಬಾರದವರನ್ನು ಆರಿಸಿಕೊಂಡಿದ್ದಾನೆ. ಹೀಗಿರಲು ದೇವರ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.”​—1 ಕೊರಿಂಥ 1:26-29.

ಇಂದು, ಅದೇ ರೀತಿಯಲ್ಲಿ ದೇವರು ನಮ್ಮ ಕುರಿತು ನಿಜ ಆಸಕ್ತಿಯುಳ್ಳವನಾಗಿದ್ದಾನೆ. “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆ. (1 ತಿಮೊಥೆಯ 2:4) ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಮಗನನ್ನು ನಮಗೋಸ್ಕರ ಸಾಯುವುದಕ್ಕಾಗಿ ಕಳುಹಿಸಿಕೊಟ್ಟನಾದರೆ, ನಾವು ಪ್ರೀತಿಗೆ ಯೋಗ್ಯರಲ್ಲ ಅಥವಾ ಪ್ರಯೋಜನವಿಲ್ಲದವರು ಎಂಬುದಾಗಿ ಭಾವಿಸಲು ಯಾವ ಕಾರಣವೂ ಇಲ್ಲ. (ಯೋಹಾನ 3:16) ಯೇಸುವನ್ನು ಸ್ವತಃ ಸತ್ಕರಿಸುತ್ತಿದ್ದೇವೋ ಎಂಬಂತೆ ತನ್ನ ಆತ್ಮಿಕ ಸಹೋದರರಲ್ಲಿ ಕೇವಲ ಅಲ್ಪನಾದವನನ್ನೂ ಸತ್ಕರಿಸಬೇಕೆಂಬುದರ ಪ್ರಾಮುಖ್ಯತೆಯನ್ನು, ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ತೋರಿಸಿಕೊಟ್ಟನು. ಅವನಂದದ್ದು: “ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು.” (ಮತ್ತಾಯ 25:40) ಲೋಕವು ನಮ್ಮನ್ನು ಯಾವ ರೀತಿಯಲ್ಲೇ ವೀಕ್ಷಿಸಲಿ, ನಾವು ಸತ್ಯವನ್ನು ಪ್ರೀತಿಸುವುದಾದರೆ, ದೇವರ ದೃಷ್ಟಿಯಲ್ಲಿ ನಾವು ವಿಶೇಷ ಜನರಾಗಿದ್ದೇವೆ.

ದೇವರೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಂಡ ಬಳಿಕ ಫ್ರಾನ್ಸೀಸ್ಕೋ * ಎಂಬ ಬ್ರಸಿಲಿನ ಒಬ್ಬ ತಂದೆಯಿಲ್ಲದ ಹುಡುಗನಿಗೆ ಇದೇ ರೀತಿಯ ಅನಿಸಿಕೆಯಾಯಿತು. ಅವನು ವಿವರಿಸುವುದು: “ಯೆಹೋವನನ್ನು ಮತ್ತು ಆತನ ಸಂಸ್ಥೆಯ ಬಗ್ಗೆ ತಿಳಿಯುವುದು, ಅಭದ್ರತೆಯ ಮತ್ತು ಪುಕ್ಕಲುತನದ ನನ್ನ ಭಾವನೆಗಳನ್ನು ಎದುರಿಸಿ, ಜಯಿಸಲು ನನಗೆ ಸಹಾಯಮಾಡಿತು. ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ಯೆಹೋವನು ವೈಯಕ್ತಿಕವಾಗಿ ಆಸಕ್ತನಾಗಿದ್ದಾನೆಂಬುದನ್ನು ನಾನು ಕಲಿತುಕೊಂಡೆ.” ಫ್ರಾನ್ಸೀಸ್ಕೋವಿಗೆ, ಯೆಹೋವನು ಒಬ್ಬ ನಿಜವಾದ ತಂದೆಯಂತಿದ್ದನು.

ಯುವ ಜನರ ಕಡೆಗೆ ಚಿಂತೆ

ಯೆಹೋವನು ಯುವ ಜನರಲ್ಲಿ, ಒಂದು ಗುಂಪಿನೋಪಾದಿ ಮಾತ್ರವಲ್ಲ ವೈಯಕ್ತಿಕವಾಗಿಯೂ ನೈಜವಾದ ಆಸಕ್ತಿ ವಹಿಸುತ್ತಾನೆ. ಹಾಗಿದ್ದರೂ, ನಾವು ಒಬ್ಬ ಯುವ ವ್ಯಕ್ತಿಯಾಗಿರಲಿ ಅಥವಾ ಪ್ರಾಯಸ್ಥರಾಗಿರಲಿ, ನಮ್ಮಲ್ಲಿ ಯಾರೂ ನಮ್ಮ ಕುರಿತಾಗಿಯೇ ಅತಿಶಯವಾಗಿ ಯೋಚಿಸಬಾರದು. ಆದರೂ, ಭವಿಷ್ಯತ್ತಿನಲ್ಲಿ ದೇವರು ಉಪಯೋಗಿಸಸಾಧ್ಯವಿರುವ ಸಾಮರ್ಥ್ಯಗಳು ಮತ್ತು ಗುಣಗಳು ನಮ್ಮಲ್ಲಿ ಇರಬಹುದು. ನಮ್ಮಲ್ಲಿರುವ ಸಾಮರ್ಥ್ಯಗಳ ಪೂರ್ಣ ಉಪಯೋಗವನ್ನು ಮಾಡಲು, ಯಾವ ರೀತಿಯ ಶುದ್ಧೀಕರಣ ಮತ್ತು ತರಬೇತಿ ನಮಗೆ ಬೇಕಾಗಿದೆ ಎಂಬುದು ಯೆಹೋವನಿಗೆ ತಿಳಿದಿದೆ. ಉದಾಹರಣೆಗಾಗಿ, 1 ಸಮುವೇಲ 16ನೆಯ ಅಧ್ಯಾಯದಲ್ಲಿರುವ ವೃತ್ತಾಂತವನ್ನು ಗಮನಿಸಿರಿ. ಪ್ರವಾದಿಯಾದ ಸಮುವೇಲನಿಗೆ, ಇಸ್ರಾಯೇಲಿನ ರಾಜಪದವಿಯನ್ನು ಪಡೆದುಕೊಳ್ಳಲು ಇತರ ಭಾವೀ ಅಭ್ಯರ್ಥಿಗಳು ಹೆಚ್ಚು ಅರ್ಹರಾಗಿ ಕಂಡುಬಂದರೂ, ಇಷಯನ ಕಿರಿಯ ಮಗನಾದ ದಾವೀದನನ್ನೇ ಇಸ್ರಾಯೇಲಿನ ಮುಂದಿನ ರಾಜನಾಗಿ ಯೆಹೋವನು ಆರಿಸಿಕೊಳ್ಳಲು ಕಾರಣವೇನು ಎಂಬುದನ್ನು ಆತನೇ ವಿವರಿಸಿದನು. ಆತನಂದದ್ದು: “ನೀನು ಅವನ ಚೆಲುವಿಕೆಯನ್ನೂ ನೀಳವನ್ನೂ ನೋಡಬೇಡ; ನಾನು ಅವನನ್ನು [ದಾವೀದನ ಅಣ್ಣನನ್ನು] ತಳ್ಳಿಬಿಟ್ಟಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.”​—1 ಸಮುವೇಲ 16:7.

ಯೆಹೋವನು ತಮ್ಮ ಕುರಿತು ನೈಜ ಆಸಕ್ತಿಯನ್ನು ವಹಿಸುತ್ತಾನೆಂದು ಇಂದಿರುವ ಯುವ ಜನರು ಭರವಸೆಯಿಂದಿರಬಲ್ಲರೋ? ಬ್ರಸಿಲಿನ ಒಬ್ಬ ಯುವತಿಯಾದ ಆ್ಯನಳನ್ನು ಪರಿಗಣಿಸಿರಿ. ಅನೇಕ ಇತರ ಯುವ ಜನರಂತೆಯೇ ಇವಳೂ, ಭ್ರಷ್ಟಾಚಾರ ಮತ್ತು ಅನ್ಯಾಯವನ್ನು ನೋಡಿ ಕ್ಷೋಭೆಗೊಂಡಿದ್ದಳು. ನಂತರ ಆಕೆಯ ತಂದೆಯು ಅವಳನ್ನೂ ಅವಳ ಸಹೋದರಿಯರನ್ನೂ ಕ್ರೈಸ್ತ ಕೂಟಗಳಿಗೆ ಕರೆದೊಯ್ಯಲಾರಂಭಿಸಿದರು. ಸಮಯಾನಂತರ, ದೇವರ ವಾಕ್ಯದ ಕುರಿತು ಅವಳು ಏನನ್ನು ಕಲಿಯುತ್ತಿದ್ದಳೋ ಅದರಲ್ಲಿ ಆನಂದಿಸ ತೊಡಗಿದಳು. ಅಷ್ಟುಮಾತ್ರವಲ್ಲದೆ ಆ್ಯನಳು, ಬೈಬಲಿನೊಂದಿಗೆ ಕ್ರೈಸ್ತ ಪ್ರಕಾಶನಗಳನ್ನು ಓದಲು ಮತ್ತು ಯೆಹೋವ ದೇವರಿಗೆ ಪ್ರಾರ್ಥಿಸಲು ಆರಂಭಿಸಿದಳು. ಕ್ರಮೇಣ ಅವಳು ದೇವರೊಂದಿಗೆ ಒಂದು ಆಪ್ತ ಸಂಬಂಧವನ್ನು ಬೆಳೆಸಿದಳು. ಅವಳು ವಿವರಿಸುವುದು: “ಸುಂದರವಾದ ಸೂರ್ಯಾಸ್ತಮಾನಗಳನ್ನು ನೋಡಸಾಧ್ಯವಿರುವ, ನಮ್ಮ ಮನೆಯ ಹತ್ತಿರದ ಒಂದು ಬೆಟ್ಟಕ್ಕೆ ನನ್ನ ಸೈಕಲಿನಲ್ಲಿ ಹೋಗಲು ನಾನು ಸಂತೋಷಿಸುತ್ತಿದ್ದೆ. ನಾನು ಅಲ್ಲಿ ಯೆಹೋವನಿಗೆ ಪ್ರಾರ್ಥಿಸುತ್ತಿದ್ದೆ ಮತ್ತು ಆತನ ದಯೆ ಹಾಗೂ ಉದಾರತ್ವಕ್ಕಾಗಿ ಆತನಿಗೆ ಉಪಕಾರಸ್ತುತಿ ಸಲ್ಲಿಸುತ್ತಾ, ನಾನು ಆತನನ್ನು ಎಷ್ಟೊಂದು ಪ್ರೀತಿಸುತ್ತೇನೆಂಬದನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿದ್ದೆ. ಯೆಹೋವ ದೇವರು ಮತ್ತು ಆತನ ಉದ್ದೇಶಗಳ ಕುರಿತು ತಿಳಿದುಕೊಳ್ಳುವುದು ನನ್ನಲ್ಲಿ ಮನಶ್ಶಾಂತಿಯನ್ನೂ ಭದ್ರತೆಯ ಭಾವನೆಯನ್ನೂ ತುಂಬಿಸಿತು.” ಯೆಹೋವನ ಪ್ರೀತಿಪರ ಪರಾಮರಿಕೆಯ ಕುರಿತು ಪರ್ಯಾಲೋಚಿಸಲು ನೀವು ಸಹ ಸಮಯವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರೋ?

ಒಪ್ಪತಕ್ಕ ವಿಷಯವೇನೆಂದರೆ, ಯೆಹೋವನೊಂದಿಗೆ ಒಂದು ಆಪ್ತ ಸಂಬಂಧವನ್ನು ಆನಂದಿಸಲು ನಮ್ಮ ಹಿನ್ನೆಲೆಯು ನಮಗೆ ಕಷ್ಟಕರವನ್ನಾಗಿ ಮಾಡಬಹುದು. ಉದಾಹರಣೆಗೆ ಲೀಡ್‌ಯಾಳ ಕುರಿತು ಪರಿಗಣಿಸಿರಿ. ಆಳವಾದ ವೈಯಕ್ತಿಕ ಚಿಂತೆಯ ವಿಷಯವೊಂದರ ಕುರಿತು ಅವಳು ತನ್ನ ತಂದೆಯ ಬಳಿ ಅಂತರಂಗವನ್ನು ತೋಡಿಕೊಂಡಾಗ, “ಹುಚ್ಚುತನ” ಎಂಬುದಾಗಿ ಹೇಳುವ ಮೂಲಕ ಅವಳ ತಂದೆ ಅವಳ ಮಾತನ್ನು ತಳ್ಳಿಹಾಕಿದನು. ಅವಳು ಆ ಸಮಸ್ಯೆಯನ್ನು ಮರೆತುಬಿಡಬೇಕೆಂಬ ಉದ್ದೇಶದಿಂದ ಅವನು ಹೀಗೆ ಮಾಡಿದನೆಂದು ಅವಳಿಗೆ ಅರ್ಥವಾಯಿತಾದರೂ, ಲೀಡ್‌ಯಾ ಹೇಳುವುದು: “ಬೈಬಲನ್ನು ಕಲಿಯುವುದು, ನಾನು ಬಯಸಿದ್ದೆಲ್ಲವನ್ನು ಮಾತ್ರವಲ್ಲ ಅದಕ್ಕಿಂತಲೂ ಹೆಚ್ಚನ್ನು ನನಗೆ ಒದಗಿಸಿತು. ಯೆಹೋವನ ಆಕರ್ಷಕ ವ್ಯಕ್ತಿತ್ವವು ಆತನನ್ನು ನನ್ನ ಅತ್ಯಾಪ್ತ ಸ್ನೇಹಿತನನ್ನಾಗಿ ಮಾಡಿತು. ಈಗ ನನಗೊಬ್ಬ ಪ್ರೀತಿಪರ, ಅರ್ಥಮಾಡಿಕೊಳ್ಳಶಕ್ತ ತಂದೆಯಿದ್ದಾನೆ. ಆತನಲ್ಲಿ ನನ್ನ ಎಲ್ಲಾ ಭಾವನೆಗಳನ್ನೂ ಆಳವಾದ ಅಂತರಂಗದ ಭಯವನ್ನೂ ತೋಡಿಕೊಳ್ಳಸಾಧ್ಯವಿದೆ. ಮತ್ತು ಈಗ ನಾನು, ವಿಶ್ವದಲ್ಲಿಯೇ ಅತೀ ಮುಖ್ಯ ವ್ಯಕ್ತಿಯೊಂದಿಗೆ ಗಂಟಾನುಗಟ್ಟಲೆ ಮಾತಾಡುತ್ತಾ ಕಳೆಯಬಲ್ಲೆ ಮತ್ತು ಆತನು ಖಂಡಿತವಾಗಿಯೂ ನನಗೆ ಕಿವಿಗೊಡುತ್ತಾನೆಂದು ನಿಶ್ಚಿತನಾಗಿರಬಲ್ಲೆ.” ಯೆಹೋವನ ಪ್ರೀತಿಪರ ಪರಾಮರಿಕೆಯನ್ನು ಅನುಭವಿಸಲು ಅವಳಿಗೆ ಫಿಲಿಪ್ಪಿ 4:​6, 7ರಂಥ ಬೈಬಲ್‌ ವಚನಗಳು ಸಹಾಯಮಾಡಿದವು. ಆ ವಚನ ಹೇಳುವುದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.”

ನಿಮ್ಮ ಅಗತ್ಯಗಳನ್ನು ಪೂರೈಸಲು ಸಹಾಯ

ವೈಯಕ್ತಿಕವಾಗಿ ಮತ್ತು ಲೋಕವ್ಯಾಪಕವಾದ ಸಭೆಯೋಪಾದಿ, ಯೆಹೋವನು ತನ್ನ ಸೇವಕರ ಕಡೆಗೆ ತನಗಿರುವ ಚಿಂತೆಯನ್ನು ತೋರಿಸುತ್ತಾನೆ. ಅದೇ ರೀತಿಯಲ್ಲಿ, ಆತನೊಂದಿಗೆ ಮಾತಾಡಲು ಸಮಯವನ್ನು ತೆಗೆದುಕೊಳ್ಳುವ ಮೂಲಕ, ಸ್ವರ್ಗೀಯ ತಂದೆಯ ಕಡೆಗಿನ ನಮ್ಮ ಪ್ರೀತಿಯನ್ನು ನಾವು ತೋರಿಸಸಾಧ್ಯವಿದೆ. ಆತನೊಂದಿಗಿನ ನಮ್ಮ ಸಂಬಂಧವನ್ನು ನಾವು ಎಂದೂ ಹಗುರವಾದದ್ದೆಂದು ಎಣಿಸಬಾರದು. ಯೆಹೋವನೊಂದಿಗಿನ ತನ್ನ ಸಂಬಂಧದ ಕುರಿತು ದಾವೀದನು ಯಾವಾಗಲೂ ಅರಿವುಳ್ಳವನಾಗಿದ್ದನು. ಅವನಂದದ್ದು: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು. ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು; ನೀನೇ ನನ್ನನ್ನು ರಕ್ಷಿಸುವ ದೇವರು; ಹಗಲೆಲ್ಲಾ ನಿನ್ನನ್ನೇ ನಿರೀಕ್ಷಿಸುವವನಾಗಿದ್ದೇನೆ.”​—ಕೀರ್ತನೆ 25:​4, 5.

ದೇವರೊಂದಿಗೆ ಒಂದು ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವ ವಿಷಯವು ನಿಮಗೆ ಹೊಸದಾಗಿರಬಹುದು. ನಿಮಗೆ ಯಾವುದೇ ಸಮಸ್ಯೆಗಳಿರಲಿ, ಮಹೋನ್ನತನು ಆತನ ಚಿತ್ತಕ್ಕೆ ಹೊಂದಿಕೆಯಲ್ಲಿ ನಿಮಗೆ ಸಹಾಯಮಾಡ ಶಕ್ತನು ಎಂಬುದರ ಕುರಿತು ನೀವು ಯಾವಾಗಲೂ ಭರವಸೆಯಿಂದಿರಸಾಧ್ಯವಿದೆ. (1 ಯೋಹಾನ 5:14, 15) ಆದುದರಿಂದ, ನಿಮ್ಮ ಸನ್ನಿವೇಶಗಳು ಮತ್ತು ಆವಶ್ಯಕತೆಗಳನ್ನು ಗಮನದಲ್ಲಿಟ್ಟವರಾಗಿ, ನಿಮ್ಮ ಪ್ರಾರ್ಥನೆಗಳಲ್ಲಿ ನಿರ್ದಿಷ್ಟವಾದ ವಿಷಯಗಳನ್ನು ತಿಳಿಸಲು ಕಲಿತುಕೊಳ್ಳಿರಿ.

ನಮ್ಮ ಅಗತ್ಯಗಳನ್ನು ಅಂಗೀಕರಿಸುವ ಮಹತ್ವವು, ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ಸೊಲೊಮೋನನು ಮಾಡಿದ ಈ ಪ್ರಾರ್ಥನೆಯಲ್ಲಿ ಎತ್ತಿಹೇಳಲ್ಪಟ್ಟಿದೆ: “ದೇಶಕ್ಕೆ ಕ್ಷಾಮ, ಘೋರವ್ಯಾಧಿ [ಬೆಳೆಗೆ] ಬಿಸಿಗಾಳಿ ಬೂದಿ, ಮಿಡಿತೆ, ಜಿಟ್ಟೇಹುಳ, ಪಟ್ಟಣಗಳಿಗೆ ಶತ್ರುಗಳ ಮುತ್ತಿಗೆ ಅಂತು ಯಾವ ಉಪದ್ರವದಿಂದಾಗಲಿ ವ್ಯಾಧಿಯಿಂದಾಗಲಿ ಬಾಧೆಯುಂಟಾಗುವಲ್ಲಿ ಎಲ್ಲಾ ಇಸ್ರಾಯೇಲ್ಯರಾಗಲಿ ಅವರಲ್ಲೊಬ್ಬನಾಗಲಿ ತಾವು ಅನುಭವಿಸುತ್ತಿರುವ ಉಪದ್ರವ ದುಃಖಗಳ ನಿಮಿತ್ತವಾಗಿ ಈ ಆಲಯದ ಕಡೆಗೆ ಕೈಯೆತ್ತಿ ನಿನಗೆ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡುವದಾದರೆ . . . ನೀನು . . . ಪರಲೋಕದಿಂದ ಲಾಲಿಸಿ ಅವರಿಗೆ ಪಾಪಪರಿಹಾರವನ್ನು ಅನುಗ್ರಹಿಸು. . . . ಪ್ರತಿಯೊಬ್ಬನಿಗೂ ಅವನವನು ಹಿಡಿಯುವ ಮಾರ್ಗಕ್ಕೆ ತಕ್ಕ ಹಾಗೆ ಫಲವನ್ನು ಕೊಡು.” (2 ಪೂರ್ವಕಾಲವೃತ್ತಾಂತ 6:​28-30) ನಿಶ್ಚಯವಾಗಿ, ‘ನೀವು ಅನುಭವಿಸುತ್ತಿರುವ ಉಪದ್ರವ ಮತ್ತು ದುಃಖಗಳು’ ನಿಮಗೆ ಮಾತ್ರ ತಿಳಿದಿದೆ. ಹಾಗಿರುವುದರಿಂದ, ನಿಮ್ಮ ನಿಜವಾದ ಅಗತ್ಯಗಳನ್ನು ಮತ್ತು ಇಚ್ಛೆಗಳನ್ನು ಯಾವುದು ಎಂಬುದನ್ನು ತಿಳಿದಿರುವುದು ಎಷ್ಟೊಂದು ಪ್ರಾಮುಖ್ಯವಾಗಿದೆ. ನೀವು ಹಾಗೆ ಮಾಡುವುದಾದರೆ, ‘[ಯೆಹೋವನು] ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸುವನು.’​—ಕೀರ್ತನೆ 37:4.

ಯೆಹೋವನೊಂದಿಗೆ ನಿಮ್ಮ ಸಂಬಂಧವನ್ನು ಬಲಪಡಿಸಿರಿ

ಸಾಮಾನ್ಯ ಜನರು ತನ್ನೊಂದಿಗೆ ಆಪ್ತ ಸಂಬಂಧದಲ್ಲಿ ಆನಂದಿಸುವಂತೆ ಅನುಮತಿಸಲು ಯೆಹೋವನು ಸಂತೋಷಿಸುತ್ತಾನೆ. “ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರಿಯರು ಆಗಿರುವಿರೆಂದು ಸರ್ವಶಕ್ತನಾದ ಕರ್ತನು [“ಯೆಹೋವನು,” NW] ಹೇಳುತ್ತಾನೆ” ಎಂಬುದಾಗಿ ಆತನ ವಾಕ್ಯವು ನಮಗೆ ಆಶ್ವಾಸನೆ ನೀಡುತ್ತದೆ. (2 ಕೊರಿಂಥ 6:​18) ನಿಜವಾಗಿಯೂ, ನಾವು ಜಯಹೊಂದಿ, ನಿತ್ಯಜೀವವನ್ನು ಪಡೆಯಬೇಕೆಂದು ಯೆಹೋವನು ಮತ್ತು ಆತನ ಮಗನು ಬಯಸುತ್ತಾರೆ. ಕುಟುಂಬದಲ್ಲಿ, ಕೆಲಸದ ಸ್ಥಳದಲ್ಲಿ, ಮತ್ತು ಕ್ರೈಸ್ತ ಸಭೆಯಲ್ಲಿ, ನಮ್ಮ ಜವಾಬ್ದಾರಿಗಳನ್ನು ಪೂರೈಸಲು ಯೆಹೋವನು ನಮಗೆ ಸಹಾಯಮಾಡುತ್ತಾನೆಂಬುದನ್ನು ತಿಳಿಯುವುದು ಎಂಥ ಒಂದು ಉತ್ತೇಜನವಾಗಿದೆ!

ಹಾಗಿದ್ದರೂ, ನಾವೆಲ್ಲರೂ ಕಠಿನ ಪರಿಸ್ಥಿತಿಗಳನ್ನು ಎದುರಿಸುತ್ತೇವೆ. ನ್ಯೂನ ಆರೋಗ್ಯ, ಕೌಟುಂಬಿಕ ಸಮಸ್ಯೆಗಳು, ಕಡಿಮೆ ಆದಾಯ, ಅಥವಾ ಇನ್ನಿತರ ಯಾವುದೋ ವಿಷಯವು ನಮ್ಮನ್ನು ಬಾಧಿಸುತ್ತಿರಬಹುದು. ಒಂದು ಪರೀಕ್ಷೆ ಅಥವಾ ಸಂಕಷ್ಟವನ್ನು ಹೇಗೆ ಎದುರಿಸಬೇಕೆಂಬುದು ನಮಗೆ ತಿಳಿದಿರಲಿಕ್ಕಿಲ್ಲ. ಈ ಹೆಚ್ಚುತ್ತಿರುವ ಒತ್ತಡಗಳು, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ದೇವಜನರ ವಿರುದ್ಧವಾಗಿ ಆತ್ಮಿಕ ಯುದ್ಧವನ್ನು ಮಾಡುತ್ತಿರುವ ದುಷ್ಟ ದೂರುಗಾರನಾದ ಪಿಶಾಚನಾದ ಸೈತಾನನಿಂದ ಉಂಟುಮಾಡಲ್ಪಟ್ಟಿವೆ. ಹಾಗಿದ್ದರೂ, ನಮ್ಮನ್ನು ಅರ್ಥಮಾಡಿಕೊಳ್ಳಬಲ್ಲ ಮತ್ತು ಯೆಹೋವನೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಕಾಪಾಡಿಕೊಳ್ಳಲು ನಮಗೆ ಸಹಾಯ ನೀಡಬಲ್ಲ ಒಬ್ಬನಿದ್ದಾನೆ. ಅವನು ಬೇರೆ ಯಾರೂ ಅಲ್ಲ, ಸ್ವರ್ಗದಲ್ಲಿ ತನ್ನ ಉನ್ನತ ಸ್ಥಾನದಲ್ಲಿರುವ ಯೇಸು ಕ್ರಿಸ್ತನೇ ಆಗಿದ್ದಾನೆ. ನಾವು ಓದುವುದು: “ನಮಗಿರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು, ಪಾಪ ಮಾತ್ರ ಮಾಡಲಿಲ್ಲ. ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ.”​—ಇಬ್ರಿಯ 4:​15, 16.

ದೇವರ ಅನುಗ್ರಹವನ್ನು ಹೊಂದಬೇಕಾದರೆ ನಾವು ಪ್ರಖ್ಯಾತರೋ ಅಥವಾ ಧನವಂತರೋ ಆಗಿರುವ ಅಗತ್ಯವಿಲ್ಲ ಎಂಬುದನ್ನು ತಿಳಿಯುವುದು ಎಷ್ಟು ಪುನರಾಶ್ವಾಸನದಾಯಕವಾಗಿದೆ! ನೀವು ಸಂಕಟಮಯ ಸಮಯದಲ್ಲಿರುವಾಗಲೂ, ಕೀರ್ತನೆಗಾರನಂತಿರಿ. ಅವನು ಪ್ರಾರ್ಥಿತಿಸಿದ್ದು: “ನಾನಾದರೋ ಕುಗ್ಗಿದವನೂ ದಿಕ್ಕಿಲ್ಲದವನೂ ಆಗಿದ್ದೇನೆ; ಕರ್ತನೇ [“ಯೆಹೋವನೇ,” NW] ನನ್ನ ಹಿತಚಿಂತಕನು. ನನ್ನ ದೇವರೇ, ನೀನೇ ನನಗೆ ಸಹಾಯಕನೂ ರಕ್ಷಕನೂ ಆಗಿದ್ದೀ.” (ಕೀರ್ತನೆ 31:​9-14; 40:17) ಯೆಹೋವನು ನಮ್ರ, ಸಾಮಾನ್ಯ ಜನರನ್ನು ಪ್ರೀತಿಸುತ್ತಾನೆ ಎಂಬ ಭರವಸೆಯಿಂದಿರಿ. ನಿಜವಾಗಿಯೂ, ‘ನಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಬಲ್ಲೆವು, ಆತನು ನಮಗೋಸ್ಕರ ಚಿಂತಿಸುತ್ತಾನೆ.’​—1 ಪೇತ್ರ 5:​7.

[ಪಾದಟಿಪ್ಪಣಿ]

^ ಪ್ಯಾರ. 10 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 29ರಲ್ಲಿರುವ ಚಿತ್ರಗಳು]

ಯೇಸುವಿನ ಹಿಂಬಾಲಕರಲ್ಲಿ ಅನೇಕರು ಶಾಸ್ತ್ರಾಭ್ಯಾಸ ಮಾಡದ ಸಾಧಾರಣ ಜನರಾಗಿದ್ದರು

[ಪುಟ 30ರಲ್ಲಿರುವ ಚಿತ್ರ]

ದೃಢವಾದ ನಂಬಿಕೆಗಾಗಿ ಕ್ರೈಸ್ತರು ಪ್ರಯತ್ನಿಸುತ್ತಾರೆ

[ಪುಟ 31ರಲ್ಲಿರುವ ಚಿತ್ರಗಳು]

ದೇವರ ಅನುಗ್ರಹವನ್ನು ಪಡೆದುಕೊಳ್ಳಬೇಕಾದರೆ ನಾವು ಪ್ರತಿಷ್ಠಿತ ಜನರಾಗಿರಬೇಕಾಗಿಲ್ಲ